Homeಅಂಕಣಗಳುಮಹಾಮೃತ್ಯುಂಜಯ ಮಂತ್ರದ ತಾತ್ವಿಕತೆಯೆಂದರೆ ಲೌಕಿಕದಿಂದ ಅಲೌಕಿಕದೆಡೆಗೆ

ಮಹಾಮೃತ್ಯುಂಜಯ ಮಂತ್ರದ ತಾತ್ವಿಕತೆಯೆಂದರೆ ಲೌಕಿಕದಿಂದ ಅಲೌಕಿಕದೆಡೆಗೆ

ಹುಟ್ಟಿದ ಮೇಲೆ ನೈಸರ್ಗಿಕ ನಿಯಮವಾದ ಸಾವನ್ನು ಗೆಲ್ಲಲೆಂದಲ್ಲ, ಆದರೆ ಸಾವಿನ ಭಯವನ್ನು ಗೆಲ್ಲಲು’ ಎನ್ನುತ್ತದೆ ಈ ಮಂತ್ರ. ಸಾವಿಗೆ ಹೆದರುವುದು ಲೌಕಿಕ. ಸಾವಿನ ಭಯವಿಲ್ಲದಿರುವುದು ಅಲೌಕಿಕ ಮತ್ತು ತಾತ್ವಿಕ. ಮಂತ್ರವು ಮ್ಯಾಜಿಕಲ್ ಅಲ್ಲ, ಫಿಲಾಸಫಿಕಲ್

- Advertisement -
- Advertisement -

ಕೊರೊನಾದಿಂದ ಪಾರಾಗಲು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಬೇಕೆಂದು ವಾಟ್ಸಪ್ಪು ಮತ್ತು ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ನನ್ನ ಕಸಿನ್ ಒಬ್ಬಳೂ ಕೂಡಾ ನನಗೆ ಇದನ್ನು ಕಳುಹಿಸಿದ್ದಳು. ಅವಳಿಗೂ ಮತ್ತು ಇನ್ನಿತರರಿಗೂ ನಾನು ಕಂಡುಕೊಂಡಿರುವ ಈ ಮಹಾಮೃತ್ಯುಂಜಯ ಮಂತ್ರದ ಒಳನೋಟವನ್ನು ಹಂಚಿಕೊಳ್ಳಲು ಇದನ್ನು ಬರೆಯಬೇಕಾಯ್ತು.

“ಓಂ ತ್ಯಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ, ಊರ್ವಾರುಕಮಿವ ಬಂಧನಾತ್
ಮೃತ್ಯೋರ್ಮುಕ್ಷೀಯಮಾಮೃತಾತ್”

ಮಂತ್ರವು ಸುಂದರವೂ ತಾತ್ವಿಕವೂ ಆಗಿದೆ. ‘ಹುಟ್ಟಿದ ಮೇಲೆ ನೈಸರ್ಗಿಕ ನಿಯಮವಾದ ಸಾವನ್ನು ಗೆಲ್ಲಲೆಂದಲ್ಲ, ಆದರೆ ಸಾವಿನ ಭಯವನ್ನು ಗೆಲ್ಲಲು’ ಎನ್ನುತ್ತದೆ ಈ ಮಂತ್ರ. ಸಾವಿಗೆ ಹೆದರುವುದು ಲೌಕಿಕ. ಸಾವಿನ ಭಯವಿಲ್ಲದಿರುವುದು ಅಲೌಕಿಕ ಮತ್ತು ತಾತ್ವಿಕ. ಮಂತ್ರವು ಮ್ಯಾಜಿಕಲ್ ಅಲ್ಲ. ಫಿಲಾಸಫಿಕಲ್. ಸಾಲುಗಳ ನಡುವೆ ಮತ್ತು ಪ್ರತಿಮೆಗಳ ಮೀರಿ ಅರ್ಥವನ್ನು ಗ್ರಹಿಸುವ ಅಗತ್ಯವಿರುತ್ತದೆ. ಏಕೆಂದರೆ ಮಂತ್ರಗಳೆಂದರೆ ಒಗಟುಗಳೂ ಕೂಡಾ. ಪ್ರತಿಯೊಂದು ಮಂತ್ರಕ್ಕೂ ಹಿನ್ನೆಲೆಯಿರುತ್ತದೆ. ತಾತ್ವಿಕತೆ ಇರುತ್ತದೆ. ತಾತ್ವಿಕತೆಯೇ ಆಸೆ ಮತ್ತು ಭಯಗಳಿಂದ ಲೌಕಿಕದಲ್ಲಿ ನರಳುವವರಿಗೆ ಶಕ್ತಿಯನ್ನು ಕೊಡುವುದು. ಮಹಾಮೃತ್ಯುಂಜಯ ಮಂತ್ರವೂ ಅದೇ ರೀತಿ.

ಋಗ್ವೇದದಲ್ಲಿಯೇ (7.59.12) ಈ ಮಂತ್ರ ಇರುವುದೆಂದಾದರೂ ನಮಗೆ ಈ ಮಂತ್ರದ ಸಂಬಂಧ ಸಿಗುವುದು ಮಾರ್ಕಂಡೇಯ ಋಷಿಯಿಂದ. ಮೃಕಂಡು ಮುನಿದಂಪತಿಯರಿಗೆ ಮಕ್ಕಳಿಲ್ಲದೇ ತಪಸ್ಸನ್ನಾಚರಿಸಿ ಶಿವನಿಂದ 12 ವರ್ಷಗಳ ಅಲ್ಪಾಯುಷಿ ಮಗ ಮಾರ್ಕಂಡೇಯನನ್ನು ಪಡೆದರು. ಆಯಸ್ಸು ತೀರುವ ಸಮಯಕ್ಕೆ ಮಾರ್ಕಂಡೇಯನಿಗೆ ವಿಷಯ ತಿಳಿದು ಮಹಾಮೃತ್ಯುಂಜಯ ಮಂತ್ರೋಪದೇಶ ಪಡೆದು ತನ್ನನ್ನು ಮರಣದಿಂದ ಕಾಪಾಡು ಎಂದು ಶಿವನಿಗೆ ತಪಸ್ಸನ್ನು ಮಾಡುವನು. ಕಾಲದ ನಿಯಮಾನುಸಾರ ಆಯಸ್ಸು ಮುಗಿದಾಗ ಯಮನು ಬಾಲಕನನ್ನು ಕರೆದೊಯ್ಯಲು ಬರುವನು. ಆದರೆ ಶಿವನು ಬಾಲಕನನ್ನು ರಕ್ಷಿಸುವನು. ಇದು ಸಾಯಲಿದ್ದ ಹುಡುಗ ತನ್ನ ಶಿವಭಕ್ತಿಯಿಂದ ಸಾವನ್ನು ಗೆದ್ದ ಒಂದೆಳೆ ಕತೆ.

ಈ ಕತೆಯಿಂದಲೇ ಮಹಾಮೃತ್ಯುಂಜಯ ಮಂತ್ರದ ಒಗಟನ್ನು ಬಿಡಿಸಬಹುದಾದರೂ ಮೊದಲು ಮಂತ್ರದ ಅರ್ಥ ತಿಳಿದುಕೊಳ್ಳೋಣ.

ಮಧುರವಾದ ಸುವಾಸನೆಯುಳ್ಳ ಮತ್ತು ಶಕ್ತಿಯನ್ನು ವೃದ್ಧಿಸುವಂತಹ ಮುಕ್ಕಣ್ಣನಿಗೆ ಶರಣಾಗುತ್ತೇನೆ. ಸೌತೇಕಾಯಿಯು ಸಹಜವಾಗಿ ತನ್ನ ಬಳ್ಳಿಯಿಂದ ಕಳಚಿಕೊಳ್ಳುವಂತೆ ಮೃತ್ಯುವಿನ ಬಂಧನದಿಂದ ಕಳಚಿಕೊಳ್ಳಬೇಕೇ ಹೊರತು ಅಮೃತತ್ವದಿಂದಲ್ಲ.

ವಿಶ್ವದ ಮತ್ತು ಅಸ್ತಿತ್ವದಲ್ಲಿರುವ ಪ್ರತಿಯೊಂದರ ಲಯದ ಪ್ರತಿಮಾ ರೂಪ ಮುಕ್ಕಣ್ಣನಾದ ಶಿವ. ಲಯವೆಂದರೆ ಅದು ನಾಶವೆಂದರ್ಥವಲ್ಲ. ಲಯದಲ್ಲಿಯೇ ಸ್ಥಿತಿಯಿದೆ ಮತ್ತು ಮರುಹುಟ್ಟಿದೆ. ಅಸ್ತಿತ್ವದಲ್ಲಿ ಯಾವುದೂ ಹುಟ್ಟುವುದಿಲ್ಲ ಮತ್ತು ನಾಶಗೊಳ್ಳುವುದೂ ಇಲ್ಲ, ಬರಿದೇ ರೂಪಾಂತರಗೊಳ್ಳುತ್ತಿರುತ್ತದೆ ಎಂಬ ವೈಜ್ಞಾನಿಕ ಮತ್ತು ತಾತ್ವಿಕ ಗ್ರಹಿಕೆಯಂತೆ ನಾಶವೆಂಬುದು ಇಲ್ಲ. ಅಲ್ಲಿರುವುದು ಬರಿದೇ ರೂಪಾಂತರಗೊಳ್ಳುತ್ತಿರುವ ಪ್ರಕ್ರಿಯೆ. ಸೃಷ್ಟಿ ಸ್ಥಿತಿ ಮತ್ತು ಲಯಗಳೆಂಬ ಮೂರೂ ಈ ರೂಪಾಂತರದ ಪ್ರಕ್ರಿಯೆಯ ಆಯಾಮಗಳು. ಸಾವಿಗೂ ಈ ಮೂರೂ ಆಯಾಮವಿದೆ. ಹಾಗಾಗಿಯೇ ಲಯದ ಪ್ರತಿಮಾರೂಪವಾದ ಶಿವನಿಗೆ ಮೂರು ಕಣ್ಣುಗಳು. ಈ ಸಾವಿನ ಯಮಕ್ಕೆ (ನಿಯಮ) ಅದರದೇ ನೈಸರ್ಗಿಕ ಸೌಂದರ್ಯವಿದೆ. ಹುಟ್ಟು ಬದುಕು ಮತ್ತು ಸಾವು ಈ ಮೂರೂ ಪ್ರಕೃತಿಯಲ್ಲಿ ಸತ್ಯವೂ ಶಿವವೂ (ಮಂಗಳಮಯವೂ) ಮತ್ತು ಸುಂದರವೂ ಆಗಿದೆ. ಹಾಗಾಗಿ ಸಾವು ಎಂದಕೂಡಲೇ ಭಯದಿಂದ ಅದಕ್ಕೆ ಪ್ರತಿರೋಧ ಒಡ್ಡುವ ಹೋರಾಟದ ಬದಲಿಗೆ ಸೌತೇಕಾಯಿಯ ಬಳ್ಳಿಯಲ್ಲಿ ಕಾಯಿಯು ಮಾಗಿದಾಗ ತಂತಾನೇ ತೊಟ್ಟು ಕಳಚಿಕೊಳ್ಳುವಂತೆ ಮಾನಸಿಕವಾಗಿ ಪ್ರಶಾಂತರಾದಾಗ ಭಯವು ಇಲ್ಲವಾಗುತ್ತದೆ. ಮೃತ್ಯುವಿನ ಭಯವಿಲ್ಲದವನಿಗೆ ಅಮೃತತ್ವದ ದರ್ಶನವಾಗುತ್ತದೆ. ಅವನು ಹುಟ್ಟುವುದು, ಇರುವುದು ಮತ್ತು ಇಲ್ಲವಾಗುವುದು ಈ ಮೂರನ್ನು ಮೀರಿದ ಅಸ್ತಿತ್ವದಲ್ಲಿ ಎರಡಿಲ್ಲದಂತೆ ಒಂದಾಗಿರುತ್ತಾನೆ. ಅದೇ ಅಮೃತತ್ವ.

ಬದುಕಿಗೆ ಆಸೆ ಪಡುವುದು ಮತ್ತು ಸಾವಿಗೆ ಹೆದರುವುದು ಲೌಕಿಕವೆಂದು ಗ್ರಹಿಸಿದ ಮಂತ್ರದೃಷ್ಟಾರರು ನೀಡಿದ ಮಾರ್ಗೋಪಾಯ ಈ ಮಂತ್ರ. ಸಾವಿನ ಭಯವನ್ನು ಮೀರಿ, ಆಸೆ ಮತ್ತು ಭಯಗಳಿಂದ ಆವರಿಸಿ ಲೌಕಿಕದಲ್ಲಿರುವವರಿಗೆ ಅಲೌಕಿಕವಾದ ತಾತ್ವಿಕತೆಯನ್ನು ಪರಿಚಯಿಸಿ, ರೂಪಾಂತರದ ಪ್ರಕ್ರಿಯೆಯಲ್ಲಿರುವ ಆ ಹಂತವನ್ನೂ ಪ್ರಶಾಂತವಾಗಿ ಒಪ್ಪುವುದನ್ನು ತಿಳಿಹೇಳುವ ಮಂತ್ರವಿದು.

ಈ ಮಂತ್ರವು ತನ್ನ ಅರಿವನ್ನು ಬಸವಣ್ಣನವರ ವಚನಗಳಲ್ಲಿ ಹರಳಿನಂತೆ ಮತ್ತಷ್ಟು ಅರಳುತ್ತದೆ.

“ಅಮೃತವ ಕಡೆವಲ್ಲಿ, ವಿಷವಟ್ಟಿ ಸುಡುವಲ್ಲಿ ದೇವರೆಂಬವರೆತ್ತ ಹೋದರೆನಿಂ ಭೋ” ಎಂದು ಪ್ರಶ್ನಿಸುವ ಬಸವಣ್ಣ, ತಾತ್ವಿಕವಾಗಿ ಹಾಗೂ ಭಾವನಾತ್ಮಕವಾಗಿ ಬಲಗೊಳ್ಳದ ಹೊರತು ದೇವರ ಭಜನೆ ಕೀರ್ತನೆಗಳಿಂದ ಏನೂ ಪ್ರಯೋಜನವಿಲ್ಲ ಎಂದು ಹೇಳುತ್ತಾ, “ನಾದಪ್ರಿಯ ಶಿವನೆಂಬರು” ವಚನದಲ್ಲಿ ನಾದವ ನುಡಿಸಿದ ರಾವಣನಿಗೆ ಅರೆ ಆಯುಷ್ಯವಾಯ್ತು, ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು ಎನ್ನುತ್ತಾ ಭಕ್ತಿಪ್ರಿಯ ನಮ್ಮ ಕೂಡಲ ಸಂಗಮದೇವ ಎಂದು ಅನಂತ ಅಸ್ತಿತ್ವವನ್ನು ತಮ್ಮ ಕೂಡಲ ಸಂಗಮದೇವನೆಂದು ಸಂಕೇತಿಸುತ್ತಾರೆ. ಹಾಗೆಯೇ, “ಭಕ್ತಿಯೆಂಬ ಪೃಥ್ವಿಯ ಮೇಲೆ” ವಚನದಲ್ಲಿ ಒಬ್ಬ ವ್ಯಕ್ತಿಯು ತನ್ನ ಭಕ್ತಿ ಮತ್ತು ವಿರಕ್ತಿಯ ಸಂಸ್ಕಾರದಿಂದ ಪಕ್ವವಾಗಿ ಬಾಳುತ್ತಾ ಕೊನೆಗೆ “ನಿಷ್ಫತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ” ಎಂಬ ರೂಪಕದಲ್ಲಿ ಸಾವನ್ನು ಪ್ರಸ್ತುತಪಡಿಸುತ್ತಾರೆ. ಬಳ್ಳಿಯಿಂದ ಸೌತೇಕಾಯಿ ಕಳಚಿಕೊಂಡು ಬೀಳುವುದು ಅಣ್ಣನ ವಚನದಲ್ಲಿ ಹಣ್ಣು ತೊಟ್ಟು ಕಳಚಿ ಬೀಳುವುದರಲ್ಲಿ ನನಗೆ ಸಾಮ್ಯತೆ ಕಾಣುತ್ತದೆ. ಎರಡರ ತಾತ್ವಿಕ ಭಾವ ಒಂದೇ ಆಗಿದೆ.

ಬಸವಣ್ಣನವರು ತಾತ್ವಿಕವಾಗಿ ಅದೆಷ್ಟೇ ಗಟ್ಟಿಯಾಗಿದ್ದರೂ ತಮ್ಮ ಪ್ರಸ್ತುತಿಯಲ್ಲಿ ಸಾತ್ವಿಕತನವನ್ನು ಸಾಮಾನ್ಯವಾಗಿ ಬಿಟ್ಟುಕೊಡುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಕಟು ಮತ್ತು ಬಿರುಸಿನ ಧ್ವನಿಗಳು ಅಲ್ಲಲ್ಲಿ ಕಂಡರೂ ಅವರದು ಸಾತ್ವಿಕ ಮಂಡನೆಯೇ. ಆದರೆ ಲದ್ದೆಯ ಸೋಮಣ್ಣ ಎಂಬ ಶರಣರು ಇದೇ ತಾತ್ವಿಕತೆಯನ್ನು ಹೊಂದಿದ್ದರೂ ಲೌಕಿಕ ಭಾಷೆಯಲ್ಲಿಯೇ ವಿಷಯವನ್ನು ಮಂಡಿಸುತ್ತಾರೆ.

“ಆವ ಕಾಯಕವಾದಡೂ ಸ್ವಕಾಯಕವ ಮಾಡಿ” ಎನ್ನುವ ತಮ್ಮ ವಚನದಲ್ಲಿ “ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು, ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ, ಭಾಪು ಲದ್ದೆಯ ಸೋಮಾ” ಎನ್ನುವ ಗಟ್ಟಿ ಮತ್ತು ನೇರ ಧ್ವನಿ. ಇದನ್ನೇ ತಮ್ಮ ದನಿಯಲ್ಲಿ ಡಿವಿಜಿಯವರೂ ಕೂಡಾ ಧ್ವನಿಸುವರು.

ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು
ದೊರೆತುದ ಹಸಾದವೆಂದುಣ್ಣು ಗೊಣಗಿಡದೆ
ಧರಿಸು ಲೋಕದ ಭಾರವ ಪರಮಾರ್ಥವನು ಬಿಡದೆ
ಹೊರಡು ಕರೆ ಬರಲ್ ಅಳದೆ ಮಂಕುತಿಮ್ಮ.

ದೊಡ್ಡದು ಚಿಕ್ಕದು ಅನ್ನದೇ ಕಾಯಕವನ್ನು ಮಾಡು. ಪಡೆದುದ್ದನ್ನು ಗೌರವದಿಂದ ಪ್ರಸಾದ ಎಂದು ಸ್ವೀಕರಿಸು. ಹೊಣೆಗಾರಿಕೆ ಹೊರಬೇಕಾದುದನ್ನೆಲ್ಲಾ ಹೊತ್ತು ಬಾಳು, ಬದುಕು. ಸಾವು ಬಂದಾಗ ಹೋಗಲೇಬೇಕೆನ್ನುವ ತಾತ್ವಿಕತೆಯನ್ನು ಅರಿತುಕೊಂಡು ನೆಮ್ಮದಿಯಿಂದ ಸಾಯಿ. ಅಷ್ಟೇ!


ಇದನ್ನೂ ಓದಿ: ಪುಟಕಿಟ್ಟ ಪುಟಗಳು: ದಿವ್ಯ ಜೀವನಕೆ ಪ್ರವೇಶಿಕೆ ಎಂಬ ಆಪ್ತ ಸಮಾಲೋಚನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...