ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ (ಕುಂವೀ), ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಹಾಗೂ ಮುಸ್ಲಿಂ ದ್ವೇಷದ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದ 61 ಚಿಂತಕರಿಗೆ ಜೀವ ಬೆದರಿಕೆ ಹಾಕಲಾಗಿದೆ.
ಈ ಕುರಿತು ಕೆಲವು ಚಿಂತಕರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದ್ದು, “ಕೊಲೆ ಬೆದರಿಕೆಯಿಂದಾಗಿ ಭಿನ್ನ ದನಿಯನ್ನು ಅಡಗಿಸಲು ಸಾಧ್ಯವಿಲ್ಲ. ಭಿನ್ನಾಭಿಪ್ರಾಯವು ಪ್ರಜಾಪ್ರಭುತ್ವದ ಸೌಂದರ್ಯವಾಗಿದ್ದು, ಮತೀಯ ಶಕ್ತಿಗಳ ವಿರುದ್ಧ ಸರ್ಕಾರ ಮೌನವಾಗಿರಬಾರದು’’ ಎಂದು ಆಗ್ರಹಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಹಿಂದಿನ ದಿನ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ವಸ್ತ್ರ ಸಂಹಿತೆಯನ್ನು ವಿಧಿಸಿ ಏಕಾಏಕಿ ಹೊರಡಿಸಿದ ಅವೈಜ್ಞಾನಿಕ ಸುತ್ತೋಲೆಯನ್ನು ಹಿಂತೆಗೆದುಕೊಳ್ಳಬೇಕು ಎಂಬ ವಿಷಯ ಒಳಗೊಂಡಂತೆ ಕೋಮು ಸಾಮರಸ್ಯಕ್ಕೆ ಆಗ್ರಹಿಸಿ 61 ಜನ ಚಿಂತಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದರು. ಒಂದು ಕೋಮಿನ ವಿರುದ್ಧ ದ್ವೇಷ ಹರಡುತ್ತಿರುವವರಿಗೆ ಕಡಿವಾಣ ಹಾಕುವಂತೆ ಜನರು ಆಗ್ರಹಿಸಿದ್ದರು. ಇದನ್ನು ವಿರೋಧಿಸಿ ಕೊಲೆ ಬೆದರಿಕೆ ಹಾಕಲಾಗಿದೆ.
ಇತ್ತೀಚಿನ ದಿನಗಳಲ್ಲಿ ಬೆದರಿಕೆ ಹೆಚ್ಚಾಗಿವೆ: ಕುಂವೀ
“ಮೊದಲಿನಿಂದಲೂ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಲಿಂಗಾಯತ ಧರ್ಮದ ಚಳವಳಿಯ ಸಂದರ್ಭದಲ್ಲಿ ಪಂಚ ಪೀಠಗಳ ಬಗ್ಗೆ ಒಂದು ಹೇಳಿಕೆ ನೀಡಿದ್ದಾಗ ಹೀಗೆಯೇ ಬೆದರಿಕೆ ಕರೆ ಬಂದಿತ್ತು. ಅಂದಿನ ಸರ್ಕಾರ ಭದ್ರತೆಯನ್ನೂ ನೀಡಲು ಮುಂದಾಗಿತ್ತು. ನಾನು ಅದನ್ನು ನಿರಾಕರಿಸಿದ್ದೆ. ಭಾಷಣಗಳನ್ನು ಮಾಡಿದಾಗ ಆಗಾಗ್ಗೆ ಬೆದರಿಕೆ ಕರೆಗಳು ಬರುತ್ತಿರುತ್ತವೆ. ಕೆಲವು ತಿಂಗಳಿಂದ ಬಹಳ ಪರಿಸ್ಥಿತಿ ಗಂಭೀರವಾಗಿದೆ” ಎಂದು ಸಾಹಿತಿ ಕುಂ.ವೀರಭದ್ರಪ್ಪ ತಿಳಿಸಿದರು.

ಇದನ್ನೂ ಓದಿರಿ: ಮಾಜಿ ಸಿಎಂಗಳಾದ ಎಚ್‌ಡಿಕೆ, ಸಿದ್ದರಾಮಯ್ಯ, ಸಾಹಿತಿ ಕುಂವೀ ಸೇರಿ 61+ ಜನರಿಗೆ ಕೊಲೆ ಬೆದರಿಕೆ
“ಮುಕ್ತವಾಗಿ ಮಾತನಾಡಲು ಸಾಧ್ಯವಾಗದ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಫೋನ್ ಕರೆ ಮಾಡಿ ಖಾರವಾಗಿ ಮಾತನಾಡುತ್ತಾರೆ. ಮುಸಲ್ಮಾನರ ಬಗ್ಗೆ ಅಸಹನೆ ವ್ಯಕ್ತಪಡಿಸುತ್ತಾರೆ. ಕರೆಗಳು ಮಾತ್ರ ಬರುತ್ತಿದ್ದವು. ಈಗ ಪತ್ರವನ್ನೇ ಬರೆದಿರುವುದನ್ನು ನೋಡಿದರೆ, ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆಂಬುದು ವೇದ್ಯವಾಗುತ್ತದೆ” ಎಂದರು.
“ಈ ಬೆದರಿಕೆಗಳನ್ನು ನಾನು ಗಂಭೀರವಾಗಿ ತೆಗೆದುಕೊಂಡಿಲ್ಲ. ನಾನು ಸಿಂಹಾಸನದ ಮೇಲೆರುವ ವ್ಯಕ್ತಿಯಲ್ಲ, ತಿಪ್ಪೆ ಮೇಲಿರುವ ವ್ಯಕ್ತಿ. ಮತೀಯವಾದಿಗಳ ಕೃತ್ಯಗಳು ಜನರ ಗಮನಕ್ಕೆ ಬರಲೆಂದು ಫೇಸ್‌ಬುಕ್‌ನಲ್ಲಿ ಪತ್ರವನ್ನು ಹಂಚಿಕೊಂಡೆ. ಆದರೆ ನಾನು ವಿಚಲಿತನಾಗಿಲ್ಲ” ಎಂದು ಪ್ರತಿಕ್ರಿಯೆ ನೀಡಿದರು.
“ಒಂದು ಕಾಲು ಮನೆಯಲ್ಲಿ, ಮತ್ತೊಂದು ಕಾಲು ಬೀದಿಯಲ್ಲಿ ಇಟ್ಟುಕೊಂಡಿರುವ ಲೇಖಕರಿಗೆ ಇದೆಲ್ಲ ಸಾಮಾನ್ಯ. ನಾವು ಸುರಕ್ಷಿತ ವಲಯದಲ್ಲಿರುವ ಲೇಖಕರಲ್ಲ. ಬಲಪಂಥೀಯ ಶಕ್ತಿಗಳಿಗೆ ಸರ್ಕಾರವೇ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ. ಮತೀಯ ಸಂಘಟನೆಗಳ ಕೃತ್ಯಗಳು ಸರಿ ಎಂದು ಸಚಿವೆ ಶಶಿಕಲಾ ಜೊಲ್ಲೆಯವರೇ ಸಮರ್ಥಿಸುತ್ತಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ಕೋಮು ಕೇಂದ್ರಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ಚಂದ್ರು ಎಂಬ ಯುವಕ ಉರ್ದು ಮಾತನಾಡದಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ಸುಳ್ಳು ಹೇಳಿಕೆ ನೀಡಿದ್ದ ಸಚಿವರು, ನಂತರ ಸ್ಪಷ್ಟನೆ ನೀಡಿದ್ದಾರೆ. ಜನಾಂಗೀಯ ದ್ವೇಷ ಬಿತ್ತಲು ಸರ್ಕಾರವೇ ಎಲ್ಲ ಪ್ರಯತ್ನ ಮಾಡುತ್ತಿದೆ. ಇದು ಅಪಾಯಕಾರಿ ಸ್ಥಿತಿ” ಎಂದು ಎಚ್ಚರಿಸಿದರು.
ಭಿನ್ನಾಭಿಪ್ರಾಯ ಗೌರವಿಸದಿರುವುದು ಅಪಾಯಕಾರಿ ಸ್ಥಿತಿ: ಬಿ.ಸುರೇಶ್
ಕಲಾವಿದ ಬಿ.ಸುರೇಶ್ ಮಾತನಾಡಿ, “ಯಾವುದೇ ಒಂದು ಸರ್ಕಾರದ ತೀರ್ಮಾನವನ್ನು ಪ್ರಶ್ನಿಸುವ, ವಾಪಸ್ ಪಡೆಯುವಂತೆ ಒತ್ತಾಯಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇರುತ್ತದೆ. ನಮಗಿರುವ ಹಕ್ಕಿನ ಹಿನ್ನೆಲೆಯಲ್ಲಿಯೇ 61 ಜನರು ಈ ಪತ್ರವನ್ನು ಬರೆದಿದ್ದೇವೆ. ಆದರೆ ಈ ಥರದ ಭಿನ್ನಾಭಿಪ್ರಾಯಗಳನ್ನು ಸಹಿಸದ ದ್ವೇಷದ ಸಂಸ್ಕೃತಿ ಕಳೆದ ಎಂಟು ವರ್ಷಗಳಿಂದ ಉಚ್ಛ್ರಾಯಕ್ಕೆ ಬರುತ್ತಿರುವುದನ್ನು ನಾವು ನೋಡಿದ್ದೇವೆ. ಈ ದ್ವೇಷ ಸಂಸ್ಕೃತಿ ಎಂ.ಎಂ.ಕಲ್ಬುರ್ಗಿ, ಗೌರಿ ಲಂಕೇಶ್, ಗೋವಿಂದ ಪನ್ಸಾರೆ, ನರೇಂದ್ರ ದಾಬೋಲ್ಕರ್ ಅಂಥವರನ್ನು ಬಲಿ ತೆಗೆದುಕೊಂಡಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಬಲಿ ತೆಗೆದಕೊಂಡ ಜನರು, ಈಗ ಬಲಿ ತೆಗೆದುಕೊಳ್ಳಲು ಹೊರಟಿರುವವರು ಬಹಳ ಬೇಗ ಸತ್ಯವನ್ನು ಅರ್ಥ ಮಾಡಿಕೊಳ್ಳುತ್ತಾರೆಂದು ಭಾವಿಸುತ್ತೇನೆ. ಯಾವುದೇ ಭಿನ್ನಾಭಿಪ್ರಾಯವನ್ನು ಗೌರವಿಸದ ಸಮಾಜಕ್ಕೆ ಇವತ್ತಲ್ಲ, ನಾಳೆ ದೊಡ್ಡ ಅಪಾಯ ಕಾದಿರುತ್ತದೆ. ನಮ್ಮ ಎದುರಲ್ಲೇ ಶ್ರೀಲಂಕಾ, ಹಿಟ್ಲರ್ ಅವಧಿಯ ನಾಜಿ ಜರ್ಮನಿ, ರಷ್ಯಾದ ಉದಾಹರಣೆಗಳಿವೆ. ಭಿನ್ನಾಪ್ರಾಯವನ್ನು ಹತ್ತಿಕ್ಕುವ ಸಮಾಜ ಸಂಪೂರ್ಣವಾಗಿ ನಾಶವಾಗುತ್ತದೆ. ನಂತರ ಪಶ್ಚಾತ್ತಾಪದಲ್ಲೇ ಬದುಕಬೇಕಾಗುತ್ತದೆ ಎಂಬುದನ್ನು ಇತಿಹಾಸ ಪಾಠ ಹೇಳುತ್ತಿದೆ. ಕೊಲೆ ಮಾಡುವುದಾಗಿ ಪತ್ರ ಬರೆದಿರುವವರಿಗೂ ಈ ಸತ್ಯ ಬಹುಬೇಗ ಅರ್ಥವಾಗಲಿ ಎಂದು ಭಾವಿಸುತ್ತೇನೆ” ಎಂದು ಆಶಿಸಿದರು.
ಇದನ್ನೂ ಓದಿರಿ: ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ: 7 ಶಾಲೆಗಳ ವಿದ್ಯಾರ್ಥಿಗಳು ಸ್ಥಳಾಂತರ
“ಈ ರೀತಿಯ ಪತ್ರ ಬಂದಿದೆ ಎಂಬ ಕಾರಣಕ್ಕೆ ಹೆದರಿ ಮೂಲೆ ಸೇರುವಂತಹ ಮನಸ್ಥಿತಿಯವರು ಯಾರೂ ಈ 61 ಜನರಲ್ಲಿ ಇಲ್ಲ. ಇವರೆಲ್ಲರೂ ಮುಂಬರುವ ದಿನಗಳಲ್ಲಿ ತಮ್ಮ ಭಿನ್ನಾಭಿಪ್ರಾಯಯವನ್ನು ಮಂಡಿಸುತ್ತಲೇ ಇರುತ್ತಾರೆ, ಯಾವುದಾದರೂ ಓಳ್ಳೆಯ ಕೆಲಸವಾದಾಗ ಶ್ಲಾಘನೆಯನ್ನೂ ವ್ಯಕ್ತಪಡಿಸುತ್ತಾರೆ. ಒಳಿತನ್ನು ಬೆಂಬಲಿಸುವ, ಕೆಡಕನ್ನು ಕೆಡುಕ್ಕೆಂದು ಹೇಳುವ ಶಕ್ತಿ ಸಮಾಜಕ್ಕೆ ಇರಬೇಕಾಗಿದೆ” ಎಂದು ಹೇಳಿದರು.
ಬಂಧನವಿಲ್ಲದ ಕಾರಣ ಬೆದರಿಕೆಗಳು ಬರುತ್ತಿವೆ: ಶ್ರೀಪಾದ್ ಭಟ್
“ಈ ರೀತಿಯ ಬೆದರಿಕೆಗಳು ಯಾಕೆ ಬರುತ್ತಿವೆ ಎಂದು ಯೋಚಿಸಬೇಕು. ಕರ್ನಾಟಕ ರಾಜ್ಯವು ಪಕ್ಕದ ತಮಿಳುನಾಡಿನಿಂದ ಏನನ್ನೂ ಕಲಿಯಲಿಲ್ಲ. ಉತ್ತರ ಪ್ರದೇಶದ ಮಾದರಿಗೆ ಬೆಂಬಲ ಸಿಗುತ್ತಿರುವ ಮನಸ್ಥಿತಿಯಿಂದಾಗಿ ಈ ರೀತಿಯ ಬೆಳವಣಿಗೆಗಳು ಆಗುತ್ತಿವೆ. ಏನು ಬೇಕಾದರೂ ಬರೆಯಬಹುದು, ಏನು ಬೇಕಾದರೂ ಮಾತನಾಡಬಹುದು ಎಂಬ ಧೈರ್ಯ ಮತೀಯ ಶಕ್ತಿಗಳಿಗೆ ಬರುತ್ತಿದೆ. ಯಾರನ್ನೂ ಬಂಧಿಸದ ಕಾರಣ ಇದು ಹೆಚ್ಚಾಗುತ್ತಿದೆ” ಎಂದು ಚಿಂತಕ ಬಿ.ಶ್ರೀಪಾದ್ ಭಟ್ ತಿಳಿಸಿದರು.

“ನಾವು ಇವರಿಗೆ ಪ್ರತಿರೋಧವನ್ನು ತೋರುತ್ತಿಲ್ಲ. ಶಿವಮೊಗ್ಗದಲ್ಲಿ ಗಲಭೆಯಾದಾಗ ಪ್ರತಿಪಕ್ಷಗಳು, ಪ್ರಗತಿಪರ ಸಂಘಟನೆಗಳು ಬೀದಿ ಬೀದಿಗೆ ಬಾವುಟ ಹಿಡಿದು ಹೋಗಬೇಕಿತ್ತು. ಕುವೆಂಪು ಅವರು ಹೇಳಿದಂತೆ ನಮ್ಮದು ಸರ್ವಜನಾಂಗ ಶಾಂತಿಯ ತೋಟ ಎಂಬ ಸಂದೇಶವನ್ನು ಸಾರಬೇಕಿತ್ತು. ಯಾರೂ ಬರದಿದ್ದಾಗ ಜನ ಭಯಗೊಂಡಿದ್ದಾರೆ. ಮಾಂಸದ ವಿಚಾರವಾಗಿ ಗಲಾಟೆಯಾದಾಗ ನಾವು ಏಕಕಾಲದಲ್ಲಿ ಮಾತನಾಡಿದ್ದರೆ ಈ ರೀತಿಯ ಪತ್ರ ಬರೆಯುತ್ತಿರಲಿಲ್ಲ. ಏನೇ ಮಾಡಿದರೂ ನಡೆಯುತ್ತಿದೆ ಎನಿಸಿದಾಗ ಬೆದರಿಕೆಗಳನ್ನು ಹಾಕುತ್ತಾರೆ” ಎಂದು ಅಭಿಪ್ರಾಯಪಟ್ಟರು.
ಪ್ರಜಾಪ್ರಭುತ್ವ ಪ್ರಹಸನವಾಗಿದೆ: ಎಂ.ಚಂದ್ರಪೂಜಾರಿ
“ಏನೇ ಹೇಳಿದರೂ ನಡೆಯುತ್ತದೆ ಎಂಬ ಧೈರ್ಯ ಇವರಿಗಿದೆ. ಹಿಜಾಬ್, ಜಟ್ಕಾ ಕಟ್ ಅಂತ ಬಂತು. ಸರ್ಕಾರವೇ ಪ್ರೋತ್ಸಾಹಿಸುತ್ತಿದ್ದರೆ ನಾವೇನು ಮಾಡಲು ಸಾಧ್ಯವಿಲ್ಲ. ಇಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇದೆಯಾ? ಸಂವಿಧಾನ ಇದೆಯಾ? ತಾಕತ್ತಿದ್ದವನು ತಮಗೆ ಬಂದಂತೆ ಕಾರುಬಾರು ಮಾಡುತ್ತಿದ್ದಾನೆ. ಪ್ರಜಾಪ್ರಭುತ್ವ ಒಂದು ಪ್ರಹಸನವಾಗಿದೆ” ಎಂದು ಆರ್ಥಿಕ ವಿಶ್ಲೇಷಕ ಪ್ರೊ.ಎಂ.ಚಂದ್ರ ಪೂಜಾರಿ ವಿಷಾದಿಸಿದರು.

ದನಿಯನ್ನು ಅಡಗಿಸಲು ಸಾಧ್ಯವಿಲ್ಲ: ನಾ.ದಿವಾಕರ
ಚಿಂತಕ ನಾ.ದಿವಾಕರ ಮಾತನಾಡಿ, ‘‘ಸಮಾಜ ಅಧಃಪಥನಕ್ಕೆ ಹೋಗುತ್ತಿರುವ ಸಂಕೇತವಿದು. ಬೆದರಿಕೆ ಹಾಕುವವರದ್ದು ಉತ್ತರ ಪೌರುಷ. ಇವರಿಗೆ ಹೆದರಿಕೊಂಡು ಬರೆಯುವುದನ್ನು, ಮಾತನಾಡುವುದನ್ನು ಯಾರೂ ನಿಲ್ಲಿಸುವುದಿಲ್ಲ. ಯಾವುದೇ ಮೂಲದ ಉಲ್ಲೇಖವಿಲ್ಲದ ಅನಾಮಧೇಯ ಪತ್ರವಿದು” ಎಂದು ಪ್ರತಿಕ್ರಿಯಿಸಿದರು.

“ಹಿರಿಯ ಚಿಂತಕ ಕಾಳೇಗೌಡ ನಾಗವಾರ ಅವರು ಹೇಳಿದಂತೆ ಭಿನ್ನಮತದ ಸೊಗಸು ನಮ್ಮ ನಾಡಿನಲ್ಲಿದೆ. ಅದನ್ನು ಉಳಿಸಬೇಕು. ಈ ಪತ್ರದ ಮೂಲವನ್ನು ಹುಡುಕಿ, ದುಷ್ಕರ್ಮಿಗಳನ್ನು ತಕ್ಷಣ ಅರೆಸ್ಟ್ ಮಾಡಬೇಕು. ಇಂತಹ ಬೆಳವಣಿಗೆಗಳಾದಾಗ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು ತಕ್ಷಣ ಪ್ರತಿಕ್ರಿಯೆ ನೀಡಬಹುದು. ಈ ದುಷ್ಕರ್ಮಿಗಳು ಮುಂದೊಂದು ದಿನ ಯಾರಿಗಾದರೂ ಬೆದರಿಕೆ ಹಾಕುವ ಸಾಧ್ಯತೆ ಇದೆ. ಏಕೆಂದರೆ ಕೈಯಲ್ಲಿ ಬಂದೂಕು ಇದ್ದವನಿಗೆ ಟ್ರಿಗರ್ ಒತ್ತುವುದೇ ಖುಷಿಯ ವಿಚಾರ. ಇಂಥವರನ್ನು ಸರ್ಕಾರ ನಿರ್ಬಂಧಿಸಬೇಕು” ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಪತ್ರ ಬರೆದಿರುವ ಚಿಂತಕರು
ಡಾ.ಕೆ.ಮರುಳಸಿದ್ದಪ್ಪ, ಡಾ.ವಿಜಯಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಬೊಳುವಾರು ಮಹಮದ್ ಕುಂಞಿ, ಡಾ.ಪುರುಷೋತ್ತಮ ಬಿಳಿಮಲೆ, ಪ್ರೊ.ರಾಜೇಂದ್ರ ಚೆನ್ನಿ, ಡಾ.ಬಂಜಗೆರೆ ಜಯಪ್ರಕಾಶ್, ಬಿ.ಸುರೇಶ್, ಕೆ.ನೀಲಾ, ಡಾ.ರಹಮತ್ ತರೀಕೆರೆ, ಚಿದಂಬರ ರಾವ್ ಜಂಬೆ, ಡಾ.ವಸುಂಧರಾ ಭೂಪತಿ, ಕೆ.ಎಸ್.ವಿಮಲಾ, ಡಾ.ಎನ್.ಗಾಯತ್ರಿ, ಡಾ.ಜಿ.ರಾಮಕೃಷ್ಣ, ಅಚ್ಯುತ, ವಾಸುದೇವ ಉಚ್ಚಿಲ, ಟಿ.ಸುರೇಂದ್ರ ರಾವ್, ಎಸ್.ದೇವೇಂದ್ರ ಗೌಡ, ಬಿ.ಐಳಿಗೆರ, ಜೆ.ಸಿ.ಶಶಿಧರ್, ಡಾ.ಕಾಶಿನಾಥ್ ಅಂಬಲಗಿ, ಡಾ.ಪ್ರಭು ಖಾನಾಪುರೆ, ಎನ್.ಕೆ.ವಸಂತ್ ರಾಜ್, ಯಶವಂತ ಮರೋಳಿ, ಡಾ.ಕೆ.ಷರೀಫಾ, ಡಾ.ಹೇಮಾ ಪಟ್ಟಣ ಶೆಟ್ಟಿ, ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ.ಚಂದ್ರ ಪೂಜಾರಿ, ಪ್ರೊ.ನರೇಂದ್ರ ನಾಯಕ್, ಪ್ರೊ.ಕೆ.ಫಣಿರಾಜ್, ಡಾ.ಇಂದಿರಾ ಹೆಗಡೆ, ಪ್ರೊ.ರಾಜೇಂದ್ರ ಉಡುಪ, ಪ್ರೊ.ಮಾಧವಿ ಭಂಡಾರಿ, ಪ್ರೊ.ಪಟ್ಟಾಭಿರಾಮ ಸೋಮಯಾಜಿ, ಕೆ.ರಾಘವ, ಅಮೃತಾ ಅತ್ರಾಡಿ, ಕೆ.ಸದಾಶಿವ ಮಾಸ್ಟ್ರು, ಪ್ರೊ.ಭೂಮಿಗೌಡ, ಎಂ.ದೇವದಾಸ, ಎಸ್.ವೈ.ಗುರುಶಾಂತ್, ವೆಂಕಟೇಶ್ ಪ್ರಸಾದ್, ಚಂದ್ರಹಾಸ ಉಲ್ಲಾಳ್, ಐ.ಕೆ.ಬೋಳವಾರ್, ಮನೋಜ ವಾಮಂಜೂರ್, ಪ್ರಭಾಕರ್ ಕಾಪಿಕಾಡ್, ಟಿ.ಆರ್.ಭಟ್, ಶ್ಯಾಮಸುಂದರ ರಾವ್, ನಾ.ದಿವಾಕರ್, ಕಲೀಂ, ಸಿ.ಬಸವಲಿಂಗಯ್ಯ, ಎಲ್.ಜಗನ್ನಾಥ್, ಕೆ.ಎಸ್.ಲಕ್ಷ್ಮಿ, ಬಿ.ಎಂ.ಹನೀಫ್, ನಾಗೇಶ್ ಕಲ್ಲೂರ, ಸುಷ್ಮಾ, ಡಾ.ಕಾಳೇಗೌಡ ನಾಗವಾರ, ಕೋದಂಡ ರಾಮ್, ಮಾವಳ್ಳಿ ಶಂಕರ್, ಯಮುನಾ ಗಾಂವ್ಕರ್, ಬಿ.ಶ್ರೀಪಾದ್ ಭಟ್.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿರಿ: ಚರಕದ ಮುಂದೆ ಕೂತ ತೇಜಸ್ವಿ ಸೂರ್ಯ: ಮಿತಿಮೀರಿದ ಬೂಟಾಟಿಕೆ ಎಂದ ಜನತೆ


