Homeಕರ್ನಾಟಕವಿಶೇಷ ವರದಿ; #sackrohithchakrateerta ವಿವಾದದ ಸುತ್ತ

ವಿಶೇಷ ವರದಿ; #sackrohithchakrateerta ವಿವಾದದ ಸುತ್ತ

- Advertisement -
- Advertisement -

ಕನ್ನಡ ನಾಡಿನ ಭವ್ಯ ಮತ್ತು ಸೌಹಾರ್ದ ಪರಂಪರೆಯನ್ನು ಹಾಡುವ ನಾಡಗೀತೆಯನ್ನು ವಿಕೃತವಾಗಿ ತಿರುಚಿ, ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದ ವ್ಯಕ್ತಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸ್ಥಾನದಲ್ಲಿ
ಕೂತಿರುವುದು, ಈಗ ಅದೇ ವ್ಯಕ್ತಿಯನ್ನು ಪಠ್ಯಪುಸ್ತಕ ಪರಿಶೀಲನಾ ಸಮಿತಿಗೂ ಅಧ್ಯಕ್ಷನನ್ನಾಗಿ ನೇಮಿಸಿರುವುದು ಕರ್ನಾಟಕಕ್ಕೆ ಮತ್ತು ರಾಜ್ಯದ ನಾಗರಿಕರಿಗೆ ಮಾಡಿರುವ ಅವಮಾನ ಎಂಬ ಆಕ್ರೋಶ ಭುಗಿಲೆದ್ದಿದೆ.

ಉಗ್ರ ಬಲಪಂಥೀಯತೆಯನ್ನು ಪ್ರತಿಪಾದಿಸುವ, ವಿಚಾರವಂತರು-ಚಿಂತಕರ ಮೇಲೆ ಅತ್ಯಂತ ಕೆಟ್ಟ ಭಾಷಾ ಪ್ರಯೋಗ ಮಾಡುವ ವ್ಯಕ್ತಿ ಎಂದೇ ಖ್ಯಾತರಾಗಿರುವ, ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಬಗ್ಗೆ ನಿರಭಿಮಾನದ ಮತ್ತು ಅವಹೇಳನಕಾರಿ ಪೋಸ್ಟ್ ಹಾಕುವ ರೋಹಿತ್ ಚಕ್ರತೀರ್ಥರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯನನ್ನಾಗಿ ಮುಂದುವರಿಸಬಾರದು ಎಂಬ ಕೂಗು ಕೇಳಿಬಂದಿದೆ. #sackrohithchakrateerta ಎಂಬ ಹ್ಯಾಷ್‌ಟ್ಯಾಗ್ ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿತ್ತು. ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಹಿಂದೆ ಹಂಚಿಕೊಂಡಿದ್ದ ಪೋಸ್ಟ್‌ಅನ್ನು ಉಲ್ಲೇಖಿಸಿ ಸಾವಿರಾರು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರೊ.ಎಸ್.ಜಿ.ಸಿದ್ದರಾಮಯ್ಯ

ರೋಹಿತ್ ಚಕ್ರತೀರ್ಥ ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯನನ್ನಾಗಿ ನೇಮಿಸಿದಾಗಲೇ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಚಕ್ರತೀರ್ಥ ಅವರು ಕೆಲವು ಕನ್ನಡ ಕವಿಗಳನ್ನು, ಪ್ರಗತಿಪರ ವಿಚಾರಧಾರೆ ಉಳ್ಳವರನ್ನು ಅನುಚಿತ ಭಾಷೆ ಬಳಸಿ ಅವಮಾನ ಮಾಡಿದ್ದಾರೆ. ಇಂಥವರನ್ನು ಕನ್ನಡದ ಕೆಲಸಗಳಿಗೆ ನೇಮಿಸಿರುವುದು ಅಪಾಯಕಾರಿ ಎಂಬ ಟೀಕೆ ವ್ಯಕ್ತವಾಗಿತ್ತು. ರೋಹಿತ್ ಚಕ್ರತೀರ್ಥ ಅವರು ನಾಡಗೀತೆಯನ್ನು ವಿಕೃತವಾಗಿ ತಿರುಚಿದ್ದ ಬರಹವನ್ನು ಹಂಚಿಕೊಂಡಿದ್ದು ಕೋರ್ಟ್ ಮೆಟ್ಟಿಲೇರಲು ಕಾರಣವಾಗಿದೆ. ಹೊಸ ಧರ್ಮಗಳ ಉದಯ ಪಠ್ಯ ಸೇರಿದಂತೆ, 1ರಿಂದ 10ನೇ ತರಗತಿಯ ಹಲವು ವಿಷಯಗಳ ಪಠ್ಯಪುಸ್ತಕಗಳ ಪರಿಶೀಲನೆಗೆ ಕೋಮುವಾದಿ ಹಿನ್ನೆಲೆಯ ವ್ಯಕ್ತಿಯನ್ನು ನೇಮಿಸುವ ಔಚಿತ್ಯವಾದರೂ ಏನು? ಅಲ್ಲದೆ, ಇಂತಹ ವ್ಯಕ್ತಿಯನ್ನು ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷನನ್ನಾಗಿ ನೇಮಿಸಿದ್ದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಆದ್ದರಿಂದ ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕೆಳಗಿಳಿಸಿ, ಪಠ್ಯಪುಸ್ತಕ ಪರಿಶೀಲನಾ ಸಮಿತಿಯಿಂದ ವಜಾ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.

ಈ ಬಗ್ಗೆ ’ನ್ಯಾಯಪಥ’ ಪತ್ರಿಕೆಯೊಂದಿಗೆ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು, “ಯಾವತ್ತೂ ಒಂದು ನಾಡು, ನುಡಿಯ ಬಗ್ಗೆ ಗೌರವ ಇಲ್ಲದವರು, ನಮ್ಮ ಸಾಂಸ್ಕೃತಿಕ ಅಧಿಕಾರ ಸ್ಥಾನಗಳಿಗೆ ಹೋಗಬಾರದು. ಹಾಗೇನಾದರೂ ಹೋದರೆ ಅದು ನಾಡು, ನುಡಿಗೆ ಮಾಡುವ ಅವಮಾನ. ಕುವೆಂಪು ಅವರು ಈ ನಾಡಿನ ಸ್ವಾಭಿಮಾನದ ಪ್ರತೀಕ. ಅವರು ಬರೆದಿರುವ ನಾಡಗೀತೆ ನಮ್ಮ ಒಕ್ಕೂಟ ವ್ಯವಸ್ಥೆಯ ಪ್ರತೀಕ. ಅಲ್ಲಿ ನಾಡಿನ ಅಸ್ಮಿತೆ ಇದೆ, ರಾಷ್ಟ್ರದ ಭಾವೈಕ್ಯತೆಯ ಸಂದೇಶವಿದೆ. ಇಂತಹ ನಾಡಗೀತೆಗೆ ಅವಮಾನ ಮಾಡಿದ್ದಾರೆ ಎಂದರೆ ರಾಷ್ಟ್ರಕ್ಕೆ ಮತ್ತು ನಾಡಿಗೆ ಎರಡಕ್ಕೂ ಅವಮಾನ ಮಾಡಿದ್ದಾರೆ ಎಂದರ್ಥ. ಜೊತೆಗೆ ಇದು ಕುವೆಂಪು ಅವರಿಗೆ ಮಾಡಿದ ಬಹುದೊಡ್ಡ ಅವಮಾನ. ಇಂಥವರು ’ಜಿಹ್ವಾ ಲಂಪಟರು’ (ನಾಲಿಗೆಯನ್ನು ಹರಿಬಿಡುವವರು), ಬಾಯಿಗೆ ಬಂದಿದ್ದನ್ನು ನಿಯಂತ್ರಿಸದೆ ಮಾತನಾಡುವವರು. ದೊಡ್ಡವರ ಬಗ್ಗೆ ಮಾತನಾಡುವಾಗ ಪ್ರಜ್ಞೆ ಇರಬೇಕು” ಎನ್ನುತ್ತಾರೆ.

ಮುಂದುವರಿದು, “ಈ ವ್ಯಕ್ತಿಯನ್ನು ಅಲ್ಲಿ ಕೂರಿಸಿರುವುದು, ಒಂದು ಪಕ್ಷ ತನಗೇ ತಾನೇ ತಂದುಕೊಂಡಿರುವ ಅಗೌರವ. ಮೂರು ವರ್ಷದ ಹಿಂದಿನ ಪೋಸ್ಟ್ ಈಗ ಚರ್ಚೆಯಾಗುವುದು ಏತಕ್ಕೆ ಎಂದು ಈ ವ್ಯಕ್ತಿ ಕೇಳುವುದಾದರೆ ಅದು ಆತನ ಸಮಯಸಾಧಕತನವನ್ನು ತೋರಿಸುತ್ತಿದೆ. ರಾಷ್ಟ್ರದ ಬಗ್ಗೆ, ದೊಡ್ಡವರ ಬಗ್ಗೆ ಮಾತನಾಡುವಾಗ ಎಲ್ಲೋ ಕಲಿತಿದ್ದನ್ನು ಗಿಳಿಪಾಠ ಒಪ್ಪಿಸುವುದಲ್ಲ. ರಾಷ್ಟ್ರ ಮತ್ತು ನಾಡು ಎಂಬುದು ನಮ್ಮ ನಡವಳಿಕೆಯೊಳಗೆ ಬಿಂಬಿತವಾಗುವ ಒಂದು ಪ್ರಜ್ಞೆ. ಈಗ, ಇಂತಹ ವ್ಯಕ್ತಿಯನ್ನು ಪಠ್ಯಪುಸ್ತಕ ಸಮಿತಿ ಅಧ್ಯಕ್ಷನನ್ನಾಗಿ ನೇಮಿಸಿರುವುದು, ಶಿಕ್ಷಣ ಕ್ಷೇತ್ರದ ಕುರಿತು ಈ ಸರ್ಕಾರಕ್ಕೆ ಎಂತಹ ಕಾಳಜಿ ಇದೆ ಎಂಬುದರ ದ್ಯೋತಕ. ಮತಾಂಧರನ್ನು ಯಾವುದೇ ಜವಾಬ್ದಾರಿಯ ಜಾಗದಲ್ಲಿ ಕೂರಿಸುವುದು ಅಪಾಯಕಾರಿಯಾದದ್ದು. ಜೊತೆಗೆ ಚರಿತ್ರೆ ಬಗ್ಗೆ ಸಂಪೂರ್ಣ ತಿಳಿವಳಿಕೆ ಹಾಗೂ ಗೌರವ ಇಲ್ಲದವರನ್ನು ಆ ಜಾಗದಲ್ಲಿ ಕೂರಿಸುವುದು
ಚರಿತ್ರೆಗೆ ಮಾಡುವ ದ್ರೋಹ” ಎನ್ನುತ್ತಾರೆ.

ಹರ್ಷಕುಮಾರ್ ಕುಗ್ವೆ

ಸಾಮಾಜಿಕ ಕಾರ್ಯಕರ್ತ ಹರ್ಷಕುಮಾರ್ ಕುಗ್ವೆ ಪ್ರತಿಕ್ರಿಯಿಸಿ, “ಪ್ರಾಧಿಕಾರಕ್ಕೆ ಚಕ್ರತೀರ್ಥ ಅವರನ್ನು ಸದಸ್ಯರನ್ನಾಗಿ ನೇಮಿಸಿದಾಗಲೂ ಕನ್ನಡ ಸಂಘಟನೆಗಳು ಧ್ವನಿ ಎತ್ತಿವೆ. ಈಗ ಮತ್ತೆ ಪಠ್ಯಪುಸ್ತಕ ಸಮಿತಿಗೆ ನೇಮಿಸಿರುವುದು ಕನ್ನಡಿಗರನ್ನು ಕೆರಳಿಸಿದೆ. ನಾಡಗೀತೆಗೆ ಅವಮಾನ ಮಾಡಿದ್ದರಿಂದ 2017ರಲ್ಲಿ ದಾಖಲಾದ ಪ್ರಕರಣ ಇನ್ನೂ ಜೀವಂತವಾಗಿದೆ. ಹೀಗಿರುವಾಗ ಪ್ರಾಧಿಕಾರಕ್ಕೆ ನೇಮಕ ಮಾಡಿದ್ದೇ ಮೊದಲ ಪ್ರಮಾದ. ಚಕ್ರತೀರ್ಥ ಅವರಿಗೆ ಆತ್ಮಸಾಕ್ಷಿ ಎಂಬುದು ಇದ್ದಿದ್ದರೆ ಪ್ರಾಧಿಕಾರದ ಸದಸ್ಯತ್ವ ಸ್ಥಾನವನ್ನು ಒಪ್ಪಿಕೊಳ್ಳಬಾರದಿತ್ತು. ತನ್ನ ಮೇಲೆ ಪ್ರಕರಣ ಇರುವಾಗ, ನ್ಯಾಯಾಂಗ ಕ್ಲೀನ್‌ಚೀಟ್ ನೀಡದಿರುವಾಗ ಇದರಲ್ಲಿ ಸೇರಬಾರದು ಎಂಬ ಪ್ರಜ್ಞೆ ಇರಬೇಕಿತ್ತು. ಆದರೆ ಚಕ್ರತೀರ್ಥ ಭಂಡ. ಇವರನ್ನು ಇನ್ನೊಂದು ಸಮಿತಿಯ ಅಧ್ಯಕ್ಷರನ್ನಾಗಿ ಮಾಡುವುದು ಎಷ್ಟು ಸರಿ?” ಎಂದು ಪ್ರಶ್ನಿಸುತ್ತಾರೆ.

“ಚಕ್ರತೀರ್ಥ ಮೇಲಿನ ಆರೋಪ ಸಾಮಾನ್ಯವಾದದ್ದೇನಲ್ಲ. ಒಂದು ನಾಡಧ್ವಜವನ್ನು ಒಳ ಉಡುಪಿಗೆ ಹೋಲಿಸುವಂತಹದ್ದು, ನಾಡಗೀತೆಯನ್ನು ತಿರುಚುವುದು ನಾಡಿಗೆ ಮಾಡುವ ಅವಮಾನ. ಬೇರೆಯವರು ಬರೆದದ್ದು ಎಂದು ಆತ ಹೇಳಿದರೂ ಆ ಸಾಲುಗಳನ್ನು ಆತ ಒಪ್ಪಿಯೇ ಪೋಸ್ಟ್ ಮಾಡಿದ್ದಾರೆ. ಹೀಗಿರುವಾಗ ಆ ಸ್ಥಾನಗಳಲ್ಲಿ ಕೂರುವ ನೈತಿಕತೆ ಈ ವ್ಯಕ್ತಿಗಿಲ್ಲ. ಬಹಳ ಸಭ್ಯನಂತೆ ಚಕ್ರತೀರ್ಥ ಮಾತನಾಡಿದರೂ ಬರವಣಿಗೆಯಲ್ಲಿ ಎಂತಹ ನಂಜು ಇರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ನಾಡಗೀತೆಗೆ ಅವಮಾನದ ಮಾಡಿದ ವಿಚಾರ ಬಂದಾಗ, ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಬಗ್ಗೆ ಮಾತನಾಡಲು ಶುರು ಮಾಡುತ್ತಾರೆ. ಈ ಆರೋಪ ಬಗ್ಗೆ ಮಾತನಾಡಲ್ಲ. ಕುವೆಂಪು ಅವರನ್ನು ಅವಮಾನಿಸುವ, ನಾಡಗೀತೆಗೆ ಅಗೌರವ ತೋರುವ ಒಂದು ಬರಹ ವಾಟ್ಸ್‌ಆಪ್‌ನಲ್ಲಿ ಕಳುಹಿಸಿದವರಿಗೆ ಬುದ್ಧಿ ಹೇಳುವುದು ಬಿಟ್ಟು, ಈ ಕವಿತೆ ಬರೆದವರು ಮುಂದೆ ಬನ್ನಿ ಬುರ್ಜ್ ಖಲೀಫಾ ಕೊಡುತ್ತೇನೆ ಎಂದು ಫೇಸ್‌ಬುಕ್‌ನಲ್ಲಿ ಹಾಕಿಕೊಳ್ಳುತ್ತಾರೆಂದರೆ ಏನರ್ಥ? ಇವರಿಗೆ ಕನ್ನಡ ಬಗ್ಗೆ ಬದ್ಧತೆ ಇಲ್ಲ” ಎನ್ನುತ್ತಾರೆ ಹರ್ಷ.

ಭೈರಪ್ಪ ಹರೀಶ್

ಕನ್ನಡಕ್ಕೆ ಅಪಮಾನ ಮಾಡಿರುವ ವಿಚಾರವಾಗಿ ರೋಹಿತ ಚಕ್ರತೀರ್ಥ ವಿರುದ್ಧ ಪೊಲೀಸರಿಗೆ
ದೂರು ಸಲ್ಲಿಸಿರುವ ಕನ್ನಡಪರ ಹೋರಾಟಗಾರ ಹರೀಶ್ ಭೈರಪ್ಪ ಅವರು ಮಾತನಾಡಿ, “ಚಕ್ರತೀರ್ಥ
ಅವರು ಜೀವನದುದ್ದಕ್ಕೂ ಕನ್ನಡ ಕವಿಗಳನ್ನು, ಕನ್ನಡವನ್ನು ಟೀಕಿಸುತ್ತಾ ಬಂದಿದ್ದಾರೆ. ಇಂಥವರಿಗೆ ಕನ್ನಡ ಅಭಿವೃದ್ಧಿ ಕೆಲಸವನ್ನು ಕೊಟ್ಟರೆ ಯಾವ ಮಟ್ಟದಲ್ಲಿ ಮಾಡುತ್ತಾರೆ? ಹಿಂದಿ ಹೇರಿಕೆ ಹೇಗೆ ಮಾಡಬಹುದು, ಸಂಸ್ಕೃತ ಹೇಗೆ ಕಲಿಸುವುದು ಎಂಬ ಕೆಲಸದಲ್ಲಿ ಅವರು ಮಗ್ನರಾಗಿದ್ದಾರೆ. ಇದಕ್ಕಾಗಿಯೇ ಸಂಘಪರಿವಾರ ಈತನನ್ನು ಆಯಕಟ್ಟಿನ ಜಾಗಗಳಲ್ಲಿ ತಂದು ಕೂರಿಸಿದೆ. ಪಠ್ಯಪುಸ್ತಕ ಸಮಿತಿಯಲ್ಲಿ ಈತ ಹಿಂದುತ್ವದ ಅಜೆಂಡಾವನ್ನು ತುರುಕಲು ಯತ್ನಿಸುತ್ತಿದ್ದಾರೆ. ಕನ್ನಡ ಸಾಹಿತಿಗಳು ಎಚ್ಚೆತ್ತುಕೊಳ್ಳಬೇಕಿತ್ತು. ಕನ್ನಡ ಪರ ಇರುವವರು ಸರ್ಕಾರದ ಕಿವಿ ಹಿಂಡಬೇಕು. ಇಲ್ಲವಾದರೆ ಮಕ್ಕಳ ಮನಸ್ಸಲ್ಲಿ ವಿಷಬೀಜ ತುಂಬಲಾಗುತ್ತದೆ. ಕರ್ನಾಟಕ ಅಧೋಗತಿಗೆ ಹೋಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.

ಈ ಹಿಂದೆ ಪಠ್ಯಪುಸ್ತಕ ಸಮಿತಿ ಅಧ್ಯಕ್ಷರಾಗಿದ್ದ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ನ್ಯಾಯಪಥದೊಂದಿಗೆ ಮಾತನಾಡಿ ಈ ವಿವಾದದ ಬಗ್ಗೆ ತಮ್ಮ ನಿಲುವನ್ನು ಹಂಚಿಕೊಂಡರು. ಪಠ್ಯಪುಸ್ತಕ ಪರಿಶೀಲನೆಯ ವಿಚಾರದ ಕುರಿತು, ತಮ್ಮ ಬಗ್ಗೆ ಬಂದಿರುವ ಟೀಕೆಗಳಿಗೆ ಅವರು ಉತ್ತರಿಸಿದ್ದು ಹೀಗೆ: “ನಾನು ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಸರ್ವಾಧ್ಯಕ್ಷನಾಗಿ ನೇಮಕಗೊಂಡಾಗ ಒಟ್ಟು 27 ವಿಷಯಾವಾರು ಸಮಿತಿಗಳಿದ್ದು ಪ್ರತಿ ಸಮಿತಿಗೂ ಒಬ್ಬೊಬ್ಬರು ಅಧ್ಯಕ್ಷರಿದ್ದರು. ಸಮಿತಿಗಳಲ್ಲಿ ವಿಷಯ ತಜ್ಞರೂ, ಅಧ್ಯಾಪಕರೂ ಇದ್ದರು. ಒಟ್ಟು 172 ಜನ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಮತ್ತು ಸಂವಿಧಾನದ ಆಶಯಗಳನ್ನು ಆಧರಿಸಿ ಪರಿಷ್ಕರಣೆ ಮಾಡಲಾಯಿತು. ಒಂದು ವೇಳೆ ಅಕಸ್ಮಾತ್ತಾಗಿ ಚಿಕ್ಕಪುಟ್ಟ ದೋಷಗಳು ಇದ್ದರೆ ಅವುಗಳನ್ನು ತಿದ್ದಬಹುದು ಎಂದು ಅಂದೇ ನಾನು ಹೇಳಿದ್ದೆ. ಆದರೆ ಈ ತಿದ್ದುಪಡಿಗಳು ವಿಷಯಾವಾರು ತಜ್ಞರಿಂದ ಆಗಬೇಕು. ಪಠ್ಯಪುಸ್ತಕಗಳ ವಿಷಯದಲ್ಲಿ ರಾಜಕೀಯ ಪಕ್ಷಗಳ ಪೂರ್ವಾಗ್ರಹ ತಲೆ ತೂರಿಸಬಾರದು.

ನಾನು ಮೊದಲಿಂದಲೂ ’ಪಠ್ಯಪುಸ್ತಕಗಳು ಪಕ್ಷ ಪುಸ್ತಕಗಳಲ್ಲ’ ಎಂದು ಹೇಳುತ್ತಾ ಬಂದಿದ್ದೇನೆ. ಇದು ಎಲ್ಲಾ ಪಕ್ಷಗಳ ಸರ್ಕಾರಗಳಿಗೂ ಅನ್ವಯಿಸುತ್ತದೆ. ಪಠ್ಯ ಪುಸ್ತಕಗಳ ವಿಷಯದಲ್ಲಿ ಕೇಸರೀಕರಣಕ್ಕೆ ಕಾಂಗ್ರೆಸ್ಸೀಕರಣ ಪರ್ಯಾಯವಾಗಬಾರದು ಎಂದು ನಾನು ಸರ್ವಾಧ್ಯಕ್ಷ ಸ್ಥಾನದಿಂದಲೇ ಬಹಿರಂಗವಾಗಿ ಹೇಳಿದ್ದೆ. ಎಲ್ಲಾ ಪಠ್ಯಪುಸ್ತಕಗಳನ್ನು ಪೂರ್ಣವಾಗಿ ಪರಿಶೀಲಿಸದೆ ಅಪಪ್ರಚಾರ ಮಾಡುತ್ತಿರುವುದೂ ಉಂಟು. ಅದರಲ್ಲಿ ಒಂದು ಅಪ ಪ್ರಚಾರ- 6ನೇ ತರಗತಿಯ ಪಠ್ಯದಿಂದ ಕೆಂಪೇಗೌಡರ ಪಾಠವನ್ನು ತೆಗೆದುಹಾಕಲಾಗಿದೆ- ಎಂಬುದು. ವಾಸ್ತವ ಬೇರೆ ಇದೆ. 7ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ’ನಾಯಕರು, ಪಾಳೆಯಗಾರರು ಮತ್ತು ನಾಡ ಪ್ರಭುಗಳು’ ಎಂಬ ಪ್ರತ್ಯೇಕ ಅಧ್ಯಾಯ ಸೇರಿಸಿದ್ದು ಅದರಲ್ಲಿ ನಾಡಪ್ರಭು ಕೆಂಪೇಗೌಡರ ವಿವರಗಳಿವೆ. ಇವರೆಲ್ಲರ ವಿಷಯ ಒಂದೇ ಕಡೆ ಬರಲಿ ಎನ್ನುವ ಕಾರಣಕ್ಕೆ ಸಮಾಜ ವಿಜ್ಞಾನ ಪಠ್ಯ ಪರಿಷ್ಕರಣೆ ಸಮಿತಿಯ ಸಲಹೆಯಂತೆ ಹೀಗೆ ಮಾಡಲಾಗಿದೆ. ಎಲ್ಲಾ ಪಠ್ಯಪುಸ್ತಕಗಳನ್ನು ನೋಡದೆ ವೃಥಾ ಅಪಪ್ರಚಾರ ಮಾಡಲಾಗುತ್ತಿದೆ.

ಬರಗೂರು ರಾಮಚಂದ್ರಪ್ಪ

“ಕನ್ನಡ ಪಠ್ಯಪುಸ್ತಕಗಳಲ್ಲಿ ಮಾಸ್ತಿ, ಅಡಿಗರಂಥವರ ಪಾಠಗಳೇ ಇರಲಿಲ್ಲ. ನಾವು ಸೇರಿಸಿದ್ದೇವೆ. ಉರ್ದು ಪಠ್ಯದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಮತ್ತು ಮರಾಠಿ ಪಠ್ಯದಲ್ಲಿ ಭಾಷಾ ಬಾಂಧವ್ಯ ಎಂಬ ಪಾಠ ಸೇರಿಸಿದ್ದೇವೆ. ಬೇರೆ ಭಾಷಾ ಪಠ್ಯಗಳಲ್ಲಿ ಕನ್ನಡ ಸಾಹಿತ್ಯದ ಪರಿಚಯ ಪಾಠಗಳನ್ನೂ ಸೇರಿಸಿದ್ದೇವೆ. ಇಂಥ ಬದಲಾವಣೆಯನ್ನು ಮರೆಮಾಚಲಾಗುತ್ತಿದೆ. ತಪ್ಪುಗಳಿದ್ದರೆ ಅವರು ಸಕಾರಣವಾಗಿ ಗುರುತಿಸಲಿ. ಅವರು ಅಂತಿಮವಾಗಿ ವರದಿ ಕೊಡುವುದಕ್ಕೆ ಮುಂಚೆ ಪ್ರತಿಕ್ರಿಯಿಸುವುದು ನನ್ನ ಸ್ವಭಾವ ಅಲ್ಲ. ಬೇಕಾಗಿರುವುದು ಅಕಾಡೆಮಿಕ್ ವಿಚಾರ ವಿನಿಮಯ. ಯಾರೂ ನನ್ನನ್ನು ಕೇಳಿಲ್ಲ. ಇಷ್ಟಕ್ಕೂ ಸವಾಲು ಪ್ರತಿಸವಾಲು ಹಾಕುವುದು ನಿಜವಾದ ಚರ್ಚೆ ಅಲ್ಲ. ದೋಷಗಳಿದ್ದರೆ ಗುರುತಿಸಲಿ. ಆಯಾ ವಿಷಯಕ್ಕೆ ಸಂಬಂಧಿಸಿದ ತಜ್ಞರು ಆ ಬಗ್ಗೆ ಅಂತಿಮವಾಗಿ ಅಭಿಪ್ರಾಯ ಕೊಡಲಿ. ಆರೋಪದ ಪೂರ್ವಾಗ್ರಹ ಅಪ್ರಯೋಜಕ” ಎನ್ನುತ್ತಾರೆ ಬರಗೂರರು.

“6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ವೇದಕಾಲದ ಸಂಸ್ಕೃತಿ ಕುರಿತು ಪಾಠ ಇದೆ. ಒಳ್ಳೆಯ ವಿವರಗಳಿವೆ. 8ನೇ ತರಗತಿಯ ಪಠ್ಯದಲ್ಲಿ ಮತ್ತಷ್ಟು ವಿವರಗಳಿದ್ದು, ’ಜಾತಿ ಸೃಷ್ಟಿಗೆ ದೈವಿಕ ಮತ್ತು ಪುರಾಣದ ಮೂಲವನ್ನು ಹಿನ್ನೆಲೆಯಾಗಿ ಒದಗಿಸುವ ಪ್ರಯತ್ನ ಮಾಡಲಾಯಿತು’ ಎಂದು ಹೇಳಲಾಗಿದೆ. ಜಾತಿಪದ್ಧತಿ ಸೃಷ್ಟಿ ಆಯಿತು ಎಂದಿಲ್ಲ. ಉಪನಿಷತ್ ವಿಷಯ ಬಂದಾಗ ಜಾತಿ ವ್ಯವಸ್ಥೆಯು ಸಾಂಸ್ಥಿಕ ರೂಪದಲ್ಲಿ ಬೆಳೆಯಲು ಇದು ಅತಿ ಮುಖ್ಯ ತಾತ್ವಿಕ ಆಧಾರವಾಯಿತು ಎಂಬ ಮಾತು ಇದೆ. ಅದೇನೇ ಇರಲಿ, ಸರ್ಕಾರ ನೇಮಿಸಿದ ಸಮಿತಿಯವರು ತಮ್ಮ ವರದಿ ನೀಡುವುದಕ್ಕೆ ಮುಂಚೆಯೇ ಪ್ರಚಾರ, ಅಪಪ್ರಚಾರದಲ್ಲಿ ತೊಡಗುವುದು ಸಭ್ಯ ಸಂಹಿತೆ ಅಲ್ಲ ಎನ್ನುತ್ತಾರೆ.

ಹಾಲಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಏನಂತಾರೆ?

ರಂಗಕರ್ಮಿ, ಚಿತ್ರ ನಿರ್ದೇಶಕ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿರುವ ಟಿ.ಎಸ್.ನಾಗಾಭರಣ ಅವರು ಪತ್ರಿಕೆಯೊಂದಿಗೆ ಮಾತನಾಡಿ, “ಚಕ್ರತೀರ್ಥ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸದಸ್ಯರಾಗಿ
ಸೇರಿದಾಗ ಅವರ ಮೇಲಿನ ಆರೋಪ ನಮಗೆ ಗೊತ್ತಿರಲಿಲ್ಲ. ಸದಸ್ಯರ ಹಿನ್ನೆಲೆಯನ್ನು ಸರ್ಕಾರ ಪರೀಕ್ಷೆ ಮಾಡಿಕೊಳ್ಳಬೇಕು. ಅವರು ಕನ್ನಡದ ಕೆಲಸಗಾರರಾ? ಕನ್ನಡ ಕಟ್ಟುವಂಥವರಾ? ಒಡೆಯುವಂಥವರಾ? ಎಂದು ಸರ್ಕಾರ ಯೋಚಿಸಬೇಕಿತ್ತು. ನಮಗೆ ಕೇಳಿ ಏನಾದರೂ ಮಾಡಿದ್ದರೆ ನಾವು ಅದಕ್ಕೆ ಜವಾಬ್ದಾರರಾಗುತ್ತೇವೆ. ಸರ್ಕಾರದ ಆದೇಶದಂತೆ ನಾವು ಕೆಲಸ ಮಾಡುತ್ತಾ ಹೋಗುತ್ತೇವೆ ಅಷ್ಟೇ. ಈ ಥರದ ಬೆಳವಣಿಗೆಗಳು ನಮ್ಮ ಗಮನಕ್ಕೆ ಬಂದಾಗ ದಯವಿಟ್ಟು ಈ ಥರ ಮಾಡಬೇಡಿ ಎಂದು ತಿಳಿಹೇಳುತ್ತೇವೆ. ಈ ಪ್ರಕರಣ ಆದ ಮೇಲೆ ಚಕ್ರತೀರ್ಥ ಅವರು ಇಂತಹ ವಿಚಾರಗಳಲ್ಲಿ ತೊಡಗಿಸಿಕೊಂಡಿಲ್ಲ ಎಂದು ಕಾಣುತ್ತದೆ. ಅಭಿವೃದ್ಧಿ ಪ್ರಾಧಿಕಾರದಲ್ಲಿ ಈಗ ಹೆಚ್ಚುಗಾರಿಕೆಯಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಮಕ್ಕಳಿಗೆ ಕನ್ನಡದಲ್ಲಿ ಗಣಿತ ಪಾಠ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದಾರೆ. ವಿಜ್ಞಾನ ಪ್ರಯೋಗಾಲಯಗಳನ್ನು ಶಾಲೆಗಳಲ್ಲಿ ಮಾಡಬೇಕು ಎಂಬ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಕನ್ನಡ ಮಕ್ಕಳಿಗೆ ಬೇಕಾದ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ” ಎನ್ನುತ್ತಾರೆ.

“ಮೊದಲೇ ನನಗೆ ಅವರ ಪ್ರಕರಣ ತಿಳಿದಿದ್ದರೆ ಅವರನ್ನು ಸೇರಿಸಿಕೊಳ್ಳುತ್ತಿದ್ದೆನೋ ಇಲ್ಲವೋ ಬೇರೆ ವಿಷಯ. ಒಂದು ಸ್ಥಾನ ಕೊಟ್ಟು, ಸರ್ಕಾರ ಕೆಲವರನ್ನು ನೇಮಿಸಿ, ಇವರ ಜೊತೆ ಕೆಲಸ ಮಾಡಿ ಎಂದಾಗ, ಕೆಲಸಗಾರರನ್ನು ಬಳಸಿಕೊಂಡು ಕೆಲಸ ಮಾಡುತ್ತೀರೋ, ಅವರ ಹಿನ್ನೆಲೆಯನ್ನು ಹುಡುಕಿಕೊಂಡು ಹೋಗುತ್ತೀರೋ? ಕೆಲಸಗಾರರನ್ನು ಬಳಸಿಕೊಂಡು ಸಕಾರಾತ್ಮಕವಾಗಿ ಮುಂದುವರಿಯಬೇಕು. ಅವರ ಮನಸ್ಸು ಪರಿವರ್ತನೆಯಾಗಿದೆಯೋ ಇಲ್ಲವೋ? ನಮಗ್ಯಾಕೆ? ನಮ್ಮ ಕೆಲಸಕ್ಕೆ ತೊಂದರೆ ಮಾಡದಿದ್ದರೆ ಸಾಕು. ಕನ್ನಡ ಮನಸ್ಸುಗಳನ್ನು ಕಟ್ಟುವ ಕೆಲಸ ಇಂದು ಆಗಬೇಕು. ನೀವು ಮಾಡಿದ್ದು ತಪ್ಪಲ್ಲವೇ ಎಂದು ಹೇಳಿ, ಆದರೆ
ಅದನ್ನೇ ಎಳೆದಾಡಿದರೆ ವ್ಯತಿರಿಕ್ತ ಪರಿಣಾಮ ಬೀರಬಹುದು” ಎಂಬುದು ಟಿಎಸ್‌ಎನ್ ಅವರ ಪ್ರತಿಕ್ರಿಯೆ.

ನನ್ನ ಅರ್ಹತೆ ಕುರಿತು ಸರ್ಕಾರ ಉತ್ತರಿಸಬೇಕು, ನಾನಲ್ಲ: ಚಕ್ರತೀರ್ಥ

ಈ ವಿವಾದದ ಬಗ್ಗೆ ರೋಹಿತ್ ಚಕ್ರತೀರ್ಥ ಅವರನ್ನು ಸಂಪರ್ಕಿಸಿ, “ನೀವು ಕನ್ನಡ ದ್ರೋಹಿ, ನಿಮ್ಮನ್ನು ಪ್ರಾಧಿಕಾರದ ಸದಸ್ಯ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಕೂಗು ಎದ್ದಿದೆ” ಎಂಬುದರ ಬಗ್ಗೆ ಪ್ರಶ್ನಿಸಿದಾಗ, ಚಕ್ರತೀರ್ಥ ಅವರು “ಪ್ರತಿಯೊಬ್ಬರಿಗೂ ಅವರ ಅಭಿವ್ಯಕ್ತಿಗೆ ಸ್ವತಂತ್ರ ಇದ್ದೇ ಇದೆ. ಹಾಗಾಗಿ ಯಾರದೇ ಅಭಿಪ್ರಾಯವನ್ನು ಮುಕ್ತ ಮನಸ್ಸಿನಿಂದ ನಾನು ಸ್ವಾಗತ ಮಾಡುತ್ತೇನೆ. ನಾಲ್ಕು ವರ್ಷಗಳ ಹಿಂದಿನ ಪ್ರಕರಣವಿದು. ಈ ಹಿಂದಿನ ಸರ್ಕಾರ ಶಾಲೆಗಳಲ್ಲಿ ಅರೇಬಿಕ್ ಭಾಷೆಯನ್ನು ಬೋಧನೆ ಮಾಡುತ್ತೇವೆ ಎಂದು ಹೊರಟಿತ್ತು. ಆ ಸಂದರ್ಭದಲ್ಲಿ ಜನರಿಂದ ಒಂದಿಷ್ಟು ಆಕ್ರೋಶ ಬಂದಿತ್ತು. ಅದಕ್ಕೆ ಸಂಬಂಧಿಸಿದಂತೆ ಯಾರೋ ನಾಲ್ಕು ಸಾಲು ಬರೆದಿದ್ದರು. ವಾಟ್ಸ್‌ಆಪ್‌ನಲ್ಲಿ ಬಂದಿದ್ದನ್ನು ಎಫ್‌ಬಿಯಲ್ಲಿ ನಾನು ಹಂಚಿಕೊಂಡಿದ್ದೆ. ಅದರ ಜೊತೆಗೆ ಇದು ವಾಟ್ಸ್‌ಆಪ್‌ನಲ್ಲಿ ಬಂದಿದ್ದು ಎಂದೂ ಹೇಳಿದ್ದೆ. ಅದಕ್ಕೆ ಟೀಕೆಯೂ ವ್ಯಕ್ತವಾಗಿತ್ತು. ಪ್ರತಿಭಟನೆಗಳೂ ನಡೆದಿದ್ದವು. ನನ್ನ ಮಟ್ಟಿಗೆ ಅದು ಮುಗಿದುಹೋದ ಅಧ್ಯಾಯ. ನಾಲ್ಕು ವರ್ಷಗಳ ಹಿಂದಿನ ಪ್ರಕರಣವನ್ನು ಕೆದಕಿ ಇವತ್ತಿನ ಸಂದರ್ಭದಲ್ಲಿ ಪ್ರಶ್ನಿಸುತ್ತಿರುವ ಉದ್ದೇಶವೇನು? ಹೋರಾಟ ಮಾಡುತ್ತಿರುವವರು, ’ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ ಹೇಗಾದಿರ?’ ಎಂಬ ಪ್ರಶ್ನೆಯನ್ನು ಎತ್ತುತ್ತಿದ್ದಾರೆ.

“ಕನ್ನಡ ನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಕನ್ನಡದ ಬಗ್ಗೆ ಗೌರವ, ಪ್ರೀತಿ ಇದ್ದೇ ಇದೆ. ಅದರಲ್ಲಿ ಎರಡನೇ ಮಾತಿಲ್ಲ. ಕನ್ನಡಿಗರೆಲ್ಲರೂ ಒಂದೇ. ನಾನು ಕನ್ನಡ ಓದುತ್ತೇನೆ, ನಿರಂತರ ಕನ್ನಡದಲ್ಲಿ ಬರೆಯುತ್ತೇನೆ. ಕನ್ನಡ ಮಾಧ್ಯಮದಲ್ಲಿ ಓದಿದ್ದೇನೆ. ನೀನು ಕನ್ನಡದ ಅಭಿಮಾನಿಯಲ್ಲ ಎಂದಾಗ ಬೇಜಾರಾಗುತ್ತದೆ” ಎನ್ನುತ್ತಾರೆ.

’ನೀವು ಹಿಂದಿ ಏರಿಕೆ ಕುರಿತು ನೀವೆಲ್ಲ ಮಾತನಾಡುವುದಿಲ್ಲವಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ಚಕ್ರತೀರ್ಥ ಅವರು “ಹಿಂದಿಯಿಂದ ಕನ್ನಡಕ್ಕೆ ಆಗುತ್ತಿರುವ ಹೋರಾಟದ ಬಗ್ಗೆ ನಾನು ಬೀದಿಯಲ್ಲಿ ಹೋರಾಟ ಮಾಡಿಯೇ ದನಿ ಎತ್ತಬೇಕಾದ ಅವಶ್ಯಕತೆ ಇಲ್ಲ. ನಾವು ಪ್ರಾಧಿಕಾರದಿಂದ ಸಿಗಬಹುದಾದ ಅವಕಾಶವನ್ನು ಬಳಸಿಕೊಂಡು ದನಿ ಎತ್ತಿದ್ದೇವೆ. ಕನ್ನಡ ಮಾತೃ ಭಾಷೆಯಲ್ಲಿ ಏಳನೇ ತರಗತಿವರೆಗೆ ಕಲಿತವರಿಗೆ ಉದ್ಯೋಗದಲ್ಲಿ ಮೀಸಲಾತಿ ಕೊಡಬೇಕು ಎಂದು ಇಂದಿಗೂ ಹೋರಾಟ ಮಾಡುತ್ತಿದ್ದೇನೆ” ಎನ್ನುತ್ತಾರೆ.

’ನಿಮ್ಮನ್ನು ಪಠ್ಯಪುಸ್ತಕ ಸಮಿತಿಗೆ ನೇಮಿಸಿದ್ದಾರೆ’, ನಿಮ್ಮ ಅರ್ಹತೆಯ ಕುರಿತು ಚರ್ಚೆಯಾಗುತ್ತಿದೆಯೆಲ್ಲ ಎಂಬುದರ ಬಗ್ಗೆ ಗಮನ ಸೆಳೆದಾಗ “ನನ್ನ ಅರ್ಹತೆಯನ್ನು ನೋಡಿಯೇ ಸರ್ಕಾರ ನನ್ನನ್ನು ಪರಿಶೀಲನೆಗೆ ನೇಮಿಸಿದೆ. ನಾನು ವೃತ್ತಿ ಜೀವನವನ್ನು ಉಪನ್ಯಾಸಕನಾಗಿ ಆರಂಭಿಸಿದ್ದೇನೆ. ನಾನು ಪುಸ್ತಕಗಳನ್ನು ಬರೆದಿದ್ದೇನೆ ಎಂದು ಹೇಳಿಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಹೀಗಾಗಿ ಸರ್ಕಾರಕ್ಕೆ ಸೂಕ್ತ ಎನಿಸಿದ್ದೇನೆ. ಸರ್ಕಾರ ನನ್ನನ್ನು ಆಯ್ಕೆ ಮಾಡಿದೆ. ಆಯ್ಕೆ ಸರಿಯೋ ತಪ್ಪೋ ಜನ ಪ್ರಶ್ನೆ ಮಾಡಿದರೆ ಸರ್ಕಾರ ಉತ್ತರ ಕೊಡಬೇಕೇ ಹೊರತು, ನಾನು ಸಮರ್ಥನೆ ಕೊಡಬೇಕಾದ ಅವಶ್ಯಕತೆ ಇಲ್ಲ” ಎನ್ನುತ್ತಾರೆ ಚಕ್ರತೀರ್ಥ.

ಸಾಮಾಜಿಕ ಜಾಲತಾಣಗಳಲ್ಲಿ ರೋಹಿತ್ ಚಕ್ರತೀರ್ಥ ಅವರು ಹೆಚ್ಚು ಬಳಸುವ ನಿಂದನಾತ್ಮಕ ಭಾಷೆ, ಬಲಪಂಥೀಯ ಸಿದ್ಧಾಂತದ ಉಗ್ರ ಪ್ರತಿಪಾದನೆ, ತಾವು ಅಲ್ಲಗಳೆದರೂ, ಅವರ ಪ್ರೊಫೈಲ್ ಸ್ಕ್ರಾಲ್ ಮಾಡಿದರೆ ಸಾಕು ಮೇಲ್ನೋಟಕ್ಕೇ ಗೋಚರಿಸುವ, ವಿಚಾರವಂತರ ಮತ್ತು ಚಿಂತಕರ ವಿರುದ್ಧ ನಡೆಸುವ ಅಪಪ್ರಚಾರದ ಪೋಸ್ಟ್‌ಗಳ ಬಗ್ಗೆ ಹಲವರು ನಿರಂತರವಾಗಿ ದೂರುತ್ತಾ ಬಂದಿದ್ದಾರೆ. ಇದು ಈಗ ಸಂಘಟಿತ ರೂಪವನ್ನು ಪಡೆದು ಹಲವು ಸಾಮಾಜಿಕ ವೇದಿಕೆಗಳಲ್ಲಿ ಚರ್ಚೆಗೆ ಕಾರಣವಾಗಿದೆ. ರೋಹಿತ್ ಚಕ್ರತೀರ್ಥ ಅವರ ಬಗ್ಗೆ ಎದ್ದಿರುವ ವಿವಾದಗಳ ಬಗ್ಗೆ ಸರ್ಕಾರ ಯಾವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುವುದೋ ಕಾದು ನೋಡಬೇಕಿದೆ.


ಇದನ್ನೂ ಓದಿ: ನಾಡ ಧ್ವಜ, ನಾಡಗೀತೆಗೆ ಅವಮಾನ ಮಾಡಿದವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸ್ಥಾನ: ತೀವ್ರ ತರಾಟೆ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...