Homeಚಳವಳಿವಚನ ಚಳವಳಿಯನ್ನು ಪ್ರತಿಫಲಿಸುವ ಲಿಂಗಾಯತ ರಾಜಕೀಯ ಹುಟ್ಟಬಲ್ಲದೇ?

ವಚನ ಚಳವಳಿಯನ್ನು ಪ್ರತಿಫಲಿಸುವ ಲಿಂಗಾಯತ ರಾಜಕೀಯ ಹುಟ್ಟಬಲ್ಲದೇ?

ಬಿಜೆಪಿಯ ಅತಿದೊಡ್ಡ ಶಕ್ತಿಯಾಗಿರುವ ಲಿಂಗಾಯತರು ಈ ನಿಲ್ದಾಣಕ್ಕೆ ಹೇಗೆ ಬಂದರು? ಇದು ಶಾಶ್ವತವೇ ಅಥವಾ ಇಲ್ಲಿಂದ ಅವರು ಎಲ್ಲಿಗೆ ಹೋಗಬಲ್ಲರು? ಈ ಪ್ರಶ್ನೆಗಳಿಗೆ ಉತ್ತರಿಸಲು ಆಧುನಿಕ ಕರ್ನಾಟಕ ರಾಜಕಾರಣ ಮತ್ತು ಲಿಂಗಾಯತರ ನಿಲುವುಗಳನ್ನೊಮ್ಮೆ ತಿರುವಿ ಹಾಕಬೇಕು.

- Advertisement -
- Advertisement -

ವಚನ ಚಳುವಳಿಯ ಉಟೋಪಿಯಾದ ಬೆನ್ನು ಬಿದ್ದವರಿಗೆ ಇವತ್ತಿನ ಲಿಂಗಾಯತ ಸಮಾಜ ಮತ್ತು ಅದರ ರಾಜಕೀಯ ನಿಲುವುಗಳು ದಿಗ್ಭ್ರಮೆಯನ್ನಷ್ಟೇ ಮೂಡಿಸುತ್ತದೆ. ಚಿಂತಕ, ಶಾಸನತಜ್ಞ ದಿವಂಗತ ಡಾ. ಎಂ.ಎಂ. ಕಲ್ಬುರ್ಗಿ ಮತ್ತು ಸಾಹಿತಿ ಚಂಪಾ ಅಂತಹ ಲಿಂಗಾಯತ ಸಮುದಾಯದ ಬರಹಗಾರರೂ ಸಹ ತಮ್ಮ ಸಮಾಜವು ಹಿಂದುತ್ವವಾದಿ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲಿಸುವುದು ನಾಚಿಕೆಗೇಡು ಎಂಬರ್ಥದ ಮಾತುಗಳನ್ನು ಪದೇಪದೇ ಹೇಳಿದ್ದಾರೆ. ಇದರ ಮೂಲ ನಾವು ವಚನ ಚಳುವಳಿಯ ಉದಾತ್ತ ಮೌಲ್ಯಗಳು ಮತ್ತು ಇಂದಿನ ಲಿಂಗಾಯತ ಸಮಾಜವನ್ನು ಏಕೀಭವಿಸಿ ನೋಡುವುದೇ ಆಗಿದೆ. ದುರದೃಷ್ಟವಶಾತ್ ಅದು ಆ ರೀತಿ ಇಲ್ಲ. ಇದಕ್ಕೆ ಹಲವು ಐತಿಹಾಸಿಕ ಕಾರಣಗಳೂ ಇವೆ.

ನಮ್ಮೆಲ್ಲಾ ರೋಮ್ಯಾಂಟಿಸಿಸಂನ ಹೊರತಾಗಿಯೂ ವಾಸ್ತವೆಂದರೆ ಕಲ್ಯಾಣಕ್ರಾಂತಿಯ ತರುವಾಯ ವಚನ ಚಳುವಳಿ ಮುರಿದುಬಿತ್ತು. ವಚನಕಾರರು ಕೈಗೆ ಸಿಕ್ಕ ವಚನ ಸಂಪತ್ತನ್ನು ಹಿಡಿದು ದಿಕ್ಕಾಪಾಲಾಗಿ ಹೋದರು. ಶರಣ ಸಮಾಜವು ನಿಧಾನಕ್ಕೆ ವೈದಿಕಶಾಹಿಯ ಹಿಡಿತಕ್ಕೆ ಮರಳಿ ಹೋಯಿತು. ಇವತ್ತಿನ ವೀರಶೈವ-ಪಂಚಪೀಠಗಳು ಮತ್ತು ವಿರಕ್ತ-ಲಿಂಗಾಯತರ ನಡುವಿನ ವಾಗ್ವಾದಗಳ ಮೂಲ ಇದೇ ಆಗಿದೆ. ಅಸಲು 1925ರ ಈಚೆಗೆ ಫ.ಗು. ಹಳಕಟ್ಟಿಯವರು ವಚನ ಸಾಹಿತ್ಯವನ್ನು ಮರುಸಂಗ್ರಹಿಸಿ ಅದನ್ನು ಪ್ರಚಾರ ಮಾಡುವವರೆಗೆ ವಚನಗಳ ಬಗ್ಗೆಯೇ ಒಂದು ವಿಸ್ಮೃತಿ ಮನೆ ಮಾಡಿತ್ತು. ಇದಕ್ಕಿನ್ನೂ ಶತಮಾನ ತುಂಬಿಲ್ಲ.

ಆನುದೇವ ಹೊರಗಣವನು ಕೃತಿಯಲ್ಲಿ ಬಂಜಗೆರೆ ಜಯಪ್ರಕಾಶ್ ಅವರು ಬಸವಣ್ಣ ಮೂಲದಲ್ಲಿ ದಲಿತನಿದ್ದಿರಬಹುದು ಎಂದು ವಾದಿಸಿದಾಗ ಬಂದ ಪ್ರತಿಕ್ರಿಯೆಯಲ್ಲಿ, ಬಸವಣ್ಣನ ಬ್ರಾಹ್ಮಣ ಮೂಲದ ಬಗ್ಗೆ ಲಿಂಗಾಯತರಿಗಿರುವ ಅಕ್ಕರೆ ಮತ್ತು ಈ ಸಮಾಜದಲ್ಲಿ ಶೂದ್ರ ಪ್ರಜ್ಞೆ ಇಲ್ಲಿದಿರುವುದನ್ನು ಎತ್ತಿತೋರಿಸುತ್ತದೆ. ಸಸ್ಯಾಹಾರಿ ಸಮಾಜವಾದ ಲಿಂಗಾಯತ ಸಮಾಜವು ನವಬ್ರಾಹ್ಮಣರ ರೀತಿ ನಡೆದುಕೊಂಡಿರುವುದೂ ತಿಳಿದ ವಿಷಯವೇ. 19ನೇ ಶತಮಾನದಲ್ಲಿ ಲಿಂಗಾಯತರನ್ನು ಮೈಸೂರು ಸಂಸ್ಥಾನದ ಸೆನ್ಸಸ್ ಚಾತುರ್ವರ್ಣದ ಹೊರಗಿಟ್ಟರೆ, 20ನೇ ಶತಮಾನದ ಆದಿಯಲ್ಲಿ ಒಮ್ಮೆ ಅವರನ್ನು ಶೂದ್ರ ಎಂದು ಪರಿಗಣಿಸುತ್ತದೆ. ತಮ್ಮನ್ನು ಶೂದ್ರರೆಂದು ಪರಿಗಣಿಸಕೂಡದು, ತಮ್ಮನ್ನು ಲಿಂಗೀ ಬ್ರಾಹ್ಮಣರೆಂದು ಪರಿಗಣಿಸಬೇಕೆಂದು ಈ ಸಮಾಜವು ಚಳುವಳಿ ನಡೆಸುತ್ತದೆ, ಸಂಸ್ಕೃತಕ್ಕೆ ಒತ್ತು ನೀಡುತ್ತದೆ. ಇದು ಮೈಸೂರಿನ ಕಥೆಯಾದರೆ ಅತ್ತ ಉತ್ತರಕರ್ನಾಟಕದಲ್ಲಿ ಲಿಂಗಾಯತ ಸಮಾಜವು ಪ್ರಮುಖ ಭೂಮಾಲೀಕ ಫ್ಯೂಡಲ್ ಮನಸ್ಥಿತಿಯ ಸಮಾಜವಾಗಿಯೇ ಉಳಿದಿದೆ. ಈ ಹಿನ್ನೆಲೆಯಲ್ಲಿಯೇ ನಾವು ಲಿಂಗಾಯತ ರಾಜಕಾರಣವನ್ನು ನೋಡಬೇಕಿದೆ.

ಸ್ವಾತಂತ್ರ್ಯಾನಂತರದ ಲಿಂಗಾಯತ ರಾಜಕಾರಣವನ್ನು ಗಮನಿಸಿದರೆ, ಈ ಸಮಾಜದ ರಾಜಕೀಯ ನಿಲುವುಗಳು ಒಂದು ಭೂಮಾಲೀಕ ಫ್ಯೂಡಲ್ ಮನಸ್ಥಿತಿಯ ಅಧಿಕಾರ ರಾಜಕಾರಣದ ಪಟ್ಟುಗಳನ್ನು ಪ್ರದರ್ಶಿಸಿದೆ ಅಷ್ಟೆ. ಕರ್ನಾಟಕದ ಏಕೀಕರಣವನ್ನು ಹಳೇ ಮೈಸೂರು ಭಾಗದ ಒಕ್ಕಲಿಗರು ವಿರೋಧಿಸಿದ್ದರು. ಅದಕ್ಕೆ ಕಾರಣ ಅವರು ಆವರೆಗೆ ಅವಿರೋಧವಾಗಿ ಅನುಭವಿಸುತ್ತಿದ್ದ ಅಧಿಕಾರವನ್ನು ಲಿಂಗಾಯತರ ಜೊತೆ ಹಂಚಿಕೊಳ್ಳಬೇಕಾಗುತ್ತದೆಂಬುದೇ ಆಗಿತ್ತು. ಇದು ಇವತ್ತಿಗೂ ಲಿಂಗಾಯತ-ಒಕ್ಕಲಿಗರ ನಡುವೆ ಪೈಪೋಟಿಯಾಗಿ ಮತ್ತು ಮುಸುಕಿನ ಗುದ್ದಾಟವಾಗಿ ಉಳಿದುಕೊಂಡೇ ಬಂದಿದೆ. ಇನ್ನು ಯಾವಾಗಲಾದರೂ ಈ ಎರಡೂ ಸಮಾಜಗಳು ತಮ್ಮ ಪೈಪೋಟಿಯನ್ನು ಬದಿಗಿಟ್ಟು ಒಂದಾಗಿರುವುದು ಶೂದ್ರ-ದಲಿತ ರಾಜಕಾರಣ ಅಧಿಕಾರ ಹಿಡಿಯುವುದನ್ನು ತಡೆಯುವ ಸಲುವಾಗಿ ಮಾತ್ರ.

ಇವತ್ತು ಬಿಜೆಪಿಯ ಅತಿದೊಡ್ಡ ಶಕ್ತಿಯಾಗಿರುವ ಲಿಂಗಾಯತರು ಈ ನಿಲ್ದಾಣಕ್ಕೆ ಹೇಗೆ ಬಂದರು? ಇದು ಶಾಶ್ವತವೇ ಅಥವಾ ಇಲ್ಲಿಂದ ಅವರು ಎಲ್ಲಿಗೆ ಹೋಗಬಲ್ಲರು? ಈ ಪ್ರಶ್ನೆಗಳಿಗೆ ಉತ್ತರಿಸಲು ಆಧುನಿಕ ಕರ್ನಾಟಕ ರಾಜಕಾರಣ ಮತ್ತು ಲಿಂಗಾಯತರ ನಿಲುವುಗಳನ್ನೊಮ್ಮೆ ತಿರುವಿ ಹಾಕಬೇಕು.

ಮೊದಲ ಕೆಲವು ದಶಕಗಳಲ್ಲಿ ಎಲ್ಲ ಸಮಾಜಗಳೂ ಕಾಂಗ್ರೆಸ್ ಜೊತೆಗೇ ಇದ್ದವು. ಇದಕ್ಕೆ ಮೊದಲ ಹೊಡೆತ ಬಿದ್ದದ್ದು 1969ರಲ್ಲಿ ಕಾಂಗ್ರೆಸ್ ಇಬ್ಭಾಗವಾದಾಗ. ಆಗ ಲಿಂಗಾಯತರ ಜನಪ್ರಿಯ ನಾಯಕ ನಿಜಲಿಂಗಪ್ಪನವರು ಸಂಸ್ಥಾ ಕಾಂಗ್ರೆಸ್ಸಿನ ನೇತೃತ್ವ ವಹಿಸಿದರು. ಆದರೆ ಆಗಲೂ ಸಹ ಲಿಂಗಾಯತರೇನು ದೊಡ್ಡ ಮಟ್ಟದಲ್ಲಿ ಶಿಫ್ಟ್ ಆಗಲಿಲ್ಲ. ಆದರೆ ದೇವರಾಜ ಅರಸರು ಅಹಿಂದ ರಾಜಕಾರಣವನ್ನು ಮುನ್ನಲೆಗೆ ತಂದು ಭೂಸುಧಾರಣೆಯನ್ನು ದೊಡ್ಡ ಮಟ್ಟದಲ್ಲಿ ಜಾರಿ ಮಾಡಿದರೋ ಆಗ ಭೂಮಾಲೀಕ ಜಾತಿಗಳಾದ ಒಕ್ಕಲಿಗ-ಲಿಂಗಾಯತರು ಜನತಾ ಪಕ್ಷದತ್ತ ವಾಲಿದರು. ಅದಕ್ಕೆ ಎಮರ್ಜೆನ್ಸಿ, ಕಾಂಗ್ರೆಸ್ ವಿರೋಧ ಮತ್ತು ಗುಂಡೂರಾವ್ ಅವರ ಸರ್ಕಾರದ ವಿರೋಧಿ ಅಲೆಗಳೂ ಕಾರಣ ಅನ್ನೋದು ನಿಜವಾದರೂ, ಅಂತರ್ಗಾಮಿಯಾಗಿ ಭೂಮಾಲೀಕ ಜಾತಿಗಳಾಗಿದ್ದ ಕಾರಣಕ್ಕೆ ಅವುಗಳು ಜನತಾ ಪಕ್ಷಕ್ಕೆ ಶಿಫ್ಟ್ ಆದದ್ದು. ಮತ್ತು ಈ ಸ್ಥಿತ್ಯಂತರಕ್ಕೆ ಒಂದು ಮುಖ್ಯ ಕಾರಣವಾದ ರೈತ ಚಳುವಳಿಯೂ ಸಹ ಭೂಮಾಲೀಕರ ಚಳುವಳಿಯಾಗಿದ್ದು ಅದರಲ್ಲಿ ಇದೇ ಒಕ್ಕಲಿಗ-ಲಿಂಗಾಯತರೇ ಹೆಚ್ಚಿದ್ದದ್ದು ಕೂಡ ಸತ್ಯ. 1989ರ ವೇಳೆಗೆ ಜನತಾ ಪಕ್ಷ ಹೋಳಾಗಿತ್ತು, ಅದು ಭಾಗಶಃ ಒಕ್ಕಲಿಗ-ಲಿಂಗಾಯತ ಎಂಬಂತಯೇ ಭಾಗವಾಗಿತ್ತು. ಕಾಂಗ್ರೆಸ್ ವೀರೇಂದ್ರ ಪಾಟೀಲರ ನೇತೃತ್ವದಲ್ಲಿ ಚುನಾವಣೆಗೆ ಹೋಗಿತ್ತು. ಕಾಂಗ್ರೆಸ್ ಅಭೂತಪೂರ್ವ ಯಶಸ್ಸು ಸಾಧಿಸಿತು. ಕಾಂಗ್ರೆಸ್ಸಿಗೆ ಸದಾ ಕಾಲ ಇದ್ದ ಒಂದು ಅಹಿಂದ ಮತಬ್ಯಾಂಕ್ ಜೊತೆಗೆ ಒಂದು ಭೂಮಾಲೀಕ ಜಾತಿಯ ನಾಯಕತ್ವದೊಂದಿಗೆ ಬರುವ ಬೆಂಬಲ ಕಾಂಗ್ರೆಸ್ಸನ್ನು ಸದಾ ಅಧಿಕಾರಕ್ಕೆ ತಂದಿದೆ. ಆದರೆ ಕೇವಲ ಒಂದೇ ವರ್ಷದಲ್ಲಿ ಅಂದಿನ ಪ್ರಧಾನಿ ರಾಜೀವ ಗಾಂಧಿ ಪಾಟೀಲರನ್ನು ಸದೆಬಡಿಯಲು ಹೊರಟರು. ಸಾರಾಯಿ ಮತ್ತಿತರ ಲಾಬಿಗಳಿಗೆ ಮಣಿದು, ಅನಾರೋಗ್ಯದ ಕಾರಣ ನೀಡಿ ಅತ್ಯಂತ ಅವಮಾನಕರವಾಗಿ ಪಾಟೀಲರನ್ನು ಮುಖ್ಯಮಂತ್ರಿ ಹುದ್ದೆಯಿಂದ ತೆಗೆದುಹಾಕಿದರು. ಈಡಿಗ ಸಮುದಾಯದವರಾದ ಬಂಗಾರಪ್ಪನವರನ್ನು ಮುಖ್ಯಮಂತ್ರಿ ಮಾಡಿದರು. ಅವರೂ ನಿಲ್ಲಲಿಲ್ಲ, ಮೊಯ್ಲಿ ಬಂದರು, ಹೋದರು.

ಇದನ್ನೂ ಓದಿ: ಬಸವ ತತ್ವ-ಸಂವಿಧಾನದ ಆಶಯ | ಕತ್ತಲು ಕವಿಯುವಾಗ ಮಿಣುಕು ದೀಪ : ಲಿಂಗಾಯತ ಮಠದ ಪೀಠವೇರಿದ ದಿವಾನ್ ಶರೀಫ್

ವೀರೇಂದ್ರ ಪಾಟೀಲರಿಗೆ ಕಾಂಗ್ರೆಸ್ ಮಾಡಿದ ಅವಮಾನವನ್ನು ಈ ಸಮಾಜ ಇವತ್ತಿಗೂ ಮರೆತಿಲ್ಲ, ಅಂದಿನಿಂದ ಇಂದಿನವರೆಗೂ ಈ ಸಮಾಜ ಮತ್ತೆ ಕಾಂಗ್ರೆಸ್ಸಿಗೆ ಬೆಂಬಲಿಸಿಲ್ಲ. ಕಾಂಗ್ರೆಸ್ ಸಹ ಇದುವರೆಗೂ ಅಂತಹ ಒಬ್ಬ ದೊಡ್ಡ ಲಿಂಗಾಯತ ನಾಯಕನನ್ನು ಬೆಳೆಸಿಲ್ಲ, ಅವರಿಗೆ ನಾಯಕತ್ವ ನೀಡಿಲ್ಲ. 1994ರ ಚುನಾವಣೆ ವೇಳೆಗೆ ಜನತಾ ಹೋಳುಗಳು ಒಂದಾಗಿದ್ದವು. ಇಬ್ಬರು ಅಹಿಂದ ಮುಖ್ಯಮಂತ್ರಿಗಳನ್ನು ನೀಡಿದ ಕಾಂಗ್ರೆಸ್ಸಿನ ವಿರುದ್ಧ ಮತ್ತೆ ಒಕ್ಕಲಿಗ-ಲಿಂಗಾಯತರು ಒಂದೇ ತಾಟಿಗೆ ಬಂದು ಜನತಾಪಕ್ಷವನ್ನು ಬೆಂಬಲಿಸಿದರು. ಆದರೆ ಜನತಾಪಕ್ಷ ಮತ್ತೆ ಹೋಳಾಯಿತು. ಈ ಬಾರಿ ಜೆ.ಎಚ್. ಪಟೇಲ್ ಮತ್ತು ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಲಿಂಗಾಯತರು ಹಾಗೂ ದೇವೇಗೌಡರ ನೇತೃತ್ವದಲ್ಲಿ ಒಕ್ಕಲಿಗರು ಎಂಬಂತೆ ಮತ್ತೆ ಲಿಂಗಾಯತರು-ಒಕ್ಕಲಿಗರು ಬಿರುಕು ಮೂಡಿತು. ಒಕ್ಕಲಿಗರಾದ ಕೃಷ್ಣರ ನೇತೃತ್ವದಲ್ಲಿ ಕಾಂಗ್ರೆಸ್ ಒಕ್ಕಲಿಗ ಮತ್ತು ಅಹಿಂದ ಫಾರ್ಮುಲಾದಡಿ ಅಧಿಕಾರ ಹಿಡಿಯಿತು. ಇತ್ತ ಪಟೇಲರ ನೇತೃತ್ವದ ಜೆಡಿಯು ಬಿಜೆಪಿಯ ಜೊತೆ ಅಂದು ಸಖ್ಯ ಮಾಡಿತ್ತು. ಆ ಚುನಾವಣೆಯಲ್ಲಿ ಬಿಜೆಪಿಗೆ ಯಾವ ಲಾಭವೂ ಆಗಲಿಲ್ಲವಾದರೂ 2004ರ ವೇಳೆಗೆ ಪಟೇಲ್ ಮತ್ತು ಹೆಗಡೆ ಜೋಡಿ ಹಿಂದೆ ಸರಿದಿದ್ದರು. ಇತ್ತ ಬಿಜೆಪಿಯಲ್ಲಿ ಯಡಿಯೂರಪ್ಪ ಮುಂಚೂಣಿಗೆ ಬಂದಿದ್ದರು. ಬಿಜೆಪಿ ಯಡಿಯೂರಪ್ಪನವರ ನೇತೃತ್ವದಲ್ಲಿ ಜೆಡಿಯುನ ಸ್ಪೇಸ್‍ಅನ್ನು ಆಕ್ರಮಿಸಿಕೊಂಡಿತು. ಆ ಪಕ್ಷದ ಹಲವು ನಾಯಕರು ಬಿಜೆಪಿ ಸೇರಿದರು. ಇವತ್ತು ಉತ್ತರಕರ್ನಾಟಕದ ಬಹುತೇಕ ಬಿಜೆಪಿ ನಾಯಕರು ಇದೇ ವಲಸೆಯಲ್ಲಿ ಪಕ್ಷ ಸೇರಿದವರೇ. ಲಿಂಗಾಯತರು 2004ರಲ್ಲಿ ದೊಡ್ಡ ಮಟ್ಟದಲ್ಲಿ ಬಿಜೆಪಿ ಬೆಂಬಲಿಸಿದರು. 2008ರ ಚುನಾವಣೆ ವೇಳೆಗೆ ಒಕ್ಕಲಿಗ ಕುಮಾರಸ್ವಾಮಿ ಲಿಂಗಾಯತ ಯಡಿಯೂರಪ್ಪನವರಿಗೆ ಅಧಿಕಾರ ವಂಚಿಸಿ ವಚನಭ್ರಷ್ಟರಾಗಿದ್ದರು. ಆಗ ಯಡಿಯೂರಪ್ಪನವರು ಲಿಂಗಾಯತರ ಪ್ರಶ್ನಾತೀತ ನಾಯಕನಾಗಿಬಿಟ್ಟರು ಮತ್ತು ಲಿಂಗಾಯತರು ಬಿಜೆಪಿಗೆ ಗೂಟ ಹೊಡೆದುಕೊಂಡು ಕೂತುಬಿಟ್ಟರು. ಆದರೆ ಡ್ರಾಮಾ ಇಲ್ಲಿಗೇ ನಿಲ್ಲಲಿಲ್ಲ.

2013ರ ಚುನಾವಣೆ ವೇಳೆಗೆ ಯಡಿಯೂರಪ್ಪನವರು ಬಿಜೆಪಿಯಿಂದ ಹೊರಬಂದು ಕೆಜೆಪಿ ಕಟ್ಟಿದರು. ಅವರೇ ಬಿಜೆಪಿಗೆ ಕರೆತಂದಿದ್ದ ಅನೇಕ ಲಿಂಗಾಯತ ನಾಯಕರು ಅವರನ್ನು ಹಿಂಬಾಲಿಸಲಿಲ್ಲ. ಕೆಜೆಪಿ ಬಿಜೆಪಿಯನ್ನು ಸೋಲಿಸಲು ಶಕ್ಯವಾಯಿತೇ ಹೊರತು, ಗೆಲ್ಲಲಾಗಲಿಲ್ಲ. ಯಡಿಯೂರಪ್ಪನವರ ನಾಯಕತ್ವದ ಹೊರತಾಗಿಯೂ ಈಗ ಬಿಜೆಪಿಗೆ ಲಿಂಗಾಯತರ ಬೆಂಬಲ ಇದೆ, ಆದರೆ ಅದು ಆ ಪಕ್ಷವನ್ನು ಅಧಿಕಾರಕ್ಕೆ ತರುವ ಮಟ್ಟದ ಬೆಂಬಲ ಅಲ್ಲ ಎಂದು ಬಿಜೆಪಿ-ಕೆಜೆಪಿಗಳೆರಡಕ್ಕೂ ಅರ್ಥವಾಯಿತು. ಯಡಿಯೂರಪ್ಪ ಮರಳಿ ಮನೆಗೆ ಬಂದರು. ಇತ್ತ ಸಿದ್ಧರಾಮಯ್ಯನವರ ಸರ್ಕಾರ ಈ ನಾಡು ಕಂಡ ಅತ್ಯಂತ ಅಸರ್ಟಿವ್ ಆದ ಅಹಿಂದ ಸರ್ಕಾರ. ಸಿದ್ಧರಾಮಯ್ಯನವರು ಹೌದು ನನ್ನದು ಅಹಿಂದ ಸರ್ಕಾರ ಎಂದು ವಿಧಾನಸಭೆಯಲ್ಲೂ ಹೇಳಿದ್ದರು ಒಮ್ಮೆ. ನಿರೀಕ್ಷಿತವಾಗಿಯೇ ಗೌಡ-ಲಿಂಗಾಯತ-ಬ್ರಾಹ್ಮಣರು ಕಾಂಗ್ರೆಸ್ಸಿನ ವಿರುದ್ಧ ತಿರುಗಿಬಿದ್ದರು. ಬಿಜೆಪಿಗೆ ಭಾಗಶಃ ಬಹುಮತ ಲಭಿಸಿತು. ಯಡಿಯೂರಪ್ಪನವರು ಮತ್ತೆ ಮುಖ್ಯಮಂತ್ರಿ ಆಗಿದ್ದಾರೆ. ಈಗ ಅವರನ್ನು ಇಳಿಸುವ ಪ್ರಯತ್ನಗಳು ಉಧೃತವಾಗುತ್ತಿದ್ದಂತೆ, ವೀರೇಂದ್ರ ಪಾಟೀಲರನ್ನು ಇಳಿಸಿದ್ದಕ್ಕೆ ಕಾಂಗ್ರೆಸ್ಸಿಗಾದ ಗತಿಯನ್ನು ಅವರು ಬಿಜೆಪಿಗೆ ಮತ್ತೆ ಮತ್ತೆ ನೆಪಿಸುತ್ತಿದ್ದಾರೆ. ಒಂದೊಮ್ಮೆ ಯಡಿಯೂರಪ್ಪನವರನ್ನು ಇಳಿಸಿದರೆ ಲಿಂಗಾಯತರು ಬಿಜೆಪಿಯನ್ನು ಬೆಂಬಲಿಸುವುದು ನಿಲ್ಲಿಸುತ್ತಾರೆಯೇ? ಬಹುಶಃ ಇಲ್ಲ. ಇದಕ್ಕೆ ಅಧಿಕಾರ ರಾಜಕಾರಣದ ಕಾರಣವೂ ಇದೆ, ಸಮಾಜದ ಮನಸ್ಥಿತಿಯೂ ಕಾರಣವಾಗಿದೆ.

2018ರ ಚುನಾವಣೆಯ ಹೊಸ್ತಿಲಲ್ಲಿ ನಡೆದ ಪ್ರತ್ಯೇಕ ಲಿಂಗಾಯತಧರ್ಮದ ಹೋರಾಟವು ಸಮಾಜದ ಇಂದಿನ ಮನಸ್ಥಿತಿಗೆ ಹಿಡಿದ ಕನ್ನಡಿ. ಈ ನಡೆಯು ಹಿಂದುತ್ವಕ್ಕೆ ಎದುರಾಗಿ ನಿಲ್ಲಲು, 12ನೇ ಶತಮಾನದ ನಿಜ ಕಲ್ಯಾಣಕ್ರಾಂತಿಯ ನೆನಪುಗಳನ್ನು ಉದ್ದೀಪಿಸುವ ಸಾಂಸ್ಕೃತಿಕ ಪ್ರತಿರೋಧದ ಪ್ರಯತ್ನವಾಗಿತ್ತು. ಆದರೆ ಇದಕ್ಕೆ ಸೋಲಾಯಿತು. ಅದಕ್ಕೆ ಕಾರಣ ಸಮಾಜದ ಇಂದಿನ ಮನಸ್ಥಿತಿ. ಲಿಂಗಾಯತ ಸಮಾಜದಲ್ಲಿ ಇಂದು ಕೆಲವು ವಿರಕ್ತಪೀಠಗಳೂ ಸೇರಿದಂತೆ ಪಂಚಪೀಠಗಳು ಬ್ರಾಹ್ಮಣಶಾಹಿ ತತ್ವಗಳನ್ನೇ ಪ್ರತಿಪಾದಿಸುತ್ತಿದೆ. ಒಟ್ಟಾರೆ ಸಮಾಜದಲ್ಲಿ ನವಬ್ರಾಹ್ಮಣಶಾಹಿ ತಾಂಡವವಾಡುತ್ತಿದೆ. ಸಮಾಜವು ತನ್ನನ್ನು ತಾನು ‘ಹಿಂದೂ’ ಎಂದು ಗುರುತಿಸಕೊಳ್ಳುತ್ತಿರುವುದು ವಾಸ್ತವ. ಸಮಾಜದೊಳಗಿನ ಒಂದು ಸಣ್ಣ ಗುಂಪಿಗೆ ವಚನ ಚಳುವಳಿಯ ತತ್ವಗಳ ಸೆಳೆತ ಇನ್ನೂ ಇದೆ. ಅದು ಹೋರಾಟ ಆರಂಭಿಸಿದೆ. ಆದರೆ ಚುನಾವಣೆಯ ಹೊಸ್ತಿಲಲ್ಲಿ ನಡೆದ ಚಳುವಳಿ ಮೇಲಿನಿಂದ ಇಂಪೋಸ್ ಮಾಡಿದ್ದುದಾಗಿತ್ತೇ ಹೊರತು, ಜನರಲ್ಲಿ ಈ ಚಳುವಳಿಯನ್ನು ಸಂಘಟಿಸಲಾಗಿರಲಿಲ್ಲ. ಈಗ ಆಗಬೇಕಿರುವುದು ಅದೇ. ಮತ್ತು ಸಾಮಾಜಿಕವಾಗಿ ಮಾತ್ರ ಇದಾದರೆ ಸಾಲದು, ಅಧಿಕಾರ ರಾಜಕಾರಣದ ಚುಕ್ಕಾಣಿ ಕೂಡ ವಚನಚಳುವಳಿಯ ತತ್ವಗಳ ತಳಹದಿಯಲ್ಲಿ, ಹಿಂದೂ ಸಮಾಜದ ಹೊರಗೆ ಲಿಂಗಾಯತರನ್ನು ಮರುಕಟ್ಟುವ ಪ್ರಯತ್ನ ಮಾಡುತ್ತಿರುವ ನಾಯಕರಿಗೆ ಸಿಗಬೇಕು. ಸದ್ಯ ಅದಕ್ಕೆ ದೊಡ್ಡ ಹಿನ್ನೆಡೆ ಆಗಿದೆ.

2018ರ ಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಹಿಂದ ಮತ್ತು ಒಂದು ಭೂಮಾಲೀಕ ಜಾತಿಯ ಫಾರ್ಮುಲಾಕ್ಕೆ ಮೊರೆಹೋಗಲು ನಿರ್ಧರಿಸಿತು. ಆಗ ಎದುರಾದ ಪ್ರಶ್ನೆ ನಾಯಕತ್ವ ಒಕ್ಕಲಿಗರಿಗಾ ಅಥವಾ ಲಿಂಗಾಯತರಿಗಾ ಅಂತ. ಇತ್ತ ಯಡಿಯೂರಪ್ಪನವರು ತಮ್ಮ ರಾಜಕೀಯ ಜೀವನದ ಅಂತಿಮಘಟ್ಟಕ್ಕೆ ಬಂದು ನಿಂತಿದ್ದು, ಲಿಂಗಾಯತ ನಾಯಕತ್ವದಲ್ಲಿ ಒಂದು ವ್ಯಾಕ್ಯೂಮ್ ಇರುವುದು ನಿಜ. ಇತ್ತ ಜೆಡಿಎಸ್ ಕೂಡ ಒಂದು ದೊಡ್ಡ ರಾಜಕೀಯ ಶಕ್ತಿಯಾಗಿಲ್ಲದಿರುವುದರಿಂದ ಒಕ್ಕಲಿಗರ ನಾಯಕತ್ವದಲ್ಲಿಯೂ ಒಂದು ನಿರ್ವಾತ ಇತ್ತು. ಕಾಂಗ್ರೆಸ್ ಡಿ.ಕೆ.ಶಿವಕುಮಾರ್ ಅವರನ್ನು ಆರಿಸುವ ಮೂಲಕ ಒಕ್ಕಲಿಗರ ಕೈಹಿಡಿದಿದೆ. ಇದು ಇವತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳನ್ನು ಒಕ್ಕಲಿಗರ ಹಿಡಿತಕ್ಕೆ ಒಪ್ಪಿಸಿದಂತಾಗಿದೆ. ಅಲ್ಲಿಗೆ ಬಿಜೆಪಿಯಲ್ಲಿ ಯಡಿಯೂರಪ್ಪನವರನ್ನು ಇಳಿಸಿದರೂ ವಲಸೆ ಹೋಗಲಿಕ್ಕೆ ಲಿಂಗಾಯತರಿಗೆ ನೆಲೆ ಇಲ್ಲ. ಬಹುಶಃ ಎಂ.ಬಿ. ಪಾಟೀಲರಿಗೆ ಕಾಂಗ್ರೆಸ್ ಪಟ್ಟ ಕಟ್ಟಿದ್ದಿದ್ದರೆ ಸನ್ನಿವೇಶ ಬೇರೆ ಇರುತ್ತಿತ್ತೇನೋ? ಇರಲಿ. ಈಗಾಗಲೇ 16 ವರ್ಷಗಳ ಕಾಲ ಬಿಜೆಪಿಯಲ್ಲೇ ಇರುವ ಲಿಂಗಾಯತ ಸಮಾಜ, ಸದ್ಯದ ಅಧಿಕಾರ ರಾಜಕಾರಣದ ಸನ್ನಿವೇಶದಲ್ಲಿ ಯಡಿಯೂರಪ್ಪನವರ ನಂತರವೂ ಅಲ್ಲೇ ಇರಲಿದೆ. ಎಷ್ಟೇ ವೀರೇಂದ್ರ ಪಾಟೀಲರನ್ನು ನೆನಪಿಸುವ ಸರ್ಕಸ್‍ಅನ್ನು ಯಡಿಯೂರಪ್ಪನವರು ಮಾಡಿದರೂ ಅವರನ್ನು ಬದಲಾಯಿಸಲು ಜೂಜಾಡುವ ಇಂಬನ್ನು ಬಿಜೆಪಿ ಹೈಕಮಾಂಡಿಗೆ ಕೊಟ್ಟಿರುವುದು ಇದೇ ಅಂಶ.

ಕನ್ನಡ ನಾಡಿನ ಐತಿಹಾಸಿಕ ದುರಂತವೆಂದರೆ ವಚನ ಚಳುವಳಿಯಂತಹ ಸಮತೆ ಮತ್ತು ವಿಚಾರವಾದದ ಆಧಾರದ ಮೇಲೆ ಕಟ್ಟಿದ ಚಳುವಳಿ ಭ್ರಷ್ಟವಾಗಿದ್ದು, ಬ್ರಾಹ್ಮಣಶಾಹಿಯ ಹಿಡಿತಕ್ಕೆ ಮತ್ತೆ ಹೋಗಿರುವುದು ಮತ್ತು ಈ ಸಮುದಾಯದಲ್ಲಿ  ಒಂದು ವಿಸ್ಮೃತಿ ನೆಲೆ ಮಾಡಿರುವುದು. ಆದರೆ ಈ ನೆಲದಲ್ಲಿ ವಚನ ಚಳುವಳಿ ಮೊಳಕೆಯೊಡೆದಿದ್ದು ನಿಜವಾದ್ದರಿಂದ, ಆ ನೆನಪುಗಳನ್ನು ಮತ್ತೆ ಚಿಗುರೊಡೆಸುವ ಒಂದು ಚಳುವಳಿ ಇತ್ತೀಚೆಗಷ್ಟೇ ಹುಟ್ಟಿರುವುದರಿಂದ ನಮಗಿನ್ನೂ ಆಸೆ ಸತ್ತಿಲ್ಲ.


ಇದನ್ನೂ ಓದಿ: ಲಿಂಗಾಯತ ಚಳವಳಿ : ಕೇವಲ ರಾಜಕಾರಣವಾಗಿತ್ತೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿಯ ತಪ್ಪು ದಾರಿಗೆಳೆಯುವ ಜಾಹೀರಾತು: ಸಾರ್ವಜನಿಕ ಕ್ಷಮೆಯಾಚನೆಗೆ ಸಿದ್ದ ಎಂದ ಬಾಬಾ ರಾಮ್‌ದೇವ್, ಬಾಲಕೃಷ್ಣ

0
ಇಂದು (ಏ.16) ಸುಪ್ರೀಂ ಕೋರ್ಟ್‌ಗೆ ಖುದ್ದಾಗಿ ಹಾಜರಾದ ಪತಂಜಲಿ ಆಯುರ್ವೇದ ಲಿಮಿಟೆಡ್‌ನ ಸಹ-ಸಂಸ್ಥಾಪಕ ಬಾಬಾ ರಾಮ್‌ದೇವ್, ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯನ್ನು ಉಲ್ಲಂಘಿಸಿ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಮತ್ತು ಅಲೋಪತಿ ಔಷಧಿಗಳ ವಿರುದ್ಧ...