ಉತ್ತರಪ್ರದೇಶದ ಅಜಂಗಢ ಜಿಲ್ಲೆಯ ರೌನಪರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳಾ ಸರಪಂಚ್‌ಗೆ ಗುಂಪೊಂದು ನಿರ್ದಯವಾಗಿ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಸ್ತೆ ನಿರ್ಮಾಣದ ಕುರಿತು ವಿವಾದಕ್ಕೆ ಸಂಬಂಧಿಸಿ ಮಹಿಳಾ ಸರಪಂಚ್ ಲಕ್ಷ್ಮೀದೇವಿ ಮತ್ತು ನೆರೆಹೊರೆಯವರ ನಡುವೆ ವಿವಾದ ಉಂಟಾಗಿ ಜಗಳ ಉಂಟಾಗಿದೆ.
ಮಹಿಳಾ ಸರಪಂಚ್ ಮೇಲೆ ಗುಂಪು ದೊಣ್ಣೆ ಮತ್ತು ರಾಡ್‌ಗಳಿಂದ ಹಲ್ಲೆ ನಡೆಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ದುಷ್ಕರ್ಮಿಗಳ ಪರ ಪೊಲೀಸರು ನಿಂತಿದ್ದು, ತನ್ನ ದೂರಿಗೆ ಸರಿಯಾದ ಕ್ರಮವನ್ನು ಕೈಗೊಂಡಿಲ್ಲ ಎಂದು ಸಂತ್ರಸ್ತೆ ಸರಪಂಚ್ ಅವರು ಆರೋಪಿಸಿದ್ದಾರೆ. ಈ ಪ್ರದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಜಿಲ್ಲಾಧಿಕಾರಿಗಳು ವಿಡಿಯೋ ಹಾಗೂ ಗ್ರಾಮದ ಮುಖಂಡರ ಲಿಖಿತ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ 7 ಮಂದಿ ವಿರುದ್ಧ ಕೇಸ್ ದಾಖಲಾಗಿದೆ ಮತ್ತು ಅವರಲ್ಲಿ ಐವರನ್ನು ಬಂಧಿಸಲಾಗಿದೆ ಮತ್ತು ಉಳಿದ ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ ಎಂದು ಅಜಂಗಢ ನಗರದ ಎಸ್ಪಿ ತಿಳಿಸಿದ್ದಾರೆ.
ಆರೋಪಿಗಳ ವಿರುದ್ದ ಐಪಿಸಿ ಸೆಕ್ಷನ್ 282/23, 323, 504, 506, 354 ಬಿ, 452 ಮತ್ತು 34 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಏಳು ಜನರನ್ನು ಹೆಸರಿಸಲಾಗಿದ್ದು, ಐವರನ್ನು ಬಂಧಿಸಲಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಇದನ್ನು ಓದಿ: ರಾಜಸ್ಥಾನ: ಸರಕಾರಿ ಶಾಲೆಯಲ್ಲಿ ದಲಿತ ಬಾಲಕ ಆತ್ಮಹತ್ಯೆ ಪ್ರಕರಣ; ಇಬ್ಬರು ಶಿಕ್ಷಕರು ಅಮಾನತು


