Homeಮುಖಪುಟವಿಶ್ವ ಭೂಮಿ ದಿನ; ಪ್ರಾಜೆಕ್ಟ್ ಟೈಗರ್: ಹುಲಿ ಸಂರಕ್ಷಣೆಯ ಹಾದಿಯಲ್ಲಿ ಐವತ್ತು ವರ್ಷಗಳು

ವಿಶ್ವ ಭೂಮಿ ದಿನ; ಪ್ರಾಜೆಕ್ಟ್ ಟೈಗರ್: ಹುಲಿ ಸಂರಕ್ಷಣೆಯ ಹಾದಿಯಲ್ಲಿ ಐವತ್ತು ವರ್ಷಗಳು

- Advertisement -
- Advertisement -

ಭೂಮಿಯ ಮೇಲಿನ ಜೀವವೈವಿಧ್ಯದ ಆರನೇ ಮಹಾ ಅವಸಾನವು ಈಗಾಗಲೇ ಜಾರಿಯಲ್ಲಿದೆ ಎಂದು ಅನೇಕ ವೈಜ್ಞಾನಿಕ ವರದಿಗಳು ಎಚ್ಚರಿಕೆ ನೀಡಿವೆ. ಈ ಮುಂಚೆ ಉಂಟಾದ ಜೀವಿಗಳ ವಿನಾಶ ಮತ್ತು ಈಗ ನಡೆಯುತ್ತಿರುವ ಜೀವಿಗಳ ವಿನಾಶಕ್ಕೆ ಕೆಲವು ಮೂಲಭೂತ ವ್ಯತ್ಯಾಸಗಳಿವೆ. ಈ ಮುಂಚೆ ಉಂಟಾದ ಐದು ಮಹಾ ವಿನಾಶಗಳು ಪ್ರಕೃತಿಯಲ್ಲಿನ ಬದಲಾವಣೆಯಿಂದ ಉಂಟಾಗಿದ್ದಂತವು, ಆದರೆ ಪ್ರಸ್ತುತ ನಡೆಯುತ್ತಿರುವ ವಿನಾಶವು ಮಾನವಜನ್ಯ ಚಟುವಟಿಕೆಗಳಿಂದ ಉಂಟಾಗುತ್ತಿದೆ. ಕಳೆದ ಕೆಲ ಶತಮಾನ ಅಥವಾ ದಶಕಗಳಲ್ಲಿ ನೈಸರ್ಗಿಕ ಆವಾಸ ಮತ್ತು ಜೀವ ವೈವಿಧ್ಯಗಳನ್ನು ಕಳೆದುಕೊಳ್ಳುತ್ತಿರುವ ವೇಗವು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಹೊಂದಿಕೊಳ್ಳಲು ನಮ್ಮ ಸಹಜೀವಿಗಳಿಗೆ ಸಾಧ್ಯವಾಗುತ್ತಲೇ ಇಲ್ಲ. ಇದರ ಪರಿಣಾಮವಾಗಿ ಪ್ರತಿಯೊಂದು ಜೀವಿಯೂ ಅಳಿದುಳಿದ ಆವಾಸದಲ್ಲಿಯೇ ಹೊಂದಿಕೊಂಡು ಬದುಕಲೇಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿವೆ.

ಇವೆಲ್ಲ ವಿದ್ಯಮಾನಗಳು ಸಾಮಾನ್ಯವಾಗಿ ನಮಗೆ ಮತ್ತು ನಮ್ಮನ್ನು ಆಳುವವರ ಗಮನಕ್ಕೆ ಬರುವುದು ತೀರಾ ವಿರಳ. ಆದರೆ ನಮ್ಮ ದೇಶದಲ್ಲಿ ಮತ್ತು ವಿಶ್ವದ ಇತರ ದೇಶಗಳಲ್ಲಿ ಹುಲಿಯ ಸಂತತಿಯು ಅವಸಾನದ ಕಡೆಗೆ ಹೋಗುತ್ತಿದ್ದುದನ್ನು ಗಮನಕ್ಕೆ ತೆಗೆದುಕೊಂಡು ಹುಲಿಗಳನ್ನು ಸಂರಕ್ಷಿಸಲೇಬೇಕೆಂಬ ನಿಟ್ಟಿನಲ್ಲಿ ಐವತ್ತು ವರ್ಷಗಳ ಹಿಂದೆ ಅಂದಿನ ಪ್ರಧಾನಿ ದಿ. ಇಂದಿರಾ ಗಾಂಧಿಯವರ ಕಾಳಜಿಯಿಂದ ರೂಪಿಸಲಾದ ಹುಲಿ ಯೋಜನೆ ಅಥವಾ ಪ್ರಾಜೆಕ್ಟ್ ಟೈಗರ್ ಎಂಬುದು ಇದಕ್ಕೆ ಒಂದು ಅಪವಾದ ಎಂದೇ ಹೇಳಬೇಕು. ಇದು ಖಂಡಿತವಾಗಿಯೂ ವನ್ಯಜೀವಿ ಸಂರಕ್ಷಣೆಯಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾದ ಸಂರಕ್ಷಣಾ ಯೋಜನೆ. ಈ ಯಶಸ್ಸು ಹಾಗೇ ಬರಲಿಲ್ಲ; ಈ ಯೋಜನೆಯು ಅನೇಕ ಏರಿಳಿತಗಳನ್ನು ಕಂಡು, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಮತ್ತು ವನ್ಯಜೀವಿ ವಿಜ್ಞಾನಿಗಳ ಪ್ರಯತ್ನದಿಂದ ಈ ಒಂದು ಹಂತಕ್ಕೆ ಬಂದು ನಿಂತಿದೆ ಮತ್ತು ಅದರ ಪರಿಣಾಮವಾಗಿ ಹುಲಿಗಳ ಗಣತಿ ಮತ್ತು ಸಂರಕ್ಷಣೆಯ ವರದಿಗಳಲ್ಲಿ ಕೊಂಚ ನಿಖರತೆ ಬಂದಿದೆಯಾದರೂ ಸಾಗುವ ಹಾದಿ ಇನ್ನೂ ದೂರವಿದೆ.

ಎಪ್ಪತ್ತರ ದಶಕದಲ್ಲಿ ಹುಲಿಗಳ ಸಂರಕ್ಷಣೆಗೆ ನಮ್ಮ ನಾಡಿನ ಬಂಡೀಪುರವೂ ಸೇರಿದಂತೆ ಒಂಬತ್ತು ಸಂರಕ್ಷಿತ ಪ್ರದೇಶಗಳನ್ನು ಘೋಷಿಸಲಾಯಿತು ಮತ್ತು ಆ ಪ್ರದೇಶಗಳ ಸಂರಕ್ಷಣೆಗೆ ಕಾನೂನುಗಳನ್ನೂ ಜಾರಿಗೆ ತರಲಾಯಿತು. ಆದರೆ ಹುಲಿಗಳಂತಹ ವನ್ಯಜೀವಿಗಳ ಸಂರಕ್ಷಣೆಗೆ ಇದಷ್ಟೇ ಸಾಲದು. ಅಂತಾರಾಷ್ಟ್ರೀಯ ಕಳ್ಳ ಮಾರುಕಟ್ಟೆಯಲ್ಲಿ ಹುಲಿಯ ಚರ್ಮ ಮತ್ತು ದೇಹದ ಅಂಗಾಂಗಗಳಿಗೆ ಭಾರೀ ಬೆಲೆಯಿರುವ ಕಾರಣ ಕಳ್ಳ ಬೇಟೆಗಾರರಿಂದ ವನ್ಯಜೀವಿಗಳನ್ನು ಸದಾ ರಕ್ಷಿಸಿಕೊಳ್ಳಬೇಕಾಗಿತ್ತು. ಅಷ್ಟೇ ಅಲ್ಲದೆ ಅರಣ್ಯಪ್ರದೇಶಗಳ ಮತ್ತು ಇಲ್ಲಿ ವಾಸಿಸುವ ಹುಲಿ ಮತ್ತಿತರ ವನ್ಯಜೀವಿಗಳ ಸ್ಥಿತಿಗತಿಯ ನಿಖರ ಅಧ್ಯಯನ ನಡೆಸಬೇಕಾಗಿತ್ತು. ಇವೆಲ್ಲವೂ ಯೋಜನೆಯ ಯಶಸ್ಸು ಮತ್ತು ಮುಂದೆ ಸಾಗಬೇಕಾದ ದಾರಿಯ ಕುರಿತು ತಿಳಿಸಿಕೊಡಲಿದ್ದವು. ಆದರೆ ಕೆಲ ರಾಜ್ಯಗಳಲ್ಲಿ ನಿರೀಕ್ಷೆಗೆ ತಕ್ಕಷ್ಟು ತಳಮಟ್ಟದ ಸಂರಕ್ಷಣೆಯ ಮತ್ತು ಸಿಬ್ಬಂದಿಗಳಿಗೆ ಆಧುನಿಕ ಸೌಲಭ್ಯದ ಕೊರತೆಯಿಂದಾಗಿ ಸಂಘಟಿತ ಕಳ್ಳ ಬೇಟೆಗಾರರ ಗುಂಪುಗಳು ಅವ್ಯಾಹತವಾಗಿ ಹುಲಿಗಳ ಬೇಟೆಯನ್ನು ಮುಂದುವರಿಸಿದರು. ಚೀನಾ ಮತ್ತು ಟಿಬೆಟ್‌ಗಳಲ್ಲಿ ಹುಲಿಯ ಚರ್ಮ ಮತ್ತು ಅಂಗಾಂಗಗಳಿಗೆ ಭಾರೀ ಬೇಡಿಕೆ ಇದ್ದಿದ್ದರಿಂದ ಈ ಕಳ್ಳ ಬೇಟೆಯು ಭಾರಿ ಲಾಭದಾಯಕವಾಗಿಯೂ ಇತ್ತು.

ಇದನ್ನೂ ಓದಿ: ಮೋದಿ ಜಂಗಲ್ ಸಫಾರಿ ಅಣಕಿಸುವ ವಿಡಿಯೋ ಮಾಡಿದ ಹಾಸ್ಯನಟನಿಗೆ ನೋಟಿಸ್; 11 ಸಾವಿರ ದಂಡ

ಇವೆಲ್ಲಾ ಕುಕೃತ್ಯಗಳಿಗೆ ಅನುಕೂಲವಾಗುವಂತೆ ಹುಲಿ ಗಣತಿ ಮತ್ತು ಹುಲಿ ಬೇಟೆಯಾಡುವ ಪ್ರಾಣಿಗಳ ಗಣತಿಗೆ ಆಯಾ ಅರಣ್ಯ ಇಲಾಖೆಗಳ ಬಳಿ ಯಾವುದೇ ವೈಜ್ಞಾನಿಕ ವಿಧಾನಗಳೂ ಇರಲಿಲ್ಲ. ತೀರಾ ಇತ್ತೀಚಿನವರೆಗೂ ನಮ್ಮ ದೇಶದಲ್ಲಿ ಹುಲಿಗಳನ್ನು ಅವುಗಳ ಹೆಜ್ಜೆ ಗುರುತಿನ ಆಧಾರದ ಮೇಲೆ ಎಣಿಕೆ ಮಾಡುತ್ತಿದ್ದರು. ಇದೊಂದು ಅವೈಜ್ಞಾನಿಕ ಮತ್ತು ತುಂಬಾ ಲೋಪದೋಷಗಳಿಂದ ಕೂಡಿದ ವಿಧಾನವಾಗಿತ್ತು. ಈ ವಿಧಾನವನ್ನು ಬಳಸಿ ತಪ್ಪುತಪ್ಪಾಗಿ ಹುಲಿಗಳ ಸಂಖ್ಯೆಗಳನ್ನು ಪ್ರಕಟಿಸಲಾಗುತ್ತಿತ್ತು. ಹಾಗಾಗಿ ಹುಲಿಗಳ ಸಂಖ್ಯೆಯಲ್ಲಿ ನಿಧಾನವಾಗಿ ಇಳಿಮುಖವಾಗುತ್ತಿರುವುದು ಯಾರ ಗಮನಕ್ಕೂ ಬರಲೇ ಇಲ್ಲ ಹಾಗಾಗಿ ಅವುಗಳ ರಕ್ಷಣೆಗೆ ಯಾವ ಕ್ರಮಗಳನ್ನು ತೆಗೆದುಕೊಳ್ಳುವ ಪ್ರಮೇಯವೂ ಮುಂದಾಗಲಿಲ್ಲ. ಇದು ಯಾವ ಮಟ್ಟಕ್ಕೆ ನಡೆಯಿತು ಎಂದರೆ ರಾಜಸ್ಥಾನದ ಸರಿಸ್ಕಾ ಮತ್ತು ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದೇ ಒಂದು ಹುಲಿಯೂ ಇಲ್ಲದಂತೆ ಬೇಟೆಯಾಡಲಾಯಿತು. ಅಲ್ಲಿ ಹುಲಿಗಳ ಅಧ್ಯಯನ ಮಾಡುತ್ತಿದ್ದ ವಿಜ್ಞಾನಿಗಳು ಇದನ್ನು ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸಿದರೂ ಅವರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಅವರ ಬಾಯಿ ಮುಚ್ಚಿಸಲಾಯಿತು. ದಶಕಗಳ ಕಾಲ ನಡೆದ ಅವೈಜ್ಞಾನಿಕ ಎಣಿಕೆ ಮತ್ತು ವಿಪರೀತವಾಗಿ ಹೆಚ್ಚಿದ ಕಳ್ಳ ಬೇಟೆಯಿಂದಾಗಿ ಹುಲಿಗಳ ಸಂಖ್ಯೆ ಮುಂಚೆ ಎಲ್ಲಿತ್ತೋ ಮರಳಿ ಅಲ್ಲಿಯೇ ಬಂದು ತಲುಪಿತು. ಆಗ ಎಚ್ಚೆತ್ತ ಅಂದಿನ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ಸರಿಸ್ಕಾ ಮತ್ತು ಪನ್ನಾ ಹಗರಣಗಳನ್ನು ಸಿಬಿಐ ತನಿಖೆಗೆ ವಹಿಸಿತು ಮತ್ತು ಹುಲಿ ಯೋಜನೆಯನ್ನು ರದ್ದುಗೊಳಿಸಿ ಅದಕ್ಕೆ ಪರ್ಯಾಯವಾಗಿ ರಾಷ್ಟ್ರೀಯ ಹುಲಿ ಪ್ರಾಧಿಕಾರವನ್ನು ಸ್ಥಾಪಿಸಿತು.

ತದನಂತರ ಹುಲಿ ಗಣತಿಗೆ ವೈಜ್ಞಾನಿಕವಾದ ಕ್ಯಾಮೆರಾ ಟ್ರ್ಯಾಪ್ ವಿಧಾನವನ್ನು ಬಳಸಿ ಹುಲಿಗಳ ಎಣಿಕೆ ಮಾಡಲಾಯಿತು, ಹೆಚ್ಚಿನ ಪ್ರದೇಶಗಳನ್ನು ವನ್ಯಜೀವಿಧಾಮ ಮತ್ತು ಹುಲಿ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಗೆ ಸೇರಿಸಲಾಯಿತು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗೆ ಹೆಚ್ಚಿನ ತರಬೇತಿ ಮತ್ತು ಆಧುನಿಕ ಸಲಕರಣೆಗಳನ್ನು ಒದಗಿಸಲಾಯಿತು. ಅದಲ್ಲದೆ ಅರಣ್ಯದಲ್ಲಿ ನೇರವಾಗಿ ಗಸ್ತು ತಿರುಗಿ ಅರಣ್ಯ ರಕ್ಷಣೆ ಮಾಡುವ ಕೆಳ ಹಂತದ ಸಿಬ್ಬಂದಿಯ ಶ್ರಮದ ಕಾರಣದಿಂದಾಗಿ ನಾವು ಇತ್ತೀಚಿಗೆ ಹುಲಿಗಳ ಸಂಖ್ಯೆಯಲ್ಲಿ ಏರಿಕೆಯನ್ನು ಕಾಣುತ್ತಿದ್ದೇವೆ.

ಸರಿ, ಹುಲಿಗಳ ಸಂಖ್ಯೆಯಲ್ಲಿ ಏರಿಕೆಯಾಯಿತು, ಇನ್ನೇನು ಎಲ್ಲ ಸರಿಯಾಯಿತು ಎಂದು ಕೂರಬಹುದೇ? ಖಂಡಿತ ಇಲ್ಲ. ಹುಲಿಗಳು ವಿಶಾಲ ಪ್ರದೇಶದಲ್ಲಿ ಸಂಚರಿಸುವ ಮತ್ತು ತಮ್ಮದೇ ಆದ ವ್ಯಾಪ್ತಿಯನ್ನು ಹೊಂದಿರುವ ಪ್ರಾಣಿಗಳು. ಅದರಲ್ಲೂ ಗಂಡು ಹುಲಿಗಳು ತಮ್ಮ ಪ್ರದೇಶದಲ್ಲಿ ಇತರ ಗಂಡು ಹುಲಿಗಳನ್ನು ಬರಲು ಬಿಡುವುದಿಲ್ಲ; ಅದಕ್ಕಾಗಿ ಹುಲಿಗಳ ನಡುವೆ ಮಾರಣಾಂತಿಕ ಹೋರಾಟಗಳೇ ನಡೆಯುತ್ತವೆ. ಆಗ ವಯಸ್ಸಾದ ಹುಲಿಗಳು ಮತ್ತು ಈಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿರುವ ಗಂಡು ಹುಲಿಗಳು ತಮಗಾಗಿ ಬೇರೆ ಪ್ರದೇಶಗಳನ್ನು ಆರಿಸಿಕೊಳ್ಳಬೇಕಾಗಿ ಬರುತ್ತದೆ. ಆಗ ಅವು ಕಾಡಂಚಿನ ಜನವಸತಿ ಪ್ರದೇಶಕ್ಕೆ ಬಂದು ಮಾನವ ಹುಲಿ ಸಂಘರ್ಷಕ್ಕೆ ಕಾರಣವಾಗುತ್ತವೆ. ಮುಂಚೆ ಒಂದಕ್ಕೊಂದು ಹೊಂದಿಕೊಂಡು ಅಖಂಡವಾಗಿದ್ದ ಕಾಡನ್ನು ನಾವು ರಸ್ತೆ, ಆಣೆಕಟ್ಟು ಮತ್ತು ಗಣಿಗಾರಿಕೆ ಮುಂತಾದ ಅಭಿವೃದ್ಧಿ ಯೋಜನೆಗಳಿಗಾಗಿ ಛಿದ್ರೀಕರಿಸಿ, ಸಣ್ಣಸಣ್ಣ ದ್ವೀಪಗಳನ್ನಾಗಿಸಿದ್ದೇವೆ; ಇದು ಪ್ರಾಣಿಗಳ ಸಂಚಾರ ಮತ್ತು ಆಂತರಿಕ ವಲಸೆಗೆ ಅಡ್ಡಿಯಾಗಿದೆ. ಹೀಗಾಗಿ ಕರ್ನಾಟಕದ ಬಂಡೀಪುರ ಮತ್ತು ನಾಗರಹೊಳೆ ಸಂರಕ್ಷಿತ ಪ್ರದೇಶದ ಸುತ್ತ, ಉತ್ತರ ಭಾರತದ ಕಾರ್ಬೆಟ್ ಮತ್ತು ಪಿಲಿಭಿತ್ ಹುಲಿ ಸಂರಕ್ಷಿತ ಪ್ರದೇಶ ಮತ್ತು ಬಂಗಾಲದ ಸುಂದರ್‌ಬನ್ ಕಾಡಿನ ಅಂಚಿನಲ್ಲಿ ಮಾನವ ಹುಲಿ ಸಂಘರ್ಷ ಗಣನೀಯವಾಗಿ ಏರಿದೆ.

ನಾವು ಕೇವಲ ಹುಲಿಗಳ ಸಂಖ್ಯೆಯಲ್ಲಿನ ಏರಿಕೆಯನ್ನು ತೋರಿಸಿ ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುವ ಬದಲು, ಹುಲಿಗಳನ್ನು ಒಳಗೊಂಡು ಒಟ್ಟಾರೆ ಪರಿಸರ ವ್ಯವಸ್ಥೆ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಒಂದು ದೀರ್ಘಾವಧಿಯ ಯೋಜನೆಯನ್ನು ರೂಪಿಸುವ ಅಗತ್ಯವಿದೆ. ಇದು ಈಗಾಗಲೇ ಛಿದ್ರಗೊಂಡ ಅರಣ್ಯಗಳ ಜೋಡಣೆ, ಪರಿಸರ ಸೂಕ್ಷ್ಮ ವಲಯದ ಘೋಷಣೆ, ಈಗಾಗಲೇ ಇರುವ ವನ್ಯಜೀವಿಗಳ ವಲಸೆ ಹಾದಿಗಳು ಮತ್ತು ಕಾರಿಡಾರ್‌ಗಳ ರಕ್ಷಣೆ ಮುಂತಾದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇದು ಕೇವಲ ವನ್ಯಜೀವಿಗಳ ರಕ್ಷೆಣೆಗೆ ಮಾತ್ರವಲ್ಲ, ನಮ್ಮ ಮುಂದಿನ ಭವಿಷ್ಯದ ದೃಷ್ಟಿಯಿಂದಲೂ ತುರ್ತಾಗಿ ಮಾಡಬೇಕಾದ ಕೆಲಸ. ಇಲ್ಲಿ ನಾವು ನೈಸರ್ಗಿಕ ಭೂಪ್ರದೇಶಗಳನ್ನು ಮತ್ತು ಅದರ ಸುತ್ತ ಬದುಕು ಕಟ್ಟಿಕೊಂಡ ಜನರ ಹಿತಾಸಕ್ತಿಯನ್ನೂ ಗಮನಿಸಿ, ಲಕ್ಷಾಂತರ ವರ್ಷಗಳಿಂದ ಬೆಳೆದು ಬಂದ ಪರಿಸರ ವ್ಯವಸ್ಥೆ ಮುಂದೆಯೂ ಕೂಡ ಉಳಿಯುವಂತೆ ಸಮಗ್ರವಾದ ಕ್ರಿಯಾಯೋಜನೆಯನ್ನು ರೂಪಿಸಲೇಬೇಕಾಗಿದೆ. ಇಲ್ಲವಾದರೆ ಇಲ್ಲಿ ವನ್ಯಜೀವಿಗಳಿಗೂ ನೆಮ್ಮದಿಯಿಲ್ಲ ಮತ್ತು ಅದರ ಸುತ್ತ ಬದುಕುವ ಜನರಿಗೂ ನೆಮ್ಮದಿಯಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈಗಾಗಲೇ ಅಂತಹ ಪರಿಣಾಮಗಳನ್ನು ನೋಡಿದ್ದೇವೆ.

ಗುರುಪ್ರಸಾದ್ ತಿಮ್ಮಾಪುರ

ಗುರುಪ್ರಸಾದ್ ತಿಮ್ಮಾಪುರ
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಗುರು ಪರಿಸರ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...