Homeಕರ್ನಾಟಕಯಡ್ಯೂರಪ್ಪ ಸ್ವತಃ ಹರಿಬಿಟ್ಟರೆ ಹುಬ್ಳಿ ವೀಡಿಯೋ!? ಏನಿದೆ ಬಿಜೆಪಿಯೊಳಗಿನ vice-versa ಲೆಕ್ಕಾಚಾರ.....

ಯಡ್ಯೂರಪ್ಪ ಸ್ವತಃ ಹರಿಬಿಟ್ಟರೆ ಹುಬ್ಳಿ ವೀಡಿಯೋ!? ಏನಿದೆ ಬಿಜೆಪಿಯೊಳಗಿನ vice-versa ಲೆಕ್ಕಾಚಾರ…..

- Advertisement -
- Advertisement -

ದೇಶಕವಿ ಕುವೆಂಪು ಕೃತಿಯೊಂದಕ್ಕೆ ಬರೆದ ಮುನ್ನುಡಿಯಲ್ಲಿ ಹೀಗೆ ಹೇಳುತ್ತಾರೆ, “ಆಕಸ್ಮಿಕ ಎಂಬುದು ಅಪೂರ್ಣಜ್ಞಾನ. ಪೂರ್ವಾಪರವನ್ನು ಒಳಗೊಳ್ಳುವ ಪೂರ್ಣದೃಷ್ಟಿಗೆ ಆಕಸ್ಮಿಕ ಎಂಬುದೇ ಇಲ್ಲ” ಎಂದು. ಬಾಕಿ ವಿದ್ಯಮಾನಗಳಿಗೆ ಇದೆಷ್ಟು ದಿಟವೋ ಗೊತ್ತಿಲ್ಲ, ಆದರೆ ಒಂದು ವಾರದಿಂದ ರಾಜ್ಯ ರಾಜಕಾರಣದಲ್ಲಿ ಬಿಸಿ ಅಲೆ ಎಬ್ಬಿಸಿರುವ ಯಡ್ಯೂರಪ್ಪನವರ `ಹುಬ್ಳಿ ವೀಡಿಯೋ’ದ ಮಟ್ಟಿಗೆ ಮಾತ್ರ ಇದು ಅಕ್ಷರಶಃ ಸತ್ಯ.

ಕೆಲವೇ ಕೆಲವು ನಾಯಕರು ಮತ್ತು ಪದಾಧಿಕಾರಿಗಳಿಗಷ್ಟೇ ಸೀಮಿತವಾಗಿದ್ದ ’ಆಂತರಿಕ’ ಸಭೆಯಲ್ಲಿ ಯಡ್ಯೂರಪ್ಪನವರು ಸಿಟ್ಟಿಗೆದ್ದು ತಮ್ಮ ಅಸಮಾಧಾನ ಹೊರಹಾಕಿದ ವೀಡಿಯೊ ವೈರಲ್ ಆಯ್ತು. ಇದು ಯಡ್ಯೂರಪ್ಪನವರ ವಿರುದ್ಧದ ಪಿತೂರಿ ಅಂತ ಒಂದಷ್ಟು ಜನ ಅಂದಾಜಿಸಿದರೆ, ಆಕಸ್ಮಿಕವಾಗಿ ಹೊರಬಿದ್ದ ಈ ವಿಡಿಯೋದಿಂದ ಆಪರೇಷನ್ ಕಮಲದಲ್ಲಿ ಅಮಿತ್ ಶಾ ಅಧಿಕೃತವಾಗಿ ಎಕ್ಸ್ಪೋಜಾಗಿದ್ದಾರೆ ಎನ್ನುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಇದು ಯಡ್ಯೂರಪ್ಪನವರ ವಿರುದ್ಧದ ಪಿತೂರಿಯೂ ಅಲ್ಲ, ಆಕಸ್ಮಿಕವಂತು ಅಲ್ಲವೇ ಅಲ್ಲ! ಸ್ವತಃ ಯಡ್ಯೂರಪ್ಪನವರೇ ಉದ್ದೇಶಪೂರ್ವಕವಾಗಿ, ಬಹಳ ವ್ಯವಸ್ಥಿತವಾಗಿ ವೈರಲ್ ಮಾಡಿಸಿದ ವೀಡಿಯೋ ಇದು!!!!

ಇಂತದ್ದೊಂದು ರಾಜಕೀಯ ಚರ್ಚೆ ಶಕ್ತಿಸೌಧದ ಆಚೀಚೆ ಬಲು ಬಿರುಸಾಗಿಯೇ ಕೇಳಿಬರುತ್ತಿದೆ. ಇತ್ತೀಚೆಗೆ ಸಾಲುಸಾಲಾಗಿ ನಡೆದ ವಿದ್ಯಮಾನಗಳು ಕೂಡಾ ಇದನ್ನು ದೃಢಪಡಿಸುತ್ತಿವೆ. ಇದೆಲ್ಲಾ ಶುರುವಾದದ್ದು ಅಕ್ಟೋಬರ್ ೨೪ನೇ ತೇದಿಯಂದು ಹೊರಬಿದ್ದ ಮಹಾರಾಷ್ಟ್ರ, ಹರ್ಯಾಣ ಫಲಿತಾಂಶಗಳ ತರುವಾತ. ಅಲ್ಲಿಯವರೆಗೆ ಹೈಕಮಾಂಡ್ ಗುಮ್ಮಕ್ಕೆ ಬೆದರಿದ ಮಗುವಿನಂತೆ ಥರಗುಟ್ಟುತ್ತಿದ್ದ ಯಡ್ಯೂರಪ್ಪಗೆ `ಒಂದು ಕೈ ನೋಡೇ ಬಿಡೋಣ’ ಎಂಬಷ್ಟು ಧೈರ್ಯ ಬಂದದ್ದು ಕೂಡಾ ಆ ನಂತರವೇ. ಹಾಗಾಗಿಯೇ ಯಾವ ಪ್ರಪಾತಕ್ಕೆ ತನ್ನನ್ನು ತಳ್ಳಲು ಬಿಜೆಪಿ ತ್ರೈಕಮಾಂಡ್ (ಮೋದಿ-ಶಾ-ಸಂತೋಷ್) ಸಂಚು ರೂಪಿಸಿತ್ತೋ, ಅದೇ ಪ್ರಪಾತಕ್ಕೆ ತನ್ನೊಟ್ಟಿಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನೂ ಸೊಂಟಕ್ಕೆ ಬಿಗಿದುಕೊಂಡೆ `ಆತ್ಮಾಹುತಿ’ಗೆ ಸಜ್ಜಾಗಿ ಯಡ್ಯೂರಪ್ಪ ಬಹಳ ಲೆಕ್ಕಾಚಾರದಿಂದ ಆಡಿದ ಮಾತುಗಳವು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು, ಯಡ್ಯೂರಪ್ಪನವರು ಸಿಎಂ ಕುರ್ಚಿ ಮೇಲೆ ಕೂತ ದಿನದಿಂದ ಹೈಕಮಾಂಡ್ ತೋರಿದ ನಿರ್ಲಕ್ಷ್ಯ ಮಾಡಿದ ಅವಮಾನಗಳು ಅಷ್ಟಿಷ್ಟಲ್ಲ. ಲೋಕಸಭಾ ಚುನಾವಣೆಯಲ್ಲಿ ಸಿಕ್ಕ ಅಭೂತಪೂರ್ವ ಫಲಿತಾಂಶ, ಮುಖ್ಯವಾಗಿ ಕರ್ನಾಟಕದಲ್ಲಿ ನಿರೀಕ್ಷೆಗು ಮೀರಿ ಇಪ್ಪತ್ತೈದು ಸೀಟುಗಳನ್ನು ಗೆದ್ದದ್ದು ಯಡ್ಯೂರಪ್ಪರನ್ನು ಲಘುವಾಗಿ ಕಾಣಲು ಮುಖ್ಯ ಕಾರಣ. ಆದರೆ ಆ ವಿಶ್ವಾಸದ ಬಲೂನಿಗೆ ಸೂಜಿ ಚುಚ್ಚಿದ್ದು ಮಹಾರಾಷ್ಟ್ರ, ಹರ್ಯಾಣ ವಿಧಾನಸಭಾ ಫಲಿತಾಂಶಗಳು. ಎರಡೂ ಕಡೆ ಸ್ವತಂತ್ರವಾಗಿ ಗದ್ದುಗೆ ಏರುವ ವಿಶ್ವಾಸದಲ್ಲಿದ್ದ ಬಿಜೆಪಿಗೆ ಇವು ದೊಡ್ಡ ಆಘಾತ ತಂದಿಕ್ಕಿದವು. ಜೊತೆಗೆ `ಲೋಕಲ್ ಲೀಡರ್’ಗಳನ್ನು ಕ್ಯಾರೇ ಅನ್ನದ ಹೈಕಮಾಂಡ್ ಈ ಫಲಿತಾಂಶಗಳಿಂದ ಕೊಂಚ ಮೆತ್ತಗಾಗಲೂ ಬೇಕಾಯ್ತು. ಅಲ್ಲದೇ ಯಡ್ಯೂರಪ್ಪರನ್ನು ಕೆಳಗಿಳಿಸಿ ಮಧ್ಯಂತರ ಚುನಾವಣೆಗೆ ಹೋಗಿ ಗೆದ್ದು ಬರುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿಯ ಆಲೋಚನೆಯೇ ತಲೆಕೆಳಗಾದವು.

ಯಡ್ಯೂರಪ್ಪನವರಂತಹ ನುರಿತ ರಾಜಕಾರಣಿಗೆ ಇದರ ಸುಳಿವು ಸಿಗಲು ಬಹಳ ಸಮಯವೇನು ಹಿಡಿಯಲಿಲ್ಲ. ಹಾಗಾಗಿಯೇ ಫಲಿತಾಂಶ ಹೊರಬಿದ್ದ ಎರಡೇ ದಿನಕ್ಕೆ, ಅಂದರೆ ಅಕ್ಟೋಬರ್ 26ರ ಶನಿವಾರ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಅವರು ಕೊಂಚ ಮೈಚಳಿ ಬಿಟ್ಟು ನೇರವಾಗಿಯೇ ತಮ್ಮ ಎದುರಾಳಿಗಳಿಗೆ ತಿವಿಯುವ ಧೈರ್ಯ ತೋರಿದ್ದು; ಆಪರೇಷನ್ ಕಮಲದ ವಿಚಾರ ಬಂದಾಗ ಬೇಕಂತಲೇ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರ ನಂಟನ್ನು ಒತ್ತಿ ಹೇಳಿದ್ದು.

ಆಪರೇಷನ್ ಕಮಲಕ್ಕೆ ಸಂಪೂರ್ಣ ಕುಮ್ಮಕ್ಕು ಕೊಟ್ಟು, ನೀಲನಕ್ಷೆ ಹಾಕಿಕೊಟ್ಟಿದ್ದೇ ಬಿಜೆಪಿಯ ದಿಲ್ಲಿ ನಾಯಕರು. ಆದರು, ಬಹಿರಂಗವಾಗಿ ಅದರಿಂದ ಅಂತರ ಕಾಯ್ದುಕೊಳ್ಳುತ್ತಲೇ ಬಂದರು. ಮೇಲ್ನೋಟಕ್ಕೆ ಇದು ಸಿಎಂ ಆಗುವ ಸಲುವಾಗಿ ಯಡ್ಯೂರಪ್ಪನವರೇ ನಡೆಸಿದ ಏಕಾಂಗಿ ಯತ್ನ ಎನ್ನುವಂತೆ ಬಿಂಬಿಸಲಾಗಿತ್ತು. ಈಗ ಉಪಚುನಾವಣೆಯಲ್ಲಿ ಅನರ್ಹರಿಗೆ ಟಿಕೆಟ್ ಕೊಡುವುದೂ ಹೈಕಮಾಂಡ್‌ಗೆ ಇಷ್ಟವಿರಲಿಲ್ಲ. `ಮಾತು ತಪ್ಪಿದ ಅಪವಾದ’ ತಟ್ಟಿದರೆ ಅದು ಯಡ್ಯೂರಪ್ಪನಿಗೆ ತಾನೇ, ತಟ್ಟಲಿ ಬಿಡು’ ಎಂಬಂತಿತ್ತು ಹೈಕಮಾಂಡ್ ವರ್ತನೆ. ಯಾವಾಗ ದಿಲ್ಲಿ ನಾಯಕರೇ ಇಂಥಾ ನಿಲುವು ತಳೆದಿದ್ದಾರೆನ್ನುವುದು ಗೊತ್ತಾಯ್ತೊ, ಆಗಿನಿಂದಲೇ ಸವದಿ, ಶ್ರೀರಾಮುಲು ತರದವರು ಅನರ್ಹರಿಗು ನಮಗೂ ಸಂಬಂಧವೇ ಇಲ್ಲ ಎನ್ನುವಂತ ಮಾತುಗಳನ್ನಾಡಿಕೊಂಡು ತಿರುಗಾಡಿದ್ದು. ಅವತ್ತಿನ ಪರಿಸ್ಥಿತಿಯಲ್ಲಿ ಯಡ್ಯೂರಪ್ಪ ಕೂಡಾ ಅವರನ್ನು ದೂರ್ವಾಸಗಣ್ಣು ಬಿಟ್ಟು ಹೆದರಿಸುವ ತಾಕತ್ತು ಉಳಿಸಿಕೊಂಡಿರಲಿಲ್ಲ.

ಮಹಾರಾಷ್ಟ್ರ ಹರ್ಯಾಣ ಫಲಿತಾಂಶಗಳು ಅವರ ಆ ಅಳುಕನ್ನು ತೊಡೆದು ಹಾಕಿದ್ದೇ ತಡ, ಸಭೆಯಲ್ಲಿ ಎದುರಾಳಿಗಳ ವಿರುದ್ಧ ಹರಿಹಾಯುತ್ತ ಆಪರೇಷನ್ ಕಮಲದಲ್ಲಿ ಅಮಿತ್ ಶಾರ ಹೆಸರನ್ನು ಪ್ರಸ್ತಾಪಿಸಿಯೇ ಬಿಟ್ಟರು. ಅನರ್ಹರಿಗೆ ಅನ್ಯಾಯವಾದರೆ, ಅರ್ಥಾತ್ ಆ ನೆಪದಲ್ಲಿ ನನ್ನನ್ನು ಮೂಲೆಗುಂಪು ಮಾಡಲು ಯತ್ನಿಸಿದರೆ ನಾನು ಅಮಿತ್ ಶಾರನ್ನೂ ಬಯಲಿಗೆಳೆಯಬಲ್ಲೆ ಎಂಬ ಸಂದೇಶ ಬಿಜೆಪಿ ಮಂದಿಗಷ್ಟೇ ಅಲ್ಲ ಜನರಿಗೂ ತಲುಪಲಿ ಎನ್ನುವುದು ಅವರ ಉದ್ದೇಶವಾಗಿತ್ತು. ಜೊತೆಗೆ ನಾನಂತು ನಿಮ್ಮ ಪರವಾಗಿ ಪ್ರಮಾಣಿಕವಾಗಿ ಕಾದಾಡುತ್ತಿದ್ದೇನೆ, ಇದನ್ನೂ ಮೀರಿ ನಿಮಗೆ ಅನ್ಯಾಯವಾದರೆ ಅದಕ್ಕೆ ನಾನಷ್ಟೆ ಜವಾಬುದಾರನಲ್ಲ ಎನ್ನುವುದನ್ನು ಅನರ್ಹರಿಗೂ ತಲುಪಲಿ ಎಂದು ಬಯಸಿದ್ದರು. ಹಾಗಾಗಿಯೇ ಆ ಸಭೆಯಲ್ಲಿ ಅಷ್ಟೆಲ್ಲ ರೇಗಾಡಿದ ವೀಡಿಯೋದ ಕೊನೆಯಲ್ಲಿ, `ನನಗೆ ಗೊತ್ತು ನನ್ನ ಈ ಮಾತುಗಳನ್ನು ನೀವೇ ಹೊರಗೆ ಸುದ್ದಿ ಮಾಡಿಸುತ್ತೀರಿ’ ಎನ್ನುವ ಮೂಲಕ ಅಂಥಾ ಐಡಿಯಾವನ್ನು ಅವರೇ ವಿರೋಧಿಗಳ ಮುಂದಿಟ್ಟಿದ್ದರು.
ಆದರೆ ಅಮಿತ್ ಶಾ ಹೆಸರು ಬಂದಿದ್ದರಿಂದ ವಿರೋಧಿಗಳ್ಯಾರೂ ಆ ದುಸ್ಸಾಹಸಕ್ಕೆ ಕೈಹಾಕಲಿಲ್ಲ. ಬದಲಿಗೆ ಆ ಫಲಿತಾಂಶಗಳಿಂದ ಯಡ್ಯೂರಪ್ಪನವರ ಪರವಾಗಿ ಹೈಕಮಾಂಡ್ ಕೂಡಾ ಮೆತ್ತಗಾಗಿರುವ ಸ್ಪಷ್ಟ ಸುಳಿವು ಹಿಡಿದ ಅವರು ಬಾಯ್ಮುಚ್ಚಿಕೊಂಡು `ಎಲ್ಲಾ ಅನರ್ಹ ಶಾಸಕರಿಗೆ ಟಿಕೆಟ್ ಖಾತ್ರಿ’ ಎಂಬ ಯಡ್ಯೂರಪ್ಪನವರ ಘೋಷಣೆಗೆ ನಗುನಗುತ್ತಲೇ ಫೋಜು ಕೊಡಬೇಕಾಯ್ತು. ಅಲ್ಲಿಗೆ ವೀಡಿಯೊ ವೈರಲ್ ಆಗದಿದ್ದರು ಮುಟ್ಟಿಸಬೇಕಿದ್ದ ಬಿಸಿಯನ್ನು ಮುಟ್ಟಿಸಬೇಕಾದ ಜಾಗಕ್ಕೆ ಮುಟ್ಟಿಸಿದ ಖುಷಿಯಲ್ಲಿ ಯಡ್ಯೂರಪ್ಪ ಕೂಡಾ ಮುಗಳ್ನಕ್ಕು ಸುಮ್ಮನಾಗಿದ್ದರು.

ಆದರೆ ವೀಡಿಯೋವನ್ನು ವೈರಲ್ ಮಾಡಲೇಬೇಕಾದಂತಹ ಅನಿವಾರ್ಯತೆ ತಂದಿಕ್ಕಿದ್ದು ಆರೆಸ್ಸೆಸ್ಸಿಗರ ಆ ಭೇಟಿ! ಹೌದು, ವೀಡಿಯೊ ವೈರಲ್ ಆಗುವುದಕ್ಕು ಒಂದೆರಡು ದಿನ ಮುನ್ನ ಮೂವರು ರಾಜ್ಯಮಟ್ಟದ ಆರೆಸ್ಸೆಸ್ ನಾಯಕರು ಖುದ್ದಾಗಿ ಯಡ್ಯೂರಪ್ಪರನ್ನು ಭೇಟಿ ಮಾಡಿದ್ದರು. ಅವರು ಹೊತ್ತು ತಂದಿದ್ದ ಸಂದೇಶ ಸ್ಪಷ್ಟವಾಗಿತ್ತು. `ಇನ್ನು ನಿಮ್ಮ ಆಡಳಿತ ವೈಖರಿಯಲ್ಲಿ ಸಂಘ ಪರಿವಾರವಾಗಲಿ, ಹೈಕಮಾಂಡ್ ಆಗಲಿ ಮೂಗು ತೂರಿಸಲ್ಲ. ನಿಮಗಿಷ್ಟಬಂದಂತೆ ಸರ್ಕಾರ ನಡೆಸಿ. ಫುಲ್ ಫ್ರೀಡಂ ನಿಮಗುಂಟು. ಉಪಚುನಾವಣೆಯಲ್ಲೂ ಯಾರಿಗೆ ಟಿಕೆಟ್ ಕೊಡಬೇಕು, ಏನು ತಂತ್ರ ಹೆಣೆಯಬೇಕು ಎಂಬುದನ್ನು ನೀವೇ ನಿರ್ಧರಿಸಿ. ಸಂಪೂರ್ಣ ನಿಮ್ಮ ನೇತೃತ್ವದಲ್ಲಿ ಚುನಾವಣೆ ನಡೆಯಲಿ. ನಮ್ಮಿಂದ ಕಿಂಚಿತ್ತೂ ಅಡ್ಡಗಾಲು ಬರುವುದಿಲ್ಲ’ ಎಂಬುದು ಆ ಸಂದೇಶದ ಹೂರಣ.

ಇದನ್ನೂ ಓದಿ: ರಾಜಿನಾಮೆ ನೀಡುವ ಮುನ್ನ ಯಡಿಯೂರಪ್ಪನವರ ಮನೆಗೆ ಹೋಗಿದ್ದೆ ಎಂದ ನಾರಾಯಣಗೌಡ: ವಿಡಿಯೋ ನೋಡಿ

ಮೇಲ್ನೋಟಕ್ಕೆ ಇದು, ವಿಧಾನಸಭಾ ಫಲಿತಾಂಶಗಳಿಂದ ಬಿಜೆಪಿ ಹೈಕಮಾಂಡ್ ಕಲಿತ ಪಾಠದಂತೆಯೂ; ಯಡ್ಯೂರಪ್ಪನವರ ಪರವಾಗಿ ಸಿಕ್ಕ ಇಂಟರ್ನಲ್ ದಿಗ್ವಿಜಯದಂತೆಯೂ ಕಾಣಿಸಿದರು ಅದರ ಹಿಂದೆ ಯಡ್ಯೂರಪ್ಪರನ್ನು ಬಲಿಹಾಕುವ ಸ್ಪಷ್ಟ ಲಕ್ಷಣಗಳಿದ್ದವು. ಮಹಾರಾಷ್ಟ್ರ -ಹರ್ಯಾಣ ಚುನಾವಣೆಗಳು ಮತ್ತು ಅವುಗಳ ಜೊತೆಗೆ ನಡೆದ ವಿವಿಧ ರಾಜ್ಯಗಳ ಉಪಚುನಾವಣೆಗಳಲ್ಲಿ ಬೇರೆ ಪಕ್ಷಗಳಿಂದ ಬಿಜೆಪಿಗೆ ಕೆನೆದ `ಅನರ್ಹ’ರಂತಹ ಪಕ್ಷಾಂತರಿಗಳು ದೊಡ್ಡಮಟ್ಟದಲ್ಲಿ ಸೋಲನುಭವಿಸಿದ್ದರು. ಈ ಸೋಲುಗಳು ಬಿಜೆಪಿಯ `ಆಪರೇಷನ್ ಕಮಲ’ದ ವಿರುದ್ಧ ಜನರ ಮನಸ್ಥಿತಿಯನ್ನು ಅರ್ಥ ಮಾಡಿಸಿದ್ದವು. ಕರ್ನಾಟಕದ ಉಪಚುನಾವಣೆಯಲ್ಲೂ ಇದು ಪುನರಾವರ್ತನೆಯಾಗುವ ಸಾಧ್ಯತೆಗಳು ಹೈಕಮಾಂಡ್‌ಗೆ ಮನದಟ್ಟಾಗಿವೆ. ಹಾಗಾಗಿ ಸರ್ಕಾರ ಉಳಿಸಿಕೊಳ್ಳುವ ಮ್ಯಾಜಿಕ್ ನಂಬರ ೧೧೩ನ್ನು ಕ್ರಾಸ್ ಮಾಡಲು ಬೇಕಾದ ಎಂಟು ಎಂಎಲ್‌ಎಗಳನ್ನು ಗೆಲ್ಲಿಸಿಕೊಳ್ಳುವ ವಿಶ್ವಾಸವೇ ಹೈಕಮಾಂಡ್‌ಗೆ ಇಲ್ಲವಾಗಿದೆ.

ಈ ಸಂಭಾವ್ಯ ಸೋಲನ್ನು ಯಡ್ಯೂರಪ್ಪನವರ ತಲೆಗೆ ಕಟ್ಟುವ ಸಲುವಾಗಿಯೇ ಉಪಚುನಾವಣೆ ಇನ್ನೇನು ಒಂದು ತಿಂಗಳಿರುವಾಗ `ನಿಮಗೆ ಫುಲ್‌ಫ್ರೀಡಂ ಕೊಟ್ಟಿದ್ದೇವೆ’ ಎಂಬ ವ್ಯೂಹ ಹೆಣೆಯಲಾಗಿದೆ. ಒಂದೊಮ್ಮೆ ಗೆದ್ದರೆ, ಯಥಾಪ್ರಕಾರ ಈಗಿನಂತೆಯೇ ನಿಧಾನಕ್ಕೆ ಯಡ್ಯೂರಪ್ಪರನ್ನು ಮೂಲೆಗುಂಪು ಮಾಡೋದು, ಸೋತರೆ `ನಿಮಗೇ ಫುಲ್‌ಫ್ರೀಡಂ ಕೊಟ್ಟರೂ ಸರ್ಕಾರ ಉಳಿಸಿಕೊಳ್ಳುವಷ್ಟು ಎಂಎಲ್‌ಎಗಳನ್ನು ಗೆಲ್ಲಿಸಿಕೊಳ್ಳುವುದಕ್ಕೆ ನಿಮ್ಮಿಂದ ಆಗಲಿಲ್ಲ. ಇನ್ನು ಜಾಗ ಖಾಲಿ ಮಾಡಿ’ ಅಂತ ಅವರನ್ನು ಪಕ್ಷದೊಳಗೆ ಪಕ್ಕಕ್ಕೆ ಸರಿಸೋದು ಇದರ ಹಿಂದಿರುವ ಅಜೆಂಡಾ. ಇದು ಯಡ್ಯೂರಪ್ಪನವರಿಗೆ ಅರ್ಥವಾಗದ ಸಂಗತಿಯೇನಲ್ಲ.

ಈ ವ್ಯೂಹದಿಂದ ತನ್ನನ್ನು ಬಚಾವು ಮಾಡಿಕೊಳ್ಳುವ ಸಲುವಾಗಿಯೇ, ಸಭೆ ನಡೆದ ಒಂದು ವಾರದ ನಂತರ ಆ ವೀಡಿಯೊ ವೈರಲ್ ಆಗುವಂತೆ ಯಡ್ಯೂರಪ್ಪನವರೇ ವ್ಯವಸ್ಥೆ ಮಾಡಿದ್ದಾರೆ ಎನ್ನುತ್ತಿವೆ ಮೂಲಗಳು. ನನಗೆ ಪಕ್ಷದೊಳಗೆ ಹೆಜ್ಜೆಹೆಜ್ಜೆಗು ಸ್ಥಳೀಯ ನಾಯಕರಿಂದ ಮತ್ತು ರಾಷ್ಟ್ರೀಯ ಲೀಡರುಗಳಿಂದ ವಂಚನೆಯಾಗುತ್ತಲೇ ಬಂದಿದೆ ಅನ್ನೋದನ್ನು ಜನರಿಗೆ ತನ್ನ ಬಾಯಿಂದಲೇ ತಲುಪಿಸಿದರೆ, ಮುಂದಿನ ಉಪಚುನಾವಣೆಗಳಲ್ಲಿನ ಸೋಲಿನ ಬಲಿಪೀಠದಿಂದ ಎಸ್ಕೇಪ್ ಆಗಬಹುದು ಎನ್ನುವುದು ಅವರ ಲೆಕ್ಕಾಚಾರವಿದ್ದೀತು.

ಈ ಹಿಂದೆ ಜೆಡಿಎಸ್ ಶಾಸಕ ನಾಗನಗೌಡರನ್ನು ಬಿಜೆಪಿಗೆ ಸೆಳೆಯಲು ಅವರ ಮಗ ಶರಣಗೌಡನ ಜೊತೆ ಯಡ್ಯೂರಪ್ಪನವರು ನಡೆಸಿದ್ದ ಆಡಿಯೋ ಟೇಪನ್ನು ಸಿಎಂ ಆಗಿದ್ದ ಸ್ವತಃ ಕುಮಾರಸ್ವಾಮಿಯೇ ರಿಲೀಸ್ ಮಾಡಿದ್ದರು. ಆರಂಭದಲ್ಲಿ ಆ ದನಿ ನನ್ನದಲ್ಲ ಎಂದು ವಾದಿಸಿ, ಕಡೆಗೆ `ಧರ್ಮಸ್ಥಳ’ದ ಆಣೆಪ್ರಮಾಣಕ್ಕೆ ಬೆದರಿ ಒಪ್ಪಿಕೊಳ್ಳಬೇಕಾಗಿತ್ತು. ಹೀಗಿರುವಾಗ, ಅದೇ ಆಪರೇಷನ್ ಕಮಲವನ್ನು ಎಕ್ಸ್ಪೋಸ್ ಮಾಡಿದ ಈ ವೀಡಿಯೋವನ್ನು ಯಡ್ಯೂರಪ್ಪನವರು ಯಾವ ಮುಲಾಜಿಲ್ಲದೆ `ನನ್ನದೇ’ ಎಂದು ಒಪ್ಪಿಕೊಳ್ತಾರೆ ಅಂದ್ರೆ ಏನರ್ಥ. ವೀಡಿಯೊ ಹೊರಬಿದ್ದ ನಂತರ ಯಡ್ಯೂರಪ್ಪರನ್ನು ಸಂದರ್ಶನ ಮಾಡುತ್ತಿದ್ದ ಟೀವಿ ನಿರೂಪಕಿಯೊಬ್ಬರು `ನಿಮ್ಮದೆನ್ನಲಾದ ವೀಡಿಯೊ’ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಂತೆಯೇ, ಆಕೆಯ ಮಾತನ್ನು ಅರ್ಧಕ್ಕೇ ತಡೆದ ಯಡ್ಯೂರಪ್ಪನವರು `ನಿಮ್ಮದೆನ್ನಲಾದ ಅಲ್ಲ, ಅದು ನನ್ನದೇ’ ಎಂದು ಘಂಟಾಘೋಷವಾಗಿ ಕ್ಲೇಮ್ ಮಾಡಿಕೊಂಡದ್ದನ್ನು ಇನ್ನೇಗೆ ಅರ್ಥೈಸಿಕೊಳ್ಳಲು ಸಾಧ್ಯ….!? ಯಡ್ಯೂರಪ್ಪನವರ ಬಣವೇ ಇದನ್ನು ಹೊರಹಾಕಿರುವ ಸಾಧ್ಯತೆ ದಟ್ಟವಾಗಿರೋದ್ರಿಂದ ಬಿಜೆಪಿ ಹೈಕಮಾಂಡ್, ಆರೆಸ್ಸೆಸ್ ಕೂಡಾ ಕಟ್ಟುನಿಟ್ಟಿನ ಆಂತರಿಕ ತನಿಖೆಗೆ ಮುತುವರ್ಜಿ ವಹಿಸುತ್ತಿವೆ. ಬಹುಶಃ ಯಡ್ಯೂರಪ್ಪನವರ ಬಣಕ್ಕೂ ಇದನ್ನು ರಿಲೀಸ್ ಮಾಡುವ ಮುನ್ನ ಇದು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗುತ್ತೆ ಅನ್ನೋ ಅಂದಾಜು ಇತ್ತೋ ಇಲ್ಲವೋ ಗೊತ್ತಿಲ್ಲ. ಈಗ ಎಲ್ಲವೂ ಕೈಮೀರಿ ಹೋಗಿರುವುದು ಮಾತ್ರ ಸತ್ಯ.

ಅಸಲೀ ಕುಚೋದ್ಯ ಏನು ಗೊತ್ತಾ, ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಅನ್ನೋ ಗಾದೆಯ ಮಾತಿನಂತೆ ಬಿಜೆಪಿಯ ಈ ಆಂತರಿಕ ಕಲಹದಿಂದ ಬೀದಿಗೆ ಬೀಳುತ್ತಿರೋದು `ಅನರ್ಹ’ ಶಾಸಕರು. ಸುಪ್ರೀಂ ಕೋರ್ಟ್ ಯಡ್ಯೂರಪ್ಪನವರ ಆಡಿಯೋವನ್ನು ಸಾಕ್ಷ್ಯವಾಗಿ ಪರಿಗಣಿಸಲು ಒಪ್ಪಿರೋದ್ರಿಂದ ತೀರ್ಪು ಅವರ ವಿರುದ್ಧವೇ ಬರಬಹುದು ಅಥವಾ ವಿಚಾರಣೆ ಮುಂದಕ್ಕೂ ಜಿಗಿಯಬಹುದು. ಇವೆರಡರಲ್ಲಿ ಯಾವುದಾದರು ಡಿಸೆಂಬರ್ 5ರ ಉಪಚುನಾವಣೆಯ ಮಟ್ಟಿಗೆ ಇವರ ಆತಂಕ ದುಪ್ಪಟ್ಟಾಗೋದ್ರಲ್ಲಿ ಡೌಟೇ ಇಲ್ಲ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...