HomeUncategorizedದುಡ್ಡಿನ ಮದದಲ್ಲಿರುವ ಶಿವಕುಮಾರ್‘ಗಳೇ’ ದಯವಿಟ್ಟು ಈ ಪುಟ್ಟ ಕತೆ ಓದಿ: ಎಚ್‌.ಎಸ್‌ ದೊರೆಸ್ವಾಮಿ

ದುಡ್ಡಿನ ಮದದಲ್ಲಿರುವ ಶಿವಕುಮಾರ್‘ಗಳೇ’ ದಯವಿಟ್ಟು ಈ ಪುಟ್ಟ ಕತೆ ಓದಿ: ಎಚ್‌.ಎಸ್‌ ದೊರೆಸ್ವಾಮಿ

- Advertisement -
- Advertisement -

ಮಹಾತ್ಮಾ ಗಾಂಧಿಯವರ ಕಾಂಗ್ರೆಸ್ಸಿನಲ್ಲಿ `ಅಸಂಗ್ರಹ’ ಎಂಬ ವ್ರತವನ್ನು ಕಾಂಗ್ರೆಸ್ಸಿಗರು ಪಾಲಿಸುತ್ತಿದ್ದರು. ಅಸಂಗ್ರಹ ಎಂದರೆ ಕೂಡಿಹಾಕದೆ ಇರುವುದು. ಸಂಗ್ರಹಬುದ್ಧಿ ದುರಾಸೆಯಿಂದ ಕೂಡಿದ ಬುದ್ಧಿ. ಕೂಡಿಹಾಕುವ ಬುದ್ಧಿ ಬೆಳೆದಹಾಗೆ ಇತರರ ಸ್ವತ್ತನ್ನು ಸ್ವಾಹ ಮಾಡುವ ಪ್ರವೃತ್ತಿ ಬೆಳೆಯುತ್ತದೆ. ಸಂಗ್ರಹ ಬುದ್ಧಿ ವೃದ್ಧಿಯಾದಂತೆ ನ್ಯಾಯಯುತವಾಗಿಯೋ ಅಪಮಾರ್ಗದಿಂದಲೋ ಸಂಪಾದನೆ ಮಾಡುವ ಪ್ರವೃತ್ತಿ ಬೆಳೆಯುತ್ತದೆ. ಇದರಿಂದ ಉಳ್ಳವರು, ಕೊಂಡವರ ಮಧ್ಯದ ಕಂದಕ ಬೆಳೆಯುತ್ತಾ ಹೋಗುತ್ತದೆ. ಧನಿಕ ವರ್ಗ ಬಡವರ ಸಮೂಹಗಳ ಮಾನವ ಸಂಬಂಧ ಕೆಡುತ್ತದೆ. ಇದು ಮುಂದೆ ವರ್ಗ ಕಲಹಕ್ಕೂ, ಘರ್ಷಣೆಗೂ ಕಾರಣವಾಗುತ್ತದೆ. ಲೆನಿನ್ನನ ಕಾಲದಲ್ಲಿ ರಷ್ಯಾದಲ್ಲಿ ಈ ಬಗೆಯ ಘರ್ಷಣೆ ಏರ್ಪಟ್ಟು ಶ್ರೀಮಂತ ಭೂಮಾಲೀಕರ ತಲೆಗಳನ್ನು ಕಡಿಯಲಾಯಿತು.

ಸ್ವಾತಂತ್ರ್ಯ ಬಂದಮೇಲೆ ಈ ಶ್ರೀಮಂತರ ವರ್ಗ ರಾಜಕೀಯ ಪಕ್ಷಗಳನ್ನು ಸೇರಿ ಶಾಸಕರು, ಪಾರ್ಲಿಮೆಂಟ್ ಸದಸ್ಯರೂ, ಮಂತ್ರಿಗಳೂ ಆಗಿದ್ದಾರೆ. ಹಿಂದೆ ನಾವು ದೇಶಕ್ಕಾಗಿ ತ್ಯಾಗ ಮಾಡಿದವರನ್ನು, ಸ್ವಾತಂತ್ರ್ಯ ಆಂದೋಲನದಲ್ಲಿ ಸೆರೆಮನೆಗೆ ಹೋಗಿದ್ದವರನ್ನು ಕಾಂಗ್ರೆಸ್ಸಿನಿಂದ ಚುನಾವಣೆಗೆ ನಿಲ್ಲಿಸುತ್ತಿದ್ದೆವು. ಇವರ ವಿರುದ್ಧವಾಗಿ ನಿಂತ ಪಟ್ಟಭದ್ರರು, ಸಾಹುಕಾರರು ಠೇವಣಿ ಕಳೆದುಕೊಳ್ಳುತ್ತಿದ್ದರು. ಈಗ ಕಾಲ ಎಷ್ಟು ಕೆಟ್ಟಿದೆಯೆಂದರೆ, ಈ ಪಟ್ಟಭದ್ರರ ಎದುರಾಳಿಯಾಗಿ ಸಮಾಜಸೇವಕ ನಿಂತರೆ ಅವನು ಠೇವಣಿ ಕಳೆದುಕೊಳ್ಳುತ್ತಾನೆ.

ಈ ಪಟ್ಟಭದ್ರರ ಪಟ್ಟಿಯಲ್ಲಿ ಕತ್ತಿ ಸೋದರರು, ಡಿ.ಕೆ. ಸೋದರರು, ದೇವೇಗೌಡರ ಕುಟುಂಬ, ಕುಪೇಂದ್ರ ರೆಡ್ಡಿ, ಎಂಟಿಬಿ ನಾಗರಾಜ್, ಈಶ್ವರಪ್ಪ, ಯಡಿಯೂರಪ್ಪ ಮತ್ತವರ ಮಕ್ಕಳು, ಕರಂದ್ಲಾಜೆ, ಹುಕ್ಕೇರಿ ಕುಟುಂಬ, ಜಾರಕಿಹೊಳಿ ಸಹೋದರರು ಮುಂತಾದ ನೂರಕ್ಕೂ ಹೆಚ್ಚು ಜನ ಇದ್ದಾರೆ.

ಗ್ರೀಕ್ ಜನಪದ ಕಥೆಗಳಲ್ಲಿ ಮೈದಾಸ್ ಎಂಬುವವನಿದ್ದನಂತೆ. ಅವನು ಮುಟ್ಟಿದ್ದೆಲ್ಲ ಚಿನ್ನವಾಗುತ್ತಿತ್ತಂತೆ. ಅವನು ಚಿನ್ನದ ಆಸೆಯಿಂದ ತನ್ನ ಮಗಳನ್ನು ಮುಟ್ಟಿದನಂತೆ. ಅವಳೂ ಚಿನ್ನವಾದಳು. ಕೋಟ್ಯಂತರ ರೂ.ಗಳನ್ನು ಸಂಗ್ರಹಿಸಿದರೂ, ನೂರಾರು ಎಕರೆ ಜಮೀನು ಕೊಂಡರೂ, ನೂರಾರು ಸೈಟ್‌ಗಳನ್ನು ಮಾಡಿದರೂ ಇನ್ನೂ ದೋಚಬೇಕು, ಬಾಚಬೇಕು ಎಂಬ ದುರಾಸೆ ಇದೆಯಲ್ಲಾ, ಅಬ್ಬಾ! ಇಷ್ಟೆಲ್ಲ ಐಶ್ವರ್ಯವನ್ನು ಇವರು ಹೇಗೆ ಅನುಭವಿಸುತ್ತಾರೆ?

ಚಿಕ್ಕಮಕ್ಕಳನ್ನು ಸಮುದ್ರ ತಡಿಯಲ್ಲಿ ಬಿಟ್ಟುನೋಡಿ, ಅವರು ಕಪ್ಪೆಚಿಪ್ಪು, ಕವಡೆ ಆರಿಸಲು ಶುರು ಮಾಡುತ್ತಾರೆ. ಎಷ್ಟು ಸಂಗ್ರಹಿಸಿದರೂ ಆ ಮಕ್ಕಳಿಗೆ ತೃಪ್ತಿ ಅನ್ನುವುದೇ ಇರಲ್ಲ. ಕಂಡದ್ದನ್ನೆಲ್ಲ ಎತ್ತಿಟ್ಟುಕೊಳ್ಳುತ್ತಾರೆ. ಇಲ್ಲಿ ಮುಗ್ಧ ಮನಸ್ಸಿನ ಮಕ್ಕಳ ಸಂಗ್ರಹದ ಹಿಂದೆ ಅಷ್ಟೇ ಮುಗ್ಧವಾದ ಖುಷಿ ಇರುತ್ತದೆ. ಅದನ್ನು ಬಿಟ್ಟರೆ, ಯಾವ ದುರಾಸೆಯೂ ಇರುವುದಿಲ್ಲ. ಈ ಪಟ್ಟಭದ್ರರು ಆ ಮಕ್ಕಳಂತೆಯೇ ಮುಗಿಬಿದ್ದು ಆಸ್ತಿ ಮಾಡಲು ಹಪಾಹಪಿಸುತ್ತಾರೆ, ಆದರೆ ಅಂತಹ ಹಪಾಹಪಿತನದ ಹಿಂದೆ ಆ ಮಕ್ಕಳಿಗಿದ್ದಂತೆ ಮುಗ್ಧ ಖುಷಿ ಇರುವುದಿಲ್ಲ, ಬದಲಿಗೆ ಕೆಟ್ಟ ದುರಾಸೆ, ದುಷ್ಟ ಸಂಚುಗಳು ಇರುತ್ತವೆ. ಸಂಪಾದಿಸಿರುವ ಎಲ್ಲಾ ಐಶ್ವರ್ಯಕ್ಕೂ ದಾಖಲೆ ಇದೆ ಎಂದು ಸಮರ್ಥಿಸಿಕೊಳ್ಳುತ್ತಾರೆ.

ಇಷ್ಟೊಂದು ಕಲೆಹಾಕುವ ಅಗತ್ಯ ನಿಮಗಿದೆಯೇ? ಎಂದು ಕೇಳಿದರೆ, `ದುಡ್ಡು ಮಾಡಲು ಯೋಗ್ಯತೆ ಇಲ್ಲದಿರುವ ನೀವು ಕೇಳುವ ಮಾತು ಇದು. ನಿಮ್ಮನ್ನು ನೋಡಿದರೆ ಅಯ್ಯೋ ಅನ್ನಿಸುತ್ತೆ’ ಎನ್ನುತ್ತಾರೆ.

ಒಂದು ತಲೆಮಾರಿಗೆ ಬೇಕಾದಷ್ಟು, ಎರಡು ತಲೆಮಾರು ಕೂತು ತಿಂದರೂ ಸವೆಯದಷ್ಟು, ಅದಕ್ಕಿಂತಲೂ ಹೆಚ್ಚು ಸಂಪಾದಿಸಿ ಕೊನೆಗೆ ಲಾಯರಿಗೆ, ಕೋರ್ಟಿಗೆ, ಕಚೇರಿಗೆ, ಪೊಲೀಸರಿಗೆ, ಅಧಿಕಾರಿಗಳಿಗೆ ಕೊಟ್ಟಿರಿ ಎಂದಿಟ್ಟುಕೊಳ್ಳಿ ಆಗ ನಿಮಗೆ ನೆಮ್ಮದಿ ಇರುತ್ತಾ? ಸೆರೆಮನೆ ವಾಸ, ಪೊಲೀಸ್ ಕಸ್ಟಡಿ, ವಿಚಾರಣೆ, ಮುಟ್ಟುಗೋಲು, ಸಜಾ ಇವುಗಳ ಭಯ ಸದಾ ಕಾಡುತ್ತಲೇ ಇರುತ್ತದೆಯಲ್ಲವೇ?. ಕೊಳ್ಳೆಹೊಡೆದ ಆಸ್ತಿ ಉಳಿಸಿಕೊಳ್ಳುವ ಆಲೋಚನೆಯಲ್ಲಿ ರಕ್ತದೊತ್ತಡ, ಹೃದಯಬೇನೆಯಂತಹ ತೀವ್ರತರನಾದ ಕಾಯಿಲೆಗಳಿಗೆ ಬಲಿಯಾಗುತ್ತಾರೆ.

ಲಿಯೋ ಟಾಲ್‌ಸ್ಟಾಯ್ `ಒಬ್ಬ ಮನುಷ್ಯನಿಗೆ ಎಷ್ಟು ಭೂಮಿ ಬೇಕು?’ ಎಂಬ ಒಂದು ಕತೆ ಬರೆದಿದ್ದಾನೆ. ಭೂಮಿ ದಾಹವುಳ್ಳ ಒಬ್ಬ ಮನುಷ್ಯ ಇದ್ದ. ಅವನಿಗೆ ಎಷ್ಟು ಭೂಮಿಕೊಂಡರೂ ತೃಪ್ತಿ ಇಲ್ಲ. ಇವನನ್ನು ಆ ಊರಿನ ಬೆಟ್ಟದ ಮೇಲಿರುವ ಸೈತಾನ್ ಬರಮಾಡಿಕೊಳ್ಳುತ್ತಾನೆ. `50 ಸಾವಿರ ಪೌಂಡ್ ಹಣವಿರುವ ಚೀಲ ಇಲ್ಲಿಡು, ಬೆಟ್ಟದ ಪೂರ್ವಭಾಗದಲ್ಲಿರುವ ಭೂಮಿಯೆಲ್ಲಾ ನನ್ನದೇ. ನೀನು ಬೆಳಿಗ್ಗೆ ಹೊರಟು ನಿನಗೆ ಬೇಕಾದ ಜಮೀನಿಗೆ ಇಂದು ಬಾಂದ್‌ಕಲ್ಲನ್ನು ಇಟ್ಟುಕೊಂಡು ಹೋಗು, ಸಂಜೆವೇಳೆಗೆ ನೀನೆಷ್ಟು ಜಮೀನಿಗೆ ಬಾಂದ್ ಕಲ್ಲು ಇಡುವೆಯೋ ಅದೆಲ್ಲಾ ನಿನ್ನದು. ಆದರೆ ಒಂದು ಕರಾರು. ನೀನು ಸೂರ್ಯಾಸ್ತಮಯದ ಹೊತ್ತಿಗೆ ಬೆಟ್ಟ ಹತ್ತಿ ನಾನು ಕುಳಿತಿರುವಲ್ಲಿಗೆ ಬರಬೇಕು. ನೀನು ಸೂರ್ಯಾಸ್ತದ ಒಳಗೆ ನಾನು ಕುಳಿತಿರುವಲ್ಲಿಗೆ ಬರುವೆಯಾದರೆ ನೀನು ಗುರುತಿಸಿರುವ ಎಲ್ಲಾ ಜಮೀನು ನಿನ್ನದು, ಆದರೆ ನೀನು ನಿಗದಿತ ಸಮಯದೊಳಗೆ ಈ ಸ್ಥಳ ತಲುಪಲು ವಿಫಲವಾದರೆ ಈ 50 ಸಾವಿರ ಪೌಂಡ್ ನನ್ನದಾಗುತ್ತದೆ, ನಿನಗೆ ಒಂದು ಕವಡೆ ಜಮೀನೂ ದಕ್ಕುವುದಿಲ್ಲ.

ಈ ಆಸೆಬುರುಕ ಸರಸರ ಬೆಟ್ಟ ಇಳಿದು ಪೂರ್ವ ದಿಕ್ಕಿನ ಜಮೀನುಗಳ ಅನ್ವೇಷಣೆಗಾಗಿ ಹೊರಟ. ಎದುರುಗಡೆ ವಿಸ್ತಾರವಾದ ಉತ್ಕೃಷ್ಟ ಜಮೀನು ಹರಡಿಕೊಂಡಿದೆ. ಅದರ ಪಕ್ಕದಲ್ಲಿ ನದಿ ಹರಿದುಹೋಗುತ್ತದೆ. ಜಮೀನನ್ನು ಸುತ್ತುಹಾಕಿ ಕಲ್ಲು ನೆಟ್ಟು ಮುಂದಕ್ಕೆ ಹೋದರೆ, ಒಂದು ದೊಡ್ಡ ಕೆರೆ, ಅದರ ಪಕ್ಕದಲ್ಲಿ ಹರಡಿಕೊಂಡಿದ್ದ ಜಮೀನು. ಅದಕ್ಕೂ ಪ್ರದಕ್ಷಿಣೆ ಹಾಕಿ ಕಲ್ಲು ನೆಟ್ಟಿದ್ದಾಯ್ತು. ಅಷ್ಟು ಹೊತ್ತಿಗೆ ಮಧ್ಯಾಹ್ನವಾಗಿತ್ತು. ಮುಂದೆ ಹೊರಟ. ಒಂದು ವಿಶಾಲವಾದ ಪ್ರದೇಶ, ಬಂಜರು ಭೂಮಿ. ಅದರ ಆಚೆಗೆ ಕಾಣಿಸಿತು ಹಚ್ಚಹಸುರಿನ ವಿಸ್ತಾರವಾದ ಭೂಮಿ. ಅಲ್ಲಿಗೆ ದಾಪುಗಾಲು ಹಾಕುತ್ತಾ ಹೋದ. ಅದನ್ನೂ ಸುತ್ತಿ ಒಂದು ಕಲ್ಲುನೆಟ್ಟ. ಸಂಜೆ ನಾಲ್ಕೂವರೆ ಗಂಟೆ. ಬಹುದೂರ ನಡೆದು ಬಂದುಬಿಟ್ಟಿದ್ದಾನೆ. ಸೂರ್ಯ ಮುಳುಗುವುದರ ಒಳಗೆ ಬೆಟ್ಟದ ತುದಿ ಸೇರಬೇಕೆಂಬ ತವಕ. ಸುಸ್ತಾಗಿಬಿಟ್ಟಿದ್ದಾನೆ. ಏದುಸಿರು ಬಿಡುತ್ತಾ ಪ್ರಯಾಸದಿಂದ ಬೆಟ್ಟ ಹತ್ತಿದ. ಬೆಟ್ಟದ ತುದಿ ಮುಟ್ಟಬೇಕು, ಅಷ್ಟರಲ್ಲಿ ಸೂರ್ಯ ದಿಗಂತಕ್ಕೆ ಸರಿದಿದ್ದ. ಗಾಬರಿಯಾಯಿತು. ಜೀವ ಹಿಡಿದುಕೊಂಡು ಶಿಖರದತ್ತ ಧಾವಿಸಿದ. ಬೆಟ್ಟದ ಶಿಖರಕ್ಕೆ ಬಂದವನೇ ತಾನಿಟ್ಟು ಹೋಗಿದ್ದ ಹಣದ ಗಂಟನ್ನು ಪಟ್ಟಾಗಿ ಹಿಡಿದುಕೊಂಡ. ಆದರೆ ಪ್ರಾಣಪಕ್ಷಿ ಹಾರಿಹೋಯಿತು! ಇಷ್ಟೊಂದು ಪ್ರಯಾಸಪಟ್ಟು ನೂರಾರು ಎಕರೆ ಜಮೀನಿನ ಒಡೆಯನಾಗುವ ಅವನ ಆಸೆ ಕಮರಿಹೋಯಿತು.

ಅವನನ್ನು ಮೂರಡಿ, ಆರಡಿ ಅಳತೆಯ ಹಳ್ಳ ತೆಗೆದು ಹೂಳಲಾಯಿತು!

ತಾತ್ಪರ್ಯ ಇಷ್ಟೇ, ಅಪಮಾರ್ಗದಲ್ಲೇ ಆಗಲಿ, ಯೋಗ್ಯ ಮಾರ್ಗದಲ್ಲೇ ಆಗಲಿ ಮನುಷ್ಯ ಎಷ್ಟೇ ಎಕರೆ ಜಮೀನು ಸಂಪಾದಿಸಿಟ್ಟರೂ ಅವನಿಗೆ ದಕ್ಕುವುದು ಮೂರಡಿ, ಆರಡಿ ಜಾಗ ಮಾತ್ರ!

ಸಂಗ್ರಹ ಬುದ್ಧಿಯನ್ನು ಬೆಳೆಸಿಕೊಂಡು, ದುರಾಸೆಯ ಪರಾಕಾಷ್ಠೆ ಏರಿರುವ ಡಿ.ಕೆ.ಶಿವಕುಮಾರ್ ಥರದವರಿಗೆ ಈ ಮಾತು ಅರ್ಥವಾದೀತೆಂದು ಭಾವಿಸಿದ್ದೇನೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಕಥೆ ಮಾರ್ಮಿಕವಾಗಿದೆ. ಇಷ್ಟಕ್ಕೆಲ್ಲಾ ಭ್ರಷ್ಟ ಮತದಾರರು ಕಾರಣ.

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...