ಪಶ್ಚಿಮ ಬಂಗಾಳದಲ್ಲಿ ಯುವ ಸಂಕಲ್ಪ ಯಾತ್ರೆ ನಡೆಸಲು ಸಿದ್ಧವಾಗಿದ್ದ, ಸಿಲಿಗುರಿ ಶಾಸಕ ಶಂಕರ್ ಘೋಷ್ ಸೇರಿದಂತೆ ಕನಿಷ್ಠ 30 ಭಾರತೀಯ ಜನತಾ ಪಕ್ಷದ ಕಾರ್ಯಕರ್ತರನ್ನು ಪಕ್ಷದ ಕಚೇರಿಯ ಮುಂದೆಯೇ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಯುವ ಸಂಕಲ್ಪ ಯಾತ್ರೆ ನಡೆಸಲು ಅನುಮತಿ ಪಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. “ಅವರು ಯುವ ಸಂಕಲ್ಪ ರ್‍ಯಾಲಿ ನಡೆಸಲು ಅನುಮತಿ ಪಡೆಯದ ಕಾರಣ ಅವರನ್ನು ಬಂಧಿಸಲಾಗಿದೆ” ಎಂದು ಸಿಲಿಗುರಿ ಮಹಾನಗರ ಪೊಲೀಸ್ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಜಾಯ್ ತುಡು ಹೇಳಿದ್ದಾರೆ.
ಶಾಸಕ ಮತ್ತು ಕಾರ್ಯಕರ್ತರ ಬಂಧನದ ನಂತರ, ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಘರ್ಷಣೆ ಉಂಟಾಗಿದೆ.
ಇದನ್ನೂ ಓದಿ: ಕಾಂಗ್ರೆಸ್‌ಗೆ ಮಾಜಿ ಸಂಸದೆ ಸುಶ್ಮಿತಾ ದೇವ್ ರಾಜೀನಾಮೆ: ಟಿಎಂಸಿ ಸೇರ್ಪಡೆ
ಇನ್ನೊಂದು ಘಟನೆಯಲ್ಲಿ, 35 ಮಂದಿ ನಾರಾಯಣಿ ಸೇನಾ ಕಾರ್ಯಕರ್ತರನ್ನು ಬಾಗ್‌ದೋಗ್ರಾ ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ. ಈ ಬಂಧಿತ ಕಾರ್ಯಕರ್ತರು ಅಲಿಪುರ್ದಾರ್‌ನ ಬಿಜೆಪಿ ಸಂಸದ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರಾದ ಜಾನ್ ಬಾರ್ಲಾ ಅವರನ್ನು ಆಹ್ವನಿಸಲು ವಿಮಾನ ನಿಲ್ದಾಣದಲ್ಲಿ ಸೇರಿದ್ದರು.
ಡಾರ್ಜಿಲಿಂಗ್‌ನ ಬಿಜೆಪಿ ಸಂಸದ ಮತ್ತು ರಾಷ್ಟ್ರೀಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜು ಬಿಸ್ತಾ , “ದೇಶದ 75 ವರ್ಷಗಳ ಸ್ವಾತಂತ್ರ್ಯ ದಿನದ ಅಂಗವಾಗಿ ಬಿಜೆಪಿಯ ಮೋರ್ಚಾ ಕಾರ್ಯಕರ್ತರು ಯಾತ್ರೆಯನ್ನು ಆರಂಭಿಸುತ್ತಿದ್ದಾರೆ. ಒಟ್ಟು 75 ಯುವ ಮೋರ್ಚಾ ನಾಯಕರು, 75 ಸ್ಥಳಗಳಲ್ಲಿ, 75 ಕಿಮೀ ರ್‍ಯಾಲಿ ನಡೆಸಲಿದ್ದಾರೆ” ಎಂದಿದ್ದಾರೆ.
’ಆದರೆ, ಪೊಲೀಸರು ಯಾತ್ರೆಯನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಇದು ಪಶ್ಚಿಮ ಬಂಗಾಳ ಸರ್ಕಾರ ಮತ್ತು ರಾಜ್ಯ ಪೊಲೀಸರು ರಾಷ್ಟ್ರ ವಿರೋಧಿ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದು ರಾಜ್ಯ ಮತ್ತು ದೇಶಕ್ಕೆ ಆತಂಕಕಾರಿ ಪರಿಸ್ಥಿತಿ” ಎಂದು ರಾಜು ಬಿಸ್ತಾ ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ನಾಯಕರ ಅತಿಯಾದ ವಿಶ್ವಾಸದಿಂದ ಬಂಗಾಳದಲ್ಲಿ ಸೋಲು: ಸುವೆಂದು ಅಧಿಕಾರಿ


