Homeಅಂಕಣಗಳುಬಗೆ ಕದಡುವ ಚಿತ್ರಗಳು

ಬಗೆ ಕದಡುವ ಚಿತ್ರಗಳು

- Advertisement -
ಅಂಕಣ: ಹಾಸುಹೊಕ್ಕು
ಈಚೆಗೆ ಕೆ.ಪಿ.ಸುರೇಶ್ ಅವರ ಅಪ್ರಕಟಿತ ಬರಹಗಳನ್ನು ಓದುವ ಅವಕಾಶ ಸಿಕ್ಕಿತು. ಅದರ ಅನುಭವ ಹಂಚಿಕೊಳ್ಳುವುದು ಈ ಟಿಪ್ಪಣಿಯ ಇರಾದೆ.
ಕರ್ನಾಟಕ ಸುತ್ತಾಡುವ ಭಾಗವಾಗಿ ನಾನು ಕಂಡ ಊರುಗಳಲ್ಲಿ ಸುಳ್ಯ ತಾಲೂಕಿನ ಕಂಜರ್ಪಣೆ, ಸುಂದರವಾದ ಸ್ಥಳ. ಅದರಲ್ಲಿ ಸುರೇಶ್ ಮನೆಯ ತಾಣವಂತೂ ಚಿತ್ತಾಕರ್ಷಕ. ಮನೆಯ ಪಡಸಾಲೆಯಲ್ಲಿ ಕುಳಿತು ಮೂಡಣ ದೆಸೆಯತ್ತ ಕಣ್ಣು ಹಾಯಿಸಿದರೆ ದೊಡ್ಡದೊಂದು ಕಣಿವೆ, ದಟ್ಟಕಾಡು; ಅದರಾಚೆ ಮುಗಿಲಿಗೇರಿದ ಪರ್ವತ. ನಾವು ಹೋದಾಗ ಸುರೇಶ್, ಮೈಸೂರಿನಲ್ಲಿದ್ದ ಉಪನ್ಯಾಸಕ ಕಸುಬನ್ನು ಬಿಟ್ಟು, ಊರಿಗೆ ಹೋಗಿ ಬೇಸಾಯ ಮಾಡುತ್ತ ಬಸವಳಿದಿದ್ದರು. ಕಾರಂತರ `ಬೆಟ್ಟದಜೀವ’ದ ಗೋಪಾಲಯ್ಯನವರ ಪ್ರಯೋಗಕ್ಕೆ ಹೋಲಿಸಿದರೆ, ಕೃಷಿಯು ಕಷ್ಟಕರವಾಗಿದ್ದ ದಿನಗಳವು. ತೋಟದ ಮನೆಯಲ್ಲಿ ಮುಪ್ಪಿಗೆ ಸಂದ ಅಮ್ಮ ಒಬ್ಬರೇ ಇದ್ದರು.
         – ರಹಮತ್ ತರೀಕೆರೆ
ನಾವು ಕಂಜರ್ಪಣೆಗೆ ಹೋಗಿಬಂದ ಕೆಲವು ತಿಂಗಳಲ್ಲೇ ಸುರೇಶ್ ತೋಟ-ಮನೆ ಮಾರಿ ಮೈಸೂರು ಸೇರಿಕೊಂಡರು. ಇದು `ಮರಳಿ ಮಣ್ಣಿಗೆ’ಯ ಉಲ್ಟಾ ಸುತ್ತು. ಆದರೆ ಅವರು ಕಂಜರ್ಪಣೆ ಸೀಮೆ ಬಿಟ್ಟು ಬಂದರೂ, ಅಲ್ಲಿನ ಕಾಡು ಹೊಳೆ ಜಾನುವಾರು ಜನ ಅವರನ್ನು ಹಿಂಬಾಲಿಸಿ ಬಂದು ಮೈತಳೆದಂತೆ ಅವರ ಬರಹಗಳಿವೆ.  ಅನುಭವ ಎಷ್ಟೇ ವಿಶಿಷ್ಟವಾಗಿರಲಿ, ಅದರಿಂದ ಭೌತಿಕವಾಗಿ ಮತ್ತು ಕಾಲದ ದೃಷ್ಟಿಯಿಂದ ಅಂತರ ಸೃಷ್ಟಿಯಾಗದ ಹೊರತು, ಅದನ್ನು ಮೌಲ್ಯಮಾಪನ ಮಾಡುವುದಾಗಲಿ, ಕಲಾಕೃತಿಯಾಗಿ ಕಟ್ಟಿಕೊಡುವುದಾಗಲಿ ಕಷ್ಟವೆನಿಸುತ್ತದೆ.  ಅನುಭವಿಸಿದ ಪಾಡನ್ನು ಸೃಜನಶೀಲ ದೂರನಿಂತು ನೋಡಿರುವ ಫಲವೆಂಬಂತೆ ಇಲ್ಲಿನ ಹದಿನಾಲ್ಕು ಕಥನಗಳು ಹುಟ್ಟಿವೆ. ಹದಿನಾಲ್ಕು ಪೌರಾಣಿಕವಾಗಿ ವನವಾಸದ ಸಂಖ್ಯೆ ಕೂಡ.
ಕತೆಗಳೂ ಪ್ರಬಂಧಗಳೂ ಆತ್ಮಕಥೆಯ ತುಣುಕುಗಳೂ ಆಗಿರುವ ಈ ಬರಹಗಳನ್ನು ಪ್ರಬಂಧಗತೆಗಳು ಎನ್ನಬಹುದು. ಇವನ್ನು ಓದುವಾಗ ಕುವೆಂಪು ಅವರ `ಮಲೆನಾಡಿನ ಚಿತ್ರಗಳು’ ಕಾರಂತರ `ಹಳ್ಳಿಯ ಹತ್ತು ಸಮಸ್ತರು’ ಮತ್ತು ಗೊರೂರ `ಬೈಲುಹಳ್ಳಿಯ ಸರ್ವೆ’ ನೆನಪಾಗುತ್ತವೆ. ಈ ಮೂವರೂ ಲೇಖಕರು ತಾವಿದ್ದ ಪ್ರದೇಶವೊಂದರ ವಿಶಿಷ್ಟ ಅನುಭವಗಳನ್ನು ಜೀವನಪ್ರೀತಿಯಿಂದಲೂ ವಿಮರ್ಶೆಯಿಂದಲೂ ತಮಾಷೆಯಿಂದಲೂ ನೋಡುತ್ತ ಬರೆದವರು. ರಮ್ಯವಾಗಿ ಹಳ್ಳಿಗಳನ್ನು ಕಾಣಿಸುವ ಗೊರೂರರಿಗೆ ಹೋಲಿಸಿದರೆ, ಕಾರಂತರು ಗ್ರಾಮೀಣ ಬದುಕಿನಲ್ಲಿ ನಡೆಯುತ್ತಿದ್ದ ಪಲ್ಲಟಗಳನ್ನು ಕಟುವ್ಯಂಗ್ಯದಲ್ಲಿ ಹಿಡಿದಿಟ್ಟರು. ಕುವೆಂಪು ಅವರಲ್ಲಿ ರಮ್ಯತೆ ಮತ್ತು ವಾಸ್ತವಿಕ ನಿಷ್ಠುರತೆಗಳೆರಡೂ ಒಂದು ಹದದಲ್ಲಿ ಮಿಳಿತವಾಗಿವೆ. ಈ ಪರಂಪರೆಯನ್ನು ತೇಜಸ್ವಿ ಒಂದು ಬಗೆಯಲ್ಲಿ ಮುಂದುವರೆಸಿದರೆ, ಇನ್ನೊಂದು ನೆಲೆಯಲ್ಲಿ ಸುರೇಶ್ ಮುಂದುವರಿಸಿದಂತೆ ಇಲ್ಲಿನ ಕಥನಗಳಿವೆ. ಇವು ಗ್ರಾಮೀಣ ಪ್ರದೇಶದಲ್ಲಿ ರೈತಾಪಿ ಬದುಕು, ಎಂತಹ ಸಮಸ್ಯೆಗಳ ಸುಳಿಗಳಲ್ಲಿ ಸಿಲುಕಿಕೊಂಡಿದೆ ಎಂಬುದನ್ನು ಕಾಣಿಸುವಂತಹವು; ಬಿಗಡಾಯಿಸಿದ ಗ್ರಾಮಭಾರತದ ಮೇಲೆ ಅಪೂರ್ವ ನೋಟ ಚೆಲ್ಲುವುಂತಹವು. ಇಲ್ಲಿರುವ ಜೀವನ ಚಿತ್ರಗಳಿಗೂ ಕುವೆಂಪು-ಕಾರಂತ-ಗೊರೂರು-ತೇಜಸ್ವಿ ಕಟ್ಟಿಕೊಡುವ ಚಿತ್ರಗಳಿಗೂ ಕುಮಾರಧಾರೆ ತುಂಗೆಯಷ್ಟು ಅಂತರವಿದೆ.
ಇಲ್ಲಿನ ಕಥನಗಳಲ್ಲಿ  ಬೇಸಾಯವು ನರಕವಾಗಿ ಪರಿಣಮಿಸಿರುವ  ಜರ್ಜರಿತ ಗ್ರಾಮಭಾರತದ ಒಂದು ಭಿತ್ತಿಯಿದೆ. ಈ ಭಿತ್ತಿಯ ಮೇಲೆ ಮನುಷ್ಯ ಮನುಷ್ಯರ ನಡುವೆ, ಹಳ್ಳಿ-ಪೇಟೆಗಳ ಹಾಗೂ ಮನುಷ್ಯ-ನಿಸರ್ಗದ ನಡುವೆ ಬದಲಾಗುತ್ತಿರುವ ಸಂಬಂಧದ ಚಿತ್ರಗಳಿವೆ. ಇದೇ ಸೀಮೆಯ ಪರಿಸರದ ಬದುಕನ್ನು ಮುಕ್ಕಾಲು ಶತಮಾನದ ಹಿಂದೆ ಕಟ್ಟಿಕೊಟ್ಟ ಕಾರಂತರ `ಬೆಟ್ಟದ ಜೀವ’ದಲ್ಲಿ ಸೊಕ್ಕಿದ ನಿಸರ್ಗವನ್ನು ಪಳಗಿಸುವುದು ಮಾನವ ಸಾಹಸದ ಪ್ರತೀಕವಾಗಿತ್ತು.  ಆದರೆ ಇಲ್ಲಿ ನಿಸರ್ಗವೂ ಅದರ ಜತೆಗೆ ಬದುಕುತ್ತಿರುವ ಮನುಷ್ಯ ಬದುಕೂ ಎರಡನ್ನೂ ಸೊಕ್ಕಿದ ಮಾರುಕಟ್ಟೆ ಮತ್ತು ಅಧಿಕಾರಶಾಹಿಗಳು ಪಳಗಿಸಿವೆ. ಈ ಕಥನಗಳ ವಿಶಿಷ್ಟತೆಯೆಂದರೆ, ಕಾಡು-ನಾಡುಗಳ ನಡುವೆ ಹೊಯ್ದಾಡುವ ರೈತರ ಬದುಕನ್ನು, `ಸಣ್ಣ’ `ಕ್ಷುದ್ರ’ ಎನಿಸುವ ಸಂಗತಿಗಳ ಮೂಲಕ ಹಿಡಿದುಕೊಡುವುದು. ಧ್ವಜಾರೋಹಣ, ಸಾಲ, ಚಿಕುನ್‍ಗುನ್ಯ ಕಾಯಿಲೆ, ಔಷಧಿ ಸಿಂಪಡಿಸುವ ಪಂಪಿಗೆ ಪರದಾಟ, ಕೋವಿಸರೆಂಡರು, ಕಚೇರಿ ಹಾಗೂ ಬ್ಯಾಂಕುಗಳಿಗೆ ತಿರುಗುವುದು ಇತ್ಯಾದಿಗಳು, ಇಲ್ಲಿನ ಬದುಕಿನ ಸಹಜ ವಿವರಗಳೂ ಆಗಿವೆ; ಇಲ್ಲಿನ ವಿಲಕ್ಷಣ ಜೀವನದ ಲಯವನ್ನು ಕಾಣಿಸುವ ರೂಪಕಗಳೂ ಆಗಿವೆ. ತೇಜಸ್ವಿಯವರ ಹಾಗೆ ಸುರೇಶ್ ಕೂಡ ನಾಗರಿಕಪ್ರಜ್ಞೆಯ ಮೂಲಕ ಗ್ರಾಮೀಣ ಲೋಕವನ್ನು ಕಾಣಿಸುವವರು. ಇಬ್ಬರೂ ಕಾಡು-ನಾಡುಗಳ ಅಂಚಿನಲ್ಲಿ ಜೀವಿಸುತ್ತಿರುವ ಮನುಷ್ಯರ ಲಯತಪ್ಪಿರುವ ಬದುಕನ್ನು ಹುಡುಕಿದವರು. ಈ ಲಯಗೆಟ್ಟ ಬದುಕಿನಲ್ಲಿ ಜನರ ಜಾತಿಮತಗಳ ಪಾತ್ರವೂ ಇದೆ; ರೋಗಗ್ರಸ್ತ ವ್ಯವಸ್ಥೆಯ ಪಾತ್ರವೂ ಇದೆ. ಇಲ್ಲಿ ಮನುಷ್ಯರಿಗೆ ಬರುವ ಕಾಯಿಲೆಯ ಚಿತ್ರಗಳು ಪರೋಕ್ಷವಾಗಿ ಸಮಾಜದವೂ ಆಗಿವೆ. ರೋಗವು ಸಾಮಾಜಿಕ ಪರಿಸರದ ರೂಪಕವಾಗಿದೆ- `ತಬರನಕಥೆ’ಯಲ್ಲಿ ಬರುವ ತಬರನ ಕಾಲಹುಣ್ಣಿನಂತೆ. ಇಲ್ಲಿನ ಜೀವನಕ್ರಮವನ್ನು ಹಿಡಿದಿಡುವ ಕೆಲವು ಉಲ್ಲೇಖಗಳಿವು:
ಅ. “ಸರ್ಕಾರ ಸಬ್ಸಿಡಿ ದರದಲ್ಲಿ ಮೈಲುತುತ್ತ ಕೊಡ್ತದಂತೆ, ಅರ್ಜಿ ಕೊಡಬೇಕಂತೆ  ಎಂಬ ಮಾತು, ಥೇಟು ಫ್ಯಾಂಟಮ್ ಕಥೆಗಳಲ್ಲಿ ಬರುವಂತೆ, ಸಂಜ್ಞೆ, ಕೆಮ್ಮು ಓಯ್ ಮುಖಾಂತರ ಮನೆಮನೆ ತಲುಪಿತು. ಇಂಥಾ ವಾರ್ತೆಗಳು ಹೇಗಿರುತ್ತವೆಂದರೆ, ಯಾರೂ ಸರಿಯಾಗಿ ವಿವರ ಗ್ರಹಿಸಿರುವುದೂ ಇಲ್ಲ, ಕೇಳುವುದೂ ಇಲ್ಲ. ಯಾರಿಗೆ ಏನು ಯಾವಾಗ ಇತ್ಯಾದಿ ಬಗ್ಗೆ ಹೇಳಿದವನಲ್ಲೂ ಪೂರ್ತಿ ಮಾಹಿತಿ ಇರುವುದಿಲ್ಲ; ಕೇಳಿದವನಿಗೆ ತಾಳ್ಮೆಯೂ ಇರುವುದಿಲ್ಲ.’’
ಆ. “ನಮ್ಮ ಆಸುಪಾಸಿನಲ್ಲಿ ಮೊದಲು ಕೋವಿ ಲೈಸನ್ಸ್ ಬಂದದ್ದು ಶಿವಯ್ಯನ ಅಪ್ಪನಿಗೆ. ಅವನೇನು ಅದನ್ನು ಬಳಸಿದ ಉದಾಹರಣೆ ಇಲ್ಲ. ಕೋವಿನಳಿಗೆಯಲ್ಲಿ ಗುಬ್ಬಚ್ಚಿ ಗೂಡು ಕಟ್ಟುವ ಬಗ್ಗೆ ನಮ್ಮ ಶಾಂತಿಪ್ರಿಯ ಕವಿಗಳು ಬರೆದಿದ್ದು ಆ ಕೋವಿಯನ್ನು ನೋಡಿಯೇ ಇರಬೇಕು. ಅದರೊಳಗೆ ಕುಂಬಾರ ಹುಳ ಇನ್ನಿತ್ಯಾದಿ ಹುಳಗಳು ತಿಂಗಳುಗಟ್ಟಲೆ ವಾಸ ಮಾಡುತ್ತಿದ್ದವು.’’
ಇ. “ಲಗುಬಗೆಯಲ್ಲಿ ನಾನೂ ಎದ್ದು ತೋಟಗಾರಿಕಾ ಇಲಾಖೆಗೆ ಹೋದರೆ, ಕೊಳೆತ ಇಲಿಮರಿಗೆ ಇರುವೆ ಮುತ್ತಿದ ಹಾಗೆ ರೈತರು. ಒಳಗೆ ಇಣುಕಿದರೆ ಅಲ್ಲೊಂದು ಗೋಂದು, ಪೇಪರು ಮೆತ್ತಿಕೊಂಡ ಮೇಜಿನ ಹಿಂದೆ ಕಂಗಾಲಾಗಿ ಕೂತ ಕ್ಲರ್ಕ್; ಅವನ ಪಕ್ಕದ ಬೀರುವಿನೆದುರು ಇನ್ನೊಂದು ಟೇಬಲ್; ಅದರ ಮುರುಕು ಸ್ಟೀಲ್ ಕುರ್ಚಿಯಲ್ಲಿ ಪೆಕರುಪೆಕರಾಗಿ ಕೂತ ಒಂದು ಹುಡುಗಿ.’’
 ಈ ಚಿತ್ರಗಳು ಸಹಜಲಯ ಕಳೆದುಕೊಂಡ ಬದುಕಿನವು. ಕೊನೆಯ ಚಿತ್ರ ಸ್ವಾರಸ್ಯಕರವಾಗಿದೆ. ಇಲ್ಲಿ ವ್ಯವಸ್ಥೆಯ ಪ್ರತಿನಿಧಿಯಾದ ಕ್ಲರ್ಕು ಸಹ ಕಂಗಾಲಾಗಿದ್ದಾನೆ. ಅವನ ಪಕ್ಕ ಮುರುಕು ಕುರ್ಚಿ ಮತ್ತು ಪೆಕರಾಗಿ ಕುಳಿತ ಹುಡುಗಿಯ ಚಿತ್ರಗಳು ಇದನ್ನು ಸೂಚಿಸುತ್ತಿವೆ. ಇಲ್ಲಿ ಬಲಿಗಾರ ಹಾಗೂ ಬಲಿಪಶುವಿನ ನಡುವೆ ಬಹಳ ಫರಕಿಲ್ಲ. ಇಲ್ಲಿ ಅಧಿಕಾರ ದರ್ಪ ಗೌಡಿಕೆಗಳ ಸಂಕೇತವಾಗಿರುವ ಕೋವಿಯ ಶೋಚನೀಯ ಅವಸ್ಥೆ ಒಂದು ರೂಪಕದಂತಿದೆ. ಇದೊಂದು ತರಹ ಕಾಫ್ಕಾ ಚಿತ್ರಿಸುವ ರೋಗಗ್ರಸ್ತ ಸಮಾಜ; ಇಲ್ಲಿನ ಪಾತ್ರಗಳು ಖಾಸನೀಸರ `ತಬ್ಬಲಿಗಳು’ ಕತೆಯ ಪಾತ್ರಗಳನ್ನು ನೆನಪಿಸುತ್ತವೆ. ಇಲ್ಲಿ ಲಯಗೆಟ್ಟ ಸನ್ನಿವೇಶಕ್ಕೆ ಕಾರಣವು ಅಸ್ಪಷ್ಟವಾಗಿರುವುದರಿಂದ, ಯಾರನ್ನೋ ಅಪರಾಧಿ ಸ್ಥಾನದಲ್ಲಿಟ್ಟು ದೂರುವ ಅಥವಾ ಬಿಡುಗಡೆಗೆ ಸರಳ ಪರಿಹಾರ ಕೊಡುವ ದನಿಯೂ ಕಥನಗಳಿಗಿಲ್ಲ. ಜಟಿಲಗೊಂಡಿರುವ ಇಲ್ಲಿನ ಬದುಕೇ ಹೀಗಿದೆ ಎಂದು ಅವು ಒಂದು ಬಗೆಯ ವಿಷಾದಕರ ದಾರ್ಶನಿಕ ದೃಷ್ಟಿಯಲ್ಲಿ ಕಾಣಿಸುತ್ತ ಹೋಗುತ್ತವೆ. ಕಥನಗಳಲ್ಲಿ ಒಂದು ಬಗೆಯ ದುರಂತ ಪ್ರಜ್ಞೆ ಆವರಿಸಿದ್ದು, ಇಲ್ಲ್ಲಿ ಬರುವ ನಿರೂಪಕ ಪಾತ್ರವು ಈ ದುರಂತಗಳಿಗೆ ಸಾಕ್ಷಿಯಂತಿದೆ. ನಾಗರಿಕ ಲೋಕದ ಚಿಂತನಶೀಲತೆಯೂ ರೈತಾಪಿಗಳ ಭಾಗವಾಗಿ ಬಂದಿರುವ ಕಟುವಾಸ್ತವಿಕ ಅನುಭವವೂ ಬೆರೆತಿರುವ ನಿರೂಪಕನಿಗೆ, ಹೀಗಾಗಿಯೇ ಹಳ್ಳಿಯ ಜನರಿಗೆ ಇರುವ ಕಿಂಚಿತ್ ಮನಸ್ಥಾಸ್ಥ್ಯವೂ ಇಲ್ಲವಾಗಿದೆ. ಸಂಕಟಗಳನ್ನು ವಿಷಕಂಠನಂತೆ ನುಂಗಿಕೊಂಡು ಸುತ್ತಲಿನ ವಿದ್ಯಮಾನಗಳನ್ನು ನೋಡುತ್ತಿರುವ ವಾಸ್ತವವಾದಿಯೊಬ್ಬನ ಮುಗುಳ್ನಗೆಯ ಹಾಗೆ ಇಲ್ಲಿನ ನೋಟಗಳಿವೆ. ಬೆಂದಜೀವವೊಂದು ಮತ್ತೊಬ್ಬರ ಪಾಡನ್ನು ತಣ್ಣಗೆ ವ್ಯವಧಾನದಲ್ಲಿ ನೋಡುವಂತಿರುವ ಈ ನೋಟದಲ್ಲಿ ಎಲ್ಲ ಮನುಷ್ಯರ ಒದ್ದಾಟಕ್ಕೆ ಮಿಡಿಯುವ ಅಂತಃಕರಣವಿದೆ. ಆದರೆ ಈ ಮಾನವತಾವಾದಿ ನೋಟವು ಏಕಮುಖವಾಗದಂತೆ ಅವನಲ್ಲಿರುವ ತಮಾಷೆ ಹಾಗೂ ವ್ಯಂಗ್ಯದ ದೃಷ್ಟಿಕೋನಗಳು ತಡೆದಿವೆ. ಇಲ್ಲಿನ ದಾರ್ಶನಿಕತೆ ಹೊರಗಿನಿಂದ ಬಂದುದಲ್ಲ; ಸ್ಥಳೀಯ ಪರಿಸರದ ಗಾಢ ಅನುಸಂಧಾನದಿಂದ ಸೂಕ್ಷ್ಮವಾಗಿ ಗಮನಿಸುವ ಕ್ರಮದಿಂದಲೇ ಹುಟ್ಟಿದ್ದು. ಹೀಗಾಗಿಯೇ ಇಲ್ಲಿನ ಬದುಕು ತನ್ನೆಲ್ಲ ಬಿಕ್ಕಟ್ಟುಗಳೊಳಗೆ ಜೀವಂತವಾಗಿ ಉಸಿರಾಡುತ್ತಿದೆ. ಅದಕ್ಕಿರುವ ಹಲವು ಮುಖಗಳಿಗೆ ತಣ್ಣಗೆ ಕನ್ನಡಿ ಹಿಡಿಯುವಂತೆ ಈ ಕಥನಗಳು ಹುಟ್ಟಿವೆ. ಕನ್ನಡಿಯ ಬಿಂಬಗಳು ಎಂಬ ಕಥನದಲ್ಲಿರುವ ಕನ್ನಡಿ ತಾನೇ ಒಂದು ರೂಪಕವಾಗಿದೆ.
ಈ ಕಥನಗಳ ವಿಶೇಷತೆಯೆಂದರೆ, ಕೊರೆದು ತೆಗೆದಂತಹ ಚಿತ್ರಗಳು. ಬದುಕನ್ನು ಮೂರ್ತವಾಗಿ ಕಾಣಿಸುವ ಭಾಷೆ. ಒಂದು ರೂಪಕ ಇಲ್ಲವೇ ಉಪಮೆ ಹೇಳಿಬಿಡುವ ಸಂಕ್ಷಿಪ್ತ ಶೈಲಿ. ಜನರ ಮಾತುಕತೆಯಲ್ಲಿ ಮೈತಳೆದು ಹೊಮ್ಮುವ ಸುಳ್ಯ ಪರಿಸರದ ಜೀವಂತ ಭಾಷೆ. ಈ ಕಥನಗಳಲ್ಲಿ ದೊಡ್ಡ ಕಾದಂಬರಿಗೆ ಬೇಕಾದ ವಿವರಗಳಿವೆ. ಅನುಭವಗಳನ್ನು ಒಂದೆಡೆ ಮಡುಗಟ್ಟಿಸಿಕೊಡುವ ಕೃತಿಯೊಂದನ್ನು ಕೊಡಲು ಸುರೇಶ್ ಅವರಿಗೆ, ಅವರ ಚೆಲ್ಲಿದ ವ್ಯಕ್ತಿತ್ವವೇ ತೊಡಕೊಡ್ಡಿದಂತಿದೆ.
ಸಾಹಿತ್ಯದ ವಿದ್ಯಾರ್ಥಿಯಾದ ಸುರೇಶ್ ತಮ್ಮನ್ನು ಜೀವಪರ ಚಳವಳಿಗಳಲ್ಲಿ ರೂಪುಗೊಂಡವರು; ಅನುವಾದ ಕವಿತೆ ಕತೆ ಅಂಕಣ ಪ್ರಬಂಧ ಮುಂತಾದ ಪ್ರಕಾರಗಳಲ್ಲಿ ಕೆಲಸ ಮಾಡಿದವರು; ಅವರ ಅಂಕಣಗಳು ಸಮಕಾಲೀನ ವಿದ್ಯಮಾನಗಳಿಗೆ ಹುಟ್ಟಿದ ತೀಕ್ಷ್ಣವಾದ ಸ್ಪಂದನಗಳಾಗಿವೆ. ಸಾಮಾಜಿಕ ಜಾಲತಾಣದಲ್ಲಿ ಅವರು ಮಾಡುವ ಹರಿತವೂ ವ್ಯಂಗ್ಯವೂ ಆದ ಟಿಪ್ಪಣಿಗಳು ಪ್ರಜಾಪ್ರಭುತ್ವವನ್ನು ಜೀವಂತವಿಡುವ ಅವರ  ಕ್ರಿಯಾಶೀಲತೆಯ ಭಾಗವಾಗಿವೆ. ಅವರ ಬರಹಗಳÀಲ್ಲಿ ಪ್ರಖರವಾದ ಆರ್ಥಿಕ-ರಾಜಕೀಯ ಪ್ರಜ್ಞೆಯೊಂದು ಸದಾ ತುಡಿಯುತ್ತಿರುತ್ತದೆ. ಪ್ರಭುತ್ವವನ್ನು ವಿಮರ್ಶಾತ್ಮಕವಾಗಿ ನೋಡುವುದು; ಜನರ ದೈನಿಕ ಬಾಳಿನ ಕಷ್ಟ ಮತ್ತು ಸಂಭ್ರಮಗಳಿಗೆ ಮಿಡಿಯುವುದು; ಸಣ್ಣಪುಟ್ಟ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸುವುದು; ತುಂಟತನದ ಲವಲವಿಕೆಯಲ್ಲಿ ಲೋಕವನ್ನು ಕಾಣಿಸುವುದು; ಸಾಮಾನ್ಯ ಎನಿಸುವ ವಿವರಗಳಲ್ಲೇ ಆಳವಾದ ದಾರ್ಶನಿಕತೆ ಹೊಮ್ಮಿಸುವುದು ಅವರ ಬರಹಗಳ ಚಹರೆ. ಈ ಕಥನಗಳಲ್ಲಿ ಈ ಚಹರೆಗಳಿವೆ. ಎಲ್ಲರ ನೋವಿಗೆ ಮಿಡಿವ ಜಾತ್ಯತೀತವೂ ಜೀವಪರವೂ ಆದ ಮನಸ್ಸೊಂದು ನಮ್ಮ ಕಾಲದ ತಲ್ಲಣಗಳನ್ನು ಹೀಗೆ ಬಗೆ ಕಲಕುವಂತೆ ಹಿಡಿದಿಟ್ಟ ಬರಹಗಳನ್ನು ನಾನು ಈಚೆಗೆ ಹೆಚ್ಚು ಓದಲಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...