Homeಅಂಕಣಗಳುಆರ್‍ಬಿಐ-ಸಿಬಿಐ ಸ್ವತಂತ್ರ ಸಂಸ್ಥೆಗಳ ಸ್ವಾಯತ್ತೆ-ನಾಪತ್ತೆ

ಆರ್‍ಬಿಐ-ಸಿಬಿಐ ಸ್ವತಂತ್ರ ಸಂಸ್ಥೆಗಳ ಸ್ವಾಯತ್ತೆ-ನಾಪತ್ತೆ

- Advertisement -
- Advertisement -

ಶ್ರೀನಿವಾಸ ಕಾರ್ಕಳ |

ಜನವರಿ 1, 2019 ರಂದು ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದÀ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು, ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಅವರ ರಾಜೀನಾಮೆಯ ಬಗ್ಗೆ ಸಂದರ್ಶಕರ ಒಂದು ಪ್ರಶ್ನೆಗೆ ಉತ್ತರಿಸುತ್ತ, ‘ಊರ್ಜಿತ್ ಪಟೇಲ್ ಅವರು ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ, ರಾಜೀನಾಮೆ ನೀಡುವ ಬಯಕೆಯನ್ನು ಅವರು ಕೆಲವು ತಿಂಗಳ ಹಿಂದೆಯೇ ವ್ಯಕ್ತಪಡಿಸಿದ್ದರು’ ಎಂದು ಹೇಳಿದರು. ಈ ಮಾತುಗಳನ್ನು ಕೇಳಿದ ಯಾರಿಗೂ ಅಂತಹ ಅಚ್ಚರಿಯೇನೂ ಆಗಲಿಲ್ಲ. ಯಾಕೆಂದರೆ ಇದು ಪ್ರಧಾನಿ ಹೇಳಿದ ಅಪ್ಪಟ ಸುಳ್ಳು ಎನ್ನುವುದು ಎಲ್ಲರಿಗೂ ಗೊತ್ತಿತ್ತು.
ಡಿಸೆಂಬರ್ 10, 2018 ರಂದು ಊರ್ಜಿತ್ ಪಟೇಲ್ ಅವರು ರಾಜೀನಾಮೆ ನೀಡಿದ ಬೆನ್ನಿಗೇ ಕೆಲ ನಿರೀಕ್ಷಿತ ಪ್ರಹಸನಗಳು ನಡೆದವು. ತಾನು ವೈಯಕ್ತಿಕ ಕಾರಣಕ್ಕೆ ಹುದ್ದೆ ತೊರೆಯುತ್ತಿದ್ದೇನೆ ಎಂದು ಪಟೇಲ್ ಅವರು ಹೇಳಿದರೆ, ತಕ್ಷಣ ಅದಾಗಲೇ ಸಿದ್ಧಪಡಿಸಿಟ್ಟುಕೊಂಡಿದ್ದ ಹೇಳಿಕೆಗಳನ್ನು ಹಣಕಾಸು ಮಂತ್ರಿ ಜೇಟ್ಲಿ ಮತ್ತು ಪ್ರಧಾನಿ ಮೋದಿ ಬಿಡುಗಡೆ ಮಾಡಿದರು. ರಾಜೀನಾಮೆಯ ಸುಳಿವೇ ಅವರಿಗೆ ಇಲ್ಲವೇನೋ ಎಂಬಂತಿದ್ದ ಆ ಹೇಳಿಕೆಗಳಲ್ಲಿ ಊರ್ಜಿತ್ ಪಟೇಲ್ ಅವರ ಸೇವೆಯನ್ನು ಕೊಂಡಾಡಲಾಗಿತ್ತು ಕೂಡಾ.
ಇಲ್ಲಿ ಒಂದು ಮುಖ್ಯ ವಿಷಯವನ್ನು ಗಮನಿಸಬೇಕು. ನರೇಂದ್ರ ಮೋದಿಯವರು ತಮ್ಮ ಲೋಕಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಅನೇಕ ಭರವಸೆಗಳನ್ನು ದೇಶದ ಮತದಾರರಿಗೆ ಕೊಟ್ಟಿದ್ದರು. ಆಕರ್ಷಕ ಮಾತುಗಾರನಾಗಿದ್ದರಿಂದ ಅವರ ಆ ಭರವಸೆಯ ಮಾತುಗಳು ನಂಬುವಂತಿದ್ದವು; ದೇಶದ ಸಾಮಾನ್ಯ ಜನ ನಂಬಿದ್ದರು ಕೂಡಾ. ತಮ್ಮ ಮಾತಿಗೆ ಅನುಗುಣವಾಗಿಯೇ ಸರಕಾರ ರಚನೆಯಾಗುತ್ತಲೇ ಮೋದಿಯವರು ಕೆಲ ನೀತಿ ನಿರ್ಧಾರಕ ಸಂಸ್ಥೆಗಳ ಮಹತ್ವದ ಸ್ಥಾನಗಳಲ್ಲಿ ಆಯಾ ಕ್ಷೇತ್ರದಲ್ಲಿ ಪರಿಣತ ಎನಿಸಿಕೊಂಡಿರುವವರು ಎನ್ನಲಾದವರನ್ನು ನೇಮಕ ಮಾಡಿದ್ದರು. ಹಾಗೆ ನೇಮಕಗೊಂಡ ಬಹುತೇಕ ಮಂದಿ ಕಾರ್ಪೊರೇಟ್ ಉದ್ಯಮಿಗಳ ಹಿತಾಸಕ್ತಿಯ ಪರ ಒಲವು ಇರುವವರೇ ಹೊರತು ಬಡವರ ಪರ ಒಲವು ಇದ್ದವರಲ್ಲ ಎನ್ನುವುದು ಬೇರೆ ವಿಚಾರ.
ಮಹತ್ವದ ಸ್ಥಾನಗಳಲ್ಲಿ ಪ್ರಸಿದ್ಧರೂ, ಪರಿಣತರೂ ಆದವರು, ಅಲ್ಲದೆ ಕ್ರಿಯಾಶೀಲತೆಯೇ ಮೂರ್ತಿವೆತ್ತಂತಿರುವ ಪ್ರಧಾನಿ, ಈ ಎಲ್ಲ ಕಾರಣಕ್ಕೆ ದೇಶಕ್ಕೆ ‘ಅಚ್ಚೇ ದಿನ’ ಬಂದೇ ಬಿಡುತ್ತದೆ ಎಂದು ಜನ ಕಾಯುತ್ತಿದ್ದ ಹೊತ್ತಿನಲ್ಲಿಯೇ ಹಾಗೆ ಮಹತ್ವದ ಸ್ಥಾನಗಳಲ್ಲಿ ಕುಳಿತಿದ್ದವರು ಒಬ್ಬೊಬ್ಬರಾಗಿ ಹುದ್ದೆ ತೊರೆಯಲಾರಂಭಿಸಿದರು. ಆರ್ಥಿಕ ವಿಚಾರಗಳಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಹೊಂದಿರುವ ರಘುರಾಮ ರಾಜನ್ ಆರ್‍ಬಿಐ ಗವರ್ನರ್ ಆಗಿ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಲಿಲ್ಲ (ಅವರನ್ನು ಮುಂದುವರಿಸುವ ಇಚ್ಛೆ ಸರಕಾರಕ್ಕೂ ಇರಲಿಲ್ಲ). ನೀತಿ ಆಯೋಗದ ಉಪಾಧ್ಯಕ್ಷ ಖ್ಯಾತ ಅರ್ಥ ಶಾಸ್ತ್ರಜ್ಞ ಅರವಿಂದ ಪಣಗರಿಯಾ, ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಹುದ್ದೆ ತ್ಯಜಿಸಿದರು. ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಸುರ್ಜಿತ್ ಭಲ್ಲಾ ಕೂಡಾ ರಾಜಿನಾಮೆ ನೀಡಿದರು. ಕೊನೆಗೆ ವರ್ಷದ ಕೊನೆಯ ತಿಂಗಳಾಗುವಾಗ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ (ಮತ್ತು ಡೆಪ್ಯುಟಿ ಗವರ್ನರ್ ವಿರಾಲ್ ಆಚಾರ್ಯ) ಕೂಡಾ ರಾಜೀನಾಮೆ ನೀಡಿ ಅಚ್ಚರಿಗೊಳಿಸಿದರು. ಅಚ್ಚರಿ ಏಕೆಂದರೆ ಹಿಂದೆ ರಿಸರ್ವ್ ಬ್ಯಾಂಕ್ ಗವರ್ನರ್ ಹೀಗೆ ನಡುವೆಯೇ ಹುದ್ದೆ ತ್ಯಜಿಸಿದ ಉದಾಹರಣೆ ಇಲ್ಲವೆಂಬಷ್ಟು ಕಡಿಮೆ.
ವಿಶೇಷವೆಂದರೆ, ಹೀಗೆ ರಾಜೀನಾಮೆ ನೀಡಿದ ಬಹುತೇಕ ಎಲ್ಲರೂ ಇದಕ್ಕೆ ವೈಯಕ್ತಿಕ ಕಾರಣವನ್ನು ಮುಂದೊಡ್ಡಿದರು. ಆದರೆ ಸಾರ್ವಜನಿಕ ಅಧಿಕಾರಿಯೊಬ್ಬ ಸುಮ್ಮನೆ ರಾಜೀನಾಮೆ ನೀಡುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿ ಸರ್ವಾಧಿಕಾರಿ ಸರಕಾರವೊಂದು ಎಲ್ಲರನ್ನೂ ನಿಯಂತ್ರಿಸ ಹೊರಟ ವಿಷಯ ಗಮನಕ್ಕೆ ಬಾರದಿರದು.
2018ರ ವರ್ಷಾರಂಭದಲ್ಲಿ ಅತ್ಯಂತ ವಿರಳ ವಿದ್ಯಮಾನವೊಂದರಲ್ಲಿ ಸುಪ್ರೀಂ ಕೋರ್ಟಿನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿಯೊಂದನ್ನು ನಡೆಸಿ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿನ ಶಕ್ತಿಯೊಂದು ನಿಯಂತ್ರಿಸುತ್ತಿರುವ ಅನುಮಾನ ವ್ಯಕ್ತಪಡಿಸಿದ್ದರು. ಕೆಲ ತಿಂಗಳ ಬಳಿಕ ಸಿಬಿಐ ಮುಖ್ಯಸ್ಥರ ನಡುವೆ, ವಾಸ್ತವದಲ್ಲಿ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ಮತ್ತು ಮೋದಿ ಸರಕಾರದ ನಡುವೆ ಭಯಂಕರ ಸಂಘರ್ಷ ಸಹಿತ ನಾಟಕೀಯ ಘಟನೆಗಳು ನಡೆದವು. ವಿವಾದ ಕೋರ್ಟ್ ಮೆಟ್ಟಿಲೇರಿತು ಕೂಡಾ. ಇಂದಿಗೂ ಆ ವಿವಾದ ಬಗೆಹರಿದಿಲ್ಲ.
ದೇಶದಲ್ಲಿ ಚುನಾವಣಾ ಆಯೋಗ, ರಿಸರ್ವ್‍ಬ್ಯಾಂಕ್, ಸಿಬಿಐ ಮೊದಲಾದ ಅನೇಕ ಸ್ವಾಯತ್ತ ಸಂಸ್ಥೆಗಳಿವೆ. ಅವು ನಿಜವಾಗಿಯೂ ಸ್ವಾಯತ್ತ ಸಂಸ್ಥೆಗಳಾಗಿದ್ದವೇ? ಎಂದು ಪ್ರಶ್ನಿಸಿದರೆ ಉತ್ತರ ಸಮಾಧಾನಕರವಾಗಿರದು. ಕಾಲಕಾಲಕ್ಕೆ ಪ್ರತಿಯೊಂದು ಸರಕಾರವೂ ಅವನ್ನು ನಿಯಂತ್ರಿಸಲು ಯತ್ನಿಸಿವೆ. ಸಿಬಿಐ ಯನ್ನು ಯುಪಿಎ ಸರಕಾರದ ಕಾಲದಲ್ಲಿ ‘ಪಂಜರದ ಗಿಣಿ’ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ ಆಯಾ ಸ್ಥಾನಗಳಲ್ಲಿ ಕುಳಿತ ವ್ಯಕ್ತಿಗಳ ದಿಟ್ಟತನ ಆಧರಿಸಿ ಈ ಸಂಸ್ಥೆಗಳು ತಮ್ಮ ಮಿತಿಯಲ್ಲಿಯೇ ಗರಿಷ್ಠ ಕೆಲಸ ಮಾಡಿದ ಉದಾಹರಣೆಗಳೂ ಇವೆ (ಟಿ ಎನ್ ಶೇಷನ್ ಕಾಲದಲ್ಲಿ ಚುನಾವಣಾ ಆಯೋಗ ಎನ್ನುವುದೊಂದಿದೆ ಎನ್ನುವುದು ದೇಶದ ಜನರಿಗೆ ಅನಿಸಿತ್ತು).
ನರೇಂದ್ರ ಮೋದಿಯವರ ಆಡಳಿತ ಕಾಲದಲ್ಲಿ ದೇಶದ ಸಾಂವಿಧಾನಿಕ ಸಂಸ್ಥೆಗಳು ಎದುರಿಸಿದಷ್ಟು ಬೆದರಿಕೆಯನ್ನು, ಅನುಭವಿಸಿದಷ್ಟು ಹಾನಿಯನ್ನು ಪ್ರಾಯಶಃ ಅದರ ಹಿಂದಿನ ಯಾವ ಸರಕಾರದ ಕಾಲದಲ್ಲಿಯೂ ಅನುಭವಿಸಿರಲಿಲ್ಲವೇನೋ. ಚುನಾವಣಾ ಆಯೋಗ, ಆರ್‍ಬಿಐ, ಸಿಬಿಐ, ಸಿವಿಸಿ, ಸಿಐಸಿ, ಸಿಎಜಿ ಹೀಗೆ ಪ್ರತಿಯೊಂದು ಸಂಸ್ಥೆಯನ್ನೂ ದುರ್ಬಲಗೊಳಿಸಲಾಯಿತು. ಅವುಗಳ ವಿಶ್ವಾಸಾರ್ಹತೆಯನ್ನು ಮಣ್ಣುಪಾಲು ಮಾಡಲಾಯಿತು. ಭ್ರಷ್ಟಾಚಾರದ ವಿರುದ್ಧ ಭಾರೀ ಮಾತನಾಡಿದ, ಭ್ರಷ್ಟಾಚಾರದ ವಿರುದ್ಧದ ಅಭಿಯಾನದ ಮೂಲಕವೇ ಅಧಿಕಾರದ ಪಟ್ಟವೇರಿದ ಪ್ರಧಾನಿಗಳು ಇಂದಿಗೂ ಲೋಕಪಾಲ ನೇಮಕ ಮಾಡಿಯೇ ಇಲ್ಲ.
ಮತ್ತೆ ರಿಸರ್ವ್ ಬ್ಯಾಂಕ್‍ನ ಅನಿರೀಕ್ಷಿತ ಬೆಳವಣಿಗೆಗಳ ವಿಷಯಕ್ಕೆ ಬರುವುದಾದರೆ, ವಾಸ್ತವದಲ್ಲಿ ಈ ತಿಕ್ಕಾಟ ಆರಂಭವಾದುದು ಊರ್ಜಿತ್ ಪಟೇಲ್ ಕಾಲದಲ್ಲಿ ಅಲ್ಲ. ರಘುರಾಮ ರಾಜನ್ ಕಾಲದಲ್ಲಿಯೇ ಸರಕಾರ ಮತ್ತು ಆರ್‍ಬಿಐ ನಡುವೆ ತಿಕ್ಕಾಟ ಆರಂಭವಾಗಿತ್ತು. ಸರಕಾರದ ನಿರ್ದೇಶನಕ್ಕೆ ಜೀ ಹುಜೂರ್ ಎನ್ನಲು ರಾಜನ್ ಸುತರಾಂ ಒಪ್ಪಿರಲಿಲ್ಲ.
ಹಾಗೆ ನೋಡಿದರೆ, ಉಳಿದ ಹೆಚ್ಚಿನ ಸಂಸ್ಥೆಗಳಿಗೆ ಹೋಲಿಸಿದರೆ ಹಿಂದಿನಿಂದಲೂ ಆರ್‍ಬಿಐ ಬಹುಮಟ್ಟಿಗೆ ತನ್ನ ಸ್ವಾಯತ್ತೆಯನ್ನು ಕಾಪಾಡಿಕೊಂಡೇ ಬಂದಿತ್ತು. ಜಗತ್ತು ಆರ್ಥಿಕ ಹಿಂಜರಿತದ ಸುಳಿಗೆ ಸಿಕ್ಕಾಗಲೂ ಭಾರತದ ಬ್ಯಾಂಕುಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ದೇಶವನ್ನು ಆರ್ಥಿಕ ಸಂಕಟದ ಸುಳಿಗೆ ಸಿಲುಕದಂತೆ ನೋಡಿಕೊಳ್ಳುವಲ್ಲಿ ನಮ್ಮ ದೇಶದ ಕೇಂದ್ರೀಯ ಬ್ಯಾಂಕ್ (ಆರ್‍ಬಿಐ) ನ ಸ್ವಾಯತ್ತ ಸ್ವರೂಪವೇ ಕಾರಣ ಎಂದು ಕೊಂಡಾಡಲಾಗಿತ್ತು. ದೇಶದ ಹಣಕಾಸು ನೀತಿ, ಹಣದುಬ್ಬರ, ರುಪಾಯಿ ಬೆಲೆ, ಬ್ಯಾಂಕುಗಳ ನಿಭಾವಣೆ ಇತ್ಯಾದಿಗಳ ಬಗ್ಗೆ ಸದಾ ಎಚ್ಚರದ ಕಣ್ಣಿಡುತ್ತ ಕೆಲಸ ಮಾಡುತ್ತಿದ್ದ ಈ ಸಂಸ್ಥೆಯನ್ನು ತನಗೆ ಬೇಕಾದಂತೆ ನಿಯಂತ್ರಿಸಲು ಗರಿಷ್ಠ ಯತ್ನ ನಡೆದುದು ಮೋದಿ ಕಾಲದಲ್ಲಿ. ಈಗಾಗಲೇ ಉಲ್ಲೇಖಿಸಿದ ಹಾಗೆ ಸರಕಾರ ಹೇಳಿದಂತೆ ಕೇಳಲು ರಘುರಾಮ ರಾಜನ್ ನಿರಾಕರಿಸಿದಾಗ ಅವರೊಂದಿಗೆ ಮೊದಲ ಬಾರಿ ತಿಕ್ಕಾಟ ನಡೆಯಿತು. ಆನಂತರ ಬಂದ ಊರ್ಜಿತ್ ಪಟೇಲ್ ಅವರು ಮೋದಿಯವರು ಹೇಳಿದಂತೆ ಕೇಳುವವರು ಎಂದೇ ಭಾವಿಸಿ ಆರ್‍ಬಿಐ ಅಸ್ತಿತ್ವಕ್ಕೆ ಸಂಚಕಾರ ಬರುವುದು ಖಂಡಿತ ಎಂದು ಭಯಪಡಲಾಗಿತ್ತು. ಆದರೆ ರಘುರಾಮ ರಾಜನ್ ಅವರಂತೆಯೇ ಆರ್ಥಿಕ ವಿಚಾರಗಳಲ್ಲಿ ತುಂಬ ಅಧ್ಯಯನ ಮಾಡಿರುವ ಮತ್ತು ಪರಿಣತ ವ್ಯಕ್ತಿಯಾದುದರಿಂದ ಊರ್ಜಿತ್ ಪಟೇಲ್ ಕೂಡಾ ಸರಕಾರದ ಮುಂದೆ ಮಂಡಿಯೂರಲು ಒಪ್ಪಲಿಲ್ಲ. ಅಲ್ಲದೆ ಆರ್‍ಬಿಐ ಅಥವಾ ಹಣಕಾಸು ಮಂತ್ರಿ ಯಾರ ಸಲಹೆಯನ್ನೂ ಕೇಳದೆ ಯಾರಿಗೂ ಒಂದು ಸೂಚನೆ ನೀಡದೆ ಮೋದಿಯವರು ಸರ್ವಾಧಿಕಾರಿಯಂತೆ ತೆಗೆದುಕೊಂಡ ನೋಟು ನಿಷೇಧದ ತುಘಲಕ್ ನಿರ್ಧಾರದಿಂದ ಎಲ್ಲ ಟೀಕೆ, ಅವಮಾನಗಳನ್ನು ಅನುಭವಿಸಬೇಕಾಗಿ ಬಂದುದು ಇದೇ ಆರ್‍ಬಿಐ ಗವರ್ನರ್. ನಗದು ಕೊರತೆಯಿಂದ ಬಳಲಿದಾಗ, ಬ್ಯಾಂಕ್ ಅವ್ಯವಸ್ಥೆಯಿಂದ ತೊಂದರೆಯಾದಾಗ ಜನ ಹಿಡಿಶಾಪ ಹಾಕಿದ್ದು ಇದೇ ಆರ್‍ಬಿಐ ಗೆ.
ಊರ್ಜಿತ್ ಪಟೇಲ್ ಮತ್ತು ಸರಕಾರದ ನಡುವೆ ತಿಕ್ಕಾಟ ಉಂಟಾಗಲು ಎರಡು ಕಾರಣಗಳನ್ನು ಆರ್ಥಿಕ ಮತ್ತು ರಾಜಕೀಯ ಪಂಡಿತರು ಮುಂದಿಡುತ್ತಿದ್ದಾರೆ. ಮೊದಲನೆಯದಾಗಿ ದೇಶದ ಬ್ಯಾಂಕುಗಳು ಭಾರೀ ನಷ್ಟದಲ್ಲಿವೆ. ಉದ್ಯಮಗಳೂ ನಲುಗಿವೆ. ನಷ್ಟದಲ್ಲಿರುವ ಬ್ಯಾಂಕುಗಳನ್ನು ಸರಿಪಡಿಸುವುದು, ಅವ್ಯವಹಾರಗಳಿಗೆ ಅವರನ್ನು ಉತ್ತರದಾಯಿಯಾಗಿಸುವುದು, ಹಾಗೆಯೇ ಸಾಲ ಮರುಪಾವತಿಸದ ಉದ್ಯಮಗಳ ಮೇಲೆ ಕ್ರಮ ಜರುಗಿಸುವುದು ಪಟೇಲ್ ಅವರ ಯೋಚನೆಯಾದರೆ ನಷ್ಟ ಅನುಭವಿಸುತ್ತಿರುವ ಬ್ಯಾಂಕುಗಳ ಮೇಲೆ ಮತ್ತು ಉದ್ಯಮಗಳ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ಸಡಿಲಿಸಬೇಕು ಎನ್ನುವುದು ಸರಕಾರದ ಯೋಚನೆ. ಅಲ್ಲದೆ ಕೇಂದ್ರೀಯ ಬ್ಯಾಂಕ್ ಬಳಿ ಇರುವ 3.6 ಲಕ್ಷ ಕೋಟಿ ಹೆಚ್ಚುವರಿ ಮೀಸಲು ನಿಧಿಯ ಮೇಲೂ ಸರಕಾರಕ್ಕೆ ಕಣ್ಣು. ಆ ಹಣವನ್ನು ಬಳಸಿಕೊಂಡು ಬ್ಯಾಂಕ್‍ಗಳಿಗೆ ಮತ್ತು ಉದ್ಯಮಗಳಿಗೆ ನೆರವಾಗುವುದು, ದೇಶದ ವಿತ್ತೀಯ ಕೊರತೆಯನ್ನು ನಿಭಾಯಿಸಲು ಬಳಸುವುದು, ಹಾಗೆಯೇ ಚುನಾವಣಾ ವರ್ಷವಾದುದರಿಂದ ಜನಪ್ರಿಯ ಯೋಜನೆಗಳ ಮೂಲಕ ಓಟು ಗಿಟ್ಟಿಸಲು ಅದನ್ನು ಬಳಸುವುದು ಸರಕಾರದ ಹುನ್ನಾರ. ಆದರೆ ಅದಕ್ಕೆ ಪಟೇಲ್ ಒಪ್ಪಲಿಲ್ಲ. ಒಪ್ಪಲಿಲ್ಲ ಎನ್ನುವುದಕ್ಕಿಂತಲೂ ಯಾವನೇ ಒಬ್ಬ ಆರ್ಥಿಕ ತಜ್ಞ ಅದನ್ನು ಒಪ್ಪಲಾರ. ಅದು ಆರ್ಥಿಕ ಆರೋಗ್ಯದ ದೃಷ್ಟಿಯಿಂದ ಸರಿಯಾದ ಕ್ರಮವಲ್ಲ, ಹಾಗೆಲ್ಲ ಸಾಲ ಕೊಡುತ್ತ ಹೋದರೆ ವಸೂಲಿಯಾಗದ ಸಾಲದ ಸಮಸ್ಯೆ ಇನ್ನಷ್ಟು ಗಂಭೀರವಾಗುತ್ತದೆ ಎನ್ನುವುದು ಅವರ ಆಕ್ಷೇಪ. (ಆರ್ಥಿಕ ಸ್ಥಿರತೆ ಮತ್ತು ಬೆಳೆವಣಿಗೆಯ ನಡುವಿನ ಹೊಂದಾಣಿಕೆ ಕೇಂದ್ರೀಯ ಬ್ಯಾಂಕ್ ನ ಕೆಲಸ ಕೂಡಾ). ಪಟೇಲ್ ಇದಕ್ಕೆ ಒಪ್ಪದೆ ಹೋದಾಗ ಸರಕಾರದ ಬಳಿ ಎರಡು ಅಸ್ತ್ರಗಳಿದ್ದವು. ಆರ್‍ಬಿಐ ಮಂಡಳಿಯಲ್ಲಿ ಸರಕಾರದ ಪ್ರತಿನಿಧಿಗಳೂ ಇದ್ದಾರೆ. ಆರ್‍ಎಸ್‍ಎಸ್ ಹಿಂಬಾಲಕ ಗುರುಮೂರ್ತಿ ಸರಕಾರವೇ ನೇಮಕ ಮಾಡಿದ ಓರ್ವ ನಿರ್ದೇಶಕ. ಇಂಥವರನ್ನು ಬಳಸಿಕೊಂಡು ಆರ್‍ಬಿಐ ಮೇಲೆ ಒತ್ತಡ ಹೇರುವುದು. ಇನ್ನೊಂದು ಆರ್‍ಬಿಐ ಕಾಯಿದೆಯ ಸೆಕ್ಷನ್ 7. ಈ ಸೆಕ್ಷನ್ ಪ್ರಕಾರ ಸಾರ್ವಜನಿಕ ಹಿತಾತಸಕ್ತಿಯ ದೃಷ್ಟಿಯಿಂದ ಕೇಂದ್ರ ಬ್ಯಾಂಕಿಗೆ ನಿರ್ದೇಶನಗಳನ್ನು ನೀಡಲು ಸರಕಾರಕ್ಕೆ ಅವಕಾಶವಿದೆ. ಈ ಸೆಕ್ಷನ್ 7 ನ್ನು ಬಳಸಿಕೊಳ್ಳಲೂ ಸರಕಾರ ಹೊರಟಿತ್ತು ಎನ್ನಲಾಗಿದೆ. ಇಂತಹ ಒಂದು ಒತ್ತಡವನ್ನು ಈ ಕೇಂದ್ರೀಯ ಬ್ಯಾಂಕ್‍ನ ಗವರ್ನರ್ ಮೇಲೆ ಹೇರಲಾಗಿತ್ತು. ನವೆಂಬರ್ ತಿಂಗಳ ಹಣಕಾಸು ನೀತಿ ಸಮಿತಿಯ ಸಭೆಯ ಸಮಯದಲ್ಲಿ ಊರ್ಜಿತ್ ಪಟೇಲ್ ರಾಜೀನಾಮೆ ನೀಡುತ್ತಾರೆ ಎಂದು ಕೂಡಾ ಭಾವಿಸಲಾಗಿತ್ತು. ಆದರೆ ಆಗ ಅಂಥದ್ದೇನೂ ನಡೆಯಲಿಲ್ಲ. ಆದರೆ ವಿವಾದ ಅಲ್ಲಿಗೇ ಮುಗಿದಿರಲಿಲ್ಲ, ತೆರೆಯ ಮರೆಯಲ್ಲಿ ಮತ್ತೆ ಒತ್ತಡ ಹೇರುವ ಕ್ರಮಗಳು ಮುಂದುವರಿದೇ ಇದ್ದವು ಎನ್ನುವುದಕ್ಕೆ ಆ ನಂತರ ನಡೆದ ಬೆಳವಣಿಗೆಯೇ ಸಾಕ್ಷಿ. ಹಣಕಾಸು ನೀತಿ ಸಭೆ ನಡೆದು ಹತ್ತು ದಿನವಾಗುತ್ತಲೇ ರಾಜೀನಾಮೆ ಕೊಟ್ಟೇ ಬಿಟ್ಟರು ಊರ್ಜಿತ್ ಪಟೇಲ್.
ಪಟೇಲ್ ರಾಜೀನಾಮೆ ಬೆನ್ನಿಗೇ ಸರಕಾರ ಯಾರನ್ನು ಗವರ್ನರ್ ಆಗಿ ನೇಮಕ ಮಾಡಬಹುದು ಎಂಬ ಪ್ರಶ್ನೆಯೆದ್ದಿತ್ತು. ಇನ್ನೇನು ಚುನಾವಣೆ ನಡೆಯಲಿರುವುದರಿಂದ ಆರ್ಥಿಕ ತಜ್ಞರನ್ನು ಸರಕಾರ ನೇಮಿಸದು ಎಂದು ಕೆಲವರು ವಾದಿಸಿದ್ದರು. ಕೊನೆಗೂ ಅದು ನಿಜವಾಯಿತು. ಮೋದಿ ಸರಕಾರಕ್ಕೆ ಆಪ್ತರಾಗಿರುವ, ಹಣಕಾಸು ಸಂಬಂಧಿತ ಅನೇಕ ಇಲಾಖೆಗಳಲ್ಲಿ 38 ವರ್ಷ ಕೆಲಸ ಮಾಡಿರುವ, ನೋಟು ನಿಷೇಧವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ ತಮಿಳುನಾಡು ಕೇಡರಿನ 1980ರ ಬ್ಯಾಚಿನ ಐಎಎಸ್ ಅಧಿಕಾರಿ ಶಕ್ತಿಕಾಂತ್ ದೇಸಾಯಿಯವರನ್ನು 25 ನೇ ಆರ್‍ಬಿಐ ಗವರ್ನರ್ ಆಗಿ ಸರಕಾರ ನೇಮಕ ಮಾಡಿತು. ಈ ಹಿಂದಿನ ಗವರ್ನರ್ ಗಳು ಅರ್ಥಶಾಸ್ತ್ರಜ್ಞರಾಗಿದ್ದರೆ ಶಕ್ತಿಕಾಂತ್ ದಾಸ್ ಇತಿಹಾಸ ಸ್ನಾತಕೋತ್ತರ ಪದವೀಧರ. ಶಕ್ತಿಕಾಂತ್ ದಾಸ್ ನೇಮಕದಿಂದ ಆರ್‍ಬಿಐ ಮತ್ತು ಸರಕಾರದ ನಡುವಣ ತಿಕ್ಕಾಟ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ತಿಕ್ಕಾಟವೇನೋ ಕಡಿಮೆಯಾಗಬಹುದು, ಆದರೆ ಆರ್‍ಬಿಐ ಯ ಸ್ವಾಯತ್ತೆಯ ಪ್ರಶ್ನೆ? ತನ್ನ ಚುನಾವಣಾ ರಾಜಕೀಯದ ಲಾಭಕ್ಕೆ ಕೇಂದ್ರೀಯ ಬ್ಯಾಂಕ್ ನ ಸುರಕ್ಷಿತ ನಿಧಿಯನ್ನು ಬಳಸಿಕೊಂಡರೆ? ಎಂಬ ಪ್ರಶ್ನೆ ಈಗಲೂ ಇದ್ದೇ ಇದೆ. ಆದರೆ, ಸಾಂಸ್ಥಿಕ ವಿವೇಕ ಎನ್ನುವುದೊಂದು ಇರುತ್ತದೆ. ಹಾಗಾಗಿ ಗವರ್ನರ್ ಜಾಗದಲ್ಲಿ ಯಾರೇ ಇದ್ದರೂ ಆ ಸಾಂಸ್ಥಿಕ ವಿವೇಕವನ್ನು ಮೀರಿ ಹೋಗಲಾಗದು, ಹಾಗಾಗಿ ಕೇಂದ್ರೀಯ ಬ್ಯಾಂಕ್ ಬಗ್ಗೆ ಯಾರೂ ಚಿಂತೆ ಮಾಡಬೇಕಾಗಿಲ್ಲ ಎಂಬ ವಾದವೂ ಇದೆ. ಇದೆಲ್ಲ ಮೇಲ್ನೋಟದ ಯೋಚನೆಗಳು. ಆದರೆ ಒಳಗಡೆ ಏನು ನಡೆಯುತ್ತಿದೆ ಎನ್ನುವುದು ನಮ್ಮಂತಹ ಸಾಮಾನ್ಯರಿಗೆ ತಿಳಿಯದು. ಸರ್ವಾಧಿಕಾರಿ ಧೋರಣೆಯ ಈಗಿನ ಸರಕಾರದ ಮುಂದಿನ ಹೆಜ್ಜೆ ಏನು ಎನ್ನುವುದು ಅದು ಹೆಜ್ಜೆ ಇರಿಸಿದ ಮೇಲೆ ತಿಳಿಯಬೇಕಷ್ಟೇ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...