ಬಿಹಾರ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಎಲ್ಲಾ ಪಕ್ಷಗಳು ಚುನಾವಣಾ ರ್‍ಯಾಲಿಗಳನ್ನು ನಡೆಸುತ್ತಿವೆ. ಚುನಾವಣಾ ಪ್ರಚಾರದಲ್ಲಿ ಜನರಿಗೆ ನೀಡುತ್ತಿರುವ ಭರವಸೆ, ಪ್ರಣಾಳಿಕೆಗಳ ಬಗ್ಗೆ ಪರಸ್ಪರ ಆರೋಪ-ಪ್ರತ್ಯಾರೋಪಗಳ ಸುರಿಮಳೆಯೇ ಆಗುತ್ತಿದೆ.
ರಾಷ್ಟ್ರೀಯ ಜನತಾದಳದ ನಾಯಕ ತೇಜಸ್ವಿ ಯಾದವ್ ವರ್ಷಕ್ಕೆ 10 ಲಕ್ಷ ಉದ್ಯೋಗಗಳ ಭರವಸೆಯನ್ನು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದು, ಇದು ಅಸಾಧ್ಯ, ಇದನ್ನೂ ಯಾವ ನಾಯಕರು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
’ಅಷ್ಟು ಉದ್ಯೋಗಿಗಳಿಗೆ ಎಲ್ಲಿಂದ ಸಂಬಳ ನೀಡುತ್ತೀರಿ..? ನೀವು ನಕಲಿ ಹಣವನ್ನು ಮುದ್ರಿಸುತ್ತೀರಾ ಅಥವಾ ಯಾವ ಹಗರಣದಿಂದ ಜೈಲಿಗೆ ಹೋಗಬೇಕಾಯಿತೋ ಅಂತಹದ್ದೇ ಕೆಲಸ ಮಾಡುತ್ತೀರಾ..?’ ಎಂದು ಗೋಪಾಲಗಂಜ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ನಿತೀಶ್ ಕುಮಾರ್ ವ್ಯಂಗ್ಯವಾಡಿದ್ದಾರೆ. ತೇಜಶ್ವಿ ಯಾದವ್ ಅವರ ತಂದೆ ಲಾಲು ಯಾದವ್ ಹೆಸರು ಹೇಳದೆ ಮೇವು ಹಗರಣದ ಪ್ರಸ್ತಾಪ ಮಾಡಿದ್ದಾರೆ.
ಇದನ್ನೂ ಓದಿ: ಬಿಹಾರ ಅಭಿವೃದ್ಧಿ; ಮುಖ್ಯಮಂತ್ರಿ ಅಭ್ಯರ್ಥಿಗಳ ನೇರ ಚರ್ಚೆ: ನಿತೀಶ್‌ಗೆ ತೇಜಸ್ವಿ ಯಾದವ್ ಸವಾಲು!
ತೇಜಶ್ವಿ ಯಾದವ್ ಅನಾನುಭವಿ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. “ಉದ್ಯೋಗಗಳ ಬಗ್ಗೆ ಭರವಸೆ ನೀಡಿದ್ದಾರೆ. ಆದರೆ ಈ ಭರವಸೆ ಈಡೇರಿಸಲು ಜ್ಞಾನ ಅಥವಾ ಅನುಭವ ಅವರಿಗಿಲ್ಲ ಎಂದಿದ್ದಾರೆ. ಉದ್ಯೋಗ ಕೊಡುವುದಾದರೆ, ಕೇವಲ 10 ಲಕ್ಷ ಏಕೆ? ಎಲ್ಲರಿಗೂ ಉದ್ಯೋಗ ನೀಡಿ ಎಂದು ಉಚಿತ ಸಲಹೆಯನ್ನು ನೀಡಿದ್ದಾರೆ.
ನಿತೀಶ್ ಕುಮಾರ್ ಮಾತಿಗೆ ತಿರುಗೇಟು ನೀಡಿರುವ ತೇಜಸ್ವಿ ಯಾದವ್, ’ನಾನು ಅಷ್ಟು ಅನಾನುಭವಿಯಲ್ಲ. ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದೆ. ನಾನು ಅಷ್ಟು ಅನಾನುಭವಿ ಮತ್ತು ಅಪಕ್ವವಾಗಿದ್ದರೆ, ಬಿಜೆಪಿ ನಾಯಕರು ನನ್ನನ್ನು 20 ಹೆಲಿಕಾಪ್ಟರ್‌ಗಳೊಂದಿಗೆ ಏಕೆ ಬೆನ್ನಟ್ಟುತ್ತಿದ್ದಾರೆ..? ಎಂದು ಚಾಟಿ ಬೀಸಿದ್ದಾರೆ.
“ಮುಖ್ಯಮಂತ್ರಿ ನಿತೀಶ್ ಕುಮಾರ್ ದೈಹಿಕವಾಗಿ ಮತ್ತು ಮಾನಸಿಕವಾಗಿ ದಣಿದಿದ್ದಾರೆ. ಅವರು 15 ವರ್ಷಗಳು ಆಡಳಿತ ನಡೆಸಿದ ನಂತರವೂ, ಉದ್ಯೋಗ ಸೃಷ್ಟಿಸಲು ಹಣ ಎಲ್ಲಿದೆ ಎಂದು ಕೇಳುತ್ತಿದ್ದಾರೆ. ಬಿಹಾರದ ಬಜೆಟ್ 30,000 ಕೋಟಿ ರೂಪಾಯಿ. ಈ ಹಣ ಎಲ್ಲಿದೆ..? ಎಲ್ಲವೂ ಅವರ ಹಗರಣಗಳಲ್ಲಿ ಕಳೆದು ಹೋಗಿದೆ ಎಂದಿದ್ದಾರೆ.
ಇದನ್ನೂ ಓದಿ: ಬಿಹಾರ ಚುನಾವಣೆ: ಚಿರಾಗ್ ಪಾಸ್ವಾನ್ ಪರ ನಿಂತ ತೇಜಸ್ವಿ ಯಾದವ್ – ನಿತೀಶ್ ಕುಮಾರ್‌ಗೆ ತಲೆನೋವು!
“ಅವರು ಜಲ-ಜೀವನ್-ಹರಿಯಾಲಿ ನೀತಿಗೆ, ಜಾಹೀರಾತುಗಳಿಗೆ ಕೋಟಿ ಕೋಟಿ ಹಣ ಖರ್ಚು ಮಾಡಿದ್ದಾರೆ. ಇವುಗಳ ನಂತರ ಅವರು ಉದ್ಯೋಗ ನೀಡಲು ಹಣ ಎಲ್ಲಿದೆ ಎಂಬ ವ್ಯಂಗ್ಯದ ಕಾಮೆಂಟ್ ಮಾಡುತ್ತಾರೆ” ಎಂದು ತೇಜಶ್ವಿ ಯಾದವ್ ವಾಗ್ದಾಳಿ ನಡೆಸಿದ್ದಾರೆ.
“4.5 ಲಕ್ಷ ಉದ್ಯೋಗಗಳಿಗೆ ರಾಜ್ಯದ ಬಜೆಟ್‌ನಲ್ಲಿ ಅವಕಾಶವಿದೆ. ನೀತಿ ಆಯೋಗದ ಪ್ರಕಾರ ಬಿಹಾರದ ಪ್ರಗತಿಗೆ ಇನ್ನೂ 5.5 ಲಕ್ಷಕ್ಕಿಂತಲೂ ಅಧಿಕ ಉದ್ಯೋಗಗಳ ಅಗತ್ಯವಿದೆ. ಇಚ್ಛಾಶಕ್ತಿ ಇದ್ದರೆ ಎಲ್ಲವೂ ಸಾಧ್ಯ” ಎಂದು ತೇಜಸ್ವಿ ಯಾದವ್ ತೀಕ್ಷ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತ ತೇಜಶ್ವಿ ಯಾದವ್ ಅವರ “10 ಲಕ್ಷ ಉದ್ಯೋಗಗಳು” ಎಂಬ ಭರವಸೆ ಬಗ್ಗೆ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಕೂಡ ಅಪಹಾಸ್ಯ ಮಾಡಿದ್ದಾರೆ.
ಆದರೆ ತೇಜಸ್ವಿ ಯಾದವ್ ಅವರ ಈ ಭರವಸೆ ಯುವಜನತೆಯಲ್ಲಿ ಉದ್ಯೋಗ ಸೃಷ್ಟಿಯ ಬಗ್ಗೆ ಹೊಸ ವಿಶ್ವಾಸ ಹುಟ್ಟಿಸಿದೆ. ಇದರಿಂದ ಕಂಗಾಲಾಗಿರುವ ನಿತೀಶ್ ಕುಮಾರ್ ತಮ್ಮ ರ್‍ಯಾಲಿಗಳಲ್ಲಿ ಇದೇ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅಸಾಧ್ಯವೆಂಬುದಿಲ್ಲ, ಚುನಾವಣೆಯಲ್ಲಿ ಗೆದ್ದರೆ ವರ್ಷಕ್ಕೆ 10 ಲಕ್ಷ ಉದ್ಯೋಗ ನೀಡುವುದಾಗಿ ತೇಜಸ್ವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 28, ನವೆಂಬರ್ 3 ಮತ್ತು 7 ರಂದು ಹೊಸ 243 ಸದಸ್ಯರ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ನವೆಂಬರ್ 10 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು.


