ಐತಿಹಾಸಿಕ ರೈತ ಹೋರಾಟ… ಫಾರ್ಮಸ್ಸ್ ಪ್ರೋಟೆಸ್ಟ್, ಪಂಜಾಬ್-ಹರಿಯಾಣ ರೈತರ ಹೋರಾಟ, ಅನ್ನದಾತರ ಹೋರಾಟ, ಕಿಸಾನ್ ಆಂದೋಲನ ಹೀಗೆ ಒಂದಾ ಎರಡಾ.. ನೂರಾರು ಹೆಸರುಗಳಿಂದ ಕರೆಸಿಕೊಂಡ, ಪರ-ವಿರೋಧ ಚರ್ಚೆಗಳನ್ನು ಹುಟ್ಟುಹಾಕಿ ವಿಶ್ವದ ಗಮನ ಸೆಳೆದ ದೆಹಲಿಯ ರೈತ ಹೋರಾಟಕ್ಕೆ ಶುಕ್ರವಾರ (ಮಾರ್ಚ್ 5) 100 ದಿನ ತುಂಬಿದೆ.
ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ದೆಹಲಿ ಚಲೋ ಆರಂಭಿಸಿ ಇಂದಿಗೆ 100 ದಿನಗಳಾಗಿವೆ. ಈ ಐತಿಹಾಸಿಕ ಹೋರಾಟ ನಡೆದುಬಂದ ದಾರಿ ನಿಜಕ್ಕೂ ಬೆರಗು ಮೂಡಿಸುತ್ತದೆ. ಅಪಮಾನ, ಅವಮಾನ, ಬೆಂಬಲ, ಸ್ಪೂರ್ತಿ, ಧೈರ್ಯ, ಪಟ್ಟುಬಿಡದ ಛಲ ಎಲ್ಲವಕ್ಕೂ ಉದಾಹರಣೆಯಾಗಿ ಈ ಶತಮಾನದಲ್ಲಿ ನಮ್ಮ ಮುಂದಿದೆ ಈ ರೈತ ಹೋರಾಟ.
ದೆಹಲಿ ಪೊಲೀಸರು ಒಡ್ಡಿದ ಅಡೆತಡೆಗಳನ್ನು ದಾಟಿದ ರೈತರಿಗೆ ಪ್ರಕೃತಿ ಕೂಡ ತೀವ್ರ ಚಳಿ, ಮಳೆ ಮೂಲಕ ಸವಾಲೆಸೆದಿತ್ತು. ಈಗಲೂ ಬೇಸಿಗೆಯ ಬಿಸಿಲು ರೈತರನ್ನು ಸುಡುತ್ತಿದೆ. ಆದರೆ ರೈತರು ಮಾತ್ರ ಯಾವುದಕ್ಕೂ ಎದೆಗುಂದಿಲ್ಲ. ಅವರ ಧ್ಯೇಯವೊಂದೆ ಅದು ಮೂರು ಕಾನೂನುಗಳು ರದ್ದಾಗಬೇಕು ಮತ್ತು ಎಂಎಸ್‌ಪಿ ಖಾತ್ರಿಗಾಗಿ ಕಾನೂನು ಬರಬೇಕು. 100 ದಿನಗಳನ್ನೂ ಪೂರೈಸಿರುವ ಈ ಹೋರಾಟ ಮೊದಲ ದಿನದ ಉತ್ಸಾಹವನ್ನು ಇನ್ನು ಹಾಗೆ ಉಳಿಸಿಕೊಂಡಿರುವುದು ಆಶ್ಚರ್ಯವೇ ಸರಿ.

ಇದನ್ನೂ ಓದಿ: ಪಂಚರಾಜ್ಯ ಚುನಾವಣೆ: ಬಿಜೆಪಿ ವಿರುದ್ಧ ಅಭಿಯಾನಕ್ಕೆ ಮುಂದಾದ ದೆಹಲಿ ರೈತ ಮುಖಂಡರು
ಮೊದ ಮೊದಲು ಬಯಲಿನಲ್ಲಿ ಆರಂಭವಾದ ವೇದಿಕೆಗಳು, ನಂತರ ದೊಡ್ಡ ದೊಡ್ಡ ವೇದಿಕೆಗಳಾಗಿ ಮಾರ್ಪಾಡಾದವು. ಎಲ್ಲಾ ರೀತಿಯ ವ್ಯವಸ್ಥೆ ಒದಗಿಸಲು ಸಂಘ ಸಂಸ್ಥೆಗಳು, ಗ್ರಾಮಗಳ ಜನರು ಮುಂದಾದರು. ಲಂಗರ್‌ಗಳ ಪಾತ್ರ ಪ್ರಮುಖವಾಯಿತು. ದೆಹಲಿಯ ಸಿಂಘು, ಟಿಕ್ರಿ, ಶಹಾಜಾನ್‌ಪುರ, ಗಾಝೀಪುರ, ಚಿಲ್ಲಾ, ಪಲ್ವಾಲ, ದಾರೂಹೇರ ಗಡಿಗಳಿಗೆ ಸೀಮಿತವಾಗಿದ್ದ ಈ ಹೋರಾಟ ಇಂದು ದೇಶಾದ್ಯಂತ ತನ್ನ ಬಾಹುಗಳನ್ನು ಚಾಚಿದೆ.
ಜಾತಿ, ಧರ್ಮ, ಲಿಂಗ, ಮೇಲು-ಕೀಳು, ಬಡವ-ಬಲ್ಲಿದ ಎಂಬ ಎಲ್ಲಾ ಭಾವನೆಗಳನ್ನು ಬದಿಗಿರಿಸಿ ಎಲ್ಲರನ್ನೂ ಒಂದು ಬೇಡಿಕೆಯಡಿಯಲ್ಲಿ ಹಿಡಿದಿಟ್ಟ ದಿಟ್ಟ ಹೋರಾಟವೆಂಬ ಖ್ಯಾತಿಗೆ ಸಾಕ್ಷಿಯಾಗಿದೆ. ತನ್ನ ಶಾಂತಿಯುತ ಪ್ರತಿಭಟನೆಯ ನೆಲೆಯಿಂದ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಭ್ರಾತೃತ್ವ-ಸೇವೆಗೆ ಹೊಸ ಅರ್ಥವನ್ನು ಈ ರೈತ ಹೋರಾಟ ನೀಡಿದೆ.

ದೆಹಲಿಯಲ್ಲಿ ಈ ಹೋರಾಟಕ್ಕೆ 100 ದಿನಗಳು ತುಂಬಿದ್ದರೇ, ಇತ್ತ ಪಂಜಾಬಿನಲ್ಲಿ ಈ ಹೋರಾಟಕ್ಕೆ 155 ದಿನಗಳು ತುಂಬಿವೆ. ಇದರ ಜೊತೆಗೆ ದೇಶದ ಹಲವು ರಾಜ್ಯಗಳಲ್ಲಿ ಈ ಹೋರಾಟ ಕಳೆಗಟ್ಟಿದೆ. ಮಹಾಪಂಚಾಯತ್‌ಗಳೆಂಬ ಹೊಸ ಕಲ್ಪನೆ ಇತರ ರಾಜ್ಯಗಳಲ್ಲೂ ಹರಿದಾಡುತ್ತಿದೆ. ತೆಲಂಗಾಣ, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಗುಜರಾತ್, ಬಿಹಾರ ಸೇರಿದಂತೆ ಹಲವು ಕಡೆ ಮಹಾಪಂಚಾಯತ್ ಮೂಲಕ ರೈತ ಹೋರಾಟಕ್ಕೆ ಹುಮ್ಮಸ್ಸು ತುಂಬಲಾಗುತ್ತಿದೆ.
ಇದನ್ನೂ ಓದಿ: ರೈತ ಹೋರಾಟ: ಕಡು ಬೇಸಿಗೆ ಎದುರಿಸಲು ಸಿದ್ದರಾಗುತ್ತಿದ್ದಾರೆ ಅನ್ನದಾತರು!
ಕರ್ನಾಟಕದಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ಎಂಎಸ್‌ಪಿ ದಿಲಾವೋ ಆಂದೋಲನ ಆರಂಭಿಸಲಾಗಿದೆ. ಈ ಮೂಲಕ ದೇಶದ ಎಲ್ಲಾ ರಾಜ್ಯಗಳಲ್ಲಿ ಎಂಎಸ್‌ಪಿಗಾಗಿ ಆಗ್ರಹಿಸಲಾಗುತ್ತದೆ. ಈ ಆಂದೋಲನಕ್ಕೆ ಕರ್ನಾಟಕದಿಂದ ಚಾಲನೆ ನೀಡಲಾಗಿದೆ.
ಇತ್ತ ತೀವ್ರ ಚಳಿಯನ್ನು ಕಂಡಿರುವ ರೈತರು ಈಗ ಬಿರು ಬೇಸಿಗೆಗೆ ಸಜ್ಜಾಗುತ್ತಿದ್ದಾರೆ. ತಮ್ಮ ಸುರಕ್ಷತೆಗಾಗಿ ಕುಡಿಯುವ ನೀರಿನ ವ್ಯವಸ್ಥೆ, ಪ್ರಿಡ್ಜ್, ಕೂಲರ್‌ಗಳು, ಟ್ಯ್ರಾಲಿಯಲ್ಲಿ ಅಳವಡಿಸಲಾಗುವ ಫ್ಯಾನ್‌ಗಳು, ಟೇಬಲ್ ಫ್ಯಾನ್‌ಗಳು, ಎಸಿಗಳನ್ನು ಹಾಕಿಕೊಳ್ಳಲಾಗಿದೆ. ಕುಡಿಯುವ ನೀರು, ದಿನ ನಿತ್ಯದ ಬಳಕೆಯ ನೀರಿನ ಬವಣೆ ತಪ್ಪಿಸಲು ಪ್ರತಿಭಟನಾ ಸ್ಥಳದಲ್ಲಿ ಬೋರ್‌ವೇಲ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಟೆಂಟ್‌ಗಳು ಮತ್ತು ಶೆಡ್‌ಗಳಲ್ಲಿ 5 ನಿಮಿಷವೂ ಕೂರಲು ಸಾಧ್ಯವಿಲ್ಲದಂತಹ ಬಿಸಿಲು ಪ್ರತಿಭಟನಾಕಾರರನ್ನು ಕಾಡುತ್ತಿದ್ದು, ಬೇಸಿಗೆಯಲ್ಲಿ ಕುಳಿತುಕೊಳ್ಳಲು, ಮಲಗಲು ತಾತ್ಕಾಲಿಕ ವಸತಿಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದಾರೆ. ಟ್ಯ್ರಾಲಿಗಳಿಗೆ ಹೋಲಿಸಿದರೇ, ಈ ಚಪ್ಪರದ ವ್ಯವಸ್ಥೆ ಹೆಚ್ಚು ತಂಪಾಗಿರುತ್ತವೆ. ಈ ಮೂಲಕ ಸರ್ಕಾರಕ್ಕೆ ತಾವು ಇಲ್ಲಿಮದ ಎಂತಹ ಪರಿಸ್ಥಿತಿಯಲ್ಲು ವಾಪಸ್ ಹೋಗುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ.
ಇದನ್ನೂ ಓದಿ: ರೈತರು ದೇಶದ್ರೋಹಿಗಳಲ್ಲ, ಕೆಂಪು ಕೋಟೆ ಘರ್ಷಣೆಗೆ ಕೇಂದ್ರದ ಪಿತೂರಿಯೇ ಕಾರಣ: ಕೇಜ್ರಿವಾಲ್
ರೈತ ಹೋರಾಟದಲ್ಲಿರುವವರು, ಹೋರಾಟವನ್ನು ಬೆಂಬಲಿಸುವವರು, ಪ್ರತಿಭಟನಾ ಸ್ಥಳದಲ್ಲಿರುವವರು ಕೃಷಿ ಕಾನೂನುಗಳನ್ನು ವಾಪಸ್ ತೆಗೆದುಕೊಳ್ಳದೆ ಇಲ್ಲಿಂದ ನಾವು ಮನೆಗೆ ಹಿಂತಿರುಗುವುದಿಲ್ಲ ಎಂದಿದ್ದಾರೆ. ತಮಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳುವತ್ತ ಗಮನ ಹರಿಸಿರುವ ಇವರು ಯಾರು ಕೂಡ ವಾಪಸ್ ಹೋಗುವ ಬಗ್ಗೆ ಚಿಂತಿಸುತ್ತಿಲ್ಲ.

ಇಂದು ರೈತ ಹೋರಾಟಕ್ಕೆ 100 ದಿನ ತುಂಬಿದೆ. ಈ 100 ದಿನ 1,000 ದಿನವಾದರೂ ಇಲ್ಲಿಯೇ ಇದ್ದು ಹೋರಾಟ ಮುಂದುವರೆಸುವಂತಹ ಛಲ, ಉತ್ಸಾಹ ಎಲ್ಲಾ ಪ್ರತಿಭಟನಾ ನಿರತರಲ್ಲೂ ಕಂಡು ಬರುವುದು ಸಾಮಾನ್ಯ ಅಂಶವಾಗಿದೆ. ಇದಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ ಎಂಬುದು ಮತ್ತಷ್ಟು ಗಮನಾರ್ಹ ವಿಚಾರ.
ಇನ್ನು, ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ಮಾರ್ಚ್ 6 ಕ್ಕೆ 100 ದಿನ ತುಂಬಿದ ದಿನವನ್ನು ಆಚರಿಸುತ್ತಾರೆ. ಮಾರ್ಚ್ 6ರ ದಿನ ರೈತರು ಕುಂಡ್ಲಿ-ಮಾನೇಸರ್-ಪಾಲ್ವಾಲ್ ಎಕ್ಸ್‌ಪ್ರೆಸ್ ವೇಯನ್ನು ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ ವಿವಿಧ ಸ್ಥಳಗಳಲ್ಲಿ ನಿರ್ಬಂಧಿಸುತ್ತಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡ ಯೋಗೇಂದ್ರ ಯಾದವ್ ಮಾಹಿತಿ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿಗಳೇ ಎಂಎಸ್‌ಪಿ ಎಲ್ಲಿದೆ ತೋರಿಸಿ?: ಇಂದಿನಿಂದ ರಾಜ್ಯದಲ್ಲಿ ಆಂದೋಲನ



Block mark formars it is