ಅನ್ನ ನೀಡುವ ರೈತರೆಂದು ದೇಶದ್ರೋಹಿಗಳಾಗಲು ಸಾಧ್ಯವಿಲ್ಲ. ಜನವರಿ 26ರ ಕೆಂಪು ಕೋಟೆಯ ಘರ್ಷಣೆಯು ಕೇಂದ್ರ ಸರ್ಕಾರದಿಂದ ಪೂರ್ವಯೋಜಿತವಾಗಿತ್ತು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಕಿಸಾನ್ ಮಹಾಪಂಚಾಯತ್‌ನಲ್ಲಿ ಮಾತನಾಡಿದ ಅವರು, “ಈ ದೇಶದ ರೈತರು ಅಸಮಾಧಾನದಲ್ಲಿದ್ದಾರೆ. 90ಕ್ಕೂ ಹೆಚ್ಚು ದಿನಗಳಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. 250ಕ್ಕೂ ಹೆಚ್ಚು ಜನ ಪ್ರಾಣ ತೆತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಜನವರಿ 26ರ ಕೆಂಪು ಕೋಟೆಯ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರವೇ ಕಾರಣ ಹೊರತು ರೈತರಲ್ಲ. ರೈತರಿಗೆ ದೆಹಲಿ ರಸ್ತೆಗಳ ಬಗ್ಗೆ ಹೆಚ್ಚಿನ ಪರಿಚಯವಿಲ್ಲ. ಆದರೆ ಕೇಂದ್ರ ಸರ್ಕಾರವೇ ರೈತರನ್ನು ದಾರಿ ತಪ್ಪಿಸಿತು. ದೆಹಲಿಯ ಮುಖ್ಯಮಂತ್ರಿಯಾಗಿ ಇದೆಲ್ಲದರ ಬಗ್ಗೆ ನನಗೆ ಚೆನ್ನಾಗಿ ಅರಿವಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯಲ್ಲಿ ಹೋರಾಟನಿರತ ರೈತರಿಗೆ ಕೇಂದ್ರ ಸರ್ಕಾರ ನೀಡಿದ ಕಿರುಕುಳಗಳನ್ನು ಬ್ರಿಟಿಷರೂ ಸಹ ನೀಡಿರಲಿಲ್ಲ. ಅಲ್ಲದೇ ಹೋರಾಟ ನಿರತ ರೈತರ ಮೇಲೆ ಸುಳ್ಳು ಕೇಸುಗಳನ್ನು ದಾಖಲು ಮಾಡಲಾಗಿದೆ. ನಮ್ಮ ರೈತರು ಏನಾದರೂ ಆಗಬಹುದು, ಆದರೆ ದೇಶದ್ರೋಹಿಗಳಾಗಲು ಸಾಧ್ಯವಿಲ್ಲ. ಆದರೂ ಅವರ ಮೇಲೆ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಲಾಗಿದೆ. ಒಂದು ಕಡೆ ರೈತರ ಮಕ್ಕಳು ಗಡಿಗಳಲ್ಲಿ ದೇಶ ಕಾಯುತ್ತಿದ್ದಾರೆ. ಆದರೆ ಇನ್ನೊಂದು ಕಡೆ ರೈತರನ್ನು ಅವಮಾನಿಸಲಾಗುತ್ತಿದೆ” ಎಂದು ಕೇಜ್ರಿವಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಸತ್ತಿನಲ್ಲಿ ಮೋದಿಯವರು ಎಂಎಸ್‌ಪಿ ಇತ್ತು, ಎಂಎಸ್‌ಪಿ ಇದೆ ಮತ್ತು ಎಂಎಸ್‌ಪಿ ಮುಂದೆಯು ಇರಲಿದೆ ಎಂದು ಹೇಳಿದ್ದಾರೆ. ದಯವಿಟ್ಟು ಉತ್ತರಪ್ರದೇಶದ ಯಾವ ಮಂಡಿಯಲ್ಲಿ ಎಂಎಸ್‌ಪಿ ನೀಡಲಾಗುತ್ತದೆ ಎಂದು ನನಗೆ ತಿಳಿಸುವಿರಾ? ಮೋದಿ ಜೊತೆಗೆ ಯೋಗಿಯೂ ಸುಳ್ಳು ಹೇಳುತ್ತಿದ್ದಾರೆ ಎಂದು ಕೇಜ್ರಿವಾಲ್ ಕಿಡಿಕಾರಿದರು.
ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸುವುದಾಗಿ ಘೋಷಿಸಿದೆ. ಆ ಹಿನ್ನೆಲೆಯಲ್ಲಿ ಅದು ರಾಜ್ಯದ ಹಲವಾರು ಕಡೆಗಳಲ್ಲಿ ಕಿಸಾನ್ ಮಹಾಪಂಚಾಯತ್ ಅನ್ನು ಹಮ್ಮಿಕೊಂಡಿದೆ. ಅಲ್ಲದೇ ಪಂಜಾಬ್‌ನ ಮೊಗ್ಗ ಜಿಲ್ಲೆಯಲ್ಲಿಯೂ ಸಹ ಆಪ್ ವತಿಯಿಂದ ಮಾರ್ಚ್ 21 ರಂದು ಮಹಾಪಂಚಾಯತ್ ನಡೆಯಲಿದೆ.
ಇದನ್ನೂ ಓದಿ: ಮಾರ್ಚ್ 20 ರಂದು ಶಿವಮೊಗ್ಗದಲ್ಲಿ ರೈತ ಮಹಾಪಂಚಾಯತ್: ದರ್ಶನ್ ಪಾಲ್, ಯೋಗೇಂದ್ರ ಯಾದವ್, ರಾಕೇಶ್ ಟಿಕಾಯತ್ ಭಾಗಿ