2018ರ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ರಾಜ್ಯದ ಮತದಾರರು ಸ್ಪಷ್ಟ ಬಹುಮತವನ್ನು ನೀಡಿರಲಿಲ್ಲ. 224 ಸಂಖ್ಯಾಬಲದ ವಿಧಾನಸಭೆಯಲ್ಲಿ 104 ಶಾಸಕರನ್ನು ಹೊಂದಿದ್ದ ಬಿಜೆಪಿಯು ಏಕೈಕ ದೊಡ್ಡ ಪಕ್ಷವಾಗಿ ಹೊಮ್ಮಿತು. ಸರ್ಕಾರ ರಚಿಸಲು ಬಿಜೆಪಿಯನ್ನು ಆಹ್ವಾನಿಸಲಾಯಿತು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ತ್ವರಿತವಾಗಿ ಒಗ್ಗೂಡಿ ಸರ್ಕಾರ ರಚಿಸಿದವು.
ಕಾಂಗ್ರೆಸ್-ಜೆಡಿಎಸ್‌ನ 17 ಶಾಸಕರು ಬಂಡಾಯವೆದ್ದು ಆಪರೇಷನ್ ಕಮಲಕ್ಕೆ ಒಳಗಾಗಿ ಬಾಂಬೆ ಸೇರಿದ್ದರಿಂದ ಒಂದು ವರ್ಷದೊಳಗೆ ಸರ್ಕಾರ ಪಥನವಾಯಿತು. ಬಿಜೆಪಿ ಮತ್ತೆ ಸರ್ಕಾರವನ್ನು ರಚಿಸಿತು. ಕರ್ನಾಟಕ ಬಿಜೆಪಿಯ ಕಟ್ಟಾಳು ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರು. ಆದರೆ ಜುಲೈ 26, 2021 ರಂದು ರಾಜೀನಾಮೆ ನೀಡಿದರು. ಅವರ ನಂತರದಲ್ಲಿ ಬಸವರಾಜ ಬೊಮ್ಮಾಯಿ ಸಿಎಂ ಆದರು.
2018ರ ಎಕ್ಸಿಟ್ ಪೋಲ್‌ಗಳು ಏನು ಹೇಳಿದ್ದವು?
ಆರು ರಾಷ್ಟ್ರೀಯ ಟೆಲಿವಿಷನ್ ಚಾನೆಲ್‌ಗಳು ಮತ್ತು ಒಂದು ಪ್ರಾದೇಶಿಕ ಚಾನೆಲ್ ಪ್ರಸಾರ ಮಾಡಿದ ಎಂಟು ಪ್ರಮುಖ ಎಕ್ಸಿಟ್ ಪೋಲ್‌ಗಳ ಪೈಕಿ ಆರು ಸಮೀಕ್ಷೆಗಳು ಬಿಜೆಪಿಯು ಅತಿದೊಡ್ಡ ಪಕ್ಷವಾಗಿ ಹೊಮ್ಮಲಿದೆ ಎಂದು ಭವಿಷ್ಯ ನುಡಿದಿದ್ದವು. ಎಂಟರಲ್ಲಿ ಏಳು ಸಮೀಕ್ಷೆಗಳು ಸಮ್ಮಿಶ್ರ ಸರ್ಕಾರದ ಕುರಿತು ಸುಳಿವು ನೀಡಿದ್ದವು. ಬಿಜೆಪಿ ಅಥವಾ ಕಾಂಗ್ರೆಸ್ ಬಹುಮತವನ್ನು ಪಡೆಯಲಿಲ್ಲ. ಜೆಡಿಎಸ್ ಕಿಂಗ್‌ಮೇಕರ್ ಆಗಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ತಿಳಿಸಿದ್ದವು. ಹಾಗೆಯೇ ಆಯಿತು. ಜೆಡಿಎಸ್ 20 ರಿಂದ 40 ಸ್ಥಾನಗಳನ್ನು ಪಡೆಯುತ್ತದೆ ಎಂದು ಸಮೀಕ್ಷೆಗಳು ಸೂಚನೆ ನೀಡಿದ್ದವು.
ವಿಧಾನಸಭೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಲಿದೆ ಎಂದು ಎಬಿಪಿ-ಸಿ ವೋಟರ್, ನ್ಯೂಸ್‌ಎಕ್ಸ್-ಸಿಎನ್‌ಎಕ್ಸ್, ರಿಪಬ್ಲಿಕ್-ಜನ್ ಕಿ ಬಾತ್ ಮತ್ತು ನ್ಯೂಸ್ ನೇಷನ್ ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿದ್ದವು. ಪ್ರಾದೇಶಿಕ ಮಾಧ್ಯಮವಾದ ದಿಗ್ವಿಜಯ್-ವಿಜಯವಾಣಿ ಸಮೀಕ್ಷೆಯು ಇದನ್ನೇ ಹೇಳಿತ್ತು.
ಇದನ್ನೂಓದಿರಿ: ಕರ್ನಾಟಕ ಚುನಾವಣೆ ಎಕ್ಸಿಟ್ ಪೋಲ್: ಮತದಾನೋತ್ತರ ಸಮೀಕ್ಷೆಗಳು ಹೀಗೆ ಹೇಳುತ್ತಿವೆ
ಟೈಮ್ಸ್ ನೌ ಎರಡು ಎಕ್ಸಿಟ್ ಪೋಲ್‌ಗಳನ್ನು ಪ್ರಸಾರ ಮಾಡಿತ್ತು. ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ ಕಾಂಗ್ರೆಸ್‌ಗೆ ಅಲ್ಪ ಮುನ್ನಡೆ ನೀಡಿತ್ತು; ಟೈಮ್ಸ್ ನೌ-ಟುಡೇಸ್ ಚಾಣಕ್ಯ- ಬಿಜೆಪಿಗೆ ಸ್ಪಷ್ಟ ಬಹುಮತವನ್ನು ನೀಡಿತ್ತು. ಇಂಡಿಯಾ ಟುಡೆ-ಆಕ್ಸಿಸ್ ಎಕ್ಸಿಟ್ ಪೋಲ್- ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಲಿದೆ ಎಂದಿತ್ತು.
ಎಬಿಪಿ-ಸಿ ವೋಟರ್ ಸಮೀಕ್ಷೆಯು ಬಿಜೆಪಿಗೆ 104-116 ಸ್ಥಾನಗಳನ್ನು ನೀಡಿತ್ತು. ನಂತರ ಕಾಂಗ್ರೆಸ್‌ಗೆ 83-94 ಮತ್ತು ಜೆಡಿಎಸ್‌ಗೆ 20-29 ಸ್ಥಾನಗಳು ಬರಲಿವೆ ಎಂದಿತ್ತು. ನ್ಯೂಸ್‌ಎಕ್ಸ್-ಸಿಎನ್‌ಎಕ್ಸ್ ಬಿಜೆಪಿಗೆ 102-110, ಕಾಂಗ್ರೆಸ್‌ಗೆ 72-78, ಜೆಡಿಎಸ್‌ಗೆ 35-39 ಮತ್ತು ಇತರರಿಗೆ 3-5 ಸ್ಥಾನಗಳನ್ನು ನೀಡಿತ್ತು. ರಿಪಬ್ಲಿಕ್-ಜನ್ ಕಿ ಬಾತ್ ಸಮೀಕ್ಷೆಯಲ್ಲಿ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 37 ಮತ್ತು ಇತರೆ 3 ಸ್ಥಾನ ಪಡೆದಿದ್ದವು.
ಟೈಮ್ಸ್ ನೌ-ಚಾಣಕ್ಯ ಸಮೀಕ್ಷೆಯು ಬಿಜೆಪಿ 120 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿತ್ತು. ಇದು ಯಾವುದೇ ಪಕ್ಷಕ್ಕೆ ಬಹುಮತದ ಮುನ್ಸೂಚನೆ ನೀಡಿದ ಏಕೈಕ ಸಮೀಕ್ಷೆಯಾಗಿತ್ತು. ಟೈಮ್ಸ್ ನೌ-ಚಾಣಕ್ಯದವರು ಕಾಂಗ್ರೆಸ್‌ಗೆ 73, ಜೆಡಿಎಸ್‌ಗೆ 26 ಮತ್ತು ಇತರರಿಗೆ 3 ಸ್ಥಾನಗಳನ್ನು ನೀಡಿದ್ದರು. ಟೈಮ್ಸ್ ನೌ-ವಿಎಂಆರ್ ಪ್ರಕಾರ, ಕಾಂಗ್ರೆಸ್ 97 ಸ್ಥಾನಗಳನ್ನು, ಬಿಜೆಪಿ 94 ಸ್ಥಾನಗಳನ್ನು, ಜೆಡಿಎಸ್ 28 ಸ್ಥಾನಗಳನ್ನು ಮತ್ತು ಇತರರು 3 ಸ್ಥಾನಗಳು ಪಡೆಯಲಿದ್ದವು.
ಇದನ್ನು ಓದಿರಿ: ಕುಸುಮಾ ವಿರುದ್ಧ ಪ್ರಚಾರಕ್ಕೆ 80 ಲಕ್ಷ ಬೇಡಿಕೆ ಇಟ್ಟ ಡಿ.ಕೆ.ರವಿ ತಾಯಿ?; ವಿಡಿಯೊ ವೈರಲ್
ನ್ಯೂಸ್ ನೇಷನ್ ಸಮೀಕ್ಷೆಯು ಬಿಜೆಪಿಗೆ 99-108, ಕಾಂಗ್ರೆಸ್‌ಗೆ 75-84, ಜೆಡಿಎಸ್‌ಗೆ 31-40 ಮತ್ತು ಇತರರಿಗೆ 3-7 ಸ್ಥಾನ ನೀಡಿತ್ತು. ದಿಗ್ವಿಜಯ್-ವಿಜಯವಾಣಿ ಸಮೀಕ್ಷೆಯು ಬಿಜೆಪಿಗೆ 103-107, ಕಾಂಗ್ರೆಸ್‌ಗೆ 76-80, ಜೆಡಿಎಸ್‌ಗೆ 31-35 ಮತ್ತು ಇತರರಿಗೆ 4-8 ಸ್ಥಾನಗಳನ್ನು ನೀಡಲಾಗಿತ್ತು.
ಇಂಡಿಯಾ ಟುಡೇ-ಆಕ್ಸಿಸ್ ಸಮೀಕ್ಷೆಯು ಕಾಂಗ್ರೆಸ್ ಗೆಲ್ಲಲಿದೆ ಎಂದು ಮುನ್ಸೂಚನೆ ನೀಡಿತ್ತು. ಆಡಳಿತರೂಢ ಕಾಂಗ್ರೆಸ್ 106 ರಿಂದ 118 ಸ್ಥಾನಗಳನ್ನು ಪಡೆಯಲಿದೆ ಎಂದಿತ್ತು. ಬಿಜೆಪಿ 79-92, ಜೆಡಿಎಸ್ 22-30 ಮತ್ತು ಇತರರು 1-4 ಗಳಿಸುತ್ತಾರೆ ಎಂದಿತ್ತು.
ಬಹುತೇಕ ಎಕ್ಸಿಟ್ ಪೋಲ್‌ಗಳು ನುಡಿದಂತೆ ಬಿಜೆಪಿ 104 ಸ್ಥಾನಗಳನ್ನು ಪಡೆದು ಬಹುದೊಡ್ಡ ಪಕ್ಷವಾಗಿ ಹೊಮ್ಮಿತು. ಕಾಂಗ್ರೆಸ್ 80, ಜೆಡಿಎಸ್ 38 (ಚುನಾವಣಾ ಪೂರ್ವ ಒಪ್ಪಂದ ಮಾಡಿಕೊಂಡಿದ್ದ ಬಿಎಸ್‌ಪಿಯ 1 ಸ್ಥಾನ ಸೇರಿ) ಕ್ಷೇತ್ರಗಳಲ್ಲಿ ಗೆದ್ದಿದ್ದವು.
2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 122 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ ಮತ್ತು ಜೆಡಿಎಸ್ ತಲಾ 40 ಸ್ಥಾನಗಳನ್ನು ಪಡೆದರೆ, ಯಡಿಯೂರಪ್ಪ ಅವರ ಅಂದಿನ ಕರ್ನಾಟಕ ಜನತಾ ಪಕ್ಷ (ಕೆಜೆಪಿ) 6 ಸ್ಥಾನಗಳನ್ನು ಮತ್ತು ಬಿ ಶ್ರೀರಾಮುಲು ಅವರ ಬಡವರ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ 4 ಸ್ಥಾನಗಳನ್ನು ಪಡೆದುಕೊಂಡಿದ್ದವು.



Bogus exit poll. Only assumptions.