Homeಕರ್ನಾಟಕವಿಶ್ಲೇಷಣೆ: ಎಕ್ಸಿಟ್ ಪೋಲ್ ಉಲ್ಟಾ ಹೊಡೆದ ಪ್ರಸಂಗಗಳಿವು

ವಿಶ್ಲೇಷಣೆ: ಎಕ್ಸಿಟ್ ಪೋಲ್ ಉಲ್ಟಾ ಹೊಡೆದ ಪ್ರಸಂಗಗಳಿವು

- Advertisement -
- Advertisement -

ಚುನಾವಣೋತ್ತರ ಅಥವಾ ಮತಗಟ್ಟೆ (exit poll) ಸಮೀಕ್ಷೆಗಳು ಯಾವಾಗಲೂ ಚರ್ಚೆಯ ವಿಷಯವಾಗಿ ತೋರುತ್ತಿವೆ. ಚುನಾವಣೆ ಮುಗಿದ ಬಳಿಕ ಬರುವ ಮತಗಟ್ಟೆ ಸಮೀಕ್ಷೆ ಕೆಲವೊಮ್ಮೆ ಸರಿಯಾಗಿಯೂ ಕೆಲವೊಮ್ಮೆ ತಪ್ಪಾಗಿಯೂ ಇರುವ ನಿದರ್ಶನಗಳಿವೆ.

ಮತಗಟ್ಟೆ ಸಮೀಕ್ಷೆಗಳು ಪ್ರಕಟವಾದಾಗ ಸಾಮಾನ್ಯವಾಗಿ ಕೆಲವರಿಗೆ ಆತಂಕ, ಕೆಲವರಿಗೆ ಖುಷಿಯಾಗುತ್ತದೆ. ಆದರೆ ಎಕ್ಸಿಟ್ ಪೋಲ್‌ನ ಇತಿಹಾಸವನ್ನು ಕೆದಕಿದರೆ, ನಿಜವಾದ ಫಲಿತಾಂಶ ಬರುವವರೆಗೂ ಮತದಾರರು ಸಮಾಧಾನದಿಂದ ಇರುವುದು ಸೂಕ್ತ.

ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಮತಗಟ್ಟೆ ಸಮೀಕ್ಷೆ ಹೊರಬಿದ್ದಿದೆ. ಕಾಂಗ್ರೆಸ್ ಮೈಲುಗೈ ಸಾಧಿಸುತ್ತದೆ ಎಂದು ಕೆಲವು ಸಮೀಕ್ಷೆ ಹೇಳಿದರೆ, ಕೆಲವು ಬಿಜೆಪಿಗೆ ಹೆಚ್ಚಿನ ಸ್ಥಾನವನ್ನು ನೀಡಿವೆ. ಎರಡು ಪಕ್ಷಕ್ಕೂ ಸರಳ ಬಹುಮತದ ಅವಕಾಶ ಇರುವುದನ್ನು ಕೆಲವು ಸಮೀಕ್ಷೆ ಸೂಚಿಸಿವೆ. ಆದರೆ ಈ ಸಮೀಕ್ಷೆಗಳು ಕೆಲವೊಮ್ಮೆ ನಿಜವೂ ಆಗಬಹುದು ಅಥವಾ ಹುಸಿಯೂ ಆಗಬಹುದು. ಈಗ ತೋರಿಸಿರುವ ಅಂಕಿ- ಅಂಶಗಳಿಗಿಂತ ಕಾಂಗ್ರೆಸ್ ಅಥವಾ ಬಿಜೆಪಿ ಇನ್ನು ಹೆಚ್ಚಿನ ಸ್ಥಾನಗಳನ್ನು ಪಡೆಯಬಹುದು ಅಥವಾ ಕಡಿಮೆಯೂ ಆಗಬಹುದು. ಯಾಕೆಂದರೆ ಮತಗಟ್ಟೆ ಸಮೀಕ್ಷೆಗಳು ಅನೇಕ ಸಲ ಉಲ್ಟಾ ಹೊಡೆದಿರುವುದನ್ನು ಇತಿಹಾಸ ಹೇಳುತ್ತದೆ.

ಮತಗಟ್ಟೆ ಸಮೀಕ್ಷೆ ಸುಳ್ಳಾದ ಚುನಾವಣೆಗಳು

ಎಕ್ಸಿಟ್ ಪೋಲ್‌ಗಳು ಸುಳ್ಳಾದ ಉದಾಹರಣೆಗಳನ್ನು ದೇಶದ ಜನರು ನೋಡಿದ್ದಾರೆ. 2004ರಲ್ಲಿ ಮತಗಟ್ಟೆ ಸಮೀಕ್ಷೆಯ ವೈಫಲ್ಯ ಹೆಚ್ಚು ಚರ್ಚೆಯಾಗಿತ್ತು. ಆ ಸಮಯದಲ್ಲಿ, ಹೆಚ್ಚಿನ ಎಕ್ಸಿಟ್ ಪೋಲ್‌ಗಳು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಊಹಿಸಲಾಗಿತ್ತು. ಆದರೆ ಫಲಿತಾಂಶ ಸಂಪೂರ್ಣವಾಗಿ ಉಲ್ಟಾ ಹೊಡೆದಿತ್ತು. ಎನ್‌ಡಿಎ ಮೈತ್ರಿ ಕೂಟವು 189 ಸ್ಥಾನಗಳನ್ನು ಪಡೆದುಕೊಂಡಿತು. ಕಾಂಗ್ರೆಸ್ ನೇತೃತ್ವದ ಯುಪಿಎ 222 ಸ್ಥಾನಗಳನ್ನು ಗೆದ್ದು, ಡಾ.ಮನಮೋಹನ್ ಸಿಂಗ್ ಪ್ರಧಾನಿಯಾದರು.

ಇದನ್ನೂ ಓದಿರಿ: ಕರ್ನಾಟಕ ಚುನಾವಣೆ ಎಕ್ಸಿಟ್ ಪೋಲ್: ಮತದಾನೋತ್ತರ ಸಮೀಕ್ಷೆಗಳು ಹೀಗೆ ಹೇಳುತ್ತಿವೆ

2009ರ ಚುನಾವಣೆಯಲ್ಲೂ ಎಕ್ಸಿಟ್ ಪೋಲ್ ಸುಳ್ಳಾಗಿದ್ದವು. ಬಹುತೇಕ ಮತಗಟ್ಟೆ ಸಮೀಕ್ಷೆಗಳು ಎನ್‌ಡಿಎಗಿಂತ ಯುಪಿಎ ಮೇಲುಗೈ ಸಾಧಿಸಲಿದೆ ಎಂದು ಹೇಳಲಾಗಿತ್ತಾದರೂ ಕಾಂಗ್ರೆಸ್ ಮಾತ್ರ 200ರ ಗಡಿ ದಾಟುತ್ತದೆ ಎಂದು ಯಾರೂ ಭವಿಷ್ಯ ನುಡಿದಿರಲಿಲ್ಲ. ಫಲಿತಾಂಶ ಪ್ರಕಟವಾದಾಗ ಕಾಂಗ್ರೆಸ್ ಪಕ್ಷ 206 ಸ್ಥಾನಗಳನ್ನು ಗೆದ್ದರೆ, ಯುಪಿಎ 262 ಸ್ಥಾನಗಳನ್ನು ಗಳಿಸಿತ್ತು.

2015ರ ಬಿಹಾರ ಅಸೆಂಬ್ಲಿ ಚುನಾವಣೆಯ ಫಲಿತಾಂಶವನ್ನು ಅಂದಾಜು ಮಾಡುವಲ್ಲಿ ಮತಗಟ್ಟೆ ಸಮೀಕ್ಷೆಗಳು ವಿಫಲವಾಗಿದ್ದವು. ಎಲ್ಲಾ ಎಕ್ಸಿಟ್ ಪೋಲ್‌ಗಳಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳ ಕುರಿತು ಸಕಾರಾತ್ಮಕ ಪ್ರತಿಕ್ರಿಯೆ ಬಂದಿತ್ತು. ಜೆಡಿಯು- ಆರ್‌ಜೆಡಿ ಗೆಲ್ಲುವುದಾಗಿ ಹೇಳಿದ್ದರೂ ಎನ್‌ಡಿಎ ಮೈತ್ರಿ ಕೂಟಕ್ಕೆ 100 ಸ್ಥಾನಗಳಿಗಿಂತ ಹೆಚ್ಚು ಸ್ಥಾನಗಳು ಬರುವುದಾಗಿ ಸಮೀಕ್ಷೆಗಳು ಹೇಳಿದ್ದವು. ಆದರೆ ವಾಸ್ತವದಲ್ಲಿ ಬಿಜೆಪಿ ಮೈತ್ರಿ ಕೂಟ 58 ಸ್ಥಾನಗಳಿಗೆ ಕುಸಿದಿದ್ದರೆ, ಜೆಡಿಯು-ಆರ್‌ಜೆಡಿ ಮೈತ್ರಿಕೂಟ 178 ಸ್ಥಾನಗಳನ್ನು ಗೆದ್ದಿತ್ತು.

2021 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆಯಲ್ಲಿ ಇಂಡಿಯಾ ಟುಡೇ ಸೇರಿದಂತೆ ಬಹುತೇಕರ ಸಮೀಕ್ಷೆಗಳು ಸುಳ್ಳಾಗಿತ್ತು. ಪೋಲ್ ಆಫ್ ಪೋಲ್‌, ಟೈಮ್ಸ್‌ನೌ-ಸಿವೋಟರ್‌, ಪಿ-ಮಾರ್ಕ್‌, ಇಟಿಜಿ ರೀಸರ್ಚ್‌, ಇಪ್‌ಸೋಸ್‌, ಪೊಲ್‌ಸ್ಟಾಟ್, ಎಬಿಪಿ-ಸಿವೊಟರ್‌ ಸಮೀಕ್ಷೆಗಳು ಸರಳ ಬಹುಮತ ಟಿಎಂಸಿ ಪಡೆಯಲಿದೆ ಮತ್ತು ಬಿಜೆಪಿಗೆ ಭಾರಿ ಲಾಭ ಮಾಡಿಕೊಳ್ಳುತ್ತದೆ ಎಂದು ಹೇಳಿತ್ತು. ಆದರೆ ಈ ಚುನಾವಣೆಯಲ್ಲಿ ಟಿಎಂಸಿ 214 ಸ್ಥಾನಗಳೊಂದಿಗೆ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಏರಿತ್ತು, ಆದರೆ ಬಿಜೆಪಿ ಕನಿಷ್ಠ ಪಕ್ಷ ನೂರರ ಗಡಿಯನ್ನು ದಾಟದೆ, 76 ಸ್ಥಾನಗಳಿಗೆ ಸಂತೃಪ್ತಿಗೊಂಡಿತ್ತು.

ವಿಶೇಷವೇನೆಂದರೆ, ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ, ಇಂಡಿಯಾ ಟುಡೆ-ಆಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆಯು 147 ಸ್ಥಾನಗಳೊಂದಿಗೆ ಬಿಜೆಪಿ ಸರಳ ಬಹುಮತ ಗಳಿಸಿ ಅಧಿಕಾರ ಹಿಡಿಯಲಿದೆ ಎಂದು ಹೇಳಿತ್ತು. ಜೊತೆಗೆ ರಿಪಬ್ಲಿಕ್‌-ಸಿಎನ್‌ಎಕ್ಸ್‌ ಕೂಡಾ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿತ್ತು. ಜನ್‌ಕಿ ಬಾತ್‌ ಸಮೀಕ್ಷೆ ಬಿಜೆಪಿಗೆ 174 ಕ್ಷೇತ್ರಗಳು ಸಿಗಲಿವೆ ಎಂದು ಹೇಳಿತ್ತು. ಇಂಡಿಯಾ ಟಿವಿ 192 ಸ್ಥಾನಗಳು ಬಿಜೆಪಿಗೆ ದಕ್ಕಲಿವೆ ಎಂದಿತ್ತು. ಆದರೆ ಫಲಿತಾಂಶ ಬಂದಾಗ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿ, TMC ಗೆ 214,
BJPಗೆ 76 ಮತ್ತು ಕಾಂಗ್ರೆಸ್-ಎಡ ಪಕ್ಷ-ಇತರೆ ಸೇರಿ 3 ಸ್ಥಾನಗಳು ದಕ್ಕಿತ್ತು.

ಸಮೀಕ್ಷೆ ನಿಜವಾದ ಚುನಾವಣೆಗಳು

ಎಕ್ಸಿಟ್‌ ಪೋಲ್ ಸರಿಯಾದ ಸಂದರ್ಭಗಳು ಸಾಕಷ್ಟಿವೆ. 1996ರ ಲೋಕಸಭಾ ಚುನಾವಣೆಯಲ್ಲಿ, ಸಿಎಸ್‌ಡಿಎಸ್‌‌ನ ಮತಗಟ್ಟೆ ಸಮೀಕ್ಷೆಯು ಸರಿಯಾದ ಅಂದಾಜನ್ನು ಮಾಡಿತ್ತು.

ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಯಾರಿಗೂ ಬಹುಮತ ದೊರೆತಿರಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ಆ ಸಮಯದಲ್ಲಿ ಸರ್ಕಾರವನ್ನು ರಚಿಸಿದರು. ಆದರೆ ಅವರ ಸರ್ಕಾರವು 13 ದಿನಗಳಲ್ಲಿ ಪತನವಾಯಿತು.

ಇದನ್ನೂ ಓದಿರಿ: 2018ರಲ್ಲಿ ನಿಜವಾಗಿದ್ದ ಎಕ್ಸಿಟ್ ಪೋಲ್; 8 ಸಮೀಕ್ಷೆಗಳು ಏನು ಹೇಳಿದ್ದವು?

ಅದೇ ರೀತಿ 1998ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಹುತೇಕ ಎಕ್ಸಿಟ್ ಪೋಲ್‌ಗಳ ಫಲಿತಾಂಶ ಸರಿಯಾಗಿತ್ತು. ಬಿಜೆಪಿ ಹಾಗೂ ಮಿತ್ರ ಪಕ್ಷಗಳು 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತವೆ; ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು 200ಕ್ಕಿಂತ ಕಡಿಮೆ ಸ್ಥಾನಗಳನ್ನು ಗೆಲ್ಲಲಿವೆ ಎಂದು ಅಂದಾಜಿಸಲಾಗಿತ್ತು. ಫಲಿತಾಂಶ ಬಂದಾಗ, ಬಿಜೆಪಿ ಹಾಗೂ ಮಿತ್ರ ಪಕ್ಷಗಳು 252, ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು 166, ಮತ್ತು ಇತರ ಪಕ್ಷಗಳು 119 ಸ್ಥಾನಗಳನ್ನು ಗೆದ್ದಿದ್ದವು.

2014ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಎಕ್ಸಿಟ್ ಪೋಲ್‌‌ ನಿಖರವಾಗಿತ್ತು. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರ ಹಿಡಿಯಲಿದೆ ಎನ್ನಲಾಗಿತ್ತು. ಫಲಿತಾಂಶ ಬಂದಾಗ, ಬಿಜೆಪಿ ಸ್ವಂತ ಬಲದಿಂದ ಬಹುಮತ ಗಳಿಸಿತ್ತು. ಎನ್‌ಡಿಎ 336 ಸ್ಥಾನಗಳನ್ನು ಗಳಿಸಿತು. ಕಾಂಗ್ರೆಸ್ ಪಕ್ಷ 44 ಸ್ಥಾನಗಳಿಗೆ ಕುಸಿದಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...