ಗೂರ್ಖಾ ಜನಮುಕ್ತಿ ಮೋರ್ಚಾದ (GJM) ಹಿರಿಯ ನಾಯಕ ಬಿಮಲ್ ಗುರುಂಗ್ ಬಣದ ರೋಶನ್ ಗಿರಿ, ಮುಂದಿನ ವರ್ಷದ ಪಶ್ಚಿಮ ಬಂಗಾಳ ವಿಧಾನಸಭ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಟಿಎಂಸಿ ಪಕ್ಷವನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ.
2021 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಜಿಜೆಎಂನ ಬಿಮಲ್ ಗುರುಂಗ್ ಬಣವು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಯನ್ನು ಬೆಂಬಲಿಸುತ್ತದೆ ಮತ್ತು ಮಮತಾ ಬ್ಯಾನರ್ಜಿ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗುವುದನ್ನು ನೋಡಲು ಬಯಸುತ್ತದೆ ಎಂದು ರೋಶನ್ ಗಿರಿ ಕುರ್ಸಿಯಾಂಗ್‌ನಲ್ಲಿ ನಡೆದ ರ್‍ಯಾಲಿಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಗೂರ್ಖಾ ನಾಯಕ ಬಿಮಲ್ ಗುರುಂಗ್ ನೇತೃತ್ವದ ಜಿಜೆಎಂ ಅಕ್ಟೋಬರ್‌ನಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ತ್ಯಜಿಸಿ ಟಿಎಂಸಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿತು.
ಇದೇ ವೇಳೆ, ತಾವು ಗೂರ್ಖಾಲ್ಯಾಂಡ್ ಬೇಡಿಕೆಯನ್ನು ಬಿಟ್ಟುಕೊಡುತ್ತಿಲ್ಲ ಮತ್ತು 2024 ರ ಲೋಕಸಭಾ ಚುನಾವಣೆಯಲ್ಲಿ ಗೂರ್ಖಾಲ್ಯಾಂಡ್ ಸಮಸ್ಯೆಗೆ ಸ್ಪಂದಿಸುವವರಿಗೆ ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಂಗಾಳವನ್ನು’ಗಲಭೆ ಪೀಡಿತ ಗುಜರಾತ್’ ಮಾಡಲು ಎಂದಿಗೂ ಬಿಡುವುದಿಲ್ಲ- ಮಮತಾ ಬ್ಯಾನರ್ಜಿ
“ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಗೆ ನಾವು ಬೆಂಬಲ ನೀಡುತ್ತೇವೆ. ಡಾರ್ಜಿಲಿಂಗ್ ಬೆಟ್ಟಗಳ ಅಭಿವೃದ್ಧಿಯ ಬಗ್ಗೆ ಮಮತಾ ಬ್ಯಾನರ್ಜಿ ನೀಡಿದ ಭರವಸೆಗಳನ್ನು ಈಡೇರಿಸಿದ್ದಾರೆ. ಆದರೆ, ಭಾರತೀಯ ಜನತಾ ಪಕ್ಷ (ಬಿಜೆಪಿ), 2009 ರಿಂದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಬೆಂಬಲವನ್ನು ಪಡೆದುಕೊಂಡಿದ್ದರೂ, ಅದು ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ” ಎಂದಿದ್ದಾರೆ.
“ನಾವು ಬಿಜೆಪಿಯನ್ನು ನಂಬುವುದಿಲ್ಲ ಆದರೆ ತೃಣಮೂಲ ಕಾಂಗ್ರೆಸ್ ಮೇಲೆ ನಮಗೆ ನಂಬಿಕೆ ಇದೆ” ಎಂದು ಗೂರ್ಖಾ ಜನಮುಕ್ತಿ ಮೋರ್ಚಾದ ರೋಶನ್ ಗಿರಿ ಹೇಳಿದ್ದಾರೆ.
ಇತ್ತ, ಈ ಹಿಂದೆ ಪ್ರತ್ಯೇಕ ಗೂರ್ಖಾಲ್ಯಾಂಡ್ ಬೇಡಿಕೆಯನ್ನು ಟಿಎಂಸಿ ಬೆಂಬಲಿಸದಿರುವ ಬಗ್ಗೆ ಪ್ರತಿಕ್ರಿಯಿಸಿರುವ ನಾಯಕ, “ನಮ್ಮ ರಾಜ್ಯತ್ವದ ಬೇಡಿಕೆಯನ್ನು ಈಡೇರಿಸಲು ತೃಣಮೂಲ ಕಾಂಗ್ರೆಸ್ ಸರ್ಕಾರವು ಏನನ್ನೂ ಮಾಡಲು ಸಾಧ್ಯವಿಲ್ಲ, ಅವರಿಗೆ ಅಗತ್ಯವಾದ ಅಧಿಕಾರವಿಲ್ಲ” ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ 294 ಸದಸ್ಯರ ವಿಧಾನಸಭೆಗೆ ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿವೆ. ಈಗಾಗಲೇ ಬಿಜೆಪಿ, ಟಿಎಂಸಿ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿವೆ. ಎರಡು ಪಕ್ಷಗಳು ಚುನಾವಣಾ ಕಣಕ್ಕಿಳಿದಿವೆ. ಕಾಂಗ್ರೆಸ್ ಕೂಡ ಎಡಪಂಥೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಚುನಾವಣೆಗೆ ತಯಾರಾಗುತ್ತಿದೆ.


