2019 ಮತ್ತು 2021 ರ ನಡುವೆ ದೇಶದಲ್ಲಿ ಒಟ್ಟು 35,950 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಮಂಗಳವಾರ ಸಂಸತ್ತಿಗೆ ತಿಳಿಸಿದೆ.
ದೇಶದಲ್ಲಿ ಸಾಮಾಜಿಕ ತಾರತಮ್ಯದಿಂದ ಆತ್ಮಹತ್ಯೆ ಮಾಡಿಕೊಂಡ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡದ (ಎಸ್‌ಟಿ) ವಿದ್ಯಾರ್ಥಿಗಳ ಸಂಖ್ಯೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಜನತಾ ದಳ (ಯುನೈಟೆಡ್) ಸದಸ್ಯ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಅಬ್ಬಯ್ಯ ನಾರಾಯಣಸ್ವಾಮಿ “ದೇಶದಲ್ಲಿ ಸಾಮಾಜಿಕ ತಾರತಮ್ಯದಿಂದ ಆತ್ಮಹತ್ಯೆ ಮಾಡಿಕೊಂಡ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಸಂಖ್ಯೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ” ಎಂದು ಹೇಳಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ)ದ ಅಂಕಿ ಅಂಶಗಳ ಪ್ರಕಾರ, 2019 ರಲ್ಲಿ 10,335, 2020ರಲ್ಲಿ 12,526 ಮತ್ತು 2021 ರಲ್ಲಿ 13,089 ವಿದ್ಯಾರ್ಥಿಗಳ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ತಾರತಮ್ಯವನ್ನು ತಡೆಗಟ್ಟಲು ದೇಶದಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ? ಎಂಬ ಪ್ರಶ್ನೆಗೆ ಉತ್ತರಿಸಿದ ನಾರಾಯಣಸ್ವಾಮಿ, ಉನ್ನತ ಶಿಕ್ಷಣ ಇಲಾಖೆಯು ಕೌನ್ಸೆಲಿಂಗ್ ಸೆಲ್‌ಗಳನ್ನು ಸ್ಥಾಪಿಸಿದೆ. ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ಸೆಲ್, ಸಮಾನ ಅವಕಾಶ ಸೆಲ್, ವಿದ್ಯಾರ್ಥಿಗಳ ಕುಂದು ಕೊರತೆಗಳ ಸೆಲ್, ಈ ರೀತಿಯ ವಿವಿಧ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ಕುಂದುಕೊರತೆ ಸಮಿತಿ ಮತ್ತು ದೇಶಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಸಂಪರ್ಕ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ಅಸ್ಪೃಶ್ಯತೆ, ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) (ದೌರ್ಜನ್ಯಗಳ ತಡೆಗಟ್ಟುವಿಕೆ)ಗಳ ನಾಗರಿಕ ಹಕ್ಕುಗಳ (ಪಿಸಿಆರ್) ಕಾಯಿದೆ 1955, ( ಪಿಒಎ) ಕಾಯಿದೆ, 1989, ಎಸ್‌ಸಿ ಮತ್ತು ಎಸ್‌ಟಿಗಳ ವಿದ್ಯಾರ್ಥಿಗಳು ಸೇರಿದಂತೆ ಸದಸ್ಯರ ವಿರುದ್ಧ ದೌರ್ಜನ್ಯದ ಅಪರಾಧಗಳ ತಡೆ ಆಯೋಗ ಜಾರಿಯಲ್ಲಿದೆ ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ : ಕಳೆದ 5 ವರ್ಷಗಳಲ್ಲಿ ಒಳಚರಂಡಿ ಸ್ವಚ್ಚಗೊಳಿಸುವಾಗ 400ಕ್ಕೂ ಹೆಚ್ಚು ಜನರು ಸಾವು: ಕೇಂದ್ರ ಸರ್ಕಾರ


