Homeಕರ್ನಾಟಕ547 ಕೋಟಿ ರೂ. ಕ್ರಿಯಾ ಯೋಜನೆಗೆ ತುಮಕೂರು ಜಿಪಂ ಅನುಮೋದನೆ

547 ಕೋಟಿ ರೂ. ಕ್ರಿಯಾ ಯೋಜನೆಗೆ ತುಮಕೂರು ಜಿಪಂ ಅನುಮೋದನೆ

ಕಳೆದ ಹಲವು ದಿನಗಳಿಂದ ವಾಕ್ಸಮರಕ್ಕೆ ಗುರಿಯಾಗಿದ್ದ ಅಧ್ಯಕ್ಷರು ಮತ್ತು ಆರೋಪಗಳ ಸುರಿಮಳೆಗರೆದಿದ್ದ ಸದಸ್ಯರು ಸಾಮಾನ್ಯ ಸಭೆಯಲ್ಲಿ ಏನೂ ಆಗಿಲ್ಲವೆಂಬಂತೆ ನಡೆದುಕೊಂಡು ಅಚ್ಚರಿ ಮೂಡಿಸಿದರು

- Advertisement -
- Advertisement -

ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ಅಧ್ಯಕ್ಷರ ವಿರುದ್ಧ ಸಿಡಿದೆದ್ದಿದ್ದ ಸದಸ್ಯರು ಕೋರಂ ಕೊರತೆ ಸೃಷ್ಟಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ಸೂಪರ್ ಸೀಡ್ ಮಾಡುವ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ ಇಂದು ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ಅಡ್ಡಿಆತಂಕಗಳಿಲ್ಲದೆ ಸುಸೂತ್ರವಾಗಿ ನಡೆಯಿತು. ಎಲ್ಲ ಸದಸ್ಯರೂ ಸಭೆಯಲ್ಲಿ ಹಾಜರಿದ್ದರೂ ಅಧ್ಯಕ್ಷರ ವಿರುದ್ದ ಸಣ್ಣ ದನಿಯೂ ವ್ಯಕ್ತಪಡಿಸದೆ 547 ಕೋಟಿ ರೂಪಾಯಿ ಕ್ರಿಯಾ ಯೋಜನೆಗೆ ಅನುಮೋದನೆ ದೊರೆತಿದೆ.

ಹೌದು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಅವರನ್ನು ಅಧ್ಯಕ್ಷಗಾದಿಯಿಂದ ಇಳಿಸಲು ಪ್ರಯತ್ನ ನಡೆದಿತ್ತು. ಮೂರು ಪಕ್ಷಗಳ ಸದಸ್ಯರೂ ಕೂಡ ಅಧ್ಯಕ್ಷರ ಕಾರ್ಯ ವೈಖರಿ ವಿರುದ್ಧ ಸಿಡಿದೆದ್ದಿದ್ದರು. ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪವನ್ನೂ ಮಾಡಿದ್ದರು.

ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಸಣ್ಣ ಮುದ್ದಯ್ಯ ಕಾಡುಗೊಲ್ಲರಿಗೆ ಅಧ್ಯಕ್ಷ ಸ್ಥಾನವನ್ನು ನೀಡಬೇಕೆಂದೂ ಆಗ್ರಹಿಸಿದ್ದರು. ಇಷ್ಟೆಲ್ಲಾ ಗೊಂದಲಗಳ ನಡುವೆಯೇ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗಿದ ಮೇಲೆ ನಡೆದ ಸಾಮಾನ್ಯ ಸಭೆಯಲ್ಲಿ ಯಾವೊಬ್ಬ ಸದಸ್ಯರು ಮಾತಾಡದೇ ಮೌನಕ್ಕೆ ಶರಣಾಗಿದ್ದುದು ಅಚ್ಚರಿ ಉಂಟು ಮಾಡಿತು.

ಕಳೆದ ನಾಲ್ಲು ದಿನಗಳ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಸಾಮಾನ್ಯ ಸಭೆ ನಡೆಯದೆ ಕ್ರಿಯಾ ಯೋಜನೆಗೆ ಅನುಮೋದನೆ ದೊರೆತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ತುಮಕೂರು ಜಿಲ್ಲಾ ಪಂಛಾಯತ್ ಅನ್ನು ಸೂಪರ್ ಸೀಡ್ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದರು.

ಇದನ್ನೂ ಓದಿ: ಎರಡು-ಮೂರು ದಿನದಲ್ಲಿ ಸಚಿವ ಸಂಪುಟ ವಿಸ್ತರಣೆ: ಮುಖ್ಯಮಂತ್ರಿ ಯಡಿಯೂರಪ್ಪ

ಆದರೆ ಹಿರಿಯ ಸದಸ್ಯ ವೈ.ಎಚ್.ಹುಚ್ಚಯ್ಯ ಅವರು ನಾನುಗೌರಿ.ಕಾಂ ಜೊತೆ ಮಾತನಾಡಿ “ಜಿಪಂ ಸೂಪರ್ ಸೀಡ್ ಮಾಡುವುದಿಲ್ಲ. ಸಚಿವರು ಹಾಗೆ ಹೇಳಿರುವುದು ಸದಸ್ಯರಿಗೆ ಎಚ್ಚರಿಕೆ ನೀಡುವುದಕ್ಕಾಗಿ. ನಾಲ್ಕೈದು ತಿಂಗಳು ಮಾತ್ರ ಅಧಿಕಾರ ಅವಧಿ ಇದೆ. ಸಚಿವರ ಉದ್ದೇಶ ಅದಲ್ಲ. ಸುಮಾರು 547 ಕೋಟಿ ರೂಪಾಯಿ ಕ್ರಿಯಾ ಯೋಜನೆಗೆ ಅನುಮೋದನೆ ಸಿಗಬೇಕಾಗಿದೆ. ಅಭಿವೃದ್ಧಿ ಕಾರ್ಯಕಗಳು ಸ್ಥಗಿತವಾಗಿವೆ. ಹಾಗಾಗಿ ಸಚಿವರು ಇಂತಹ ಹೇಳಿಕೆಯನ್ನು ಕೊಟ್ಟಿದ್ದಾರೆ” ಎಂದು ಹೇಳಿದ್ದರು. ಅದರಂತೆಯೇ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮೌನವಾಗಿ ಕುಳಿತು ಕ್ರಿಯಾ ಯೋಜನೆಗೆ ಒಪ್ಪಿಗೆ ಸೂಚಿಸಿದ್ದಾರೆ.

ಸದಸ್ಯರು ಮೂರು ಸಾಮಾನ್ಯ ಸಭೆಗೆ ಗೈರು ಹಾಜರಾದರೆ ಸದಸ್ಯತ್ವ ರದ್ದಾಗುತ್ತದೆ ಎಂಬ ನಿಯಮವಿದೆ. ಅದಕ್ಕಾಗಿಯೇ ಎಲ್ಲಾ ಸದಸ್ಯರು ಇಂದಿನ ಸಭೆಗೆ ಆಗಮಿಸಿದ್ದರು. ಹನ್ನೊಂದು ಗಂಟೆಗೆ ಸೇರಿದ ಸಭೆ 12 ಗಂಟೆಗೆ ಮುಕ್ತಾಯವಾಯಿತು.

ಅಧ್ಯಕ್ಷರ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಿದ್ದ ಸದಸ್ಯರು ಮೌನಕ್ಕೆ ಶರಣಾಗಿದ್ದರು. ಸೂಪರ್ ಸೀಡ್ ಮಾಡುವ ಹೇಳಿಕೆ ನೀಡಿದ್ದ ಸಚಿವ ಜೆ.ಸಿಮಾಧುಸ್ವಾಮಿ ಅವರೇ ಸಭೆಯಲ್ಲಿ ಕ್ರಿಯಾ ಯೋಜನೆಗೆ ಅನುಮೋದನೆ ಪಡೆದುಕೊಂಡರು. ಸಂಸದ ಬಸವರಾಜು ಕೂಡ ವೇದಿಕೆಯಲ್ಲಿದ್ದರು.

ಒಂದಿಬ್ಬರು ಸದಸ್ಯರು 2018-2019ನೇ ಸಾಲಿನ ಕ್ರಿಯಾ ಯೋಜನೆಗೆ ಅನುಮೋದನೆ ಪಡೆದುಕೊಂಡಿಲ್ಲ ಎಂದು ವಿಷಯ ಪ್ರಸ್ತಾಪಿಸಿ ಅಧ್ಯಕ್ಷರನ್ನು ತಿವಿಯುವ ಕೆಲಸ ಮಾಡಿದರು. ಆದರೆ ಆ ಮಾತುಗಳಿಗೆ ಯಾರೂ ಕಿಮ್ಮತ್ತು ನೀಡಲಿಲ್ಲ. ಅಧ್ಯಕ್ಷೆ ಲತಾ ರವಿಕುಮಾರ್ ಕೂಡ ವೇದಿಕೆಯಲ್ಲಿ ಗಂಭೀರವಾಗಿ ಕುಳಿತುಕೊಂಡು ಸದಸ್ಯರ ನಡೆಯನ್ನು ಗಮನಿಸುತ್ತಿದ್ದರು. ಕಳೆದ ಹಲವು ದಿನಗಳಿಂದ ವಾಕ್ಸಮರಕ್ಕೆ ಗುರಿಯಾಗಿದ್ದ ಅಧ್ಯಕ್ಷರು ಮತ್ತು ಆರೋಪಗಳ ಸುರಿಮಳೆಗರೆದಿದ್ದ ಸದಸ್ಯರು ಏನೂ ಆಗಿಲ್ಲವೆಂಬಂತೆ ನಡೆದುಕೊಂಡು ಪತ್ರಕರ್ತರನ್ನು ಅಚ್ಚರಿಗೆ ದೂಡಿದರು.


ಇದನ್ನೂ ಓದಿ: ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ದೂರು; ತನಿಖೆಗೆ ಆಗ್ರಹಿಸಿ ರಾಜ್ಯಪಾಲರಿಗೆ ಪತ್ರ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...