ತಮ್ಮ ಬೇಡಿಕೆಗಳನ್ನು ಈಡೇರಿಸದೆ ರೈತರಿಗೆ ದ್ರೋಹ ಬಗೆದಿರುವ ಬಿಜೆಪಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವಂತೆ ಉತ್ತರ ಪ್ರದೇಶದ ರೈತರಿಗೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮನವಿ ಮಾಡಿದೆ ಎಂದು ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ ಗುರುವಾರ ಹೇಳಿದ್ದಾರೆ.
ಎಸ್‌ಕೆಎಂ ನೀಡಿರುವ #NoVoteToBJP ಕರೆಗೆ ಐವತ್ತೇಳು ರೈತ ಸಂಘಟನೆಗಳು ಬೆಂಬಲ ನೀಡಿವೆ ಎಂದು ಯೋಗೇಂದ್ರ ಯಾದವ್ ತಿಳಿಸಿದ್ದಾರೆ. ಆದರೆ, ಚುನಾವಣೆಯಲ್ಲಿ ಬೇರೆ ಯಾವುದೇ ಪಕ್ಷ ಮತ ಕೇಳುವುದಕ್ಕೂ ಸಂಯುಕ್ತ ಕಿಸಾನ್ ಮೋರ್ಚಾಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಒಕ್ಕೂಟ ಸರ್ಕಾರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ನಡೆದ ರೈತ ಹೋರಾಟದ ನೇತೃತ್ವ ವಹಿಸಿತ್ತು. ಒಮದು ವರ್ಷಗಳ ಸುದೀರ್ಘ ಹೋರಾಟದ ನಂತರ ಮೋದಿ ನೇತೃತ್ವದ ಸರ್ಕಾರ ಕಾನೂನುಗಳನ್ನು ಹಿಂತೆಗೆದುಕೊಂಡಿತ್ತು.
ಇದನ್ನೂ ಓದಿ: ಯುಪಿ ಚುನಾವಣೆ: ಯಾವ ಪಕ್ಷಕ್ಕೂ ಇಲ್ಲ ರೈತರ ಮತ, ನೋಟಾದತ್ತ ಎಲ್ಲರ ಚಿತ್ತ
Mission UP launched by Samyukta Kisan Morcha as #NoVoteToBJP pic.twitter.com/l9ziJRieQy
— Kisan Ekta Morcha (@Kisanektamorcha) February 3, 2022
ಆದರೆ, ರೈತರ ಮತ್ತಷ್ಟು ಬೇಡಿಕೆಗಳನ್ನು ಈಡೇರಿಸದೆ ಭರವಸೆ ನಿಡಿ ಸುಮ್ಮನಾಗಿದೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸಮಿತಿಯನ್ನು ಸ್ಥಾಪಿಸುವುದು ಮತ್ತು ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದು ಸೇರಿದಂತೆ ಉಳಿದ ಬೇಡಿಕೆಗಳು ಈಡೇರಿಲ್ಲ ಎಂದು ಆರೋಪಿಸಿರುವ ಎಸ್‌ಕೆಎಂ ಸದಸ್ಯರು ಚುನಾವಣೆಯಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ರೈತರಿಗೆ ಮನವಿ ಮಾಡಿದ್ದಾರೆ.
“ರೈತರಿಗೆ ದ್ರೋಹ ಎಸಗಿರುವ ಬಿಜೆಪಿಯನ್ನು ಮುಂಬರುವ ಚುನಾವಣೆಯಲ್ಲಿ ಶಿಕ್ಷಿಸುವಂತೆ ಎಸ್‌ಕೆಎಂ ಯುಪಿಯಲ್ಲಿ ರೈತರಿಗೆ ಮನವಿ ಮಾಡಿದೆ. ಸರ್ಕಾರ ತನ್ನ ಭರವಸೆಗಳನ್ನು ಈಡೇರಿಸಿಲ್ಲ. ಎಂಎಸ್‌ಪಿಗಾಗಿ ಯಾವುದೇ ಸಮಿತಿಯನ್ನು ರಚಿಸಿಲ್ಲ ಮತ್ತು ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆದಿಲ್ಲ” ಎಂದು ಯೋಗೇಂದ್ರ ಯಾದವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
“ನಾವು ಮುಂಬರುವ ದಿನಗಳಲ್ಲಿ ಮೀರತ್, ಕಾನ್ಪುರ, ಸಿದ್ಧಾರ್ಥನಗರ, ಗೋರಖ್‌ಪುರ ಮತ್ತು ಲಕ್ನೋ ಸೇರಿದಂತೆ ಒಂಬತ್ತು ಸ್ಥಳಗಳಲ್ಲಿ ಪತ್ರಿಕಾಗೋಷ್ಠಿಗಳನ್ನು ಆಯೋಜಿಸುತ್ತೇವೆ. ಬಿಜೆಪಿಗೆ ಮತ ಹಾಕದಂತೆ ನಮ್ಮ ಮನವಿಯನ್ನು ಹೊಂದಿರುವ ಕರಪತ್ರಗಳನ್ನು ಉತ್ತರ ಪ್ರದೇಶದಾದ್ಯಂತ ವಿತರಿಸಲಾಗುವುದು. ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯ ರಹಿತವಾಗಿ ಉಳಿಯುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಈ ಹಿಂದೆ ರೈತರ ಬೆಂಬಲ ದುರುಪಯೋಗ ಮಾಡಿಕೊಂಡಿದೆ, ಈ ಬಾರಿ ರೈತರು ಬುದ್ದಿ ಕಲಿಸುತ್ತಾರೆ: ನರೇಶ್ ಟಿಕಾಯತ್


