2018 ಮತ್ತು 2020 ರ ನಡುವೆ 25,000 ಕ್ಕೂ ಹೆಚ್ಚು ಭಾರತೀಯರು ನಿರುದ್ಯೋಗ ಅಥವಾ ಸಾಲದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ ಎಂದು ಒಕ್ಕೂಟ ಸರ್ಕಾರ ಬುಧವಾರ ರಾಜ್ಯಸಭೆಗೆ ತಿಳಿಸಿದೆ.
ಈ ಮೂರು ವರ್ಷದ ಅವಧಿಯಲ್ಲಿ 9,140 ಜನರು ನಿರುದ್ಯೋಗ ಮತ್ತು 16,091 ಜನರು ಆರ್ಥಿಕ ದಿವಾಳಿತನ ಅಥವಾ ಸಾಲದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಂಕಿಅಂಶಗಳು ತಿಳಿಸಿವೆ ಎಂದು ಒಕ್ಕೂಟ ಸರ್ಕಾರವು ರಾಜ್ಯಸಭೆಗೆ ಮಾಹಿತಿ ನೀಡಿದೆ.
ಕಳೆದ ಕೆಲವು ವಾರಗಳಿಂದ ನಿರುದ್ಯೋಗ ಸಮಸ್ಯೆಗಳ ಬಗ್ಗೆ ಪ್ರತಿಪಕ್ಷಗಳು ಒಕ್ಕೂಟ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ರಾಜ್ಯ ಸಭೆಯಲ್ಲಿ ಈ ವಿಷಯದ ಕುರಿತು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ರಾಜ್ಯ ಸಚಿವ (ಗೃಹ) ನಿತ್ಯಾನಂದ ರೈ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಒದಗಿಸಿದ ದತ್ತಾಂಶವನ್ನು ಸರ್ಕಾರದ ಅಂಕಿಅಂಶಗಳು ಆಧರಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ 48% ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರುದ್ಯೋಗಿಗಳು: NITI ಆಯೋಗದ ಉಪಾಧ್ಯಕ್ಷ
ಒಕ್ಕೂಟ ಸರ್ಕಾರ ನೀಡಿರುವ ಅಂಕಿಅಂಶಗಳ ಪ್ರಕಾರ, 2020 ರ ಸಾಂಕ್ರಾಮಿಕ ವರ್ಷದಲ್ಲಿ ಅತಿ ಹೆಚ್ಚು (3,548) ನಿರುದ್ಯೋಗಿಗಳ ಆತ್ಮಹತ್ಯೆಗಳು ವರದಿಯಾಗಿವೆ . 2018 ರಲ್ಲಿ 2,741 ಮತ್ತು 2019 ರಲ್ಲಿ 2,851 ಮಂದಿ ನಿರುದ್ಯೋಗದ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿವಾಳಿತನದಿಂದಾಗಿ, ಸಾಲದಿಂದಾಗಿ 2018 ರಲ್ಲಿ 4,970 ಜನ, 2019 ರಲ್ಲಿ 5,908, 2020 ರಲ್ಲಿ 5,213 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾನಸಿಕ ಆರೋಗ್ಯದತ್ತ ಗಮನಹರಿಸಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸಚಿವರು ಹೇಳಿದ್ದಾರೆ. “ಮಾನಸಿಕ ಅಸ್ವಸ್ಥತೆಗಳ ಹೊರೆಯನ್ನು ಪರಿಹರಿಸಲು, ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ, ಜೊತೆಗೆ ದೇಶದ 692 ಜಿಲ್ಲೆಗಳಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ನಡೆಸಲಾಗುತ್ತದೆ” ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ನಾಲ್ಕು ವರ್ಷಗಳಿಂದ ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದರೂ ರಾಜ್ಯ ಸರ್ಕಾರ ಈ ವರ್ಷ ಪರಿಗಣಿಸದ ಕಾರಣ, ಮನನೊಂದು ಅತಿಥಿ ಉಪನ್ಯಾಸಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹಾಸನ ಜಿಲ್ಲೆ ಬೇಲೂರು ಪಟ್ಟಣ ಸಮೀಪದ ವೈಡಿಡಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸರ್ವೋದಯ ಕಾಲೇಜಿನಲ್ಲಿ 4 ವರ್ಷಗಳಿಂದ ಅತಿಥಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದ್ದ ಚಿಕ್ಕಮಗಳೂರಿನವರಾದ ಉಮೆಯಾನಿ (30) ಸಾವಿಗೆ ಶರಣಾಗಿದ್ದಾರೆ.
(ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ – 104)
ಇದನ್ನೂ ಓದಿ: ಅರ್ಜಿ ಸ್ವೀಕರಿಸದ ರಾಜ್ಯ ಸರ್ಕಾರ: ಕೆಲಸ ಕಳೆದುಕೊಂಡ ಅತಿಥಿ ಉಪನ್ಯಾಸಕಿ ಆತ್ಮಹತ್ಯೆ


