ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರುವ, ಬೇರೆ ರಾಜ್ಯಗಳಲ್ಲೂ ವಿವಾದಕ್ಕೆ ಕಾರಣವಾಗಿರುವ ರಾಜ್ಯದ ಹಿಜಾಬ್- ಕೇಸರಿ ಶಾಲು ವಿವಾದದ ಕುರಿತ ರಾಜ್ಯ ಸರ್ಕಾರದ ನಿಯಮಗಳು ಹಲವು ಅನುಮಾನಗಳಿಗೆ ಎಡೆ ಮಾಡುತ್ತಿವೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಹೊರಡಿಸಿರುವ 2021-22ರ ಪ್ರವೇಶ ಮಾರ್ಗಸೂಚಿಗಳು ಮತ್ತು ಸರ್ಕಾರದ ಹೇಳಿಕೆಗಳು ತದ್ವಿರುದ್ಧವಾಗಿವೆ.
ಹೌದು, ಪದವಿ ಪೂರ್ವ ಶಿಕ್ಷಣ ಇಲಾಖೆಯ ಮಾರ್ಗಸೂಚಿಯಲ್ಲಿರುವ ಸಮವಸ್ತ್ರದ ಕುರಿತ ನಿಯಮಗಳು ಮತ್ತು ರಾಜ್ಯ ಸರ್ಕಾರ ಸಮವಸ್ತ್ರ ಜಾರಿ ಮಾಡಿ ಆದೇಶಿಸಿರುವುದು ನಿಜಕ್ಕೂ ತದ್ವಿರುದ್ಧ. ಇದು ಇಲಾಖೆಯೇ ಬಿಡುಗಡೆ ಮಾಡಿದ್ದ ಪ್ರವೇಶ ಮಾರ್ಗಸೂಚಿಗಳಲ್ಲಿ ಕಂಡು ಬಂದಿದೆ.
ಈ 2021-22ರ ಪ್ರವೇಶ ಮಾರ್ಗಸೂಚಿಗಳ ಪ್ರಕಾರ ಸಮವಸ್ತ್ರವನ್ನು ಕಡ್ಡಾಯವಲ್ಲ. ಕೆಲವು ಕಾಲೇಜು ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಗಳು ಸಮವಸ್ತ್ರವನ್ನು ಕಡ್ಡಾಯಗೊಳಿಸುವುದು ನಿಯಮ ಬಾಹಿರವಾಗಿರುತ್ತದೆ. ಮೇಲ್ಕಂಡ ಸೂಚನೆಗಳನ್ನು ಉಲ್ಲಂಘಿಸಿದ್ದಲ್ಲಿ ಗಂಭೀರವಾಗಿ ಪರಿಗಣಿಸುವುದಾಗಿಯೂ ತಿಳಿಸಿದೆ. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಸಮವಸ್ತ್ರ ಕಡ್ಡಾಯ ಎಂದು ನೀಡಿರುವ ಹೇಳಿಕೆಗೆ ತದ್ವಿರುದ್ಧವಾಗಿದೆ.
ಇದನ್ನೂ ಓದಿ: ಹಿಜಾಬ್ ವಿವಾದ: ತಮಿಳುನಾಡು, ಕೇರಳ, ಆಂಧ್ರದ ಮಾಧ್ಯಮಗಳಲ್ಲಿ ರಾಜ್ಯ ಸರ್ಕಾರಕ್ಕೆ ಛೀಮಾರಿ
ಪಿಯು ಬೋರ್ಡ್ ಹೊರಡಿಸಿರುವ ಮಾರ್ಗಸೂಚಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. http:// file:///C:/Users/lenovo/Downloads/ADM_GUIDELINES.pdf
ಇದೇ ಮಾರ್ಗಸೂಚಿಯಲ್ಲಿ “ವಿದ್ಯಾರ್ಥಿಗಳೊಡನೆ ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಂಡು, ಅವರಲ್ಲಿ ಇರಬಹುದಾದ ಸಣ್ಣ-ಪುಟ್ಟ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಸಮಾಲೇಚನೆ ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ/ಚೈತನ್ಯವನ್ನು ತುಂಬುವುದು ಹಾಗೂ ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ ಉತ್ತೇಜನ ನೀಡಬೇಕು” ಎಂದು ತಿಳಿಸಲಾಗಿದೆ.

ಆದರೆ ಡಿಸೆಂಬರ್ ಕೊನೆಯಲ್ಲಿ ಉಡುಪಿ ಕಾಲೇಜಿನಲ್ಲಿ ಆರು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡದ ಬಳಿಕ ಈ ಮಾರ್ಗಸೂಚಿಯ ನಿಯಮಗಳು ಲೆಕ್ಕಕ್ಕೆ ಇಲ್ಲದಂತಾಗಿವೆ. ಪ್ರವೇಶ ಮಾರ್ಗಸೂಚಿಗಳ ಕುರಿತು ಮೊದಲು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೇಸ್ ವರದಿ ಮಾಡಿದೆ.

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಸಚಿವರು, ಶಾಸಕರು ಸಮವಸ್ತ್ರ ಕಡ್ಡಾಯ ಎಂದಿದ್ದಾರೆ. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ ಫೆ.5 ರಂದು ರಾಜ್ಯ ಸರ್ಕಾರ ಸಮವಸ್ತ್ರ ಕಡ್ಡಾಯಗೊಳಿಸಿ ಆದೇಶಿಸಿದೆ.
ಪಿಯುಸಿಗೆ ಪ್ರವೇಶ ಪಡೆಯುವಾಗ ಕಾಲೇಜುಗಳು, ವಿದ್ಯಾರ್ಥಿಗಳು ಅನುಸರಿಸಬೇಕಾದ ನಿಯಮಗಳನ್ನು ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆ ಮಾರ್ಗಸೂಚಿ ಹೊರಡಿಸುತ್ತದೆ. ಆದರೆ, ಸಮಾನತೆ, ಸೌಹಾರ್ದತೆ ಕಾಪಾಡಬೇಕಾದ ಕಾಲೇಜು ಆಡಳಿತ ಮಂಡಳಿಗಳು ಹೀಗೆ ಏಕಾಏಕಿ ಹಿಜಾಬ್ ವಿರೋಧಿಸಿದ್ದು, ಅದಕ್ಕೆ ಬಿಜೆಪಿ ನಾಯಕರು ಒಪ್ಪಿಗೆ ಸೂಚಿಸಿದ್ದು, ಹಿಜಾಬ್ ವಿರೋಧಿ ಧೋರಣೆ ರಾಜ್ಯಾದಂತ ಕಾಲೇಜುಗಳಿಗೆ ಹರಡಿ ಘರ್ಷಣೆಗೆ ಕಾರಣವಾಗಿದ್ದು ಮಾತ್ರ ರಾಜ್ಯ ಸರ್ಕಾರದ ವೈಫಲ್ಯವೇ.
ಇದನ್ನೂ ಓದಿ: ಮಡಿಕೇರಿ: ಕೇಸರಿ ಶಾಲು ಧರಿಸಲು ಬಜರಂಗದಳ ನಾಯಕರಿಂದ ಪ್ರಚೋದನೆ; ವಿಡಿಯೊ ವೈರಲ್


