“ಹಿಜಾಬ್ ವಿವಾದ ಕೆಲವರಿಗೆ ತಿರುಗುಬಾಣ ಆಗುವುದು ಖಚಿತ. ಹಿಜಾಬ್ ವಿಚಾರದಲ್ಲಿ ನ್ಯಾಯಾಲಯದ ತೀರ್ಪು ಏನು ಬರುತ್ತದೋ ನೋಡೋಣ. ಆದರೆ, ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಹೃದಯದಲ್ಲಿ ವಿಷ ತುಂಬುವ ಕೆಲಸವನ್ನು ಕೆಲವರು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಇದರಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ಕುತಂತ್ರವೂ ಅಡಗಿದೆ” ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, “ಸಣ್ಣ ಪ್ರಮಾಣದಲ್ಲಿದ್ದ ಹಿಜಾಬ್ ವಿವಾದವನ್ನು ದೊಡ್ಡದು ಮಾಡಿದ್ದಾರೆ. ಇದರಲ್ಲಿ ಎಲ್ಲಾ ಸಮಾಜದ ಸಂಘಟನೆಗಳ ಪಾತ್ರವೂ ಇದೆ. ಇದು ವ್ಯವಸ್ಥಿತವಾಗಿ ಶುರುವಾಗಿದ್ದು, ಇದರ ಹಿಂದೆ ರಾಷ್ಟ್ರೀಯ ಪಕ್ಷಗಳ ಕುತಂತ್ರವೂ ಇದೆ. ಅದಕ್ಕೆ ಈ ವಿಷಯವನ್ನು ದೇಶವ್ಯಾಪಿ ಹರಡುವಂತೆ ಮಾಡಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
“ಜನ ಇಂಥ ಭಾವನಾತ್ಮಕ ವಿಷಯಗಳಿಗೆ ಬಲಿಯಾಗಬಾರದು. ನಮಗೆಲ್ಲರಿಗೂ ಬೇಕಿರುವುದು ಬದುಕು ಮಾತ್ರ. ಬದುಕು ಕಟ್ಟುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು. ಸಮಾಜದಲ್ಲಿ ಅಶಾಂತಿ ಉಂಟು ಮಾಡುವ, ಸಮಾಜವನ್ನು ಹಾಳು ಮಾಡುವ ಕೆಲಸ ಆಗಬಾರದು” ಎಂದಿದ್ದಾರೆ.
’ಹಿಜಾಬ್ ವಿವಾದ ಯಾಕೆ ಪ್ರಾರಂಭವಾಯಿತು? ಇದರ ಹಿಂದಿನ ದುರುದ್ದೇಶವೇನು? ಶಿಕ್ಷಣ ಕ್ಷೇತ್ರಕ್ಕೂ ಇದನ್ನು ಯಾಕೆ ತಂದರು? ಮಕ್ಕಳ ಹೃದಯ ಹಾಳು ಮಾಡಲು ಈ ರೀತಿ ಮಾಡಬೇಕಿತ್ತಾ? ಯಾವುದೋ ಒಂದು ಶಾಲೆಯಲ್ಲಿ ಆರಂಭವಾದ ವಿವಾದವನ್ನು ಅಲ್ಲಿಯೇ ಮುಗಿಸಬೇಕಿತ್ತು. ಆದರೆ, ಅದನ್ನು ಅಲ್ಲಿಗೇ ಬಿಡುವುದು ಕೆಲವರಿಗೆ ಬೇಕಿರಲಿಲ್ಲ’ ಎಂದು ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಇದನ್ನೂ ಓದಿ: ’ಮಹಿಳೆಯರು ಹಿಜಾಬ್ ಧರಿಸದಿರುವುದು ಅತ್ಯಾಚಾರ ಹೆಚ್ಚಾಗಲು ಕಾರಣ’: ಶಾಸಕ ಜಮೀರ್ ಅಹ್ಮದ್
’ಈ ವಿವಾದ ದೊಡ್ಡ ಮಟ್ಟದಲ್ಲಿ ಹರಡಿದರೆ ಇದರ ಮೆಲೆ ಭಾವನಾತ್ಮಕ ವಿಚಾರ ಇಟ್ಟು ಮತಗಳನ್ನಾಗಿ ಪರಿವರ್ತನೆ ಮಾಡಬಹುದು ಎನ್ನುವ ದುರಾಲೋಚನೆ ಇದರ ಹಿಂದೆ ಅಡಗಿದೆ. ಅದಕ್ಕಾಗಿ ಎಲ್ಲಾ ದುಷ್ಟ ಪ್ರಯತ್ನಗಳು ನಡೆಯುತ್ತಿವೆ. ಆದರೆ ಯಾವ ಕ್ಷಣದಲ್ಲಿ ಇದು ಯಾರಿಗೆ ತಿರುಗುಬಾಣ ಆಗುತ್ತದೆ ಎನ್ನುವುದನ್ನು ನೋಡೋಣ’ ಎಂದಿದ್ದಾರೆ.
ಮುಂದುವರಿದು, ’ಪೋಷಕರು ತಮ್ಮ ಮಕ್ಕಳನ್ನು ದುರುಪಯೋಗ ಮಾಡಿಕೊಳ್ಳುವ ಯಾವುದೇ ಸಂಘಟನೆಗಳು, ಜನರಿಂದ ಎಚ್ಚರಿಕೆ ವಹಿಸಬೇಕು. ಮಕ್ಕಳನ್ನು ದಾರಿ ತಪ್ಪಿಸುವವರು, ಭವಿಷ್ಯ ಹಾಳು ಮಾಡುತ್ತಿರುವವರ ಬಗ್ಗೆ ಮಕ್ಕಳಿಗೆ ಬುದ್ದಿ ಹೇಳಬೇಕು’ ಎಂದು ಸಲಹೆ ನೀಡಿದ್ದಾರೆ.
’ಹಿಜಾಬ್ ವಿವಾದವನ್ನು ಆರಂಭದಲ್ಲಿಯೇ ಮೊಟಕುಗೊಳಿಸಬಹುದಿತ್ತು. ಯಾರೂ ಅಭಿವೃದ್ಧಿ ವಿಚಾರಗಳನ್ನು ಚರ್ಚೆ ಮಾಡದೇ ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರದಲ್ಲಾಗಲಿ ಅಥವಾ ರಾಜ್ಯದಲ್ಲಾಗಲಿ ಸರ್ಕಾರಗಳು ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ’ ಎಂದು ಟೀಕಿಸಿದ್ದಾರೆ.
ಕರ್ನಾಟಕ ಹೈಕೋಟ್‌ನ ಪೂರ್ಣ ಪೀಠವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಮುಂದುವರೆಯಸುತ್ತಿದೆ. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆಎಂ ಖಾಜಿ ಅವರನ್ನೊಳಗೊಂಡ ಪೀಠದ ಮುಂದೆ ವಿದ್ಯಾರ್ಥಿಗಳನ್ನು ಪ್ರತಿನಿಧಿಸಿ ಹಿರಿಯ ವಕೀಲ ವಾದ ಮಂಡಿಸುತ್ತಿದ್ದಾರೆ.
ಇದನ್ನೂ ಓದಿ: ಮಂಡ್ಯದಲ್ಲಿ ಹಿಜಾಬ್ ಧರಿಸಿದ ಶಿಕ್ಷಕಿಯರಿಗೂ ಇಲ್ಲ ಪ್ರವೇಶ: ಗೇಟ್ ಬಳಿಯೇ ಹಿಜಾಬ್, ಬುರ್ಕಾ ತೆಗೆದ ಶಿಕ್ಷಕಿಯರು


