ರಾಷ್ಟ್ರಧ್ವಜ ಬದಲಾವಣೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿರುವ ಕಾಂಗ್ರೆಸ್ ಶಾಸಕರು ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ಘೋಷಿಸಿದ್ದಾರೆ.
“ನಾವು ಅಹೋರಾತ್ರಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ. ನಾವು ಇದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ. ಹೀಗಾಗಿ ಅಹೋರಾತ್ರಿ ಧರಣಿ ನಡೆಸುತ್ತೇವೆ” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದರು.
“ಈಶ್ವರಪ್ಪ ದೇಶದ್ರೋಹ ಮಾಡಿದ್ದಾರೆ. ನಮ್ಮ ಹೆಮ್ಮೆ ಮತ್ತು ರಾಷ್ಟ್ರದ ಸಾರ್ವಭೌಮತ್ವದ ಪ್ರತೀಕವಾಗಿರುವ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ’’ ಎಂದು ಆರೋಪಿಸಿದ್ದಾರೆ. ಎಲ್ಲಾ ಕಾಂಗ್ರೆಸ್ ಎಂಎಲ್‌ಸಿಗಳು ಕೂಡ ವಿಧಾನ ಪರಿಷತ್ತಿನಲ್ಲಿ ಅಹೋರಾತ್ರಿ ಧರಣಿ ಮಾಡಲಿದ್ದಾರೆ.
ಇದನ್ನೂ ಓದಿ: ಹಿಜಾಬ್ ಕುರಿತ ತಪ್ಪಾದ ವರದಿ ಬಗ್ಗೆ ಚರ್ಚೆಗೂ ತಯಾರಿಲ್ಲದ ಪಬ್ಲಿಕ್ ಟಿವಿ: ‘ಹೇಟ್ ಸ್ಪೀಚ್ ಬೇಡ’ ತಂಡ ಆಕ್ರೋಶ
2010 ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಅಕ್ರಮ ಗಣಿಗಾರಿಕೆ ಹಗರಣದ ಕುರಿತು ಕಾಂಗ್ರೆಸ್ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಿತ್ತು.
’ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜ ಹಾರಿಸಲಾಗುವುದು, ತ್ರಿವರ್ಣ ಧ್ವಜದ ಬದಲು ಕೇಸರಿ ಧ್ವಜ ಹಾಕಲಾಗುವುದದು’ ಎಂದು ಈಶ್ವರಪ್ಪ ಫೆಬ್ರವರಿ 9ರಂದು ಹೇಳಿಕೆ ನೀಡಿದ್ದರು. ಇದು ದೇಶದ್ರೋಹ ಎಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿತ್ತು. ಈಶ್ವರಪ್ಪ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಘೋಷಣೆಗಳನ್ನು ಕೂಗಿ, ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಿ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದರು. ಕಾಂಗ್ರೆಸ್ ನಾಯಕರು ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ನಡೆಸಿದರು.
“ಈಶ್ವರಪ್ಪ ಹೇಳಿಕೆ ನೀಡಿ ಆರು ದಿನಗಳಾಗಿವೆ. ಮುಖ್ಯಮಂತ್ರಿಗಳು ಸ್ವಯಂ ಪ್ರೇರಿತ ಕ್ರಮ ಕೈಗೊಂಡು ಈಶ್ವರಪ್ಪ ಅವರನ್ನು ಈಗಲೇ ವಜಾ ಮಾಡಬೇಕಿತ್ತು. ಸಚಿವರ ಹೇಳಿಕೆಯು 1971ರ ರಾಷ್ಟ್ರೀಯ ಗೌರವ ಅವಮಾನ ತಡೆ ಕಾಯಿದೆ ಹಾಗೂ ಭಾರತೀಯ ದಂಡ ಸಂಹಿತೆಯ ಉಲ್ಲಂಘನೆಯಾಗಿದ್ದು, ಇದನ್ನು ದೇಶದ್ರೋಹವೆಂದು ಗುರುತಿಸಿ ಜೈಲು ಶಿಕ್ಷೆ ವಿಧಿಸಬೇಕು. ಕೂಡಲೇ ಈಶ್ವರಪ್ಪ ಅವರನ್ನು ವಜಾಗೊಳಿಸಿ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು” ಎಂದು ಸಿದ್ದರಾಮಯ್ಯ ಬುಧವಾರ ಆಗ್ರಹಿಸಿದ್ದರು.
ಇದನ್ನೂ ಓದಿ: ಸಂಪುಟದಿಂದ ಈಶ್ವರಪ್ಪ ವಜಾಕ್ಕೆ ಕಾಂಗ್ರೆಸ್ ಆಗ್ರಹ: ಸದನದಲ್ಲಿ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ


