ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆಗೆ ಸಂಬಂಧಿಸಿದಂತೆ ವಿಧಿಸಲಾಗಿದ್ದ ಸೆಕ್ಷನ್ 144 ಉಲ್ಲಂಘಿಸಿ ಮೃತದೇಹದ ಮೆರವಣಿಗೆ ನಡೆಸಿದ್ದು, ಅದರಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕರ ವಿರುದ್ಧ ದೂರು ದಾಖಲಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ಎನ್.ಹನುಮೇಗೌಡ ಎಂಬುವವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್‌ಗೆ ದೂರು ಸಲ್ಲಿಸಿದ್ದಾರೆ.
ಹರ್ಷ ಕೊಲೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ 144 ನಿಷೇದಾಜ್ಞೆ ಜಾರಿಯಲ್ಲಿದ್ದಾಗ ನಡೆದ ಮೆರವಣಿಗೆ ವೇಳೆ ಸಚಿವರಾದ ಕೆ.ಎಸ್.ಈಶ್ವರಪ್ಪ ಮತ್ತು ಸಂಸದರಾದ ರಾಘವೇಂದ್ರ ಅವರು ಭಾಗವಹಿಸಿದ್ದಾರೆ. ಇದು ಗಲಭೆ, ಕಲ್ಲು ತೂರಾಟ ಮತ್ತು ವಾಹನಗಳಿಗೆ ಬೆಂಕಿ ಹಚ್ಚಲು ಕಾರಣವಾಗಿದ್ದು, ಇವರ ಮೇಲೆ ದೂರು ದಾಖಲಿಸಿ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಫೆಬ್ರವರಿ 20 ರ ಭಾನುವಾರ ತಡರಾತ್ರಿ ಶಿವಮೊಗ್ಗದ ಭಾರತಿ ಕಾಲೋನಿಯಲ್ಲಿ ಹರ್ಷ ಎಂಬ 26 ವರ್ಷದ ಬಜರಂಗದಳದ ಸದಸ್ಯನನ್ನು ಕಾರಿನಲ್ಲಿ ಬಂದ ಯುವಕರ ತಂಡವೊಂದು ಕೊಲೆ ಮಾಡಿದೆ. ದಾಳಿಯ ನಂತರ ಗಾಯಾಳು ಹರ್ಷನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಹರ್ಷ ಕೊನೆಯುಸಿರೆಳೆದಿದ್ದಾರೆ. ಈ ಪ್ರಕರಣವು ನಗರದಲ್ಲಿ ಹೆಚ್ಚಿನ ಉದ್ವಿಗ್ನತೆಗೆ ಕಾರಣವಾಗಿದೆ.
ಇದನ್ನೂ ಓದಿ: ಶಿವಮೊಗ್ಗ: ಹರ್ಷ ಕೊಲೆ ಪ್ರಕರಣದಲ್ಲಿ ಮತ್ತೆ 12 ಮಂದಿ ಪೊಲೀಸ್ ವಶಕ್ಕೆ- ಆರಗ ಜ್ಞಾನೇಂದ್ರ
ಎನ್.ಹನುಮೇಗೌಡ ನಿಡಿರುವ ದೂರಿನಲ್ಲಿ, ’ಸರ್ಕಾರವೇ ಹೊರಡಿಸಿದ್ದ ನಿಷೇದಾಜ್ಞೆಯನ್ನು ಅವರ ಸಚಿವರೇ ಉಲ್ಲೇಝಿಸಿದ್ದಾರೆ. ತಮ್ಮ ಸರ್ಕಾರದ ಆದೇಶಗಳಿಗೆ ತಾವೇ ಧಿಕ್ಕಾರ ಹೇಳಿದ್ದಾರೆ. ನಗರದ ತುಂಬಾ ಪೊಲೀಸರು ತುಂಬಿಕೊಂಡಿದ್ದ ಸಂದರ್ಭದಲ್ಲಿ ಸಚಿವರು ಭಾಗವಹಿಸಿದ್ದ ಮೆರವಣಿಗೆಯಲ್ಲಿ, ಪೊಲೀಸರ ಕಣ್ಣೇದುರೆ ರಸ್ತೆಗಳಲ್ಲಿನ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಸಾರ್ವಜನಿಕರ ಆಸ್ತಿಗಳಿಗೆ ಹಾನಿ ಮಾಡಿದ್ದಾರೆ’ ಎಂದು ಹೇಳಲಾಗಿದೆ.

“ರಾಜ್ಯದ ಜನತೆಯ ಹಿತ ಕಾಪಾಡಬೇಕಾದ ಸಚಿವರು ಜವಾಬ್ದಾರಿ ಮರೆತು ಬೇಜವಾಬ್ದಾರಿ ತೋರಿದ ಕಾರಣದಿಂದ ಶಿವಮೊಗ್ಗದಲ್ಲಿ ಕೋಮು ಕಾಡ್ಗಿಚ್ಚು ಹೆಚ್ಚಾಗಿದೆ. ಹೀಗಾಗಿ ಜಾತಿ, ಮತ, ಕೋಮು ವೈಷಮ್ಯದ ವಿರುದ್ಧ ಕ್ರಮಕೈಗೊಳ್ಳಬೇಕಾದ ಸಚಿವ, ಸಂಸದರ ಬೇಜವಾಬ್ದಾರಿ ನಡೆ, ಕೋಮು ಪ್ರಚೋದನೆ, ಕಾನೂನು ಸುಮ್ಯವಸ್ಥೆಗೆ ಭಂಗದಂತಹ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು” ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ದೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಸಂಸದ ರಾಘವೇಂದ್ರ ಅವರ ಹೆಸರನ್ನು ಸೇರಿಸಲಾಗಿದೆ.
ನಗರದಲ್ಲಿ ವಾತಾವರಣ ತಿಳಿಯಾಗದ ಕಾರಣ ಬುಧವಾರ ಬೆಳಗಿನ ಜಾವ 6 ಗಂಟೆಯತನಕ ಸೆಕ್ಷನ್ 144 ರ ಅಡಿಯಲ್ಲಿ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಡಾ.ಸೆಲ್ಪಮಣಿ ಆದೇಶ ಹೊರಡಿಸಿದ್ದಾರೆ. ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ಇಂದು ಕೂಡ ರಜೆ ಘೋಷಿಸಲಾಗಿದೆ.
ಈವರೆಗೆ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. 12 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಹರ್ಷ ಕೊಲೆ ಪ್ರಕರಣದಲ್ಲಿ ಮತ್ತೆ 12 ಮಂದಿ ಪೊಲೀಸ್ ವಶಕ್ಕೆ- ಆರಗ ಜ್ಞಾನೇಂದ್ರ


