ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುತ್ತಿರುವ ಈ ಸಂಘರ್ಷದ ಸಮಯದಲ್ಲಿ ಪೂರ್ವ ಉಕ್ರೇನ್‌ನಲ್ಲಿ ಹಲವಾರು ಭಾರತೀಯರು ಸಿಲುಕಿಕೊಂಡಿದ್ದಾರೆ. ಅವರಲ್ಲಿ ಹಲವು ಮಂದಿ ಕನ್ನಡಿಗರು ಇದ್ದು, ಅವರನ್ನು ರಾಜ್ಯಕ್ಕೆ ಸುರಕ್ಷಿತವಾಗಿ ಕರೆ ತರುವ ಕೆಲಸ ನಡೆಯುತ್ತಿದೆ. ಅದರಲ್ಲಿ 12 ವಿದ್ಯಾರ್ಥಿಗಳು ಇಂದು ಬೆಂಗಳೂರಿಗೆ ಮರಳಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಸಂಘರ್ಷದಿಂದಾಗಿ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್‌ಗೆ ತೆರಳಿದ್ದ ರಾಜ್ಯದ ವಿದ್ಯಾರ್ಥಿಗಳು ಕಳೆದ ಕೆಲವು ದಿನಗಳಿಂದ ಭಯದ ಸ್ಥಿತಿಯಲ್ಲಿ ಇದ್ದರು. ಸರ್ಕಾರದ ಸಹಾಯದಿಂದ 12 ವಿದ್ಯಾರ್ಥಿಗಳು ಭಾನುವಾರ ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣ ತಲುಪಿದ್ದಾರೆ.
ಈ ವಿದ್ಯಾರ್ಥಿಗಳನ್ನು ಕಂದಾಯ ಸಚಿವ ಆರ್ ಅಶೋಕ್ ಸ್ವಾಗತಿಸಿ, ಅವರೊಂದಿಗೆ ಸಂವಾದ ನಡೆಸಿದ್ದಾರೆ. “ಇಂದು ಮುಂಬೈನಿಂದ 12 ಜನರು ಆಗಮಿಸಿದ್ದಾರೆ. ದೆಹಲಿಯಿಂದ 18 ಜನರು ಆಗಮಿಸಲಿದ್ದಾರೆ. ರಾಜ್ಯ ಕಂದಾಯ ಇಲಾಖೆ ಕರ್ನಾಟಕ ಭವನದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ವ್ಯವಸ್ಥೆ ಮಾಡಿದೆ. ಅವರು ಅಲ್ಲಿಯೇ ಉಳಿದುಕೊಂಡಿದ್ದಾರೆ. ಕನ್ನಡಿಗರಿಗಾಗಿ ಬೆಂಗಳೂರಿಗೆ ವಿಮಾನ ಟಿಕೆಟ್ ಕಾಯ್ದಿರಿಸಿದೆ. ಸಿಎಂ ಅವರೊಂದಿಗಿನ ಚರ್ಚೆಯಂತೆ, ಉಕ್ರೇನ್‌ನಿಂದ ಹಿಂದಿರುಗುವ ಭಾರತೀಯರ ವೆಚ್ಚವನ್ನು ಕಂದಾಯ ಇಲಾಖೆ ಭರಿಸಲು ನಿರ್ಧರಿಸಿದೆ” ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತೀಯರು ವೈದ್ಯಕೀಯ ವ್ಯಾಸಂಗಕ್ಕಾಗಿ ಉಕ್ರೇನ್‌ಗೆ ಹೋಗುವುದೇಕೆ?
ಉಕ್ರೇನ್ ನಿಂದ ಆಗಮಿಸಿದ ಮೊದಲ ತಂಡದ 12 ವಿದ್ಯಾರ್ಥಿಗಳನ್ನು ಬೆಂಗಳೂರು ಏರ್ ಪೋರ್ಟ್ ನಲ್ಲಿ ಸ್ವಾಗತಿಸಲಾಯಿತು.#RAshoka #RevenueMinister pic.twitter.com/VFpq7RZ8r5
— R. Ashoka (ಆರ್. ಅಶೋಕ) (@RAshokaBJP) February 27, 2022
“ಈ ವಿದ್ಯಾರ್ಥಿಗಳು ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳಲಿದ್ದಾರೆ. ಇಂದು 5 ಬ್ಯಾಚ್‌ಗಳ ಮತ್ತೊಂದು ತಂಡ ಆಗಮಿಸುತ್ತಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಕರ್ನಾಟಕಕ್ಕೆ ಸೇರಿದ 386 ಜನರ ವಿವರಗಳನ್ನು ನಾವು ಹೊಂದಿದ್ದೇವೆ. ಎಂದು ನೋಡಲ್ ಅಧಿಕಾರಿಯಾಗಿ ನೇಮಕಗೊಂಡ ಕರ್ನಾಟಕ ರಾಜ್ಯ ವಿಪತ್ತು ಎಂಜಿಎಂಟಿ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಹೇಳಿದ್ದಾರೆ.
ಉಕ್ರೇನ್‌ನಿಂದ ಆಗಮಿಸುವ ವಿದ್ಯಾರ್ಥಿಗಳು ಮುಂಬೈ ಮತ್ತು ದೆಹಲಿಯಲ್ಲಿ ಬಂದಿಳಿದ ನಂತರ ರಾಜ್ಯದ ವಿವಿಧ ಭಾಗಗಳಲ್ಲಿರುವ ತಮ್ಮ ಮನೆಗಳನ್ನು ತಲುಪಲು ಸರ್ಕಾರ ಎಲ್ಲಾ ಸಹಾಯವನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಹೇಳಿದ್ದರು.
ಇನ್ನು, ಉಕ್ರೇನ್‌ನ ಪಶ್ಚಿಮ ಭಾಗದಲ್ಲಿ ಸಿಲುಕಿರುವವರನ್ನು ರಸ್ತೆ ಮೂಲಕ ಕರೆತರಲು ನಿರ್ಧರಿಸಲಾಗಿದೆ. ಅದರಂತೆ, ಅನೇಕ ವಿದ್ಯಾರ್ಥಿಗಳು ರೊಮೇನಿಯಾ ಮೂಲಕ ಆಗಮಿಸುತ್ತಿದ್ದಾರೆ. ಅವರ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಉಕ್ರೇನ್ ರಾಜಧಾನಿ ಮೇಲೆ ರಷ್ಯಾ ದಾಳಿ: ಬೃಹತ್ ಕಟ್ಟಡಕ್ಕೆ ಅಪ್ಪಳಿಸಿದ ಕ್ಷಿಪಣಿ- ಮೇಯರ್


