ಫ್ರಾನ್ಸ್ ದೇಶದ ಅಧ್ಯಕ್ಷರಾಗಿ ಇಮ್ಯಾನ್ಯುಯಲ್ ಮ್ಯಾಕ್ರಾನ್ ಮತ್ತೆ ಆರಿಸಿ ಬಂದಿದ್ದಾರೆ. ಅವರ ಕಡು ಬಲಪಂಥೀಯ ಎದುರಾಳಿ ಮೆರೀನ್ ಲಿ ಪೆನ್ ಸೋತಿದ್ದಾರೆ. ಐರೋಪ್ಯ ಒಕ್ಕೂಟದ ಬಹುಮುಖ್ಯ ದೇಶವೊಂದರ ಅಧಿಕಾರ ಸೂತ್ರ ಬಲಪಂಥೀಯರ ಕೈ ತಪ್ಪಿದ ಈ ಬೆಳವಣಿಗೆಯಿಂದ ಇಡೀ ಯೂರೋಪ್ ನಿರಾಳ ನಿಟ್ಟುಸಿರು ಚೆಲ್ಲಿದೆ.
ಐರೋಪ್ಯ ಒಕ್ಕೂಟದ (ಯೂರೋಪಿಯನ್ ಯೂನಿಯನ್) ಎರಡನೆಯ ಅತಿದೊಡ್ಡ ಅರ್ಥವ್ಯವಸ್ಥೆಯುಳ್ಳ ದೇಶ ಫ್ರಾನ್ಸ್. ಮೊನ್ನೆ ನಡೆದ ಚುನಾವಣೆ ಇತ್ತೀಚಿನ ದಶಕಗಳಲ್ಲಿ ಅತ್ಯಂತ ಮಹತ್ವದ್ದು.
ತುಸುವೇ ಎಡಕ್ಕಿರುವ ನಡುಪಂಥೀಯ ಮ್ಯಾಕ್ರಾನ್ ಐರೋಪ್ಯ ಒಕ್ಕೂಟದ ಬೆಂಬಲಿಗರು. ಸಮೀಕ್ಷೆಗಳು ಸಾರಿದ್ದಕ್ಕಿಂತ ಹೆಚ್ಚಿನ ಬಹುಮತದ ಅಂತರದಿಂದ ಗೆದ್ದಿದ್ದಾರೆ ಮ್ಯಾಕ್ರಾನ್. ಅವರು ಗಳಿಸಿರುವ ಮತಗಳ ಪ್ರಮಾಣ ಶೇ.58.54. ಮೆರೀನ್ ಲಿ ಪೆನ್ ಅವರದ್ದು ಶೇ.41.45. ಆದರೆ ಕಳೆದ ಚುನಾವಣೆಗೆ ಹೋಲಿಸಿದರೆ ಅವರ ಬೆಂಬಲ ನೆಲೆ ಗಣನೀಯವಾಗಿ, ಅಂದರೆ ಶೇ.66.1ರಿಂದ ಶೇ.58.54ಕ್ಕೆ ಕುಸಿದಿದೆ. ಪ್ರತಿಯಾಗಿ ಲಿ ಪೆನ್ ಅವರ ಮತಗಳಿಕೆ ಪ್ರಮಾಣ ಶೇ.33.10ರಿಂದ ಶೇ.41.45ಕ್ಕೆ ಏರಿದೆ. ತೀವ್ರ ಎಡಪಂಥೀಯ ಅಭ್ಯರ್ಥಿ ಜೀನ್ ಲ್ಯುಕ್ ಮೆಲೆಂಖೊನ್ ಮೂರನೆಯ ಸ್ಥಾನದಲ್ಲಿದ್ದಾರೆ. ಮತದಾನದಿಂದ ದೂರ ಉಳಿದ ಮತದಾರರ ಪ್ರಮಾಣ ಶೇ.22ರಿಂದ ಈ ಸಲ ಶೇ.28ಕ್ಕೆ ಜಿಗಿದಿದೆ. ಮ್ಯಾಕ್ರಾನ್ ಆಡಳಿತ ಮೂಡಿಸಿದ ಭ್ರಮನಿರಸನ ಮತ್ತು ಆರ್ಥಿಕ ಸಂಕಷ್ಟಗಳೇ ಈ ಹೆಚ್ಚಳಕ್ಕೆ ಕಾರಣವೆನ್ನಲಾಗಿದೆ.

ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಸಮೀಪವರ್ತಿ ಎಂದು ಗುರುತಿಸಿಕೊಂಡಿರುವ ಮೆರೀನ್ ಅವರು ಮ್ಯಾಕ್ರಾನ್‌ಗೆ ತೀವ್ರ ಪೈಪೋಟಿ ನೀಡಿದ್ದಲ್ಲದೆ ಒಂದು ಹಂತದಲ್ಲಿ ಆತನಿಗೆ ಆತಂಕದ ಕ್ಷಣಗಳನ್ನೂ ಮೂಡಿಸಿದ್ದುಂಟು. ಫ್ರಾನ್ಸ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಮೆರೀನ್ ಎದುರಿಸಿರುವ ಮೂರನೆಯ ಸೋಲಿದು. ಆದರೆ ಈ ಸಲದ ಆಕೆಯ ಸೋಲನ್ನು ಬಲಪಂಥೀಯರು ಗೆಲುವೆಂದೇ ಭಾವಿಸಿದ್ದಾರೆ. ಬಲಂಪಥೀಯ ಬೆಂಬಲ ನೆಲೆಯ ಗಣನೀಯ ಹೆಚ್ಚಳವೇ ಈ ಬೀಗುವಿಕೆಯ ಹಿನ್ನೆಲೆ. ಸೋಲಿನಿಂದ ಧೃತಿಗೆಡದೆ ಸದ್ಯದಲ್ಲೇ ನಡೆಯಲಿರುವ ಫ್ರಾನ್ಸ್‌ನ ’ಲೋಕಸಭಾ’ ಚುನಾವಣೆಗಳನ್ನು ಗೆಲ್ಲಲು ಈಗಾಗಲೆ ತಂತ್ರ ಹೆಣೆಯತೊಡಗಿದ್ದಾರೆ ಲಿ ಪೆನ್.
ಒಂದು ವೇಳೆ ಮ್ಯಾಕ್ರಾನ್ ಸೋತು ಮೆರೀನ್ ಲಿ ಪೆನ್ ಗೆದ್ದಿದ್ದರೆ ಐರೋಪ್ಯ ಒಕ್ಕೂಟದಲ್ಲಿ ಭಾರೀ ರಾಜಕೀಯ ಭೂಕಂಪವೇ ಆಗುತ್ತಿತ್ತು ಎನ್ನುವುದು ರಾಜಕೀಯ ವಿಶ್ಲೇಷಕರ ಅನಿಸಿಕೆ. ಜರ್ಮನಿಯ ಛಾನ್ಸಲರ್ ಓಲಾಫ್ ಶೋಲ್ಜ್ ಸೇರಿದಂತೆ ಐರೋಪ್ಯ ಒಕ್ಕೂಟದ ಎಡಪಂಥೀಯ ಒಲವಿನ ನಾಯಕರು ಲಿ ಪೆನ್ ಗೆಲುವಿನ ಸಂಭವ ಕುರಿತು ಚಿಂತಾಕ್ರಾಂತರಾಗಿದ್ದರು. ಮ್ಯಾಕ್ರಾನ್ ಅವರನ್ನು ಗೆಲ್ಲಿಸುವಂತೆ ಫ್ರೆಂಚ್ ಜನತೆಗೆ ಅವರು ಮಾಡಿಕೊಂಡ ಮನವಿ ಅಪರೂಪದ ವಿದ್ಯಮಾನ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮ್ಯಾಕ್ರಾನ್ ಗೆಲುವಿನ ಅಂತರ ತೆಳುವೇನೂ ಅಲ್ಲ. ಆದರೆ ಈ ದೇಶದ ಚುನಾವಣಾ ಇತಿಹಾಸದಲ್ಲಿ ಬಲಪಂಥೀಯ ಎದುರಾಳಿ ಗೆಲುವಿನ ಸಮೀಪಕ್ಕೆ ಈ ಸಲದಷ್ಟು ಹಿಂದೆಂದೂ ಬಂದಿರಲಿಲ್ಲ. ಫ್ರೆಂಚ್ ರಾಜಕೀಯ ಭೂದೃಶ್ಯ ಮರುಜೋಡಣೆಗೊಳ್ಳುತ್ತಿದೆ ಎಂಬ ಲಿ ಪೆನ್ ಹೇಳಿಕೆಯನ್ನು ಈ ಹಿನ್ನೆಲೆಯಲ್ಲಿಟ್ಟೇ ನೋಡಬೇಕಿದೆ. ಬಲಪಂಥೀಯ ರಾಜಕಾರಣದ ಭವಿಷ್ಯ ಭರವಸೆದಾಯಕ ಎಂಬ ಆಕೆಯ ಆಶಾವಾದ ಬಲಪಂಥೀಯರ ಹೊಸ ಆತ್ಮವಿಶ್ವಾಸದ ಪ್ರತೀಕವೂ ಹೌದು.
ಜೀವನವೆಚ್ಚ ಏರಿಕೆಗೆ ಲಗಾಮು ಹಾಕುವಲ್ಲಿ ಮ್ಯಾಕ್ರಾನ್ ಆಡಳಿತ ವಿಫಲವಾಗಿದೆ ಎಂಬ ಲಿ ಪೆನ್ ಚುನಾವಣಾ ಪ್ರಚಾರ ಸಾಕಷ್ಟು ಜನಮನ ಮುಟ್ಟಿತ್ತು. ಇಂಧನ ತೆರಿಗೆಗಳಲ್ಲಿ ಭಾರೀ ಇಳಿಕೆ, ’ಪಾಸ್ತಾ’ ಮತ್ತು ’ಡಯಪರ್’ನಂತಹ ಜೀವನಾವಶ್ಯಕ ವಸ್ತುಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ, ಉದ್ಯೋಗಾವಕಾಶಗಳು ಮತ್ತು ಜನಕಲ್ಯಾಣ ಕಾರ್ಯಕ್ರಮಗಳಲ್ಲಿ ಫ್ರೆಂಚರಿಗೆ ಮೊದಲ ಆದ್ಯತೆಯ ಲಿ ಪೆನ್ ಭರವಸೆಗಳು ಆಕೆಗೆ ಸಾಕಷ್ಟು ಜನಬೆಂಬಲ ಗಳಿಸಿಕೊಟ್ಟಿವೆ. ಆದರೆ ಫ್ರಾನ್ಸ್‌ನಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸುವುದನ್ನು ನಿಷೇಧಿಸುವುದಾಗಿ ಆಕೆ ಮಾಡಿದ ಘೋಷಣೆ ಮತ್ತು ಆಕೆಯ ಜನಾಂಗೀಯಭೇದ ನೀತಿ ಫ್ರೆಂಚರಿಗೆ ಹಿಡಿಸಿಲ್ಲ.
ಮುಂದಿನ ಎರಡೇ ತಿಂಗಳಲ್ಲಿ ನಡೆಯಲಿರುವ ಫ್ರೆಂಚ್ ಸಂಸದೀಯ ಚುನಾವಣೆಗಳು ಮ್ಯಾಕ್ರಾನ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಲಿವೆಯಂತೆ. ತಮ್ಮ ವಿಚಾರಧಾರೆಯನ್ನು ಒಪ್ಪದ ಪಕ್ಷಕ್ಕೆ ಬಹುಮತ ದೊರೆತು, ಆ ಪಕ್ಷದ ಪ್ರಧಾನಿ ಗದ್ದುಗೆಯೇರುವ ಸಂಭವ ಇಲ್ಲದಿಲ್ಲ. ದಾಖಲೆ ಪ್ರಮಾಣದ ಮತದಾರರು ಮತದಾನದಿಂದ ದೂರ ಉಳಿದಿರುವ ಆತಂಕಕಾರಿ ಬೆಳವಣಿಗೆಯನ್ನು ಮ್ಯಾಕ್ರಾನ್ ಮುಂಬರುವ ದಿನಗಳಲ್ಲಿ ಸರಿಪಡಿಸಿಕೊಳ್ಳಬೇಕಿದೆ. ಅರ್ಥಾತ್ ತಮ್ಮ ನೀತಿ ನಿರ್ಧಾರಗಳಿಂದ ನಿರಾಶರಾಗಿ ಮತದಾನದಿಂದ ದೂರ ಉಳಿದಿರುವವರನ್ನು ಮತ್ತು ತಮ್ಮಿಂದ ಲಿ ಪೆನ್ ಕಡೆಗೆ ಸರಿದಿರುವವರನ್ನು ಪುನಃ ಒಲಿಸಿಕೊಳ್ಳಬೇಕಿದೆ.
ಸೋಶಿಯಲ್ ಡೆಮಾಕ್ರಟಿಕ್ ಮತ್ತು ಕನ್ಸರ್ವೇಟಿವ್ ಪಾರ್ಟಿಗಳೇ ಒಂದನ್ನೊಂದು ಸೆಣೆಸುತ್ತ ಬಂದಿದ್ದ ಫ್ರೆಂಚ್ ಚುನಾವಣಾ ರಾಜಕಾರಣ ಈ ಸಲ ಹೆಚ್ಚು ಧ್ರುವೀಕರಣದತ್ತ ಸಾಗಿತ್ತು. ಮೊದಲ ಸುತ್ತಿನ ಚುನಾವಣಾ ಫಲಿತಾಂಶ ಈ ಪ್ರವೃತ್ತಿಯನ್ನು ಎತ್ತಿತೋರಿತ್ತು. ಹಾಲಿ ಅಧ್ಯಕ್ಷ ಮ್ಯಾಕ್ರಾನ್ ಶೇ.27.8ರಷ್ಟು ಮತ ಪಡೆದು ಮೊದಲ ಸ್ಥಾನದಲ್ಲಿದ್ದರೂ, ತೀವ್ರ ಬಲಪಂಥೀಯ ಮತ್ತು ವಲಸೆ ವಿರೋಧಿ ಮೆರೀನ್ ಲಿ ಪೆನ್ ಶೇ.23.1ರಷ್ಟು ಮತಗಳಿಸಿ ಮ್ಯಾಕ್ರಾನ್‌ಗೆ ಆತಂಕ ಮೂಡಿಸುವಷ್ಟು ಸಮೀಪ ಸರಿದಿದ್ದರು. ಮ್ಯಾಕ್ರಾನ್‌ಗೆ ಗೆಲುವು ಸುಲಭವಲ್ಲ ಎಂದಿದ್ದವು ಸಮೀಕ್ಷೆಗಳು. 2017ರಲ್ಲಿ ಲಿ ಪೆನ್ ಅವರನ್ನು ಶೇ.32ರಷ್ಟು ಪಾಯಿಂಟುಗಳ ಭಾರೀ ಅಂತರದಿಂದ ಸೋಲಿಸಿದ್ದ ಮ್ಯಾಕ್ರಾನ್, ಮೊನ್ನೆಮೊನ್ನೆಯ ತನಕ ಕೇವಲ ಎರಡರಿಂದ ಆರು ಪಾಯಿಂಟುಗಳಷ್ಟು ಮುಂದಿದ್ದರು. ಬೆಲೆ ಏರಿಕೆ, ಹಣದುಬ್ಬರ ಕುರಿತು ಮತದಾರರಲ್ಲಿ ಅಸಮಾಧಾನ ಹೆಚ್ಚಿತ್ತು. ಉಗ್ರ ರಾಷ್ಟ್ರೀಯತೆ ಮತ್ತು ವ್ಯವಸ್ಥೆಯ ವಿರೋಧಿ ರಾಜಕಾರಣದ ಮತ್ತೇರಿಸುವ ಮಿಶ್ರಪೇಯವನ್ನು ಲಿ ಪೆನ್ ಮತದಾರರ ಮುಂದೆ ಮಂಡಿಸಿದ್ದರು. ತಮ್ಮ ತೀವ್ರ ಬಲಪಂಥೀಯ ಬೆಂಬಲ ನೆಲೆಯನ್ನು ಭದ್ರವಾಗಿ ಉಳಿಸಿಕೊಂಡು ಮ್ಯಾಕ್ರಾನ್ ಆಡಳಿತದ ಕುರಿತು ಭ್ರಮನಿರಸನ ಹೊಂದಿದ ಮತದಾರರನ್ನೂ ತಮ್ಮತ್ತ ಸೆಳೆಯತೊಡಗಿದ್ದರು.

ಲಿ ಪೆನ್ ಅವರನ್ನು ಫ್ರಾನ್ಸ್‌ನ ಮತದಾರರು ಕಳೆದ ಅಧ್ಯಕ್ಷೀಯ ಚುನಾವಣೆಗಳಲ್ಲಿ ನಿರ್ಣಾಯಕವಾಗಿ ತಿರಸ್ಕರಿಸಿದ್ದರು. ಫ್ರೆಂಚ್ ಗಣರಾಜ್ಯದ ಮೌಲ್ಯಗಳ ಉಲ್ಲಂಘನೆ ಎಂದು ಆಕೆಯ ರಾಜಕಾರಣವನ್ನು ಬಗೆದಿದ್ದರು. ಮ್ಯಾಕ್ರಾನ್ ಅವರ ರಿಪಬ್ಲಿಕನ್ ಫ್ರಂಟ್‌ನ ಸಮ್ಮಿಶ್ರ ಸರ್ಕಾರವನ್ನು ಬೆಂಬಲಿಸಿದ್ದರು. 2017ರಲ್ಲಿ ಮ್ಯಾಕ್ರಾನ್ ಉದಾರವಾದಿ ಪ್ರಗತಿಪರ ಮನಸಿನ ತಾಜಾ ಚಹರೆಯಾಗಿ ಮತದಾರರ ಮನ ಗೆದ್ದಿದ್ದರು. ಅಧ್ಯಕ್ಷರಾಗಿ ಅವರು ಅನುಸರಿಸಿದ ವ್ಯಾಪಾರೋದ್ಯಮ ಪರವಾದ ನೀತಿ ನಿರ್ಧಾರಗಳು ಎಡಪಂಥೀಯ ಮತದಾರರನ್ನು ಅವರಿಂದ ದೂರ ಮಾಡಿದ್ದವು. ಮೊದಲ ಸುತ್ತಿನಲ್ಲಿ ಈ ಪಂಥದ ಮತಗಳು ಮ್ಯಾಕ್ರಾನ್‌ಗೆ ಬಿದ್ದಿರಲಿಲ್ಲ. ಕೆಲ ಮಸೀದಿಗಳನ್ನು ಮುಚ್ಚಿಸಿದ ಮತ್ತು ಧಾರ್ಮಿಕ ಸಂಘಟನೆಗಳ ಮೇಲೆ ಕಠಿಣ ಕ್ರಮ ಜರುಗಿಸಿದ ಮ್ಯಾಕ್ರಾನ್ ತೀರ್ಮಾನಗಳು 2017ರಲ್ಲಿ ಅವರನ್ನು ಬೆಂಬಲಿಸಿದ್ದ ಸಾಮಾಜಿಕ ಕೂಟದಲ್ಲಿ ಬಿರುಕು ಮೂಡಿಸಿದ್ದವು.
ಉಕ್ರೇನ್ ವಿರುದ್ಧದ ಯುದ್ಧವನ್ನು ಲಿ ಪೆನ್ ವಿರೋಧಿಸುವ ಜೊತೆಗೆ ಅಮೆರಿಕ ಮತ್ತು ಐರೋಪ್ಯ ಒಕ್ಕೂಟ, ರಷ್ಯಾದ ವಿರುದ್ಧ ಸಾರಿರುವ ನಿರ್ಬಂಧಗಳನ್ನೂ ಟೀಕಿಸಿದ್ದರು. ಈ ನಿರ್ಬಂತಿಧಗಳು ಅಂತಿಮವಾಗಿ ಫ್ರೆಂಚ್ ಗ್ರಾಹಕರ ಹಿತಗಳನ್ನು ಬಾಧಿಸುತ್ತಿವೆ ಎಂಬುದು ಆಕೆಯ ವಾದವಾಗಿತ್ತು. ಈ ನಿಲುವುಗಳು ಮ್ಯಾಕ್ರಾನ್ ಸರ್ಕಾರದ ನೀತಿಗೆ ವ್ಯತಿರಿಕ್ತವಾಗಿದ್ದವು. ನ್ಯಾಟೋ ಕಮಾಂಡ್‌ನಿಂದ ಫ್ರೆಂಚ್ ಪಡೆಗಳನ್ನು ವಾಪಸು ಕರೆಯಿಸಿಕೊಳ್ಳಬೇಕೆಂಬುದೂ ಆಕೆಯ ವಾದವಾಗಿತ್ತು. ಲಿ ಪೆನ್ ಗೆಲುವು ಫ್ರೆಂಚ್ ರಾಜ್ಯಾಡಳಿತ ಕ್ರಮವನ್ನೇ ಬದಲಿಸಿಬಿಡುವ ಅಪಾಯ ಹೊಂದಿತ್ತು. ಉಕ್ರೇನ್ ಮೇಲೆ ಪುಟಿನ್ ಸಾರಿರುವ ಯುದ್ಧವನ್ನು ವಿರೋಧಿಸಿರುವ ಐರೋಪ್ಯ ಒಕ್ಕೂಟ ಮತ್ತು ನ್ಯಾಟೋ ನಿಲುವಿಗೆ ಸವಾಲು ಎಸೆಯಲಿತ್ತು. ಈ ಕಾರಣಕ್ಕಾಗಿಯೇ ಈ ಚುನಾವಣೆ ಇತ್ತೀಚಿನ ದಶಕಗಳಲ್ಲೇ ಗುರುತರ ಎನಿಸಿಕೊಂಡಿತ್ತು.
ನಡುವಯಸ್ಸು ಸಮೀಪಿಸುತ್ತಿರುವ 44ರ ಹರೆಯದ ಮ್ಯಾಕ್ರಾನ್‌ರಿಗೆ ಎರಡು ತಿಂಗಳಾಚೆಗೆ ಕದ ಬಡಿದಿರುವ ಸಂಸದೀಯ ಚುನಾವಣೆಗಳು ಪ್ರಬಲ ಸವಾಲೆಸೆದಿವೆ.
“ನನ್ನ ವಿಚಾರಧಾರೆಯನ್ನು ಒಪ್ಪದಿರುವ ಗಣನೀಯ ಪ್ರಮಾಣದ ಮತದಾರರು ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದ್ದಾರೆ. ತೀವ್ರ ಬಲಪಂಥೀಯ ವಿಚಾರಧಾರೆಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಉದಾತ್ತ ಉದ್ದೇಶ ಅವರದು. ಅವರಿಗೆ ನನ್ನ ಧನ್ಯವಾದಗಳು. ಅವರಿಗೆ ನಾನು ಋಣಿಯಾಗಿದ್ದೇನೆ” ಎಂದು ಭಿನ್ನಾಭಿಪ್ರಾಯಗಳಿಂದ ಒಡೆದಿರುವ ಫ್ರೆಂಚ್ ಜನಮಾನಸಕ್ಕೆ ಸೌಹಾರ್ದದ ಮುಲಾಮು ಲೇಪಿಸುವ ಮಾತಾಡಿದ್ದಾರೆ ಮ್ಯಾಕ್ರಾನ್. “ನಾನೀಗ ಒಂದು ಬಣದ ಉಮೇದುವಾರನಲ್ಲ, ಬದಲಾಗಿ ಎಲ್ಲರೆಲ್ಲರ ಅಧ್ಯಕ್ಷ. ತೀವ್ರ ಬಲಪಂಥೀಯ ವಿಚಾರಧಾರೆಗೆ ಮತ ನೀಡಲು ಕಾರಣವಾಗಿರುವ ಆಕ್ರೋಶ ಮತ್ತು ಭಿನ್ನಮತಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದು ತಕ್ಷಣದ ಆದ್ಯ ಕರ್ತವ್ಯ” ಎಂದು ಅವರು ತಾವು ಕಳೆದುಕೊಂಡಿರುವುದನ್ನು ಮತ್ತೆ ಗಳಿಸುವತ್ತ ಗಮನ ಹರಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ರಾಜ್ಯಗಳು ವ್ಯಾಟ್ ಕಡಿತಗೊಳಿಸಿ ಇಂಧನ ಬೆಲೆ ಏರಿಕೆ ತಗ್ಗಿಸಿ: ಮೋದಿ ಮನವಿಯ ಹಿಂದಿನ ವಾಸ್ತವವೇನು?


