ಲಕ್ನೋದಲ್ಲಿ ಇತ್ತೀಚೆಗೆ ಉದ್ಘಾಟನೆಯಾದ ಲುಲು ಮಾಲ್‌ನಲ್ಲಿ ಜನರ ಗುಂಪೊಂದು ನಮಾಜ್ ಮಾಡುತ್ತಿರುವ ವಿಡಿಯೊ ವೈರಲ್ ಆದ ಬಳಿಕ ಮೂಲಭೂತವಾಗಿ ಹಿಂದುತ್ವ ಗುಂಪುಗಳು ‘ಲವ್ ಜಿಹಾದ್’ ಆರೋಪ ಮಾಡಿವೆ.
ಅಖಿಲ ಭಾರತೀಯ ಹಿಂದೂ ಮಹಾಸಭಾ ಆರೋಪ ಮಾಡಿದ್ದು, “ಇಲ್ಲಿನ ಉದ್ಯೋಗಗಳಲ್ಲಿ ಶೇ. 70ರಷ್ಟು ಮುಸ್ಲಿಂ ಪುರುಷರು, ಶೇ. 30ರಷ್ಟು ಹಿಂದೂ ಮಹಿಳೆಯರು ಕೆಲಸ ಮಾಡುತ್ತಾರೆ. ಆ ಮೂಲಕ ಲವ್ ಜಿಹಾದ್ ನಡೆಸಲಾಗುತ್ತಿದೆ” ಎಂದಿದೆ. ಇದಕ್ಕೆ ಲುಲು ಮಾಲ್ ಮ್ಯಾನೇಜ್‌ಮೆಂಟ್ ಸ್ಪಷ್ಟೀಕರಣ ನೀಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಶೇ. 80ರಷ್ಟು ಲುಲು ಮಾಲ್ ಉದ್ಯೋಗಿಗಳು ಹಿಂದೂಗಳಾಗಿದ್ದಾರೆ. ಮಾಲ್ ತನ್ನ ಉದ್ಯೋಗ ನೀತಿಯಲ್ಲಿ ಪಕ್ಷಪಾತಿಯಾಗಿಲ್ಲ. ಮುಸ್ಲಿಮರಿಗೆ ಆದ್ಯತೆ ನೀಡಲಾಗಿದೆ ಎಂಬುದು ಸತ್ಯಕ್ಕೆ ದೂರವಾಗಿದೆ” ಎಂದು ಲುಲು ಮಾಲ್ ತಿಳಿಸಿದೆ.
“ಯಾವುದೇ ತಾರತಮ್ಯವಿಲ್ಲದೆ ವ್ಯಾಪಾರವನ್ನು ನಡೆಸುವ ಸಂಪೂರ್ಣ ವೃತ್ತಿಪರ ಸಂಸ್ಥೆ ನಮ್ಮದಾಗಿದೆ. ನಮ್ಮ ಉದ್ಯೋಗಿಗಳನ್ನು ಕೌಶಲ್ಯ ಮತ್ತು ಅರ್ಹತೆಯ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆಯೇ ಹೊರತು ಜಾತಿ, ವರ್ಗ ಅಥವಾ ಧರ್ಮದ ಆಧಾರದ ಮೇಲೆ ಅಲ್ಲ” ಎಂದು ಸ್ಪಷ್ಟಪಡಿಸಿದೆ.
“ಕೆಲವು ಸ್ವಾರ್ಥಿಗಳು ನಮ್ಮನ್ನು ಟಾರ್ಗೆಟ್ ಮಾಡಲು ಪ್ರಯತ್ನಿಸುತ್ತಿರುವುದು ದುಃಖಕರವಾಗಿದೆ. ನಮ್ಮ ಉದ್ಯೋಗಿಗಳಲ್ಲಿ 80 ಪ್ರತಿಶತದಷ್ಟು ಹಿಂದೂಗಳು ಇದ್ದಾರೆ. ಉಳಿದವರು ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಇತರ ವಿವಿಧ ಸಮುದಾಯಗಳಿಗೆ ಸೇರಿದ್ದಾರೆ” ಎಂದು ತಿಳಿಸಿದೆ.
ಮಾಲ್ ಆಡಳಿತವು ಎಫ್‌ಐಆರ್ ದಾಖಲಿಸಿದೆ. ಸಾರ್ವಜನಿಕ ಪ್ರದೇಶದಲ್ಲಿ “ದುರುದ್ದೇಶದಿಂದ” ಪ್ರಾರ್ಥನೆಗಳನ್ನು ನಡೆಸಲು ಪ್ರಯತ್ನಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡಿರುವುದಾಗಿ ಮಾಲ್ ಹೇಳಿದೆ.
ಶನಿವಾರ ಲುಲು ಮಾಲ್‌ಗೆ ಪ್ರವೇಶಿಸಿ ಹನುಮಾನ್ ಚಾಲೀಸಾ ಪಠಿಸಲು ಆರಂಭಿಸಿದ ಇಬ್ಬರನ್ನು ಇತ್ತೀಚೆಗೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಲ್‌ನಲ್ಲಿ ನಮಾಜ್ ಮಾಡಿದ ಅಪರಿಚಿತರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153 ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಕೃತ್ಯ) ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿರಿ: ಲುಲುಮಾಲ್: ಬೇಕಂತಲೇ ನಮಾಜ್ ಮಾಡಿ ವಿವಾದ ಸೃಷ್ಟಿ; ಪಿತೂರಿಯ ಹಿಂದೆ ಯಾರಿದ್ದಾರೆ?
ಅಲ್ಲದೇ ಗಲಭೆ ಸೃಷ್ಟಿಸುವ ಪಿತೂರಿಯಿಂದಲೇ ಇಲ್ಲಿ ನಮಾಜ್ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ನಮಾಜ್ ಮಾಡಿದರಿಗೆ ನಮಾಜ್ ಮಾಡುವ ವಿಧಿ ವಿಧಾನವೂ ತಿಳಿದಿರಲಿಲ್ಲ ಎಂದು ವಿಡಿಯೊವನ್ನು ಪರಿಶೀಲಿಸಿದವರು ಹೇಳುತ್ತಿದ್ದಾರೆ.
ಸಾಮಾನ್ಯವಾಗಿ ಐದರಿಂದ ಆರು ನಿಮಿಷಗಳ ಕಾಲ ನಡೆಯುವ ನಮಾಜ್ ಕೇವಲ ಒಂದೇ ನಿಮಿಷದಲ್ಲಿ ಮುಗಿಯುತ್ತದೆ. ಜೊತೆಗೆ ಮಾಲ್‌ಗೆ ಬಂದಿರುವ ಈ ದುಷ್ಕರ್ಮಿಗಳು ಮಾಲ್‌ನಲ್ಲಿ ಏನನ್ನೂ ಖರೀದಿಸದೇ ಕೇವಲ ವಿವಾದ ಸೃಷ್ಟಿಸಲೆಂದೇ ಬಂದಿದ್ದರು ಎಂದು ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿರುವ ಪೊಲೀಸರು ಹೇಳುತ್ತಿದ್ದಾರೆ.


