Homeಕರ್ನಾಟಕಮುಖ್ಯಮಂತ್ರಿಯ ಇಬ್ಬಗೆ ನೀತಿ; ಕಾನೂನುಬಾಹಿರ ಶಾಂತಿಸಭೆಗೆ ವಿರೋಧ: ಮುಸ್ಲಿಂ ಸೆಂಟ್ರಲ್ ಕಮಿಟಿ

ಮುಖ್ಯಮಂತ್ರಿಯ ಇಬ್ಬಗೆ ನೀತಿ; ಕಾನೂನುಬಾಹಿರ ಶಾಂತಿಸಭೆಗೆ ವಿರೋಧ: ಮುಸ್ಲಿಂ ಸೆಂಟ್ರಲ್ ಕಮಿಟಿ

ಶಾಂತಿ ಸಭೆಯು ಯಾವುದೆ ಅಧೀಕೃತತೆ ಇಲ್ಲದ ಕಾನೂನುಬಾಹಿರ ಸಭೆ ಎಂದು ಕಮಿಟಿ ಹೇಳಿದ್ದು, ಸರ್ಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾದ ಸಂತ್ರಸ್ತರ ಕುಟುಂಬಕ್ಕೆ ತಲಾ 30 ಲಕ್ಷ ರೂ. ಪರಿಹಾರ ನೀಡುವುದಾಗಿ ನಿರ್ಧರಿಸಿದೆ

- Advertisement -
- Advertisement -

ಕರಾವಳಿಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಯ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರ ಸೂಚನೆಯಂತೆ ಜಿಲ್ಲಾಧಿಕಾರಿಗಳು ಕರೆದಿದ್ದ ಶಾಂತಿ ಸಭೆಯಲ್ಲಿ ಮಂಗಳೂರು ಮುಸ್ಲಿಂ ಸೆಂಟ್ರಲ್ ಕಮಿಟಿ ಪದಾಧಿಕಾರಿಗಳು ಭಾಗವಹಿಸದೆ ರಾಜ್ಯ ಸರ್ಕಾರದ ಇಬ್ಬಗೆ ನಿಲುವಿನ ವಿರುದ್ಧ ಪ್ರತಿಭಟಿಸಿರುವ ಘಟನೆ ಶನಿವಾರ ನಡೆದಿದೆ.

ಇತ್ತೀಚೆಗೆ ಕೊಲೆಯಾದ ಬಿಜೆಪಿ ನಾಯಕ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಅವರ ಮನೆಗೆ ಮುಖ್ಯಮಂತ್ರಿ ಬೊಮ್ಮಾಯಿ ತೆರಳಿದ್ದರೂ ಅದೇ ಊರಿನಲ್ಲಿ ಒಂದು ವಾರ ಮುಂಚೆ ಕೊಲೆಯಾದ ಮಸೂದ್ ಹಾಗೂ ಎರಡು ದಿನಗಳ ಹಿಂದೆ ಕೊಲೆಯಾದ ಫಾಝಿಲ್ ಅವರ ಮನೆಗೆ ಭೇಟಿ ನೀಡದೆ ಹೋಗಿರುವ ಬಗ್ಗೆ ಸೆಂಟ್ರಲ್ ಕಮಿಟಿ ಅಸಮಾಧಾನ ವ್ಯಕ್ತಪಡಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆಎಸ್ ಮಸೂದ್,“ಶಾಂತಿ ಸಭೆಗೆ ಮುಸ್ಲಿಂ ಸೆಂಟ್ರಲ್ ಕಮಿಟಿ ಅವರು ಬಹಿಷ್ಕಾರ ಮಾಡಿದ್ದಾರೆ ಎಂದು ಸುದ್ದಿ ಓಡಾಡುತ್ತಿದೆ. ಆದರೆ ಕಮಿಟಿ ಸಭೆಯನ್ನು ಬಹಿಷ್ಕಾರ ಮಾಡಲಿಲ್ಲ. ಆದರೆ ನಾವು ಸಭೆಗೆ ಯಾಕೆ ಹೋಗಿಲ್ಲ ಎಂದರೆ, ಶಾಂತಿ ಸಮಿತಿಗೆ ಅಧೀಕೃತತೆ ಇಲ್ಲ. ಶಾಂತಿ ಸಮಿತಿಯು ಸರ್ಕಾರದಿಂದ ಆಗಬೇಕಾಗಿದೆ. ಆದರೆ ಪ್ರಸ್ತುತ ಇರುವ ಶಾಂತಿ ಸಮಿತಿ ಕಾನೂನುಬಾಹಿರ. ಅಷ್ಟೆ ಅಲ್ಲದೆ, ಅಧಿಕಾರಿಗಳು ಒಂದೇ ಸಮುದಾಯದ ಜನರಿಗಷ್ಟೆ ಭಾಗವಹಿಸಲು ಹೇಳಿದ್ದಾರೆ” ಎಂದು ಹೇಳಿದ್ದಾರೆ.

“ಮುಖ್ಯಮಂತ್ರಿ ಕೂಡಾ ಕೊಲೆಗೀಡಾದ ಮುಸ್ಲಿಮರ ಮನೆಗೆ ಹೋಗಿಲ್ಲ. ಆದ್ದರಿಂದ ಈ ಬಗ್ಗೆ ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ ಸಭೆ ಕರೆದಿದ್ದೆವು. ಈ ಸಭೆ ನಡೆದ ನಂತರ ನಿನ್ನೆ ರಾತ್ರಿ ಎಂಟು ಗಂಟೆಗೆ ನಮಗೆ ಶಾಂತಿ ಸಭೆಗೆ ಕರೆದಿದ್ದಾರೆ. ಆದರೆ ಈ ಸಭೆಗೆ ಕಾನೂನು ಮಾನ್ಯತೆ ಮತ್ತು ಅಧೀಕೃತತೆ ಇಲ್ಲದ ಕಾರಣ ನಾವು ಸಭೆಗೆ ಹೋಗಿಲ್ಲ” ಎಂದು ಮಸೂದ್ ಅವರು ನಾನುಗೌರಿ.ಕಾಂ ಹೇಳಿದ್ದಾರೆ.

ಇದನ್ನೂ ಓದಿ: ಹಿಂದೂ-ಮುಸ್ಲಿಂ ಕ್ರಿಶ್ಚಿಯನ್ ಯಾರೇ ಆಗಿರಲಿ, ಯಾವ ತಂದೆ ತಾಯಿಗೂ ನಮಗೆ ಬಂದ ಕಷ್ಟ ಬಾರದಿರಲಿ – ಫಾಝಿಲ್ ತಂದೆಯ ಮನದಾಳದ ಮಾತು

ಈ ಮಧ್ಯೆ ಕಮಿಟಿಯ ಅಧ್ಯಕ್ಷ ಕೆ.ಎಸ್. ಮುಹಮ್ಮದ್ ಮಸೂದ್‌ರ ನಿವಾಸದಲ್ಲಿ ತುರ್ತು ಸಭೆ ನಡೆದು ಮೃತ ಬೆಳ್ಳಾರೆಯ ಮುಹಮ್ಮದ್ ಮಸೂದ್ ಮತ್ತು ಮಂಗಳಪೇಟೆಯ ಮುಹಮ್ಮದ್ ಫಾಝಿಲ್ ಕುಟುಂಬಕ್ಕೆ ತಲಾ 30 ಲಕ್ಷ ರೂ. ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದು ವಾರ್ತಾಭಾರತಿ ವರದಿ ಮಾಡಿದೆ. ಜಿಲ್ಲೆಯ ಸಮಸ್ತ ನಾಗರಿಕರು ಶಾಂತಿಯನ್ನು ಕಾಪಾಡಬೇಕು ಮತ್ತು ಮೃತಪಟ್ಟ ಮೂವರು ಕುಟುಂಬಸ್ಥರಿಗೆ ನೋವನ್ನು ಭರಿಸುವ ಶಕ್ತಿಯನ್ನು ದೇವನು ಅನುಗ್ರಹಿಸಲಿ ಎಂದು ಮಸೂದ್ ಸಭೆಯಲ್ಲಿ ಸಾಂತ್ವನ ಮಾತುಗಳನ್ನು ಆಡಿದ್ದಾರೆ.

ಶಾಂತಿ ಸಭೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ, “ಸ್ವತಹ ಮುಖ್ಯಮಂತ್ರಿಗಳೇ ಮುಂದೆ ನಿಂತು ಒಂದು ಸಮುದಾಯವನ್ನು ‘ಎರಡನೇ ದರ್ಜೆಯ ನಾಗರಿಕರು’ ಎಂಬಂತೆ ಬಹಿರಂಗವಾಗಿ ನಡೆಸಿಕೊಂಡು, ನಂತರ ಜಿಲ್ಲಾಧಿಕಾರಿಗಳು ಆ ‘ಸಮುದಾಯ’ವನ್ನು‌ ಶಾಂತಿ ಸಭೆಗೆ ಆಹ್ವಾನಿಸುವುದನ್ನು ತಾರತಮ್ಯಕ್ಕೊಳಗಾದ ಸಮುದಾಯ ಏನೂಂತ ಅರ್ಥೈಸಿಕೊಳ್ಳಬೇಕು” ಎಂದು ಪ್ರಶ್ನಿಸಿದ್ದಾರೆ.

“ಫಾಝಿಲ್ ಕೊಲೆ ನಡೆದಿರುವುದು ಮಂಗಳೂರು ಉತ್ತರ ಕ್ಷೇತ್ರದ ಸುರತ್ಕಲ್ ನಲ್ಲಿ, ಆತನ ಊರು ಮಂಗಳಪೇಟೆ ಮೂಡಬಿದ್ರೆ ಕ್ಷೇತ್ರಕ್ಕೆ ಸೇರುತ್ರದೆ. ಉತ್ತರ ಶಾಸಕ ಭರತ್ ಶೆಟ್ಟಿ, ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಇಬ್ಬರೂ ಫಾಝಿಲ್ ದುಃಖತಪ್ತ ಕುಟುಂಬವನ್ನು ಈವರೆಗೂ ಭೇಟಿಯಾಗಿಲ್ಲ. ಪರಿಹಾರ ಒದಗಿಸುವ ಕುರಿತು ಮಾತಾಡಿಲ್ಲ. ಪೊಲೀಸರ ಹೊರತು ಜಿಲ್ಲಾಡಳಿತದ ಯಾವೊಬ್ಬ ಪ್ರಮುಖ ಅಧಿಕಾರಿಯೂ ಫಾಝಿಲ್ ಮನೆಯ ಬಳಿ ಸುಳಿದಿಲ್ಲ. ಸಂತ್ರಸ್ತ ಕುಟುಂಬಗಳು ಸರಕಾರ, ಜನಪ್ರತಿನಿಧಿಗಳ ಸಾಂತ್ವನವನ್ನು ಅಸಹಾಯಕರಾಗಿ ನಿರೀಕ್ಷಿಸುತ್ತಿರುವಾಗ ಈ ರೀತಿ ಕಠಿಣತೆ, ತಾರತಮ್ಯ, ನಿರ್ಲಕ್ಷವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೇಗೆ ಅರ್ಥೈಸುವುದು ?” ಎಂದು ಅವರು ಕೇಳಿದ್ದಾರೆ.

ಇದನ್ನೂ ಓದಿ: ಯುಪಿ ಮಾಡೆಲ್ ತರ್ತೀವಿ ಅನ್ನುವ ಬೊಮ್ಮಾಯಿಯವರೆ, ಯುಪಿ ಮಾಡೆಲ್ ಎಂದರೇನು ಗೊತ್ತೆ? 

“ಅಷ್ಟೆ ಅಲ್ಲದೆ ‘ಇವತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಂತಿ ಸಮಿತಿ ಸಭೆ ಇದೆ. ನಿಮ್ಮ ಮಸೀದಿ ಜಮಾತ್ ವ್ಯಾಪ್ತಿಯಿಂದ ತಲಾ ಮೂರು ಜನ ಪ್ರತಿನಿಧಿಗಳು ಬರಬೇಕು’ ಎಂದು ಪ್ರತಿಯೊಂದು ಮಸೀದಿಗಳಿಗೂ ಆಯಾಯ ಠಾಣೆಗಳಿಂದ ಕರೆಗಳು ಬರುತ್ತಿವೆ ಎಂದು ಮಾಹಿತಿ ಇದೆ. ರಾಜಕೀಯ ಪಕ್ಷಗಳಿಗೆ, ಸಾಮಾಜಿಕ ಸಂಘಟನೆಗಳಿಗೆ ಈವರಗೆ ಆಹ್ವಾನ ಬಂದಿಲ್ಲ. ಈ ರೀತಿಯ ಶಾಂತಿ ಸಭೆಯ ಉದ್ದೇಶ ಏನು? ನಾವು ಹೇಳುವುದನ್ಜು ಕೇಳಿಕೊಂಡು ಬಿದ್ದಿರಿ ಅಂತಲೇ?” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ಸುರತ್ಕಲ್‌ನಲ್ಲಿ ನಡೆದ ಫಾಝಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 21ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್‌ ಅವರು ಹೇಳಿದ್ದಾರೆ. “ಎಲ್ಲರೂ ಶಂಕಿತರಾಗಿದ್ದು ಅವರ ಸಂಘಟನೆ ಅಥವಾ ಇತರ ಯಾವುದೇ ಲಿಂಕ್ ಮುಖ್ಯವಲ್ಲ” ಎಂದು ಪೊಲೀಸ್‌ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ ಎಂದು ವಾರ್ತಾಭಾರತಿ ವರದಿ ಮಾಡಿದೆ.

ಪೊಲೀಸರು ಫಾಝಿಲ್ ಕೊಲೆಯ ಶಂಕಿತರನ್ನು ವಶಕ್ಕೆ ಪಡೆಯುತ್ತಿದ್ದಂತೆ ಸ್ಥಳೀಯ ಬಿಜೆಪಿ ಶಾಸಕ ಡಾ. ಭರತ್ ಶೆಟ್ಟಿ,“ಕೊಲೆ ಮಾಡಿದ ಆರೋಪಿಗಳು ಬಳಸಿದ ವಾಹನ, ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ನಿಮ್ಮ ಇಲಾಖೆಗೆ ಸಿಕ್ಕಿದ್ದರೂ, ನೈಜ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವುದನ್ನು ಬಿಟ್ಟು, ಅಮಾಯಕ ಕಾರ್ಯಕರ್ತರನ್ನು ಎಳೆದುಕೊಂಡು ಹೋಗಿ ತನಿಖೆಯ ನೆಪದಲ್ಲಿ ಕಿರುಕುಳ ನೀಡಿದರೆ ಕಾರ್ಯಕರ್ತರ ಪರವಾಗಿ ನಿಮ್ಮ ಮುಖ್ಯ ಕಚೇರಿಯ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ” ಎಂದು ಎಂದು ಪೊಲೀಸ್ ಆಯುಕ್ತರಿಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಸುರತ್ಕಲ್‌ ಫಾಝಿಲ್ ಹತ್ಯೆ: ಸುನ್ನಿ-ಶಿಯಾ ಕತೆ ಕಟ್ಟಿ ತನಿಖೆಯ ದಾರಿ ತಪ್ಪಿಸುತ್ತಿರುವ ಬಿಜೆಪಿ ಬೆಂಬಲಿಗರು

“ಸಾಕ್ಷ್ಯಾಧಾರ ನಿಮ್ಮ ಕೈಯ್ಯಲ್ಲಿದೆ. ಆರೋಪಿಗಳನ್ನು ಬಂಧಿಸಿ, ಇದಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ. ಆದರೆ ಅಮಾಯಕ ಕಾರ್ಯಕರ್ತರ ಮನೆಗೆ ನುಗ್ಗಿ, ಅವರ ಕುಟುಂಬದಲ್ಲಿ ಭೀತಿ ಹುಟ್ಟಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬಾರದು. ಈ ಬಗ್ಗೆ ನನಗೆ ದೂರುಗಳು ಬರುತ್ತಿದ್ದು, ನಿಮ್ಮ ಅನುಚಿತ ವರ್ತನೆಯ ಬಗ್ಗೆ ಗೃಹ ಸಚಿವರಿಗೆ ದೂರು ನೀಡಲಿದ್ದೇನೆ. ನಾನು ಪದವಿಗಿಂತ ಕಾರ್ಯಕರ್ತರ ಹಿತವೇ ಮುಖ್ಯ ಎಂದು ಪರಿಗಣಿಸಿದ್ದೇನೆ. ಕಾರ್ಯಕರ್ತರ ಕುಟುಂಬಕ್ಕೆ ನೋವುಂಟು ಮಾಡಿದರೆ ಸಹಿಸಲಾಗದು. ತಕ್ಷಣ ನೈಜ ಆರೋಪಿಗಳ ಪತ್ತೆಗೆ ಕ್ರಮ ಜರುಗಿಸಿ” ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...