ಆರೆಸ್ಸೆಸ್ ತತ್ವ ಅಳವಡಿಸಿಕೊಂಡರೆ ನಾವು ಕಾಂಗ್ರೆಸ್ ಪರವಾಗಿಯೂ ಕೆಲಸ ಮಾಡಲು ಸಿದ್ಧ ಎಂದು ಆರೆಸ್ಸೆಸ್ ಸಂಘದ ಅರುಣಕುಮಾರ ಹೇಳಿದ್ದಾರಲ್ಲಾ ಇದೊಂದು ರೀತಿ ಅಜ್ಞಾನದಿಂದ ಕೂಡಿರುವ ಮಾತು. ಕಾಂಗ್ರೆಸ್ ಹುಟ್ಟಿದಾಗಿನಿಂದಲೂ ಹಲವರು ಹಿಂದೂ ಪರವಾದ ಸಿದ್ಧಾಂತಗಳಲ್ಲೇ ಬದುಕಿದ್ದಾರೆ. ಆದರೆ ಜೈನ, ಬೌದ್ಧ, ಸಿಖ್ ಮತ್ತು ಬಸವ ತತ್ವಗಳೆಲ್ಲಾ ಹಿಂದೂಧರ್ಮದಿಂದಲೇ ಸಿಡಿದುಹೋಗಿ ಪ್ರಜ್ವಲಿಸುತ್ತಿರುವ ಧರ್ಮದ ಕಿಡಿಗಳು. ಇನ್ನೂ ಲೋಕಲ್ಲಾಗಿ ಮಾತನಾಡುವುದಾದರೆ ಕಾಂಗ್ರೆಸಿನಲ್ಲಿದ್ದು ತಮ್ಮವನೇನಾದರು ಬಿಜೆಪಿ ಕ್ಯಾಂಡಿಡೇಟ್ ಆದರೆ ಅವನಿಗೆ ಓಟು ಮಾಡುವ ಅಸಾಮಿಗಳೂ ಹೇರಳವಾಗಿದ್ದಾರೆ. ಈ ಪೈಕಿ ಎರಡು ಉದಾಹರಣೆ ಕೊಡುವುದಾದರೆ, ಚಿಕ್ಕಮಗಳೂರಲ್ಲಿ ಅನಾದಿಕಾಲದಿಂದಲೂ ಕಾಂಗ್ರೆಸ್ಸಿಗರಾಗಿರುವ ಒಕ್ಕಲಿಗರು ತಮ್ಮ ಹುಡುಗನನ್ನ ಕೈಬಿಡಲಾದೀತೆ ಎಂದು ಸಿ.ಟಿ.ರವಿಗೆ ಓಟು ಮಾಡುತ್ತಿರಲಾಗಿ, ಅತ್ತ ಶಿವಮೊಗ್ಗದ ಕಾಂಗ್ರೆಸ್ ಕುರುಬರು ಈಶ್ವರಪ್ಪ ನಮ್ಮವನೆಂದು ಓಟು ಮಾಡುವ ಉದಾಹರಣೆಗಳು ನಮ್ಮ ಮುಂದಿವೆ. ಆದರೆ ಬಿಜೆಪಿ ವಿಷಯದಲ್ಲಿ ಈ ಆಟ ನಡೆಯುವುದಿಲ್ಲ. ಅಲ್ಲಿ ಹೆರಿಗೆ ಡಾಕ್ಟರ್ ಹೆರಿಗೆ ಪೇಷಂಟ್ ಕಾಯುವಂತೆ ಬಿಜೆಪಿ ಮತದಾರರನ್ನು ಕಾಯುವ ವಾಚ್‌ಮನ್‌ಗಳು ಹೇರಳವಾಗಿದ್ದಾರಂತಲ್ಲಾ, ಥೂತ್ತೇರಿ.
*****
ನಮ್ಮ ಸಂಸ್ಕೃತಿ ವಿಷಯ ಮಾತನಾಡುವುದಾದರೆ, ಸಾಮಾಜಿಕವಾಗಿ ಏನೇ ನಡೆದರೂ, ಅದು ಮಹಿಳೆ ಮತ್ತು ಮಕ್ಕಳ ಮೇಲೆ ಪರಿಣಾಮ ಬೀರುತ್ತಾ ಬಂದಿರುವುದು ಅನಾದಿಕಾಲದಿಂದ ನಡೆದುಬಂದಿದೆ. ಮುರುಘಾ ಶರಣರ ಆರೋಪಿತ ದುಷ್ಕೃತ್ಯದಲ್ಲಿ ಸಿಲುಕಿದ್ದವರೆಲ್ಲಾ ಮಕ್ಕಳು. ಇನ್ನು ಪ್ರವಾಹದಿಂದ ಸಂತ್ರಸ್ತರಾಗಿ ಶಾಸಕನಿಂದ ಅನಾಗರಿಕವಾದ ಅವಾಚ್ಯ ಬೈಗುಳ ಕೇಳಿದವರು ಮಹಿಳೆ. ಈ ಪ್ರಕರಣದ ವಿಷಯದಲ್ಲಿ ಮಾಧ್ಯಮದೊಳಗಿರುವ ಶ್ಯಾನುಭೋಗರ ಮಕ್ಕಳು ಕೃತ್ಯದ ವಿಶ್ಲೇಷಣೆ ಬಿಟ್ಟು, ಕಾಂಗ್ರೆಸ್ ಕೈಗೆ ಅನಾಯಾಸವಾಗಿ ಸಿಕ್ಕ ಅಸ್ತ್ರವಿದು ಎಂದುದಲ್ಲದೆ ಶಿಸ್ತಿನ ಪಕ್ಷ ಬಿಜೆಪಿ ಏನು ಮಾಡುತ್ತದೋ ಎಂದು ಕೂಗಿವೆಯಲ್ಲಾ. ಅಂತೂ ಲಿಂಬಾವಳಿ ನಡವಳಿಕೆಯಿಂದ ಅಘಾತವಾಗಿರುವುದು ಟಿವಿಯೊಳಗಿರುವ ಸಂಘಿ ಅಂಕರ್‌ಗಳಿಗೆ. ಶಿಸ್ತಿನ ಪಕ್ಷ ಬಿಜೆಪಿ ಎನ್ನುವುದನ್ನು ವಿಶ್ಲೇಷಿಸುವುವಾದರೆ ಲಿಂಬಾವಳಿಯ ಅನಾಗರಿಕ ನಡತೆಯ ವಿಷಯದಲ್ಲಿ ಯಾವೊಬ್ಬ ಬಿಜೆಪಿಯೂ ಪ್ರತಿಕ್ರಿಯಿಸಿಲ್ಲ. ಇನ್ನು ಬಿಜೆಪಿ ಮಹಿಳೆಯರಂತೂ ಆಕೆಗೆ ತಕ್ಕಶಾಸ್ತಿಯಾಯ್ತು ಎನ್ನುತ್ತಿದ್ದಾರಂತಲ್ಲಾ, ಥೂತ್ತೇರಿ.
*****
ಕರ್ನಾಟಕದ ಇತಿಹಾಸದಲ್ಲಿ ಈವರೆಗೆ ಯಾವೊಬ್ಬ ಶಾಸಕನೂ ಇಷ್ಟು ಅನಾಗರಿಕವಾಗಿ ನಡೆದುಕೊಂಡಿರದ ಕಾರಣವಾಗಿ, ಪ್ರಕರಣದ ಪ್ರಮುಖ ಆರೋಪಿ ಲಿಂಬಾವಳಿಯನ್ನ ಮಾತನಾಡಿಸಬೇಕೆನಿಸಿತಲ್ಲಾ. ಆ ಕೂಡಲೇ ಪೋನ್ ಮಾಡಲಾಗಿ ರಿಂಗಾಯ್ತು. ರಿಂಗ್ ಟೋನ್ “ನಮಸ್ತೆ ಸದಾ ವತ್ಸಲೇ ಮಾತೃಭೂಮಿ”.
“ಹಲೋ ಯಾರ್ರಿ”
“ಸಾರ್ ನಾನು ಯಾಹು ಅಂತ, ಸಾರ್”
“ಯಾಹು ಅಂದರೆ ಯಾರ್ರಿ”
“ಪತ್ರಕರ್ತ ಸಾರ್”
“ಏನೇಳ್ರಿ”
“ನಿಮಗೆ ಧಮಕಿ ಹಾಕಿದ ಮಹಿಳೆ ಮೇಲೆ ಎಫ್‌ಐಆರ್ ಆಯ್ತಂತಲ್ಲಾ ಸಾರ್”
“ಎಫ್‌ಐಆರ್‌ಗಿಂತ ಮೊದ್ಲು ನಾಲ್ಕು ವದಿರಿ ಅವುಳಿಗೆ ಅಂತ ಹೇಳಿದ್ದೆ ನಮ್ಮ ಪೊಲೀಸರಿಗೆ”
“ಯಾಕ್ ಸಾರ್”
“ಮತ್ತೆ ಅವಳ ದುರಹಂಕಾರ ನೋಡ್ರಿ, ರಾಜಕಾಲುವೆ ಒತ್ತುವರಿ ಮಾಡಿದ್ಲು, ಅಲ್ದೆ ನನಿಗೇ ಆವಾಜ್ ಹಾಕ್ತಳೆ”
“ತಪ್ಪು ಸಾರ್ ಜನಪ್ರತಿನಿಧಿಗೆ ಆವಾಜ್ ಹಾಕಬಾರ್ದು”
“ಅದಕ್ಕೆ ಎಫ್‌ಐಆರ್ ಹಾಕಿಸಿದ್ದೀನಿ”
“ವಳೆದಾಯ್ತು ಬುಡಿ ಸಾರ್. ಇನ್ನ ಮುಂದೆ ಯಾರೂ ನಿಮ್ಮತ್ರ ಅರ್ಜಿ ಹಿಡಕೊಂಡು ಬರಲ್ಲ”
“ಜನಕ್ಕೆ ಸದರ ಕೊಡಬಾರ್ದು ಕಂಡ್ರಿ. ಶಾಸಕರು ಅಂದ್ರೆ ಭಯ ಇರಬೇಕು. ಇಲ್ಲ ಅಂದ್ರೆ ಯಲ್ಲಾದಕ್ಕೂ ಅರ್ಜಿ ತಗೊಂಡು ಬರ್ತಾರೆ”
“ಮಹಿಳಾ ಹೋರಾಟಗಾರ್ರು ಆ ಹೆಣ್ಣು ಮಗಳ ಪರ ಪ್ರತಿಭಟನೆ ಮಾಡ್ತೆ ಅವುರೆ.”
“ಮಾಡ್ಲಿ ಬುಡ್ರಿ. ಈ ಮಹಿಳೆಯರು ಆಕೆ ಪರ ಬರ್ತಾರೆ ಅಂದ್ರೆ ಇವುರು ಅವುಳ ತರದೋರೆಯಾ”
“ಅಲ್ಲ ಸಾರ್, ನಿಮ್ಮಲ್ಲಿ ಮಹಿಳೆಯರ ಬಗ್ಗೆ ಇರೋ ಗೌರವ ನೋಡಿದ್ರೆ, ನಿಮ್ಮ ಮಾತಿನ ಪರಿಣಾಮನೆ ನಿಮಗೆ ಗೊತ್ತಿಲ್ಲ ಅನ್ಸುತ್ತೆ”
“ಏನೇಳ್ತಾಯಿದ್ದಿರಿ ನೀವು”
“ಅವತ್ತಿನಿಂದ ಇವತ್ತಿನವರೆಗೂ ಶಿಸ್ತಿನ ಪಕ್ಷವಾದ ನಿಮ್ಮಲ್ಲಿ ಶೀಲವಂತನೇ ಕಾಣಲಿಲ್ಲ. ವಿಕೃತ ಮನಸ್ಸಿನವರೇ ಜಾಸ್ತಿ ಬಿಡಿ ಸಾರ್”
ಥೂತ್ತೇರಿ.
ಇದನ್ನೂ ಓದಿ: ಬೊಮ್ಮಾಯಿಯಿಂದ ಲಿಂಗಾಯಿತರಿಗೇ ಅವಮಾನವಾಯ್ತಂತಲ್ಲಾ!


