ಮುಂದಿನ ಐದು ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಮುನ್ಸೂಚನೆ ನೀಡಿದ್ದು, ಹಲವು ಜಿಲ್ಲೆಗಳಿಗೆ ‘ಯಲ್ಲೊ ಅಲರ್ಟ್’ ಘೋಷಿಸಿದೆ.
ಮುನ್ಸೂಚನೆಯ ಪ್ರಕಾರ, ಮುಂದಿನ ಎರಡು ದಿನಗಳಲ್ಲಿ ಬೆಂಗಳೂರಿನಲ್ಲೂ ಭಾರೀ ಮಳೆಯಾಗಲಿದೆ. ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಹಾಸನ, ಶಿವಮೊಗ್ಗ, ತುಮಕೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಬುಧವಾರ ಭಾರೀ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದೇ ವೇಳೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಾಮರಾಜನಗರ, ಕೊಡಗು, ಶಿವಮೊಗ್ಗ, ಬೆಳಗಾವಿ, ಹಾವೇರಿ, ಬಾಗಲಕೋಟೆ, ಕಲಬುರಗಿ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಿಗೆ ‘ಯಲ್ಲೊ ಅಲರ್ಟ್’ ಘೋಷಿಸಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ: ಅರಣ್ಯ ಭೂಮಿಯ ಅಕ್ರಮ ಡಿ-ನೋಟಿಫಿಕೇಶನ್; ಇಬ್ಬರು ಮಾಜಿ ಐಎಎಸ್ ಅಧಿಕಾರಿಗಳ ವಿರುದ್ಧ ಪರಿಸರ ಸಚಿವಾಲಯಕ್ಕೆ ದೂರು
ಈ ವರ್ಷ, ಬೆಂಗಳೂರಿನಲ್ಲಿ 1,706 ಮಿಮೀ ದಾಖಲೆಯ ಮಳೆ ಸುರಿದಿದ್ದು, ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. 2017 ರಲ್ಲಿ ರಾಜ್ಯ ರಾಜಧಾನಿಯಲ್ಲಿ 1,696 ಮಿಮೀ ಮಳೆ ಸುರಿದಿದ್ದ ದಾಖಲಾಗಿತ್ತು.
ಏನಿವು ಗ್ರೀನ್, ಆರೆಂಜ್, ಯಲ್ಲೊ ಮತ್ತು ರೆಡ್ ಅಲರ್ಟ್‌ಗಳು?
ಮಳೆಗಾಲದಲ್ಲಿ ಅಥವಾ ಯಾವುದೇ ಅನಿರೀಕ್ಷಿತ ಚಂಡಮಾರುತಗಳು ಬೀಸುವ ಸಂದರ್ಭದಲ್ಲಿ ಜನಸಾಮಾನ್ಯರ ಸುರಕ್ಷತೆಯ ದೃಷ್ಟಿಯಿಂದ ಭಾರತೀಯ ಹವಾಮಾನ ಇಲಾಖೆಯು ಹಸಿರು, ಕಿತ್ತಳೆ, ಕೆಂಪು ಮತ್ತು ಹಳದಿ ಅಲರ್ಟ್‌ಗಳನ್ನು ಹೊರಡಿಸುತ್ತದೆ. ಅವುಗಳ ಅರ್ಥವೇನು? ಅವು ಏನನ್ನು ಸೂಚಿಸುತ್ತವೆ ಎಂಬುದನ್ನು ಕೆಳಗೆ ಸಂಕ್ಷಿಪ್ತವಾಗಿ ನೀಡಲಾಗಿದೆ.
ನಮ್ಮ ದೇಶದಲ್ಲಿ ಭಾರತೀಯ ಹವಾಮಾನ ಇಲಾಖೆ (IMD)ಯು ಈ ಎಚ್ಚರಿಕೆಗಳನ್ನು ನೀಡುತ್ತದೆ ಮತ್ತು ವಿಭಿನ್ನ ಸಂದೇಶಗಳನ್ನು ವಿವರಿಸಲು 4 ವಿಭಿನ್ನ ಬಣ್ಣದ ಕೋಡ್‌ಗಳನ್ನು ಬಳಸುತ್ತದೆ. ಹಸಿರು, ಹಳದಿ, ಕಿತ್ತಳೆ ಮತ್ತು ಕೆಂಪು ಬಣ್ಣದ ಎಚ್ಚರಿಕೆಗಳನ್ನು ನೀಡುತ್ತದೆ.
ಇದನ್ನೂ ಓದಿ: ಚೀತಾಗಳನ್ನೇನೋ ತಂದಾಯಿತು; ಮುಂದಿನ ಪರಿಣಾಮ ಬಲ್ಲಿರೇನು? ಪರಿಸರತಜ್ಞರು ಹೇಳಿದ್ದೇನು?
1. ಹಸಿರು ಎಚ್ಚರಿಕೆ (ಗ್ರೀನ್ ಅಲರ್ಟ್)
ಗ್ರೀನ್ ಅಲರ್ಟ್ ಎಂದರೆ ಸಾಮಾನ್ಯವಾಗಿ ಹವಾಮಾನ ಪರಿಸ್ಥಿತಿಗಳು ಉತ್ತಮವಾಗಿವೆ ಎಂದರ್ಥ. ಬಹುತೇಕ ಸಮಯದಲ್ಲಿ ಈ ಅಲರ್ಟ್ ಜಾರಿಯಲ್ಲಿರುತ್ತದೆ. ಅಲ್ಲದೆ ಈ ಎಚ್ಚರಿಕೆಯ ಸಮಯದಲ್ಲಿ ಭಾರತೀಯ ಹವಾಮಾನ ಇಲಾಖೆಯು ನಾಗರೀಕರಿಗೆ ಯಾವುದೇ ಸಲಹೆಯನ್ನು ನೀಡುವುದಿಲ್ಲ.
2. ಹಳದಿ ಎಚ್ಚರಿಕೆ (ಯೆಲ್ಲೋ ಅಲರ್ಟ್)
ಹವಾಮಾನ ಇಲಾಖೆಯು ಜನರಿಗೆ ಎಚ್ಚರಿಕೆ ನೀಡಲು ಹಳದಿ ಅಲರ್ಟ್ ಅನ್ನು ನೀಡುತ್ತದೆ. 7.5 ರಿಂದ 15 ಮಿಮೀ ವರೆಗೆ ಭಾರೀ ಮಳೆಯಾಗಲಿದ್ದು, ಇದು ಮುಂದಿನ 1 ಅಥವಾ 2 ಗಂಟೆಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ ಎಂದಾಗ ಇದನ್ನು ಹೊರಡಿಸುತ್ತದೆ. ಅಂದರೆ ಇದು ಕೇವಲ ಮುಂದೊದಗಬಹುದಾದ ಅಪಾಯದ ಬಗ್ಗೆ ಎಚ್ಚರವಿರಲಿ ಎಂದರ್ಥ. ಹಳದಿ ಎಚ್ಚರಿಕೆಯ ಸಮಯದಲ್ಲಿ ಹವಾಮಾನವನ್ನು ನಿರಂತರವಾಗಿ ಮತ್ತು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.
3. ಕಿತ್ತಳೆ ಎಚ್ಚರಿಕೆ (ಆರೆಂಜ್ ಅಲರ್ಟ್)
ಹವಾಮಾನವು ಹದಗೆಟ್ಟಾಗ, ಹಳದಿ ಎಚ್ಚರಿಕೆಯನ್ನು ಆರೆಂಜ್ ಅಲರ್ಟ್ ಆಗಿ ಬದಲಾಯಿಸಲಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳುತ್ತದೆ. “ಈ ಚಂಡಮಾರುತವು ಹವಾಮಾನ ಪರಿಸ್ಥಿತಿಗಳು ಹದಗೆಡಲು ಕಾರಣವಾಗಬಹುದು. ಇದು ರಸ್ತೆ ಮತ್ತು ವಾಯು ಸಾರಿಗೆಗೆ ಹಾನಿಯನ್ನುಂಟುಮಾಡುತ್ತದೆ ಮತ್ತು ಜೀವ ಮತ್ತು ಆಸ್ತಿ ನಷ್ಟವನ್ನು ಉಂಟುಮಾಡಬಹುದು” ಎಂಬುದನ್ನು ಆರೆಂಜ್ ಅಲರ್ಟ್ ವಿವರಿಸುತ್ತದೆ.
ಇದನ್ನೂ ಓದಿ: ‘ಸ್ವಚ್ಛ ಭಾರತ ಅಭಿಯಾನ’ದ ನಡುವೆಯೂ, ವಿಶ್ವದ ಅತ್ಯಂತ ಕೆಟ್ಟ ಪರಿಸರ ಆರೋಗ್ಯ ಹೊಂದಿರುವ ದೇಶವಾಗಿ ಭಾರತ!
ಹೀಗಾಗಿ ಆರೆಂಜ್ ಅಲರ್ಟ್ ಘೋಷಿಸಿದ ಸಮಯದಲ್ಲಿ ಜನರು ತಮ್ಮ ಮನೆಗಳಲ್ಲಿಯೇ ಇರುವಂತೆ ಸೂಚಿಸಲಾಗುತ್ತದೆ. ಅಂತಹ ಪರಿಸ್ಥಿತಿಗಳಲ್ಲಿ ಗಾಳಿಯ ವೇಗ ಗಂಟೆಗೆ 65 ರಿಂದ 75 ಕಿಮೀ ಮತ್ತು 15 ರಿಂದ 33 ಮಿಮೀ ಮತ್ತು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಆರೆಂಜ್ ಅಲರ್ಟ್ ಘೋಷಿಸಿದಾಗ ಮಳೆ ಪೀಡಿತ ಪ್ರದೇಶದಲ್ಲಿ ಅಪಾಯಕಾರಿ ಪ್ರವಾಹದ ಸಾಧ್ಯತೆಯಿರುವುದರಿಂದ ಪೀಡಿತ ಪ್ರದೇಶದಿಂದ ಜನರನ್ನು ಸ್ಥಳಾಂತರಿಸಲು ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಸ್ಥಳೀಯ ಆಡಳಿತಗಳಿಗೆ ಸೂಚಿಸಲಾಗುತ್ತದೆ.
4. ಕೆಂಪು ಎಚ್ಚರಿಕೆ (ರೆಡ್ ಅಲರ್ಟ್)
ರೆಡ್ ಅಲರ್ಟ್ ಎಂದರೆ ಅಪಾಯಕಾರಿ ಪರಿಸ್ಥಿತಿ ಎಂದರ್ಥ. ಇದು ಅಂತಿಮ ಎಚ್ಚರಿಕೆಯಾಗಿದೆ. ಈ ಸಮಯದಲ್ಲಿ ಜನರು ಹೊರಗಡೆ ಹೋಗದಂತೆ ಸೂಚಿಸಲಾಗುತ್ತದೆ. ಚಂಡಮಾರುತವು ಗಂಟೆಗೆ 130 ಕಿಮೀ ಗಾಳಿಯ ವೇಗದ ತೀವ್ರತೆಯೊಂದಿಗೆ ಬೀಸಿದಾಗ ಮತ್ತು ತೀವ್ರ ಮಳೆ ಬಂದಾಗ ಭಾರತೀಯ ಹವಾಮಾನ ಇಲಾಖೆಯು ಕೆಂಪು ಎಚ್ಚರಿಕೆ ನೀಡುತ್ತದೆ. ಆ ಪ್ರದೇಶದ ಆಡಳಿತವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗುತ್ತದೆ.
ಹವಾಮಾನವು ಅಪಾಯಕಾರಿ ಮಟ್ಟಕ್ಕೆ ತಲುಪಿದಾಗ ಮತ್ತು ಭಾರೀ ಹಾನಿಯ ಅಪಾಯವಿದ್ದರೆ, ಆಗ ರೆಡ್ ಅಲರ್ಟ್ ನೀಡಲಾಗುವುದು ಎಂದು ಹವಾಮಾನ ಇಲಾಖೆ ಹೇಳಿದೆ. 30 ಮಿ.ಮೀ.ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಮತ್ತು ಕನಿಷ್ಠ 2 ಗಂಟೆಗಳ ಕಾಲ ಇದು ಮುಂದುವರಿಯುವ ಸಾಧ್ಯತೆ ಇದ್ದಾಗ ಮಾತ್ರ ಈ ರೀತಿಯ ಎಚ್ಚರಿಕೆಯನ್ನು ಘೋಷಿಸಲಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹದ ಅಪಾಯವು ಹಲವಾರು ಪಟ್ಟು ಹೆಚ್ಚಾಗುವುದರಿಂದ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲಾಗುತ್ತದೆ.
ಇದನ್ನೂ ಓದಿ: ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಸಾಧ್ಯವಿಲ್ಲ: ಬೊಮ್ಮಾಯಿ
ಈ ಎಚ್ಚರಿಕೆಗಳನ್ನು ಟಿವಿ, ರೆಡಿಯೋ ಸೇರಿದಂತೆ ಹಲವು ಮಾಧ್ಯಮಗಳ ಮೂಲಕ ಹವಾಮಾನ ಇಲಾಖೆ ಹೊರಡಿಸುತ್ತದೆ. ಇವುಗಳನ್ನು ಜನರು ಪಾಲಿಸುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು. ಅಲ್ಲದೆ ಇದರಿಂದ ತೀವ್ರ ಮಳೆ ಸಂದರ್ಭದಲ್ಲಿ ಹೆಚ್ಚಿನ ಜೀವ ಹಾನಿಯಾಗದಂತೆ ತಡೆಯಲು ಸ್ಥಳೀಯ ಆಡಳಿತಗಳಿಗೆ ಸಹಕಾರಿಯಾಗುತ್ತದೆ.


