Homeಮುಖಪುಟ"ಆದಿವಾಸಿಗಳ ಬದುಕನ್ನು ಅಧ್ಯಯನ ಮಾಡುತ್ತಾ ದಲಿತಳಾದ ನನ್ನ ಬದುಕಿನ ಜೊತೆಗೂ ಸಮೀಕರಿಸಿಕೊಳ್ಳಲು ಸಾಧ್ಯವಾಯ್ತು": ಕೆ.ಪಿ ಅಶ್ವಿನಿ

“ಆದಿವಾಸಿಗಳ ಬದುಕನ್ನು ಅಧ್ಯಯನ ಮಾಡುತ್ತಾ ದಲಿತಳಾದ ನನ್ನ ಬದುಕಿನ ಜೊತೆಗೂ ಸಮೀಕರಿಸಿಕೊಳ್ಳಲು ಸಾಧ್ಯವಾಯ್ತು”: ಕೆ.ಪಿ ಅಶ್ವಿನಿ

- Advertisement -
- Advertisement -

“ಬುದ್ಧ ಕೇವಲ ಆಧ್ಯಾತ್ಮಿಕ ವ್ಯಕ್ತಿಯಷ್ಟೇ ಅಲ್ಲ. ಆತನೊಬ್ಬ ರಾಜಕೀಯ ತತ್ವಜ್ಞ” ಎನ್ನುತ್ತಾರೆ ಡಾ.ಕೆ.ಪಿ.ಅಶ್ವಿನಿ. “ಸಾಮಾಜಿಕ ಬದಲಾವಣೆ ತರಬೇಕೆಂದು ಶ್ರಮಿಸಿದ ಬುದ್ಧನ ವಿಚಾರಗಳಿಂದ ಪ್ರಭಾವಿತಳಾಗಿದ್ದಾನೆ. ಬುದ್ಧ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್, ಜ್ಯೋತಿಬಾಫುಲೆ, ಸಾವಿತ್ರಿಬಾಫುಲೆ, ಬಸವಣ್ಣ ಇವರೆಲ್ಲರ ವಿಚಾರಗಳನ್ನು ಓದಿಕೊಂಡು ಬೆಳೆದೆ. ಬರಹಗಾರರು, ಚಳವಳಿಗಾರರ ಹತ್ತಿರದ ಒಡನಾಟ ಸಿಕ್ಕಿದ್ದು ನನ್ನ ಅದೃಷ್ಟ” ಎಂದರು

ಜನಾಂಗೀಯ ಭೇದಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ (UNHRC) ಸ್ವತಂತ್ರ ವಿಶೇಷ ತಜ್ಞರಾಗಿ ಆಯ್ಕೆಯಾಗಿದ್ದಾರೆ ಕನ್ನಡತಿ ಕೆ.ಪಿ.ಅಶ್ವಿನಿ. ಕೋಲಾರ ತಾಲೂಕಿನ ಕಸಬಾ ಹೋಬಳಿಯ ಕುರುಬರಹಳ್ಳಿ ಗ್ರಾಮದ ವಿ.ಪ್ರಸನ್ನಕುಮಾರ್ (ಕೆಎಎಸ್ ಅಧಿಕಾರಿ) ಮತ್ತು ಜಯಮ್ಮ ದಂಪತಿಯ ಪುತ್ರಿಯಾಗಿರುವ ಅಶ್ವಿನಿಯವರು, ಈ ಉನ್ನತ ಸ್ಥಾನಕ್ಕೇರಿದ ಮೊಟ್ಟಮೊದಲ ಏಷ್ಯಾ ಮಹಿಳೆಯಾಗಿಯೂ, ಮೊದಲ ಭಾರತೀಯರಾಗಿಯೂ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಇವರು ದಲಿತ ಸಮುದಾಯವೊಂದರ ಪ್ರತಿಭೆ, ಅಂಬೇಡ್ಕರ್‌ವಾದಿ ಚಿಂತಕಿ ಎಂಬುದು ಗಮನಾರ್ಹ.

ದಲಿತ ಚಳವಳಿ, ಜಾತಿ ವಿರೋಧಿ ಚಳವಳಿ, ಮಹಿಳಾ ಚಳವಳಿ ಮೊದಲಾದವುಗಳ ಕುರಿತು ಚಿಕ್ಕಂದಿನಿಂದಲೇ ಆಸಕ್ತಿ ತಳೆದವರು ಅಶ್ವಿನಿ. ಅವುಗಳಿಂದ ಪ್ರಭಾವಿತರಾಗಿ ಅಧ್ಯಯನಗಳನ್ನು ನಡೆಸಿದರು. ಇದಕ್ಕೆ ಪೋಷಕರ ಪ್ರೋತ್ಸಾಹವೂ ದೊರೆಕಿತು. ಬೌದ್ಧಿಸಂನ ಪರಿಸರ ಮನೆಯಲ್ಲಿತ್ತು.

ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿ ಮತ್ತು ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಹಾಗೂ ನವ ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಎಂ.ಫಿಲ್ ಅಧ್ಯಯನ ಮಾಡಿರುವ ಅವರು, ’ದಲಿತ ಮಾನವ ಹಕ್ಕುಗಳ’ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ.

’ನ್ಯಾಯಪಥ’ ವಾರಪತ್ರಿಕೆಗೆ ಸಂದರ್ಶನ ನೀಡಿದ ಅವರು ತಮ್ಮ ವಿಚಾರಗಳನ್ನು, ಬದುಕಿನ ಪಯಣವನ್ನು ವಿಸ್ತೃತವಾಗಿ ಹಂಚಿಕೊಂಡರು. ಶೋಷಿತ ಸಮುದಾಯದ ವಿಮೋಚನೆಗೆ ಸಂಬಂಧಿಸಿದಂತೆ ಅನೇಕ ಒಳನೋಟಗಳನ್ನು ನೀಡಿದರು.

ಯತಿರಾಜ್: ಈವರೆಗೆ ಆಫ್ರಿಕನ್ ವ್ಯಕ್ತಿಗಳು ಹೆಚ್ಚಿನದಾಗಿ ಅಲಂಕರಿಸುತ್ತಿದ್ದ ಹುದ್ದೆಗೆ ಏಷ್ಯನ್ ಮಹಿಳೆಯೊಬ್ಬರು ಆಯ್ಕೆಯಾಗಿದ್ದಾರೆಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದೀರಿ. ವಿಶ್ವಸಂಸ್ಥೆಯಲ್ಲಿನ ನಿಮ್ಮ ಜವಾಬ್ದಾರಿಗಳನ್ನು ತಿಳಿಯುವ ಕುತೂಹಲವಿದೆ…

ಕೆ.ಪಿ.ಅಶ್ವಿನಿ: ವಿಶ್ವಸಂಸ್ಥೆಯಲ್ಲಿ ಬೇರೆಬೇರೆ ವಿಷಯಗಳಿಗೆ ಸಂಬಂಧಿಸಿದಂತೆ ಮ್ಯಾನ್‌ಡೇಟ್‌ಗಳಿರುತ್ತವೆ. ಅಲ್ಪಸಂಖ್ಯಾತರು, ನೈರ್ಮಲ್ಯ, ವಸತಿ, ಮಹಿಳೆಯ ಮೇಲಿನ ದೌರ್ಜನ್ಯ ಇತ್ಯಾದಿ ವಿಷಯಗಳ ಮ್ಯಾನ್‌ಡೇಟ್‌ಗಳನ್ನು ಕಾಣಬಹುದು. ’ಜನಾಂಗೀಯ ತಾರತಮ್ಯ, ವರ್ಣಬೇಧ, ಕ್ಸೀನೋಫೋಬಿಯಾ ಮತ್ತು ಇವುಗಳಿಗೆ ಸಂಬಂಧಿಸಿರುವ ಅಸಹಿಷ್ಣುತೆ’ ಕುರಿತ ವಿಷಯ ನನಗೆ ಸಂಬಂಧಿಸಿದೆ. ’ಜನಾಂಗೀಯ ತಾರತಮ್ಯದ ನಿರ್ಮೂಲನೆ’ (elimination of racial discrimination) ಎಂಬ ಸಂಗತಿಯನ್ನು ನಿರ್ವಹಣೆ ಮಾಡಲು ಬೇರೆಬೇರೆ ತಜ್ಞರು ಇದ್ದಾರೆ. ಔದ್ಯೋಗಿಕ ತಾರತಮ್ಯದ (occupational discrimination) ಕುರಿತೂ ಅಧ್ಯಯನಗಳಾಗುತ್ತವೆ. ಈ ವಿಭಾಗದಲ್ಲಿ ಜಾತಿ ವಿಚಾರವೂ ಬರುತ್ತದೆ. ಮಾನವಹಕ್ಕುಗಳು ಎಂಬ ವಿಷಯ ಬಹುದೊಡ್ಡ ವ್ಯಾಪ್ತಿಯನ್ನು ಹೊಂದಿದೆ. ಎಲ್ಲವೂ ಕಲಸೋಗರವಾಗದಂತೆ ನಿರ್ದಿಷ್ಟ ಮ್ಯಾನ್‌ಡೇಟ್‌ಗಳನ್ನೂ ಮಾಡಿದ್ದಾರೆ. ನಾನು ಜನಾಂಗೀಯ ಹಾಗೂ ವರ್ಣಭೇದದ ಕುರಿತು ಕೆಲಸ ಮಾಡಬೇಕಾಗಿದೆ.

ಇದನ್ನೂ ಓದಿ: ಸಂದರ್ಶನ; ‘ಒಂದು ಕತೆ, ಒಂದು ಕವನದಿಂದ ಎಲ್ಲೋ, ಏನೋ ಬದಲಾಗಬಹುದೆಂಬ ನಂಬಿಕೆಯಿಂದ ಬರೆಯಬೇಕು’

ಯುಎನ್ ಸ್ಪೆಷಲ್ ರ್‍ಯಾಪೋರ್ಟರ್ ಆಗಿ ನನ್ನನ್ನು ನೇಮಕ ಮಾಡಿದ್ದಾರೆ. ಇದೊಂದು ಸ್ವತಂತ್ರ ತಜ್ಞರ ಹುದ್ದೆಯಾಗಿದೆ. ಬೇರೆಬೇರೆ ದೇಶಗಳಲ್ಲಿ ಜನಾಂಗೀಯ, ವರ್ಣಭೇದಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೇಗಿರುತ್ತಿವೆ ಎಂಬುದರ ಕುರಿತು ನಾನು ಗಮನ ಹರಿಸಬೇಕಾಗುತ್ತದೆ. ಯಾವುದಾದರೂ ಜನಾಂಗಕ್ಕೆ (ಉದಾಹರಣೆಗೆ ವಲಸೆ ಹೋದವರಿಗೆ) ಸಮಸ್ಯೆಯಾಗಿದ್ದರೆ, ತಕ್ಷಣವೇ ಸಂಬಂಧಪಟ್ಟ ದೇಶಕ್ಕೆ ತುರ್ತು ಮನವಿಯನ್ನು ಕಳುಹಿಸಬಹುದು; ಆ ದೇಶಕ್ಕೆ ಭೇಟಿ ನೀಡಬಹುದು; ಸರ್ಕಾರಗಳೇ ನಮ್ಮನ್ನು ಕರೆಸಿ ದೇಶದ ಸ್ಥಿತಿಯನ್ನು ಅವಲೋಕಿಸಲು ತಿಳಿಸಬಹುದು. ಎನ್‌ಜಿಒಗಳು ನನ್ನನ್ನು ಆಹ್ವಾನಿಸಬಹುದು. ನಾನು ವಿಶ್ವಸಂಸ್ಥೆಯ ಮಾನವಹಕ್ಕುಗಳ ಕೌನ್ಸಿಲ್ ಸಭೆಯಲ್ಲಿ ವರದಿಗಳನ್ನು ಸಲ್ಲಿಸಬೇಕಾಗುತ್ತದೆ.

ಪ್ರ: ನಿಮ್ಮ ಓದು, ವಿಚಾರಗಳ ಪ್ರಭಾವ, ಅಧ್ಯಯನ ಇತ್ಯಾದಿಗಳ ಕುರಿತು ವಿವರಿಸುವಿರಾ?

: ನಾನು ಅಂಬೇಡ್ಕರ್‌ವಾದಿ ಕುಟುಂಬದವಳು. ಚಿಕ್ಕವಯಸ್ಸಿನಿಂದಲೂ ಅಂಬೇಡ್ಕರ್ ಚಿಂತನೆಗಳ ಪ್ರಭಾವವಿದೆ ಹಾಗೂ ಸಾಹಿತ್ಯ, ಚಳವಳಿಗಳ ಒಡನಾಟವಿತ್ತು. ವಿದ್ಯಾರ್ಥಿ ದಿಸೆಯಲ್ಲಿದ್ದಾಗಲೇ ದಲಿತ, ಆದಿವಾಸಿ, ಮಾನವಹಕ್ಕುಗಳ ಸಂಘಟನೆಗಳ ಜೊತೆಯಲ್ಲಿ ಸ್ವಯಂಸೇವಕಳಾಗಿ ಕೆಲಸ ಮಾಡಿದೆ. ನನ್ನ ಪಿಎಚ್.ಡಿ ಪ್ರಬಂಧವೂ ಆಲಕ್ಷಿತ ಸಮುದಾಯದ ಕುರಿತದ್ದಾಗಿತ್ತು. ಜಾತಿ ಮತ್ತು ಭೂಮಿಯ ಹಕ್ಕು, ದಲಿತರ ಸಮಸ್ಯೆಗಳು, ನೇಪಾಳ ಹಾಗೂ ಭಾರತದ ದಲಿತರ ಸ್ಥಿತಿಗತಿಗಳ ತೌಲನಿಕ ಅಧ್ಯಯನವನ್ನು ಮಾಡಿದೆ. ಪಿಎಚ್‌ಡಿ ಮಾಡುವಾಗ ನಾನು ಸಾಕಷ್ಟು ಶಿಕ್ಷಣತಜ್ಞರನ್ನು, ಸಂಶೋಧಕರನ್ನು, ಚಳವಳಿಗಾರರನ್ನು ಭೇಟಿಯಾಗಿದ್ದೇನೆ. ಇವರೆಲ್ಲರ ಒಡನಾಟದಿಂದಾಗಿ ಸಮುದಾಯದ ನಿಜಸ್ಥಿತಿಗಳನ್ನು ತಿಳಿಯಲು ಅವಕಾಶ ದೊರೆಯಿತು. ಆಮ್ನೆಸ್ಟಿ ಸಂಸ್ಥೆಯಲ್ಲಿ ಮಾನವಹಕ್ಕುಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡಿದ್ದೆ. ಛತ್ತೀಸ್‌ಗಡ, ಒರಿಸ್ಸಾದಂತಹ ರಾಜ್ಯಗಳಲ್ಲಿ ಕಾನೂನುಬಾಹಿರ ಭೂ ಗಣಿಗಾರಿಕೆ ಹಾಗೂ ಆದಿವಾಸಿಗಳ ಸ್ಥಿತಿಗತಿಗಳ ಕುರಿತು ಅಧ್ಯಯನ ಮಾಡಿದ್ದೆ. ನಾವು ಓದಿ ತಿಳಿಯುವುದಕ್ಕೂ, ಕ್ಷೇತ್ರಕಾರ್ಯದಲ್ಲಿ ತಿಳಿದುಕೊಳ್ಳುವುದಕ್ಕೂ ವ್ಯತ್ಯಾಸಗಳಿರುತ್ತವೆ. ಸೈದ್ಧಾಂತಿಕ ಒಳನೋಟಗಳು ಓದುವಾಗ ಸಿಕ್ಕರೆ, ಸಮುದಾಯದ ಜೊತೆಗಿನ ಒಡನಾಟ ನಮ್ಮ ಅನುಭವಗಳನ್ನು ಗಾಢವಾಗಿಸುತ್ತವೆ. ದಲಿತಳಾದ ನಾನು ಆದಿವಾಸಿಗಳ ಬದುಕನ್ನು ಅಧ್ಯಯನ ಮಾಡುತ್ತಾ ನನ್ನ ಬದುಕಿನ ಜೊತೆಗೂ ಸಮೀಕರಿಸಿಕೊಳ್ಳುವ ಸಂದರ್ಭ ಸಿಕ್ಕಿತು. ಕ್ಷೇತ್ರಕಾರ್ಯವು ನನಗೆ ಬೇರೆಯ ರೀತಿಯ ಜಗತ್ತನ್ನು ತೆರೆದಿಟ್ಟಿತ್ತು.

ಪ್ರ: 1948ರಲ್ಲಿ ಜಾರಿಗೆ ಬಂದ ಮಾನವ ಹಕ್ಕುಗಳನ್ನು ನಮ್ಮ ಭಾರತದ ಸಂವಿಧಾನ ಹೇಗೆ ಒಳಗೊಂಡಿದೆ ಎಂದು ವಿವರಿಸುವಿರಾ?

: ವಿಶ್ವದ ಅದ್ಭುತ ಸಂವಿಧಾನಗಳ ಪೈಕಿ ನಮ್ಮ ಸಂವಿಧಾನವೂ ಒಂದು. ವೈಚಾರಿಕ ಸಂಗತಿಗಳನ್ನು ಸಂವಿಧಾನದಲ್ಲಿ ಅಡಕಮಾಡಲಾಗಿದೆ. ನಮ್ಮ ಪ್ರಸ್ತಾವನೆಯೊಂದೇ ಎಲ್ಲವನ್ನೂ ಹೇಳುತ್ತದೆ. ಮೂಲಭೂತ ಹಕ್ಕುಗಳು ನಮ್ಮ ಸಂವಿಧಾನದ ಬಹುಮುಖ್ಯ ಅಂಗ. ಸಮಾಜವಾದ, ಜಾತ್ಯತೀತವಾದ ನಮ್ಮ ಹೆಗ್ಗಳಿಕೆ. ಭಾರತ ದೇಶವು ಸಂವಿಧಾನ ರಚಿಸಿಕೊಂಡ ನಂತರದಲ್ಲಿ ಸಂವಿಧಾನಗಳನ್ನು ರೂಪಿಸಿಕೊಂಡಿರುವ ನೇಪಾಳ, ಭೂತಾನ್ ರೀತಿಯ ರಾಷ್ಟ್ರಗಳು ನಮ್ಮಿಂದ ಸಾಕಷ್ಟು ಎರವಲು ಪಡೆದುಕೊಂಡಿವೆ. ಅಲಕ್ಷಿತ ಸಮುದಾಯಗಳನ್ನು ನಮ್ಮ ಸಂವಿಧಾನ ಒಳಗೊಂಡಿದೆ. ಇವೆಲ್ಲವೂ ಮಾನವ ಹಕ್ಕುಗಳ ಆಶಯಗಳನ್ನು ಪ್ರತಿಬಿಂಬಿಸುತ್ತಿವೆ. ಸಾಮಾಜಿಕ, ಆರ್ಥಿಕ ಉನ್ನತೀಕರಣದ ಜೀವಂತ ದಾಖಲೆ ಭಾರತೀಯ ಸಂವಿಧಾನ.

ಪ್ರ: ರೇಸಿಸಂ ಮತ್ತು ಕ್ಯಾಸ್ಟಿಸಂ ಒಟ್ಟಿಗೆ ನೋಡಲು ಸಾಧ್ಯವೇ? ಬ್ಲಾಕ್ ಲೈವ್ಸ್ ಮ್ಯಾಟರ್ ಹಾಗೂ ದಲಿತ್ ಲೈವ್ಸ್ ಮ್ಯಾಟರ್‌ಗಳನ್ನು ಹೇಗೆ ಪರಿಭಾವಿಸುತ್ತೀರಿ?

: ನೂರಿನ್ನೂರು ವರ್ಷಗಳಲ್ಲಿ ಉದ್ಯೋಗ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಲಸೆ ಹೆಚ್ಚಾಗಿದೆ. ಹೀಗಾಗಿ ಜಾತಿ ತಾರತಮ್ಯ, ಜನಾಂಗೀಯ ತಾರತಮ್ಯ ಒಂದು ದೇಶಕ್ಕೆ ಮೀಸಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರಾಂತೀಯ ಸ್ವರೂಪದ ಕ್ಸೀನೊಫೋಬಿಯಾ ಎಲ್ಲ ಕಡೆ ಇದೆ. ಪ್ರಗತಿಪರ ಆಲೋಚನೆಯೊಂದು ಯಾವುದೇ ಭಾಗದಲ್ಲಿ ಹುಟ್ಟಿದಾಗ, ಇಡೀ ಪ್ರಪಂಚವೇ ಅದನ್ನು ಎರವಲು ಪಡೆಯುವುದು ನಡೆದಿದೆ. ಬ್ಲಾಕ್ ಲೈವ್ಸ್ ಮ್ಯಾಟರ್ ಬಂದಾಗ, ದಲಿತ್ ಲೈವ್ಸ್ ಮ್ಯಾಟರ್ ಭಾರತದಲ್ಲಿ ಬಂತು. ಅಮೆರಿಕದಲ್ಲಿ ಬ್ಲಾಕ್ ಹಿಸ್ಟರಿ ತಿಂಗಳು ಆಚರಣೆಯಲ್ಲಿದೆ. ಆ ಸಂದರ್ಭದಲ್ಲಿ ಕಪ್ಪು ಜನರ ಹೋರಾಟದ ಮುಖ್ಯ ಘಟನೆಗಳನ್ನು ಪುಸ್ತಕ ಹಾಗೂ ಲೇಖನದ ರೂಪಗಳಲ್ಲಿ ದಾಖಲೀಕರಣ ಮಾಡುತ್ತಾರೆ. ಇದೇ ಸ್ವರೂಪದಲ್ಲಿ ಭಾರತದಲ್ಲಿ ದಲಿತ ಇತಿಹಾಸ ತಿಂಗಳು ಆಚರಣೆಗೆ ಬಂದಿದೆ. ಮುಸ್ಲಿಂ ಹಿಸ್ಟರಿ ತಿಂಗಳು ಕೂಡ ಆರಂಭವಾಗಿದೆ. ದಲಿತ ಹಾಗೂ ಮುಸ್ಲಿಂ ಇತಿಹಾಸ ತಿಂಗಳಿಗೆ ಸಂಬಂಧಿಸಿದಂತೆ ಲೇಖನಗಳನ್ನು ಮಾಡಿಕೊಟ್ಟಿದ್ದೇನೆ. ಬೀದಿ ಹೋರಾಟವಷ್ಟೇ ಅಲ್ಲದೇ ಪುಸ್ತಕ ಹಾಗೂ ಲೇಖನ ಬರೆಯುವ ಕ್ರಿಯೆಗಳಿಂದಲೂ ನಾವು ಸ್ಫೂರ್ತಿ ಪಡೆಯುತ್ತೇವೆ. ಈಗ ಸಾಮಾಜಿಕ ಮಾಧ್ಯಮಗಳು ಬಂದಿವೆ. ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆಯುವ ಹೋರಾಟವು ಮತ್ತೆಲ್ಲೋ ಸ್ಫೂರ್ತಿಯಾಗಿರುತ್ತದೆ. ಹೊರದೇಶಗಳ ಸ್ವಾತಂತ್ರ್ಯ ಹೋರಾಟಗಳಿಂದ ಪ್ರಭಾವಿತವಾಗಿದ್ದೇವೆ. ಸಂವಿಧಾನ ರಚನೆಯಲ್ಲೂ ಪರಸ್ಪರ ಕೊಳುಕೊಡುಗೆ ಇರುತ್ತದೆ. ಇವೆಲ್ಲವೂ ಸಂಯೋಜಿತ ಪ್ರಕ್ರಿಯೆಯಾಗಿರುತ್ತವೆ.

ಇದನ್ನೂ ಓದಿ: 2015ರ ಸಮಯಕ್ಕೆ ಆತ್ಮೀಯರಾಗಿದ್ದವರ ದನಿ ಬದಲಾಗಿದ್ದನ್ನು ಗಮನಿಸಿದೆ; ಮೊಹಮ್ಮದ್ ಝುಬೇರ್ ಸಂದರ್ಶನ ಭಾಗ-1

ಪ್ರ: ಭಾರತದಾಚೆಯೂ ಜಾತಿ ವ್ಯವಸ್ಥೆಯು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಹೊರದೇಶಗಳಲ್ಲೂ ಕೂಡ ದಲಿತರು ತಾರತಮ್ಯಗಳನ್ನು ಎದುರಿಸುತ್ತಿದ್ದಾರೆ. ಒಂದು ಕಡೆ ವರ್ಣಬೇಧ ಮತ್ತೊಂದು ಕಡೆ ಜಾತಿ ನೋವು. ಇವುಗಳನ್ನು ಹೇಗೆ ನೋಡಬಯಸುತ್ತೀರಿ?

: ವಲಸೆ ಹೋದವರು ತಾರತಮ್ಯಕ್ಕೆ ಸಾಮಾನ್ಯವಾಗಿ ಒಳಗಾಗುತ್ತಾರೆ. ಭಾರತದಿಂದ ಪಾಶ್ಚಾತ್ಯ ದೇಶಗಳಿಗೆ ಹೋದವರನ್ನು ಕಂದು ಜನರೆಂದು ಗುರುತಿಸಲ್ಪಡುತ್ತಾರೆ. ಏಷಿಯನ್ ಜನರ ಮೇಲೆ ತಾರತಮ್ಯ ಮಾಡುವುದೂ ನಡೆಯುತ್ತಿದೆ. ಮುಸ್ಲಿಂ ಜನಾಂಗವು ಹೆಚ್ಚಿನ ತೊಂದರೆಗಳನ್ನು ವಲಸೆ ಸಂದರ್ಭದಲ್ಲಿ ಅನುಭವಿಸುತ್ತದೆ. ದಕ್ಷಿಣ ಏಷ್ಯಾ ದೇಶಗಳಿಂದ ಯುರೋಪ್, ಅಮೆರಿಕಕ್ಕೆ ವಲಸೆ ಹೋದಾಗಲೂ ಜಾತಿಯನ್ನು ಒಂದು ಸಂಸ್ಕೃತಿಯಾಗಿ ತೆಗೆದುಕೊಂಡು ಹೋಗಿದ್ದಾರೆ. ಜಾತಿ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಂಡಿದ್ದಾರೆ. ಜಾತಿ ಸೂಚಕ ಹೆಸರುಗಳಲ್ಲೇ ಗುರುತಿಸಿಕೊಳ್ಳುತ್ತಾರೆ. ಜಾತಿ ಕೇಂದ್ರಿತವಾಗಿಯೇ ಮದುವೆಗಳು ನಡೆಯುತ್ತವೆ. ಭಾರತೀಯ ಸಮುದಾಯದೊಳಗಿನ ದಲಿತರ ಮೇಲೆ ದೌರ್ಜನ್ಯಗಳು ನಡೆದಿರುವ ವರದಿಗಳು ಅಮೆರಿಕದಲ್ಲಿ ಆಗಿವೆ. ಈ ಕುರಿತು ಅಲ್ಲಿನ ಸರ್ಕಾರಗಳು, ಅಧಿಕಾರಿಗಳು ಸಾಕಷ್ಟು ಮಾತನಾಡಿರುವುದೂ ಉಂಟು. ವಿಶ್ವಸಂಸ್ಥೆಯಲ್ಲೂ ಇದರ ಕುರಿತು ಚರ್ಚೆಗಳಾಗಿವೆ. ಆದರೆ ಇದು ಅತ್ಯಂತ ವಿಷಾದನೀಯ ಸಂಗತಿ. ನಾವು ಆಧುನೀಕಣಗೊಳ್ಳುತ್ತಾ, ಈ ಶ್ರೇಣೀಕೃತ ವ್ಯವಸ್ಥೆಯನ್ನು ಬಿಟ್ಟುಬಿಡಬೇಕು. ಜಾತಿ ಸಮಸ್ಯೆಗಳನ್ನು ನಿರ್ಮೂಲನೆ ಮಾಡುವ ಪ್ರಕ್ರಿಯೆಯಲ್ಲಿ ಇದ್ದೇವೆ. ಸಾವಿರಾರು ವರ್ಷಗಳಿಂದ ಬಂದಿರುವ ಜಾತಿ ಸಮಸ್ಯೆಯನ್ನು ಪರಿಹರಿಸಲು ಸಾಕಷ್ಟು ಸಮಯ ಬೇಕಾಗುತ್ತದೆ.

ಪ್ರ: ದಲಿತ ಐಡೆಂಟಿಟಿ ವಿಚಾರ ಬಂದಾಗ, ತಮ್ಮ ಗುರುತನ್ನು ಹೇಳಿಕೊಳ್ಳುವುದು ಕಷ್ಟವೆಂಬ ಭಾವನೆ ಅನೇಕರಲ್ಲಿ ಇದೆ. ಇದನ್ನು ಹೋಗಲಾಡಿಸುವುದು ಹೇಗೆ?

: ಬಾಬಾ ಸಾಹೇಬ್ ಅಂಬೇಡ್ಕರ್ ಅವರು, “ಜಾತಿ ಎಂಬುದು ಒಂದು ಮಾನಸಿಕ ಸ್ಥಿತಿ” ಎಂದಿದ್ದಾರೆ. ದೊಡ್ಡದೊಡ್ಡ ನೀತಿಗಳನ್ನು ರೂಪಿಸಿದರೂ ಜಾತಿ ಒಲವು ಮನಸ್ಸಿನಲ್ಲಿದ್ದರೆ ಅದನ್ನು ತೆಗೆದುಹಾಕಲು ಸಾಧ್ಯವಿಲ್ಲ. ಕಾನೂನು ಉಲ್ಲಂಘಿಸುತ್ತಿದ್ದೀರಿ ಎಂದು ಸರ್ಕಾರ ಎಚ್ಚರಿಬಹುದೇ ಹೊರತು, ಮನಸ್ಸಿನೊಳಗೆ ಪ್ರವೇಶ ಪಡೆಯಲು ಸಾಧ್ಯವಿಲ್ಲ. ಬಾಬಾ ಸಾಹೇಬರು ಹೇಳಿದಂತೆ ಜಾತಿ ನಿರ್ಮೂಲನೆ ಅಗತ್ಯವಿದೆ. ಅದಕ್ಕೆ ಒತ್ತು ನೀಡಬೇಕಿದೆ. ಎಲ್ಲ ಸಮುದಾಯಗಳು ಸೇರಿ ಮುನ್ನಡೆದರೆ ಮಾತ್ರ ಜಾತಿ ನಿರ್ಮೂಲನೆಯಾಗುತ್ತದೆ.

ಜಾತಿ ಐಡೆಂಟಿಟಿ ವಿಚಾರಕ್ಕೆ ಬಂದರೆ, ಜಾತಿ ಗುರುತನ್ನು ಯಾವ ಸಂದರ್ಭದಲ್ಲಿ ಹೇಳಿಕೊಳ್ಳುತ್ತೇವೆ ಎಂಬುದು ಮುಖ್ಯವಾಗುತ್ತದೆ. ಪ್ರಾತಿನಿಧ್ಯ, ಶಿಕ್ಷಣ, ಉದ್ಯೋಗ, ಜಾತಿ ದೌರ್ಜನ್ಯ ಇತ್ಯಾದಿಗಳ ಸಂದರ್ಭದಲ್ಲಿ ಜಾತಿ ಐಡೆಂಟಿಟಿಗೆ ಅರ್ಥವಿರುತ್ತದೆ. ಯಾವುದೇ ಸಂದರ್ಭವಿಲ್ಲದೆ ಜಾತಿ ಮೇಲರಿಮೆಯನ್ನು ಸಾಧಿಸುವುದು, ಜಾತಿ ದರ್ಪವನ್ನು ತೋರುವುದು ಸಮಸ್ಯೆಯಾಗುತ್ತದೆ. ಸಾಮಾಜಿಕ ಬದಲಾವಣೆಗಾಗಿ, ರಾಜಕೀಯ ಪ್ರಾತಿನಿಧ್ಯ ವಿಚಾರ ಬಂದಾಗ, ಐಡೆಂಟಿಟಿ ಎಂಬುದು ಸಮುದಾಯಕ್ಕೆ ಸಹಕಾರಿಯಾಗುತ್ತದೆ. ಶೋಷಿತ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಐಡೆಂಟಿಟಿ ಮುಖ್ಯವಾಗಬೇಕೇ ಹೊರತು ವೈಯಕ್ತಿಕ ಹಿತಾಸಕ್ತಿಗೆ ಬಳಕೆಯಾಗಬಾರದು.

ಪ್ರ: ಸವಲತ್ತುಗಳನ್ನು ಪಡೆದ ದಲಿತರು ಜಾತಿ ಗುರುತುಗಳನ್ನು ಹೇಳಿಕೊಳ್ಳಬೇಕೆಂಬ ಮಾತನ್ನು ಇತ್ತೀಚೆಗೆ ಆಡಿದ್ದೀರಿ. ಸವಲತ್ತು ಪಡೆದ ದಲಿತರು ಅನುಭವಿಸುವ ಜಾತಿ ತಾರತಮ್ಯಗಳು ಹೇಗಿರುತ್ತವೆ?

: ಜಾತಿ ತಾರತಮ್ಯದಲ್ಲಿ ಭಿನ್ನತೆಗಳಿರುತ್ತವೆ. ಹಳ್ಳಿಯ ಅನುಭವಕ್ಕೂ ನಗರಗಳ ಅನುಭವಕ್ಕೂ ವ್ಯತ್ಯಾಸಗಳಿರುತ್ತವೆ. ಆರ್ಥಿಕವಾಗಿ ಸಬಲರಾದ ದಲಿತರು ಜಾತಿ ಐಡೆಂಟಿಟಿಯನ್ನು ಹೇಳಿಕೊಳ್ಳುವುದು ತಪ್ಪೇನಿಲ್ಲ ಎಂದು ಭಾವಿಸುತ್ತೇನೆ. ಆದರೆ ಅಧಿಕಾರ ಸ್ಥಾನಗಳನ್ನು ಹಿಡಿದಾಗ ಮಾತ್ರ ಜಾತಿ ತಾರಮತ್ಯ ನಿಲ್ಲುತ್ತದೆ ಎಂದು ನಾನು ಭಾವಿಸಿಲ್ಲ. ಉನ್ನತ ಸ್ಥಾನಗಳಿಗೇರಿದರೂ ವ್ಯವಸ್ಥೆಯೊಳಗೆ ಸಿಗುವ ಅವಕಾಶಗಳು ಕಡಿಮೆಯಾಗಬಹುದು; ಉನ್ನತ ವ್ಯಾಸಂಗದಲ್ಲಿ ನಿಮಗೆ ಸರಿಯಾಗಿ ಸ್ಕಾಲರ್‌ಶಿಪ್‌ಗಳು ಸಿಗದೇ ಹೋಗಬಹುದು, ಸಂದರ್ಶನದಲ್ಲಿ ಆಯ್ಕೆಯಾಗದೆ ಇರಬಹುದು- ಇವೆಲ್ಲವೂ ಜಾತಿಯ ಬೇರೆ ಬೇರೆ ಆಯಾಮವನ್ನು ತೆರೆದಿಡುತ್ತವೆ.

ಸಂದರ್ಶಕ: ಯತಿರಾಜ್ ಬ್ಯಾಲಹಳ್ಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...