Homeಕರ್ನಾಟಕರಾಜ್ಯ ಸರ್ಕಾರ ನಮ್ಮ ಸಮುದಾಯವನ್ನು ಮೂರ್ಖರು ಎಂದು ಭಾವಿಸಿದೆ: ಬಿಲ್ಲವ ಮುಖಂಡ ಪದ್ಮರಾಜ್ ಆರ್‌‌.

ರಾಜ್ಯ ಸರ್ಕಾರ ನಮ್ಮ ಸಮುದಾಯವನ್ನು ಮೂರ್ಖರು ಎಂದು ಭಾವಿಸಿದೆ: ಬಿಲ್ಲವ ಮುಖಂಡ ಪದ್ಮರಾಜ್ ಆರ್‌‌.

ರಾಜ್ಯದ ನಾಲ್ಕನೇ ಅತೀ ದೊಡ್ಡ ಸಮುದಾಯವಾದ ಬಿಲ್ಲವ-ಈಡಿಗ ಸಮುದಾಯಕ್ಕೆ ‘ಕೋಶ’ದ ಬದಲು ‘ನಿಗಮ’ ಸ್ಥಾಪಿಸಲು ಒತ್ತಾಯ

- Advertisement -
- Advertisement -

ಬಿಲ್ಲವ, ಈಡಿಗ, ನಾಮಧಾರಿ, ನಾಯ್ಕ ಸೇರಿದಂತೆ ಸುಮಾರು 26 ಪಂಗಡಗಳಿಗೆ ರಾಜ್ಯ ಸರ್ಕಾರ ಹೊಸತಾಗಿ ಸ್ಥಾಪಿಸಲು ಆದೇಶ ನೀಡಿರುವ, ‘ಬ್ರಹ್ಮಶ್ರೀ ನಾರಾಯಣಗುರು ಕೋಶ’ವನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಅವರು ವಿರೋಧಿಸಿದ್ದು,‘ರಾಜ್ಯದ ಬಿಜೆಪಿ ಸರ್ಕಾರ ಬಿಲ್ಲವ ಸಮುದಾಯವನ್ನು ಮೂರ್ಖರು ಎಂದು ಭಾವಿಸಿದಂತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಅವರು, “ರಾಜ್ಯದ ನಾಲ್ಕನೇ ಅತೀ ದೊಡ್ಡ ಸಮುದಾಯವಾದ, ಸುಮಾರು 70 ಲಕ್ಷ ಜನಸಂಖ್ಯೆ ಇರುವ ಬಿಲ್ಲವ-ಈಡಿಗ ಸಮುದಾಯಕ್ಕೆ ಒಂದು ನಿಗಮ ಸ್ಥಾಪಿಸಲು ಸರ್ಕಾರಕ್ಕೆ ಇರುವ ಸಮಸ್ಯೆ ಏನು? ಇದು ಸರ್ಕಾರಕ್ಕೆ ಬಿಲ್ಲವ ಸಮುದಾಯದ ಮೇಲೆ ಇರುವ ತಾತ್ಸಾರ ಭಾವನೆ ಅಲ್ಲದೆ ಮತ್ತೇನು?” ಎಂದು ಕೇಳಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಬಿಲ್ಲವ ಸಮುದಾಯಕ್ಕೆ ನಿಗಮ ಸ್ಥಾಪಿಸಬೇಕು ಎಂದು ಆರು ವರ್ಷದಿಂದ ಹೋರಟ ಮಾಡುತ್ತಿದ್ದೇವೆ. ತೀರಾ ಕಡಿಮೆ ಜನಸಂಖ್ಯೆ ಇರುವ ಹಲವು ಹಿಂದುಳಿದ ಸಮುದಾಯಕ್ಕೆ ನಿಗಮಗಳನ್ನು ಸ್ಥಾಪಿಸಲಾಗಿದೆ, ಈ ಬಗ್ಗೆ ನಮಗೆ ತಕರಾರು ಏನಿಲ್ಲ. ಅದರ ಜೊತೆಗೆ ಆರ್ಥಿಕವಾಗಿ ಬಲಿಷ್ಠರಾಗಿರುವ ಒಕ್ಕಲಿಗ, ಬ್ರಾಹ್ಮಣ ಮತ್ತು ಮರಾಠ ಸಮುದಾಯಗಳಿಗೆ ನಿಗಮಗಳಿವೆ. ಆದರೆ ಬಿಲ್ಲವ-ಈಡಿಗ ಸಮುದಾಯಕ್ಕೆ ಒಂದು ನಿಗಮ ಸ್ಥಾಪಿಸಲು ಸರ್ಕಾರಕ್ಕೆ ಸಮಸ್ಯೆಯೇನಿದೆ” ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಬಿಲ್ಲವ ನಾಯಕಿಗೆ ಅಶ್ಲೀಲ ನಿಂದನೆ; ಆರೆಸ್ಸೆಸ್‌-ಬಿಜೆಪಿ ಬೆಂಬಲಿಗ ಶ್ಯಾಮ ಭಟ್‌ ವಿರುದ್ಧ FIR

ಸರ್ಕಾರ ಹೊಸದಾಗಿ ನೀಡಿರುವ ‘ಕೋಶ’ವನ್ನು ಸ್ಥಾಪನೆ ಮಾಡದೆ ಇದ್ದರೆ ಒಳ್ಳೆಯದಿತ್ತು. ‘ಕೋಶ’ ಸ್ಥಾಪನೆ ಎಂಬುವುದು ಚುನಾವಣೆ ಹತ್ತಿರ ಇರಬೇಕಾದರೆ ಜನರನ್ನು ದಾರಿ ತಪ್ಪಿಸುವ ಒಂದು ದಾರಿಯಷ್ಟೆ. ನಿಗಮಕ್ಕೂ ಕೋಶಕ್ಕು ಬಹಳಷ್ಟು ವ್ಯತ್ಯಾಸವಿದೆ, ಇದರಿಂದ ಸಮುದಾಯಕ್ಕೆ ಒಂದಿಷ್ಟು ಲಾಭವಿಲ್ಲ ಎಂದು ಪದ್ಮರಾಜ್ ಹೇಳಿದರು.

“ನಿಗಮ ಎಂದರೆ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಅದಕ್ಕೆ ಒಂದು ಸ್ವಾಯತ್ತತೆ ಇರುತ್ತದೆ. ಅದಕ್ಕೆ ತನ್ನದೇ ಆದ ಕಾನೂನು, ಸಂವಿಧಾನ ಇರುತ್ತದೆ. ನಿಗಮಕ್ಕೆ ಒಬ್ಬ ಅಧ್ಯಕ್ಷರು ಇರುತ್ತಾರೆ, ಸದಸ್ಯರು ಇರುತ್ತಾರೆ, ನಿದೇಶಕರು ಇರುತ್ತಾರೆ. ಇಲ್ಲೆಲ್ಲಾ ಸಮುದಾಯದ ಪ್ರತಿನಿಧಿಗಳಿದ್ದು, ಇವರೆಲ್ಲಾ ತಮ್ಮ ಪರಿಧಿಯಲ್ಲಿ ಸಮುದಾಯದ ಅಭಿವೃದ್ಧಿಗಾಗಿ ಕೆಲಸ ಮಾಡುವ ಅಧಿಕಾರ ಇರುತ್ತದೆ. ಕೋಶ ಎಂದರೆ, ನಿರ್ದೇಶನಾಲಯ ಅಡಿಯಲ್ಲಿ ಬರುವ ಒಂದು ಸಣ್ಣ ಅಂಗ ಸಂಸ್ಥೆ ಮಾತ್ರವಾಗಿದೆ” ಎಂದು ಅವರು ತಿಳಿಸಿದರು.

“ಕೋಶಕ್ಕೆ ಸರ್ಕಾರದ ಕಡೆಯಿಂದ ಒಬ್ಬ ಅಧಿಕಾರಿ ಇರುತ್ತಾರೆ ಎಂಬುವುದನ್ನು ಬಿಟ್ಟು, ಆ ಅಧಿಕಾರಿಗೆ ಕೂಡಾ ಯಾವುದೇ ಅಧಿಕಾರ ಇರುವುದಿಲ್ಲ. ಎಲ್ಲವನ್ನೂ ತನ್ನ ಮೇಲಾಧಿಕಾರಿಯ ಅಡಿಯಲ್ಲೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸಮುದಾಯವನ್ನು ಪ್ರತಿನಿಧಿಸುವ ಒಬ್ಬನೇ ಒಬ್ಬ ಸದಸ್ಯ ಈ ಕೋಶದಲ್ಲಿ ಇರುವುದಿಲ್ಲ. ಇದೊಂದು ಹಲ್ಲಿಲ್ಲದ ಹಾವು ಎಂದೇ ಹೇಳಬಹುದು” ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಉಡುಪಿಯ ಬಿಲ್ಲವ-ಮುಸ್ಲಿಂ ಸ್ನೇಹ ಸಮಾವೇಶಕ್ಕೆ ಸಂಘಪರಿವಾರ ಹೆದರಿದ್ದೇಕೆ?

“ಚುನಾವಣೆ ಹೊತ್ತಿಗೆ ನಾವು ಹಿಂದುಳಿದ ವರ್ಗಗಳಿಗೆ ‘ಏನೋ’ ನೀಡಿದ್ದೇವೆ ಎಂದು ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಕೇವಲ ಬಿಲ್ಲವ ಸಮಾಜಕ್ಕೆ ಮಾತ್ರವಲ್ಲ, ಸಮಸ್ತ ಹಿಂದುಳಿದ ವರ್ಗಗಳನ್ನು ಮತ್ತೇ ಹಿಂದುಳಿಯುವಂತೆ ಮಾಡುವ ಎಲ್ಲಾ ಪ್ರಯತ್ನಗಳು ನಡೆಯುತ್ತಲೆ ಇವೆ. ಸರ್ಕಾರ ಹೊಸದಾಗಿ ರಚಿಸಲಿರುವ ಕೋಶವು ನಿಗಮಗಳು ಮಾಡುವ 2% ಕೆಲಸಗಳನ್ನು ಮಾಡುವುದಿಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕೋಶಕ್ಕೆ ಅನುದಾನ ನೀಡುತ್ತೇವೆ ಎಂದು ಸರ್ಕಾರ ಹೇಳಿದೆ, ಆದರೆ ಎಷ್ಟು ನೀಡುತ್ತೇವೆ ಎಂದು ಇನ್ನೂ ಹೇಳಿಲ್ಲ ಎಂದು ಹೇಳಿದ ಪದ್ಮರಾಜ್, “ನನ್ನ ಪ್ರಕಾರ ಹೆಚ್ಚೆಂದರೆ 10 ರಿಂದ 15 ಕೋಟಿ ನೀಡಬಹುದು. ಆದರೆ ನಿಗಮಗಳಿಗೆ ಕಡಿಮೆಯೆಂದರೂ 100-200 ಕೋಟಿ ನೀಡಬೇಕಾಗುತ್ತದೆ. ಒಂದು ವೇಳೆ ಕೋಶಕ್ಕೆ 100 ಕೋಟಿ ಕೊಡುತ್ತೇವೆ ಎಂದರೂ ಅದನ್ನು ಸಮುದಾಯದ ಅಭಿವೃದ್ಧಿಗೆ ಸುಲಭದಲ್ಲಿ ಖರ್ಚು ಮಾಡಲು ಸಾಧ್ಯವಿಲ್ಲ”

“ಈ ಹಿಂದೆ ಶೇಂದಿ ಇಳಿಸುವವರಿಗೆ ಪರ್ಯಾಯ ಉದ್ಯೋಗಕ್ಕೆ ಸಹಾಯ ಎಂದು ಸಿದ್ದರಾಮಯ್ಯ ಸರ್ಕಾರ 12 ಕೋಟಿ ರೂ. ಅನುದಾನ ಮೀಸಲು ಇಡಲಾಗಿತ್ತು. ಆದರೆ ಅದರಲ್ಲಿ ಖರ್ಚಾಗಿದ್ದು, 2-3 ಕೋಟಿ ಮಾತ್ರ. ಉಳಿದ ಹಣ ಈಗಲೂ ಇದೆ. ಇದೇ ರೀತಿ ಕೋಶದಲ್ಲೂ ನಡೆಯುತ್ತದೆ” ಎಂದು ತಿಳಿಸಿದರು.

ಇದನ್ನೂ ಓದಿ: ಹಿಂದುಳಿದ ವರ್ಗದ ನೈತಿಕ ಸಿಟ್ಟಾಗಿದ್ದ ಸಾರೆಕೊಪ್ಪ ಬಂಗಾರಪ್ಪ

“ಒಂದು ವೇಳೆ ಹತ್ತು ಕೋಟಿ ನೀಡುತ್ತೇವೆ ಎಂದು ಹೇಳಿದರೂ, ಕೋಶದಲ್ಲಿ ಸಮುದಾಯದ ಯಾವೊಬ್ಬ ಪ್ರತಿನಿಧಿಯು ಇರದೆ ಇದ್ದುದರಿಂದ ಅದನ್ನು ಕೂಡಾ ಹಲವು ಕಾರಣಗಳನ್ನು ನೀಡಿ ಹಾಗೆಯೆ ಇಡುತ್ತಾರೆಯೆ ಹೊರತು ಬಳಸುವುದಿಲ್ಲ. ಬ್ರಾಹ್ಮಣ ಮತ್ತು ಲಿಂಗಾಯತ ನಿಗಮವನ್ನು ನೀಡಿದ್ದು ತೀರಾ ಇತ್ತೀಚೆಗೆ ಹೀಗಿರುವಾಗ ಬಿಲ್ಲವರಿಗೆ ನಿಮಗವನ್ನು ಯಾಕೆ ನೀಡಬಾರದು” ಎಂದು ಪದ್ಮರಾಜ್ ಆರ್‌‌. ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮಿತ್‌ ಶಾ ಸ್ಪರ್ಧಿಸುವ ಗಾಂಧಿನಗರದಲ್ಲಿ ಸ್ಪರ್ಧಿಸದಂತೆ ಅಭ್ಯರ್ಥಿಗಳಿಗೆ ಬಿಜೆಪಿ ನಾಯಕರು ಮತ್ತು ಪೊಲೀಸರಿಂದ ಬೆದರಿಕೆ?

0
ಗುಜರಾತ್‌ನ ಸೂರತ್ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಈಗಾಗಲೇ ಅವಿರೋಧವಾಗಿ ಗೆದ್ದುಕೊಂಡಿದೆ. ಇದರ ಬೆನ್ನಲ್ಲಿ ಅಮಿತ್ ಶಾ ಪ್ರತಿನಿಧಿಸುವ ಗಾಂಧಿನಗರ ಕ್ಷೇತ್ರದಲ್ಲಿ ಅಭ್ಯರ್ಥಿಗಳಿಗೆ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಗುಜರಾತ್‌ನ...