Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹುಬ್ಬಳ್ಳಿ-ಧಾರವಾಡ ಪೂರ್ವ: ಮುಸ್ಲಿಮರ ಕೈಯಿಂದ ಕ್ಷೇತ್ರ ತಪ್ಪಿಸಿದರೂ ಬಿಜೆಪಿಗೇಕೆ ಗೆಲ್ಲಲಾಗುತ್ತಿಲ್ಲ?!

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹುಬ್ಬಳ್ಳಿ-ಧಾರವಾಡ ಪೂರ್ವ: ಮುಸ್ಲಿಮರ ಕೈಯಿಂದ ಕ್ಷೇತ್ರ ತಪ್ಪಿಸಿದರೂ ಬಿಜೆಪಿಗೇಕೆ ಗೆಲ್ಲಲಾಗುತ್ತಿಲ್ಲ?!

- Advertisement -
- Advertisement -

ಹುಬ್ಬಳ್ಳಿ ಅಥವಾ ಹುಬ್ಬಳ್ಳಿ ಶಹರ ಎಂದು ಗುರುತಿಲ್ಪಡುತ್ತಿದ್ದ ವಿಧಾನಸಭಾ ಕ್ಷೇತ್ರದ ಬಹುತೇಕ ಭಾಗಗಳನ್ನು ಸೇರಿಸಿ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರ ರಚಿಸಲಾಗಿದೆ; 2007ರಲ್ಲಿ ನಡೆದ ವಿಧಾನಸಭಾ ಕ್ಷೇತ್ರಗಳ ಭೌಗೋಳಿಕ ಪರಿಧಿ ಪುನರ್‌ರಚನೆ ಪ್ರಕ್ರಿಯೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಾರ್ಡುಗಳನ್ನಷ್ಟೇ ಸೇರಿಸಿ ಹುಟ್ಟುಹಾಕಲಾಗಿರುವ ಈ ವಿಧಾನಸಭಾ ಕ್ಷೇತ್ರವನ್ನು ಪರಿಶಿಷ್ಟ ಜಾತಿಗೆ ಮೀಸಲು ಇಡಲಾಗಿದೆ. ಒಂದು ತುದಿಯಿಂದ ಮತ್ತೊಂದು ತುದಿಗೆ ಕೇವಲ ಅರ್ಧ ಗಂಟೆಯಲ್ಲಿ ಕ್ರಮಿಸಬಹುದಾದಷ್ಟು ಪುಟ್ಟದಾದ ಈ ಜನನಿಬಿಡ ಕಿಷ್ಕಿಂಧೆಯಲ್ಲಿ ಅತಿ ಹೆಚ್ಚು ಪೌರ ಕಾರ್ಮಿಕರು, ಬೀಡಿ ಕಾರ್ಮಿಕರು, ದಲಿತರು, ಮುಸ್ಲಿಮರು, ಪಟ್ಟೇಕಾರರು (ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ-ಎಸ್‌ಎಸ್‌ಕೆ), ಕನ್ನಡ ಕ್ರಿಶ್ಚಿಯನ್ನರು, ರೈಲ್ವೆ ಕಾರ್ಯಾಗಾರದಲ್ಲಿ ದುಡಿಯಲು ಏಳೆಂಟು ದಶಕದ ಹಿಂದೆಯೆ ಬಂದಿದ್ದ ಸ್ಥಳೀಯ ಹಾಗು ಆಂಧ್ರ-ತಮಿಳುನಾಡು ಕಡೆಯ ವಲಸೆ ಕಾರ್ಮಿಕರು-ಕೂಲಿ ಕುಟುಂಬಗಳು, ಹಲವು ಸ್ಲಮ್‌ಗಳು ಮತ್ತು ಅಲೆಮಾರಿ ಜನಾಂಗದ ಸೆಟ್ಲಮೆಂಟ್ ಪ್ರದೇಶವಿದೆ.

ನಗರ ಕೇಂದ್ರಿತವಾದ ಶುದ್ಧ ಕಾಸ್ಮೋಪಾಲಿಟನ್ ಸಂಸ್ಕೃತಿಯ ಈ ವಾಣಿಜ್ಯ ಪ್ರದೇಶದ ದೈನಂದಿನ ಜೀವನ-ವ್ಯವಹಾರದ ಭಾಷೆ ಉತ್ತರ ಕರ್ನಾಟಕದ ಮಣ್ಣಿನ ಸೊಗಡಿನ ವಿಶಿಷ್ಟ ಕನ್ನಡ; ಜತೆಗೆ ತೆಲಗು, ಮರಾಠಿ, ತಮಿಳು, ಉರ್ದು, ಸಾವೋಜಿ, ಹಿಂದಿ ಮುಂತಾದ ಭಾಷೆಗಳು ಕೇಳಿಬರುತ್ತವೆ. ಸಿದ್ಧಾರೂಢ ಮಠ, ಮೂರು ಸಾವಿರ ಮಠ ಇಲ್ಲಿದೆ; ಅಂಜುಮಾನ್ ಶಿಕ್ಷಣ ಸಂಸ್ಥೆಗಳು-ಆಸ್ಪತ್ರೆಗಳಿರುವ ಹು.ಧಾ-ಪೂರ್ವದಲ್ಲಿ ದೊಡ್ಡ ಕೈಗಾರಿಕೆಗಳಿಲ್ಲ; ಈ ನಿರಂತರ ಚಟುವಟಿಕೆಯ ಕ್ಷೇತ್ರದ ಆರ್ಥಿಕತೆ ಸಣ್ಣ ಪ್ರಮಾಣದ ಫ್ಯಾಬ್ರಿಕೇಶನ್ ಉದ್ಯಮ, ಆಟೋಮೊಬೈಲ್ ವ್ಯವಹಾರ, ಕೋಳಿ ಆಹಾರ ತಯಾರಿಕಾ ಘಟಕ, ಸ್ಕ್ರ್ಯಾಪ್ ದಂಧೆ, ಗ್ಯಾರೇಜ್‌ಗಳು, ಜವಳಿ-ಕಬ್ಬಿಣ ವ್ಯಾಪಾರ ಹಾಗು ವಿವಿಧ ಸಮುದಾಯದ ಕುಲಕಸುಬನ್ನು ಅವಲಂಬಿಸಿದೆ. ಇಲ್ಲಿ ರೈತರಿದ್ದಾರಾದರೂ ಅವರ ಹೊಲ-ಗದ್ದೆಗಳು ಕ್ಷೇತ್ರದ ಹೊರಗಿನ ಗ್ರಾಮೀಣ ಪ್ರದೇಶದಲ್ಲಿವೆ.

ಕ್ಷೇತ್ರ ರಚನೆ ಗುಟ್ಟು-ರಟ್ಟು!

ಮುಸ್ಲಿಮರು ನಿರ್ಣಾಯಕರಾಗಿರುವ ಹು.ಧಾ-ಪೂರ್ವ ಲಾಗಾಯ್ತಿನಿಂದ ಸಂಘಪರಿವಾರದ ಆಖಾಡ. ಎತ್ತಿಂದೆತ್ತ ಲೆಕ್ಕ ಹಾಕಿ ತಾಳೆ ನೋಡಿದರೂ ಈ ಕ್ಷೇತ್ರದಲ್ಲಿ ಸಂಘ ಪರಿವಾರ ಮತ್ತು ಮುಸ್ಲಿಮರ ಮೇಲಾಟ ನಡೆಯುತ್ತ ಬಂದಿದೆ ಎಂಬುದನ್ನು ಚುನಾವಣಾ ಚರಿತ್ರೆ ಮನದಟ್ಟು ಮಾಡುತ್ತದೆ. 1957ರಿಂದ 2018ರವರೆಗಿನ 14 ಅಸೆಂಬ್ಲಿ ಇಲೆಕ್ಷನ್‌ಗಳಲ್ಲಿ ತಲಾ ಐದೈದು ಬಾರಿ ಸಂಘ ಪರಿವಾರ ಮತ್ತು ಕಾಂಗ್ರೆಸ್ ಪಕ್ಷದ ಮುಸ್ಲಿಮ್ ಅಭ್ಯರ್ಥಿಗಳು ಗೆದ್ದು ಶಾಸಕರಾಗಿದ್ದಾರೆ. ಕ್ಷೇತ್ರದಲ್ಲಿ ಗಣನೀಯವಾಗಿರುವ ಹಿಂದುಳಿದ ಎಸ್‌ಎಸ್‌ಕೆ (ಪಟ್ಟೇಕಾರ್) ಸಮುದಾಯವನ್ನು ಸಂಘ ಪರಿವಾರ ಹಿಂದುತ್ವ ಸಮರದ ಕಾಲಾಳುಗಳಾಗಿ ಬಳಸುತ್ತಿರುವುದರಿಂದ ಹು.ಧಾ-ಪೂರ್ವ ಇವತ್ತಿಗೂ ಕೋಮುಸೂಕ್ಷ್ಮ ಪ್ರದೇಶ ಎಂಬ ಆತಂಕದ ’ಅಭಿದಾನ’ ಉಳಿಸಿಕೊಂಡಿದೆ ಎಂಬ ಮಾತು ಕೇಳಿಬರುತ್ತದೆ.

ಐ.ಜಿ.ಸನದಿ

ಕ್ಷೇತ್ರದಲ್ಲಿ ಕೂಲಿ-ಕಾರ್ಮಿಕರ ದೊಡ್ಡ ಸಮೂಹ ಇದ್ದುದರಿಂದ 1970-80ರ ದಶಕದಲ್ಲಿ ಕಮ್ಯುನಿಸ್ಟ್ ಕಾರ್ಮಿಕ ಸಂಘಟನೆ ಬಲಾಢ್ಯವಾಗಿತ್ತು. ಸಿಪಿಐ ಪಕ್ಷ ಜನಸಂಘ-ಬಿಜೆಪಿಗೆ ಪ್ರಬಲ ಪೈಪೋಟಿಯನ್ನೂ ಕೊಡುತಿತ್ತು. ಬಾಬರಿ ಮಸೀದಿ ಪತನ ಮತ್ತು ಹುಬ್ಬಳ್ಳಿ ಈದ್ಗಾ ಮೈದಾನ ವಿವಾದದ ಬಳಿಕ ಕೇಸರಿ ಪಡೆಯ ಬಲ ಹೆಚ್ಚಾಯಿತು; ಆದರೂ ಬಿಜೆಪಿಗಿಲ್ಲಿ ಗೆಲುವು ಸುಲಭವಾಗಲಿಲ್ಲ. ಕಾಂಗ್ರೆಸ್‌ನ ಮುಸ್ಲಿಮ್ ಹುರಿಯಾಳುಗಳು ನಿರಾಯಾಸವಾಗಿ ಆಯ್ಕೆಯಾಗುತ್ತಿದ್ದರು. ಅದನ್ನು ತಪ್ಪಿಸಿ ಬಿಜೆಪಿಗೆ ಆಖಾಡ ಹದಗೊಳಿಸುವ ತಂತ್ರಗಾರಿಕೆ 2007ರ ಕಾನ್‌ಸ್ಟೂಯೆನ್ಸ್ ಡಿಲಿಮಿಟೇಷನ್ ಸಂದರ್ಭದಲ್ಲಿ ಮಾಡಲಾಯಿತು. ತತ್ಪರಿಣಾಮವಾಗಿ ಕ್ಷೇತ್ರ ಎಸ್ಸಿ ಮೀಸಲಾಯಿತೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಒಟ್ಟ್ಟು 1,99,287 ಮತದಾರರಿರುವ ಹು.ಧಾ-ಪೂರ್ವದಲ್ಲಿ ಲಿಂಗಾಯತರು 54 ಸಾವಿರ, ಮುಸ್ಲಿಮರು 60 ಸಾವಿರ, ಎಸ್ಸಿ-ಎಸ್ಟಿ 30 ಸಾವಿರ, ಪಟ್ಟೇಕಾರರು 22 ಸಾವಿರ, ಮರಾಠರು 10 ಸಾವಿರ, ಬ್ರಾಹ್ಮಣರು 10 ಸಾವಿರ ಮತ್ತು ಕ್ರಿಶ್ಚಿಯನ್, ಸಿಖ್, ಆಂಧ್ರ, ತಮಿಳುನಾಡು, ಗುಜರಾತಿ ಮತ್ತಿತರ ಸಣ್ಣ-ಪುಟ್ಟ ಸಮುದಾಯಗಳ ಮತದಾರರಿದ್ದಾರೆಂದು ಅಂದಾಜಿಸಲಾಗಿದೆ.

ಚುನಾವಣಾ ಚದುರಂಗ!

1957ರಲ್ಲಿ ಜರುಗಿದ ಮೊದಲ ಚುನಾವಣಾ ಕಾಳಗದಲ್ಲಿ ಕಾಂಗ್ರೆಸ್‌ನ ಎಂ.ಆರ್.ಪಾಟೀಲ್ ಮತ್ತು ಪಕ್ಷೇತರ ಉಮೇದುವಾರ ಎ.ಎಸ್.ಕಂಬ್ಳಿ ಮುಖಾಮುಖಿಯಾಗಿದ್ದರು. 20,858 ಮತ ಗಳಿಸಿದ್ದ ಕಾಂಗ್ರೆಸ್‌ನ ಪಾಟೀಲ್ ಎದುರಾಳಿಯನ್ನು 11,470 ಮತದಿಂದ ಪರಾಭವಗೊಳಿಸಿ ಆಯ್ಕೆಯಾಗಿದ್ದರು. 1962ರಲ್ಲಿ ಶಾಸಕ ಪಾಟೀಲ್ ಕಾಂಗ್ರೆಸ್ ಕ್ಯಾಂಡಿಡೇಟಾಗಿ ಮತ್ತೆ ಗೆಲುವು ಕಂಡರು. ಪಾಟೀಲರಿಗೆ 23,356 ಮತ ಬಂದರೆ ಪ್ರತಿಸ್ಪರ್ಧಿ-ಪಕ್ಷೇತರ ಉಮೇದುವಾರ ಎಸ್.ಎಂ.ತಡಸದ್ಮತ್ ಕೇವಲ 4,489 ಪಡೆಯಲಷ್ಟೆ ಶಕ್ತರಾದರು. 1962ರಲ್ಲಿ ಪಕ್ಕದಲ್ಲಿದ್ದ ಅಂದಿನ ಹುಬ್ಳಿ ಸಿಟಿ ಕ್ಷೇತ್ರದಲ್ಲಿ ಸೋಲನುಭವಿಸಿದ್ದ ಜನಸಂಘದ ಮುಂಚೂಣಿ ಮುಂದಾಳು ಮತ್ತು ಬಹುಸಂಖ್ಯಾತ ಲಿಂಗಾಯತ ಕೋಮಿನ ಎಸ್.ಎಸ್.ಶೆಟ್ಟರ್ (ಮಾಜಿ ಸಿಎಂ ಜಗದೀಶ್ ಶೆಟ್ಟರ್ ಚಿಕ್ಕಪ್ಪ) 1967ರಲ್ಲಿ ಹುಬ್ಬಳ್ಳಿಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದರು. 14,898 ಮತ ಪಡೆದ ಭಾರತೀಯ ಜನಸಂಘದ ಶೆಟ್ಟರ್ ಕಾಂಗ್ರೆಸ್ ಪಕ್ಷದ ಪ್ರತಿಸ್ಪರ್ಧಿ ಎಚ್.ಎಂ.ಮೀರಾಸಾಬ್‌ರನ್ನು (9,830) ಮಣಿಸಿ ದಕ್ಷಿಣ ಭಾರತದ ಮೊಟ್ಟಮೊದಲ ಜನಸಂಘ ಶಾಸಕ ಎನಿಸಿಕೊಂಡರು!

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಧಾರವಾಡ: ಲಿಂಗಾಯತ ಏಕಸ್ವಾಮ್ಯದ ರಾಜಕಾರಣಕ್ಕೆ ಕೇಸರಿ ಖದರು!

1972ರ ಚುನಾವಣಾ ಓಟಕ್ಕಿಳಿದಿದ್ದ ಜನಸಂಘದ ಎಸ್.ಎಸ್.ಶಿಮೂರ್ತೆಪ್ಪ (16,432) ಶೆಟ್ಟರ್‌ಕ್ಕಿಂತ ಹೆಚ್ಚು ಮತ ಪಡೆದರೂ ಕಾಂಗ್ರೆಸ್‌ನ ಐ.ಜಿ.ಸನದಿಯವರನ್ನು ಸೋಲಿಸಲು ಸಾಧ್ಯವಾಗಲಿಲ್ಲಿ; ಸರಳ-ಸುಶಿಕ್ಷಿತ ಮುಸ್ಲಿಮ್ ಮುಂದಾಳಾಗಿದ್ದ ಸನದಿ 8,309 ಮತದಂತರದಿಂದ ಗೆದ್ದು ಶಾಸನಸಭೆ ಪ್ರವೇಶಿಸಿದರು. ರೈಲ್ವೆ ಕಾರ್ಮಿಕರು, ಬೀಡಿ ಕಾರ್ಮಿಕರೆ ಮುಂತಾದ ಸ್ಥಳೀಯ ಮತ್ತು ವಲಸೆ ಕಾರ್ಮಿಕರ ದೊಡ್ಡ ತಾಣವಾಗಿದ್ದ ಹುಬ್ಬಳ್ಳಿ ಅಂದರೆ ಇಂದಿನ ಹು.ಧಾ-ಪೂರ್ವ ಕ್ಷೇತ್ರದಲ್ಲಿ 1978ರ ಅಸೆಂಬ್ಲಿ ಇಲೆಕ್ಷನ್ ಬರುವ ಹೊತ್ತಿಗೆ ಭಾರತೀಯ ಕಮ್ಯುನಿಸ್ಟ್ ಪಕ್ಷ ಅದೆಷ್ಟು ಪ್ರಬಲವಾಗಿ ಬೆಳೆದಿತ್ತೆಂದರೆ ದೇವರಾಜ ಅರಸರ ಸಾಮಾಜಿಕ ನ್ಯಾಯದ ಗಾಳಿಯಲ್ಲೂ ಇಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡುಬಿಟ್ಟಿತ್ತು! 1978ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದ ಜನಸಂಘದ ಎಮ್.ಜಿ.ಜರತಾರ್‌ಘರ್ (27,694) ಮತ್ತು ಸಿಪಿಐ ಪಕ್ಷದ ಅಬ್ದುಲ್ ರೆಹಿಮಾನ್ ಮುಧೋಳ್ (27,438) ಮಧ್ಯೆ ಕತ್ತುಕತ್ತಿನ ರೋಚಕ ಹಣಾಹಣಿ ಏರ್ಪಟ್ಟಿತು! ಜನತಾ ಪಕ್ಷದ ಜರತಾರ್‌ಘರ್ ಕೇವಲ 256 ಮತದಿಂದ ಗೆದ್ದು ನಿಟ್ಟುಸಿರುಬಿಟ್ಟರು! 1,501 ಮತ ಪಡೆದಿದ್ದ ಕಾಂಗ್ರೆಸ್ ಶಾಸಕ ಐ.ಜಿ.ಸನದಿಗೆ ಠೇವಣಿಯೂ ಉಳಿಯಲಿಲ್ಲ!

1983ರ ಇಲೆಕ್ಷನ್‌ನಲ್ಲಿ ಶಾಸಕ ಜರತಾರ್‌ಘರ್ ಬಿಜೆಪಿ ಹುರಿಯಾಳಾದರೆ, ಅವರಿಗೆದುರಾಗಿ ಕಳೆದ ಬಾರಿಯ ರನ್ನರ್ ಅಪ್ ಸಿಪಿಐನ ಅಬ್ದಲ್ ರೆಹಿಮಾನ್ ಮುಧೋಳ್ ಮತ್ತೆ ಆಖಾಡಕ್ಕೆ ಧುಮುಕಿದರು. ಆ ಆಖಾಡದಲ್ಲಿ ಕಾಂಗ್ರೆಸ್ ಚೇತರಿಸಿಕೊಂಡಿದ್ದರಿಂದ ತ್ರಿಕೋನ ಹಣಾಹಣಿ ಏರ್ಪಟ್ಟಿತು. ಕಾಂಗ್ರೆಸ್‌ನ ಸನದಿ 14,259 ಮತವನ್ನು ಪಡೆದಿದ್ದ ಸಿಪಿಐಗೆ ಹಿಂದೇಟಾಯಿತು; ಮುಸ್ಲಿಮ್ ಮತ ಕಾಂಗ್ರೆಸ್-ಸಿಪಿಐ ನಡುವೆ ಹಂಚಿಹೋದದ್ದು ಬಿಜೆಪಿಗೆ ವರವಾಗಿ ಪರಿಣಮಿಸಿತೆಂಬ ತರ್ಕ ರಾಜಕೀಯ ಪಡಸಾಲೆಯಲ್ಲಿದೆ. ಈ ಕದನ ಕುತೂಹಲದಲ್ಲಿ 22,938 ಮತ ಪಡೆದ ಜರತಾರ್‌ಘರ್ 4,514 ಮತದಿಂದ ಗೆಲುವು ಸಾಧಿಸಿ ಎರಡನೇ ಬಾರಿ ಶಾಸಕನಾದರು. ಬಿಜೆಪಿ 1985ರಲ್ಲಿ ಶಾಸಕ ಜರತಾರ್‌ಘರ್‌ಗೆ ಟಿಕೆಟ್ ನಿರಾಕರಿಸಿತು; 1978 ಮತ್ತು 1983ರಲ್ಲಿ ಸಂಘ ಪರಿವಾರ ಗೆಲುವು ಸಾಧಿಸಿರುವುದರಿಂದ, ಒಂದೂಮುಕ್ಕಾಲು ದಶಕದ ನಂತರ ತಮ್ಮ ಅದೃಷ್ಟ ಖುಲಾಯಿಸಬಹುದೆಂಬ ಲೆಕ್ಕಾಚಾರದಲ್ಲಿ ಸಂಘಿ ಸರದಾರರ ನಿಕಟ ನಂಟಿದ್ದ ಮಾಜಿ ಶಾಸಕ ಎಸ್.ಎಸ್.ಶೆಟ್ಟರ್ ಬಿಜೆಪಿ ಟಿಕೆಟ್ಟನ್ನು ಉಪಾಯವಾಗಿ ಪಡೆದುಕೊಂಡರು ಎಂದು ಅಂದಿನ ರಾಜಕಾರಣ ಬಲ್ಲವರು ಹೇಳುತ್ತಾರೆ.

ಎ.ಎಂ.ಹಿಂಡಸಗೇರಿ

ಆ ಹೊತ್ತಿಗೆ ಸತತ ಎರಡು ಸಲ ಸೋತು ಸುಣ್ಣವಾಗಿದ್ದ ಮಾಜಿ ಎಮ್ಮೆಲ್ಲೆ ಐ.ಜಿ.ಸನದಿ ಲೋಕಸಭಾ ಸದಸ್ಯರಾಗಿದ್ದರಿಂದ ಕಾಂಗ್ರೆಸ್ ಮತ್ತೊಬ್ಬ ಪ್ರಭಾವಿ ಮುಸ್ಲಿಮ್ ಮುಂದಾಳು-ಮಾಜಿ ಸಚಿವ ಎಚ್.ಕೆ.ಪಾಟೀಲರಂಥ ವರ್ಚಸ್ವಿ ನಾಯಕರ ನಂಟಿನ ಎ.ಎಂ.ಹಿಂಡಸಗೇರಿ ಅವರನ್ನು ಕಣಕ್ಕೆ ಇಳಿಸಿತು. ಈ ನೇರ ಜಿದ್ದಾಜಿದ್ದಿಯಲ್ಲಿ ಹಿಂಡಸಗೇರಿ (35,856) ಮೊದಲ ಪ್ರಯತ್ನದಲ್ಲೇ ಪಳಗಿದ ಆರೆಸ್ಸೆಸ್ ಹುಲಿ ಶೆಟ್ಟರ್‌ರನ್ನು (27,610) ಸುಲಭವಾಗಿ ಮಣಿಸಿ ವಿಧಾನಸಭೆ ಪ್ರವೇಶಿಸಿದರು. ಕೇಸರಿ ರಾಜಕಾರಣದ ಸೆಳೆತಕ್ಕೆ ಸಿಲುಕಿದ್ದಾರೆನ್ನಲಾದ ಪಟ್ಟೇಕಾರ್ ಸಮುದಾಯದ ಮಾಜಿ ಕಾರ್ಪೋರೇಟರ್ ಅಶೋಕ್ ಕಾಟ್ವೆಗೆ ಬಿಜೆಪಿ 1989ರ ಚುನಾವಣೆಯಲ್ಲಿ ಹುರಿಯಾಳಾಗಿಸಿತು; ಕಾಂಗ್ರೆಸ್ ಅಭ್ಯರ್ಥಿ ಶಾಸಕ ಹಿಂಡಸಗೇರಿ (37,832) ಈ ನೇರ ಹಣಾಹಣಿಯಲ್ಲಿ ಕಾಟ್ವೆಯವರನ್ನು (19,844) ದೊಡ್ಡ ಮತದಂತರದಲ್ಲಿ (17,988) ಸೋಲಿಸಿ ಮಂತ್ರಿಯೂ ಆದರು.

1994ರ ಚುನಾವಣೆ ವೇಳೆಗೆ ಬಿಜೆಪಿ ಬಾಬರಿ ಪತನ ರಾಜಕಾರಣ ಮತ್ತು ಹುಬ್ಬಳ್ಳಿ ಈದ್ಗಾ ಮೈದಾನದಂಥ ಮತೋತ್ಮತ್ತ ಪ್ರಕರಣಗಳಿಂದ ಬಲಾಢ್ಯವಾಗಿತ್ತು. ಹಿಂದುಳಿದ ವರ್ಗದ ನಾಯಕರಾಗಿದ್ದ ಬಂಗಾರಪ್ಪ ಕಾಂಗ್ರೆಸ್‌ಗೆ ವಿದಾಯ ಹೇಳಿದ್ದು ಆ ಪಕ್ಷದ ಬಲ ಕುಗ್ಗಿಸಿತ್ತು. ಹಾಗಾಗಿ ಆ ಚುನಾವಣೆಯಲ್ಲಿ ಬಿಜೆಪಿಯ ಅಶೋಕ ಕಾಟ್ವೆ 42,244ರಷ್ಟು ಮತ ಪಡೆಯಲು ಅನುಕೂಲವಾಯಿತು; ಈ ಮತೀಯ ಧ್ರುವೀಕರಣದಲ್ಲಿ 34,103 ಓಟು ಪಡೆಯುವಷ್ಟರಲ್ಲೆ ಸುಸ್ತಾದ ಕಾಂಗ್ರೆಸ್‌ನ ಹಿಂಡಸಗೇರಿ 8,141 ಮತದಿಂದ ಸೋಲು ಅನುಭವಿಸಬೇಕಾಗಿ ಬಂತೆಂಬ ವಿಶ್ಲೇಷಣೆಗಳಿವೆ.

ಜನತಾ ಪರಿವಾರದ ಮಾಜಿ ಸಿಎಂ ಎಸ್.ಆರ್.ಬೊಮ್ಮಾಯಿ ಮತ್ತು ರಾಮಕೃಷ್ಣ ಹೆಗಡೆ ಅನುಯಾಯಿಯಾಗಿದ್ದ ಮಾಜಿ ಎಮ್ಮೆಲ್ಸಿ ಜಬ್ಬಾರ್ ಖಾನ್ ಹೊನ್ನಳ್ಳಿ 1999ರ ಚುನಾವಣೆ ಎದುರಾದಾಗ ಕಾಂಗ್ರೆಸ್‌ನಲ್ಲಿ ಇದ್ದರು. ಜಾಫರ್ ಷರೀಪ್‌ರಂಥ ದಿಗ್ಗಜರ ಸಖ್ಯಗಳಿಸಿದ್ದ ಹೊನ್ನಳ್ಳಿಗೆ ಕಾಂಗ್ರೆಸ್ ಟಿಕೆಟ್ ತರುವುದು ಕಷ್ಟವಾಗಲಿಲ್ಲ. ಶಿಕ್ಷಕರಾಗಿ, ರಾಜಕೀಯ ಕಾರ್ಯಕರ್ತರಾಗಿ ವಂಚಿತರಿಗೆ ಶಿಕ್ಷಣ ಸೌಲಭ್ಯ ಒದಗಿಸುವ ಕೆಲಸ ಮಾಡಿ ಮತ್ತು ಎರಡು ಬಾರಿ ಮುಸ್ಲಿಮರ ಪ್ರತಿಷ್ಠಿತ-ಪ್ರಭಾವಿ ಸಂಸ್ಥೆ ಅಂಜುಮಾನ್ ಇಸ್ಲಾಮ್ ಅಧ್ಯಕ್ಷರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಹೊನ್ನಳ್ಳಿ ಹಿಂದು-ಮುಸ್ಲಿಮ್ ನಡುವಿನ ಸ್ನೇಹ ಸೇತುವೆಯಂತಿದ್ದರು ಎಂದು ಹುಬ್ಬಳ್ಳಿಯ ಜನರು ಪಕ್ಷ-ಪಂಗಡದ ಹಂಗಿಲ್ಲದೆ ಹೇಳುತ್ತಾರೆ.

ಧರ್ಮ-ಜಾತಿ ಧಿಕ್ಕರಿಸಿ ನೊಂದವರಿಗೆ ಸ್ಪಂದಿಸುತ್ತಿದ್ದ ಜನಾನುರಾಗಿ ಹೊನ್ನಳ್ಳಿ ಮತ್ತು ಕಟ್ಟರ್ ಸಂಘಿ ಬಿಜೆಪಿಯ ಅಶೋಕ್ ಕಾಟ್ವೆ ನಡುವೆ ಕತ್ತುಕತ್ತಿನ ಕಾಳಗ 1999ರಲ್ಲಿ ನಡೆದುಹೋಯಿತು. ಶಾಸಕ ಅಶೋಕ್ ಕಾಟ್ವೆಯವರನ್ನು (32,270) ಹೊನ್ನಳ್ಳಿ 1,749 ಮತಗಳಿಂದ ಸೋಲಿಸಿ ಗೆಲುವಿನ ಗೆರೆ ದಾಟಿದರು! ಎಸ್.ಎಂ.ಕೃಷ್ಣ ಸರಕಾರದಲ್ಲಿ ಕಾರ್ಮಿಕ, ಯುವಜನ ಮತ್ತು ಕ್ರೀಡಾ ಮಂತ್ರಿಯಾಗಿದ್ದ ಹೊನ್ನಳ್ಳಿ 2004ರ ಚುನವಣಾ ಹಣಾಹಣಿಯಲ್ಲಿ ಮತ್ತೆ ಬಿಜೆಪಿಯ ಅಶೋಕ್ ಕಾಟ್ವೆಗೆ ಮುಖಾಮುಖಿಯಾದರು. ಮತೀಯ ಮಸಲತ್ತಿನ ರಾಜಕಾರಣ ವ್ಯವಸ್ಥಿತ-ಯೋಜನಾಬದ್ಧವಾಗಿದ್ದ ಹುಬ್ಬಳ್ಳಿಯಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರ-ನಿಕಟ ಜಿದ್ದಾಜಿದ್ದಿ ನಡೆಯಿತು. 1,816 ಮತದಿಂದ ಹೊನ್ನಳ್ಳಿ ಬಿಜೆಪಿಯ ಕಾಟ್ವೆಯವರನ್ನು (40,155) ಮಣಿಸಿ ದ್ವಿತೀಯ ಬಾರಿಗೆ ಎಮ್ಮೆಲ್ಲೆಯಾದರು.

ದಲಿತರ ಹೆಸರು-ಬಲಿತವರ ರಾಜಕಾರಣ!

ಹುಬ್ಬಳ್ಳಿ(ಹು.ಧಾ-ಪೂರ್ವ)ಯಲ್ಲಿ 2008ರ ಮುಂಚಿನ ಎರಡು-ಮೂರು ಚುನಾವಣೆಯಲ್ಲಿ ಅಕ್ಷರಶಃ ’ಧರ್ಮಯುದ್ಧ’ವೇ ನಡೆದುಹೋಯಿತು. ಮತೀಯ ಮಸಲತ್ತಿನಲ್ಲಿ ಮನುಷ್ಯ ಮನಸ್ಸುಗಳು ಮುರಿದು ಹೋದವು. ಆದರೆ ಹಿಂದುತ್ವದ ಹಿಡನ್ ಅಜೆಂಡಾ ಈಡೇರಲಿಲ್ಲ; ವಿಧಾನಸಭಾ ಕ್ಷೇತ್ರಗಳ ಡಿಲಿಮಿಟೇಶನ್‌ನಲ್ಲಿ ದಲಿತರನ್ನು ಮುಂದಿಟ್ಟುಕೊಂಡು ಧರ್ಮಕಾರಣದ ಆಟ ಆಡುವ ಸ್ಕೆಚ್ ಹಾಕಲಾಯಿತು. ಬಿಜೆಪಿ ಒಲವಿನ ಲಿಂಗಾಯತರು-ಪಟ್ಟೇಕಾರರು-ಬ್ರಾಹ್ಮಣರು ಮತ್ತು ಕಾಂಗ್ರೆಸ್ ಸೆಳೆತದ ಮುಸ್ಲಿಮರು ಹೆಚ್ಚಿದ್ದ ಕ್ಷೇತ್ರ ರಾತೋರಾತ್ರಿ ದಲಿತ ಮೀಸಲು ಕ್ಷೇತ್ರ ಆಗಿಬಿಟ್ಟಿತು ಎಂದು ’ಕ್ಷೇತ್ರ ಮಹಿಮೆ’ ಬಲ್ಲವರು ವಿವರಿಸುತ್ತಾರೆ!! ಕ್ಷೇತ್ರ ಮೀಸಲಾದರೂ ಮೇಲಾಟ ಲಿಂಗಾಯತ-ಮುಸ್ಲಿಮ್-ಪಟ್ಟೇಕಾರ್-ಬ್ರಾಹ್ಮಣರಂಥ ಸವರ್ಣೀಯರದು ಎಂಬ ಮಾತು ಕೇಳಿಬರುತ್ತದೆ.

ವೀರಭದ್ರ ಹಾಲಹರವಿ

ಈ ಮೀಸಲು ಕ್ಷೇತ್ರದಲ್ಲಾದ ಮೊದಲ ಚುನಾವಣೆಯಲ್ಲಿ ಬಿಜೆಪಿಯ ವೀರಭದ್ರ ಹಾಲಹರವಿ 41,029 ಮತ ಪಡೆದು ಗೆಲುವು ಸಾಧಿಸಿದರು; ಮುಸ್ಲಿಮರ ಓಟ್‌ಬ್ಯಾಂಕ್ ಎನಿಸಿದ್ದ ಕಾಂಗ್ರೆಸ್‌ನ ಎಫ್.ಎಚ್.ಜಕ್ಕಪ್ಪನವರ್ (28,861) ಮತ್ತು ಜೆಡಿಎಸ್‌ನ ವೈ.ಎಸ್.ಹಿರೇಕೇರೂರು (12,667) ನಡುವೆ ಮತಗಳು ಹಂಚಿಹೋಗಿದ್ದು ಬಿಜೆಪಿಗೆ ಅನುಕೂಲವಾಯಿತು ಎನ್ನಲಾಗುತ್ತಿದೆ. ಆದರೆ ಬಿಜೆಪಿ ಪಡೆದ ಮತಗಳಿಗಿಂತ ಅದರ ವಿರುದ್ಧ ಬಿದ್ದಿರುವ ಓಟುಗಳೆ ಜಾಸ್ತಿ ಎಂಬುದನ್ನು ಚುನಾವಣಾ ಅಂಕಿಅಂಶ ಮನದಟ್ಟು ಮಾಡುತ್ತದೆ. 2013ರ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ-ಕೆಜೆಪಿ ದಾಯಾದಿಗಳ ಕಚ್ಚಾಟ ಏರ್ಪಟ್ಟಿತ್ತು. ಬಿಜೆಪಿ ಅಭ್ಯರ್ಥಿ-ಶಾಸಕ ವೀರಭದ್ರಪ್ಪ ಹಾಲಹರವಿ 28,831 ಮತ ಮತ್ತು ಕೆಜೆಪಿಯ ಕೆ.ಎಸ್.ಬಿಜವಾಡ 26,312 ಓಟು ಪಡೆದರು. ರಾಯಚೂರಿನ ರಾಮದುರ್ಗದಿಂದ ವಲಸೆ ಬಂದು ಜೆಡಿಎಸ್ ಹುರಿಯಾಳಾಗಿದ್ದ ಮಾಜಿ ಮಂತ್ರಿ ಹನುಮಂತಪ್ಪ ಅಲ್ಕೋಡ್ 8,431 ಮತ ಗಿಟ್ಟಿಸಿದರು. ಕಾಂಗ್ರೆಸ್‌ನ ಜನಾನುರಾಗಿ ತರುಣ ಪ್ರಸಾದ ಅಬ್ಬಯ್ಯ 42,353 ಮತ ಪಡೆದು ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಹಾಲಹರವಿಯನ್ನು 13,522 ಮತದಂತರದಿಂದ ಪರಾಭವಗೊಳಿಸಿ ಶಾಸನ ಸಭೆ ಪ್ರವೇಶಿಸಿದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹುಬ್ಬಳ್ಳಿ-ಧಾರವಾಡ ಪಶ್ಚಿಮ: ಬೆಲ್ಲದ್ ಸಾಹೇಬ್ರಿಗ ಬಿಜೆಪಿ ಟಿಕೆಟ್ ಖಾತ್ರಿರಿ; ಗೆದ್ರ ಏನ್ ಫಾಯ್ದೆ…

2018ರ ಅಸೆಂಬ್ಲಿ ಇಲೆಕ್ಷನ್ ವೇಳೆಗೆ ಶಾಸಕ ಪ್ರಸಾದ್ ಅಬ್ಬಯ್ಯ ಜನಪರ ಕೆಲಸಗಳಿಂದ ಕ್ಷೇತ್ರದಲ್ಲಿ ಪ್ರಭಾವ ಹೆಚ್ಚಿಸಿಕೊಂಡಿದ್ದರು. ಲಾಗಾಯ್ತಿನಿಂದ ಬಿಜೆಪಿ ಬೆಂಬಲಿಸುತ್ತ ಬಂದಿದ್ದ ಪಟ್ಟೇಕಾರ್ ಸಮುದಾಯವನ್ನು ಆ ಪಕ್ಷ ನಿರ್ಲಕ್ಷಿಸಿತ್ತು; ಆ ಜನಾಂಗದ ಕಷ್ಟಸುಖಕ್ಕೆ ಸ್ಪಂದಿಸುತ್ತ ಶಾಸಕ ಪ್ರಸಾದ್ ಸಮುದಾಯದ ನಂಬಿಕೆಯನ್ನು ಒಲಿಸಿಕೊಂಡರು ಎನ್ನಲಾಗುತ್ತಿದೆ. ಜತೆಗೆ ಸ್ವಜಾತಿ ದಲಿತರ ಮತದಲ್ಲಿ ದೊಡ್ಡ ಪಾಲು ಮತ್ತು ಮುಸ್ಲಿಮರ ಮತ ದಂಡಿಯಾಗಿ ಪಡೆದ ಕಾಂಗ್ರೆಸ್‌ನ ಪ್ರಸಾದ್ (77,080) ಬಿಜೆಪಿ ಎದುರಾಳಿ ಚಂದ್ರಶೇಖರ ಗೋಕಾಕ್‌ರನ್ನು 21,467 ಮತದ ಭರ್ಜರಿ ಅಂತರದಿಂದ ಸೋಲಿಸಿ ಎರಡನೆ ಬಾರಿ ಎಮ್ಮೆಲ್ಲೆಯಾದರು!

ಕ್ಷೇತ್ರದ ಇಷ್ಟ-ಕಷ್ಟ

ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ ಮುಸ್ಲಿಮ್ ಸಮುದಾಯದ ದಟ್ಟಣೆಯ ಹಳೆ ಹುಬ್ಬಳ್ಳಿಯನ್ನು ಒಳಗೊಂಡಿರುವ ಹಲವು ’ಒತ್ತಡ’ಗಳ ಪ್ರದೇಶ! ಪ್ರಮುಖ ಕಬ್ಬಿಣದ ಮಾರುಕಟ್ಟೆಯಾದ ಈ ಕ್ಷೇತ್ರ ಎಡೆಬಿಡದ ವಾಣಿಜ್ಯ ಒತ್ತಡ, ಕಮ್ಯುನಲ್ ಟೆನ್‌ಶನ್, ಮೂಲಭೂತ ಸೌಕರ್ಯಗಳಿಲ್ಲದ ತಹತಹ, ಒರಗಲಿಕ್ಕೂ ಗೇಣು ಜಾಗವಿಲ್ಲದ ಹತಾಶೆಯಲ್ಲಿ ಸದಾ ಒಂಥರಾ ವಿಕ್ಷಿಪ್ತವಾಗಿರುತ್ತದೆ ಎಂಬ ಅನಿಸಿಕೆಯಿದೆ. ಒಂದಲ್ಲಒಂದು ಕಾಯಕದಲ್ಲಿ ತೊಡಗಿಕೊಳ್ಳುವ ಇಲ್ಲಿಯ ಮಂದಿ ಹೇಗೋ ಕಷ್ಟಪಟ್ಟು ಅನ್ನ ಗಳಿಸಿಕೊಳ್ಳುತ್ತಾರೆ. ಆದರೆ ಆಶ್ರಯ(ಮನೆ)ವಿಲ್ಲದೆ ಅನಾಥವಾಗಿರುವ ಅಸಂಖ್ಯ ಕುಟುಂಬಗಳು ಬೀದಿ ಅಂಚಲ್ಲಿ ಕಾಣಿಸುತ್ತವೆ. ನೀರು, ನೈರ್ಮಲೀಕರಣ, ರಸ್ತೆ, ಚರಂಡಿ, ವಸತಿ, ಆರೋಗ್ಯ ಸೌಲಭ್ಯ ಕೊರತೆ ಮತ್ತು ಸಂಕಷ್ಟಕ್ಕೀಡಾಗಿರುವ ಮತೀಯ ಸಹಿಷ್ಣುತೆ ಕ್ಷೇತ್ರದ ಪ್ರಮುಖ ಸಮಸ್ಯೆ.

ಯಾವಾಗಲೂ ಜನರ ನಡುವೆ ಇರುವ ಶಾಸಕ ಪ್ರಸಾದ್ ಅಬ್ಬಯ್ಯ ಕ್ಷೆತ್ರದದಲ್ಲಿ ಒಂದಿಷ್ಟು ಮೂಲಭೂತ ಸೌಲಭ್ಯ-ಸೌಕರ್ಯ ಸ್ಥಾಪನೆಗೆ ಪ್ರಯತ್ನಿಸಿದ್ದಾರಾದರೂ ಹಲವು ಸಮಸ್ಯೆಗಳಿನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ; ಅಭಿವೃದ್ಧಿ ಹೆಸರಲ್ಲಿ ಬೀದಿ ವ್ಯಾಪಾರಿಗಳನ್ನು ಬೀದಿಪಾಲು ಮಾಡಲಾಗಿದೆ. ಕೊಳಚೆ ನಿರ್ಮೂಲನೆ ಬದಲಿಗೆ ಕೊಳಗೇರಿ ಹೆಚ್ಚುತ್ತಿದೆ. ಸೌಂದರ್ಯೀಕರಣದ ಹೆಸರಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ನಡೆಸಿ ಅವ್ಯವಹಾರ ಮಾಡಲಾಗಿದೆ. ದೂರದಲ್ಲಿಯೇ ಕೃಷಿ ಜಮೀನಿದ್ದರೂ ಇಲ್ಲಿಯ ಆರ್ಥಿಕತೆಗೆ ಪೂರಕವಾಗಿರುವ ರೈತರ ಗೋಳು ಕೇಳುವರಿಲ್ಲದಾಗಿದೆ. ಖಾಸಗಿ ಶಿಕ್ಷಣ ಲಾಬಿಯ ತಂತ್ರಗಾರಿಕೆಯಿಂದ ಹು.ಧಾ-ಪೂರ್ವ ಕ್ಷೇತ್ರದಲ್ಲಿ ಸರಕಾರಿ ವಿದ್ಯಾಲಯಗಳು ಬರುತ್ತಿಲ್ಲ. ಕ್ಷೇತ್ರದ ಕೆಲವು ಏರಿಯಾಗಳಿಗೆ ಅಂಟಿರುವ ದೋ ನಂಬರ್ ದಂಧೆಗಳ ಅಡ್ಡೆಯೆಂಬ ಅಡ್ಡ ಹೆಸರು ತೊಡೆದುಹಾಕಬೇಕಿದೆ. ಇಲ್ಲಿ ಕೋಮು ಕಿಡಿ ಹೊತ್ತಿಸಿದರೆ ಹುಬ್ಬಳ್ಳಿ-ಧಾರವಾಡದ ಅಷ್ಟೂ ನಾಲ್ಕು ಕ್ಷೇತ್ರದಲ್ಲಿ ಬಂಪರ್ ಇಲೆಕ್ಷನ್ ಫಸಲು ಕೊಯ್ಯಬಹುದೆಂಬ ಲೆಕ್ಕಾಚಾರದ ಫ್ರಿಂಜ್ ಎಲಿಮೆಂಟ್‌ಗಳಿಂದಾಗಿ ನೆಮ್ಮದಿ ಕೆಡುತ್ತಿದೆ ಎಂದು ಜನರು ಹೇಳುತ್ತಾರೆ.

ಬಿಜೆಪಿ ಕಪ್ಪು ಕುದುರೆ ಯಾರು?

ಕಲವೇ ತಿಂಗಳುಗಳಲ್ಲಿ ಬರಲಿರುವ ವಿಧಾನಸಭಾ ಚುನಾವಣೆಯ ರಂಗತಾಲೀಮು ಹು,ಧಾ-ಪೂರ್ವ ಆಖಾಡದಲ್ಲಿ ಶುರುವಾಗಿದೆ. ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಮೂರನೆ ಬಾರಿ ಹೋರಾಟಕ್ಕೆ ಅಣಿಯಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಪ್ರಸಾದ್‌ಗೆ ಖೊಕ್ ಕೊಟ್ಟು ಟಿಕೆಟ್ ಪಡೆಯುವ ಸಾಮರ್ಥ್ಯದವರಿಲ್ಲ. ಶಾಸಕ ಪ್ರಸಾದ್ ಜನಸಾಮಾನ್ಯರ ಕೈಗೆಟುಕುತ್ತಾರೆ; ತಾರತಮ್ಯವಿಲ್ಲದೆ ಅಭಿವೃದ್ಧಿ ಕೆಲಸ ಮಾಡಿಸುತ್ತಾರೆ. ಬಿಜೆಪಿ ಸೆಳೆತದ ಪಟ್ಟೇಕಾರ್-ಮರಾಠರಂಥವರನ್ನು ಒಲಿಸಿಕೊಂಡಿರುವ ಪ್ರಸಾದ್‌ಗೆ ಮುಸ್ಲಿಮ್ ಓಟ್ ಬ್ಯಾಂಕ್ ಬಲವಿದೆ. ಆದರೆ ಶಾಸಕ ಪ್ರಸಾದ್‌ರ ಮಾಜಿ ಗೆಳೆಯ ವಿಜಯ್ ಗುಂಟ್ರಾಳ್ ಮುಸ್ಲಿಮರ ಮತ ವಿಭಜಿಸಿ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹುಬ್ಬಳ್ಳಿ-ಧಾರವಾಡ ಕೇಂದ್ರ: ಶೆಟ್ಟರ್ ನಾಗಾಲೋಟಕ್ಕೆ ಬ್ರೇಕ್ ಹಾಕುವ ನಿರೀಕ್ಷೆಯಲ್ಲಿ ವಾಣಿಜ್ಯ ನಗರ?

ಶಾಸಕ ಪ್ರಸಾದ್ ಕೆಲವು ಕಾರಾಣಗಳಿಗಾಗಿ ಗುಂಟ್ರಾಳ್‌ರನ್ನು ದೂರಮಾಡಿದ್ದರು. ಆ ಸಿಟ್ಟಿಂದ ಗುಂಟ್ರಾಳ್ ಕಾರ್ಪೊರೇಷನ್ ಚುನಾವಣೆಯಲ್ಲಿ ಓವೈಸಿಯ ಎಐಎಂಐಎಂ ಹು.ಧಾ-ಪೂರ್ವದಲ್ಲಿ ಅಭ್ಯರ್ಥಿಗಳನ್ನು ಹೂಡುವಂತೆ ನೋಡಿಕೊಂಡರು ಎನ್ನಲಾಗಿದೆ. ಎಐಎಂಐಎಂ ಮೂರು ಕಾರ್ಪೊರೇಟರ್‌ಗಳು ಆಯ್ಕೆಯೂ ಆಗಿದ್ದಾರೆ. ಇದು ಪ್ರಸಾದ್‌ಗೆ ಮುಂದಿನ ಚುನಾವಣೆಯಲ್ಲಿ ಮುಳುವಾಗಲಿದೆ ಎಂಬ ತರ್ಕಗಳು ಕೇಳಿಬರುತ್ತಿದೆ. ಅತ್ತ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸರದಿ ಸಾಲು ಬೆಳೆಯುತ್ತಿದೆ. 2018ರಲ್ಲಿ ಶಾಸಕನಾಗಿದ್ದ ವೀರಭದ್ರ ಹಾಲಹರವಿ, ಕಳೆದ ಬಾರಿ ಸೋತಿರುವ ಚಂದ್ರಶೇಖರ್ ಗೋಕಾಕ್, ಯಡಿಯೂರಪ್ಪರ ಕೆಜೆಪಿ ಅನುಯಾಯಿ ಶಂಕ್ರಣ್ಣ ಬಿವಾಡ್, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಿಂಬಾಲಕ ಡಾ.ಕ್ರಾಂತಿ ಕಿರಣ್ ಹುರಿಯಾಳಾಗಲು ಮೇಲಾಟ ನಡೆಸಿದ್ದಾರೆ.

ಚಂದ್ರಶೇಖರ್ ಗೋಕಾಕ್

ಆರೆಸ್ಸೆಸ್ ಕೃಪಾಕಟಾಕ್ಷ ಪಡೆದಿರುವ ನರರೋಗ ತಜ್ಞ ಡಾ.ಕ್ರಾಂತಿ ಕಿರಣ್‌ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚು ಎಂಬ ಸುದ್ದಿ ಬಿಜೆಪಿ ಬಿಡಾರದಿಂದ ಹೊರಬರುತ್ತಿದೆ. ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬುದನ್ನು, 2013ರ ಚುನಾವಣೆಯಲ್ಲಿನ ಮಾಜಿಮಂತ್ರಿ ಹನುಮಂತಪ್ಪ ಅಲ್ಕೋಡ್‌ರವರ ಸೋಲು ಖಾತ್ರಿಪಡಿಸಿದೆಯೆಂಬ ಮಾತು ಕೇಳಿಬರುತ್ತಿದೆ. ಡಿಲಿಮಿಟೇಶನ್‌ನಲ್ಲಿ ಕ್ಷೇತ್ರವನ್ನು ಮುಸ್ಲಿಮರ ಕೈಯಿಂದ ಕಸಿಯಲಾಗಿದೆಯೇ ವಿನಃ ಜಾತಿ ಸಮೀಕರಣವನ್ನು ಬದಲಾಯಿಸಲಾಗಿಲ್ಲ; ಹಾಗಾಗಿ ಹು.ಧಾ-ಪೂರ್ವ ಕಾಂಗ್ರೆಸ್-ಬಿಜೆಪಿಗೆ ಸಮಾನ ಅವಕಾಶದ ಆಖಾಡ ಎಂಬ ವಿಶ್ಲೇಷಣೆಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...