Homeಅಂಕಣಗಳುಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-1; ಭಾಗ-1)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-1; ಭಾಗ-1)

- Advertisement -
- Advertisement -

ನವೆಂಬರ್ ತಿಂಗಳು ಕೊನೆಗೊಳ್ಳುತ್ತಿದ್ದಾಗ, ಹಿಮವೆಲ್ಲಾ ಕರಗುತ್ತಿದ್ದ ಸಮಯದಲ್ಲಿ, ಒಂದು ದಿನ ಬೆಳ್ಳಿಗೆ ಒಂಬತ್ತು ಗಂಟೆಯಲ್ಲಿ, ವಾರ್‌ಸಾ-ಪೀಟರ್ಸಬರ್ಗ್ ರೈಲ್ವೆಯ ರೈಲೊಂದು ಅತ್ಯಧಿಕ ವೇಗದಲ್ಲಿ ಸೇಂಟ್ ಪೀಟರ್ಸ್‌ಬರ್ಗಿನ ಕಡೆಗೆ ಧಾವಿಸುತ್ತಿತ್ತು. ಆ ಬೆಳಿಗ್ಗೆಯ ವಾತಾವರಣ ಅತಿಯಾದ ತೇವಾಂಶದಿಂದ ಕೂಡಿತ್ತು ಮತ್ತು ಮಂಜು ಆವರಿಸಿತ್ತು. ಹಿಮ ಕರಗುತ್ತಿದ್ದ ಆ ಸಮಯದಲ್ಲಿ ಎಷ್ಟು ಮಂಜುಮಂಜಾಗಿತ್ತೆಂದರೆ ರೈಲಿನ ಬೋಗಿಯ ಕಿಟಿಕಿಯಿಂದ ಕೆಲವು ಗಜಗಳಾಚೆಯವರೆಗೆ ಯಾವುದರದ್ದೂ ವ್ಯತ್ಯಾಸವನ್ನೂ ತಿಳಿಯಲಸಾಧ್ಯವಾಗಿತ್ತು. ಈ ನಿರ್ದಿಷ್ಟವಾದ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ ಅನೇಕರು ವಿದೇಶದಿಂದ ವಾಪಸ್ಸಾಗುತ್ತಿದ್ದರು; ಆದರೆ ಮೂರನೇ ದರ್ಜೆಯ ಬೋಗಿ ಸಾಮಾನ್ಯ ವರ್ಗದ ಜನರಿಂದ ಸಾಕಷ್ಟು ಭರ್ತಿಯಾಗಿತ್ತು; ಅದರಲ್ಲೂ ಪ್ರಮುಖವಾಗಿ ಪ್ರಭಾವಶಾಲಿಗಳಲ್ಲದ ಸಾಮಾನ್ಯ ಜನಗಳಿಂದ ತುಂಬಿತುಳುಕುತ್ತಿತ್ತು. ಅವರೆಲ್ಲಾ ವಿವಿಧ ರೀತಿಯ ಉದ್ಯೋಗಗಳಲ್ಲಿ ನಿರತರಾಗಿದ್ದ ವೃತ್ತಿಪರರಾಗಿದ್ದರು. ಮತ್ತು ಅವರು ಹತ್ತಿರದ ಸ್ಥಳಗಳ ರೈಲ್ವೇ ನಿಲ್ದಾಣಗಳಿಂದ ನಗರಕ್ಕೆ ಪ್ರತಿದಿನದಂತೆ ಪ್ರಯಾಣಿಸುತ್ತಿದ್ದರು. ಅವರೆಲ್ಲರೂ ಬಹಳವಾಗಿ ದಣಿದವರಂತೆ ಕಾಣುತ್ತಿದ್ದರು, ಮತ್ತು ಅವರೆಲ್ಲರ ಮುಖಚರ್ಯೆಯು ತೂಕಡಿಸುತ್ತಿರುವಂತೆ ಮತ್ತು ಚಳಿಗೆ ನಡುಗುತ್ತಿದ್ದಾರೆ ಅನ್ನುವಂತೆ ತೋರುತ್ತಿತ್ತು. ಅವರ ಮೈಬಣ್ಣ ಹೊರಗೆ ಹರಡಿಕೊಂಡಿದ್ದ ಮಂಜಿನ ಬಣ್ಣವನ್ನೇ ತಳೆದಿರುವಂತೆ ತೋರುತ್ತಿತ್ತು.

ಸೂರ್ಯೋದಯವಾದ ನಂತರದ ಮುಂಜಾವಿನಿಂದಲೂ, ಮೂರನೇ ದರ್ಜೆಯ ಒಂದು ಬೋಗಿಯಲ್ಲಿ, ಇಬ್ಬರು ವ್ಯಕ್ತಿಗಳು ಪರಸ್ಪರ ಎದುರುಬದುರು ಕುಳಿತಿದ್ದರು. ಅವರಿಬ್ಬರೂ ಕೂಡ ಯುವಕರು; ಮತ್ತು ಅವರಿಬ್ಬರ ಉಡುಗೆತೊಡುಗೆಗಳೂ ಆಕರ್ಷಕವಾಗಿರಲ್ಲ, ಮತ್ತವರ ಬಳಿ ಹೇಳಿಕೊಳ್ಳುವಂತಹ ಯಾವುದೇ ಲಗ್ಗೇಜ್ ಇರಲಿಲ್ಲ; ಇಬ್ಬರ ಮುಖಗಳೂ ಕೂಡ ಅಸಾಧಾರಣವಾಗಿದ್ದು ಪರಸ್ಪರ ಮಾತುಕತೆಗೆ ಇಳಿಯಲು ಬಯಸುವಂತಿದ್ದರು. ತನ್ನೆದುರಿನವನ ವಿಶೇಷತೆಯ ಬಗ್ಗೆ ಆ ಕ್ಷಣದಲ್ಲಿ ಅವರಿಬ್ಬರಿಗೂ ತಿಳಿದಿರುತ್ತಿದ್ದರೆ ಈ ಮೂರನೆ ದರ್ಜೆಯ ವಾರ್‌ಸಾ ರೈಲ್ವೆಯ ಬೋಗಿಯಲ್ಲಿ ಎದುರುಬದುರು ಕೂರುವಂತಹ ಅವಕಾಶ ದೊರೆತ ಆಕಸ್ಮಿಕದ ಬಗ್ಗೆ ಆಶ್ಚರ್ಯಪಟ್ಟಿರುತ್ತಿದ್ದರು. ಅವರಿಬ್ಬರಲ್ಲಿ ಒಬ್ಬ ಇಪ್ಪತ್ತೇಳು ವರ್ಷ ವಯಸ್ಸಿನ ಯುವಕ, ಅಷ್ಟೇನೂ ಎತ್ತರದ ವ್ಯಕ್ತಿಯಲ್ಲ, ಕಡು ಕಪ್ಪು ಬಣ್ಣದ ಗುಂಗುರು ಕೂದಲನ್ನ ಹೊಂದಿದ್ದ, ಮತ್ತು ಅವನ ಚಿಕ್ಕದಾದ ಕಣ್ಣುಗಳು ಉದ್ರಿಕ್ತತೆಯಿಂದ ಕೂಡಿದ್ದವು. ಮೂಗುಗಳು ಅಗಲವಾಗಿ ಚಪ್ಪಟೆಯಾಗಿದ್ದವು, ಮತ್ತು ಎದ್ದು ಕಾಣುವ ಕೆನ್ನೆಯ ಮೂಳೆಗಳನ್ನ ಹೊಂದಿದ್ದ. ಅವನ ತೆಳುವಾದ ತುಟಿಗಳನ್ನ ಸದಾಕಾಲ ಬಾಗಿ ಒಂದಕ್ಕೊಂದನ್ನ ಒತ್ತಿಹಿಡಿದು ಒಂದು ರೀತಿಯ ದುಷ್ಟತನದ, ವ್ಯಂಗ್ಯತನದ ನಗುವನ್ನ ಸೂಸುತ್ತಿದ್ದಂತೆ ಭಾಸವಾಗುತ್ತಿತ್ತು. ಆದರೆ ಅವನ ಹಣೆ ಅಗಲವಾಗಿ ಉಬ್ಬಿಕೊಂಡು ಚೆನ್ನಾಗಿ ರೂಪಗೊಂಡಿತ್ತು; ಅವನ ಮುಖದ ಕೆಳಭಾಗದ ಕುರೂಪತೆಯನ್ನ ಹಣೆಯ ಭಾಗ ಸಾಕಷ್ಟು ಮರೆಮಾಡಲು ಸಫಲವಾಗಿತ್ತು. ಅವನ ಈ ದೇಹರಚನೆಯ ಇನ್ನೊಂದು ವೈಶಿಷ್ಟ್ಯವೆಂದರೆ ಅವನ ಸತ್ತ ದೇಹವನ್ನ ನೆನಪಿಸುವಂತಹ ಬಿಳಿಚಿಕೊಂಡ ಮೈಬಣ್ಣ. ಇದು ಅವನ ಕಠಿಣವಾದ ನೋಟದ ಹೊರತಾಗಿಯೂ ಅವನ ಇಡೀ ದೇಹ ಕೃಶಗೊಂಡಂತೆ ಕಾಣುತ್ತಿತ್ತು. ಮತ್ತು ಅದೇ ಸಮಯದಲ್ಲಿ ಒಂದು ರೀತಿಯ ಭಾವೋದ್ರಿಕ್ತ ಮತ್ತು ಬಳಲಿದಂತಹ ಅವನ ಮುಖಭಾವ, ಅವನ ಉದ್ಧಟತನ ಹಾಗೂ ವ್ಯಂಗ್ಯದಿಂದ ನಗುವ ಸ್ವಭಾವ ಮತ್ತು ಉತ್ಸುಕ ಆತ್ಮಸಂತೃಪ್ತಿಯಿಂದ ಕೂಡಿದ ನಡವಳಿಕೆಯ ಜೊತೆಯಲ್ಲಿ ಸಮನ್ವಯಗೊಳ್ಳುತ್ತಿರಲಿಲ್ಲ. ಅವನೊಂದು ದೊಡ್ಡ ತುಪ್ಪಳದ ಕೋಟನ್ನು, ಅಂದರೆ ರಷ್ಯಾದ ಆಸ್ಟ್ರಚಾನ್ ಪ್ರದೇಶದವರು ಧರಿಸುವ ಓವರ್ ಕೋಟನ್ನು ಧರಿಸಿದ್ದ. ಅದು ಅವನನ್ನು ಇಡೀ ರಾತ್ರಿ ಬೆಚ್ಚಗೆ ಇಟ್ಟಿತ್ತು, ಆದರೆ ಅವನ ಎದುರಿಗೆ ಕುಳಿತಿದ್ದ ಸಹಪ್ರಯಾಣಿಕ ನವೆಂಬರ್‌ನಲ್ಲಿನ ರಷ್ಯಾದ ತೀವ್ರ ಚಳಿಯಿಂದ ಬೆಚ್ಚಗಿರಲು ತಯಾರಾಗಿ ಬಂದಿರದೇ ಇದ್ದುದರಿಂದ ಇಡೀ ರಾತ್ರಿ ತಣ್ಣನೆಯ ವಾತಾವರಣವನ್ನು ಸಹಿಸಿಕೊಂಡೇ ಕುಳಿತಿರಬೇಕಾಗಿತ್ತು. ಅವನೀಗ ಧರಿಸಿದ್ದು ಸ್ವಿಟ್ಜರ್ಲ್ಯಾಂಡ್ ಅಥವ ಉತ್ತರ ಇಟಲಿಯ ಚಳಿಗಾಲದಲ್ಲಿ ಧರಿಸುವಂತಹ ಅರ್ಧ ತೋಳಿದ್ದ, ಮತ್ತು ತಲೆಯನ್ನು ಹೊದ್ದಿದ್ದ ಬಟ್ಟೆಯನ್ನ, ಮತ್ತು ಅದು ಯಾವುದೇ ಕಾರಣಕ್ಕೂ ರಷ್ಯಾದ ಚಳಿಯಲ್ಲಿ ಮತ್ತು ರಷ್ಯಾದ ಪ್ರದೇಶದಲ್ಲಿ ಬಹುದೂರ ಪ್ರಯಾಣಿಸುವುದಕ್ಕೆ ಹೇಳಿ ಮಾಡಿಸಿದ್ದಲ್ಲ, ಅಂದರೆ ಐಡ್ಕುಹನೆನ್‌ನಿಂದ ಪೀಟರ್ಸ್ ಬರ್ಗಿನವರೆಗೂ ದೂರದ ಮಾರ್ಗಗಳಿಗಂತೂ ಅಲ್ಲವೇ ಅಲ್ಲ.

ಈ ರೀತಿಯ ಉಡುಪನ್ನ ಧರಿಸಿದ್ದ ವ್ಯಕ್ತಿ ಒಬ್ಬ ಯುವಕ, ಇಪ್ಪತ್ತಾರು ಅಥವ ಇಪ್ಪತ್ತೇಳು ವರ್ಷ ವಯಸ್ಸಿನವನಿರಬೇಕು, ಸಾಮಾನ್ಯಕ್ಕಿಂತ ಸ್ವಲ್ಪ ಎತ್ತರಕ್ಕಿದ್ದವನು, ಬಹಳ ಸುಂದರ ಪುರುಷ, ಮತ್ತು ತೆಳ್ಳಗಿನ ಚೂಪಾದ ತೆಳುಬಣ್ಣದ ಗಡ್ಡವನ್ನ ಹೊಂದಿದ್ದ; ಅವನ ಕಣ್ಣುಗಳು ಅಗಲವಾದ ನೀಲಿ ಬಣ್ಣದ್ದಾಗಿದ್ದವು, ಮತ್ತು ಅವುಗಳಲ್ಲಿ ಕಾಣುತ್ತಿದ್ದಂತೆ, ಅವನ್ಯಾವುದೊ ಉದ್ದೇಶವನ್ನು ಇಟ್ಟುಕೊಂಡಿದ್ದಾನೆ ಎನ್ನುವುದನ್ನು ಅವನ ನೋಟದಿಂದಲೇ ಗುರುತಿಸಬಹುದಾಗಿತ್ತು. ಆದರೂ ಭಾರದಿಂದ ಕೂಡಿದ ಮುಖಭಾವದ ವಿಶಿಷ್ಟತೆ ಅವನೊಬ್ಬ ಅಪಸ್ಮಾರ ರೋಗದಿಂದ ಬಳಲುತ್ತಿರುವ ಮನುಷ್ಯ ಅನ್ನುವುದನ್ನ ದೃಢೀಕರಿಸುತ್ತಿತ್ತು. ಇದೆಲ್ಲದರ ಹೊರತಾಗಿಯೂ ಅವನ ಮುಖ ನಿಶ್ಚಯವಾಗಿ ಆಹ್ಲಾದಕರವಾಗಿತ್ತು; ಸೌಜನ್ಯತೆಯಿಂದ ಕೂಡಿತ್ತು ಮತ್ತು ನಿರ್ವರ್ಣತೆಯಿತ್ತಾದರೂ, ಅದೀಗ ತೀವ್ರ ಚಳಿಯ ಕಾರಣದಿಂದ ನೀಲಿ ವರ್ಣಕ್ಕೆ ತಿರುಗಿತ್ತು. ಅವನ ಕೈಲಿ ಒಂದು ಬಣ್ಣ ಬಿಟ್ಟುಕೊಂಡ ರೇಶ್ಮೆಯ ಕರವಸ್ತ್ರದ ಗಂಟೊಂದಿತ್ತು ಮತ್ತು ಅದು ಅವನ ಪ್ರಯಾಣದ ಎಲ್ಲಾ ವಸ್ತುಗಳನ್ನು ತುಂಬಿಕೊಂಡಿತ್ತು; ಅವನು ದಪ್ಪನೆಯ ಶೂಗಳನ್ನ ಹಾಕಿಗೊಂಡಿದ್ದ, ಮತ್ತು ಇವೆಲ್ಲದರಿಂದ ಅವನ ಹೊರನೋಟವು ಸಂಪೂರ್ಣವಾಗಿ ಆತ ರಷ್ಯದ ಪ್ರಜೆ ಎಂಬುದನ್ನ ತೋರ್ಪಡಿಸುತ್ತಿರಲಿಲ್ಲ.

ಮಾಡುವುದಕ್ಕೆ ಬೇರೇನೂ ಕೆಲಸವಿಲ್ಲದಿದ್ದ ಕಾರಣಕ್ಕೂ, ಬೇರೆಯವರ ದುರ್ದೈವದ ಬಗ್ಗೆ ಒರಟುತನ ಮತ್ತು ಅಜಾಗರೂಕ ರೀತಿಯಲ್ಲಿ ತೃಪ್ತಿಪಡುವ ಪ್ರವೃತ್ತಿಯಿಂದ ಅಸೂಕ್ಷ ನಗು ಸೂಸುವ ಭಾವನೆಯಿಂದಲೂ ಆ ಕಪ್ಪುಕೂದಲಿನ ಸಹಪ್ರಯಾಣಿಕ ಅವನ ಈ ಎಲ್ಲಾ ವೈಶಿಷ್ಟ್ಯತೆಗಳನ್ನೂ ಕುತೂಹಲದಿಂದ ನೋಡಿ ಮಾತಿಗಿಳಿದ.

ಇದನ್ನೂ ಓದಿ: ದೊಸ್ತೊಯೆವ್‌ಸ್ಕಿ 200; ದ್ವಂದ್ವಗಳ ಜಗತ್ತಿನ ಮಾನವೀಯ ಲೇಖಕ

“ಚಳೀನ?”

“ಅತಿಯಾಗಿ” ಅವನ ಸಹಪ್ರಯಾಣಿಕ ತಕ್ಷಣ ಹೇಳಿದ. “ಈಗ ಮಂಜು ಬೇರೆ ಕರಗುತ್ತಿದೆ. ಇನ್ನು ಹಿಮಬಿದ್ದು ಕೊರೆಯುವಾಗ ಹೇಗಿದ್ದಿರಬಹುದು? ನಾನು ಇಷ್ಟೊಂದು ಚಳಿ ನನ್ನ ದೇಶದಲ್ಲಿ ಇರಬಹುದೆಂದು ನಿರೀಕ್ಷಿಸಲೇ ಇಲ್ಲ. ನಾನು ಅದರ ಜೊತೆ ಜೊತೆಯಲ್ಲಿ ಬೆಳೆಯದೇ ಇದ್ದದ್ದೇ ಅದಕ್ಕೆ ಕಾರಣ.”

“ಏನು? ವಿದೇಶದಿಂದ ಬರ್ತಾ ಇರೋದ?”

“ಹೌದು, ಸೀದ ಸ್ವಿಟ್ಜರ್ಲ್ಯಾಂಡಿನಿಂದ ಬರುತ್ತಿದ್ದೇನೆ.”

“ಅಯ್ಯೊ! ದೇವರೆ!” ಕಪ್ಪು ಕೂದಲಿನ ಮನುಷ್ಯ ವಿಶಲ್ ಹೊಡೆಯುತ್ತಾ ನಕ್ಕು ನುಡಿದ.

ಇಬ್ಬರ ಸಂಭಾಷಣೆ ಹಾಗೆಯೇ ಮುಂದುವರಿಯುತ್ತಿತ್ತು. ಗಂಟು ಹಿಡಿದು ಬಂದಿರುವ ಮನುಷ್ಯ ತನ್ನ ಎದುರು ಕುಳಿತಿದ್ದವನ ಎಲ್ಲಾ ಪ್ರಶ್ನೆಗಳಿಗೂ ಉತ್ತರಕೊಡಲೂ ತಯಾರಾಗಿದ್ದುದು ಆಶ್ಚರ್ಯದ ಸಂಗತಿಯಾಗಿತ್ತು. ಅವನನ್ನು ಕೇಳಿದ ಪ್ರಶ್ನೆಗಳಲ್ಲಿ, ಅಸಂಬದ್ಧತೆ ಅಥವಾ ಅನುಚಿತತೆಯ ಬಗ್ಗೆ ಯಾವುದೇ ಅನುಮಾನ ಅವನಲ್ಲಿ ಹುಟ್ಟಲಿಲ್ಲ. ಅವನನ್ನ ವಿಚಾರಿಸುತ್ತಿದ್ದವನಿಗೆ, ಎಲ್ಲದಕ್ಕೂ ಉತ್ತರಕೊಡುತ್ತಾ, ತಾನು ಖಂಡಿತವಾಗಿ ರಷ್ಯಾದಲ್ಲಿ ಸುಧೀರ್ಘ ಕಾಲ ಇರಲಿಲ್ಲ, ಅದೂ ನಾಲ್ಕು ವರ್ಷಗಳಿಗೂ ಹೆಚ್ಚಿನ ಕಾಲವನ್ನು ವಿದೇಶದಲ್ಲಿ ಕಳೆದಿದ್ದು ಅವನ ಅನಾರೋಗ್ಯದ ಕಾರಣದಿಂದ; ಯಾವುದೋ ವಿಚಿತ್ರವಾದ ನರಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದುದಾಗಿ ಮತ್ತು ಅದೊಂದು ರೀತಿಯ ಸೆಳೆತದ ಜೊತೆಯಲ್ಲಿ ಬಂದು ಬಡಿಯುತ್ತಿದ್ದ ಮೂರ್ಛೆ ರೋಗವೆಂದು, ಇರುವುದನ್ನು ಇದ್ದ ಹಾಗೆಯೇ ಹೇಳಿಬಿಟ್ಟ. ಅವನ ಜೊತೆ ಸಂಭಾಷಿಸುತ್ತಿದ್ದವನು ಅವನ ಉತ್ತರಗಳನ್ನ ಕೇಳುತ್ತಾ ಅನೇಕ ಬಾರಿ ಜೋರಾಗಿ ನಗುತ್ತಿದ್ದ; ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ಅವನನ್ನು “ನಿನ್ನ ರೋಗವನ್ನ ವಾಸಿಮಾಡಲಾಯಿತೇ” ಎಂದು ಕೇಳಿದಾಗ ಅವನು “ಇಲ್ಲ ಅವರು ವಾಸಿಮಾಡಲೇ ಇಲ್ಲ” ಅಂತ ಉತ್ತರಿಸಿದ.

“ಅದಕ್ಕೇ ನಿನ್ನ ಈ ಸ್ಥಿತಿ! ನಿನ್ನ ಎಲ್ಲಾ ಹಣವನ್ನ ನಿರರ್ಥಕವಾಗಿ ಕಳೆದುಕೊಂಡುಬಿಟ್ಟೆ ಅನ್ನಿಸುತ್ತದೆ, ಮತ್ತು ನಮ್ಮ ಪ್ರದೇಶದಲ್ಲೆಲ್ಲಾ ನಾವು ಆ ಜನಗಳ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದೇವೆ!” ಕಪ್ಪು ಕೂದಲಿನ ವ್ಯಕ್ತಿ ಸಾಕಷ್ಟು ವ್ಯಂಗ್ಯವಾಗಿ ಹೇಳಿದ.

“ಗಾಸ್ಪೆಲ್‌ನಷ್ಟೇ ಸತ್ಯ ಸರ್, ಗಾಸ್ಪೆಲ್ಲಿನಷ್ಟೇ ಸತ್ಯ!” ಸುಮಾರು ನಲವತ್ತು ವರ್ಷ ವಯಸ್ಸಿನ, ಕೆಟ್ಟದಾಗಿ ಬಟ್ಟೆ ಧರಿಸಿದ್ದ, ಅಲ್ಲೇ ಕುಳಿತಿದ್ದ ಇನ್ನೊಬ್ಬ ಪ್ರಯಾಣಿಕ ಉದ್ಘರಿಸಿದ.

ಅವನೊಬ್ಬ ಗುಮಾಸ್ತನಂತೆ ಕಾಣುತ್ತಿದ್ದ; ಕೆಂಪು ಮೂಗು ಮತ್ತು ಮುಖದ ಮೇಲೆಲ್ಲಾ ಮಚ್ಚೆಯನ್ನ ಹೊಂದಿದ್ದ. “ಗಾಸ್ಪೆಲ್ಲಿನಷ್ಟೇ ಸತ್ಯ! ಅವರೆಲ್ಲಾ ಮಾಡುವುದೇನೆಂದರೆ ನಮ್ಮ ರಷ್ಯದ ಹಣವನ್ನ ಬಿಟ್ಟಿಯಾಗಿ ಕೀಳುತ್ತಾರೆ, ಉಚಿತವಾಗಿ ಹೊಡೆದುಕೊಳ್ಳುತ್ತಾರೆ, ಏನನ್ನೂ ಪ್ರತಿಫಲವಾಗಿ ನೀಡದೆ” ಎಂದ.

“ಓ, ನಿರ್ದಿಷ್ಟವಾಗಿ ನನ್ನ ವಿಷಯದಲ್ಲಿ ಹೇಳುವುದಾದರೆ ನೀನು ಹೇಳುತ್ತಿರುವುದು ತಪ್ಪು” ಸ್ವಿಸ್‌ನ ರೋಗಿ ಸದ್ದಿಲ್ಲದೇ ಹೇಳಿದ. “ಖಂಡಿತವಾಗಿಯೂ ನನಗೆ ಈ ವಿಷಯದಲ್ಲಿ ವಾದಿಸಲು ಆಗುವುದಿಲ್ಲ; ಕಾರಣ ನನಗೆ ತಿಳಿದಿರುವುದು ನನ್ನ ವಿಷಯದ ಬಗ್ಗೆ ಮಾತ್ರ. ಆದರೆ ನನ್ನ ವೈದ್ಯ ಅವನಲ್ಲಿ ಕೊನೆಗೆ ಉಳಿದಿದ್ದ ಕಾಸನ್ನೂ ನನಗೆ ಕೊಟ್ಟು ಕಳುಹಿಸಿದ. ನನಗೆ ವಾಪಸ್ಸಾಗಲು ಪ್ರಯಾಣದ ಖರ್ಚನ್ನು ಅವನೇ ಕೊಟ್ಟ, ಅದಲ್ಲದೇ ತನ್ನ ಸ್ವಂತ ಖರ್ಚಿನಿಂದಲೇ ನನ್ನನ್ನು ಅಲ್ಲಿ ಸಾಕುತ್ತಿದ್ದ, ಅದೂ ಎರಡು ವರ್ಷಗಳ ಕಾಲ.”

“ಯಾಕೆ? ನಿನಗೆ ಹಣ ಸಹಾಯ ಮಾಡಲು ಯಾರೂ ಇರಲಿಲ್ಲವೇ?” ಕರಿ ಕೂದಲಿನ ಮನುಷ್ಯ ಕೇಳಿದ.

“ಇಲ್ಲ; ಮಿಸ್ಟರ್ ಪಾವ್ಲಿಚೆಫ್- ಯಾರು ನಾನಲ್ಲಿ ವಾಸಿಸುವುದಕ್ಕೆ ಹಣ ನೀಡುತ್ತಿದ್ದನೋ, ಅವನು ಎರಡು ವರ್ಷದ ಹಿಂದೆ ಅಸುನೀಗಿದ. ನಾನು ಜನರಲ್ ಎಪಾಂಚಿನ್‌ನ ಹೆಂಡತಿಗೆ ಆ ಸಮಯದಲ್ಲಿ ಪತ್ರ ಬರೆದಿದ್ದೆ; ಅವಳು ನನ್ನ ದೂರದ ಸಂಬಂಧಿ. ಆದರೆ ನನ್ನ ಪತ್ರಕ್ಕೆ ಅವಳು ಉತ್ತರಿಸಲಿಲ್ಲ. ಅದೇ ಕಾರಣಕ್ಕೆ ಅಂತಿಮವಾಗಿ ನಾನು ವಾಪಸ್ಸಾಗಬೇಕಾಯಿತು.”

“ನೀನು ಯಾವ ಊರಿಗೆ ಹೋಗುತ್ತಿದ್ದೀಯ?”

“ಅಂದರೆ ಇನ್ನು ಮುಂದೆ ನಾನೆಲ್ಲಿ ವಾಸಮಾಡುತ್ತೇನೆ ಅಂತ ಕೇಳುತ್ತಿದ್ದೀಯ? ನನಗೆ…. ನನಗೇ ನಿಜವಾಗಲೂ ಅದರ ಬಗ್ಗೆ ಇಲ್ಲಿಯವರೆಗೂ ತಿಳಿದಿಲ್ಲ.”

ಕೇಳಿಸಿಕೊಳ್ಳುತ್ತಿದ್ದ ಇಬ್ಬರೂ ಪುನಃ ಜೋರಾಗಿ ನಕ್ಕರು.

“ಅಂದರೆ ನನ್ನ ಪ್ರಕಾರ ನಿನ್ನ ಇಡೀ ಸಾಮಾನು ಸರಂಜಾಮುಗಳು ಆ ಗಂಟಿನಲ್ಲಿದೆ ಅಲ್ಲವೇ?” ಮೊದಲು ಮಾತನಾಡಿಸಿದವನು ಕೇಳಿದ.

“ನಾನು ಬೇಕಾದರೆ ಪಣತೊಡುತ್ತೇನೆ, ಎಲ್ಲವೂ ಕೂಡ ಅದರಲ್ಲೇ ಇದೆ ಎಂದು”, ಕೆಂಪು ಮೂಗಿನ ಪ್ರಯಾಣಿಕ ಬಹಳ ಸಂತೃಪ್ತಿಗೊಂಡವನಂತೆ ಉದ್ಗರಿಸಿದ. “ಅವನು ಲಗೇಜ್ ವ್ಯಾನಿನಲ್ಲೂ ಏನೂ ಇಟ್ಟಿರುವಂತಿಲ್ಲ! ನಾವಿಲ್ಲಿ ಒಪ್ಪಿಕೊಳ್ಳಬೇಕಾದದ್ದು ಬಡತನ ಅನ್ನುವುದೇನೂ ಅಪರಾಧವಲ್ಲ ಅನ್ನುವುದನ್ನ!”

ಇದನ್ನೂ ಓದಿ: ಅತ್ಯಂತ ಕೆಟ್ಟ ಮನುಷ್ಯನೂ ಕೆಲವು ಬಾರಿ ನಾವು ತಿಳಿದುಕೊಂಡಿರುವುದಕ್ಕಿಂತ ಜಾಸ್ತಿಯೇ ಹೃದಯವಂತನಾಗಿರುತ್ತಾನೆ

ಆಗ ತೋರಿದ್ದು ಅವರು ಊಹಿಸಿದ್ದೇ ವಾಸ್ತವ ಎನ್ನುವುದು. ಮತ್ತು ಆ ಯುವಕ ಅದನ್ನ ಬಹಳ ತ್ವರಿತತೆಯಿಂದ ಒಪ್ಪಿಕೊಂಡ.

“ಏನೇ ಆದರೂ ನಿನ್ನ ಆ ಗಂಟೂ ಕೂಡ ಸ್ವಲ್ಪ ಮಹತ್ವವನ್ನ ಪಡೆದುಕೊಂಡಿದೆ”, ಅವರು ಸಂತೃಪ್ತಿಯಾಗುವಷ್ಟು ನಕ್ಕ ನಂತರ ಗುಮಾಸ್ತ ಮುಂದುವರಿಸಿದ. (ಇಲ್ಲಿ ಗಮನಿಸಬೇಕಾದ ವಿಚಿತ್ರವೇನೆಂದರೆ ತಮಾಷೆ ಮಾಡಿಸಿಕೊಳ್ಳುತ್ತಿದ್ದವನೂ ಕೂಡ ಅವರು ನಗುತ್ತಿದ್ದದ್ದನ್ನ ನೋಡಿ ಅವರ ನಗೆಯಲ್ಲಿ ಪಾಲ್ಗೊಂಡಿದ್ದ ಎನ್ನುವುದು); “ಇದನ್ನು ಆರಾಮವಾಗಿ ಊಹಿಸಬಹುದು; ಆ ಗಂಟಿನಲ್ಲೇನೂ ಚಿನ್ನ ನಗನಾಣ್ಯವನ್ನ ತುಂಬಿಸಿರಲು ಅಸಾಧ್ಯ, ಕಾರಣ ನಿನ್ನ ವೇಷ ಭೂಷಣವೇ ಅದನ್ನ ಹೇಳುತ್ತದೆ… ಆದರೂ ನಿನ್ನ ಸ್ವಾಧೀನಕ್ಕೆ ಬೆಲೆಬಾಳುವ ಸ್ವತ್ತನ್ನ ನೀನು ಜನರಲ್ ಎಪಾಂಚಿನ್‌ನ ಹೆಂಡತಿಯ ಸಂಬಂಧಿಯಾಗಿರುವುದರಿಂದ ಸೇರಿಸಿಕೊಳ್ಳಲು ಸಾಧ್ಯವಾದರೆ, ಆಗ ನಿನ್ನ ಈ ಗಂಟು ಇದ್ದಕ್ಕಿದ್ದಂತೆ ಬಹಳ ಮಹತ್ವಪೂರ್ಣವಾದ ವಸ್ತುವಾಗಿಬಿಡುತ್ತದೆ. ಅಂದರೆ ನೀನು ನಿಜವಾಗಲೂ ಜನರಲ್ ಎಪಾಂಚಿನ್‌ನ ಹೆಂಡತಿಯ ಸಂಬಂಧಿಕನಾಗಿದ್ದರೆ ಮಾತ್ರ; ಹಾಗಂತ ಹೇಳುವಾಗ ನೀನು ನಮ್ಮನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡದೇ ಇದ್ದಿದ್ದರೆ ಮಾತ್ರ ಅದು ನಿಜ. ಅಂದರೆ ಅಕಸ್ಮಾತ್ತಾಗಿ ಯಾವುದೋ ಜ್ಞಾನದಲ್ಲಿ ಅಂದರೆ ಮನುಷ್ಯ ಸಹಜವಾದ ಗರಬಡಿದವನಂತೆ ಹೇಳಿಬಿಟ್ಟಿದ್ದರೆ, ಅಥವ ಬರೀ ಖಯಾಲಿಗೋಸ್ಕರ ದೊಡ್ಡ ಮನುಷ್ಯರ ಸಂಬಂಧ ಹೇಳಿಕೊಳ್ಳುವ ಪ್ರವೃತ್ತಿ ನಿನ್ನಲ್ಲಿ ಮೈಗೂಡಿದ್ದಿದ್ದರೆ”.

“ಓ, ನೀನು ಪುನಃ ಸರಿಯಾಗಿಯೇ ಹೇಳಿದೆ”, ಸುಂದರ ಕೂದಲಿನ ಯುವಕ ಹೇಳಿದ. “ಏಕೆಂದರೆ ನಾನು ಮತ್ತು ಅವಳು ಸಂಬಂಧಿಕರು ಅಂತ ಹೇಳಿಕೊಂಡರೆ ಬಹುತೇಕ ತಪ್ಪು ಹೇಳಿದ್ದೇನೆ ಅನ್ನುವುದು ಕೂಡ ಸತ್ಯಕ್ಕೆ ಹತ್ತಿರವಾದ ಮಾತು. ಅವಳು ಅಂತಹ ಹೇಳಿಕೊಳ್ಳುವಂತಹ ಸಂಬಂಧಿಯೇನೂ ಅಲ್ಲ, ಸ್ವಲ್ಪ ಮಾತ್ರ. ನಿಜವಾಗಲೂ ಹೇಳಬೇಕೆಂದರೆ ನನ್ನ ಪತ್ರಕ್ಕೆ ಅವಳಿಂದ ಉತ್ತರ ಬರದೇ ಇದ್ದದ್ದು ನನಗೆ ಆಶ್ಚರ್ಯವನ್ನೇನೂ ಉಂಟುಮಾಡಲಿಲ್ಲ. ನಾನು ನಿರೀಕ್ಷಿಸಿದ್ದೂ ಅದನ್ನೇ.”

“ಅಯ್ಯೊ! ಆಗ ಅನ್ಯಾಯವಾಗಿ ಪೋಸ್ಟಲ್ ಸ್ಟಾಂಪಿಗೆ ಹಣ ಪೋಲುಮಾಡಿದೆ, ಛೇ! ನೀನು ತುಂಬಾ ಪ್ರಾಮಾಣಿಕ ಮತ್ತು ಮುಚ್ಚುಮರೆಯಿಲ್ಲದೇ ಮಾತನಾಡುತ್ತೀಯ, ನಿನ್ನ ಆ ಸ್ವಭಾವ ಮಾತ್ರ ಸ್ತುತ್ಯಾರ್ಹ. ಹೌದು! ಎಪಾಂಚಿನ್‌ನ ಹೆಂಡತಿ, ಓ ಹೌದು ಹೌದು, ಅತ್ಯಂತ ಶ್ರೇಷ್ಠ ಮತ್ತು ಪ್ರಖ್ಯಾತ ಹೆಂಗಸು. ನನಗೆ ಅವಳು ಗೊತ್ತು. ನಿನಗೆ ಧನಸಹಾಯ ಮಾಡಿ ಎರಡು ವರ್ಷಗಳ ಕಾಲ ಬೆಂಬಲಿಸಿದ ವ್ಯಕ್ತಿ ಮಿಸ್ಟರ್ ಪಾವ್ಲಿಚೆಫ್ ಕೂಡ ನನಗೆ ಪರಿಚಯ. ಅವನ ಇನ್ನೊಂದು ಹೆಸರು ನಿಕೊಲಾಯ್ ಆಂಡ್ರಿವಿಚ್ ಅಲ್ಲವಾ? ಬಹಳ ಒಳ್ಳೆಯ ಮನುಷ್ಯ, ಅವನ ಕಾಲದಲ್ಲಿ ನಾಲ್ಕುಸಾವಿರ ಎಕರೆಯಷ್ಟು ಆಸ್ತಿಯನ್ನ ಹೊಂದಿದ್ದ.”

“ಹೌದು, ನಿಕೊಲಾಯ್ ಆಂಡ್ರಿವಿಚ್, ಅದೇ ಅವನ ಹೆಸರು” ಎಂದ ಯುವಕ, ಎಲ್ಲವನ್ನೂ ತಿಳಿದಿದ್ದ ಕೆಂಪು ಮೂಗಿನ ವ್ಯಕ್ತಿಯ ಕಡೆಗೆ ಶ್ರದ್ಧೆಯಿಂದ ಮತ್ತು ಕುತೂಹಲದಿಂದ ನೋಡಿದ.

ಒಂದು ವರ್ಗದಲ್ಲಿ ಈ ರೀತಿಯ ವ್ಯಕ್ತಿತ್ವದವರನ್ನ ಪದೇಪದೇ ಕಾಣುತ್ತಿರುತ್ತೇವೆ. ಅವರುಗಳು ಎಲ್ಲವನ್ನೂ ಬಲ್ಲಂತಹ ಜನರುಗಳು. ಅಂದರೆ ಅವರು ಒಬ್ಬ ಮನುಷ್ಯ ಎಲ್ಲಿ ಕೆಲಸ ಮಾಡುತ್ತಾನೆ, ಅವನ ಸಂಬಳ ಎಷ್ಟು, ಅವನಿಗೆ ಯಾರ್‍ಯಾರು ಗೊತ್ತು, ಅವನು ಯಾರನ್ನು ಮದುವೆಯಾಗಿದ್ದಾನೆ, ಅವನ ಹೆಂಡತಿಯ ಹತ್ತಿರ ಎಷ್ಟು ಹಣ ಇದೆ, ಅವನ ಕಸಿನ್‌ಗಳು ಯಾರ್‍ಯಾರು, ಅವರ ಎರಡನೇ ಕಸಿನ್‌ಗಳು ಇತ್ಯಾದಿ ಇತ್ಯಾದಿ. ಈ ರೀತಿಯ ಜನಗಳ ಬಳಿ ವರ್ಷಕ್ಕೆ ಬದುವುದಕ್ಕಾಗಿ ನೂರು ಪೌಂಡ್‌ಗಳಷ್ಟು ಬರುತ್ತಿರುತ್ತದೆ, ಮತ್ತು ಅವರು ತಮ್ಮ ಇಡೀ ಸಮಯವನ್ನ ಮತ್ತು ಕೌಶಲ್ಯಗಳನ್ನ ಈ ರೀತಿಯ ಜ್ಞಾನವನ್ನ ಕೂಡಿಹಾಕುವುದಕ್ಕೆ ವ್ಯಯಿಸುತ್ತಾರೆ, ಮತ್ತು ಈ ಪ್ರಕ್ರಿಯೆ ವಿಜ್ಞಾನವನ್ನ ಹೋಲುವಷ್ಟು ನಿಖರವಾಗಿರುತ್ತದೆ.

ಇವರ ಸಂಭಾಷಣೆಯ ನಂತರದ ಭಾಗದಲ್ಲಿ ಕಪ್ಪು ಕೂದಲಿನ ಸುಂದರ ಯುವಕ ಸ್ವಲ್ಪ ತಾಳ್ಮೆಯನ್ನ ಕಳೆದುಕೊಳ್ಳಲು ಶುರುಮಾಡಿದ. ಅವನು ಕಿಟಕಿಯಿಂದಾಚೆಗೆ ದಿಟ್ಟಿಸಿನೋಡಲು ಶುರುಮಾಡಿದ, ಚಡಪಡಿಸತೊಡಗಿದ ಮತ್ತು ಸ್ಪಷ್ಟವಾಗಿ ಈ ಪ್ರಯಾಣ ಕೊನೆಗೊಳ್ಳುವುದನ್ನ ಹಂಬಲಿಸಲು ಶುರುಮಾಡಿದ. ಅವನು ಬಹಳವಾಗಿ ಅನ್ಯಮನಸ್ಕನಾಗಿದ್ದ. ಅವನು ಕಿವಿಗೆ ಹಾಕಿಕೊಳ್ಳದೆ ಕೇಳಿಸಿಕೊಳ್ಳತ್ತಿದ್ದಾನೆ ಮತ್ತು ತಲೆಗೆ ಹಾಕಿಕೊಳ್ಳದೆ ನೋಡುತ್ತಿದ್ದಾನೆ ಅನ್ನಿಸುತ್ತಿತ್ತು; ಇದ್ದಕ್ಕಿದ್ದಂತೆ ನಕ್ಕುಬಿಡುತ್ತಿದ್ದ, ಸ್ಪಷ್ಟವಾಗಿ ಯಾವುದಕ್ಕೆ ನಕ್ಕೆ ಎನ್ನುವುದೂ ತಿಳಿಯದೆ.

“ದಯವಿಟ್ಟು ಕ್ಷಮಿಸು” ಕೆಂಪು ಮೂಗಿನ ಮನುಷ್ಯ ಗಂಟನ್ನು ತಂದಿದ್ದ ಯುವಕನಿಗೆ ಇದ್ದಕ್ಕಿದ್ದಂತೆ ಕೇಳಿದ, “ನಾನೀಗ ಯಾರ ಬಳಿ ಮಾತನಾಡಿ ಗೌರವಾನ್ವಿತನಾಗುತ್ತಿದ್ದೇನೆ?”

“ಪ್ರಿನ್ಸ್ ಲೆಫ್ ನಿಕೊಲಾವಿಚ್ ಮೂಯಿಶ್ಕಿನ್” ಅವನು ಉತ್ತರವನ್ನ ಕೊಡಲು ತಯಾರಾಗಿರುವವನಂತೆ ಉತ್ತರಿಸಿದ.

(ಕನ್ನಡಕ್ಕೆ): ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ದಾಸ್ತೋವಸ್ಕಿಯ ’ಕರಮಜೋವ್ ಸಹೋದರರು’ಅನ್ನು ಅನುವದಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...