Homeಮುಖಪುಟಸುಪ್ರೀಂ ಕೋರ್ಟ್‌ನ ಕೊಲಿಜಿಯಂ: ನಿರಂತರ ಚರ್ಚೆಗಳ ಒಳಹೊರಗೆ

ಸುಪ್ರೀಂ ಕೋರ್ಟ್‌ನ ಕೊಲಿಜಿಯಂ: ನಿರಂತರ ಚರ್ಚೆಗಳ ಒಳಹೊರಗೆ

- Advertisement -
- Advertisement -

ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಹತ್ತಿರದಿಂದ ಬಲ್ಲವರಿಗೆ ಅಥವಾ ಕಳೆದ ಕೆಲ ದಶಕಗಳಿಂದ ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರಿಗೆ ಆಗಾಗ ಕೆಲವೊಂದು ಪ್ರಶ್ನೆಗಳು ಅಥವಾ ಕುತೂಹಲಗಳು ಮೂಡುತ್ತವೆ; ಅವು ಗೊಂದಲವನ್ನೂ ಮೂಡಿಸುತ್ತವೆ. ಅದರಲ್ಲಿ ಮುಖ್ಯವಾದದ್ದು ಈ ಕೊಲಿಜಿಯಂ ಎಂಬ ಪ್ರಕ್ರಿಯೆಯದ್ದು. ಅದರ ರಚನೆ, ಪ್ರಸ್ತುತತೆ ಎಲ್ಲವೂ ಗೊಂದಲಮಯವೇ. ಪ್ರತಿಯೊಂದು ಬಾರಿ ಕೊಲಿಜಿಯಂ ಪದ್ಧತಿಯ ಮೇಲೆ ಮತ್ತು ಪರೋಕ್ಷವಾಗಿ ನ್ಯಾಯಮೂರ್ತಿಗಳ ಆಯ್ಕೆಯ ಬಗ್ಗೆ ಜಿಜ್ಞಾಸೆಗಳು ಬಂದಾಗ ಅಥವಾ ನ್ಯಾಯಾಂಗದ ಮೇಲೆ ಶಾಸಕಾಂಗ ಅಥವಾ ಕಾರ್ಯಾಂಗಗಳು ಹೆಚ್ಚು ಹಸ್ತಕ್ಷೇಪ ನಡೆಸಿದಾಗ ಜನರ ಈ ಗೊಂದಲ ಇನ್ನೂ ತೀವ್ರವಾಗುತ್ತದೆ.

ಕೊಲಿಜಿಯಂ ಎಂದರೆ ಸರಳ ಅರ್ಥದಲ್ಲಿ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಅಥವಾ ವರ್ಗಾವಣೆ ಮಾಡಲು ಚಾಲ್ತಿಯಲ್ಲಿರುವ ಒಂದು ಪ್ರಕ್ರಿಯೆ. ಇದು ಕಾಲಕಾಲಕ್ಕೆ ತಾನೇ ತನ್ನ ಕೆಲವೊಂದು ತೀರ್ಮಾನಗಳ ಮೂಲಕ ಹುಟ್ಟುಹಾಕಿದ ಒಂದು ವ್ಯವಸ್ಥೆ. ಇದಕ್ಕೆ ಯಾವ ಕಾಯ್ದೆ, ಕಾನೂನುಗಳ ಅಡಿಪಾಯವಿಲ್ಲ ಮತ್ತು ಸಂವಿಧಾನದಲ್ಲಿ ಇದರ ಪ್ರಸ್ತಾಪವೂ ಇಲ್ಲ. ಆದರೆ, ಸಂವಿಧಾನ ಈ ವಿಷಯದಲ್ಲಿ ಸಂಕುಚಿತವಾಗಿಯೂ ಇಲ್ಲ. ಹಾಗೆ ನೋಡಿದರೆ, ಸಂವಿಧಾನದಲ್ಲಿ ’ಬಜೆಟ್’ ಎಂಬ ಶಬ್ದವೂ ಇಲ್ಲ. ಆದರೂ, ದಶಕಗಳಿಂದ ನಿರಂತರ ಬಜೆಟ್ ಮಂಡನೆ ಆಗುತ್ತಿರುವ ಹಾಗೆಯೇ ಕೊಲಿಜಿಯಂನ ಅಸ್ತಿತ್ವವೂ ಕೂಡ ಇದೆ.

ಕಿರಣ್ ರಿಜಿಜು

ಇತ್ತೀಚೆಗೆ ಕೇಂದ್ರ ಕಾನೂನು ಮಂತ್ರಿ ಕಿರಣ್ ರಿಜಿಜು ಅವರು “ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯ ಬಗ್ಗೆ ಕೆಲವು ಪ್ರಶ್ನೆಗಳು ಇರುವ ಕಾರಣ ಕೊಲಿಜಿಯಂ ಪದ್ಧತಿಯ ಬಗ್ಗೆ ಮರುಚಿಂತನೆ ಮಾಡುವ ಅಗತ್ಯವಿದೆ” ಎಂದು ಹೇಳಿ ಮತ್ತೆ ಚರ್ಚೆಯ ಕಿಡಿ ಹಾರಿಸಿದರು. ಅಷ್ಟೇ ಅಲ್ಲದೇ, ’ಈ ಪದ್ಧತಿಯಲ್ಲಿ ಲೋಪದೋಷಗಳಿವೆ ಎಂಬುದು ಎಲ್ಲರಿಗೂ ಗೊತ್ತು; ಇದು ಅನೇಕ ತೊಂದರೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಇದನ್ನು ಬದಲಾಯಿಸಬೇಕು. ನ್ಯಾಯಮೂರ್ತಿಗಳ ಆಯ್ಕೆ ಮತ್ತು ನೇಮಕಾತಿಯಲ್ಲಿ ಹೆಚ್ಚಿನ ಮತ್ತು ಅನಗತ್ಯ ವಿಳಂಬ ಕೊಲಿಜಿಯಂನಿಂದ ಆಗುತ್ತಿದೆ’ ಎಂದು ನ್ಯಾಯಾಂಗದ ಮೇಲೆ ನೇರ ದಾಳಿ ನಡೆಸಿದ್ದಾರೆ.

ಈ ತರಹದ ದಾಳಿಗಳು ನ್ಯಾಯಾಂಗದ ಮೇಲೆ ಇದೇ ಮೊದಲೇನಲ್ಲ. ನ್ಯಾಯಾಂಗವನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವ ಕಾರ್ಯಾಂಗದ ಈ ನಿರಂತರ ಪ್ರಯತ್ನ ಇತಿಹಾಸದುದ್ದಕ್ಕೂ ನೋಡಲು ಸಿಗುತ್ತದೆ. ಆದರೆ, ಅಷ್ಟೇ ಬಲಿಷ್ಠವಾಗಿ ನ್ಯಾಯಾಂಗ ಇದನ್ನು ವಿರೋಧಿಸುತ್ತಾ ಬಂದಿದ್ದು, ತನ್ನ ಸ್ವಾಯತ್ತತೆಯನ್ನು ಕಾಯ್ದುಕೊಳ್ಳಲು ಕಾಲಕಾಲಕ್ಕೆ ಅನೇಕ ಸಂವಿಧಾನ ಪೀಠಗಳನ್ನು ರಚಿಸಿ ತೀರ್ಪುಗಳನ್ನು ನೀಡಿದೆ.

ಸಂವಿಧಾನದಲ್ಲಿ ಏನಿದೆ?

ಸಂವಿಧಾನದ 124ನೇ ಅನುಚ್ಛೇದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ನೇಮಕದ ಬಗ್ಗೆ ಹೇಳುತ್ತದೆ. ಅದರ ಪ್ರಕಾರ ದೇಶದ ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಸಲಹೆಯ ಜೊತೆಗೆ, ಪ್ರತಿ ನೇಮಕಾತಿಯಲ್ಲಿ ಸುಪ್ರೀಂ ಕೋರ್ಟಿನ ಮತ್ತು ಹೈಕೋರ್ಟಿನ ನ್ಯಾಯಮೂರ್ತಿಗಳನ್ನು ಸಂಪರ್ಕಿಸಿ ತೀರ್ಮಾನ ತೆಗೆದುಕೊಳ್ಳಬೇಕು.

ಅದೇ ರೀತಿ, 217ನೇ ಅನುಚ್ಛೇದದ ಅಡಿಯಲ್ಲಿ ಹೈಕೋರ್ಟಿನ ನ್ಯಾಯಮೂರ್ತಿಗಳ ನೇಮಕದ ಸಂದರ್ಭದಲ್ಲಿ ಮೇಲೆ ಹೇಳಿದವರಲ್ಲದೇ ಆಯಾ ರಾಜ್ಯದ ರಾಜ್ಯಪಾಲರನ್ನು ಸಂಪರ್ಕಿಸಬೇಕು.

ಇದನ್ನೂ ಓದಿ: ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಕೊಲಿಜಿಯಂ ವ್ಯವಸ್ಥೆ ಅತ್ಯಗತ್ಯ: ನಿವೃತ್ತ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್

ಸಂವಿಧಾನದಲ್ಲಿ ಎಲ್ಲಿಯೂ ಎಷ್ಟು ಜನ ನ್ಯಾಯಮೂರ್ತಿಗಳನ್ನು ಸಂಪರ್ಕಿಸಬೇಕು, ಹೇಗೆ ಸಲಹೆ ಪಡೆಯಬೇಕು ಎಂಬ ಬಗ್ಗೆ ವಿವರಗಳಿಲ್ಲ. ಬಹುಶಃ ಅಂದು ನ್ಯಾಯಾಂಗದಂತಹ ಒಂದು ದಕ್ಷ, ಸ್ವಾಯತ್ತ ಅಂಗದ ಬಗ್ಗೆ ಚರ್ಚಿಸುವಾಗ ಅದರ ಪ್ರಬುದ್ಧತೆಗೆ ಕಡಿವಾಣ ಹಾಕುವುದು ಬೇಡ ಎಂದುಕೊಂಡಿರಬಹುದು. ಸಂವಿಧಾನವನ್ನೇ ಅರ್ಥೈಸುವ ಕೆಲಸವನ್ನು ನ್ಯಾಯಾಂಗ ಮಾಡಬೇಕಾದರೆ, ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ಅದರ ವಿವೇಚನೆಗೆ ಬಿಟ್ಟಿದ್ದು. ಇದು ಯಾವುದೋ ಅಚಾತುರ್ಯದಿಂದ ಅಥವಾ ಕಣ್‌ತಪ್ಪಿನಿಂದಾಗಿದ್ದಲ್ಲ ಎಂಬುದು ಅನೇಕರ ಅಭಿಮತ.

ಕೊಲಿಜಿಯಂ ಬೆಳೆದು ಬಂದದ್ದು ಅನೇಕ ಸುಪ್ರೀಂ ಕೋರ್ಟಿನ ತೀರ್ಪುಗಳು ಹಾಗೂ ನಿರ್ಧಾರಗಳಿಂದ; ಅವುಗಳನ್ನು ಮೂರು ಪ್ರಮುಖ ತೀರ್ಪುಗಳಲ್ಲಿ ಕಾಣಬಹುದು:

1. ಎಸ್‌ಪಿ ಗುಪ್ತಾ ಕೇಸ್, 1981: ಈ ತೀರ್ಪಿನ ಪ್ರಕಾರ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ನೇಮಕಾತಿಯ ಬಗ್ಗೆ ರಾಷ್ಟ್ರಪತಿಗೆ ನೀಡುವ ಶಿಫಾರಸ್ಸುಗಳನ್ನು ರಾಷ್ಟ್ರಪತಿಗಳು ತಿರಸ್ಕರಿಸಬಹುದು. ಈ ತೀರ್ಪಿನಲ್ಲಿ ಕಾರ್ಯಾಂಗಕ್ಕೆ ಹೆಚ್ಚಿನ ಅಧಿಕಾರವನ್ನು ವರ್ಗಾಯಿಸಿದ್ದರಿಂದ ಮುಂದಿನ ಒಂದು ದಶಕಕ್ಕೂ ಅಧಿಕ ಕಾಲ ನೇಮಕಾತಿ ಕಾರ್ಯಾಂಗದ ಅಧೀನದಲ್ಲಿತ್ತು.

2. ಅಡ್ವೋಕೇಟ್ ಆನ್ ರೆಕಾರ್ಡ್ ಅಸೋಸಿಯೇಷನ್ ವರ್ಸಸ್ ಭಾರತ ಒಕ್ಕೂಟ, 1993: ಈ ಕೇಸಿನಲ್ಲಿ 9 ಜನ ನ್ಯಾಯಮೂರ್ತಿಗಳ ಸಂವಿಧಾನ ಪೀಠ, ಜಸ್ಟಿಸ್ ಜೆಎಸ್ ವರ್ಮಾ ಅವರ ಬಹುಸಂಖ್ಯಾತ ತೀರ್ಪಿನಂತೆ ನೇಮಕಾತಿಯ ಪ್ರಮುಖ ಜವಾಬ್ದಾರಿ ಹಾಗೂ ಪ್ರಾಮುಖ್ಯತೆಯನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾಯಿಸಿತು. ಮತ್ತು ಮುಖ್ಯ ನ್ಯಾಯಮೂರ್ತಿಗಳ ತೀರ್ಮಾನವೇ ಮುಖ್ಯ ಎಂದು ಕಾರ್ಯಾಂಗದಿಂದ ಜವಾಬ್ದಾರಿ ವಾಪಸ್ಸು ಪಡೆಯಿತು. ಆದರೆ, ಈ ಹಂತದಲ್ಲಿ ಉಳಿದ ನ್ಯಾಯಮೂರ್ತಿಗಳ ಪಾತ್ರವನ್ನು ಇದು ನಗಣ್ಯವಾಗಿಸಿತ್ತು. ಈ ತೀರ್ಮಾನಕ್ಕೆ ಅದೇ ಪೀಠದಲ್ಲಿದ್ದ ನ್ಯಾಯಮೂರ್ತಿಗಳ ವಿರೋಧವೂ ವ್ಯಕ್ತವಾಗಿತ್ತು.

3. 1998ರಲ್ಲಿ ರಾಷ್ಟ್ರಪತಿ ಕೆ ಆರ್ ನಾರಾಯಣ್ ಅವರು ಸುಪ್ರೀಂ ಕೋರ್ಟಿಗೆ ಒಂದು ಸಮಜಾಯಿಷಿ ಕೋರಿ ಪತ್ರ ಬರೆದರು. ಅದರಲ್ಲಿ ಸಂವಿಧಾನದ 124, 217 ಮತ್ತು 222 ಅನುಚ್ಛೇದದ ಪ್ರಕಾರ ಸಲಹೆ ಪಡೆಯುವುದು ಅಂದರೆ ಏನು? ಮುಖ್ಯ ನ್ಯಾಯಮೂರ್ತಿ ಒಂದು ತೀರ್ಮಾನಕ್ಕೆ ಬರುವಂತೆ ಸಲಹೆ ನೀಡಿ ಅವರಿಗೆ ತೀರ್ಮಾನ ಕೈಗೊಳ್ಳಲು ಸಹಾಯ ಮಾಡುವುದೋ ಅಥವಾ ಕೇವಲ ಮುಖ್ಯ ನ್ಯಾಯಮೂರ್ತಿಗಳ ಏಕಾಂಗಿ ನಿರ್ಧಾರಕ್ಕೆ ತಕ್ಕಂತೆ ಅರ್ಥೈಸಬಹುದೋ ಎಂಬ ಪ್ರಶ್ನೆಗಳನ್ನು ಹಾಕಿದ್ದರು. ಇದೇ ಸಮಯದಲ್ಲಿ ಮತ್ತೊಂದು ತೀರ್ಪು ಕೂಡ ಬಂದು ವಿವರಣೆ ಮತ್ತು ಅರ್ಥೈಸುವಿಕೆ ಅಗತ್ಯಗಳು ಬಹಳ ಹೆಚ್ಚಾಗಿದ್ದವು. ಹೀಗಾಗಿ ಸುಪ್ರೀಂ ಕೋರ್ಟ್ ಕೆಲವು ಮಾರ್ಗದರ್ಶಿಗಳನ್ನು ತಯಾರಿಸಿತು. ಅವುಗಳಲ್ಲಿ ಪ್ರಮುಖವಾಗಿ ಮುಖ್ಯ ನ್ಯಾಯಮೂರ್ತಿಯ ವೈಯಕ್ತಿಕ ಅಭಿಪ್ರಾಯಕ್ಕಿಂತ ಒಪ್ಪಿತ ತೀರ್ಮಾನಕ್ಕೆ ಪ್ರಾಶಸ್ತ್ಯವನ್ನು ನೀಡಲಾಯಿತು.

ಆ ಮಾರ್ಗದರ್ಶಿ ಸೂತ್ರಗಳಲ್ಲಿ ಪ್ರಮುಖವಾದವು:

* ಮುಖ್ಯ ನ್ಯಾಯಮೂರ್ತಿಗಳು ಮಾಡುವ ಶಿಫಾರಸ್ಸುಗಳು ಸುಪ್ರೀಂ ಕೋರ್ಟಿನ ಇತರ ಇಬ್ಬರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳ ಸಲಹೆಯ ಮೇರೆಗೆ ತೆಗೆದುಕೊಂಡಿದ್ದಾಗಿರಬೇಕು.

* ಅಕಸ್ಮಾತ್ ಸೇವಾ ಹಿರಿತನವನ್ನು ಕಡೆಗಣಿಸಿ ಯಾರಿಗಾದರೂ ಮುಂಚೂಣಿಗೆ ತರುವ ನಿರ್ಧಾರ ಕೈಗೊಂಡಿದ್ದರೆ, ಅದಕ್ಕೆ ಅತ್ಯಂತ ಬಲಿಷ್ಠ ಕಾರಣಗಳನ್ನು ನೀಡಬೇಕು. ಸಂಪರ್ಕಿಸಿದ ಮತ್ತು ಸಲಹೆಯ ಎಲ್ಲ ವಿವರಗಳು ಬರವಣಿಗೆಯಲ್ಲಿ ಇರಬೇಕು ಇತ್ಯಾದಿ.

ಈ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವ ಜನರನ್ನೆಲ್ಲ ಸೇರಿಸಿ ಕೊಲಿಜಿಯಂ ರಚನೆ ಆಗುತ್ತದೆ. ಹಾಗಾದರೆ, ಆಗಾಗ ಅದರ ವಿರುದ್ಧ ಅಪಸ್ವರಗಳು ಏಳಲು ಕಾರಣಗಳೇನು?

* ನ್ಯಾಯಾಂಗದಲ್ಲಿ ನೇಮಕಾತಿ ಮತ್ತು ವರ್ಗಾವಣೆಗಳನ್ನು ನೋಡಿಕೊಳ್ಳಲು ಒಂದು ಪ್ರತ್ಯೇಕ ವ್ಯವಸ್ಥೆ ಇಲ್ಲ. ಆದ್ದರಿಂದ, ಇದು ಹೆಚ್ಚಿನ ಜವಾಬ್ದಾರಿ ಆಗಿ ನ್ಯಾಯದಾನ ವ್ಯವಸ್ಥೆಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.

* ಇದೊಂದು ಪಾರದರ್ಶಕವಲ್ಲದ ಪ್ರಕ್ರಿಯೆ ಆಗಿರುವುದರಿಂದ ಹೆಚ್ಚಿನ ಪಕ್ಷಪಾತಕ್ಕೆ ಅವಕಾಶ ಉಂಟಾಗುತ್ತದೆ.

* ಪ್ರತಿ ರಾಜ್ಯಗಳಿಂದ ಕೆಲ ಹಿರಿಯ ನ್ಯಾಯಮೂರ್ತಿಗಳು ಆಯ್ಕೆಯಾಗುವುದರಿಂದ ಪ್ರತಿಭಾಶಾಲಿಯಾದ ಕೆಲವು ಕಿರಿಯ ನ್ಯಾಯಮೂರ್ತಿಗಳು ಅವಕಾಶವಂಚಿತರಾಗುತ್ತಾರೆ ಎಂಬುದು.

ಇದೇ ಹಿನ್ನೆಲೆಯಲ್ಲಿ 214ನೇ ಕಾನೂನು ಆಯೋಗ ಸಲ್ಲಿಸಿದ ವರದಿಯಲ್ಲಿ ಈ ಮೊದಲು ಹೇಳಿದ ತೀರ್ಮಾನಗಳನ್ನು ಪುನಃ ಪರಿಶೀಲಿಸುವಂತೆ ಮತ್ತು ಕಾರ್ಯಾಂಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವಂತೆ ಹೇಳಲಾಗಿದೆ.

ಯು.ಯು ಲಲಿತ್

2003ರಲ್ಲಿ ಎನ್‌ಡಿಎ ಸರ್ಕಾರ ಬಂದಾಗ ಸಂವಿಧಾನದ 98ನೇ ತಿದ್ದುಪಡಿ ಮಸೂದೆಯನ್ನು ಮಂಡಿಸಿ, ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯನ್ನು ರಚಿಸುವ ಪ್ರಸ್ತಾಪ ಮಾಡಲಾಯಿತು. ಈ ಪ್ರಕ್ರಿಯೆಯಲ್ಲಿ ಕಾನೂನು ಮಂತ್ರಿಗಳ ಜೊತೆಗೆ ಕೆಲವು ಪ್ರತಿಷ್ಠಿತ ನಾಗರಿಕರು ಸೇರಬೇಕು ಎಂದು ಹೇಳಲಾಗಿತ್ತು. ಆದರೆ, ಇದಕ್ಕೆ ತೀವ್ರವಾದ ವಿರೋಧಗಳು ಬಂದಿದ್ದರಿಂದ ಅದು ಅಲ್ಲಿಗೆ ಕೊನೆಯಾಗಿತ್ತು. ಆದರೆ, ನ್ಯಾಯಾಂಗದ ಸ್ವಾಯತ್ತತೆಯ ಮೇಲೆ ಆಕ್ರಮಣಗಳು ಮಾತ್ರ ಇಂದಿಗೂ ನಿಂತಿಲ್ಲ.

ಕೆಲವು ವರ್ಷಗಳ ಹಿಂದೆ 5 ಜನ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿ ನ್ಯಾಯಾಂಗದಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಉಂಟಾಗುತ್ತಿರುವ ತೊಂದರೆಗಳ ಬಗ್ಗೆ ಹೇಳಿದ್ದರು. ಭಾರತದ ನ್ಯಾಯಾಂಗ ಇತಿಹಾಸದಲ್ಲೇ ಇದೊಂದು ವಿರಳ ಘಟನೆ. ಆದರೆ, ಅದರ ತೀವ್ರತೆಯನ್ನು ಗ್ರಹಿಸುವಲ್ಲಿ ಬಹಳ ಜನ ವಿಫಲರಾದರು. ಈಗ ಕಾನೂನು ಮಂತ್ರಿ ಕಿರಣ್ ರಿಜಿಜು ಅವರು ನೀಡಿರುವ ಹೇಳಿಕೆ ಮತ್ತದೇ ಹಳೆ ಪ್ರಯತ್ನದ ಮುಂದುವರಿದ ಭಾಗವಾಗಿ ಕಾಣುತ್ತಿದೆ.

ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಮೂರ್ತಿಗಳಾದ ಲೋಕುರ್ ಮತ್ತು ದೀಪಕ್ ಗುಪ್ತಾ ಅವರು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ, ತಮ್ಮ ಆತಂಕಗಳು ಹಾಗೂ ನ್ಯಾಯಾಂಗದ ಮುಂದಿನ ಸವಾಲುಗಳನ್ನು ಬಿಡಿಸಿಟ್ಟಿದ್ದಾರೆ.

ಇದನ್ನೂ ಓದಿ: ಕೊಲಿಜಿಯಂ ಶಿಫಾರಸು: ಕೇಂದ್ರ ಸರ್ಕಾರ ನಿರ್ಲಕ್ಷ್ಯ

ಅವರ ಪ್ರಕಾರ ಕೊಲಿಜಿಯಂ ಪದ್ಧತಿಯಲ್ಲಿ ಕೆಲವು ನ್ಯೂನತೆಗಳಿವೆ; ಅವನ್ನು ಸರಿಪಡಿಸುವ ಮತ್ತು ಬಲಪಡಿಸುವ ಪ್ರಯತ್ನಗಳಾಗಬೇಕೇ ಹೊರತಾಗಿ ಅದನ್ನು ತೆಗೆದುಹಾಕುವ ಅವಾಂತರದ ತೀರ್ಮಾನಗಳು ಆಗಬಾರದು. ಮುಂದುವರಿದು ಹೇಳುತ್ತಾ, ಅವರು ಹೇಗೆ ಸರ್ಕಾರ ನ್ಯಾಯಾಂಗದ ಶಿಫಾರಸುಗಳನ್ನು ಕಡೆಗಣಿಸುತ್ತಿದೆ; ಮತ್ತು ಪರೋಕ್ಷವಾಗಿ ತನ್ನ ನಿರ್ಧಾರಗಳನ್ನು ಹೇರುತ್ತಿದೆ. ಇದು ಹೀಗೆಯೇ ಮುಂದುವರಿದರೆ ನ್ಯಾಯಾಂಗಕ್ಕೆ ಹೇಗೆ ಮಾರಕವಾಗುತ್ತದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ನಿವೃತ್ತಿ ಹೊಂದಿದ ಮುಖ್ಯ ನ್ಯಾಯಮೂರ್ತಿ ಯು.ಯು ಲಲಿತ್ ಅವರು ತಮ್ಮ ಅತ್ಯಂತ ಅಲ್ಪ ಅವಧಿಯ ಅಧಿಕಾರದಲ್ಲಿಯೂ ತೆಗೆದುಕೊಂಡ ಕೆಲವು ದಿಟ್ಟ ನಿರ್ಧಾರಗಳು ಮುಂದಿನ ನ್ಯಾಯಮೂರ್ತಿಗಳಿಗೆ ಒಂದು ಮಾರ್ಗದರ್ಶನದಂತಿವೆ. ಲಲಿತ್ ಅವರು ಕೊಲಿಜಿಯಂಗೆ ಸದ್ಯಕ್ಕೆ ಪರ್ಯಾಯವಿಲ್ಲ. ಇದು ಒಂದು ಒಳ್ಳೆಯ ವ್ಯವಸ್ಥೆ. ಕೆಲವು ಬದಲಾವಣೆಗಳೊಂದಿಗೆ ಇದನ್ನು ಉಳಿಸಿಕೊಳ್ಳಬೇಕು ಎಂದಿದ್ದಾರೆ.

ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯಿಂದಾಗಿ ದೇಶದಲ್ಲಿ ಎಷ್ಟೋ ಪ್ರಗತಿಪರ ತೀರ್ಪುಗಳು ಹೊರಬಿದ್ದು ನಾಗರಿಕರ ಹಕ್ಕುಗಳ ರಕ್ಷಣೆ ಸಾಧ್ಯವಾಗುತ್ತಿವೆ. ಸರಿಯಾದ ಪರಾಮರ್ಶೆಯಿಲ್ಲದೇ, ಮುನ್ನೋಟಗಳಿಲ್ಲದೇ ನ್ಯಾಯಾಂಗದ ಮೇಲೆ ನಡೆಯುತ್ತಿರುವ ಪ್ರಹಾರಗಳು ಇಡೀ ವ್ಯವಸ್ಥೆಗೆ ಮಾರಕವಾಗುತ್ತವೆ. ಈ ನಿಟ್ಟಿನಲ್ಲಿ ಕಿರಣ್ ರಿಜಿಜು ಅವರ ಹೇಳಿಕೆ ದುರದೃಷ್ಟಕರವಾದದ್ದು.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...