“ಕ್ರಾಂತಿಕಾರಿ ಗುಣಸ್ವಭಾವ”ದ ಪರಿಕಲ್ಪನೆಯೇ ಒಂದು ರಾಜಕೀಯ-ಮನಃಶಾಸ್ತ್ರೀಯ ಪರಿಕಲ್ಪನೆ. ಈ ರೀತಿಯಲ್ಲಿ ಅದು ಮನಃಶಾಸ್ತ್ರಕ್ಕೆ ಮೂವತ್ತು ವರ್ಷಗಳ ಹಿಂದಷ್ಟೇ (ಈ ಪ್ರಬಂಧ ಪ್ರಕಟವಾಗಿದ್ದು 1960ರ ಸುಮಾರಿನಲ್ಲಿ, ಅದಕ್ಕೆ ಹೋಲಿಸಲಾಗಿದೆ) ಸೇರಿಸಲಾದ ಸರ್ವಾಧಿಕಾರಿ ಗುಣಸ್ವಭಾವದ ಪರಿಕಲ್ಪನೆಯನ್ನು ಹೋಲುತ್ತದೆ. ಸರಕಾರ ಮತ್ತು ಕುಟುಂಬದಲ್ಲಿ ಸರ್ವಾಧಿಕಾರಿ ಪ್ರವೃತ್ತಿಯ ರಾಜಕೀಯ ವಿಭಾಗದ ಜೊತೆಗೆ, ಒಂದು ರಾಜಕೀಯ ಮತ್ತು ಸಾಮಾಜಿಕ ಸಂರಚನೆಗೆ ತಳಹದಿಯನ್ನು ಒದಗಿಸುವ ಮನಃಶಾಸ್ತ್ರೀಯ ವಿಭಾಗವನ್ನು ಸರ್ವಾಧಿಕಾರಿ ಗುಣಸ್ವಭಾವ ಸೇರಿಸಿಕೊಳ್ಳುತ್ತದೆ.
ಸರ್ವಾಧಿಕಾರಿ ಗುಣಸ್ವಭಾವದ ಪರಿಕಲ್ಪನೆಯು ನಿರ್ದಿಷ್ಟವಾದ ರಾಜಕೀಯ ಹಿತಾಸಕ್ತಿಯಿಂದ ಹುಟ್ಟಿಕೊಂಡಿತು: 1930ರ ಸುತ್ತಮುತ್ತ ನಾವು ಜರ್ಮನಿಯಲ್ಲಿ ಬಹುಸಂಖ್ಯಾತ ಜನಸಮೂಹದಿಂದ ಹಿಟ್ಲರನನ್ನು ಸೋಲುವ ಪ್ರಮೇಯ ಎಷ್ಟು ಇದೆ ಎಂದು ಅಂದಾಜು ಮಾಡಲು ಬಯಸಿದ್ದೆವು (1). 1930ರಲ್ಲಿ ಜರ್ಮನಿಯ ಬಹುಸಂಖ್ಯಾತ ಜರ್ಮನಿಯ ಜನತೆ, ವಿಶೇಷವಾಗಿ ಕಾರ್ಮಿಕರು ಮತ್ತು ಉಳಿದ ನೌಕರರು ನಾಝಿವಾದಕ್ಕೆ ವಿರೋಧವಾಗಿ ಇದ್ದರು. ರಾಜಕೀಯ ಚುನಾವಣೆಗಳು ಮತ್ತು ಕಾರ್ಮಿಕ ಸಂಘಟನೆಗಳ ಚುನಾವಣೆಗಳು ತೋರಿಸಿಕೊಟ್ಟಂತೆ ಈ ಬಹುಸಂಖ್ಯಾತರು ಪ್ರಜಾಪ್ರಭುತ್ವದ ಪರವಾಗಿ ಇದ್ದರು.
ಆದರೆ, ಪ್ರಶ್ನೆ ಏನಾಗಿತ್ತು ಎಂದರೆ, ಅವರು ತಮ್ಮ ವಿಚಾರಗಳಿಗಾಗಿ ಹೋರಾಟ ಮಾಡಬೇಕಾಗಿ ಬಂದರೆ, ಹೋರಾಟ ಮಾಡುವರೆ ಎಂಬುದು. ಒಂದು ಅಭಿಪ್ರಾಯವನ್ನು ಹೊಂದಿರುವುದು ಬೇರೆ ಮತ್ತು ತಮ್ಮ ವಿಚಾರಗಳ ಬಗ್ಗೆ ದೃಢಸಂಕಲ್ಪ ಹೊಂದಿರುವುದು ಬೇರೆಯೇ ವಿಷಯ ಎಂಬುದು ಅದರ ತಳಹದಿಯಾಗಿತ್ತು. ಅಥವಾ ಇದನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಒಂದು ವಿದೇಶಿ ಭಾಷೆಯನ್ನು ಅಥವಾ ಆಚರಣೆಯನ್ನು ಯಾರು ಬೇಕಾದರೂ ಕಲಿಯಬಹುದಾದಂತೆ ಯಾರು ಬೇಕಾದರೂ ಯಾವುದೇ ಒಂದು ಅಭಿಪ್ರಾಯವನ್ನು ಹೊಂದಬಹುದು; ಆದರೆ, ಒಬ್ಬ ವ್ಯಕ್ತಿಯ ಗುಣಸ್ವಭಾವದ ಸಂರಚನೆಯಲ್ಲಿ ಬೇರೂರಿರುವ ಅಭಿಪ್ರಾಯಗಳು ಮಾತ್ರವೇ, ಆ ಗುಣಸ್ವಭಾವದ ಮಹಾಶಕ್ತಿಯನ್ನು ಹೊಂದಿದ್ದು, ಆ ಅಭಿಪ್ರಾಯಗಳು ಮಾತ್ರ ದೃಢನಂಬಿಕೆಯಾಗುತ್ತವೆ. ಬಹುಸಂಖ್ಯಾತರು ಪ್ರತಿಪಾದಿಸುವಾಗ, ವಿಚಾರಗಳ ಪರಿಣಾಮವನ್ನು ಒಪ್ಪಿಕೊಳ್ಳುವುದು ಸುಲಭವಾಗಿದ್ದರೂ, ಅದು ನಿರ್ಣಾಯಕ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯ ಗುಣಸ್ವಭಾವದ ಸಂರಚನೆಯ ಮೇಲೆ ಬಹಳ ಮಟ್ಟಿಗೆ ಆಧರಿಸಿರುತ್ತದೆ.
ಹೆರಾಕ್ಲಿಟಸ್ ಹೇಳಿದಂತೆ ಮತ್ತು ಫ್ರಾಯ್ಡ್ ನಿರೂಪಿಸಿದಂತೆ, ಗುಣಸ್ವಭಾವವೇ ಮನುಷ್ಯನ ಭವಿಷ್ಯವಾಗಿದೆ. ಈ ಗುಣಸ್ವಭಾವವೇ ಒಬ್ಬ ಮನುಷ್ಯ ಯಾವ ಬಗೆಯ ವಿಚಾರವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಎಂಬುದನ್ನು ನಿರ್ಧರಿಸುತ್ತದೆ. ಮತ್ತು ಆತ ಆಯ್ಕೆ ಮಾಡಿಕೊಂಡ ವಿಚಾರದ ಹಿಂದಿರುವ ಬಲವನ್ನೂ ನಿರ್ಧರಿಸುತ್ತದೆ. ಫ್ರಾಯ್ಡ್‌ನ ಗುಣಸ್ವಭಾವದ ಪರಿಕಲ್ಪನೆಯಲ್ಲಿ ಇದು ನಿಜವಾಗಿಯೂ ಬಹಳ ಮಹತ್ವದ್ದಾಗಿದ್ದು, ಗುಣಸ್ವಭಾವದ ಸಾಂಪ್ರದಾಯಿಕ ಪರಿಕಲ್ಪನೆಯನ್ನು ಮೀರಿ ಬೆಳೆಯುತ್ತದೆ ಮತ್ತು ಒಬ್ಬ ಮನುಷ್ಯನು ನಿರ್ದಿಷ್ಟವಾದ ರೀತಿಯಲ್ಲಿ ಮಾತ್ರ ಚಿಂತಿಸುವುದು ಮಾತ್ರವಲ್ಲದೆ, ಆತನ ಮೂಲ ಚಿಂತನೆ ಆತನ ಒಲವುಗಳು ಮತ್ತು ಭಾವನೆಗಳ ಮೇಲೆ ಆಧರಿತವಾಗಿರುವ ಚಲನಶೀಲ ನಡವಳಿಕೆಯ ಕುರಿತು ಮಾತನಾಡುತ್ತದೆ.
ಆ ಸಮಯದಲ್ಲಿ ನಾವು ಕೇಳಿದ್ದ ಪ್ರಶ್ನೆ ಎಂದರೆ: ನಾಝಿವಾದದ ಸರ್ವಾಧಿಕಾರಿ ಕಲ್ಪನೆಗೆ ವಿರುದ್ಧವಾಗಿ ಜರ್ಮನ್ ಕಾರ್ಮಿಕರು ಮತ್ತು ಉಳಿದ ನೌಕರರು ಎಷ್ಟರಮಟ್ಟಿನ ಗುಣಸ್ವಭಾವದ ಸಂರಚನೆಯನ್ನು ಹೊಂದಿದ್ದಾರೆ? ಇದು ಇನ್ನೊಂದು ಪ್ರಶ್ನೆಯನ್ನೂ ಒಳಗೊಂಡಿದೆ: ನಿರ್ಣಾಯಕ ಕಾಲದಲ್ಲಿ ಜರ್ಮನ್ ಕಾರ್ಮಿಕರು ಮತ್ತು ಉಳಿದ ನೌಕರರು ಎಷ್ಟರಮಟ್ಟಿಗೆ ನಾಝಿವಾದದ ವಿರುದ್ಧ ಹೋರಾಡುತ್ತಾರೆ?
ಈ ಕುರಿತು ಒಂದು ಅಧ್ಯಾಯವನ್ನು ಮಾಡಲಾಯಿತು. ಅದರ ಫಲಿತಾಂಶ ಎಂದರೆ, ಹೆಚ್ಚುಕಡಿಮೆ 10 ಶೇಕಡ ಜರ್ಮನ್ ಕಾರ್ಮಿಕರು ಮತ್ತು ಉಳಿದ ನೌಕರರು ನಾವು ಹೇಳುವಂತಹ ಸರ್ವಾಧಿಕಾರಿ ಗುಣಸ್ವಭಾವದ ಸಂರಚನೆ ಹೊಂದಿದ್ದರು. 15 ಶೇಕಡ ಮಂದಿ ಪ್ರಜಾಪ್ರಭುತ್ವವಾದಿ ಗುಣಸ್ವಭಾವದ ಸಂರಚನೆ ಹೊಂದಿದ್ದರು. 75 ಶೇಕಡಾದಷ್ಟು ಬಹುಸಂಖ್ಯಾತ ಜನರು ಇವೆರಡು ಅತಿಗಳ ಮಿಶ್ರಣವಾದ ಗುಣಸ್ವಭಾವದ ಸಂರಚನೆ ಹೊಂದಿದ್ದರು.(2)
ಇದನ್ನೂ ಓದಿ: ಮತದಾರರ ಹೆಸರು ಕೈಬಿಟ್ಟ ಹಗರಣ; ಬಿಜೆಪಿ ಪಕ್ಷದ ಕೈವಾಡದ ಆರೋಪ
ಸೈದ್ಧಾಂತಿಕವಾದ ಊಹೆ ಏನಾಗಿತ್ತೆಂದರೆ, ಸರ್ವಾಧಿಕಾರಿ ಗುಣಸ್ವಭಾವದವರು ಕಟ್ಟಾ ನಾಝಿಗಳಾಗಿದ್ದರೆ, ಪ್ರಜಾಪ್ರಭುತ್ವವಾದಿ ಗುಣಸ್ವಭಾವದವರು ನಾಝಿ ವಿರೋಧಿ ಹೋರಾಟಗಾರರಾಗಿರುತ್ತಾರೆ. ಮತ್ತು ಉಳಿದ ಬಹುಸಂಖ್ಯಾತರು ಅದೂ ಆಗಿರಲಿಲ್ಲ, ಇದೂ ಆಗಿರಲಿಲ್ಲ. ಈ ಸೈದ್ಧಾಂತಿಕ ಊಹೆಗಳು ಹೆಚ್ಚು ಕಡಿಮೆ ನಿಖರವೇ ಆಗಿದ್ದವು ಎಂದು 1933 ಮತ್ತು 1945ರ ನಡುವಿನ ಘಟನೆಗಳು ತೋರಿಸಿಕೊಟ್ಟವು. (3)
ನಮ್ಮ ಉದ್ದೇಶಕ್ಕಾಗಿ ಈಗ ಇಷ್ಟು ಹೇಳಿದರೆ ಸಾಕು: ಸರ್ವಾಧಿಕಾರಿ ಗುಣಸ್ವಭಾವದ ಸಂರಚನೆ ಯಾವುದೆಂದರೆ, ಅಧಿಕಾರ ಕೇಂದ್ರಗಳಿಗೆ ಸಾಂಕೇತಿಕ ಅಡಿಯಾಳುಗಳಾಗುವ ನೆಲೆಯಲ್ಲಿ, ಆದೇ ಹೊತ್ತಿಗೆ ಅಧಿಕಾರ ಕೇಂದ್ರಗಳಿಗೆ ಅಡಿಯಾಳಾಗಿರುವವರ ಮೇಲೆ ಸಾಂಕೇತಿಕ ಅಧಿಕಾರ ಚಲಾಯಿಸುವ ಆಧಾರದಲ್ಲಿ ತಮ್ಮ ಶಕ್ತಿ ಮತ್ತು ಅಸ್ಮಿತೆಯನ್ನು ಕಂಡುಕೊಳ್ಳುವವರ ರೀತಿಯ ಗುಣಸ್ವಭಾವದ ಸಂರಚನೆಯದು. ಇದರ ಅರ್ಥವೆಂದರೆ, ಸರ್ವಾಧಿಕಾರಿ ಗುಣ ಸ್ವಭಾವ ಹೊಂದಿರುವವರು ಅಧಿಕಾರಕ್ಕೆ ಅಧೀನರಾಗಿದ್ದಾಗ ತಾವು ಪ್ರಬಲರೆಂದು ಭಾವಿಸುತ್ತಾರೆ ಮತ್ತು ಉಬ್ಬಿಕೊಂಡಿರುವ, ದೈವೀಕರಿಸಿರುವ ಒಂದು ಅಧಿಕಾರದ ಭಾಗವೂ ಆಗಿರುತ್ತಾರೆ, (ವಾಸ್ತವವು ಸ್ವಲ್ಪಮಟ್ಟಿಗೆ ಸಹಕರಿಸುತ್ತಿರುತ್ತದೆ ಕೂಡ), ಅದೇ ಸಮಯಕ್ಕೆ, ಅಂತವರು ಉಳಿದವರನ್ನು ತಮ್ಮ ಅಧೀನಕ್ಕೆ ಒಳಪಡಿಸಲು ತಮ್ಮನ್ನು ತಾವೇ ಉಬ್ಬಿಸಿಕೊಳ್ಳುತ್ತಾರೆ. ಇದೊಂದು ಸ್ವಾರ್ಥಿಯಾದ ಹಿಂಸಾನಂದದ ಸ್ಥಿತಿಯಾಗಿದ್ದು (ಸ್ಯಾಡೋ-ಮೆಸೋಚಿಸ್ಟಿಕ್), ಅದು ಅವರಿಗೆ ಪ್ರಬಲತೆಯ ಮತ್ತು ಒಂದು ಅಸ್ಮಿತೆಯ ಭಾವವನ್ನು ತಂದುಕೊಡುತ್ತದೆ.
“ದೊಡ್ಡ”ದಾದ ಯಾವುದಾದರ (ಅದು ಏನೇ ಆಗಿರಲಿ) ಭಾಗವಾಗಿ ಅವರೂ ದೊಡ್ಡವರಾಗುತ್ತಾರೆ ಮತ್ತು ಅವರಷ್ಟಕ್ಕೆ ಒಂಟಿಯಾಗಿದ್ದಾಗ, ಏನೂ ಅಲ್ಲದ ಸ್ಥಿತಿಗೆ ಕುಸಿಯುತ್ತಾರೆ. ಇದೇ ಕಾರಣಕ್ಕಾಗಿಯೇ ಅಧಿಕಾರಕ್ಕೆ ಹಾಕಿದ ಬೆದರಿಕೆಯು ಮತ್ತು ತಮ್ಮ ಸರ್ವಾಧಿಕಾರಿ ಸಂರಚನೆಗೆ ಒದಗಿದ ಬೆದರಿಕೆಯು ತನಗೆ ಮತ್ತು ತನ್ನ ಚಿತ್ತಸ್ವಾಸ್ಥ್ಯಕ್ಕೇ ಹಾಕಿದ ಬೆದರಿಕೆಯಂತೆ ಅವರಿಗೆ ಕಾಣುತ್ತದೆ. ಆದುದರಿಂದ ಸರ್ವಾಧಿಕಾರಕ್ಕೆ ಇರುವ ಬೆದರಿಕೆಯ ವಿರುದ್ಧ ಅವರು- ತಮ್ಮ ಸ್ವಂತ ಜೀವ ಆಥವಾ ಚಿತ್ತಸ್ವಾಸ್ಥ್ಯಕ್ಕೆ ಒಡ್ಡಲಾಗುವ ಬೆದರಿಕೆಯೋ ಎಂಬ ರೀತಿಯಲ್ಲಿ ಹೋರಾಡುವಂತೆ ಮಾಡುತ್ತದೆ.
ಈಗ ಕ್ರಾಂತಿಕಾರಿ ಗುಣಸ್ವಭಾವದ ಪರಿಕಲ್ಪನೆಯ ವಿಷಯಕ್ಕೆ ಬರುವುದಾದರೆ, ಯಾವುದು ಕ್ರಾಂತಿಕಾರಿ ಗುಣಸ್ವಭಾವವಲ್ಲ ಎಂದು ನಾನು ನಂಬಿದ್ದೇನೋ, ಅದರ ಮೂಲಕ ಪ್ರಾರಂಭಿಸಬೇಕಾಗುತ್ತದೆ. ಕ್ರಾಂತಿಗಳಲ್ಲಿ ಭಾಗವಹಿಸುವ ವ್ಯಕ್ತಿಗಳು ಕ್ರಾಂತಿಕಾರಿ ಗುಣಸ್ವಭಾವದವರಲ್ಲ ಎಂಬುದು ಸ್ಪಷ್ಟ. ಫ್ರಾಯ್ಡ್‌ನ ಚಿಂತನೆಯ ಚಲನಶೀಲತೆಯಲ್ಲಿ ನಡವಳಿಕೆ ಮತ್ತು ಗುಣಸ್ವಭಾವದ ನಡುವಿನ ನಿರ್ದಿಷ್ಟವಾದ ವ್ಯತ್ಯಾಸ ಇದೇ ಆಗಿದೆ. ತನಗೇನೆನ್ನಿಸುತ್ತದೆ ಎಂದು ಯೋಚಿಸದೆಯೇ ಹಲವಾರು ಕಾರಣಗಳಿಗಾಗಿ ಒಬ್ಬ ಕ್ರಾಂತಿಯಲ್ಲಿ ಭಾಗವಹಿಸಬಹುದು. ಆದರೆ, ಅವರು ಕ್ರಾಂತಿಕಾರಿಯಾಗಿ ವರ್ತಿಸುತ್ತಾರೆ ಎಂಬುದು ಅವರ ಗುಣಸ್ವಭಾವದ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ.
ಯಾವುದು ಕ್ರಾಂತಿಕಾರಿ ಗುಣಸ್ವಭಾವವಲ್ಲ ಎಂಬುದರಲ್ಲಿ ಎರಡನೇ ಅಂಶವು, ಸ್ವಲ್ಪ ಮಟ್ಟಿಗೆ ಹೆಚ್ಚು ಸಂಕೀರ್ಣವಾಗಿದೆ. ಕ್ರಾಂತಿಕಾರಿ ಗುಣಸ್ವಭಾದವರು ಬಂಡುಕೋರರಲ್ಲ. ನಾನು ಹೀಗೆ ಹೇಳುತ್ತಿರುವುದರ ಅರ್ಥ ಏನು? (4) ತನಗೆ ಮನ್ನಣೆ ಸಿಗುತ್ತಿಲ್ಲ, ತನ್ನನ್ನು ಪ್ರೀತಿಸಿಲ್ಲ, ತನ್ನನ್ನು ಸ್ವೀಕರಿಸಿಲ್ಲ ಎಂಬ ಕಾರಣಕ್ಕೆ ಅಧಿಕಾರದ ವಿರುದ್ಧ ಆಳವಾಗಿ ಅಸಮಾಧಾನ ಹೊಂದಿರುವವರು ಬಂಡುಕೋರರು ಎಂದು ನಾನು ವ್ಯಾಖ್ಯಾನಿಸುತ್ತೇನೆ. ಒಬ್ಬ ಬಂಡುಕೋರ ತನ್ನ ಅಸಮಾಧಾನದ ಕಾರಣದಿಂದ ಅಧಿಕಾರವನ್ನು ಕಿತ್ತೆಸೆಯಲು ಬಯಸುತ್ತಾನೆ; ಮತ್ತು ತಾನು ಕಿತ್ತೆಸೆದ ಅಧಿಕಾರದ ಸ್ಥಾನದಲ್ಲಿ ತನ್ನನ್ನು ಸ್ಥಾಪಿಸಿಕೊಳ್ಳುತ್ತಾನೆ. ಬಹಳ ಹೆಚ್ಚಾಗಿ ತನ್ನ ಉದ್ದೇಶ ಈಡೇರಿದ ತಕ್ಷಣವೇ, ತಾನು ಯಾವ ಅಧಿಕಾರದೊಂದಿಗೆ ಕಟುವಾಗಿ ಹೋರಾಡುತ್ತಿದ್ದನೋ ಅದರೊಂದಿಗೆಯೇ ಗೆಳೆತನ ಬೆಳೆಸುತ್ತಾನೆ.
ಇದನ್ನೂ ಓದಿ: She said: ಹೇಳಿಕೊಳ್ಳಲಾಗದ ಒಡಲಾಳದ ಸಂಕಟಕ್ಕೆ ದನಿಯಾದ ಪತ್ರಕರ್ತೆಯರ ಕಥನ
ಇಪ್ಪತ್ತನೇ ಶತಮಾನದ ರಾಜಕೀಯ ಇತಿಹಾಸದಲ್ಲಿ ಬಂಡುಕೋರನ ಗುಣಸ್ವಭಾವದ ಮಾದರಿಯು ಬಹಳಷ್ಟು ಪರಿಚಿತವಾಗಿದೆ. ಉದಾಹರಣೆಗೆ ರ್‍ಯಾಮ್ಸೆ ಮೆಕ್‌ಡೊನಾಲ್ಡ್ ಅವರ ಉದಾಹರಣೆಯನ್ನು ನಾನು ತೆಗೆದುಕೊಳ್ಳುತ್ತೇನೆ; ಅವರು ಮಿಲಿಟರಿ ಸೇವೆಯನ್ನು ಸಲ್ಲಿಸಲು ನಿರಾಕರಿಸಿ ಯುದ್ಧವಿರೋಧಿಯಾಗಿ ಹೋರಾಟ ಪ್ರಾರಂಭಿಸಿದರು. ಆದರೆ ಅವರು ಅಗತ್ಯ ಅಧಿಕಾರ ಗಳಿಸಿದ ಮೇಲೆ, ಲೇಬರ್ ಪಕ್ಷಕ್ಕೆ ದ್ರೋಹ ಬಗೆದು ಹಲವು ವರ್ಷಗಳಿಂದ ಯಾವ ಅಧಿಕಾರಗಳ ವಿರುದ್ಧ ಹೋರಾಡುತ್ತಿದ್ದರೋ ಅವುಗಳ ಜೊತೆಗೇ ಕೈಜೋಡಿಸಿದರು; ರಾಷ್ಟ್ರೀಯ ಸರ್ಕಾರ ಸೇರುವಾಗ ಮೊದಲ ದಿನದಂದೆ ಅವರ ಗೆಳೆಯ ಮತ್ತು ಮಾಜಿ ಕಾಮ್ರೇಡ್ ಸ್ನೋಡೆನ್‌ಗೆ ಅವರು ಹೇಳಿದ್ದು ಹೀಗೆ: “ಇವತ್ತು, ಲಂಡನ್ನಿನ ಎಲ್ಲ ರಾಣಿಯರು ನನ್ನ ಗಲ್ಲಕ್ಕೆ ಮುತ್ತು ಕೊಡಲು ಮುಂದಾಗುತ್ತಾರೆ” ಎಂದು. ಇದು ಸ್ವತಃ ತಾನೇ ಅಧಿಕಾರವಾಗಲು ಬಂಡುಕೋರತನವನ್ನು ಬಳಸಿಕೊಳ್ಳುವ ವ್ಯಕ್ತಿತ್ವದ ಶಾಸ್ತ್ರೀಯ ಮಾದರಿಯಾಗಿದೆ.
ಕೆಲವು ಸಲ ಇದು ಸಾಧ್ಯವಾಗಲು ಹಲವು ವರ್ಷಗಳೇ ತಗಲುತ್ತದೆ. ಕೆಲವು ಸಲ ಬೇಗನೇ ನಡೆಯುತ್ತವೆ. ಉದಾಹರಣೆಗಾಗಿ ನೀವು ಫ್ರಾನ್ಸಿನಲ್ಲಿ ಬಂಡುಕೋರನಾಗಿ ಆರಂಭಿಸಿದ ನತದೃಷ್ಟ ಲಾವಲ್‌ನಂತಾ ವ್ಯಕ್ತಿತ್ವವನ್ನು ತೆಗೆದುಕೊಂಡರೆ, ತನ್ನನ್ನು ತಾನು ಮಾರಿಕೊಳ್ಳಲು ಬೇಕಾದಷ್ಟು ರಾಜಕೀಯ ಬಂಡವಾಳ ಗಳಿಸಿಕೊಳ್ಳಲು ಆತನಿಗೆ ಸ್ವಲ್ಪವೇ ಸ್ವಲ್ಪ ಸಮಯವಷ್ಟೇ ತಗುಲಿತು ಎಂಬುದನ್ನು ನೀವು ನೆನಪಿಸಿಕೊಳ್ಳಬಹುದು. ಇನ್ನೂ ಅನೇಕರನ್ನು ನಾನು ಹೆಸರಿಸಬಹುದು. ಆದರೆ, ಮನಃಶಾಸ್ತ್ರೀಯ ವ್ಯವಸ್ಥೆ ಯಾವತ್ತೂ ಅದೇ ಆಗಿರುತ್ತದೆ. ಇಪ್ಪತ್ತನೇ ಶತಮಾನದ ರಾಜಕೀಯ ಜೀವನವನ್ನು, ಕ್ರಾಂತಿಕಾರಿಗಳೆಂದು ಕರೆಸಿಕೊಂಡು ತಮ್ಮ ಹೋರಾಟ ಆರಂಭಿಸಿ ಕೊನೆಗೆ ಅವಕಾಶವಾದಿ ಬಂಡುಕೋರರಾಗಷ್ಟೇ ಬದಲಾದ ಜನರ ನೈತಿಕತೆಯ ಸಮಾಧಿಗಳನ್ನು ಒಳಗೊಂಡಂಥ ಸ್ಮಶಾನ ಎಂದು ನೀವು ಹೇಳಬಹುದು.
ಕ್ರಾಂತಿಕಾರಿ ಗುಣಸ್ವಭಾವ ಅಲ್ಲವೆಂದು ಹೇಳಬಹುದಾದ ಬೇರೆ ವಿಷಯವೂ ಇದೆ. ಇದು ಬಂಡುಕೋರತನದ ಪರಿಕಲ್ಪನೆಗಿಂತ ಹೆಚ್ಚು ಸಂಕೀರ್ಣವಾಗಿದೆ: ಆತ ತೀವ್ರವಾದಿಯಲ್ಲ (ಫೆನೆಟಿಕ್ ಅಲ್ಲ). ನಡವಳಿಕೆಯ ದೃಷ್ಟಿಯಿಂದ ಕ್ರಾಂತಿಕಾರಿಗಳು ಹೆಚ್ಚಾಗಿ ತೀವ್ರವಾದಿಯಾಗಿರುತ್ತಾರೆ. ಈ ಹಂತದಲ್ಲಿ, ನಾನು ಯಾವುದನ್ನು ಕ್ರಾಂತಿಕಾರಿಯ ಗುಣಸ್ವಭಾವ ಎಂದು ಕರೆಯುತ್ತೇನೋ, ಅದರಲ್ಲಿ ರಾಜಕೀಯ ನಡವಳಿಕೆ ಮತ್ತು ಗುಣಸ್ವಭಾವ ಸಂರಚನೆಯ ನಡುವಿನ ವ್ಯತ್ಯಾಸ ಹೆಚ್ಚು ಸ್ಪಷ್ಟವಾಗಿದೆ. ಇಲ್ಲಿ ತೀವ್ರವಾದಿ ಎಂದು ನಾನು ಯಾರನ್ನು ಕರೆಯುತ್ತಿದ್ದೇನೆ? ದೃಢವಾದ ನಂಬಿಕೆ ಹೊಂದಿರುವವನನ್ನಲ್ಲ. (ಇವತ್ತು ದೃಢವಾದ ನಂಬಿಕೆ ಇರುವ ಯಾರನ್ನೂ ತೀವ್ರವಾದಿ ಎಂದೂ, ದೃಢನಂಬಿಕೆ ಇಲ್ಲದ ಅಥವಾ ಸುಲಭವಾಗಿ ಅದನ್ನು ತ್ಯಜಿಸಿಬಿಡುವ ಯಾರನ್ನೂ ವಾಸ್ತವವಾದಿ ಎಂದು ಕರೆಯುವುದು ಫ್ಯಾಷನ್ ಆಗಿರುವುದರಿಂದ ಇದನ್ನು ಹೇಳುತ್ತಿದ್ದೇನೆ.)
ವೈದ್ಯಕೀಯ ಮನಃಶಾಸ್ತ್ರೀಯ ಅಧ್ಯಯನದಲ್ಲಿ, ತೀರಾ ಸ್ವಮೋಹಿ ಆಗಿರುವ, ಸೈಕೋಸಿಸ್ ಮನೋಸ್ಥಿತಿಗೆ ಹತ್ತಿರ ಇರುವವರನ್ನು (ಖಿನ್ನತೆ ಅಥವಾ ಮೆಲಂಕಲಿಯಾ, ಜೊತೆಗೆ ಸಾಮಾನ್ಯವಾಗಿ ವಿಭ್ರಮೆಯೂ ಸೇರಿಕೊಂಡಿರುವ) ವ್ಯಕ್ತಿಯನ್ನು ತೀವ್ರವಾದಿ ಎನ್ನಬಹುದು; ಯಾವುದೇ ಸೈಕಾಟಿಕ್ ವ್ಯಕ್ತಿಯಂತೆ, ಹೊರ ಪ್ರಪಂಚದ ಜೊತೆಗೆ ಸಂಪೂರ್ಣವಾಗಿ ತಾಳಮೇಳ ಇಲ್ಲದವರನ್ನು ವೈದ್ಯಕೀಯವಾಗಿ ತೀವ್ರವಾದಿ ಎಂದು ಕರೆಯಬಹುದು. ಆದರೆ, ತೀವ್ರವಾದಿ ಈ ಸೈಕೋಸಿಸ್ ಆವರಿಸಿಕೊಳ್ಳದಂತೆ ಅವನನ್ನು ರಕ್ಷಿಸಿಕೊಳ್ಳಲು ಒಂದು ಪರಿಹಾರವನ್ನು ಕಂಡುಕೊಂಡಿದ್ದಾನೆ. ಒಂದು ಹೋರಾಟದ ಕಾರಣವನ್ನು- ರಾಜಕೀಯವಾಗಿರಬಹುದು, ಧಾರ್ಮಿಕವಾಗಿರಬಹುದು ಅಥವಾ ಬೇರಾವುದೇ ಆಗಿರಬಹುದು- ಒಂದು ಕಾರಣವನ್ನು ತನ್ನದಾಗಿಸಿಕೊಂಡಿರುತ್ತಾನೆ. ಈ ಕಾರಣವನ್ನು ದೈವೀಕರಣಗೊಳಿಸಿರುತ್ತಾನೆ. ಈ ಕಾರಣವನ್ನು ಒಂದು ಪ್ರತಿಮೆ ಮಾಡಿಕೊಂಡಿರುತ್ತಾನೆ. ಈ ರೀತಿಯಲ್ಲಿ ಈ ಪ್ರತಿಮೆಗೆ ಅಂಧಭಕ್ತನಾಗಿ ಅಡಿಯಾಳಾಗಿ ಜೀವನದಲ್ಲಿ ಒಂದು ಭಾವನಾತ್ಮಕತೆಯನ್ನು, ಅರ್ಥವನ್ನು ಕಂಡುಕೊಳ್ಳುತ್ತಾನೆ; ಈ ಶರಣಾಗತಿಗಾಗಿ ಆತ ಉಬ್ಬಿಸಿರುವ ಮತ್ತು ಪರಿಪೂರ್ಣ ಎಂದು ಭಾವಿಸಿರುವ ಈ ಪ್ರತಿಮೆಯ ಜೊತೆಗೆ ತನ್ನನ್ನು ಗುರುತಿಸಿಕೊಳ್ಳುತ್ತಾನೆ.

ನಾವು ಇಂಥ ತೀವ್ರವಾದಿತನಕ್ಕೆ ಒಂದು ಸಂಕೇತವನ್ನು ನೀಡಬೇಕೆಂದರೆ, ಅದು ಉರಿಯುತ್ತಿರುವ ಮಂಜುಗಡ್ಡೆ ಆಗಬಹುದು. ಅತ ತೀರಾ ಭಾವನಾತ್ಮಕ ಆಗಿರುವಾಗಲೇ ತೀರಾ ತಣ್ಣಗಿನ ಇರಿಯುವ ವ್ಯಕ್ತಿ ಆಗಿರುತ್ತಾನೆ. ಆತ ಪ್ರಪಂಚದ ಜೊತೆಗೆ ಯಾವುದೇ ತಾಳಮೇಳವಿಲ್ಲದಿರುವಾಗಲೇ ತೀರಾ ಕುದಿಯುವಂತೆ ಭಾವನಾತ್ಮಕವಾಗಿರುತ್ತಾನೆ. ತಾನು ಪರಿಪೂರ್ಣ ಎಂದು ನಂಬಿರುವುದಕ್ಕೆ ಅಧೀನನಾಗಿರುವ ಕುರಿತು ಭಾವನಾತ್ಮಕವಾಗಿರುತ್ತಾನೆ. ಒಬ್ಬ ತೀವ್ರವಾದಿಯ ಗುಣಸ್ವಭಾವವನ್ನು ಗುರುತಿಸಲು ಆತನ ಮಾತುಗಳನ್ನು ಕೇಳಬೇಕಾಗಿಲ್ಲ; ಆತನ ಕಣ್ಣುಗಳಲ್ಲಿನ ನಿರ್ದಿಷ್ಟವಾದ ಹೊಳಪು ಮತ್ತು ಅದೇ ಹೊತ್ತಿಗೆ ಇರುವ ತಣ್ಣಗಿನ ಭಾವತೀವ್ರತೆಯನ್ನು ನೋಡಿದರೆ ಸಾಕು. ಇದು ತೀವ್ರವಾದಿಯ ವಿರೋಧಾಭಾಸ. ಅಂದರೆ, ತಾದ್ಯಾತ್ಮ ಸಂಬಂಧ ಇಲ್ಲದೆಯೇ ಭಾವತೀವ್ರತೆ ಹೊಂದಿರುವುದು. ತೀವ್ರವಾದಿ ಎಂದರೆ, ಪ್ರವಾದಿಗಳು ಕರೆದಿರುವ “ಮೂರ್ತಿ ಪೂಜಕರು”. ತೀವ್ರವಾದಿಗಳು ಇತಿಹಾಸದಲ್ಲಿ ಬಹುದೊಡ್ಡ ಪಾತ್ರ ವಹಿಸಿದ್ದಾರೆ ಎಂದು ಬೇರೆ ಹೇಳಬೇಕಾಗಿಲ್ಲ. ಬಹುಸಲ ತೀವ್ರವಾದಿ ಕ್ರಾಂತಿಕಾರಿಯಂತೆ ತೋರಿಸಿಕೊಂಡಿದ್ದಾನೆ. ಯಾಕೆಂದರೆ, ಬಹಳಷ್ಟು ಸಲ ಆತನ ಮಾತುಗಳು ಕ್ರಾಂತಿಕಾರಿಯ ಮಾತುಗಳಂತೆಯೇ ಕೇಳಿಸುತ್ತವೆ.
ನಾನಿಲ್ಲಿ ಯಾವುದು ಕ್ರಾಂತಿಕಾರಿ ಗುಣಸ್ವಭಾವ ಅಲ್ಲವೆಂದು ಪರಿಗಣಿಸುತ್ತೇನೋ ಅದನ್ನು ವಿವರಿಸಲು ಯತ್ನಿಸಿದ್ದೇನೆ. ಇಂದು ಕ್ರಾಂತಿಕಾರಿಯ ಗುಣಸ್ವಭಾವದ ವ್ಯಾಖ್ಯಾನವು, ಸರ್ವಾಧಿಕಾರಿಯ ಗುಣದ ಪರಿಕಲ್ಪನೆಯಷ್ಟೇ ಮುಖ್ಯವಾಗಿದೆ. ಇನ್ನೂರ ಐವತ್ತು ವರ್ಷಗಳ ಹಿಂದೆ ಪ್ರಾರಂಭವಾದ, ಇಂಗ್ಲಿಷ್ ಕ್ರಾಂತಿ, ಫ್ರೆಂಚ್ ಮತ್ತು ಅಮೆರಿಕನ್ ಕ್ರಾಂತಿಯಿಂದ ಶುರುವಾದ ರಾಜಕೀಯ ಬಂಡಾಯಗಳು ಮತ್ತು ರಷ್ಯಾ, ಚೈನಾದಲ್ಲಿ ಹಾಗೂ ಇಂದಿಗೂ ದಕ್ಷಿಣ ಅಮೆರಿಕದಲ್ಲಿ ಮುಂದುವರಿಯುತ್ತಿರುವ ಸಾಮಾಜಿಕ ಕ್ರಾಂತಿಗಳಿಂದ ಮುಂದುವರಿದು ನಾವು ಕ್ರಾಂತಿಗಳ ಯುಗದಲ್ಲಿ ಬದುಕುತ್ತಿದ್ದೇವೆ.
ಈ ಕ್ರಾಂತಿಯುಗದಲ್ಲಿ “ಕ್ರಾಂತಿಕಾರಿ” ಪದ ಜಗತ್ತಿನ ಹಲವು ಪ್ರದೇಶಗಳಲ್ಲಿ ರಾಜಕೀಯ ಹೋರಾಟಗಳಿಗೆ ಧನಾತ್ಮಕ ಪದವಿಯೆಂಬಂತೆ ಆಕರ್ಷಕಣೆಯನ್ನು ಉಳಿಸಿಕೊಂಡಿದೆ. “ಕ್ರಾಂತಿಕಾರಿ” ಪದವನ್ನು ಬಳಸುವ ಈ ಎಲ್ಲಾ ಹೋರಾಟಗಳು ಬಹುತೇಕ ಒಂದೇ ಗುರಿಗಳನ್ನು ಪ್ರತಿಪಾದಿಸುತ್ತವೆ: ಅದೆಂದರೆ, ಅವರು ಮುಕ್ತವಾಗುವುದಕ್ಕೆ ಮತ್ತು ಸ್ವಾತಂತ್ರ್ಯಕ್ಕೆ ಹೋರಾಡುತ್ತೇವೆಂದು. ವಾಸ್ತವದಲ್ಲಿ ಕೆಲವು ಹಾಗಿರುತ್ತವೆ ಮತ್ತು ಕೆಲವು ಇರುವುದಿಲ್ಲ; ನಾನು ಹೀಗೆ ಹೇಳುವುದರ ಅರ್ಥವೇನೆಂದರೆ, ಕೆಲವು ಮುಕ್ತವಾಗುವುದಕ್ಕೆ ಮತ್ತು ಸ್ವಾತಂತ್ರ್ಯಕ್ಕೆ ನಿಜವಾಗಿಯೂ ಹೋರಾಡುತ್ತವೆ, ಮತ್ತು ಕೆಲವು ಹೋರಾಟಗಳಲ್ಲಿ ಸರ್ವಾಧಿಕಾರಿ ಆಡಳಿತವನ್ನು ಪ್ರತಿಷ್ಠಾಪಿಸುವ ಸಲುವಾಗಿ ಕ್ರಾಂತಿಕಾರಿ ಘೋಷಣೆಗಳನ್ನು ಬಳಸಲಾಗುತ್ತಿರುತ್ತದೆ; ಆದರೆ ಅಧಿಕಾರದಲ್ಲಿ ಬೇರೆ ಪ್ರತಿಷ್ಠಿತ ವರ್ಗವನ್ನು ಕೂರಿಸುವುದರೊಂದಿಗೆ.
ಇದನ್ನೂ ಓದಿ: ದಕ್ಲಕಥಾ ದೇವಿ ಕಾವ್ಯ: ಭಾರತವನ್ನುಳಿಸುವ ದಲಿತರ ಐಕ್ಯ ನಡಿಗೆ
ಮುಂದಿನ ಕಂತಿನಲ್ಲಿ: ಒಂದು ಕ್ರಾಂತಿಯನ್ನು ನಾವು ಹೇಗೆ ವ್ಯಾಖ್ಯಾನಿಸಬಹುದು?
ಅಡಿ ಟಿಪ್ಪಣಿಗಳು:
(1) ಈ ಅಧ್ಯಯನವನ್ನು ನಾನೇ ನಿರ್ದೇಶಿಸಿದ್ದೆ ಮತ್ತು ಡಾ. ಇ ಸ್ಕ್ಯಾಚೆಲ್ ಸೇರಿದಂತೆ ಹಲವರು ಜತೆಗೂಡಿದ್ದರು. ಡಾ. ಹಾರ್ಖೀಮರ್ ನಿರ್ದೇಶಕರಾಗಿದ್ದ, ಫ್ರಾಂಕ್‌ಫರ್ಟ್ ವಿಶ್ವವಿದ್ಯಾಲಯದ, ಸಾಮಾಜಿಕ ಸಂಶೋಧನ ಸಂಸ್ಥೆಯ ಸ್ಟಾಟಿಸ್ಟಿಕಲ್ ಸಲಹೆಗಾರರಾಗಿ ಡಾ. ಪಿ ಲಾಜ಼ರ್‍ಸ್‌ಫೆಲ್ಡ್ ಕೆಲಸ ಮಾಡಿದರು.
(2) ಮುಕ್ತ ರೀತಿಯ ಪ್ರಶ್ನಾವಳಿಗೆ, ವ್ಯಕ್ತಿಗತವಾಗಿ ರೂಪುಗೊಂಡ ಅನಪೇಕ್ಷ, ಅಪ್ರಜ್ಞಾವಸ್ಥೆಯ ಅರ್ಥವುಳ್ಳ ಉತ್ತರಗಳಿಗೆ ಅಡ್ಡಿಪಡಿಸಿ ಪರೀಕ್ಷೆಗೆ ಒಡ್ಡಿ ನಿರ್ದಿಷ್ಟ ಉತ್ತರಗಳನ್ನು ಕಂಡುಕೊಳ್ಳುವ ಮಾದರಿಯನ್ನು ಬಳಸಲಾಯಿತು. ಉದಾಹರಣೆಗೆ, “ಇತಿಹಾಸದಲ್ಲಿ ತಾವು ಹೆಚ್ಚು ಗೌರವಿಸುವ ವ್ಯಕ್ತಿಯಾರು?” ಎಂಬ ಪ್ರಶ್ನೆಗೆ ವ್ಯಕ್ತಿಯೊಬ್ಬ “ಅಲೆಕ್ಸಾಂಡರ್ ದ ಗ್ರೇಟ್, ಸೀಸರ್, ನೆಪೋಲಿಯನ್, ಮಾರ್ಕ್ಸ್ ಮತ್ತು ಲೆನಿನ್ ಎಂದು ಉತ್ತರಿಸಿದರೆ, ನಾವು ಈ ಉತ್ತರಕ್ಕೆ “ಸರ್ವಾಧಿಕಾರಿ” ಎಂದು ಅಡ್ಡಿಪಡಿಸುತ್ತಿದ್ದೆವು; ಏಕೆಂದರೆ ಈ ಹೊಂದಾಣಿಕೆಯಲ್ಲಿ ಅವರು ಹೆಚ್ಚು ಸರ್ವಾಧಿಕಾರಿಗಳು ಮತ್ತು ಸೇನಾ ಮುಖಂಡರ ಬಗ್ಗೆ ಗೌರವ ಇರಿಸಿಕೊಂಡಿದ್ದನ್ನು ತೋರಿಸುತ್ತಿತ್ತು. ಉತ್ತರ “ಸಾಕ್ರೆಟಿಸ್, ಪಾಸ್ಚರ್, ಕಾಂಟ್, ಮಾರ್ಕ್ಸ್ ಮತ್ತು ಲೆನಿನ್” ಅಂತಾಗಿದ್ದರೆ ನಾವು ಅಂತಹ ವ್ಯಕ್ತಿಯನ್ನು ಪ್ರಜಾಪ್ರಭುತ್ವವಾದಿ ಎಂದು ವರ್ಗೀಕರಿಸಿದೆವು; ಏಕೆಂದರೆ ಅಧಿಕಾರದ ಜೊತೆಗಿದ್ದ ಜನರಿಗಿಂತ ಮಾನವ ಜನಾಂಗಕ್ಕೆ ಸಹಾಯ ಮಾಡಿದ ಜನರ ಬಗ್ಗೆ ಆತ ಹೆಚ್ಚು ಗೌರವ ಇರಿಸಿಕೊಂಡಿದ್ದ.
(3) ಮೂಲ ಅಧ್ಯಯನವನ್ನು ಇನ್ನಷ್ಟು ಸರಿಪಡಿಸಿ ಟಿ ಡಬ್ಲ್ಯು ಅಡೋರ್ನೋ ಅವರ ಅದ್ಭುತ ಅಧ್ಯಯನ ’ದ ಅಥಾರಿಟೇರಿಯನ ಕ್ಯಾರೆಕ್ಟರ್’ (1950)ರಲ್ಲಿ ಈ ಇಡೀ ವಿಷಯವನ್ನು ಅವಲೋಕನಕ್ಕೊಳಪಡಿಸಲಾಯಿತು.
(4) ನನ್ನ ಮುಂಚಿನ ’ದ ಫಿಯರ್ ಆಫ್ ಫ್ರೀಡಮ್’ನಲ್ಲಿ ಇದರ ಬಗ್ಗೆ ಇನ್ನೂ ವಿವರವಾಗಿ ಚರ್ಚಿಸಲು ಸಾಧ್ಯವಾಗಿದೆ.
(ಮುಂದುವರಿಯುವುದು)
ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಎರಿಕ್ ಫ್ರಾಮ್
20ನೇ ಶತಮಾನದ ಖ್ಯಾತ ಚಿಂತಕ ಮತ್ತು ಸಾಮಾಜಿಕ ಮನಃಶಾಸ್ತ್ರಜ್ಞ. ’ದ ಆರ್ಟ್ ಆಫ್ ಲವಿಂಗ್’, ’ಎಸ್ಕೇಪ್ ಫ್ರಂ ಫ್ರೀಡಂ’ ಅವರ ಪುಸ್ತಕಗಳಲ್ಲಿ ಕೆಲವು.


