Homeಕರ್ನಾಟಕಬಿಜೆಪಿ ಕೈವಾಡದ ಆರೋಪ: ಕರ್ನಾಟಕದ 27 ಲಕ್ಷ ಮತದಾರರ ಹೆಸರು ಕೈಬಿಟ್ಟಿದ್ದು ಹೇಗೆ?

ಬಿಜೆಪಿ ಕೈವಾಡದ ಆರೋಪ: ಕರ್ನಾಟಕದ 27 ಲಕ್ಷ ಮತದಾರರ ಹೆಸರು ಕೈಬಿಟ್ಟಿದ್ದು ಹೇಗೆ?

- Advertisement -
- Advertisement -

ಭಾರತದ ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್‌ವರೆಗೆ ಹಲವು ಹಂತಗಳ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಜನಪ್ರತಿನಿಧಿಗಳನ್ನು ಮತದಾರರು ಆರಿಸುವುದಲ್ಲದೆ, ಆಳುವ ಸರ್ಕಾರಗಳನ್ನು ನಿರ್ಧರಿಸುತ್ತಾರೆ. ಈ ಚುನಾವಣಾ ವ್ಯವಸ್ಥೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕಾದದ್ದು ಅತ್ಯಗತ್ಯ. ಇಲ್ಲದಿದ್ದಲ್ಲಿ ಪ್ರಜಾಪ್ರಭುತ್ವ ದೇಶಕ್ಕೂ ಮಿಲಿಟರಿ ಸರ್ವಾಧಿಕಾರ ದೇಶಗಳಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ. ಹಿಂದೆಲ್ಲಾ ಕೆಲವೆಡೆ ಚುನಾವಣೆಯಲ್ಲಿ ಅಕ್ರಮ ಮತದಾನ (ರಿಗ್ಗಿಂಗ್) ನಡೆಯುತ್ತಿತ್ತು; ಬಂದೂಕಿನ ಭಯದಲ್ಲಿ, ಗೂಂಡಾಗಳ ನೆರಳಿನಲ್ಲಿ ಜನರು ಮತ ಚಲಾಯಿಸುತ್ತಿದ್ದರು ಎಂಬ ಮಾತುಗಳನ್ನು ಕೇಳಿದ್ದೇವೆ. ಈ ರೀತಿ ಅಕ್ರಮವೆಸಗುವುದು ನೇರ ಕಣ್ಣಿಗೆ ಕಾಣುತ್ತಿತ್ತು ಮತ್ತು ಟೀಕೆಗೆ ಗುರಿಯಾಗುತ್ತಿತ್ತು. ಆದರೆ ಈಗಿನ ಆಧುನಿಕ ಕಾಲದಲ್ಲಿ ಹೈಟೆಕ್ ಚುನಾವಣಾ ಅಕ್ರಮಗಳು ನಡೆಯುತ್ತಿವೆ. ಆ ಮೂಲಕ ನಮ್ಮದು ನೈಜ ಪ್ರಜಾಪ್ರಭುತ್ವ ರಾಷ್ಟ್ರವೇ ಎಂದು ಪ್ರಶ್ನಿಸಿಕೊಳ್ಳುವ ಸಂದರ್ಭವನ್ನು ಸೃಷ್ಟಿ ಮಾಡಿವೆ.

ಜಾತಿ-ಧರ್ಮದ ಆಧಾರದಲ್ಲಿ ಮತ ಕೇಳುವುದು, ಧರ್ಮ-ದೇಶ ಅಪಾಯದಲ್ಲಿದೆ ಎಂಬ ಕೃತಕ ಅಪಾಯಗಳನ್ನು ಸೃಷ್ಟಿಸಿ ಜನರನ್ನು ಮರಳು ಮಾಡುವುದು, ಚುನಾವಣೆಗಳಲ್ಲಿ ಮತದಾರರಿಗೆ ಹಣ, ಮದ್ಯದ ಆಮಿಷವೊಡ್ಡುವುದು, ಫಲಿತಾಂಶ ಪ್ರಕಟವಾದ ನಂತರ ಶಾಸಕರನ್ನೇ ಕೊಳ್ಳುವಂತಹ ಚುನಾವಣಾ ಅಕ್ರಮಗಳನ್ನು ಇಷ್ಟು ದಿನ ನಾವೆಲ್ಲರೂ ನೋಡಿ ಶಪಿಸಿದ್ದೇವೆ. ಆದರೀಗ ಆಳುವ ಬಿಜೆಪಿ ಸರ್ಕಾರ ನೂರಾರು ಹೆಜ್ಜೆ ಮುಂದಕ್ಕೆ ಹೋಗಿ, ’ತಮಗೆ ಮತ ಹಾಕುವವರಲ್ಲ’ ಎಂಬ ಅನುಮಾನವಿರುವ ಲಕ್ಷಾಂತರ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದಲೇ ತೆಗೆದುಬಿಟ್ಟಿರುವ ಆರೋಪವನ್ನು ಎದುರಿಸುತ್ತಿದೆ. ಆ ಮೂಲಕ ಚುನಾವಣೆಗೂ ಮುನ್ನವೇ ಗೆಲುವು ಖಾತ್ರಿಪಡಿಸಿಕೊಳ್ಳುತ್ತಿದೆಯೇ ಎಂಬ ಶಂಕೆ ಮೂಡಿದೆ. ಇಂತಹ ಬಹುದೊಡ್ಡ ಷಡ್ಯಂತ್ರ, ಕರ್ನಾಟಕದಲ್ಲಿ ನಡೆದಿರುವುದು ಇಡೀ ಚುನಾವಣಾ ಪ್ರಕ್ರಿಯೆಯ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ.

ಮತದಾನದ ಹಕ್ಕು ಕಳೆದುಕೊಂಡ 27 ಲಕ್ಷ ಮಂದಿ

ಹಿಂದಿನಿಂದಲೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕೈಬಿಟ್ಟುಹೋಗಿರುವುದು ಗೊತ್ತಿಲ್ಲದ ಕಾರಣದಿಂದ ಹಲವಾರು ಜನ ಮತದಾನದಿಂದ ವಂಚಿತರಾಗುವ ದೂರುಗಳು ಕೇಳಿಬರುತ್ತಿತ್ತು. ಟೆಕ್ನಿಕಲ್ ಸಮಸ್ಯೆಯಿಂದ ಅಥವಾ ಬೂತ್ ಮಟ್ಟದ ಚುನಾವಣಾ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕಣ್ತಪ್ಪಿನಿಂದ ಅದು ಸಂಭವಿಸುತ್ತಿತ್ತು ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಉದ್ದೇಶಪೂರ್ವಕವಾಗಿಯೇ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ ಎಂಬ ಆರೋಪ ಎದುರಾಗಿದೆ. ಯಾರ್‍ಯಾರ ಹೆಸರುಗಳನ್ನು ಕೈಬಿಡಬೇಕು ಎಂಬುದಕ್ಕೆ ಸಮೀಕ್ಷೆಗಳನ್ನು ನಡೆಸಲಾಗಿದೆ ಎನ್ನಲಾಗಿದ್ದು, ಅಂತಿಮವಾಗಿ ಇಡೀ ಕರ್ನಾಟಕ ರಾಜ್ಯಾದ್ಯಂತ 27 ಲಕ್ಷಕ್ಕೂ ಅಧಿಕ ಮತದಾರರನ್ನು ಪಟ್ಟಿಯಿಂದ ಸದ್ದಿಲ್ಲದೇ ಕೈಬಿಡಲಾಗಿದೆ. ಬೆಂಗಳೂರು ನಗರವೊಂದರಲ್ಲಿಯೇ 6.69 ಲಕ್ಷ ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಭೈರೇಗೌಡರವರು 5,671 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ವಿರುದ್ಧ ಜಯಗಳಿಸಿದ್ದರು. ಈ ಬಾರಿ ಮತದಾರರ ಪರಿಷ್ಕರಣೆಯಲ್ಲಿ ಆ ಕ್ಷೇತ್ರದಲ್ಲಿ ಕೈಬಿಟ್ಟಿರುವ ಮತದಾರರ ಸಂಖ್ಯೆ 30,757 ಆಗಿದೆ ಎಂದರೆ ಲೆಕ್ಕ ಹಾಕಿಕೊಳ್ಳಿ, ಆ ಮತಗಳು ಈ ಬಾರಿ ಅಲ್ಲಿನ ಗೆಲುವನ್ನು ನಿರ್ಧರಿಸುವಷ್ಟು ದೊಡ್ಡ ಸಂಖ್ಯೆಯಲ್ಲಿವೆ. ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿಯೂ ಸರಾಸರಿ 25 ಸಾವಿರದಷ್ಟು ತಮಗೆ ಒಪ್ಪಿತವಲ್ಲದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬ ಆರೋಪವನ್ನು ಆಡಳಿತ ಬಿಜೆಪಿ ಪಕ್ಷ ಎದುರಿಸುತ್ತಿದೆ.

ಅಧಿಕ ಸಂಖ್ಯೆಯಲ್ಲಿ ಮುಸ್ಲಿಂ ಮತದಾರರ ಹೆಸರು ಡಿಲೀಟ್!

ಯಾವುದೇ ವ್ಯಕ್ತಿ ಸಾವನ್ನಪ್ಪಿದರೆ, ಅಥವಾ ಬೇರೆ ಸ್ಥಳಕ್ಕೆ ತಮ್ಮ ಮತದಾರರ ಗುರುತಿನ ಚೀಟಿಯನ್ನು ವರ್ಗಾಯಿಸಿಕೊಂಡರೆ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯುವುದು ವಾಡಿಕೆ. ಆದರೆ ಈ ಬಾರಿ ಮುಸ್ಲಿಂ ಮತದಾರರನ್ನು ಗುರಿಯಾಗಿಸಿಕೊಂಡು ಪಟ್ಟಿ ಪರಿಷ್ಕರಣೆ ನಡೆಸಲಾಗಿದೆ ಎಂದು ಜನಸಾಮಾನ್ಯರು ಮತ್ತು ರಾಜಕೀಯ ಕಾರ್ಯಕರ್ತರು ದೂರಿದ್ದಾರೆ. ಒಂದಷ್ಟು ದಲಿತರ, ಒಂದಷ್ಟು ಪ್ರಗತಿಪರ ವಿಚಾರಗಳ ಬಗ್ಗೆ ಒಲವುಳ್ಳವರ ಹೆಸರುಗಳನ್ನು ಕೂಡ ಪಟ್ಟಿಯಿಂದ ತೆಗೆದಿರುವ ಶಂಕೆ ದಟ್ಟವಾಗುತ್ತಿದೆ. “ನಮಗೆ ಮುಸ್ಲಿಂ ಮತಗಳು ಬೇಡ ಎಂದು ಬಹಿರಂಗವಾಗಿ ಘೋಷಿಸುವ, ಮುಸ್ಲಿಂ ವ್ಯಕ್ತಿಗೂ ಚುನಾವಣೆಯಲ್ಲಿ ಟಿಕೆಟ್ ನೀಡಲು ನಿರಾಕರಿಸುವ ಬಿಜೆಪಿ ಪಕ್ಷದ ನಾಯಕರಿಗೆ ಆ ಮತಗಳು ನಮಗೆ ಸಿಗುವುದಿಲ್ಲ ಎಂದು ತಿಳಿದಿದೆ. ಹಾಗಾಗಿಯೇ ವಿರೋಧ ಪಕ್ಷಗಳಿಗೆ ಮತ ಹಾಕುವ ಆ ಮತದಾರರನ್ನು ಪಟ್ಟಿಯಿಂದ ತೆಗೆಯುವ ಮೂಲಕ ಚುನಾವಣೆಗೂ ಮುನ್ನವೇ ಗೆಲ್ಲುವುದು ಬಿಜೆಪಿಯ ಹುನ್ನಾರವಾಗಿದೆ” ಎಂದು ಆರೋಪಿಸುತ್ತಾರೆ ವಿರೋಧ ಪಕ್ಷದ ಮುಖಂಡರು.

ಬಿಜೆಪಿ ಬೆಂಬಲಿತ ಚಿಲುಮೆಯ ಕಳ್ಳಾಟಗಳು

ಬಿಜೆಪಿಯ ಸಚಿವರ, ಶಾಸಕರ ರಾಜಕೀಯ ಮತ್ತು ಹಣಕಾಸಿನ ಬೆಂಬಲವಿರುವ ’ಚಿಲುಮೆ’ ಎಂಬ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ದಿ ಟ್ರಸ್ಟ್ (ಎನ್‌ಜಿಓ) ಒಂದು ಈ ಇಡೀ ಪ್ರಕ್ರಿಯೆಯ ಹಿಂದಿದೆ ಎಂದು ಆರೋಪಿಸಲಾಗಿದ್ದು ದೂರು ಕೂಡ ದಾಖಲಾಗಿದೆ. ಸ್ವತಂತ್ರ ಚುನಾವಣಾ ಆಯೋಗ ನಡೆಸಬೇಕಾದ ಮತದಾರರ ಪಟ್ಟಿ ಪರಿಷ್ಕರಣೆಯನ್ನು ರಾಜ್ಯ ಸರ್ಕಾರ, ಬಿಬಿಎಂಪಿ ಮತ್ತು ಸ್ಥಳೀಯ ಚುನಾವಣಾಧಿಕಾರಿಗಳ ಅಭಯ ಹಸ್ತ ಪಡೆದು ಚಿಲುಮೆ ಸಂಸ್ಥೆ ಅಕ್ರಮವಾಗಿ ನಡೆಸಿಬಿಟ್ಟಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ. ಮತದಾರರ ಜಾಗೃತಿ ನಡೆಸುವುದಕ್ಕಾಗಿ ಮಾತ್ರ ಅನುಮತಿ ಪಡೆದು ಅದು ಕೆಲ ಚುನಾವಣಾ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಎಂಬ ನಕಲಿ ಗುರುತಿನ ಚೀಟಿಗಳನ್ನು ಸೃಷ್ಟಿಸಿಕೊಂಡು ಬೆಂಗಳೂರಿನ 243 ವಾರ್ಡ್‌ಗಳ ಮತದಾರರ ಸಂಪೂರ್ಣ ಡೇಟಾ ಸಂಗ್ರಹಿಸಿದೆ. ಅದರಲ್ಲಿ ಹೆಸರು, ಮೊಬೈಲ್ ಸಂಖ್ಯೆ, ಜಾತಿ, ಧರ್ಮ, ರೀತಿಯ ಎಲ್ಲಾ ಮಾಹಿತಿ ಪಡೆದುದ್ದಲ್ಲದೆ ಸರ್ಕಾರ ಬಗೆಗಿನ ನಿಮ್ಮ ಅಭಿಪ್ರಾಯವೇನು, ಮುಂದಿನ ಚುನಾವಣೆಯಲ್ಲಿ ಯಾರನ್ನು ಬೆಂಬಲಿಸುತ್ತೀರಿ ಎಂಬ ಸಮೀಕ್ಷೆಯನ್ನು ಸಹ ನಡೆಸಿದೆ. ಆ ಮೂಲಕ ಯಾರು ಸರ್ಕಾರದ ಪರವಾಗಿದ್ದಾರೆ? ಯಾರು ವಿರುದ್ಧವಾಗಿದ್ದಾರೆ ಎಂಬ ಅಮೂಲ್ಯ ಮಾಹಿತಿಯನ್ನು ಕದ್ದಿದೆ.

ಅಲ್ಲದೆ ಚುನಾವಣಾ ಆಯೋಗದಿಂದ ನಿಜವಾಗಿ ನೇಮಕಗೊಂಡ ಬಿಎಲ್‌ಓಗಳಿಗೆ ಹಣ ಕೊಟ್ಟು ಅವರ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಪಡೆದು ತಾನೇ ಮತದಾರರ ಪರಿಷ್ಕರಣೆಗೆ ಕೈ ಹಾಕಿರುವ ಅಂಶಗಳು ಬೆಳಕಿಗೆ ಬಂದಿವೆ. ಮುಸ್ಲಿಂ, ದಲಿತರ ಹೆಸರುಗಳ ಜೊತೆಗೆ ಈ ಮೊದಲೇ ನಡೆಸಿದ್ದ ಸಮೀಕ್ಷೆಯಂತೆ ಸದ್ಯದ ಬಿಜೆಪಿ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದವರ ಹೆಸರನ್ನು ಮುಲಾಜಿಲ್ಲದೆ ಕಿತ್ತು ಬಿಸಾಕಿದೆ ಎಂಬ ಗಂಭೀರ ಆರೋಪವನ್ನು ಈ ಆಳುವ ಬಿಜೆಪಿ ಸರ್ಕಾರ ಎದುರಿಸುತ್ತಿದೆ. ಬಿಎಲ್‌ಓಗಳು ಫೀಲ್ಡಿಗೆ ಬಾರದಂತೆ ನೋಡಿಕೊಳ್ಳಲು ಹಣದ ಆಮಿಷವೊಡ್ಡಿತ್ತಲ್ಲದೆ ಪ್ರತಿ ಗುರುತಿನ ಚೀಟಿಯ ಸಂಪೂರ್ಣ ಮಾಹಿತಿಗೆ ಇಂತಿಷ್ಟು ಎಂದು ಹಣ ಪಾವತಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಒಟ್ಟಾರೆಯಾಗಿ ಕಾನೂನುಬಾಹಿರವಾಗಿ ಮಾಹಿತಿ ಕದ್ದು, ಮತದಾರರ ಹೆಸರು ಡಿಲೀಟ್ ಮಾಡಿದ ಚಿಲುಮೆ ಸಂಸ್ಥೆಯ ಕರ್ಮಕಾಂಡ ಹೊರಬಂದ ಮೇಲೆ ಅದರ ಸಂಸ್ಥಾಪಕ ರವಿಕುಮಾರ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಗೆ ಸಹಾಯ ಮಾಡಿದ ಮೂವರು ಸರ್ಕಾರಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಇದನ್ನೂ ಓದಿ: ಮತದಾರರ ಪಟ್ಟಿಯಲ್ಲಿ ಹೆಸರಿದೆಯೆಂದು ಹುಡುಕುವುದು ಹೇಗೆ? ಡಿಲೀಟ್‌ ಆಗಿದ್ದರೆ ಸೇರಿಸುವುದು ಹೇಗೆ?

ಈ ಹಗರಣದ ಪ್ರಾಥಮಿಕ ತನಿಖೆಯಲ್ಲಿಯೇ ಚಿಲುಮೆ ಸಂಸ್ಥೆ ತಾನು ಸಂಗ್ರಹಿಸಿದ ದತ್ತಾಂಶದ ಮಾರಾಟಕ್ಕೆ ಮುಂದಾಗಿತ್ತು ಎಂಬ ಆತಂಕಕಾರಿ ಮಾಹಿತಿ ಲಭ್ಯವಾಗಿದೆ. ಮಾಜಿ ಶಾಸಕರು ಸೇರಿದಂತೆ ಹಲವರನ್ನು ಇಮೇಲ್ ಮೂಲಕ ಸಂಪರ್ಕಿಸಿ ಅವರಿಗೆ ದತ್ತಾಂಶ ಮಾರಲು ಮುಂದಾಗಿದ್ದ ಸಂದರ್ಭದಲ್ಲಿ ಅದರ ಕಳ್ಳಾಟ ಬಯಲಾಗಿದೆ. ಬಂಧನದ ಸಮಯದಲ್ಲಿ ಚೆಕ್‌ಗಳು, ಲೆಟರ್‌ಹೆಡ್‌ಗಳು, ನೋಟು ಎಣಿಸುವ ಮೆಷಿನ್ ಸಹ ಸಿಕ್ಕಿರುವುದು ಇದೊಂದು ಬಹುದೊಡ್ಡ ಹಗರಣ ಎಂಬುದನ್ನು ಒತ್ತಿ ಹೇಳುತ್ತಿದೆ.

ಸಿಎಂ ಬೊಮ್ಮಾಯಿ, ಸಚಿವ ಅಶ್ವಥ ನಾರಾಯಣ್ ಈ ಹಗರಣದ ಕಿಂಗ್‌ಪಿನ್‌ಗಳು – ಕಾಂಗ್ರೆಸ್

“ಈ ಹಗರಣವು ಸಿಎಂ ಬೊಮ್ಮಾಯಿಯವರ ಆದೇಶದೊಂದಿಗೆ, ಸಚಿವ ಅಶ್ವಥನಾರಾಯಣರವರ ಸಹಕಾರದೊಂದಿಗೆ ಸಂಪೂರ್ಣ ಅಧಿಕಾರ ದುರುಪಯೋಗದಿಂದ ನಡೆದಿದೆ” ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ. “ಹಾಗಾಗಿ ಸರ್ಕಾರಿ ನಿಯಂತ್ರಿತ ಪೊಲೀಸರು ಮಾಡುವುದರ ಬದಲಿಗೆ ಹೈಕೋರ್ಟ್ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ಈ ಪ್ರಕರಣದ ನ್ಯಾಯಾಂಗ ತನಿಖೆಯಾಗಬೇಕೆಂದು” ಆಗ್ರಹಿಸಿದೆ. ಪ್ರಸ್ತುತ ಚಿಲುಮೆ ಸಂಸ್ಥೆ ನಡೆಸಿರುವ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಕೈಬಿಟ್ಟು ನೈಜ ಅಧಿಕಾರಿಗಳು ಪರಿಶೀಲನೆ ನಡೆಸಬೇಕು, ಮಾಹಿತಿ ಕದ್ದಿರುವ ಸಂಸ್ಥೆ, ವ್ಯಕ್ತಿಗಳು, ಅದಕ್ಕೆ ಸಹಕರಿಸಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ನಮ್ಮನ್ನು ಬೆಂಬಲಿಸುತ್ತಿದ್ದ ಅಹಿಂದ ಮತದಾರರನ್ನು ಗುರುತಿಸಿ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರು ಆರೋಪಿಸಿದ್ದಾರೆ.

ಕೇಂದ್ರ ಚುನಾವಣಾ ಆಯೋಗ ಮೋದಿ ಶಾ ಒತ್ತಡದಲ್ಲಿದೆ – ದೇವಸಹಾಯಂ

“ಸಂವಿಧಾನದ 324ನೇ ವಿಧಿಯು ಮತದಾರರ ಪಟ್ಟಿ ಸಿದ್ಧಪಡಿಸುವಿಕೆ ಮತ್ತು ಪರಿಷ್ಕರಣೆಯಿಂದ ಹಿಡಿದು ಇಡೀ ಚುನಾವಣೆ ನಡೆಸುವುದು ಸ್ವತಂತ್ರ ಚುನಾವಣಾ ಆಯೋಗದ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದೆ. ಆದರೆ ಈ ಹಗರಣದ ಕುರಿತು ಕರ್ನಾಟಕ ಸಿಎಂ ಬೊಮ್ಮಾಯಿಯವರು, ’ಇದರಲ್ಲಿ ಕಾಂಗ್ರೆಸ್ ಪಾತ್ರವಿದೆ, 2013ರಿಂದಲೂ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆಗೆ ಆದೇಶ ಹೊರಡಿಸುತ್ತೇನೆ’ ಎಂದು ಹೇಳುತ್ತಾರೆ. ತನಿಖೆ ನಡೆಸಲು ಅವರು ಯಾರು? ಈ ಹೇಳಿಕೆಯ ಮೂಲಕ ಅವರೊಬ್ಬ ಬೇಜವಾಬ್ದಾರಿ ಮುಖ್ಯಮಂತ್ರಿ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ. ಈ ಹಗರಣದಲ್ಲಿ ಅವರ ವಿರುದ್ಧವೇ ಆರೋಪ ಬಂದಿದೆ ಮತ್ತು ಇದು ಚುನಾವಣಾ ಆಯೋಗ ನಡೆಸಬೇಕಾದ ತನಿಖೆ. ಆದರೆ ಸಮಸ್ಯೆಯೆಂದರೆ ದೆಹಲಿಯಲ್ಲಿರುವ ಕೇಂದ್ರ ಚುನಾವಣಾ ಆಯೋಗ ಮೋದಿ, ಶಾರವರ ಒತ್ತಡಕ್ಕೆ ಮಣಿದು ಕೈಕಟ್ಟಿ ಕುಳಿತಿದೆ ಎನ್ನುತ್ತಾರೆ” ಚುನಾವಣಾ ಸುಧಾರಣೆ ಕುರಿತು ಕೆಲಸ ಮಾಡಿರುವ ನಿವೃತ್ತ ಸೇನಾ ಮತ್ತು ಐಎಎಸ್ ಅಧಿಕಾರಿಗಳಾದ ಎಂ.ಜಿ ದೇವಸಹಾಯಂ.

ಎಂ.ಜಿ ದೇವಸಹಾಯಂ

“ಕೇಂದ್ರದಿಂದ ಹಿರಿಯ ಅಧಿಕಾರಿಗಳು ಬಂದು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸುವಂತಾಗಬೇಕು. ಆದರೆ ಇಲ್ಲಿನ ಜೂನಿಯರ್ ಅಧಿಕಾರಿಗಳಿಗೆ ಆ ಜವಾಬ್ದಾರಿ ನೀಡಿದ್ದಾರೆ. ಆಡಳಿತದಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ ದೂರುತ್ತಿದೆ. ಮಾಧ್ಯಮಗಳು ಸಹ ಈ ವಿಚಾರದಲ್ಲಿ ಸತ್ಯ ಬರೆಯದೇ ಸಿಎಂ ಹೇಳಿದ್ದನ್ನು ಬರೆಯುತ್ತಿವೆ. ಇಲ್ಲಿನ ಚುನಾವಣಾ ಆಯೋಗವೇ ಅಲ್ಪಸಂಖ್ಯಾತ ಸಮುದಾಯದ ವಿರೋಧಿಯಾಗಿ ನಡೆದುಕೊಳ್ಳುತ್ತಿರುವಾಗ ನಮ್ಮ ಪ್ರಶ್ನೆಯೆಂದರೆ ಯಾವ ಆಧಾರದಲ್ಲಿ ನೀವು ಮತದಾರರ ಹೆಸರು ಕೈಬಿಟ್ಟಿದ್ದೀರಿ ಎಂಬುದಾಗಿದೆ. ಒಟ್ಟಾರೆ ಈ ಹಗರಣದ ಸೋಷಿಯಲ್ ಆಡಿಟ್ ನಡೆಯಬೇಕು” ಎಂದರು.

ಇದನ್ನೂ ಓದಿ: ಅಹಿಂದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಸರ್ಕಾರ ಕೈಬಿಟ್ಟಿದೆ: ಡಿ.ಕೆ.ಶಿವಕುಮಾರ್‌

ಸಿಎಎ/ಎನ್‌ಆರ್‌ಸಿ ಕಾಯ್ದೆಗಳ ಮೂಲಕ ಕೆಲ ಸಮುದಾಯಗಳ ಪೌರತ್ವ ಕಿತ್ತುಕೊಳ್ಳಲು ನರೇಂದ್ರ ಮೋದಿ ಸರ್ಕಾರ ಮುಂದಾಗಿದ್ದು, ಅದಕ್ಕೆ ದೇಶಾದ್ಯಂತ ವ್ಯಾಪಕ ಚಳವಳಿ ನಡೆದು ಹಿಮ್ಮೆಟ್ಟಿದ್ದು ನಮಗೆಲ್ಲ ಗೊತ್ತಿದೆ. ಅದೇ ಪಕ್ಷ ಇದೀಗ ಆ ಸಮುದಾಯಗಳ ಹೆಚ್ಚಿನವರು ಮತ ಚಲಾಯಿಸದಂತೆ ಹುನ್ನಾರ ನಡೆಸಿದೆ ಎನ್ನುವ ಆರೋಪಗಳು ದಟ್ಟವಾಗಿವೆ. ಅದನ್ನು ತನಿಖೆಗೆ ಒಳಪಡಿಸಿ ತಡೆಯಬೇಕಾದ ಚುನಾವಣಾ ಆಯೋಗ ಕೈಕಟ್ಟಿ ಕುಳಿತಿದೆ. ಸಿಬಿಐ, ಇಡಿ, ಐಟಿ ಇಲಾಖೆಗಳಂತೆ ಚುನಾವಣಾ ಆಯೋಗವು ಸಹ ಕೇಂದ್ರ ಸರ್ಕಾರ ಕೈಗೊಂಬೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನೀರೀಕ್ಷಿಸುವುದು ಹೇಗೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...