Homeಮುಖಪುಟ'ಜ಼ೋರ್ಬಾನ ರೆಕ್ಕೆ ನಾನು': ಕನ್ನಡಿಗರ ಪ್ರಜ್ಞೆಯನ್ನು ವಿಸ್ತರಿಸುವ ಪ್ರಬಂಧಗಳು

‘ಜ಼ೋರ್ಬಾನ ರೆಕ್ಕೆ ನಾನು’: ಕನ್ನಡಿಗರ ಪ್ರಜ್ಞೆಯನ್ನು ವಿಸ್ತರಿಸುವ ಪ್ರಬಂಧಗಳು

ಪ್ರಕಟವಾಗಲಿರುವ ’ಜ಼ೋರ್ಬಾನ ರೆಕ್ಕೆ ನಾನು’ ಪುಸ್ತಕದ ಬಗ್ಗೆ ಟಿಪ್ಪಣಿ

- Advertisement -
- Advertisement -

ಕನ್ನಡದ ಕತೆಗಾರ ಕನಕರಾಜು ಅವರ ಬರಲಿರುವ ಹೊಸ ಪುಸ್ತಕದ ಹಸ್ತಪ್ರತಿಯನ್ನು ಓದುವ ಅವಕಾಶ ಸಿಕ್ಕಿತು. ಅದನ್ನು ಓದಿದಾಗ ನನಗೆ ಅನಿಸಿದ್ದನ್ನು ಹಂಚಿಕೊಳ್ಳಬೇಕೆನಿಸಿದ್ದರಿಂದ ಈ ಟಿಪ್ಪಣಿ.

ಈ ಹಸ್ತಪ್ರತಿಯಲ್ಲಿ ಕನಕರಾಜು ಅವರು ಹಲವು ವರ್ಷಗಳಿಂದ ಬರೆದಿರುವ ಲೇಖನಗಳಿವೆ. ಇವು ಎರಡು ಮಾದರಿಯಲ್ಲಿವೆ. ಮೊದಲನೆಯವು-ಅರೇಬಿಯಾ ದೇಶದ ಜನ, ಚರಿತ್ರೆ, ಕಾವ್ಯ, ಸಂಸ್ಕೃತಿ ಕುರಿತ ಬರೆಹಗಳು. ಕನ್ನಡದಲ್ಲಿ ಯೂರೋಪಿನ ಸಣ್ಣಪುಟ್ಟ ದೇಶಗಳ ಮೇಲೂ ಪ್ರವಾಸ ಕಥನಗಳಿವೆ. ಅಮೆರಿಕದ ಮೇಲಂತೂ ಕಿಕ್ಕಿರಿದಿವೆ. ಆದರೆ ನೆರೆಹೊರೆಯ ನಾಡುಗಳಾದ ಶ್ರೀಲಂಕಾ, ಬರ್ಮಾ, ಚೀನಾ, ಟಿಬೇಟು, ವಿಯೆಟ್ನಾಮುಗಳ ಮೇಲೆ, ಚಾರಿತ್ರಿಕ ಕಾರಣಗಳಿಂದ ಭಾರತದೊಂದಿಗೆ ಪ್ರಾಚೀನ ಸಂಬಂಧವುಳ್ಳ ಆಫ್ಘಾನಿಸ್ತಾನ್, ಇರಾನ್, ಇರಾಕ್, ಸೌದಿ ಅರೇಬಿಯಾಗಳ ಮೇಲೆ ಬಂದಿರುವ ಪ್ರವಾಸಕಥನಗಳು ಕಡಿಮೆ. ಇದಕ್ಕೆ ಕಾರಣ, ಈ ದೇಶಗಳಿಗೆ ಭೇಟಿ ಮಾಡುವವರು ಸಾಮಾನ್ಯವಾಗಿ ಬರೆಹಗಾರರಲ್ಲವೆಂದೊ, ಅವುಗಳ ಬಗ್ಗೆ ಬರೆಯುವುದಕ್ಕೆ ಏನಿದೆ ಎಂಬ ಭಾವವೊ ತಿಳಿಯದು. ಮಧ್ಯಪ್ರಾಚ್ಯ ದೇಶಗಳಲ್ಲಿರುವ ಅನೇಕ ಕೇರಳಿಗರ ಅನುಭವ ಕಥನಗಳು ಮಲೆಯಾಳದಲ್ಲಿ ಪ್ರಕಟವಾಗಿವೆ. ಕೆಲವರು ಅಲ್ಲಿನ ಜೀವನವನ್ನು ಆಧರಿಸಿ ಕತೆ ಕಾದಂಬರಿಗಳನ್ನೂ ರಚಿಸಿದ್ದಾರೆ. ಕನ್ನಡದೊಳಗೆ ಈ ದಿಸೆಯಲ್ಲಿ ಒಂದು ಬಗೆಯ ಗೈರುಹಾಜರಿಯಿದೆ. ಲಕ್ಷಾಂತರ ಕನ್ನಡಿಗರು ಹಜ್‌ಯಾತ್ರೆಗೆಂದೊ ಉದ್ಯೋಗಕ್ಕೆಂದೊ ಹೋಗಿ ಬಂದಿದ್ದರೂ ತಮ್ಮ ಅನುಭವ ಬರೆದಿದ್ದು ಕಡಿಮೆ. ಅರಬ್ ದೇಶಗಳಿಂದ ಮರಳಿ ಬಂದಿರುವ ಅನೇಕರಿಂದ ಅನುಭವಗಳನ್ನು ತೊಂಡಿಯಾಗಿ ಕೇಳಿರುವೆ. ಮೆಕ್ಕಾ ಮದೀನಾಗಳಿಗೆ ಮುಗಿದುಹೋಗುವ ಅವು, ಅರಬರ ಧಾರ್ಮಿಕ ಶ್ರದ್ಧೆ, ದಾನಗುಣ, ಕಾನೂನಿನ ಕಟ್ಟುನಿಟ್ಟು, ಚೆಲ್ಲಾಡುವ ಸಂಪತ್ತು, ಬಿಸಿಲಧಗೆ, ಝಗಝಗಿಸುವ ಅಂಗಡಿ ಇತ್ಯಾದಿಯ ಬಗ್ಗೆ ಭಾವುಕವಾದ ನಿರೂಪಣೆಗಳಿಂದ ಕೂಡಿರುತ್ತವ. ಅರಬಸ್ಥಾನದ ಬಗ್ಗೆ ಪ್ರಾಸಂಗಿಕವಾಗಿ ಬಂದಿರುವ ಪೂರ್ವಗ್ರಹಿತ ಎನ್ನಬಹುದಾದ ಚಿತ್ರಗಳೂ ಇವೆ. ಸಿ.ಎನ್. ರಾಮಚಂದ್ರನ್ ಅವರ ಆತ್ಮಕಥೆಯಲ್ಲಿ ಇವನ್ನು ಕಾಣಬಹುದು.

ಆದರೆ ಕನಕರಾಜು ಅವರ ಲೇಖನಗಳು ಯಾತ್ರಿಕರ ವೈಭವೀಕರಣವೂ ಪೂರ್ವಗ್ರಹಿಕೆಯಿಂದ ಹುಟ್ಟುವ ಏಕಪಕ್ಷೀಯವೂ ಆದ ಚಿತ್ರಗಳಿಗಿಂತ ವಿಭಿನ್ನವಾದವು. ಇವು ಅರಬಸ್ಥಾನದ ನಿಸರ್ಗಸೌಂದರ್ಯ, ಪ್ರಾಚೀನ ಚರಿತ್ರೆ, ವರ್ತಮಾನದ ಸಾಮಾಜಿಕ ಬದುಕನ್ನು, ಅವುಗಳ ಒಳಸಂಘರ್ಷಗಳ ಸಮೇತ ಕಟ್ಟಿಕೊಡುತ್ತವೆ. ಹೊರಗಿನಿಂದ ಹೋದ ವ್ಯಕ್ತಿಗಳು ಎಷ್ಟೇ ನೆಲೆಸಿಗರಾದರೂ ಒಂದು ದೇಶದ ಸಂಸ್ಕೃತಿ ಸಮಾಜ ಧರ್ಮಗಳ ಬಗ್ಗೆ ಕಟ್ಟಿಕೊಡುವ ಚಿತ್ರಗಳಲ್ಲಿ ‘ಅನ್ಯತನ’ದ ಒಂದು ಸಣ್ಣ ಎಳೆಯ ಉಳಿದುಬಿಡುತ್ತದೆ. ಆದರೆ ಸಾಮಾಜಿಕ ರಾಜಕೀಯ ಧಾರ್ಮಿಕ ಭೌಗೋಳಿಕ ವಿಭಿನ್ನತೆಗಳನ್ನು ಬಿಟ್ಟರೆ, ಜಗತ್ತಿನ ಇನ್ನೊಂದೆಡೆ ಇರುವ ಜನರೂ ನಮ್ಮಂತೆಯೇ ಸುಖದುಃಖಗಳಲ್ಲಿ ದೈನಿಕ ಬದುಕು ಮಾಡುತ್ತಿರುತ್ತಾರೆ ಎಂಬ ಮಾನವತಾವಾದಿ ನೋಟವಿದ್ದಾಗ ಈ ಅನ್ಯತನದ ತೊಡಕನ್ನು ತುಸು ಮೀರಲು ಸಾಧ್ಯ. ಇದಕ್ಕಾಗಿ ಪರಕೀಯವಾದ ನಾಡನ್ನು ಬುದ್ಧಿಯ ಮೂಲಕವಲ್ಲ, ಅಂತಃಕರಣದಲ್ಲಿ ಹಾಯಿಸಿಕೊಳ್ಳಬೇಕು. ಲಿಬಿಯಾ ದೇಶವನ್ನು ಕುರಿತು ಉದಯ್ ಇಟಗಿಯವರು ಬರೆದ ಅನುಭವ ಕಥನವೂ ಇದೇ ಮಾದರಿಯದು. ಈ ಇಬ್ಬರೂ ಲೇಖಕರು ಕನ್ನಡದ ಓದುಗರಿಗೆ ಅಗಮ್ಯವಾಗಿಯೇ ಉಳಿದಿದ್ದ ಅರಬ್ ಮತ್ತು ಆಫ್ರಿಕನ್ ಅರಬ್ ನಾಡುಗಳ ತಿಳುವಳಿಕೆಯನ್ನು ನೀಡುವ ಕೆಲಸ ಮಾಡಿದ್ದಾರೆ. ಇದಕ್ಕೆ ಇನ್ನೊಂದು ಕಾರಣ, ಇವು ಪ್ರವಾಸ ಕಥನದ ಭಾಗವಾಗಿ ಹುಟ್ಟಿರದೆ, ಬಹುಕಾಲ ನೆಲೆಸಿಗರಾಗಿದ್ದು ಹುಟ್ಟಿರುವುದು.

ಅರಬಸ್ಥಾನಕ್ಕೂ ಭಾರತಕ್ಕೂ ವ್ಯಾಪಾರ ಮತ್ತು ಧರ್ಮಗಳ ವಿಷಯದಲ್ಲಿ ಲಾಗಾಯ್ತಿನಿಂದಿರುವ ನಂಟಿನ ಮೇಲೆ ಕನ್ನಡದಲ್ಲಿ ಬರೆಹಗಳಿವೆ. ಆದರೆ ಸಾಹಿತ್ಯ ಸಂಬಂಧ ಕುರಿತ ಬರೆಹಗಳು ತೀರ ಕಡಿಮೆ. ಈ ದೃಷ್ಟಿಯಿಂದ ಈ ಕೃತಿಯಲ್ಲಿರುವ ಬದೂವಿಯನ್ ಸಮುದಾಯ ಮತ್ತು ಅದರ ಕಾವ್ಯಪರಂಪರೆಯ ಬಗೆಗಿನ ಲೇಖನವು ಮಹತ್ವದ್ದಾಗಿದೆ. ಲೇಖಕರು ಕತೆಗಾರರೂ ಸಾಹಿತ್ಯದ ಅಧ್ಯಾಪಕರೂ ಆಗಿರುವ ಕಾರಣ, ಇಲ್ಲಿನ ಅರಬ್ ಕಾವ್ಯದ ಚರ್ಚೆಯಲ್ಲಿ ಸೂಕ್ಷ್ಮ ವಿಶ್ಲೇಷಣೆ ಸಾಧ್ಯವಾಗಿದೆ. ಕಾವ್ಯವನ್ನು ಮಾನವಶಾಸ್ತ್ರೀಯ ತಿಳಿವಳಿಕೆಯ ಹಿನ್ನೆಲೆಯಲ್ಲಿ ಒಂದು ಸಮುದಾಯದ ಚರಿತ್ರೆಗೂ ಮತ್ತು ವರ್ತಮಾನದ ಬದುಕಿಗೂ ಲಗತ್ತಿಸಿ ನೋಡಿದ್ದರಿಂದ ಹುಟ್ಟಿದ ಒಳನೋಟಗಳಿವೆ. ಇಲ್ಲಿನ ಲೇಖನಗಳನ್ನು ಓದುವಾಗ ಅರಬಸ್ಥಾನದ ಸಾಂಸ್ಕೃತಿಕ ಪ್ರವಾಸ ಮಾಡಿದಂತಾಗುವುದು. ಸಂಸ್ಕೃತ-ಪಾಶ್ಚಿಮಾತ್ಯ ಎಂಬ ಎರಡು ಸಾಹಿತ್ಯಮೀಮಾಂಸೆಯ ಧಾರೆಗಳನ್ನು ಅತಿಯಾಗಿ ನೆಮ್ಮಿಕೊಂಡು, ತಮಿಳು ಅರಬ್ಬಿ ಚೀನಿ ಆಫ್ರಿಕನ್ ಸಾಹಿತ್ಯಮೀಮಾಂಸೆಗಳ ಬಗ್ಗೆ ಕೊಡಬೇಕಾದಷ್ಟು ಗಮನಕೊಡದೆ ಕನ್ನಡ ಸಾಹಿತ್ಯ ತತ್ವಗಳ ಚರ್ಚೆಯು ಬಡಕಲಾಗಿದೆ. ಈ ದೃಷ್ಟಿಯಿಂದ ಅರಬ್ಬಿಸಾಹಿತ್ಯದ ಬಗ್ಗೆ ಇಲ್ಲಿರುವ ನೋಟಗಳು ಕನ್ನಡದ ಪರ್ಯಾಯ ಸಾಹಿತ್ಯ ಮೀಮಾಂಸೆಯ ಚರ್ಚೆಗಳಿಗೆ ಹೊಸದಿಕ್ಕನ್ನು ತೋರಿಸುವಂತಿವೆ.

ಎರಡನೆಯ ಮಾದರಿಯ ಲೇಖನಗಳು-ಆಂಗ್ಲ ಅಧ್ಯಾಪಕರಾದ ಲೇಖಕರು ತಮ್ಮ ವೃತ್ತಿಪರ ಆಸಕ್ತಿಯ ಭಾಗವಾಗಿ ಜಗತ್ತಿನ ಬೇರೆಬೇರೆ ಕೃತಿ ಮತ್ತು ಲೇಖಕರ ಮೇಲೆ ಮಾಡಿರುವ ವಿಶ್ಲೇಷಣೆಗಳಾಗಿವೆ. ಮೊದಲನೇ ಮಾದರಿಯ ಲೇಖನಗಳಲ್ಲಿರುವಂತೆ, ಇಲ್ಲಿ ಲೇಖಕರ ಅನುಭವಲೋಕವಿಲ್ಲ. ಅಧ್ಯಯನದಿಂದ ಮೂಡಿದ ಚಿಂತನೆಗಳಿವೆ. ಉದಾಹರಣೆಗೆ ಶೇಕ್ಸ್‌ಪಿಯರ್ ಕೃತಿಗಳ ಪ್ರಥಮ ಮುದ್ರಣ ಸಂಪುಟವಾದ ‘ಫಸ್ಟ್ ಪೋಲಿಯೊ’ ಕುರಿತ ಲೇಖನ. ಸಾಹಿತ್ಯ ಚರಿತ್ರೆಯ ವಿದ್ಯಾರ್ಥಿಗಳು ಸಾಹಿತ್ಯಕ್ಕೆ ಲಗತ್ತಾದ ಮುದ್ರಣ, ಪ್ರಕಾಶನ, ಬಹುಮಾನ ಇತ್ಯಾದಿ ಜಗತ್ತಿನ ಬಗ್ಗೆ ತಿಳಿಯುವುದು ಎಷ್ಟು ಮುಖ್ಯವೆಂಬುದಕ್ಕೆ ಇದು ಒಳ್ಳೆಯ ಮಾದರಿ. ಆಧುನಿಕ ಸಾಹಿತ್ಯ ಕೃತಿಗಳನ್ನು ಕುರಿತಂತೆ ಈ ಮಾದರಿಯಲ್ಲಿ ಲೇಖನಗಳು ಪ್ರಕಟವಾಗುವ ಅಗತ್ಯವಿದೆ. ಉದಾಹರಣೆಗೆ ಬಂಗಾಳಿ ಲೇಖಕರು ಬರೆದ ಸಾಹಿತ್ಯ ಕೃತಿಗಳು, ಬಂಗಾಳದಲ್ಲಿ ಪ್ರಕಟವಾಗುವ ಮುನ್ನವೇ ಕನ್ನಡದಲ್ಲಿ ಅವುಗಳ ನೇರ ಅನುವಾದ ಪ್ರಕಟವಾಗುವಂತಹ ವ್ಯವಸ್ಥೆಯೂ ಒಂದು ಕಾಲಕ್ಕೆ ಕನ್ನಡದಲ್ಲಿತ್ತು. ಕನ್ನಡದ ಅನುವಾದಕರು ಭಾರತದ ಬೇರೆಬೇರೆ ಭಾಷೆಯನ್ನು ಕಲಿತು, ಅದರಿಂದ ಪಡೆದುಕೊಳ್ಳಲು ಮಾಡಿದ ವಿಶಿಷ್ಟ ಸಾಹಿತ್ಯಕ ಸಾಹಸಗಳಿವು. ಕನಕರಾಜು ಅವರು ಬರೆದಿರುವ ಸಾಹಿತ್ಯ ಕುರಿತ ಬರೆಹಗಳು ಪಠ್ಯವನ್ನು ಆಳವಾಗಿ ವಿಶ್ಲೇಷಿಸುತ್ತವೆ. ಆದರೆ ಅಲ್ಲಿಗೆ ನಿಲ್ಲದೆ, ಆ ಪಠ್ಯವನ್ನು ರೂಪಿಸಿದ ಚಾರಿತ್ರಿಕ ಹಿನ್ನೆಲೆಯನ್ನು ಶೋಧಿಸುತ್ತವೆ. ಪಠ್ಯ ಪ್ರಕಟವಾದ ಮೇಲೆ ಸೃಷ್ಟಿಯಾದ ಚರಿತ್ರೆಯನ್ನೂ ಶೋಧಿಸುತ್ತವೆ. ಪಠ್ಯದ ಜತೆ ಲಗತ್ತಾಗಿರರುವ ಚರಿತ್ರೆ, ಸಂಸ್ಕೃತಿ, ಧರ್ಮ ರಾಜಕಾರಣದ ವಿವಿಧ ಆಯಾಮಗಳನ್ನು ಹುಡುಕುತ್ತವೆ. ಇದನ್ನು ಸಾಂಸ್ಕೃತಿಕ ಅಧ್ಯಯನದ ಮಾದರಿ ಎಂದು ಕರೆಯಬಹುದು. ಈ ಮಾದರಿಯು ಶೇಕ್ಸ್‌ಪಿಯರನಂತಹ ಪ್ರಧಾನಧಾರೆಯ ಕೃತಿಗಳ ಮೇಲಿನ ಲೇಖನಗಳಿಗಿಂತ, ಆಂಗ್ಲೇತರ ಭಾಷೆಗೆ ಸೇರಿದ ಅನಾಮಿಕ ಭಾಷೆಯ ಸಾಹಿತ್ಯ ಕೃತಿಗಳ ಮತ್ತು ಲೇಖಕರನ್ನು ಕುರಿತು ಬಂದಿರುವ ಲೇಖನಗಳಲ್ಲಿ ಚೆನ್ನಾಗಿ ಪ್ರಕಟವಾಗಿದೆ. ಈ ದಿಸೆಯಿಂದ ಕಝರ್ ಬುಡಕಟ್ಟಿಗೆ ಸಂಬಂಧಿಸಿದ ‘ಡಿಕ್ಷನರಿ ಆಫ್ ಕಝರ್‍ಸ್’ ಕೃತಿಯ ಚರ್ಚೆಯು ಅಪರೂಪದ್ದಾಗಿದೆ. ಪಾಶ್ಚಿಮಾತ್ಯವೆಂದರೆ ಇಂಗ್ಲೆಂಡ್, ರಶಿಯನ್, ಫ್ರೆಂಚ್ ಸಾಹಿತ್ಯಕ್ಕೆ ಅಂಟಿಕೊಂಡಿರುವ ಕನ್ನಡದ ಜಾಗತಿಕ ಸಾಹಿತ್ಯದ ಪರಿಕಲ್ಪನೆಯ ಚೌಕಟ್ಟನ್ನು ಅನೇಕರು ಒಡೆದು ವಿಸ್ತರಣೆ ಮಾಡುತ್ತ ಬಂದಿದ್ದಾರೆ. ಈ ಕೆಲಸವನ್ನು ಕನಕರಾಜು ದಕ್ಷಿಣ ಅಮೆರಿಕ, ಅರಬ್, ಆಫ್ರಿಕನ್ ಬರೆಹಗಾರರ ಮೂಲಕ ಸಮರ್ಥವಾಗಿ ವಿಸ್ತರಿಸುತ್ತಾರೆ. ಲೇಖಕರಿಗೆ ಜಾನಪದದಲ್ಲಿ ಹಾಗೂ ಕಾವ್ಯದಲ್ಲಿ ಇರುವ ಪ್ರವೇಶವು ಕೂಡ ಇಲ್ಲಿನ ಚರ್ಚೆಯನ್ನು ಸೂಕ್ಷ್ಮಗೊಳಿಸಿದೆ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ ಅಧ್ಯಾಯ-1; ಭಾಗ-2

ಈ ಎರಡೂ ಮಾದರಿಯ ಬರೆಹಗಳ ವಿಶಿಷ್ಟತೆಯಿರುವುದು, ಜಗತ್ತಿನ ಬೇರೆಬೇರೆ ಭಾಷೆಗಳ ಸಾಹಿತ್ಯ, ಭಾಷೆ, ಸಂಸ್ಕೃತಿಗಳ ಚರ್ಚೆಯನ್ನು ತಮ್ಮ ಆತ್ಮಕಥನಕ್ಕೆ ಜೋಡಿಸುವುದರಲ್ಲಿ. ಮತ್ತೊಂದು ಎಳೆಯನ್ನು ತಂದು ಭಾರತದ ಚರಿತ್ರೆ, ಸಂಸ್ಕೃತಿ, ಭಾಷೆ, ಪುರಾಣಗಳಿಗೆ ಲಗತ್ತಿಸುವುದರಲ್ಲಿ. ಹೀಗೆ ಜೋಡಣೆಗೊಳ್ಳುವ ಮೂಲಕ ಲೇಖನಗಳಿಗೆ ಸೃಷ್ಟಿಯಾಗಿರುವ ಆತ್ಮಕಥನಾತ್ಮಕ ಮತ್ತು ಸ್ಥಳೀಕರಣದ ಆಯಾಮವು ಆಪ್ತವಾಗಿದೆ ಮತ್ತು ಉಪಯುಕ್ತವಾಗಿದೆ. ಇಲ್ಲಿನ ಬಹುತೇಕ ಲೇಖನಗಳು ಪತ್ರಿಕೆಗಳಿಗೆ ಬರೆದವು. ಹೀಗಾಗಿ ಇವುಗಳಲ್ಲಿ ಪರಿಚಯಿಸುವ ಗುಣ ಪ್ರಮುಖವಾಗಿದೆ. ಕನ್ನಡದ ಓದುಗರಿಗೆ ಅಷ್ಟು ಪರಿಚಯವಿಲ್ಲದ ಆಫ್ರಿಕನ್, ಜಪಾನಿ, ಸ್ಪ್ಯಾನಿಶ್, ಅರಬ್ಬಿ ಸಾಹಿತ್ಯದ ಪ್ರವೇಶವಿಲ್ಲದ್ದರಿಂದ ಈ ಪರಿಚಯಾತ್ಮಕತೆ ಅಪೇಕ್ಷಣೀಯವೂ ಆಗಿದೆ ಎನ್ನಬಹುದು. ಆದರೆ ಇಲ್ಲಿನ ಲೇಖನಗಳ ಕೆಲವು ಭಾಗಗಳು, ಆಳವಾಗಿ ತಾತ್ವಿಕ ಚರ್ಚೆಯನ್ನು ಮಾಡುವ, ಮತ್ತು ಸಾಹಿತ್ಯದ ಚರ್ಚೆಯನ್ನು ಲೋಕದೃಷ್ಟಿಯ ಶೋಧವನ್ನಾಗಿ ಮಾಡುವ ಲೇಖಕರ ಕಸುವನ್ನೂ ಪ್ರಕಟಿಸಿವೆ. ಕನ್ನಡಿಗರ ಪ್ರಜ್ಞೆಯನ್ನು ವಿಸ್ತರಿಸುವ, ಅವರಿಗೆ ಸಾಂಸ್ಕೃತಿಕ ಶಿಕ್ಷಣ ಕೊಡುವ ಕೆಲಸವನ್ನು ಮಾಡುವ ಈ ಬರೆಹಗಳು ಕೃತಿಯಾಗಿ ಪ್ರಕಟವಾಗುತ್ತಿವೆ.

(ಜ಼ೋರ್ಬಾನ ರೆಕ್ಕೆ ನಾನು ಪುಸ್ತಕ ಜನವರಿಯಲ್ಲಿ ಬಿಡುಗಡೆಯಾಗಲಿದೆ.)

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...