ಬೆಳವಲದ ಸುಡುಸುಡುವ ಬಿಸಿಲಿನ ನರಗುಂದ ಬಂಡಾಯ-ಹೋರಾಟಗಳ ಬಿಸಿ ಭೂಮಿ! 1857ರ ಸಿಪಾಯಿ ದಂಗೆ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ನರಗುಂದದಲ್ಲಾದ ಬಂಡಾಯ, 1980ರ ರೈತ ಕ್ರಾಂತಿ ಮತ್ತು ಕಳೆದ 2,750ಕ್ಕೂ ಹೆಚ್ಚು ದಿನಗಳಿಂದ ನಡೆಯುತ್ತಿರುವ ಮಲಪ್ರಭೆ-ಮಹದಾಯಿ ನದಿ ಜೋಡಣೆ ಹಕ್ಕೊತ್ತಾಯದ ರೈತ ಚಳವಳಿಯ ಕೆಚ್ಚು ಇತಿಹಾಸದ ಪುಟದಲ್ಲಿ ಅಚ್ಚಳಿಯದೆ ದಾಖಲಾಗಿದೆ! ಬಾಬಾಸಾಹೇಬ್ ಎಂದೇ ಹೆಸರುವಾಸಿಯಾಗಿದ್ದ ನರಗುಂದದ ಪಾಳೆಗಾರ ಭಾಸ್ಕರ್ ರಾವ್ ಭಾವೆಗೆ ಬ್ರಿಟಿಷರು ದತ್ತು ಸ್ವೀಕಾರಕ್ಕೆ ಅವಕಾಶ ಕೊಡಲಿಲ್ಲ; ಇದರಿಂದ ಸಿಟ್ಟಿಗೆದ್ದಿದ್ದ ಬಾಬಾಸಾಹೇಬ್ 1857ರಲ್ಲಿ ಬ್ರಿಟಿಷರ ವಿರುದ್ಧ ಸಿಡಿದೆದ್ದರು. ಆಗ ನರಗುಂದದ ಮಂದಿ ಬ್ರಿಟಿಷರ ಆಕ್ರಮಣವನ್ನು ಕೆಚ್ಚೆದೆಯಿಂದ ಎದುರಿಸಿದ್ದರು. ಬಾಬಾಸಾಹೇಬ್ ಬ್ರಿಟಿಷ್ ಸೈನ್ಯದ ಕಮಾಂಡರ್ ಮತ್ತು ಸೈನಿಕರ ಶಿರಚ್ಛೇದ ಮಾಡಿಸಿದ್ದರು ಎನ್ನುತ್ತದೆ ಇತಿಹಾಸ. ಆ ಬಳಿಕ ಬ್ರಿಟಿಷರು ಬಾಬಾಸಾಹೇಬರನ್ನು ಮೋಸದಿಂದ ಮಣಿಸಿ ಕೊಂದುಹಾಕಿದರು. ನರಗುಂದದ ಪುರಸಭೆ ಎದುರು ನಿಲ್ಲಿಸಲಾಗಿರುವ ಬಾಬಾಸಾಹೇಬರ ಆಳೆತ್ತರದ ಪ್ರತಿಮೆ ಅಂದಿನ ಕ್ರಾಂತಿ ಕತೆಯನ್ನು ಸಾರಿಹೇಳುತ್ತದೆ.
ನರಗುಂದದಲ್ಲಿ ಹುತಾತ್ಮ ರೈತರ ವೀರಗಲ್ಲುಗಳನ್ನು ಸ್ಥಾಪಿಸಲಾಗಿದೆ. ಈ ವೀರಗಲ್ಲುಗಳ ಹಿಂದೆ ನರಗುಂದ ರೈತರ ಧೈರ್ಯ-ಸಾಹಸದ ಹೋರಾಟದ ಇತಿಹಾಸವಿದೆ! 1979-80ರ ಬರಗಾಲದ ದುರ್ದಿನಗಳವು. ಅದೇ ಹೊತ್ತಿಗೆ ಬಹುವಾಗಿ ನೆಚ್ಚಿ ಬೆಳೆದಿದ್ದ ಹತ್ತಿಯ ಬೆಲೆ ಅರ್ಧಕ್ಕರ್ಧ ಇಳಿದಿತ್ತು; ಹಿಂದಿನ ದಿನ ಕ್ವಿಂಟಾಲಿಗೆ ರೂ.700-800 ಇದ್ದ ಹತ್ತಿ ಬೆಲೆ ರೂ.300-400ಕ್ಕೆ ಕುಸಿದಿತ್ತು. ಹತ್ತಿ-ಬಟ್ಟೆ ಮಾರುಕಟ್ಟೆಯ ಬಂಡವಾಳಶಾಹಿಗಳು ಮತ್ತು ದಲ್ಲಾಳಿಗಳು ರೈತರನ್ನು ಅಸಹಾಯಕರನ್ನಾಗಿಸುವ ತಂತ್ರಗಾರಿಕೆಯಿಂದ ಹತ್ತಿಯನ್ನು ಅಗ್ಗಕ್ಕೆ ಕುದುರಿಸುತ್ತಿದ್ದರು. ಓಸಿ ಮಟ್ಕಾ ಜೂಜಿನ ಓಪನ್-ಕ್ಲೋಸ್‌ನಂತಾಗಿತ್ತು ಹತ್ತಿ ರೇಟು. ನ್ಯೂಯಾರ್ಕ್ ಕಾಟನ್ ಮಾರ್ಕೆಟ್‌ನ ಆರಂಭದ ಮತ್ತು ಕೊನೆಯ ಬೆಲೆಯ ನಡುವೆ ಸ್ಥಳೀಯ ಹತ್ತಿ ರೇಟನ್ನು ಏರುಪೇರಾಗಿಸಿ ಅಮಾಯಕ ರೈತ ಸಮೂಹಕ್ಕೆ ವ್ಯವಸ್ಥಿತವಾಗಿ ಮೋಸ-ವಂಚನೆ ಮಾಡಲಾಗುತಿತ್ತು!!
ರೈತರು ದೈನಂದಿನ ಕೂಳಿನ ಲವಾಜಮೆಗಳೂ ಕೈಗೆಟುಕದೆ ಕಂಗಾಲಾಗಿದ್ದ ಆ ಸಂದರ್ಭದಲ್ಲಿ ಸರಕಾರ ವಿಪರೀತ ನೀರಾವರಿ ಬೆಟರ್‌ಮೆಂಟ್ ಲೆವಿ (ಅಣೆಕಟ್ಟು, ಕಾಲುವೆ ಮುಂತಾದ ನೀರಾವರಿ ಕಾಮಗಾರಿ ಯೋಜನಾ ವೆಚ್ಚಗಳಿಗೆ ರೈತರಿಂದ ಕರದ ಮೂಲಕ ವಸೂಲಿ ಮಾಡುವುದು) ಹಾಕಿತ್ತು. ಈ ಬೆಟರ್‌ಮೆಂಟ್ ಲೆವಿ ಹಿಂತೆಗೆದುಕೊಳ್ಳಬೇಕು ಮತ್ತು ಹತ್ತಿ-ಮುಸುಕಿನ ಜೋಳಕ್ಕೆ ಲಾಭದಾಯಕ ಬೆಲೆಕೊಟ್ಟು ಸರಕಾರವೇ ಖರೀದಿಸಬೇಕು ಎಂಬ ಬೇಡಿಕೆಯಿಟ್ಟು, ಮಲಪ್ರಭಾ ಆಣೆಕಟ್ಟು ನೀರಾವರಿ ಅಚ್ಚುಕಟ್ಟು ಪ್ರದೇಶದ ಸವದತ್ತಿ, ನವಲಗುಂದ ಮತ್ತು ನರಗುಂದದ ಮಣ್ಣಿನ ಮಕ್ಕಳು ಹೋರಾಟ ಆರಂಭಿಸಿದರು. ರೈತರ ಹೋರಾಟ ಬಿರುಸಾಗುತ್ತಿದ್ದಾಗ ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನರಗುಂದಕ್ಕೆ ಬಂದರು. ನೊಂದಿದ್ದ ರೈತರು ಸಿಎಂ ಎದುರು ಪ್ರತಿಭಟನೆ ಮಾಡಿದರು. “ಇದಕ್ಕೆಲ್ಲ ಕೇರ್ ಮಾಡೋನು ನಾನಲ್ಲ… ಲೆವಿ ವಸೂಲಿ ನಿಲ್ಲಿಸಬೇಡಿ…” ಎಂದು ಸಿಎಂ ಜಿಲ್ಲಾಡಳಿತಕ್ಕೆ ರೈತರೆದುರೇ ಆದೇಶ ಕೊಟ್ಟುಹೋದರು!
ಜಿಲ್ಲಾಧಿಕಾರಿಯಾಗಿದ್ದ ರೇಣುಕಾ ವಿಶ್ವನಾಥ್ ಸರಕಾರವನ್ನು ಮೆಚ್ಚಿಸಲು ಲೆವಿ ವಸೂಲಿಯನ್ನು ಕಟ್ಟುನಿಟ್ಟಾಗಿಸಿದರು; ಪ್ರಭುತ್ವದ ಪಾತಕ ಮಿತಿಮೀರಿತು. ರೈತರ ಹೋರಾಟವೂ ಹುರಿಗೊಂಡಿತು. 21.7.1980ರಂದು ಮಣ್ಣಿ ಮಕ್ಕಳು ನರಗುಂದ ಬಂದ್‌ಗೆ ಕರೆಕೊಟ್ಟರು! ಅಧಿಕಾರಿ-ನೌಕರರನ್ನು ಕಚೇರಿಗಳನ್ನು ಪ್ರವೇಶಿಸದಂತೆ ನಿರ್ಬಂಧಿಸಿದರು. ಜಿಲ್ಲಾಧಿಕಾರಿ ನಿರ್ದೇಶನದಂತೆ ಪೊಲೀಸ್ ಬಲದಲ್ಲಿ ಕಚೇರಿ ಪ್ರವೇಶಿಸಲು ತಹಶೀಲ್ದಾರ್ ಹವಣಿಸಿದರು. ರೈತರು ದಾರಿಗಡ್ಡವಾಗಿ ಮಲಗಿದರು. ರೈತರನ್ನು ತುಳಿಯುತ್ತಲೇ ತಹಶೀಲ್ದಾರ್ ಮತ್ತು ಪೊಲೀಸರು ಕಚೇರಿ ಒಳಗೆ ಹೋದರು. ಇದು ಮೆರವಣಿಗೆಯಲ್ಲಿ ಬರುತ್ತಿದ್ದ ರೈತ ಸಾಗರವನ್ನು ಕೆಣಕಿತು. 8-10 ಸಾವಿರದಷ್ಟಿದ್ದ ರೈತರು ಮತ್ತು ಪೊಲೀಸರ ನಡುವೆ ಸಂಘರ್ಷವಾಯಿತು. ತಹಶೀಲ್ದಾರ್‌ರ ಕಿವಿಯೊಂದು ಹರಿದುಹೋಯಿತು; ಗೋಲಿಬಾರ್-ದೊಂಬಿಯಲ್ಲಿ ಮೂರು ರೈತರು ಹಾಗೂ ಪಿಎಸ್‌ಐ ಸಹಿತ ಮೂರು ಪೊಲೀಸರು ಹತರಾದರು. ಸಾವಿರಾರು ರೈತರು ಗಾಯಗೊಂಡರು. ರೈತರ ನಡುವೆ ನುಸುಳಿಕೊಂಡಿದ್ದ ಓಸಿ ಮಟ್ಕಾ ದೊರೆಗಳ ಕೈಯ್ಯಾಳುಗಳು ತಮಗೆ ಸಿಂಹಸ್ವಪ್ನವಾಗಿದ್ದ ಪ್ರಾಮಾಣಿಕ ಪಿಎಸ್‌ಐನನ್ನು ಅಟ್ಟಾಡಿಸಿ ಕಲ್ಲು ಎತ್ತಿಹಾಕಿ ಕೊಂದಿದ್ದರು! ಆ ಬಳಿಕದ ಒಂದು ತಿಂಗಳಲ್ಲಿ ನೂರಾರು ರೈತರು ಸಾವಿಗೀಡಾದರು!
1980ರ ದಶಕದ ನರಗುಂದ ರೈತ ಬಂಡಾಯ ರಾಜ್ಯಾದ್ಯಂತ ರೈತ ಚಳವಳಿ ಮತ್ತು ರೈತ ಸಂಘ ಸ್ಥಾಪನೆಗೆ ಪ್ರೇರಣೆಯಾಯಿತು; ಅಂದಿನ ರೈತ ವಿರೋಧಿ ಗುಂಡೂರಾವ್ ಸರಕಾರದ ಪತನಕ್ಕೂ ಮೂಲವಾಯಿತು! ಈ ಐದೂಕಾಲು ದಶಕದಲ್ಲಿ ನರಗುಂದ ಹಲವು ರೈತ ಹೋರಾಟ ಕಂಡಿದೆ. ಕಳೆದ ಏಳೆಂಟು ವರ್ಷದಿಂದ ಮಹದಾಯಿ ನೀರಿಗಾಗಿ ನರಗುಂದದ ಮಣ್ಣಿನ ಮಕ್ಕಳು ನಿರಂತರ ಚಳವಳಿ ನಡೆಸುತ್ತ ಬಂದಿದ್ದಾರೆ! ಈ ರೈತರ ಹೋರಾಟಗಾರರನ್ನು ಆಳುವವರು ಜೈಲಿಗೆ ಹಾಕಿದ್ದೂ ಇದೆ; ಪೊಲೀಸ್ ದೌರ್ಜನ್ಯವೂ ಆಗಿದೆ! ಮಹದಾಯಿಯನ್ನು ಮಲಪ್ರಭೆಗೆ ಜೋಡಿಸಿ ಕಳಸಾ-ಬಂಡೂರಿ ಕಾಲುವೆಯಲ್ಲಿ ನೀರು ಹರಿಸಿದರೆ ನರಗುಂದ ಹಚ್ಚಹಸುರಾಗಿ, ತಾವೂ ಉಂಡುಟ್ಟು ಬದುಕಬಹುದೆಂಬ ನಿರೀಕ್ಷೆ ರೈತಾಪಿ ವರ್ಗದ್ದು.
ರೈತರ ಈ ಕನಸಿನ ಸುತ್ತಲೇ ಪ್ರತಿ ಚುನಾವಣೆಯಲ್ಲಿ ಸಕಲ ಪಕ್ಷದ ರಾಜಕಾರಣಿಗಳು ಅಖಾಡ ಕಟ್ಟಿಕೊಳ್ಳುತ್ತಾರೆ. ಮೊದಲ ರೈತ ಬಂಡಾಯದ ಮುಂಚೂಣಿಯಲ್ಲಿದ್ದು ರೈತರಿಗೆ ಕಾನೂನು ನೆರವು ನೀಡಿದ್ದ ಬಿ.ಆರ್.ಯಾವಗಲ್ ಹಲವು ಬಾರಿ ಶಾಸಕನಾಗಿ ಮಂತ್ರಿ-ವಿಧಾನಸಭೆಯ ಉಪಾಧ್ಯಕ್ಷ ಸ್ಥಾನಗಳಂತಹ ಆಯಕಟ್ಟಿನ ಅಧಿಕಾರ ಅನುಭವಿಸಿದರು. ಮಾಜಿ ಸಿಎಂ ಯಡಿಯೂರಪ್ಪರಂಥ ಪ್ರಭಾವಿ ಮುಖಂಡರೂ ಕಳಸಾ ಬಂಡೂರಿ ಯೋಜನೆ ಹೆಸರಲ್ಲಿ ರಾಜಕಾರಣ ಮಾಡಿದ್ದಿದೆ; ಗೋವಾದ ಮುಖ್ಯಮಂತ್ರಿಯಾಗಿದ್ದ ಮನೋಹರ ಪರ್ರಿಕರ್ ಮಹದಾಯಿ-ಮಲಪ್ರಭಾ ಜೋಡಣೆಗೆ ಒಪ್ಪಿಗೆ ಸೂಚಿಸಿ ಪತ್ರ ಬರೆದಿದ್ದಾರೆಂದು ಸುಳ್ಳು ಬಿತ್ತರಿಸಿ ತಮ್ಮ ಪರಮಾಪ್ತ ಅನುಯಾಯಿ ಹಾಲಿ ಮಂತ್ರಿ ಸಿ.ಸಿ.ಪಾಟೀಲ್‌ರನ್ನು ಗೆಲ್ಲಿಸಿಕೊಂಡಿದ್ದರು. ಒಟ್ಟಿನಲ್ಲಿ ಸ್ಥಳೀಯ ಮತ್ತು ರಾಜ್ಯ ಮಟ್ಟದ ರಾಜಕಾರಣಿಗಳಿಗೆ, ಮಹದಾಯಿ ಯೋಜನೆಯ ಆಸೆ ಚಿಗುರಿಸಿ ನರಗುಂದ ರೈತರ ಕಿವಿಮೇಲೆ ಹೂವಿಟ್ಟು ಓಟು ಗಿಟ್ಟಿಸುವ ಕಲೆ ಕರಗತವಾಗಿಬಿಟ್ಟಿದೆ ಎಂದು ರಾಜಕೀಯ ಪಂಡಿತರು ಹೇಳುತ್ತಾರೆ.
ಇತಿಹಾಸ-ಸಂಸ್ಕೃತಿ
ನರಗುಂದ ಮತ್ತು ಚಿಕ್ಕ ನರಗುಂದ ಬೆಟ್ಟಗಳನ್ನು ಬಿಟ್ಟರೆ ತಾಲ್ಲೂಕಿನ ಉಳಿದೆಲ್ಲಾ ಭಾಗ ಮೈದಾನ ಪ್ರದೇಶ. ಪ್ರಾಚೀನ ಶಾಸನದಲ್ಲಿ ’ಪಿರಿಯಾ ನರಗುಂದ’ವೆಂದು ಉಲ್ಲೇಖಿಸಲ್ಪಟ್ಟಿರುವ ನರಗುಂದದ ಹೆಸರಿನ ವ್ಯುತ್ಪತ್ತಿ ಬಗ್ಗೆ ಎರಡು ತರ್ಕಗಳಿವೆ. ನರಿ+ಕುಂಡಾ (ಬೆಟ್ಟ) ನರಗುಂದ ಹೆಸರಿನ ಮೂಲವೆಂಬುದು ಒಂದು ವಾದ. ಮತ್ತೊಂದು ನಂಬಿಕೆಯಂತೆ ನರಗುಂದ ’ನಾರಿಗುಂಡು’ ಪದದಿಂದ ಹುಟ್ಟಿಕೊಂಡಿದೆ. ಇದರರ್ಥ ನರಿಗಳಿರುವ ಗುಡ್ಡ. ಈಗ ನರಿಗಳಿಲ್ಲ. ಗುಡ್ಡಗಳ ಮೇಲೆ ಗಾಳಿ ಯಥೇಚ್ಛವಾಗಿ ಬೀಸುವುದರಿಂದ ಪವನ ವಿದ್ಯುತ್ ಯಂತ್ರಗಳನ್ನು ಜೋಡಿಸಲಾಗಿದೆ.
ಬೆಳವಲ ನಾಡಿನ 300 ಸಂಸ್ಥಾನಗಳ 18 ಅಗ್ರಹಾರಗಳಲ್ಲಿ ನರಗುಂದ ಒಂದಾಗಿದೆ; 220 ಮಹಾಜನರ ಆಳ್ವಿಕೆಗೆ ಒಳಪಟ್ಟಿತ್ತು. ಇದು ರಾಷ್ಟ್ರಕೂಟರ ಕಾಲದಿಂದ ಮೊದಲ್ಗೊಂಡು ಒಂದು ಸಾವಿರಕ್ಕಿಂತ ಹೆಚ್ಚು ವರ್ಷಗಳ ಇತಿಹಾಸವಿರುವ ಸ್ಥಳ. ನರಗುಂದದ ಆಧುನಿಕ ಇತಿಹಾಸ ಶುರುವಾಗುವುದು ಮರಾಠ ರಾಜ ಛತ್ರಪತಿ ಶಿವಾಜಿ 1674ರಲ್ಲಿ ಇಲ್ಲಿದ್ದ ಮಣ್ಣಿನ ಕೋಟೆ ಕೆಡವಿ ’ಮಹಿಫತ್ ಗಡ’ ಹೆಸರಿನ ಕಲ್ಲಿನ ಕೋಟೆ ಕಟ್ಟಿಸಿದ ನಂತರ. 1778ರಲ್ಲಿ ಹೈದರ್ ಅಲಿಗೆ ನರಗುಂದ ಸಂಸ್ಥಾನದಿಂದ ಕಪ್ಪ ಸಂದಾಯವಾಗುತ್ತಿತ್ತು; 1785ರಲ್ಲಿ ನರಗುಂದ ಕೋಟೆ ಟಿಪ್ಪು ಸುಲ್ತಾನ್ ವಶವಾಯಿತು. ಆ ನಂತರ ನರಗುಂದ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು. 18ನೇ ಶತಮಾನದಲ್ಲಿ ಮರಾಠ ಪೇಶ್ವೆಗಳ ಪರವಾಗಿ ಭಾವೆ ರಾಜ ವಂಶಸ್ಥರು ನರಗುಂದದಲ್ಲಿ ಆಡಳಿತ ನಡೆಸಿದರು.
1857-58ರಲ್ಲಿ ನರಗುಂದ ಸಂಸ್ಥಾನದ ಮುಖ್ಯಸ್ಥರಾಗಿದ್ದ ಭಾಸ್ಕರ್‌ರಾವ್ (ಬಾಬಾಸಾಹೇಬ್) ಬ್ರಿಟಿಷರ ವಿರುದ್ಧ ದಂಗೆದ್ದು ಕೊಪ್ಪಲದುರ್ಗ ಕೋಟೆ ವಶಪಡಿಸಿಕೊಂಡರು. ಆರಂಭಿಕ ಜಯ ಪಡೆದ ಬಾಬಾಸಾಹೇಬ್ ಬ್ರಿಟಿಷರ ವಿರುದ್ಧ ದಂಗೆಯೆದ್ದ ಬಾಂಬೆ-ಕರ್ನಾಟಕದ ಪಾಳೆಗಾರರಲ್ಲೇ ಅತ್ಯಂತ ಚಾಣಾಕ್ಷನೆಂದು ಬಣ್ಣಿಸಲಾಗಿದೆ. ನರಗುಂದ ನಗರದಲ್ಲಿ ಚಾಲುಕ್ಯರ 3ನೇ ಸೊಮೇಶ್ವರ, 2ನೇ ಜಗದೇಕಮಲ್ಲ, 3ನೇ ತೈಲಪರ ಶಾಸನಗಳಿವೆ. ನರಗುಂದ ಗುಡ್ಡ 215 ಮೀ. ಎತ್ತರವಿದ್ದರೆ, ಚಿಕ್ಕ ನರಗುಂದ ಬೆಟ್ಟ 61 ಮೀ.ಎತ್ತರ ಇದೆ. ಗುಡ್ಡದಲ್ಲಿ ಪಾಳುಬಿದ್ದಿರುವ ಕೋಟೆ 1857ರ ಬ್ರಿಟಿಷ್ ವಿರುದ್ಧದ ದಂಗೆಯಲ್ಲಿ ಪ್ರಮುಖ ಪಾತ್ರವಹಿಸಿತ್ತು. ಕೋಟೆಯಲ್ಲಿ ವಾಸ್ತು ಶೈಲಿಯ ಜಲಾಶಯ, ಯುದ್ಧ ಸಾಮಗ್ರಿ ಸಂಗ್ರಹಾಲಯ, ನಿರಂತರ ನೀರು ಪೂರೈಸುವ ದೊಡ್ಡ ಬಾವಿ ಮತ್ತು ವಾಚ್ ಟವರ್ ಇತ್ತು.
ನರಗುಂದ ಗುಡ್ಡದ ನೋಟ ಮಲಗಿದ ಸಿಂಹದಂತಿದೆ. ಗುಡ್ಡದ ಮೇಲೆ ಸಿದ್ಧೇಶ್ವರ ದೇವಸ್ಥಾನವಿದೆ. ಇಳಿಜಾರಿನಲ್ಲಿರುವ ವೆಂಕಟೇಶ್ವರ ದೇಗುಲ ಗುಡ್ಡಕ್ಕೆ ವಿಭೂತಿ ಹಚ್ಚಿದಂತೆ ಕಂಗೊಳಿಸುತ್ತದೆ. ಎರಡು ದೇಗುಲಗಳನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ; ಈ ಗುಡ್ಡದ ಕೋಟೆಯಲ್ಲಿ ಮರಾಠ ರಾಜ ಶಿವಾಜಿ ಅಂಬಾಭವಾನಿ ದೇವಸ್ಥಾನ ಕಟ್ಟಿಸಿದ್ದಾರೆ; ಶಿವಾಜಿಯ ಗುರು ಸಮರ್ಥ ರಾಮದಾಸರು, ರಾಮ ಮತ್ತು ಹನುಮ ದೇವಾಲಯ ನಿರ್ಮಾಣ ಮಾಡಿದ್ದಾರೆ. 1720ರಲ್ಲಿ ತಿರುಪತಿ ಮಾದರಿಯ ವೆಂಕಟೇಶ್ವರ ದೇವಸ್ಥಾನ ಕಟ್ಟಿಸಿ ಜಾತ್ರೆ, ಉತ್ಸವ ಪ್ರಾರಂಭಿಸಿದರು. ಇವತ್ತಿಗೂ ಜಾತಿ-ಧರ್ಮ-ಪಂಥದ ಹಂಗಿಲ್ಲದ ಭಾವೈಕ್ಯತೆಯ ಜಾತ್ರೆ-ಪಲ್ಲಕ್ಕಿ ಉತ್ಸವ ಇಲ್ಲಾಗುತ್ತಿದೆ.
ಉತ್ತರ ಕರ್ನಾಟಕ ಲಯದ ಖಡಕ್ ಕನ್ನಡ ಮಾತಿನ ನರಗುಂದ ಸಮೃದ್ಧ ಜನಪದ ಸಂಸ್ಕೃತಿ-ಸಂಪ್ರದಾಯದ ಸೀಮೆ. ಉರ್ದು, ಲಂಬಾಣಿ, ಮರಾಠಿಯಂಥ ಭಾಷೆಗಳೂ ಕೇಳಿಬರುವ ನರಗುಂದದ ಬದುಕಿನಲ್ಲಿ ಡೊಳ್ಳು ಕುಣಿತ, ರಗ್ಗಲಗಿ ಮಜಲು, ಜಾನಪದ ಹಾಡು, ಗೀಗಿ ಪದ, ಭಜನೆ, ಝಾಂಝ್, ಎತ್ತಿನ ಗಾಡಿ ಸ್ಪರ್ಧೆ ಮತ್ತು ಕಬಡ್ಡಿ ಆಟ ಹಾಸುಹೊಕ್ಕಾಗಿದೆ.
ಪಂಚಗ್ರಹ ಗುಡ್ಡದ ಹಿರೇಮಠ, ಪುಣ್ಯಾರಣ್ಯ ಪತ್ರಿವನ ಮಠ, ಕನ್ನಡ ಮಠವೆಂದೇ ಜನಜನಿತವಾಗಿರುವ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ ಇಲ್ಲಿ ಪ್ರಸಿದ್ಧವಾಗಿವೆ. ಐತಿಹಾಸಿಕ ಕೆಂಪಗಸಿ ಬಾಗಿಲು (ಬ್ರಿಟಿಷ್ ಸೈನಿಕರ ರುಂಡ ನೇತುಹಾಕಿದ ದಿಡ್ಡಿ ಬಾಗಿಲು), ಅರಮನೆ, ಹುತಾತ್ಮ ರೈತರ ವೀರಗಲ್ಲುಗಳು ನರಗುಂದದಲ್ಲಿ ಜನ ಭೇಟಿ ನೀಡುವ ಜಾಗಗಳು. ನರಗುಂದದ ಬಾಬಾಸಾಹೇಬ್ ಅರಮನೆಯ ಭಿತ್ತಿ ಚಿತ್ರಗಳು ಮನಮೋಹಕವಾಗಿವೆ; ಚಿಂಚಲಿ ಗ್ರಾಮಕ್ಕೆ ಹೊಂದಿಕೊಂಡಿರುವ ಬೃಹತ್ ಕಲ್ಲಿನ ಮೇಲಿರುವ ಛಾಯಾ ಚಂದ್ರನಾಥ ಕಲೆ ಐತಿಹಾಸಿಕವಾದದ್ದು. ಕೊಣ್ಣೂರಲ್ಲಿ ರಾಷ್ಟ್ರಕೂಟರ ಕಾಲದ ಪರಮೇಶ್ವರ ದೇಗುಲವಿದೆ. ಕ್ರಿ.ಶ.1045ರಲ್ಲಿ ದೇಶದ ಮೊಟ್ಟಮೊದಲ ಜ್ಯೋತಿಷ್ಯ ಗ್ರಂಥ ’ಜಾತವೇದ ತಿಲಕ’ ರಚಿಸಿದ್ದು ನರಗುಂದದ ಕವಿ ಶ್ರೀಧರಾಚಾರ್ಯ; ಬನಹಟ್ಟಿಯ ರುದ್ರಸ್ವಾಮಿ ಸಂಸ್ಕೃತದಲ್ಲಿ ’ಮುರುಗೇಂದ್ರ ವಿಜಯ’ ಬರೆದಿದ್ದಾರೆ. ರಡ್ಡೇರ ನಾಗನೂರು ಕಾಶಿನಾಥ ಶಾಸ್ತ್ರಿ 1927ರಲ್ಲಿ ಹೊರತಂದ ’ಪಂಚಾಚಾರ್ಯ ಪ್ರಭ’ ಪ್ರಕಟವಾಗುತ್ತಲೇ ಇದೆ. ಕವಿ ನಾಗಭಟ್ಟ, ಬಲಪಂಥೀಯ ಆರೆಸ್ಸೆಸ್ ಸಂಸ್ಥಾಪಕರಲ್ಲಿ ಒಬ್ಬರಾದ ಜಗನ್ನಾಥ್ ರಾವ್ ಜೋಶಿ ನರಗುಂದದವರು.
ಕೃಷಿಯಾಧಾರಿತ ಆರ್ಥಿಕತೆ
ನರಗುಂದ ಕೃಷಿ ಪ್ರಧಾನ ಪ್ರದೇಶ; ವ್ಯವಸಾಯೋತ್ಪನ್ನವೇ ನರಗುಂದದ ಆರ್ಥಿಕತೆಯ ಜೀವ-ಜೀವಾಳ. ವಿಪರ್ಯಾಸವೆಂದರೆ, ಇಡೀ ತಾಲೂಕಿನ ಲವಲವಿಕೆಯ ಮೂಲವಾದ ಮಣ್ಣಿನ ಮಕ್ಕಳು ಮಾತ್ರ ವಿಲವಿಲ ಒದ್ದಾಡುತ್ತಿದ್ದಾರೆ! ಕೃಷಿಗೆ ಪ್ರಶಸ್ತವಾದ ಕಪ್ಪು ಮಣ್ಣಿನ ಭೂಮಿ ನರಗುಂದದ್ದು. ಆದರೆ ನೀರಿಲ್ಲದೆ ಬೆಳೆ ತೆಗೆಯಲಾಗುತ್ತಿಲ್ಲ; ಬಹು ದಿನದ ನಿರೀಕ್ಷೆಯ ಮಹದಾಯಿ ನೀರು ಮರೀಚಿಕೆಯಾಗಿದೆ. ನರಗುಂದ ಶಾಖಾ ಕಾಲುವೆಯಲ್ಲಿ ಹರಿಯುವ ಮಲಪ್ರಭಾ ಅಣೆಕಟ್ಟೆಯ ನೀರು ಸಾಕಾಗುತ್ತಿಲ್ಲ. ಒಣ ಬೇಸಾಯದಿಂದ ಹೊಟ್ಟೆಪಾಡಿನ ಹಿಟ್ಟು ಗಿಟ್ಟುತ್ತಿಲ್ಲ. ಬೆಳೆದ ಫಸಲಿಗೆ ದಲ್ಲಾಳಿ ಹಾವಳಿಯಿಂದ ನ್ಯಾಯವಾದ ಬೆಲೆ ಸಿಗುತ್ತಿಲ್ಲ. ಶಾಶ್ವತ ಖರೀದಿ ಕೇಂದ್ರ ಸ್ಥಾಪಿಸಿ ಎಂಬ ಅಳಲು ಆಳುವವರಿಗೆ ಕೇಳಿಸುತ್ತಿಲ್ಲ ಎಂದು ವಿಷಾದ ಬೆರೆತ ಆಕ್ರೋಶದಿಂದ ರೈತರು ಹೇಳುತ್ತಾರೆ. ಎಪಿಎಂಸಿ ಶೋಷಕ ದಲ್ಲಾಳಿಗಳ ಹಿಡಿಕ್ಕೊಳಗಾಗಿದೆ ಎಂಬ ಮಾತು ಸಾಮಾನ್ಯವಾಗಿದೆ. ಹೆಚ್ಚಿನ ಬೆಲೆ ನಿರೀಕ್ಷೆಯಲ್ಲಿ ಫಸಲನ್ನು ದೂರದ ಹುಬ್ಬಳ್ಳಿ, ಗದಗ, ಲಕ್ಷ್ಮೇಶ್ವರ ಮಾರುಕಟ್ಟೆಗೆ ಹೊತ್ತೊಯ್ಯಬೇಕಾದ ಸಂಕಷ್ಟ ರೈತರದು.
ಮಲಪ್ರಭಾ ನದಿ ಮತ್ತು ಬೆಣ್ಣೆ ಹಳ್ಳ ನರಗುಂದ ವಿಧಾನಸಭಾ ಕ್ಷೇತ್ರದ ಜೀವ ಸೆಲೆಗಳು. 25 ಮೈಲು ಉದ್ದದ ನರಗುಂದ ಶಾಖಾ ಕಾಲುವೆಯಲ್ಲಿ ಮಲಪ್ರಭೆ ನೀರು ಹರಿಯುತ್ತದೆ. ಮಲಪ್ರಭೆಯ ನೀರು ಒದಗುವುದು ನರಗುಂದ ತಾಲೂಕಿನ ಸುಮಾರು 12,09,101 ಎಕರೆ ಪ್ರದೇಶಕ್ಕಷ್ಟೆ; ಇನ್ನುಳಿದ ಬಹುಭಾಗದಲ್ಲಿ ಒಣ ಬೇಸಾಯವ ಗತಿ. ಮೊದಲು ನರಗುಂದ ಹತ್ತಿ ಬೆಳೆಗೆ ಪ್ರಸಿದ್ಧವಾಗಿತ್ತು. ಹತ್ತಿ ಮಾರುಕಟ್ಟೆಯ ದಲ್ಲಾಳಿ ಮತ್ತು ಬಂಡವಾಳಶಾಹಿ ಕಾಟನ್ ಉದ್ಯಮಿಗಳ ಜಂಟಿ ಕಾರಸ್ಥಾನಕ್ಕೆ ನಲುಗಿದ ರೈತರು ಆ ಬೆಳೆಯಿಂದ ದೂರವಾಗಿದ್ದಾರೆ. ಈಗ ಕಡಲೆ, ಶೇಂಗಾ, ಗೋಧಿ, ಹೆಸರು ಕಾಳು, ಗೋವಿ ಜೋಳ ಮತ್ತು ಈರುಳ್ಳಿ ಹಂಗಾಮಿಕೆಗನುಗುಣವಾಗಿ ಬೆಳೆಯಲಾಗುತ್ತಿದೆ. ಹೂವಿನ ಕೃಷಿಯಿಂದ ಒಂದಿಷ್ಟು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಕೊಣ್ಣೂರು ಭಾಗದಲ್ಲಿ ಬೆಳೆಯುವ ಪೇರಲ ಹಣ್ಣಿಗೆ ಹೊರ ಜಿಲ್ಲೆಗಳಲ್ಲೂ ಬೇಡಿಕೆಯಿದೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶಿಗ್ಗಾವಿ-ಸವಣೂರು: ಸಾಮ್ರಾಜ್ಯ ಉಳಿಸಿಕೊಳ್ಳುವರಾ ಸಿಎಂ ಬೊಮ್ಮಾಯಿ?!
ನರಗುಂದ ಪೇಟೆ ವಾಣಿಜ್ಯಿಕವಾಗಿ ಉದ್ಧಾರವಾಗಿಲ್ಲ. ಮೇಲ್ವರ್ಗದ ವ್ಯಾಪಾರಿಗಳ ಹಿಡಿದಲ್ಲಿರುವ ನರಗುಂದ ಮಾರುಕಟ್ಟೆಯಲ್ಲಿ ಸಾಮಾನ್ಯರಿಗೆ ವ್ಯವಹಾರ-ವಹಿವಾಟು ಮಾಡಿ ಬದುಕುವ ಅವಕಾಶವಿಲ್ಲ; ಹತ್ತಿ ನೂಲು ತೆಗೆಯುವ ಟೆಕ್ಸ್‌ಟೈಲ್ ಮಿಲ್, ಎಣ್ಣೆ ತೆಗೆಯುವ ಆಯಿಲ್ ಮಿಲ್ ಮತ್ತು ಪ್ಲೈವುಡ್ ಫ್ಯಾಕ್ಟರಿಗಳು ಸಾಲಾಗಿ ಬಾಗಿಲು ಎಳೆದುಕೊಂಡಿವೆ. ಕೃಷಿ ಉತ್ಪನ್ನ ಆಧಾರಿತ ಹಲವು ಕೈಗಾರಿಕೆಗಳನ್ನು ಆರಂಭಿಸಬಹುದಾದರೂ ಇತ್ತ ಅಧಿಕಾರಸ್ಥರು ತಲೆಹಾಕುತ್ತಿಲ್ಲ; ಅತ್ತ ರೈತರನ್ನು ಸ್ವಾವಲಂಬಿಗಳಾಗಿಸಬಲ್ಲ ಕೃಷಿ ಉನ್ನತೀಕರಣಕ್ಕೂ ಪ್ರಯತ್ನಿಸುತ್ತಿಲ್ಲ ಎಂಬ ಮಾತು ಕೇಳಿಬರುತ್ತದೆ. ಕಳಸಾ-ಬಂಡೂರಿ ಯೋಜನೆ ಕಾರ್ಯಗತವಾದರೆ ನರಗುಂದದ ಮಣ್ಣಿನ ಮಕ್ಕಳಿಗೆ ಕೈತುಂಬ ಕೆಲಸ ತಂತಾನೆ ಸಿಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ’ನ್ಯಾಯಪಥ’ಕ್ಕೆ ತಿಳಿಸಿದರು.
ನರಗುಂದದ ಪಿಚ್ ಹೇಗಿದೆ?
ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲದಲ್ಲಿರುವ ನರಗುಂದ ವಿಧಾನಸಭಾ ಕ್ಷೇತ್ರದ ಚುನಾವಣಾ ಹಣಾಹಣಿ ಪಕ್ಷನಿಷ್ಠವೊ, ವ್ಯಕ್ತಿನಿಷ್ಠವೊ ಎಂಬ ಗುಟ್ಟು ಬಿಟ್ಟುಕೊಡದೆ ಯಾಮಾರಿಸುತ್ತಲೇ ಬಂದಿದೆ. ಪಂಚಮಸಾಲಿ ಲಿಂಗಾಯತರ ಹಿಡಿತದ ಈ ಕ್ಷೇತ್ರದಲ್ಲಿ ಕೆಲವೇ ಸಾವಿರ ಮತವುಳ್ಳ ಸಮುದಾಯದ ರಡ್ಡಿ ಲಿಂಗಾಯತ ಅಭ್ಯರ್ಥಿ ಗೆದ್ದು ಅಚ್ಚರಿ ಮೂಡಿಸಬಹುದು; ಗೆದ್ದೇ ಗೆಲ್ಲುತ್ತಾರೆಂದು ಭಾವಿಸಿದ ಅಭ್ಯರ್ಥಿ ಎದುರಾಳಿಯ ಕೊನೆ ಕ್ಷಣದ ಗಿಮಿಕ್‌ಗೆ ಚಿತ್ತಾಗಬಹುದು. ಲಿಂಗಾಯತ ಒಳ ಪಂಗಡ ಪ್ರತಿಷ್ಠೆಗಿಂತ ಒಟ್ಟಾರೆ ’ಲಿಂಗಾಯತ’ ಎಂಬುದೆ ನರಗುಂದ ಅಖಾಡದಲ್ಲಿ ಮುಖ್ಯವಾಗುತ್ತದೆ. ಹಾಗಾಗಿ ಲಾಗಾಯ್ತಿನಿಂದ ನರಗುಂದ ’ಲಿಂಗಾಯತ ಮೀಸಲು ಕ್ಷೇತ್ರ’ದಂತಾಗಿಬಿಟ್ಟಿದೆ; ಪ್ರಮುಖ ಪಕ್ಷಗಳು ಲಿಂಗಾಯತರನ್ನೇ ಕಣಕ್ಕಿಳಿಸುತ್ತ ಬಂದಿವೆ. ಪಕ್ಷದ ಬೇಸ್ ಓಟ್‌ನೊಂದಿಗೆ ಅಭ್ಯರ್ಥಿಯ ವರ್ಚಸ್ಸು ಗೆಲುವಿನ ಮಾನದಂಡವಾಗಿದೆ.
ನರಗುಂದ ಕಳೆದೆರಡು ದಶಕದಿಂದ ರೈತ ಹೋರಾಟದ ಬೈಪ್ರಾಡಕ್ಟ್-ಮಾಜಿ ಮಂತ್ರಿ ಬಿ.ಆರ್.ಯಾವಗಲ್ ಮತ್ತು ಕೇಸರಿ ಪಾಳೆಯದ ನಿಷ್ಠಾನುಯಾಯಿ-ಹಾಲಿ ಸಚಿವ ಸಿ.ಸಿ.ಪಾಟೀಲ್ ನಡುವಿನ ನೇರ-ನಿಕಟ ಹಣಾಹಣಿಯ ಅಖಾಡವಾಗಿದೆ. ನರಗುಂದವನ್ನು ರಾಜಕೀಯ ಆಡುಂಬೊಲವನ್ನಾಗಿಸಿಕೊಂಡಿರುವ ಈ ಇಬ್ಬರೂ ವಲಸಿಗರು; ಯಾವಗಲ್ ಪಕ್ಕದ ನವಲಗುಂದದವರಾದರೆ, ಸಿ.ಸಿ.ಪಾಟೀಲ್ ಮತ್ತೊಂದು ಗಡಿಯಲ್ಲಿರುವ ಬೆಳಗಾವಿ ಜಿಲ್ಲೆಯ ಸವದತ್ತಿಯವರು. ನರಗುಂದ ಕ್ಷೇತ್ರದಲ್ಲಿ ಕೊನೆ ಕ್ಷಣದ ಓಟ್ ಬ್ಯಾಂಕ್ ತಂತ್ರಗಾರಿಕೆಯ ಅಬ್ಬರದಲ್ಲಿ ಮಹದಾಯಿ ಹೋರಾಟ-ರೈತರ ಸಮಸ್ಯೆಯಂಥ ಗಂಭೀರ ಸಂಗತಿಗಳು ಗೌಣವಾಗಿಬಿಡುತ್ತವೆ ಎಂದು ಚುನಾವಣಾ ಪಂಡಿತರು ಅಭಿಪ್ರಾಯಪಡುತ್ತಾರೆ.
2007ರಲ್ಲಿ ವಿಧಾನಸಭಾ ಕ್ಷೇತ್ರಗಳ ಭೌಗೋಳಿಕ ಪರಿಧಿ ಪುನರ್ ನಿಗದಿಪಡಿಸಿದಾಗ ನರಗುಂದಕ್ಕೆ ಗದಗ ತಾಲೂಕಿನ ಹೊಂಬಳ, ಹುಯಿಲಗೋಳ, ಲಕ್ಕುಂಡಿ ಪ್ರದೇಶ ಹಾಗೂ ರೋಣ ತಾಲೂಕಿನ ಹೊಳೆ ಆಲೂರು ಕಡೆಯ ಕೆಲವು ಹಳ್ಳಿಗಳನ್ನು ಸೇರಿಸಲಾಗಿದೆ. ಒಟ್ಟು ಅಂದಾಜು 1,96,450 ಮತದಾರರಿರುವ ನರಗುಂದ ಅಸೆಂಬ್ಲಿ ಕ್ಷೇತ್ರದಲ್ಲಿ ಗಾಣಿಗ, ಪಂಚಮಸಾಲಿ, ಬಣಜಿಗ ಮುಂತಾದ ಒಳಪಂಗಡಗಳೆಲ್ಲ ಸೇರಿದ ಲಿಂಗಾಯತರು 80 ಸಾವಿರ, ಕುರುಬರು 27 ಸಾವಿರ, ಮುಸ್ಲಿಮ್ 25 ಸಾವಿರ, ಎಸ್ಸಿ 23 ಸಾವಿರ, ಎಸ್ಟಿ 10 ಸಾವಿರ, ಮರಾಠ 10 ಸಾವಿರ, ಬ್ರಾಹ್ಮಣ 5 ಸಾವಿರ ಮತ್ತು ಉಳಿದ ಸಣ್ಣ ಸಂಖ್ಯೆಯ ಜಾತಿ ಮತದಾರರಿದ್ದಾರೆಂದು ಅಂದಾಜಿಸಲಾಗಿದೆ.
ಕಾಂಗ್ರೆಸ್ ಕಾಲ
1957ರ ಮೊದಲ ಚುನಾವಣೆಯಿಂದ 1978ರ ಐದನೇ ಇಲೆಕ್ಷನ್‌ವರೆಗೆ ಕಾಂಗ್ರೆಸ್‌ಗೆ ಸೋಲಾಗಲಿಲ್ಲ. ಆದರೆ 1978ರಲ್ಲಿ ಜನತಾ ಪರಿವಾರ ಗೆಲ್ಲಲಾಗದಿದ್ದರೂ ಕಾಂಗ್ರೆಸ್‌ನ ಬುಡವನ್ನು ಬಲವಾಗಿ ಅಲುಗಾಡಿಸಿ ಕಂಗೆಡಿಸಿತ್ತು! 1957ರಲ್ಲಿ ಕಾಂಗ್ರೆಸ್‌ನ ಎ.ಎಸ್.ಪಾಟೀಲ್ (18,143) ಪಕ್ಷೇತರ ಅಭ್ಯರ್ಥಿ ಎಸ್.ಎಚ್.ಪಾಟೀಲ್‌ರನ್ನು (8,640) ಮಣಿಸಿ ಶಾಸನಸಭೆಗೆ ಪ್ರವೇಶ ಪಡೆದರು. 1962ರಲ್ಲಿ ಶಾಸಕ ಎ.ಎಸ್.ಪಾಟೀಲರಿಗೆ (24,601) ಮತ್ತೆ ಎಸ್.ಎಚ್.ಪಾಟೀಲ್ (7,951) ಪಕ್ಷೇತರರಾಗಿಯೇ ಮುಖಾಮುಖಿಯಾದರು. ಎ.ಎಸ್.ಪಾಟೀಲ್ 16,650 ಮತದಂತರದಿಂದ ಎರಡನೇ ಬಾರಿ ಶಾಸಕನಾದರು. 1967ರಲ್ಲಿ ಪಿಎಸ್‌ಪಿಯ ಎಂ.ಎಂ.ಮುದುಕಪ್ಪರನ್ನು (4,714) ಕಾಂಗ್ರೆಸ್ ಪಾರ್ಟಿಯ ಡಿ.ಆರ್.ವೀರಪ್ಪ (14,402) ಪರಾಭವಗೊಳಿಸಿದರೆ, 1972ರಲ್ಲಿ ಸಂಸ್ಥಾ ಕಾಂಗ್ರೆಸ್‌ನ ಬಿ.ಎಂ.ಪೂಜಾರ್ (13,350) ಕಾಂಗ್ರೆಸ್‌ನ ಜೆ.ಎಂ.ವೆಂಕಪ್ಪರಿಗೆ 6,720 ಮತದಂತರದಿಂದ ಶರಣಾಗಬೇಕಾಯಿತು.

1978ರಲ್ಲಿ ಮಾತ್ರ ಕಾಂಗ್ರೆಸ್ ಮತ್ತು ಜನತಾ ಪರಿವಾರದ ನಡುವೆ ರಣರೋಚಕ ಕದನವೇ ಆಗಿಹೋಯಿತು! ಇಂದಿರಾ ಕಾಂಗ್ರೆಸ್‌ನ ಬಿ.ಆರ್.ಪಾಟೀಲ್ (16,496) ಮತ್ತು ಜನತಾ ಪಕ್ಷದ ಪಿ.ಎಲ್.ಪಾಟೀಲ್ (15,450) ಮಧ್ಯೆ ಕತ್ತುಕತ್ತಿನ ಜಿದ್ದಾಜಿದ್ದಿ ಏರ್‍ಪಟ್ಟಿತ್ತು. ಕಾಂಗ್ರೆಸ್(ಐ) ಹುರಿಯಾಳು ಕೇವಲ 1,046 ಮತದಂತರದಿಂದ ದಡ ಸೇರಿ ಬಚಾವಾದರು! 1980ರ ದಶಕದಾರಂಭದಲ್ಲಿ ನರಗುಂದದಲ್ಲಾದ ರೈತ ಕ್ರಾಂತಿಯ ಕಾವು ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡಿತ್ತು; ಆಡಳಿತಾರೂಢ ಕಾಂಗ್ರೆಸ್‌ಅನ್ನು ಕಳಾಹೀನಗೊಳಿಸಿತ್ತು. ನರಗುಂದದಲ್ಲಂತೂ ಕಾಂಗ್ರೆಸ್ ವಿರುದ್ಧ ಅಸಮಾಧಾನ-ಆಕ್ರೋಶ ಪ್ರಖರವಾಗಿ ಭುಗಿಲೆದ್ದಿತ್ತು. ರೈತ ಚಳವಳಿಯಲ್ಲಿ ಗುತಿಸಿಕೊಂಡು ಜನಾನುರಾಗಿಯಾಗಿದ್ದ ಯುವ ವಕೀಲ ಬಿ.ಆರ್.ಯಾವಗಲ್‌ರನ್ನು ಜನರೇ ಒತ್ತಾಯದಿಂದ 1983ರ ಚುನಾವಣೆಗೆ ಜನತಾ ಪಕ್ಷದಿಂದ ನಿಲ್ಲಿಸಿದರು. ಕಾಂಗ್ರೆಸ್ ಹುರಿಯಾಳಾಗಿದ್ದ ಶಾಸಕ ಬಿ.ಆರ್.ಪಾಟೀಲರನ್ನು (14,156) ಜನತಾ ಪಕ್ಷದ ಯಾವಗಲ್ 8,519 ಮತದಿಂದ ಮಣಿಸಿ ಚುನಾಯಿತರಾದರು.
1985ರ ನಡುಗಾಲ ಚುನಾವಣೆ ಹೊತ್ತಿಗೆ ಉತ್ತರ ಕರ್ನಾಟಕದ ಲಿಂಗಾಯತ ವಲಯದಲ್ಲಿ ಜನತಾ ಪರಿವಾರ ಮೇಲುಗೈ ಸಾಧಿಸಿತ್ತು. ಒಕ್ಕಲಿಗ ವರ್ಗದ ದೇವೇಗೌಡರ ಪ್ರಚ್ಛನ್ನ ವಿರೋಧಿಯಾಗಿದ್ದ ರಾಮಕೃಷ್ಣ ಹೆಗಡೆ ಲಿಂಗಾಯತರ ಲೀಡರಾಗಿ ಅವತರಿಸಿದ್ದರು. ಮತ್ತೆ ಜನತಾ ಪಕ್ಷದಿಂದ ಅಖಾಡಕ್ಕಿಳಿದ ಶಾಸಕ ಯಾವಗಲ್ 36,506 ಮತ ಪಡೆದು ಕಾಂಗ್ರೆಸ್ ಹುರಿಯಾಳು ಎಸ್.ಎನ್.ಕಾತರ್ಕಿಯವರನ್ನು 20,272 ಮತದಿಂದ ಮಣಿಸಿ ಪ್ರಚಂಡ ವಿಜಯ ಸಾಧಿಸಿದರು. ಯಾವಗಲ್‌ರನ್ನು ಸಿಎಂ ಹೆಗಡೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಮಂತ್ರಿ ಮಾಡಿದರು; ಸಚಿವ ಸಂಪುಟ ಪುನರ್ ರಚನೆಯಲ್ಲಿ ಯಾವಗಲ್ ವಿಧಾನ ಸಭೆಯ ಉಪ-ಸ್ಪೀಕರ್ ಆದರು.
ರೈತ ಬಂಡಾಯದ ನಂತರದ ಒಂದು ದಶಕದಲ್ಲಿ ಬಿ.ಆರ್.ಯಾವಗಲ್‌ರಂತಹವರ ಹಣೆಬರಹ ಬದಲಾಯಿತೇ ಹೊರತು ಮಣ್ಣಿನ ಮಕ್ಕಳ ಬದುಕು ಹಸನಾಗಲಿಲ್ಲ. 1989ರ ಇಲೆಕ್ಷನ್ ಎದುರಾಗುವ ಹೊತ್ತಿಗೆ ಯಾವಗಲ್‌ರಿಗೆ ಎಂಟಿಇನ್‌ಕಂಬೆನ್ಸ್ ಶುರುವಾಗಿತ್ತು. ಲಿಂಗಾಯತರು ಕಾಂಗ್ರೆಸ್‌ನ ಸಿಎಂ ಕ್ಯಾಂಡಿಡೇಟ್ ವೀರೇಂದ್ರ ಪಾಟೀಲರತ್ತ ಆಕರ್ಷಿತರಾಗಿದ್ದರು. ಜನತಾ ದಳ ದಾಯಾದಿ ಕಲಹದಿಂದ ದ್ವಿದಳವಾಗಿ ಪ್ರಭಾವ ಕಳೆದುಕೊಂಡಿತ್ತು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸ್ಥಳೀಯ ಪಂಚಮಸಾಲಿ ಸಮುದಾಯದ ಪ್ರಭಾವಿ ಧುರೀಣ ಎಸ್.ಎಸ್.ಪಾಟೀಲ್ ಜನತಾ ದಳದ ಯಾವಗಲ್‌ಗೆ ಪ್ರಬಲ ಪೈಪೋಟಿ ನೀಡಿದರು. ಈ ಜಿದ್ದಾಜಿದ್ದಿ ಕಾಳಗದಲ್ಲಿ ಯಾವಗಲ್ (29,595) ಕೇವಲ 689 ಮತಗಳಿಂದ ಪರಾಭವಗೊಂಡರು!
1994ರ ಚುನಾವಣಾ ಸಂದರ್ಭದಲ್ಲಿ ಪ್ರಬಲ ಆಡಳಿತ ವಿರೋಧಿ ಅಲೆಗೆ ಸಿಲುಕಿದ್ದ ಕಾಂಗ್ರೆಸ್ ಕಣಕ್ಕಿಳಿಸಿದ್ದ ವಿ.ಎ.ಮತ್ತಿಕಟ್ಟಿ ದುರ್ಬಲ ಅಭ್ಯರ್ಥಿಯಾಗಿದ್ದರು. ದಳ ಬಣಗಳು ಒಂದಾಗಿದ್ದು ಯಾವಗಲ್‌ಗೆ ಅನುಕೂಲವಾಯಿತು. ಚುನಾವಣಾ ಸೋಲು-ಗೆಲುವಿನಲ್ಲಿ ನಿರ್ಣಾಯಕ ಪಾತ್ರವಾಡುವ ಬಹುಸಂಖ್ಯಾತ ಪಂಚಮಸಾಲಿ ಲಿಂಗಾಯತರ ಮತಗಳನ್ನು ಸಾರಾಸಗಟಾಗಿ ಪಡೆಯಲು ಶಕ್ಯರಾದ ಜನತಾ ದಳದ ಯಾವಗಲ್ 18,652 ಮತಗಳ ದೊಡ್ಡ ಅಂತರದಲ್ಲಿ ಕಾಂಗ್ರೆಸ್‌ನ ಮತ್ತಿಕಟ್ಟಿಯವರನ್ನು (18,502) ಸೋಲಿಸಿ ಮೂರನೆ ಬಾರಿಗೆ ಶಾಸಕನಾದರು. 1999ರ ಇಲೆಕ್ಷನ್ ಎದುರಾದಾಗ ಜನತಾ ದಳ ಎಸ್ ಮತ್ತು ಯು ಎಂದು ಹೋಳಾಗಿತ್ತು. ಅವಿಭಜಿತ ಧಾರವಾಡ ಜಿಲ್ಲೆಯ ಜನತಾ ಪರಿವಾರದ ಬಹುತೇಕರು ಮಾಜಿ ಸಿಎಂಗಳಾದ ರಾಮಕೃಷ್ಣ ಹೆಗಡೆ-ಎಸ್.ಆರ್.ಬೊಮ್ಮಾಯಿ ಬಣದ ’ಯು’ನಲ್ಲಿ ಗುರುತಿಸಿಕೊಂಡರು; ಆದರೆ ನರಗುಂದದಲ್ಲಿ ಪ್ರಬಲ ನಾಯಕತ್ವವಿಲ್ಲದ ಕಾಂಗ್ರೆಸ್‌ನಲ್ಲಿ ಯಾವಗಲ್ ಆಶ್ರಯ ಕಂಡುಕೊಂಡರು.
1999ರ ಇಲೆಕ್ಷನ್‌ನಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟಾದ ಯಾವಗಲ್‌ಗೆ ಜೆಡಿಎಸ್ ಹುರಿಯಾಳಾಗಿ ಮುಖಾಮುಖಿಯಾಗಿದ್ದು ಇಂದಿನ ಲೋಕೋಪಯೋಗಿ ಮಂತ್ರಿ ಸಿ.ಸಿ.ಪಾಟೀಲ್! ಪಕ್ಕದ ಸವದತ್ತಿಯ ಸಿ.ಸಿ.ಪಾಟೀಲ್ ನರಗುಂದದಲ್ಲಿದ್ದ ತಮ್ಮ ತಂದೆಯವರ ದಲ್ಲಾಳಿ ಮಂಡಿಯಲ್ಲಿ ವ್ಯವಹಾರ ನೋಡಿಕೊಂಡಿದ್ದರು. 1990ರ ದಶಕದಲ್ಲಿ ಜನತಾ ಪರಿವಾರದ ಪ್ರಬಲ ನಾಯಕ-ವಿಧಾನಸಭೆಯ ಉಪ-ಸ್ಪೀಕರಾಗಿದ್ದ ಸವದತ್ತಿಯ ಚಂದ್ರಶೇಖರ್ ಮಾಮನಿ ಗರಡಿಯಲ್ಲಿ ಪಳಗಿದ ಸಿ.ಸಿ.ಪಾಟೀಲ್ ಜಿಪಂ ಸದಸ್ಯರೂ ಆಗಿದ್ದರು. 23,734 ಮತ ಪಡೆದ ಜೆಡಿಎಸ್‌ನ ಪಾಟೀಲ್‌ರನ್ನು ಹಳೆ ಹುಲಿ ಯಾವಗಲ್ 11,136 ಮತದಿಂದ ಮಣಿಸಿದರು.
2004ರ ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪರ ಮೂಲಕ ಬಿಜೆಪಿ ಸೇರಿದ ಸಿ.ಸಿ.ಪಾಟೀಲ್ ಕೇಸರಿ ಟಿಕೆಟ್ ಪಡೆಯಲು ಸಫಲಾದರು. ಆಗ ಯಡಿಯೂರಪ್ಪ ರಾಜ್ಯ ಲಿಂಗಾಯತ ನಾಯಕನಾಗಿ ಬೆಳೆದಿದ್ದರು; ಶಾಸಕ ಯಾವಗಲ್‌ರನ್ನು ನೋಡಿ ಮತದಾರರಿಗೆ ಬೇಜಾರು ಬಂದಿತ್ತು. ತತ್ಪರಿಣಾಮವಾಗಿ ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲ್ 43,382 ಮತ ಪಡೆದರು. 12,122 ಮತದಂತರದ ಸೋಲನ್ನು ಕಾಂಗ್ರೆಸ್‌ನ ಯಾವಗಲ್ ಒಪ್ಪಿಕೊಳ್ಳಬೇಕಾಗಿಬಂತು. 2008ರ ಆಖಾಡದಲ್ಲಿ ಯಡಿಯೂರಪ್ಪ ಕೇಂದ್ರಿತ ಲಿಂಗಾಯತ ರಾಜಕಾರಣದ ತಂತ್ರಗಾರಿಕೆ ಮತ್ತು ಕಾಂಗ್ರೆಸ್‌ನ ಕಾಲೆಳೆದಾಟದ ಭಿನ್ನಮತ ಸೇರಿಕೊಂಡು ಬಿಜೆಪಿಯ ಸಿ.ಸಿ.ಪಾಟೀಲರನ್ನು ನಿರಾಯಾಸವಾಗಿ ಗೆಲ್ಲಿಸಿತು.
2007ರಲ್ಲಾದ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡನೆಯಲ್ಲಿ ಮುಂಡರಗಿ ಕ್ಷೇತ್ರ ರದ್ದಾಯಿತು. ಮುಂಡರಗಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ಶಿರಹಟ್ಟಿ, ರೋಣ ಮತ್ತು ನರಗುಂದದಲ್ಲಿ ಹಂಚಿಹೋಯಿತು. ಹೀಗಾಗಿ ಮಾಜಿ ಮಂತ್ರಿ ಎಸ್.ಎಸ್.ಪಾಟೀಲ್‌ಗೆ ಕ್ಷೇತ್ರ ಇಲ್ಲದಂತಾಯಿತು. ಎಸ್.ಎಸ್.ಪಾಟೀಲ್ ಕಾಂಗ್ರೆಸ್‌ನಲ್ಲಿ ತಮಗಿದ್ದ ಪ್ರಭಾವ ಬಳಸಿ ಬಿ.ಆರ್.ಯಾವಗಲ್‌ಗೆ ಕೊಕ್ ಕೊಟ್ಟರು. ಬಂಡೆದ್ದ ಯಾವಗಲ್ ಪಕ್ಷೇತರನಾಗಿ ಯದ್ಧಕ್ಕಿಳಿದರು. ಕಾಂಗ್ರೆಸ್ ಓಟ್ ಬ್ಯಾಂಕ್ ಪಾಟೀಲ್ (20,770) ಮತ್ತು ಯಾವಗಲ್ (29,210) ನಡುವೆ ಹಂಚಿಹೋಯಿತು. 46,824 ಮತ ಗಿಟ್ಟಿಸಿದ ಕಮಲ ಕಲಿ ಸಿ.ಸಿ.ಪಾಟೀಲ್ ಗೆದ್ದು ಎರಡನೆ ಬಾರಿ ಎಮ್ಮೆಲ್ಲೆಯಾದರು. ಅಂದಿನ ಗೋವಾ ಸಿಎಂ ಪರ್ರಿಕರ್ ಕಳಸ-ಬಂಡೂರಿ ಯೋಜನೆಗೆ ಒಪ್ಪಿಗೆ ಕೊಟ್ಟಿದ್ದಾರೆಂದು ಯಡಿಯೂರಪ್ಪ ಸುಳ್ಳು ಹೇಳಿದ್ದು ಬಿಜೆಪಿ ಗೆಲುವಿಗೆ ಕಾರಣವಾಯಿತು ಎನ್ನಲಾಗುತ್ತಿದೆ. ಯಡಿಯೂರಪ್ಪ ಮತ್ತು ಸದಾನಂದ ಗೌಡರ ಸರಕಾರದಲ್ಲಿ ಮಂತ್ರಿ ಭಾಗ್ಯವೂ ಸಿ.ಸಿ.ಪಾಟೀಲರಿಗೆ ಸಿಕ್ಕಿತು. ಆದರೆ ವಿಧಾನಸಭೆಯ ಅಧಿವೇಶನದಲ್ಲಿಯೇ ಲಕ್ಷ್ಮಣ ಸವದಿ ಮತ್ತು ಕೃಷ್ಣ ಪಾಲೆಮಾರ್ ಜತೆ ನೀಲಿ ಚಿತ್ರ ನೋಡಿದ ಆರೋಪದಿಂದ ರಾಜ್ಯಾದ್ಯಂತ ದೊಡ್ಡ ಸುದ್ದಿಯಾದ ಪಾಟೀಲ್ ಮಂತ್ರಿಗಿರಿಗೆ ಸಂಚಕಾರಬಂತು!
ಕ್ಷೇತ್ರದಲ್ಲೂ ಆ ವೇಳೆ ಕಿರಿಕ್ ಮಾಡಿಕೊಂಡಿದ್ದ ಪಾಟೀಲ್ ಮೆಣಸಿಗಿ ಗ್ರಾಮದಲ್ಲಿ ಜನರೊಂದಿಗೆ ಜಗಳಕ್ಕೆ ನಿಂತಾಗ ಗುಂಡಿನ ಹಾರಾಟವಾಗಿತ್ತು; ಗನ್ ಮ್ಯಾನ್ ಜನರನ್ನು ಚದುರಿಸಲು ಹಾರಿಸಿದ ಗುಂಡು ಪಾಟೀಲರ ಹೊಟ್ಟೆಗೆ ಹೊಕ್ಕಿತ್ತು. ಆ ಬಳಿಕದ 2013ರರ ಚುನಾವಣೆಯಲ್ಲಿ ಜನಪ್ರಿಯತೆ ಕಳೆದುಕೊಂಡಿದ್ದ ಪಾಟೀಲ್‌ಗೆ ಕಾಂಗ್ರೆಸ್‌ನ ಬಿ.ಆರ್.ಯಾವಗಲ್‌ರನ್ನು ಎದುರಿಸಿ ಗೆಲ್ಲಲಾಗಲಿಲ್ಲ. 59,620 ಮತ ಪಡೆದ ಯಾವಗಲ್ 8,585 ಮತದಿಂದ ಗೆದ್ದರು. 2018ರ ಕದನದಲ್ಲಿ ಸಾಂಪ್ರದಾಯಿಕ ಎದರಾಳಿಗಳಾದ ಕಾಂಗ್ರೆಸ್‌ನ ಯಾವಗಲ್ ಮತ್ತು ಬಿಜೆಪಿಯ ಪಾಟೀಲ್ ಮತ್ತೆ ಪರಸ್ಪರ ತೊಡೆತಟ್ಟಿ ನಿಂತರು. ಹಿಂದುತ್ವದಲ್ಲಿ ಜೀರ್ಣವಾಗಿರುವ ಲಿಂಗಾಯತರಲ್ಲಿನ ಒಂದು ವರ್ಗ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಅಸ್ಮಿತೆ-ಅನುಕೂಲ ಅರ್ಥ ಮಾಡಿಕೊಳ್ಳಲಾಗದೆ ಕಾಂಗ್ರೆಸ್‌ಗೆ ತಿರುಗಿಬಿದ್ದಿದ್ದರಿಂದ ಯಾವಗಲ್ (65,066) 7,979 ಮತಗಳಂತರದಿಂದ ಸೋಲುವಂತಾಯಿತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.
ಕ್ಷೇತ್ರದ ನೋವು-ನಲಿವು
ಲೋಕೋಪಯೋಗಿ ಮಂತ್ರಿ ಸಿ.ಸಿ.ಪಾಟೀಲ್ ಪ್ರತಿನಿಧಿಸುತ್ತಿರುವ ನರಗುಂದ ವಿಧಾನಸಭಾ ಕ್ಷೇತ್ರವನ್ನು ಒಂದು ಸುತ್ತುಹಾಕಿದರೆ ಕಂಡಕಂಡಲ್ಲಿ ತರಾತುರಿಯಲ್ಲಿ ರಸ್ತೆ ಕಾಮಗಾರಿ ಭರದಿಂದ ಸಾಗಿರುವುದು ಕಾಣಿಸುತ್ತದೆ! ಒಂದೆಡೆ ಕಾಮಗಾರಿ ಆಗುತ್ತಿದ್ದರೆ, ಮತ್ತೊಂದೆಡೆ ರಸ್ತೆಗೆ ಹಾಕಿದ ಕಾಂಕ್ರಿಟ್-ಡಾಂಬರು ಕಿತ್ತುಹೋಗುತ್ತಿದೆ;ಇದೆಲ್ಲ ಇಲೆಕ್ಷನ್ ಸ್ಟಂಟ್. ಇಷ್ಟು ದಿನ ಕ್ಷೇತ್ರದ ಕಾಳಜಿ ಇಲ್ಲದೆ, ಮಂತ್ರಿಗಿರಿ ’ಕಸುಬಲ್ಲಿ’ ಬ್ಯುಸಿಯಾಗಿದ್ದ ಪಾಟೀಲರು ಇದ್ದಕ್ಕಿದ್ದಂತೆ ’ಕ್ರಿಯಾಶೀಲ’ರಾಗಿರುವುದು ಚುನಾವಣೆಯ ಅಂಜಿಕೆಯಿಂದ ಎಂಬುದು ಎಲ್ಲೆಡೆ ಮಾರ್ದನಿಸುತ್ತಿರುವ ಸಾಮಾನ್ಯ ಮಾತು! ಪಿಡಬ್ಲ್ಯುಡಿಯಂಥ ಆಯಕಟ್ಟಿನ ಮಂತ್ರಿ ಸ್ಥಾನದಲ್ಲಿದ್ದರೂ ಪಾಟಿಲರಿಂದ ಕ್ಷೇತ್ರಕ್ಕೇನೂ ಪ್ರಯೋಜವಾಗಿಲ್ಲ ಎಂದು ಜನರಾಡಿಕೊಳ್ಳುತ್ತಿದ್ದಾರೆ!
ಕುಡಿಯುವ ನೀರು, ನೈರ್ಮಲ್ಯ, ಆರೋಗ್ಯದಂಥ ಮೂಲಭೂತ ಸೌಕರ್ಯಗಳಿಗಾಗಿ ನರಗುಂದದ ಜನರು ಪರದಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಶೌಚಾಲಯಗಳಿಲ್ಲ; ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲ. ಸೂರಿಲ್ಲದವರಿಗೆ ವಸತಿ ಯೋಜನೆ ಕೈಗೆಟುಕುತ್ತಿಲ್ಲ. ಯಾವಗಲ್ ಶಾಸಕರಗಿದ್ದಾಗ ಮಂಜೂರಿ ಮಾಡಿಸಿಕೊಂಡು ಬಂದಿದ್ದ 2,000 ಮನೆಗಳು ಹಾಲಿ ಶಾಸಕರ ಉದಾಸೀನದಿಂದ ಜನರರಿಗೆ ಸಿಗಲಿಲ್ಲ; ಪ್ರತಿ ಮಳೆಗಾಲದಲ್ಲಿ ಕೊಣ್ಣೂರು, ಹೊಳೆ ಆಲೂರು ಮುಂತಾದ ಹತ್ತಾರು ಹಳ್ಳಿಗಳು ಪ್ರವಾಹದಿಂದ ಮುಳುಗುತ್ತವೆ; ಜನ-ಜಾನುವಾರು ಬೀದಿ ಪಾಲಾಗುವ ಸ್ಥಿತಿಯಿದೆ. ಇದಕ್ಕಿನ್ನೂ ಶಾಶ್ವತ ಪರಿಹಾರ ಸಿಕ್ಕದಾಗಿದೆ. ಕುಡಿಯುವ ನೀರಿನ ಯೋಜನೆಯ ಹೆಸರಲ್ಲಿ ಹಳ್ಳಿಗಳ ರಸ್ತೆ ಕಿತ್ತುಹಾಕಲಾಗಿದೆ; ಅತ್ತ ನೀರಿನ ಯೋಜನೆಯೂ ಸಮರ್ಪಕವಾಗಿ ಜಾರಿಯಾಗುತ್ತಿಲ್ಲವೆಂಬ ಆಕ್ಷೇಪ ಕೇಳಿಬರುತ್ತಿದೆ.
ಕೃಷಿ ಅವಲಂಬಿತರೇ ಶೇ.95ರಷ್ಟಿರುವ ನರಗುಂದದ ರೈತರ ಪಾಡಂತೂ ಹೇಳತೀರದು! ರೈತರಿಗೆ ಹೊಲಕ್ಕೆ ಹೋಗಿಬರಲಿಕ್ಕೂ ರಸ್ತೆಗಳಿಲ್ಲದ ಹಳ್ಳಿಗಳಿವೆ; ಎತ್ತಿನ ಗಾಡಿ ಓಡಾಡುವಷ್ಟಾದರೂ ರಸ್ತೆ ಮಾಡಕೊಡಿ ಎಂದು ಅಲವತ್ತುಕೊಂಡರೂ ಶಾಸಕ-ಮಂತ್ರಿ ಪಾಟೀಲ್ ಸಾಹೇಬರು ಖಬರಿಲ್ಲದಂತೆ ಇದ್ದಾರೆಂದು ರೈತರು ಬೇಸರಿಸುತ್ತಾರೆ. ಶಾಶ್ವತ ಫಸಲು ಖರೀದಿ ಕೇಂದ್ರ ಸ್ಥಾಪಿಸಿ ದಲ್ಲಾಳಿ ಶೋಷಣೆಯಿಂದ ಮುಕ್ತರಾಗಿಸಿ ಎಂದು ರೈತರು ಅಲವತ್ತುಕೊಳ್ಳುತ್ತಿದ್ದಾರೆ. ಆದರೆ ಸ್ವತಃ ದಲ್ಲಾಳಿ ಮಂಡಿ ಸಾಹುಕಾರರಾದ ಮಂತ್ರಿ ಪಾಟೀಲ್ ಪ್ರಜ್ಞಾಪೂರ್ವಕವಾಗಿಯೇ ಇತ್ತ ತಲೆಹಾಕುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಸಮಗ್ರ ನೀರಾವರಿಗಾಗಿ ನಿರಂತರ ಹೋರಾಟ ಆಗುತ್ತಿದೆ. ಮಹದಾಯಿ ಚಳವಳಿ ಹೊಟ್ಟೆಪಾಡಿನ ಹೋರಾಟದಂತಾಗಿದೆ ಎಂದು ಮಂತ್ರಿ ಪಾಟೀಲ್ ಮೂದಲಿಸುತ್ತಿದ್ದಾರೆ. ಇದರಿಂದ ಕೆರಳಿರುವ ರೈತರು ಪ್ರಧಾನಿ, ಗೃಹಮಂತ್ರಿ, ಸುಪ್ರೀಮ್ ಕೋರ್ಟ್ ಮತ್ತು ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್‌ಗೆ ಪತ್ರ ಬರೆದು “ಮಂತ್ರಿ ಪಾಟೀಲ್ ಹೇಳಿಕೆಯ ಸತ್ಯಾಸತ್ಯತೆಯ ತನಿಖೆ ನಡೆಸಿ” ಎಂದು ಒತ್ತಾಯಿಸಿದ್ದಾರೆ.
ಕ್ಷೇತ್ರದಲ್ಲಿ ಯಾರೇ ಶಾಸಕನಾದರೂ ಆಗುವ ಒಂದಿಷ್ಟು ಬಜೆಟ್ ಕಾಮಗಾರಿ ಬಿಟ್ಟರೆ ಅಭಿವೃದ್ಧಿ ಕುರುಹುಗಳೇ ಕ್ಷೇತ್ರದಲ್ಲಿ ಕಾಣಿಸದು; ಶಾಸಕರ ಸುತ್ತ ಬೋಗಸ್ ’ಬಿಲ್’ವಿದ್ಯಾ ಪಾರಂಗತರು ಸುತ್ತುವರಿದಿರುವುದರಿಂದ ಕಳಪೆ ಕಾಮಗಾರಿಗಳಾಗುತ್ತಿವೆ; ಮಲಪ್ರಭೆ ನೀರು ಹರಿದು ಬರುವ ನೀರಾವರಿ ನಾಲೆ-ಪೈಪ್‌ಗಳ ರಿಪೇರಿ-ನವೀಕರಣದ ನೆಪದಲ್ಲಿ ಕೋಟಿಗಳ ಲೆಕ್ಕದಲ್ಲಿ ಲೂಟಿಯಾಗುತ್ತಿದೆ ಎಂಬ ಆರೋಪವಿದೆ. ಕಲಿತ ಯುವ ಜನಾಂಗ ಹೊಟ್ಟೆ ಪಾಡಿನ ಕೆಲಸ ಅರಸುತ್ತ ಹುಬ್ಬಳ್ಳಿ, ಬೆಂಗಳೂರು, ಮಂಗಳೂರು ಸೇರುತ್ತಿದೆ. ಕೈಗಾರಿಕೆ ಬೇಕೆಂದು ಯುವಕರು ಕೇಳುತ್ತಿದ್ದಾರೆ. ಮೂರು ಬಾರಿ ಶಾಸಕರು, ನಾಲ್ಕು ಸಲ ಮಂತ್ರಿಯಾಗಿರುವ ಸಿ.ಸಿ.ಪಾಟೀಲ್ ಅಭಿವೃದ್ಧಿಯಾಗುತ್ತಿದ್ದಾರೆಯೇ ವಿನಾ ನರಗುಂದ ಮಾತ್ರ ಇದ್ದಂತೆಯೆ ಇದೆ; ಯಾವಗಲ್ ಶಾಸಕರಾಗಿದ್ದಾಗ ಮಂಜೂರಿಯಾಗಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ಪುನಃ ಶಂಕುಸ್ಥಾಪನೆ, ಉದ್ಘಾಟನೆ ಮಾಡಿದ್ದೇ ಸಿ.ಸಿ.ಪಾಟೀಲರ ಸಾಧನೆ ಎಂದು ಸಾಮಾಜಿಕ ಕಾರ್ಯಕರ್ತರೋರ್ವರು ’ನ್ಯಾಯಪಥ’ಕ್ಕೆ ಹೇಳಿದರು.
ಹಳಬರದೇ ಹಣಾಹಣಿ
ನರಗುಂದ ರಣಾಂಗಣ ನಿಧಾನಕ್ಕೆ ಹದಗೊಳ್ಳುತ್ತಿದೆ; ಪರಂಪರಾಗತ ಎದುರಾಳಿಗಳಾದ ಕಾಂಗ್ರೆಸ್‌ನ ಬಿ.ಆರ್.ಯಾವಗಲ್ ಮತ್ತು ಬಿಜೆಪಿಯ ಸಿ.ಸಿ.ಪಾಟೀಲ್ ಯದ್ಧ ಸನ್ನದ್ಧರಾಗುತ್ತಿದ್ದಾರೆ. ಕಾಂಗ್ರೆಸ್ ಟಿಕೆಟ್‌ಗೆ ಆರು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರಲ್ಲಿ ವೈದ್ಯಕೀಯ ವೃತ್ತಿ ಮಾಡುತ್ತಿರುವ ಡಾ.ಸಂಗಮೇಶ್ ಕೊಳ್ಳಿ ಶಾಸಕನಾಗುವ ದೂರಾಲೋಚನೆ ಕೂಡಿದಂತೆ ಕೊರೊನಾ ಸಂಕಷ್ಟದ ದಿನಗಳಲ್ಲಿ ಜನರಿಗೆ ನೆರವಾಗಿದ್ದರು. ಅದನ್ನೆ ಬಂಡವಾಳ ಮಾಡಿಕೊಂಡು ಈಗ ಕಾಂಗ್ರೆಸ್ ಟಿಕೆಟ್‌ಗೆ ಗಂಭೀರ ಪ್ರಯತ್ನ ನಡೆಸಿದ್ದಾರೆನ್ನಲಾಗಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿತನ ಬಯಸಿ ಅರ್ಜಿ ಗುಜರಾಯಿಸಿರುವವರಲ್ಲಿ ಯಾರಿಗೂ ಮಾಜಿ ಮಂತ್ರಿ ಯಾವಗಲ್‌ರ ಸಾಮರ್ಥ್ಯವಿಲ್ಲ; ಬಿಜೆಪಿಯ ಸಿ.ಸಿ.ಪಾಟೀಲರ ಧನ-ಬುಜ ಬಲವನ್ನು ಯಾವಗಲ್ ಮಾತ್ರ ತಮ್ಮ ಸೌಮ್ಯ ವರ್ಚಸ್ಸಿನಿಂದ ಎದುರಿಸಬಲ್ಲರೆಂಬ ಮಾತು ಕೇಳಿಬರುತ್ತದೆ.
ಐದು ಬಾರಿ ಗೆದ್ದು ನಾಲ್ಕು ಸಲ ಸೋತಿರುವ ಯಾವಗಲ್‌ರಿಗೆ ಕ್ಷೇತ್ರದ ನಾಡಿಮಿಡಿತ ಗೊತ್ತಿದೆ. ರೈತ ಹೋರಾಟ ಹಿನ್ನಲೆಯ ಯಾವಗಲ್ ರೈತರ-ಜನಸಾಮಾನ್ಯರ ಕಷ್ಟ-ಸುಖಕ್ಕೆ ಸ್ಪಂದಿಸುವ ಕೆಲಸಗಾರ. ಕಳಸಾ-ಬಂಡೂರಿಗಾಗಿ ಯಾವಗಲ್ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಆದರೆ ಅಂದು ಪ್ರಧಾನಿಯೊಗಿದ್ದ ವಾಜಪೇಯಿ ಅಡ್ಡಗಾಲು ಹಾಕಿದರು. ಬಿಜೆಪಿ ಮಂತ್ರಿ ಸಿ.ಸಿ.ಪಾಟೀಲರಿಗೆ ಹೋಲಿಸಿದರೆ ಯಾವಗಲ್ ಫಾರ್ ಬೆಟರ್ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ. ಕಳೆದ ನಾಲ್ಕೂವರೆ ವರ್ಷದಿಂದ ಶಾಸಕ ಕಮ್ ಮಂತ್ರಿಯಾಗಿರುವ ಪಾಟೀಲ್ ಜನರಿಗೆ ನಾಟ್ ರಿಚೇಬಲ್ ಆಗಿದ್ದರು. ಸಮಸ್ಯೆ ಹೇಳಿಕೊಂಡು ಬಂದವರಿಗೆ ಬೈದು ಅಟ್ಟುತ್ತಿದ್ದರು. ಸಿಡುಕು ಸ್ವಭಾವದ ಪಾಟೀಲ್ ಜನರೊಂದಿಗೆ ಬೆರೆಯುವುದಿಲ್ಲ- ಎಂಬಿತ್ಯಾದಿಯಾಗಿ ಅಸಮಾಧಾನ ಮತದಾರಲ್ಲಿ ಅಷ್ಟೇ ಅಲ್ಲ, ಬಿಜೆಪಿಯಲ್ಲೂ ಬುಸುಗುಡುತ್ತಿದೆ.
ಎಂಟಿಇನ್‌ಕಂಬೆನ್ಸ್ ಇದ್ದರೂ ಪಾಟೀಲರಿಗೆ ಬಿಜೆಪಿಯಲ್ಲಿ ಟಿಕೆಟ್ ಎದುರಾಳಿಗಳಿಲ್ಲ. ಪಂಚಮಸಾಲಿ ಪೀಠಸ್ಥರ ನಿಕಟ ಒಡನಾಟದಲ್ಲಿರುವ ಪಾಟೀಲ್ ಬಿಜೆಪಿ ಹುರಿಯಾಳಾಗುವುದು ಗ್ಯಾರಂಟಿ; ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರೊಂದಿಗೂ ಬಾಂಧವ್ಯವಿರುವ ಯಾವಗಲ್ ಅವರೇ ಕಾಂಗ್ರೆಸ್ ಟಿಕೆಟ್ ಪಡೆಯುವ ಸಾಧ್ಯತೆ ಜಾಸ್ತಿ ಎಂಬ ಭಾವನೆ ನರಗುಂದದ ರಾಜಕೀಯ ವಲಯದಲ್ಲಿದೆ. ಕ್ಷೇತ್ರದಲ್ಲಿನ ಜಾತಿ-ವ್ಯಕ್ತಿ-ಪಕ್ಷ ಪ್ರತಿಷ್ಠೆಯ ಸೂತ್ರ-ಸಮೀಕರಣ ಮತ್ತು ಮಂತ್ರಿ ಪಾಟೀಲ್ ಬಗೆಗಿನ ಬೇಸರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಾಂಗ್ರೆಸ್‌ನ ಯಾವಗಲ್ ಗೆಲ್ಲುವ ಸಾಧ್ಯತೆ ಗೋಚರಿಸುತ್ತದೆ ಎಂಬುದು ಸದ್ಯದ ಲೆಕ್ಕಾಚಾರ!


