Homeಮುಖಪುಟಬಾಗೇಪಲ್ಲಿಯಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧೆ?: ಕ್ಷೇತ್ರದ ಸ್ಥಿತಿಗತಿ ಹೀಗಿದೆ...

ಬಾಗೇಪಲ್ಲಿಯಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧೆ?: ಕ್ಷೇತ್ರದ ಸ್ಥಿತಿಗತಿ ಹೀಗಿದೆ…

ಮಧುಗಿರಿಯಲ್ಲಿ ಗೆದ್ದು, ಚನ್ನಪಟ್ಟಣದಲ್ಲಿ ಸೋತು ಆನಂತರ ರಾಮನಗರದಲ್ಲಿ ಗೆದ್ದಿರುವ ಅನಿತಾ ಕುಮಾರಸ್ವಾಮಿಯವರು ಮತ್ತೊಮ್ಮೆ ಕ್ಷೇತ್ರ ಬದಲಾವಣೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

- Advertisement -
- Advertisement -

ಆಂಧ್ರ ಪ್ರದೇಶದ ಗಡಿಗೆ ಅಂಟಿಕೊಂಡಿರುವ ಗುಡ್ಡಗಾಡು ಮತ್ತು ಬಯಲು ಪ್ರದೇಶಗಳಿಂದ ಕೂಡಿದ ಬಾಗೇಪಲ್ಲಿ ಅತಿ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದು. ಸತತ ಬರ ಅಪ್ಪಳಿಸಿದ ಪರಿಣಾಮ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೇ ಹಿಂದುಳಿದ ತಾಲ್ಲೂಕುಗಳೆನಿಸಿದ ಬಾಗೇಪಲ್ಲಿ, ಗುಡಿಬಂಡೆ ಮತ್ತು ಹೊಸದಾಗಿ ರಚನೆಯಾದ ಚೇಳೂರುಗಳನ್ನು ಸೇರಿಸಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ರಚನೆಯಾಗಿದೆ. ಇಲ್ಲಿನ ಬಡ ಕೂಲಿಕಾರರನ್ನು ಸಂಘಟಿಸಿ ಹೋರಾಟ ರೂಪಿಸಿದ್ದ ಸಿಪಿಎಂ ಪಕ್ಷದ ನೆಲೆ ಇದಾಗಿದೆ. ಮೂರು ಬಾರಿ ಸಿಪಿಎಂ ಪಕ್ಷ ಇಲ್ಲಿ ಜಯಗಳಿಸಿತ್ತು. ಹಾಗಾಗಿಯೇ ಇತ್ತೀಚೆಗೆ ಸಿಪಿಎಂ ಪಕ್ಷದ ರಾಜ್ಯ ಸಮ್ಮೇಳನವನ್ನು ಬಾಗೇಪಲ್ಲಿಯಲ್ಲಿ ನಡೆಸಿ, ಕೇರಳ ಸಿಎಂ ಪಿಣರಾಯಿ ವಿಜಯನ್‌ರವರನ್ನು ಅತಿಥಿಗಳಾಗಿ ಆಹ್ವಾನಿಸಲಾಗಿತ್ತು.

ಇಂತಹ ಬಾಗೇಪಲ್ಲಿಯಲ್ಲಿ 2023ರ ವಿಧಾನಸಭೆ ಚುನಾವಣೆಯ ಚಟುವಟಿಕೆಗಳು ಗರಿಗೆದರಿವೆ. ಹಲವು ಪಕ್ಷಗಳಲ್ಲಿ ಟಿಕೆಟ್‌ಗಾಗಿ ಆಕಾಂಕ್ಷಿಗಳ ದಂಡೇ ನೆರೆದಿದೆ. ಈ ಎಲ್ಲಾ ಚಟುವಟಿಕೆಗಳ ನಡುವೆ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಗಾಗಿ ರಾಮನಗರ ಕ್ಷೇತ್ರ ಬಿಟ್ಟುಕೊಟ್ಟಿರುವ ಅನಿತಾ ಕುಮಾರಸ್ವಾಮಿಯವರು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿವೆ.

2008ರ ಉಪ ಚುನಾವಣೆಯಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅನಿತಾ ಕುಮಾರಸ್ವಾಮಿಯವರು ಗೆಲುವು ಸಾಧಿಸಿದ್ದರು. ಆದರೆ 2013ರ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ವಿರುದ್ಧ ಸೋಲನ್ನು ಅನುಭವಿಸಿದ್ದರು. ಆನಂತರ 2018ರ ವಿಧಾನಸಭೆ ಚುನಾವಣೆಯಲ್ಲಿ ಎಚ್.ಡಿ ಕುಮಾರಸ್ವಾಮಿಯವರು ರಾಮನಗರ ಮತ್ತು ಚನ್ನಪಟ್ಟಣ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರಿಂದ ರಾಮನಗರ ವಿಧಾನಸಭಾ ಕ್ಷೇತ್ರವನ್ನು ತೆರವು ಮಾಡಿದರು. ಆಗ ಅಲ್ಲಿ ನಡೆದ ಉಪಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಅನಿತಾ ಕುಮಾರಸ್ವಾಮಿಯವರು ಗೆಲುವು ಸಾಧಿಸಿದ್ದರು. ಆನಂತರ 2023ರಲ್ಲಿ ಅಲ್ಲಿಂದ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ಹಾಸನ, ರಾಮನಗರದಲ್ಲಿ ತಮ್ಮ ಕುಟುಂಬ ಸಾಮ್ರಾಜ್ಯ ಕಟ್ಟಿರುವ ಜೆಡಿಎಸ್ ಪಕ್ಷ ತುಮಕೂರು ಮತ್ತು ಮಂಡ್ಯದಲ್ಲಿ ಪ್ರಯತ್ನಿಸಿ ವಿಫಲಗೊಂಡಿದೆ. ಇಂತಹ ಸಂದರ್ಭದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಯವರ ಪತ್ನಿ ಪದೇ ಪದೇ ಕ್ಷೇತ್ರ ಬದಲಿಸುತ್ತ ಸದ್ಯ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಗೆ ಬರುವ ಸೂಚನೆ ನೀಡಿದ್ದಾರೆ. ಇದಕ್ಕೆ ಕ್ಷೇತ್ರದ ಜನರ ಪ್ರತಿಕ್ರಿಯೆ ಹೇಗಿರಲಿದೆ ಎಂಬುದಕ್ಕೂ ಮುನ್ನ ಅಲ್ಲಿ ರಾಜಕೀಯ ಸ್ಥಿತಿಗತಿಯನ್ನು ಅರಿಯೋಣ.

ಅತಿಹೆಚ್ಚು ತೆಲುಗು ಭಾಷೆ ಮಾತನಾಡುವ ಇಲ್ಲಿನ ಜನ ಅಭಿವೃದ್ದಿಯಿಂದ ವಂಚಿತರಾಗಿದ್ದಾರೆ. ಸಮರ್ಪಕ ನೀರಾವರಿ ಸೌಲಭ್ಯ ಇಲ್ಲದೆ ತತ್ತರಿಸಿದ್ದಾರೆ. ಇಲ್ಲಿಂದ ಗೆದ್ದವರು ಬೆಂಗಳೂರಿನಲ್ಲಿ ನೆಲೆಸುತ್ತಾರೆ, ಕ್ಷೇತ್ರದ ಜನರ ಕಷ್ಟನಷ್ಟಗಳಿಗೆ ಬೆನ್ನುತಿರುಗಿಸುತ್ತಿದ್ದಾರೆ ಎಂಬ ಅಳಲು ಕಂಡುಬರುತ್ತಿದೆ. ಇಲ್ಲಿ ನಡೆದಿರುವ ಒಟ್ಟು 13 ಚುನಾವಣೆಗಳಲ್ಲಿ ಕಾಂಗ್ರೆಸ್ 8 ಬಾರಿ ಜಯ ಕಂಡರೆ, ಸಿಪಿಎಂ 3 ಬಾರಿ ಗೆಲುವು ಸಾಧಿಸಿದೆ. ಎರಡು ಬಾರಿ ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇಲ್ಲಿ ಹಸ್ತ ಮತ್ತು ಸುತ್ತಿಗೆ-ಕುಡುಗೋಲು ಗುರುತುಗಳು ಹಿರಿಯರಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿವೆ. ಹಾಗಾಗಿ ಈ ಎರಡು ಪಕ್ಷಗಳ ನಡುವೆಯೇ ನೇರ ಹಣಾಹಣಿ ಇರುತ್ತದೆ. ಹಾಗಾಗಿ ಪಕ್ಷೇತರ ಅಭ್ಯರ್ಥಿಗಳನ್ನು ಹೊರತುಪಡಿಸಿ ಜೆಡಿಎಸ್, ಬಿಜೆಪಿ ಒಮ್ಮೆಯೂ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ.

1962ರಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರವನ್ನು ರಚಿಸಲಾಗಿತ್ತು. 1978ರವರೆಗೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದ ಅದು ತದನಂತರ ಸಾಮಾನ್ಯ ಕ್ಷೇತ್ರವಾಗಿ ಬದಲಾಗಿದೆ. 1978ರವರೆಗೆ ಮೀಸಲು ಕ್ಷೇತ್ರವಾಗಿದ್ದರಿಂದ ಪ.ಜಾ ಶಾಸಕರಿದ್ದರು. ಆನಂತರ ಒಕ್ಕಲಿಗ ಮತ್ತು ಬಲಿಜ ಸಮುದಾಯದವರೆ ಕ್ಷೇತ್ರದ ಶಾಸಕರಾಗುತ್ತಾ ಬಂದಿದ್ದಾರೆ. ಇಂದಿಗೂ ಕ್ಷೇತ್ರದಲ್ಲಿ ಈ ಎರಡು ಸಮುದಾಯಗಳೇ ಪ್ರಾಬಲ್ಯ ಮೆರೆಯುತ್ತಿವೆ.

ಜಾತಿವಾರು ಅಂದಾಜು ಮತಗಳು

ಸುಮಾರು 60,000ದಷ್ಟಿರುವ ಒಕ್ಕಲಿಗ ಮತಗಳು ಇಲ್ಲಿದ್ದು, 50,000ದಷ್ಟು ದಲಿತ ಸಮುದಾಯದ ಮತಗಳಿವೆ. 25,000ದಷ್ಟು ಕುರುಬ ಸಮುದಾಯದ ಮತಗಳಿದ್ದರೆ, 23,000ದಷ್ಟು ಬಲಿಜ ಜನಾಂಗದ ಮತಗಳಿವೆ. 20,000ದಷ್ಟು ಮುಸ್ಲಿಂ ಮತಗಳಿದ್ದರೆ, ಸುಮಾರು 30,000ದಷ್ಟು ಇತರ ಸಮುದಾಯದ ಮತಗಳಿವೆ ಎನ್ನಲಾಗಿದೆ.

ಹಾಲಿ ಪರಿಸ್ಥಿತಿ

ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿಯವರು ಸತತ ಎರಡು ಬಾರಿ ಶಾಸಕರಾದರೂ ಕ್ಷೇತ್ರವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯಲು ವಿಫಲರಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ ಮತ್ತು ಸ್ವಜನಪಕ್ಷಪಾತ ಮಾಡುತ್ತಿದ್ದಾರೆ ಎಂದು ಜನ ದೂರುತ್ತಾರೆ. ಅವರು ಕಾಂಗ್ರೆಸ್ ಪಕ್ಷದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಮಾಜಿ ಶಾಸಕ ಎನ್ ಸಂಪಂಗಿ ಕೂಡ ಅರ್ಜಿ ಸಲ್ಲಿಸಿದ್ದು, ಕಾಂಗ್ರೆಸ್ ಹೈಕಮಾಂಡ್ ಹಾಲಿ ಶಾಸಕ ಸುಬ್ಬಾರೆಡ್ಡಿಗೆ ಮಣೆಹಾಕುವ ಸಾಧ್ಯತೆ ಹೆಚ್ಚಾಗಿದೆ.

ಸಿಪಿಎಂ

ಮೂರು ಬಾರಿ ಜಯ ಕಂಡಿರುವ ಸಿಪಿಎಂ ಪಕ್ಷ ಇತ್ತೀಚೆಗೆ ಇಲ್ಲಿಯೇ ರಾಜ್ಯ ಸಮ್ಮೇಳನ ನಡೆಸಿ ಬಲ ಪ್ರದರ್ಶನ ಮಾಡಿದೆ. ಕೊರೊನಾ ಸಮಯದಲ್ಲಿ ಎನ್‌ಜಿಓ ಜೊತೆ ಸೇರಿ ಬಹಳಷ್ಟು ಕೆಲಸ ಮಾಡಿರುವ ಡಾ.ಅನಿಲ್ ಕುಮಾರ್ ಅವರು ಜನಮನ್ನಣೆ ಗಳಿಸಿದ ವೈದ್ಯರೆನಿಸಿಕೊಂಡಿದ್ದಾರೆ. ಬಾಗೇಪಲ್ಲಿಯಲ್ಲಿಯೇ ಪೀಪಲ್ಸ್ ಆಸ್ಪತ್ರೆ ತೆರೆದು ನೆಲೆಸಿರುವ ಇವರಿಗೆ ಸಿಪಿಎಂ ಪಕ್ಷ ಟಿಕೆಟ್ ಘೋಷಿಸಿದೆ.

ಜೆಡಿಎಸ್

ಜೆಡಿಎಸ್ ಪಕ್ಷವು ಈ ಹಿಂದೆ ಚುನಾವಣೆಗೆ ನಿಂತು ಸೋತಿದ್ದ ಡಿ.ಜೆ ನಾಗರಾಜ ರೆಡ್ಡಿಯವರಿಗೆ ಟಿಕೆಟ್ ಘೋಷಿಸಿದೆ. ಆದರೆ ಪಕ್ಷದಲ್ಲಿ ಹಲವರು ಅವರ ವಿರುದ್ಧ ಅಪಸ್ವರವೆತ್ತಿದ್ದಾರೆ. ಅದೇ ಸಂದರ್ಭದಲ್ಲಿ ಪಂಚರತ್ನ ಯಾತ್ರೆಗೆ ಬಾಗೇಪಲ್ಲಿಯಲ್ಲಿ ಜನ ಸೇರಿಸಿಲ್ಲ ಎಂದು ನಾಗರಾಜ ರೆಡ್ಡಿ ವಿರುದ್ಧ ಹೆಚ್‌ಡಿಕೆ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಹಾಗಾಗಿ ಎಚ್.ಡಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿರುವ ಹರಿನಾಥ್‌ರೆಡ್ಡಿ ಮತ್ತು ಒಕ್ಕಲಿಗ ಸಮುದಾಯದ ಗೊಟ್ಟಿಗೊರೆ ಮಂಜುನಾಥ್‌ಗೌಡ ತಮಗೆ ಟಿಕೆಟ್ ಕೊಡಿ. ಇಲ್ಲದಿದ್ದರೆ ಅನಿತಾ ಕುಮಾರಸ್ವಾಮಿಯವರು ಜೆಡಿಎಸ್ ಅಭ್ಯರ್ಥಿಯಾಗಲಿ, ನಾವು ಅವರಿಗಾಗಿ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಆದರೆ ಕುಮಾರಸ್ವಾಮಿಯವರು ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಕೊನೆಯ ಕ್ಷಣದಲ್ಲಿ ಅಭ್ಯರ್ಥಿ ಬದಲಾಗುವುದು ಖಚಿತ ಎಂದು ಹಲವರು ಮಾತನಾಡುತ್ತಿದ್ದಾರೆ.

ಬಿಜೆಪಿ

ಬಾಗೇಪಲ್ಲಿಯಲ್ಲಿ ಜೆಡಿಎಸ್‌ನಂತೆಯೆ ಬಿಜೆಪಿಗೆ ಕೂಡ ಒಮ್ಮೆಯೂ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಆದರೂ ಪಕ್ಷದ ಟಿಕೆಟ್‌ಗಾಗಿ ಆಕಾಂಕ್ಷಿಗಳ ದಂಡೇ ನೆರೆದಿದೆ. ಬಲಿಜ ಜನಾಂಗದ ಮುಖಂಡರು, ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಸಿ ಮುನಿರಾಜುರವರು ಹಲವಾರು ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಬಿಜೆಪಿ ಟಿಕೆಟ್‌ಗಾಗಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಸಾಕಷ್ಟು ಹಣ ಚೆಲ್ಲಲು ಸಹ ಸಿದ್ದರಿದ್ದಾರೆ.

ಇನ್ನು ಹರಿಕೆರೆ ಕೃಷ್ಣಾರೆಡ್ಡಿ ಸಹ ತಮ್ಮ ಜಾತಿ ಬಲ ಬಳಸಿಕೊಂಡು ಟಿಕೆಟ್‌ಗಾಗಿ ಯತ್ನಿಸುತ್ತಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರಾದ ರಾಮಲಿಂಗಪ್ಪನವರು ಬಲಿಜ ಜನಾಂಗಕ್ಕೆ ಸೇರಿದ್ದು, 30 ವರ್ಷಗಳಿಂದ ಪಕ್ಷಕ್ಕೆ ದುಡಿದಿದ್ದೇನೆ, ನನಗೆ ಟಿಕೆಟ್ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇಷ್ಟು ದಿನ ಜೆಡಿಎಸ್‌ನಲ್ಲಿದ್ದು, ಆದರೆ ಟಿಕೆಟ್‌ ಸಿಗದುದ್ದರಿಂದ ಇತ್ತೀಚೆಗೆ ಬಿಜೆಪಿ ಸೇರಿರುವ ನಿವೃತ್ತ ಡಿವೈಎಸ್‌ಪಿ,  ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಕೋನಪ್ಪರೆಡ್ಡಿಯವರು ತನಗೆ ಟಿಕೆಟ್ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಈ ನಾಲ್ವರ ಟಿಕೆಟ್ ರೇಸ್‌ನಲ್ಲಿ ಬಿಜೆಪಿ ಯಾರಿಗೆ ಮಣೆ ಹಾಕಲಿದೆ ಇನ್ನೂ ನಿರ್ಧಾರವಾಗಿಲ್ಲ.

ಜಿ.ವಿ ಶ್ರೀರಾಮರೆಡ್ಡಿಯವರು ಇಲ್ಲವಾದ ಮೇಲೆ..

ಜಿ.ವಿ ಶ್ರೀರಾಮರೆಡ್ಡಿಯವರು ಪಕ್ಷದ ತತ್ವಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಸಿಪಿಎಂ ಜಿಲ್ಲಾ ಸಮಿತಿಯು ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು. ಆನಂತರ ಅವರು 2020ರಲ್ಲಿ ಪ್ರಜಾ ಸಂಘರ್ಷ ಸಮಿತಿ (ಪಿಎಸ್‌ಎಸ್) ಎಂಬ ಪಕ್ಷ ಕಟ್ಟಿದರು. ಆದರೆ ಅವರು 2022ರ ಏಪ್ರಿಲ್‌ನಲ್ಲಿ ಹೃದಯಾಘಾತದಿಂದ ಕಾಲವಾದರು. ಈಗ ಈ ಪಕ್ಷದಿಂದಲೂ ಸಹ ಚುನಾವಣೆಯ ಕಣಕ್ಕಿಳಿಯಲು ಕೆಲವರು ತಯಾರಿ ನಡೆಸಿದ್ದಾರೆ. ಅವರಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರು ಮಿಥುನ್ ರೆಡ್ಡಿಯಾಗಿದೆ.

ಈ ಹಿಂದೆ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಮಿಥುನ್ ರೆಡ್ಡಿ ಈಗ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಯತ್ನಿಸುತ್ತಿದ್ದಾರೆ. ಅವರು ಶ್ರೀರಾಮ ರೆಡ್ಡಿಯವರ ಹಾದಿಯಲ್ಲಿ ನಡೆಯುವುದಾಗಿ ಭರವಸೆ ನೀಡಿದ ನಂತರ ಪ್ರಜಾ ಸಂಘರ್ಷ ಸಮಿತಿ ಅವರಿಗೆ ಬೆಂಬಲ ನೀಡಲು ಮುಂದಾಗಿದೆ ಎನ್ನಲಾಗಿದೆ.

ಸಿಪಿಎಂನಿಂದ ಟಿಕೆಟ್ ಬಯಸಿದ್ದ, ನಂತರ ಸ್ವಾಭಿಮಾನಿ ಪಿಎಸ್‌ಎಸ್ ಕಟ್ಟಿ ಈ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದ ಡಾ.ಮಧು ಸೀತಪ್ಪನವರು ಸದ್ಯ ಆಮ್‌ ಆದ್ಮಿ ಪಕ್ಷ ಸೇರಿದ್ದಾರೆ. ಅವರಿಗೆ ಆಪ್ ಟಿಕೆಟ್ ಘೋಷಿಸಿದೆ.

ಹಾಗೆ ನೋಡಿದರೆ ಕಾಂಗ್ರೆಸ್, ಸಿಪಿಎಂ ಮತ್ತು ಆಪ್ ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಲಾಬಿ ಮತ್ತು ಒಳಜಗಳ ಜೋರಾಗಿದೆ. ಹಾಗಾಗಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ನಡುವೆ ನೇರ ಪೈಪೋಟಿ ಏರ್ಪಡುವ ಸಂಭವವಿದೆ. ಉಳಿದ ಪಕ್ಷಗಳ ಅಭ್ಯರ್ಥಿಗಳು ಕೂಡ ಒಂದಷ್ಟು ಮತ ಸೆಳೆಯುವ ಸಾಮರ್ಥ್ಯ ಹೊಂದಿದ್ದಾರೆ. ಹಾಗಾಗಿ 2008ರಲ್ಲಾದಂತೆ ಮತಗಳು ಹಂಚಿಹೋಗುವ ಸಾಧ್ಯತೆಯಿದೆ. ಹಾಗಾಗಿ ಬಾಗೇಪಲ್ಲಿಯಲ್ಲಿ ಯಾರೇ ಗೆದ್ದರೂ ಮತಗಳ ಅಂತರ ಕಡಿಮೆ ಇರಲಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ.

ಇದನ್ನೂ ಓದಿ: ಬಾಗೇಪಲ್ಲಿಯ ಚುನಾವಣಾ ಇತಿಹಾಸದ ಸಂಪೂರ್ಣ ಸಮೀಕ್ಷೆ ಓದಲು ಇಲ್ಲಿ ಕ್ಲಿಕ್ ಮಾಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...