Homeಕರ್ನಾಟಕನಮ್ಮ ಸಚಿವರಿವರು; ಮಗ್ಗಲು ಬದಲಿಸಿದ ಮಧು ಬಂಗಾರಪ್ಪನವರ ರಾಜಕೀಯ ಬದುಕು

ನಮ್ಮ ಸಚಿವರಿವರು; ಮಗ್ಗಲು ಬದಲಿಸಿದ ಮಧು ಬಂಗಾರಪ್ಪನವರ ರಾಜಕೀಯ ಬದುಕು

- Advertisement -
- Advertisement -

ಕರ್ನಾಟಕ ರಾಜಕಾರಣದ ದಿಕ್ಕುದೆಸೆಯನ್ನೇ ಬದಲಿಸುವ ತಾಕತ್ತಿನ ಮಾಸ್‌ಲೀಡರ್ ಎನಿಸಿದ್ದ ಸಾರೆಕೊಪ್ಪ ಬಂಗಾರಪ್ಪನವರ ಮುದ್ದಿನ ಮಗ ಮಧು ಬಂಗಾರಪ್ಪರ ಎರಡು ದಶಕದ ಹೊಯ್ದಾಟದ ರಾಜಕಾರಣ ಅಂತೂ ಹಳಿಗೇರಿದೆ; ಮಹತ್ವದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಮಂತ್ರಿಯಾಗುವ ಮೂಲಕ ಮಧು ರಾಜ್ಯ ರಾಜಕಾರಣದ ಮುನ್ನಲೆಗೆ ಬಂದಿದ್ದಾರೆ. ತನ್ಮೂಲಕ ಶಿವಮೊಗ್ಗ ಜಿಲ್ಲೆಯ ರಾಜಕೀಯವೂ ದೀರ್ಘ ಹೊರಳಾಟದ ಬಳಿಕ ಮಗ್ಗಲು ಬದಲಿಸಿದೆ. ಮತೀಯ ಮಸಲತ್ತಿನ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತಾಡಬಲ್ಲ ಮಧು ಮೇಲ್ವರ್ಗದ ಲಿಂಗಾಯತ ತಂತ್ರಗಾರಿಕೆ ಎದುರಿಸುತ್ತಲೇ ಶಿವಮೊಗ್ಗ ಜಿಲ್ಲೆಯನ್ನು ಕೋಮು ರಾಜಕಾರಣದ ಗುಂಗಿನಿಂದ ಅದು ಹೇಗೆ ಹೊರತರುತ್ತಾರೆಂಬ ಕುತೂಹಲವೀಗ ಮೂಡಿದೆ.

ಹಠ-ಛಲಗಳ ಬಂಗಾರಪ್ಪನವರ ಕೌಟುಂಬಿಕ ಬಿಕ್ಕಟ್ಟಿನ ಕುಲುಮೆಯಲ್ಲಿ ರಾಜಕಾರಣಿಯಾಗಿ ರೂಪುಗೊಂಡ ಮಧು ಮೊದಲು ಸಿನೆಮಾ, ಆಡಿಯೋ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಅಣ್ಣ ಕುಮಾರ್ ಬಂಗಾರಪ್ಪನವರಿಗೆ ಅಪ್ಪ ರಾಜಕೀಯ ದೀಕ್ಷೆ ಕೊಟ್ಟಾಗಲೂ ಮಧು ರಾಜಕೀಯದತ್ತ ಆಕರ್ಷಿತರಾದವರಲ್ಲ. ಯಾವಾಗ ಹಿರಿಯ ಮಗ ಮತ್ತು ಬಂಗಾರಪ್ಪರ ನಡುವೆ ಸಾಂಸಾರಿಕ ವೈಷಮ್ಯ ಬೆಳೆಯಿತೋ ಆಗ ಅನಿವಾರ್ಯವಾಗಿ ಮಧು ಅಪ್ಪನ ಆಣತಿಯಂತೆ ರಾಜಕಾರಣ ಮಾಡಬೇಕಾಗಿ ಬಂತು. ಕುಮಾರ್ ನಟ್ಟಿರುಳಿನಲಿ ತನ್ನನ್ನು ಮನೆಯಿಂದ ಹೊರಗಟ್ಟಿದ್ದಾನೆ ಎಂದು ಸೊರಬದ ನೆಲದಲ್ಲಿ ನಿಂತು ಕಣ್ಣೀರುಗರೆಯುತ್ತ ಬಂಗಾರಪ್ಪ ಮಧುರನ್ನು ಉತ್ತರಾಧಿಕಾರಿ ಎಂದು ಘೋಷಿಸಿದ್ದರು.

ಎಸ್ ಬಂಗಾರಪ್ಪ

ಬಂಗಾರಪ್ಪ ಮೂರು ಬಾರಿ ಕುಮಾರ್‌ರನ್ನು ಸೊರಬದ ಶಾಸಕನಾಗಿ ಮಾಡಿದ್ದರು; ಅಲ್ಲೇ ಕುಮಾರ್ ಅವರ ರಾಜಕೀಯಕ್ಕೆ ಇತಿಶ್ರೀ ಹಾಡಲು ಮಧು ಪಟ್ಟಾಭಿಷೇಕಕ್ಕೆ ಶತಾಯಗತಾಯ ಪ್ರಯತ್ನಿಸಿದ್ದರು. ಆದರೆ ಬಂಗಾರಪ್ಪರ ಜೀವಿತಾವಧಿವರೆಗಿದು ಸಾಧ್ಯವಾಗಿರಲಿಲ್ಲ. 2004ರಲ್ಲಿ ಬಂಗಾರಪ್ಪ ಬಿಜೆಪಿ ಸೇರಿದಾಗ ಎಸ್.ಎಂ.ಕೃಷ್ಣ ಸರಕಾರದಲ್ಲಿ ಮಂತ್ರಿಯಾಗಿದ್ದ ಕುಮಾರ್ ತಾನು ಅಪ್ಪನನ್ನು ಹಿಂಬಾಲಿಸುತ್ತೇನೆ ಎನ್ನುತ್ತ ಮಂತ್ರಿಗಿರಿ ತೊರೆದು ಬಿಜೆಪಿ ಬಾಗಿಲಿಗೆ ಹೋಗಿನಿಂತಿದ್ದರು. ಆದರೆ ಬಂಗಾರಪ್ಪ ಕುಮಾರ್‌ಗೆ ಪ್ರವೇಶ ಸಿಗದಂತೆ ಮಾಡಿದರು; ವಾಪಸ್ ಕಾಂಗ್ರೆಸ್ ಸೇರಿಕೊಂಡ ಕುಮಾರ್‌ಗೆ ಎದುರಾಳಿಯಾಗಿ ಮಧುವನ್ನು ಬಿಜೆಪಿ ಅಭ್ಯರ್ಥಿಯಾಗಿ ಬಂಗಾರಪ್ಪ ನಿಲ್ಲಿಸಿದರು. ಪಾರ್ಲಿಮೆಂಟ್ ಮತ್ತು ಅಸೆಂಬ್ಲಿಗೆ ಜತೆಯಾಗಿ ಚುನಾವಣೆ ನಡೆದ ಆ ಸಂದರ್ಭದಲ್ಲಿ ಬಂಗಾರಪ್ಪ ಸಂಸದರಾದರೂ ಮಧುರವರಿಗೆ ಮಾತ್ರ ಗೆಲುವು ದಕ್ಕಲಿಲ್ಲ; ಅಪ್ಪನ ದೈತ್ಯ ಶಕ್ತಿ ಎದುರಿಸಿ ಗೆದ್ದು ಕುಮಾರ್ ಅಚ್ಚರಿ ಮೂಡಿಸಿದ್ದರು.

2008ರ ಚುನಾವಣೆ ಹೊತ್ತಲ್ಲಿ ಬಂಗಾರಪ್ಪ ಜೆಡಿಎಸ್‌ನಲ್ಲಿ ಇದ್ದರು. ಮಧು ಜೆಡಿಎಸ್ ಹುರಿಯಾಳಾದರೆ, ಕುಮಾರ್ ಕಾಂಗ್ರೆಸ್ ಅಭ್ಯರ್ಥಿ; ಬಂಗಾರಪ್ಪರಿಂದಲೆ ಹೊಸನಗರದ ಬಿಜೆಪಿ ಶಾಸಕನಾಗಿದ್ದ ಹರತಾಳು ಹಾಲಪ್ಪ ಗುರುವಿಗೆ ತಿರುಮಂತ್ರ ಹಾಕಿ ಬಿಜೆಪಿಯಿಂದ ಸ್ಪರ್ಧೆಗಿಳಿದಿದ್ದರು. ಅಣ್ಣ-ತಮ್ಮರ ಕಾಳಗದಲ್ಲಿ ದಾಯಾದಿ ಹಾಲಪ್ಪ ಸುಲಭವಾಗಿ ಶಾಸಕನಾದರು. 2013ರ ಚುನಾವಣೆ ವೇಳೆ ಬಂಗಾರಪ್ಪ ಇರಲಿಲ್ಲ; ತಂದೆಯ ಸಾವಿನ ಸಿಂಪಥಿಯಲ್ಲಿ ಮಧು ಜೆಡಿಎಸ್ ಶಾಸಕನಾಗಿ ಚುನಾಯಿತರಾದರು. ಅರಣ್ಯ ಸಾಗುವಳಿ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ರೈತರಿಗೆ ಹಕ್ಕುಪತ್ರ ಕೊಡಿಸಲು ಪಾದಯಾತ್ರೆ ಮಾಡಿದ್ದ ಮಧು ಶಾಸಕನಾಗುತ್ತಲೆ ರಾಜ್ಯ ನಾಯಕನಾಗುವ ಅವಸರಕ್ಕೆ ಬಿದ್ದರು; ರಾಜ್ಯದಾದ್ಯಂತ ಓಡಾಡುತ್ತ ಈಡಿಗರ ಮುಂದಾಳಾಗುವ ಪ್ರಯತ್ನದಲ್ಲಿ ಕ್ಷೇತ್ರದ ಮೇಲಿನ ಹಿಡಿತ ಕಳೆದುಕೊಂಡರು. ಹೀಗಾಗಿ ಮಧು 2018ರಲ್ಲಿ ಪರಾಭವ ಅನುಭವಿಸಬೇಕಾಯಿತು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಇದನ್ನೂ ಓದಿ: ನಮ್ಮ ಸಚಿವರಿವರು; ನೇರ ನಿಷ್ಠುರಿ, ಅಹಿಂದದ ಮುಂಚೂಣಿ ರಾಜಕಾರಣಿ ಕ್ಯಾತ್ಸಂದ್ರ ಎನ್. ರಾಜಣ್ಣ

ಈ ನಡುವೆ ಎರಡು ಬಾರಿ ಯಡಿಯೂರಪ್ಪರ ಮಗ ರಾಘವೇಂದ್ರ ವಿರುದ್ಧ ಲೋಕಸಭೆಗೆ ಜೆಡಿಎಸ್‌ನಿಂದ ಸ್ಪರ್ಧಿಸಿದ ಮಧು ಸೋಲು ಕಂಡರು. 2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದಾಗ ಸಿಎಂ ಕುಮಾರಸ್ವಾಮಿ ತನಗೆ ಪುನರ್‌ವಸತಿ ಕಲ್ಪಿಸಲಿಲ್ಲವೆಂದು ಬೇಜಾರು ಮಾಡಿಕೊಂಡ ಮಧು ಅವರಿಗೆ ಆ ಪಕ್ಷದಲ್ಲಿ ಭವಿಷ್ಯವಿಲ್ಲವೆಂಬುದು ಖಾತ್ರಿಯಾಗಿತ್ತು. ಪದೇಪದೇ ತಾನು ಬಂಗಾರಪ್ಪನವರ ಶಿಷ್ಯನೆಂದು ಹೇಳಿಕೊಳ್ಳುವ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುತ್ತಲೆ ಕಾಂಗ್ರೆಸ್ ಸೇರಿದ ಮಧುರವರಿಗೆ ಅಲ್ಲಿ ಮಹತ್ವವೂ ದೊರೆಯಿತು. ರಾಜ್ಯ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷರಾಗಿ ರಾಜ್ಯ ಸುತ್ತಿದ ಮಧು ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷರಾಗಿದ್ದರು. ಈ ಬಾರಿ ಅಣ್ಣ ಕುಮಾರ್‌ರನ್ನು ಭರ್ಜರಿ 44,352 ಮತದಂತರದಿಂದ ಮಣಿಸಿ ಎಮ್ಮೆಲ್ಲೆಯಾದರು. ಭಾವ (ಅಕ್ಕ ಗೀತಾ ಪತಿ), ಸ್ಯಾಂಡಲ್‌ವುಡ್ ಸೆಲೆಬ್ರಿಟಿ ಶಿವರಾಜ್‌ಕುಮಾರ್‌ರನ್ನು ಕಾಂಗ್ರೆಸ್ ಪ್ರಚಾರಕ್ಕೆ ಬರುವಂತೆ ಮಾಡಿ ಪಕ್ಷದಲ್ಲಿ ವರ್ಚಸ್ಸು ಹೆಚ್ಚಿಸಿಕೊಂಡಿದ್ದ ಮಧು ಪಕ್ಕದ ಶಿರಸಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸ್ಪೀಕರ್ ಕಾಗೇರಿ ಎದುರಾಳಿಯಾಗಿದ್ದ ಸೋದರ ಮಾವ ಭೀಮಣ್ಣ ನಾಯ್ಕ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಸತತ ಐದಾರು ಚುನಾವಣೆಯಲ್ಲಿ ಸೋತಿದ್ದ ಭೀಮಣ್ಣ ಈ ಬಾರಿ ಗೆಲ್ಲಲು, ಮಧು ಕ್ಷೇತ್ರದ ಬಹುಸಂಖ್ಯಾತ ದೀವರ ನಾಯಕರಲ್ಲಿ ಒಗ್ಗಟ್ಟು ಮೂಡಿಸಿದ್ದೇ ಕಾರಣವೆಂಬ ಮಾತು ಸಾಮಾನ್ಯವಾಗಿದೆ.

ಕುಮಾರ್ ಬಂಗಾರಪ್ಪ

ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರ ಜತೆಗೂ ಸಮಾನ ಸಂಬಂಧ ಕಾಯ್ದುಕೊಂಡಿದ್ದ ಮಧು ಈಡಿಗ ಸಮುದಾಯದ ಕೋಟಾದಲ್ಲಿ ಬಿ.ಕೆ.ಹರಿಪ್ರಸಾದ್‌ರಂಥ ಹಿರಿಯ ಮತ್ತು ದಿಲ್ಲಿ ದರ್ಬಾರಿನಲ್ಲಿ ಶ್ರಮದಾತರಿದ್ದ ಪ್ರಭಾವಿಯನ್ನು ಹಿಂದಿಕ್ಕಿ ಮಂತ್ರಿಗಿರಿ ಗಳಿಸಲು ಸಫಲರಾಗಿದ್ದಾರೆ. ಒಂದು ಹಂತದಲ್ಲಿ ಸಿದ್ದು ವಿರೋಧಿ ಹರಿ ಪರವಾಗಿ ಡಿಕೆಶಿ ವಕಾಲತ್ತು ಮಾಡಿದ್ದರೆನ್ನಲಾಗುತ್ತಿದೆ; ಆದರೆ ಮಲೆನಾಡು ಮತ್ತು ಉತ್ತರ ಕರಾವಳಿಯಲ್ಲಿ ಗಣನೀಯವಾಗಿರುವ ದೀವರ ಮೇಲೆ ಪ್ರಭಾವ ಬೀರಬಲ್ಲ ಯುವ ನಾಯಕ ಮಧು ಮಂತ್ರಿಯಾದರೆ ಫಾಯ್ದೆ ಜಾಸ್ತಿಯೆಂಬ ಲೆಕ್ಕಾಚಾರ ಸಿದ್ದು ಅವರದಾಗಿತ್ತೆಂಬ ಮಾತು ಕಾಂಗ್ರೆಸ್ ಬಿಡಾರದಿಂದ ಹೊರಬರುತ್ತಿದೆ. ಸ್ವಜಾತಿಗಳವರನ್ನು ಪ್ರಭಾವಿಸುವ ಸಾಮರ್ಥ್ಯ ಹರಿಗಿಂತಲೂ ಮಧುಗೆ ಜಾಸ್ತಿ ಎಂಬ ತರ್ಕ ಕರಾವಳಿ ಮತ್ತು ಮಲೆನಾಡಿನ ರಾಜಕೀಯ ಪಡಸಾಲೆಯಲ್ಲಿದೆ. ಜನಾರ್ದನ ಪೂಜಾರಿ, ಕಾಗೋಡು ತಿಮ್ಮಪ್ಪರಂಥ ಮುತ್ಸದ್ಧಿಗಳ ವಯೋ ಸಹಜ ನಿವೃತ್ತಿ, ಗೋಪಾಲ ಪೂಜಾರಿ, ವಿನಯ್‌ಕುಮಾರ್ ಸೊರಕೆ ಸೋಲು, ಮಾಲಿಕಯ್ಯ ಗುತ್ತೇದಾರ್ ಪಕ್ಷಾಂತರ ಮತ್ತು ಬೇಳೂರು ಗೋಪಾಲಕೃಷ್ಣ ಮತ್ತು ಭೀಮಣ್ಣ ನಾಯ್ಕ್‌ರಿಗೆ ಕ್ಷೇತ್ರದಾಚೆ ಪ್ರಭಾವ ಬೆಳೆಸಿಕೊಳ್ಳಲಾಗದ ನಿರ್ವಾತ ಸಂದರ್ಭದಲ್ಲಿ ಮಧು ಈಡಿಗ ಸಮುದಾಯದ ವರ್ಚಸ್ವಿ ಮುಂದಾಳಾಗಿ ಬೆಳೆಯುವ ಸೂಚನೆಗಳು ಗೋಚರಿಸುತ್ತಿವೆ.

ಮಧು ಉತ್ಸಾಹಿ ತರುಣ; ತಂದೆಯಂತೆ ಹಿಂದುಳಿದವರ ಮುಂದಾಳಾಗಬೇಕೆಂಬ ಒಳ ತುಡಿತದವರು. ಆದರೆ ಸ್ವಪಕ್ಷ ಮತ್ತು ವಿರೋಧ ಪಕ್ಷದಲ್ಲಿ ಘಟಾನುಘಟಿಗಳಿರುವ ಶಿವಮೊಗ್ಗ ರಾಜಕಾರಣದಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕಾದ ಪರಿಸ್ಥಿತಿಯಿದೆ. ಶಿವಮೊಗ್ಗ ಮತೀಯವಾಗಷ್ಟೇ ಅಲ್ಲ, ರಾಜಕೀಯವಾಗಿಯೂ ಸೂಕ್ಷ್ಮವೇ. ಹಿಂದು-ಮುಸ್ಲಿಮ್ ಎರಡೂ ಕಡೆ ಅತಿರೇಕಿಗಳಿರುವ ಶಿವಮೊಗ್ಗ ನಗರದಲ್ಲಿ ಕೋಮು ಸೌಹಾರ್ದ ಬೆಳೆಸುವ ಹೊಣೆಗಾರಿಕೆ ಮಧು ಮೇಲಿದೆ. ಯಾರದೋ ರಾಜಕೀಯ ತೆವಲಿಗೆ ಅಮಾಯಕರ ಬದುಕು ಬರ್ಬಾದ್ ಆಗಬಾರದು. ಅರಣ್ಯ ಸಾಗುವಳಿ ಮಾಡಿ ಬದುಕು ಕಟ್ಟಿಕೊಂಡಿರುವ ರೈತರ ಸಮಸ್ಯೆ ಶಾಶ್ವತ ಪರಿಹಾರ ಕಾಣಬೇಕಾಗಿದೆ. ಜಿಲ್ಲೆಯ ಆರ್ಥಿಕ ಮೂಲವಾದ ಅಡಿಕೆ ತೋಟಗಳಿಗೆ ತಗಲುತ್ತಿರುವ ನಾನಾ ನಮೂನೆಯ ರೋಗ, ಅಡಿಕೆ ನಿಷೇಧ ಭಯ, ವಿದೇಶಿ ಅಡಿಕೆ ಹಾವಳಿ ಮತ್ತು ಅಸ್ಥಿರ ಧಾರಣೆಯಿಂದ ತೋಟ ಮಾಡುವವರು ಕಂಗೆಟ್ಟಿದ್ದಾರೆ. ಕಸ್ತೂರಿರಂಗನ್ ವರದಿ ತೂಗುಗತ್ತಿ ಮಲೆನಾಡಿಗರನ್ನು ಸತಾಯಿಸುತ್ತಿದೆ. ಈ ಸವಾಲುಗಳನ್ನೆಲ್ಲ ಮಧು ಗಂಭೀರವಾಗಿ ಪರಿಗಣಿಸಿ ಜನಪರವಾಗಿ ಉತ್ತರಿಸಿದರಷ್ಟೇ ಶಿವಮೊಗ್ಗದ ರಾಜಕಾರಣದಲ್ಲಿ “ಸ್ಥಿರ”ವಾಗಲು ಸಾಧ್ಯ ಎಂಬ ಮಾತು ಕೇಳಿಬರುತ್ತಿದೆ.

ಭೀಮಣ್ಣ ನಾಯ್ಕ್

ಸಚಿವ ಮಧುರವರಿಗೆ ಸಿಕ್ಕಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯೂ ಸಹ ಗಂಭೀರ ಹೋಮ್ ವರ್ಕ್‌ನ ಅನಿವಾರ್ಯತೆಯದ್ದಾಗಿದೆ. ಹಿಜಾಬ್‌ನಂಥ ಅನವಶ್ಯಕ ವಿವಾದವನ್ನು ಹಿಂದಿನ ಬಿಜೆಪಿ ಸರಕಾರ ಸೃಷ್ಟಿಸಿಹೋಗಿದೆ; ಎಳೆಯರ ಮನಸ್ಸು ಕೆಡಿಸುವ ಕೇಸರಿ ಕೆಸರನ್ನು ಪಠ್ಯಪುಸ್ತಕದಲ್ಲಿ ತುಂಬಲಾಗಿದೆ. ಈ ಸಿಕ್ಕುಗಳನ್ನೆಲ್ಲ ಮಧು ಸೂಕ್ಷ್ಮವಾಗಿ ಬಿಡಿಸಬೇಕಾಗಿದೆ. ಸರಕಾರಿ ಶಾಲೆಗಳು ದುಬಾರಿ ಖಾಸಗಿ ಕಾನ್ವೆಂಟ್‌ಗಳ ಜತೆ ಪೈಪೋಟಿ ನಡೆಸಲಾಗದೆ ಸೋಲುತ್ತಿವೆ. ಕನ್ನಡ ಮಾಧ್ಯಮದಲ್ಲಿ ಕಲಿತರೆ ಹೊಟ್ಟೆಪಾಡಿನ ಉದ್ಯೋಗಕ್ಕೆ ತೊಂದರೆ ಇಲ್ಲ ಎಂಬಂಥ ವಾತಾವರಣ ಸೃಷ್ಟಿ ಆಗಬೇಕಿದೆ.

ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ಬಂದಿರುವ ಗ್ರಾಮೀಣ ಕೃಪಾಂಕ-ಗ್ರಾಮೀಣ ಮೀಸಲಾತಿಯಲ್ಲಿನ ನ್ಯೂನತೆಯನ್ನು ಶಿಕ್ಷಣ ಸಚಿವ ಮಧು ಸರಿಪಡಿಸಬೇಕಾಗಿದೆ. ಬಂಗಾರಪ್ಪ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಾಂತಿಕಾರಿ ನಿಯಮ ರೂಪಿಸಿದ್ದರು. ಆದರೆ ಗ್ರಾಮೀಣ ಮೀಸಲಾತಿಯನ್ನು ಆಧುನಿಕ ಸಕಲ ಸೌಲಭ್ಯದ ಶಿಕ್ಷಣ ಪೂರೈಸಿರುವ ಅನರ್ಹ ನಗರವಾಸಿಗಳು ಕೂಡ ಲಪಟಾಯಿಸುತ್ತಿದ್ದಾರೆ. ಹಾಸ್ಟೆಲ್ ಮತ್ತಿತರ ಶೈಕ್ಷಣಿಕ ಸೌಲಭ್ಯದ ಕೊರತೆಯಿಂದಾಗಿ ಅನಿವಾರ್ಯವಾಗಿ ಪಟ್ಟಣದ ಶಾಲೆಯಲ್ಲಿ ಕಲಿತ ಅಸಹಾಯಕ ಹಳ್ಳಿಗಾಡಿನ ಅಭ್ಯರ್ಥಿಗಳಿಗೆ ಗ್ರಾಮೀಣ ಮೀಸಲಾತಿ ಸಿಗುತ್ತಿಲ್ಲ; ಗ್ರಾಮೀಣ ಸಮಸ್ಯೆ-ಸಂಕಷ್ಟ ಒಂಚೂರೂ ಗೊತ್ತಿಲ್ಲದ, ನಗರದ ಸಕಲ ಸವಲತ್ತಲ್ಲಿ ಬೆಳೆದ ವಿದ್ಯಾರ್ಥಿಗಳು, ನಗರದ ಅಂಚಿನ ಹೈ-ಫೈ ಶಾಲೆಯಲ್ಲಿ ವಿದ್ಯಾರ್ಜನೆ ಮಾಡಿದರೂ ಅಂಥವರಿಗೆ ಗ್ರಾಮೀಣ ಮೀಸಲಾತಿ ಸಿಗುತ್ತಿದೆ. ಶಾಲಾ ಕಟ್ಟಡ ಗ್ರಾಮೀಣ ಪ್ರದೇಶದಲ್ಲಿರುವ ಸಂಗತಿಯಷ್ಟೇ ಗ್ರಾಮೀಣ ಮೀಸಲಾತಿ ಮಾನದಂಡ ಆಗಿರುವುದು ಸಾಮಾಜಿಕ ಅನ್ಯಾಯವೇ ಸರಿ. ವಿದ್ಯಾರ್ಥಿಗಳ ಗ್ರಾಮೀಣ ಹಿನ್ನೆಲೆ ಮಾನದಂಡ ಆಗಬೇಕೇ ಹೊರತು ಶಾಲೆಯ ಭೌತಿಕ ಇರುವಿಕೆ ಅಲ್ಲ. ಈ ವಿಪರ್ಯಾಸ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪಗೆ ಅರ್ಥವಾದೀತು ಎಂಬ ನಂಬಿಕೆಯಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...