Homeಕರ್ನಾಟಕರುದ್ರಪ್ಪ ಲಮಾಣಿ: ಲಂಬಾಣಿ ತಾಂಡಾದಿಂದ ವಿಧಾನಸಭಾ ಉಪಸಭಾಧ್ಯಕ್ಷ ಗಾದಿಯವರೆಗೆ!

ರುದ್ರಪ್ಪ ಲಮಾಣಿ: ಲಂಬಾಣಿ ತಾಂಡಾದಿಂದ ವಿಧಾನಸಭಾ ಉಪಸಭಾಧ್ಯಕ್ಷ ಗಾದಿಯವರೆಗೆ!

- Advertisement -
- Advertisement -

ರಾಜಕಾರಣವೇ ಹಾಗೆ! ಎಲ್ಲ ತರ್ಕ-ಲೆಕ್ಕಾಚಾರ ತಲೆಕೆಳಗಾಗಿ ಯಾರಿಗೋ ಅಧಿಕಾರ-ಸ್ಥಾನಮಾನದ ಭಾಗ್ಯ ಬಂದುಬಿಡುತ್ತದೆ; ಅದರ ಅಡ್ಡ ಪರಿಣಾಮದಿಂದ ಇನ್ಯಾರೋ ರಾಜಕಾರಣದ ಮುಖ್ಯಭೂಮಿಕೆಯಿಂದ ನೇಪಥ್ಯಕ್ಕೆ ತಳ್ಳಲ್ಪಡುತ್ತಾರೆ; ಯಾರೋ ತನಗೆ ಬೇಡವೆಂದು ತಿರಸ್ಕರಿಸಿದ್ದ ಹುದ್ದೆ ಮತ್ಯಾರದೋ ದೆಸೆದ ಒಲಿದುಬಿಡುತ್ತದೆ. ಇಂಥದೆ ಒಂದು “ಪೊಲಿಟಿಕಲ್ ಮಿಸ್ಟರಿ” ಕಳೆದ ವಾರ ರಾಜ್ಯ ರಾಜಕೀಯದ ಪಡಸಾಲೆಯಲ್ಲಾಗಿ ಅಚ್ಚರಿ ಮೂಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರುಜಿಲ್ಲೆಯ ಪರಮಾಪ್ತ ಸಹಚರ-ಚಾಮರಾಜನಗರ ಶಾಸಕ ಪುಟ್ಟರಂಗ ಶೆಟ್ಟಿ ತನಗೆ ಬೇಡವೇಬೇಡವೆಂದು ನಿರಾಕರಿಸಿದ್ದ (ಒಮ್ಮೆ ಒಪ್ಪಿಕೊಂಡಿರುವುದಾಗಿ ಹೇಳಿರುವ ವರದಿಯೂ ಆಗಿತ್ತು!) ಅಸೆಂಬ್ಲಿ ಡೆಪ್ಯುಟಿ ಸ್ಪೀಕರ್ ಪೀಠ ಹಾವೇರಿಯ ಎಮ್ಮೆಲ್ಲೆ ರುದ್ರಪ್ಪ ಲಮಾಣಿ ಪಾಲಿಗೆ ಬಯಸದೆ ಬಂದ ಭಾಗ್ಯವಾಗಿದೆ!

ಆಳುವ ಕಾಂಗ್ರೆಸ್ ಪಾರ್ಟಿಯ ಏಕೈಕ ಬಂಜಾರ ಸಮುದಾಯದ ಶಾಸಕ ರುದ್ರಪ್ಪ ಲಮಾಣಿ ಮಂತ್ರಿಯಾಗುವ ಆಸೆಯಲ್ಲಿದ್ದರು; ಲಂಬಾಣಿ ಕೋಟಾದಲ್ಲಿ ಸಚಿವಗಿರಿ ಖಂಡಿತವೆಂದು ಕನಸು ಕಾಣುತ್ತಿದ್ದ ರುದ್ರಪ್ಪ ಲಮಾಣಿಯವರಂತೆಯೇ, ಉಪ್ಪಾರ ಸಮುದಾಯದ ಏಕೈಕ ಪುಟ್ಟರಂಗ ಶೆಟ್ಟರೂ ತಮ್ಮನ್ನು ಸಿದ್ದು ಕೈಬಿಡಲಾರರೆಂದು ನಂಬಿಕೊಂಡಿದ್ದರು. ಈ ಇಬ್ಬರಿಗೂ ಮಂತ್ರಿ ಭಾಗ್ಯ ಪಕ್ಕಾ ಎಂದೆ ರಾಜಕೀಯ ವಿಶ್ಲೇಷಕರೂ ಲೆಕ್ಕಹಾಕಿ ತಾಳೆ ನೋಡಿದ್ದರು. ಆದರೆ ಸಿಎಂ ಸಿದ್ದು ಮತ್ತು ಕಾಂಗ್ರೆಸ್ ಹೈಕಮಾಂಡ್ ಮಂತ್ರಿ ಸ್ಥಾನ ಹಂಚಿಕೆಯ ಜಾತಿ ಪ್ರಾತಿನಿಧ್ಯ ಸರಿದೂಗಿಸುವ ಕಸರತ್ತಿನ ಕೊನೆ ಗಳಿಗೆಯಲ್ಲಿ ಪುಟ್ಟರಂಗಶೆಟ್ಟಿ ಮತ್ತು ರುದ್ರಪ್ಪ ಲಮಾಣಿಗೆ ಮಂತ್ರಿ ಕುರ್ಚಿ ಸಿಗಲಿಲ್ಲ; ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂತಾರಲ್ಲ, ಹಾಗಾಯಿತು ಈ ಇಬ್ಬರು ಸಚಿವಾಕಾಂಕ್ಷಿಗಳ ಪಾಡು. ಲಾಬಿ ಮಾಡುವ ತಾಕತ್ತಿಲ್ಲದ ಲಮಾಣಿ ತಗಾದೆ ಎತ್ತದೆ ತಣ್ಣಗುಳಿದರು; ಆದರೆ ಶೆಟ್ಟರು ಸೆಟಗೊಂಡರು.

ಪುಟ್ಟರಂಗ ಶೆಟ್ಟಿ

ಶೆಟ್ಟರನ್ನು ಕರೆಸಿದ ಸಿಎಂ ಸಿದ್ದು ವಿಧಾನಸಭೆಯ ಉಪ ಸಭಾಧ್ಯಕ್ಷ ಪಟ್ಟ ಕಟ್ಟುವ ಆಫರ್ ಇಟ್ಟರು. “ಬೇಡ, ಮಾಡುವುದಿದ್ದರೆ ಮಂತ್ರಿ ಮಾಡಿರಿ; ಇಲ್ಲದಿದ್ದರೆ ಏನು ಬೇಡ” ಎಂದು ಹಠ ಹಿಡಿದ ಶೆಟ್ಟರಿಗೆ ಸಿದ್ದು ಒಂದು ಹಂತದಲ್ಲಿ ಸಮಾಧಾನ ಮಾಡುವುದರಲ್ಲಿ ಯಶಸ್ವಿಯೂ ಆಗಿದ್ದರೆನ್ನಲಾಗಿದೆ. ಆ ನಂತರ ಏನಾಯಿತೋ ಏನೋ; ಶೆಟ್ಟರು ಉಪ ಸಭಾಧ್ಯಕ್ಷ ಗಾದಿ ಒಲ್ಲೆ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ಅನಿವಾರ್ಯವಾಗಿ ಕಾಂಗ್ರೆಸ್ ಹಿರಿಯರು ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ “ಅರ್ಹ”ನ ಹುಡುಕಾಟಕ್ಕೆ ಇಳಿಯಬೇಕಾಗಿ ಬಂತು. ಲಾಭ-ನಷ್ಟದ ಚಿಂತನಮಂಥನಗಳು ನಡೆದವು; ಸಿದ್ದು ಸರಕಾರದಲ್ಲಿ ಮಂತ್ರಿಗಿರಿ ಸಿಗದ ಬಂಜಾರ ಸಮುದಾಯದ ಅಸಮಾಧಾನ ಬಗೆಹರಿಸಲು ಉಪ ಸಭಾಧ್ಯಕ್ಷ ಸ್ಥಾನವನ್ನು ಬಳಸಿಕೊಳ್ಳುವ ಯೋಜನೆ ರೂಪಿಸಲಾಯಿತು.

ಪರಿಶಿಷ್ಟ ವರ್ಗದಲ್ಲಿ ಪ್ರಬಲವಾಗಿರುವ “ಸ್ಪೃಶ್ಯ” ಲಂಬಾಣಿಗರು ಕಳೆದ ಬಾರಿಯ ಚುನಾವಣೆ ಹೊತ್ತಲ್ಲಿ ಬಿಜೆಪಿ ವಿರುದ್ಧ ತಿರುಗಿಬಿದ್ದಿದ್ದರು. ಬಿಜೆಪಿ ಸರಕಾರ ಚುನಾವಣೆ ಹೊಸ್ತಿಲಲ್ಲಿ ಒಳ ಮೀಸಲಾತಿಯ ಜಾರಿಗೆ ಹೊರಟಿದ್ದು ಲಂಬಾಣಿಗರ ಒಂದು ಗುಂಪನ್ನು ಕೆರಳಿಸಿತ್ತು. ಬಂಜಾರ ಸಮುದಾಯ “ಬಿಜೆಪಿ ಹಠವೋ; ತಾಂಡಾ ಬಚಾವೋ” ಎಂಬ ಅಭಿಯಾನದೊಂದಿಗೆ ಕಾಂಗ್ರೆಸ್ ಪಕ್ಷವನ್ನು ಈ ಚುನಾವಣೆಯಲ್ಲಿ ಬೆಂಬಲಿಸಿತ್ತು. ವಿಧಾನಪರಿಷತ್ತಿನಲ್ಲಿ ಸರಕಾರಿ ಮುಖ್ಯ ಸಚೇತಕರಾಗಿರುವ ಪ್ರಕಾಶ್ ರಾಠೋಡ್ ಸಚಿವರಾಗುವ ಬಿರುಸಿನ ಪ್ರಯತ್ನಮಾಡಿ ವಿಫಲರಾಗಿದ್ದರು. ತಮ್ಮ ಸಮುದಾಯ ಕಾಂಗ್ರೆಸ್ ಬೆನ್ನಿಗೆ ನಿಂತರೂ ಸರಕಾರ ರಚನೆ ಸಂದರ್ಭದಲ್ಲಿ ಅವಕಾಶ ಕೊಡದೆ ಕಡೆಗಣಿಸಲಾಯಿತೆಂಬ ಬೇಸರ-ಬೇಗುದಿ ಲಂಬಾಣಿಗಳಲ್ಲಿತ್ತು. ಡೆಪ್ಯುಟಿ ಸ್ಪೀಕರ್ ಪೀಠದಲ್ಲಿ ಲಂಬಾಣಿಯೊಬ್ಬರನ್ನು ಪ್ರತಿಷ್ಠಾಪಿಸಿ ಆ ಸಮುದಾಯವನ್ನು ತೃಪ್ತಿಪಡಿಸಲು ಕಾಂಗ್ರೆಸ್‌ನ ಚಿಂತಕರ ಚಾವಡಿ ತೀರ್ಮಾನಿಸಿತು.

ಈ ತುರ್ತು ಒತ್ತಡದ ತಡಕಾಟದಲ್ಲಿ ಕಾಂಗ್ರೆಸ್ ’ಯಜಮಾನ’ರ ಕಣ್ಣಿಗೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ಹಾವೇರಿಯಿಂದ ಚುನಾಯಿತರಾಗಿರುವ ರುದ್ರಪ್ಪ ಮಾನಪ್ಪ ಲಮಾಣಿ ಬೀಳುತ್ತಾರೆ. ಕಾಂಗ್ರೆಸ್ಸಿನಲ್ಲಿ ರುದ್ರಪ್ಪ ಲಮಾಣಿ ಬಿಟ್ಟರೆ ಇನ್ಯಾವ ಬಂಜಾರ ವರ್ಗದ ಶಾಸಕನಿಲ್ಲ. ಹೀಗಾಗಿ ಡೆಪ್ಯುಟಿ ಸ್ಪೀಕರ್ ಸ್ಥಾನ ರುದ್ರಪ್ಪ ಲಮಾಣಿಯವರಿಗೆ ಅನಿರೀಕ್ಷಿತವಾಗಿ ಅರಸಿಬಂದಂತಾಗಿತ್ತು. ಮುಂದೆಂದಾದರೂ ಸಚಿವ ಸಂಪುಟ ಪುನರ್ವಿಂಗಡನೆ ಆದಾಗ ಅದೃಷ್ಟ ಖುಲಾಯಿಸಬಹುದೆಂದುಕೊಂಡಿದ್ದ ರುದ್ರಪ್ಪ ಲಮಾಣಿ ಕನಸು-ಮನಸ್ಸಿನಲ್ಲೂ ಉಪ-ಸಭಾಧ್ಯಕ್ಷನಾಗುವೆನೆಂದು ಎಣಿಸಿರಲಿಲ್ಲ. ಅನಾಯಾಸವಾಗಿ ಒಲಿದು ಬಂದಿರುವ ಸದನದ “ಸಣ್ಣ” ಪ್ರತಿಷ್ಠಿತ ಸ್ಥಾನವನ್ನು ಪುಟ್ಟರಂಗಶೆಟ್ಟರಂತೆ ನಿರಾಕರಿಸದೆ ಧನ್ಯತಾಭಾವದಿಂದ ಅಲಂಕರಿಸಿರುವ ರುದ್ರಪ್ಪ ಲಮಾಣಿ ಸ್ವಭಾವತಃ ಸೌಮ್ಯ ಗುಣ-ಲಕ್ಷಣದ ರಾಜಕಾರಣಿ; ಕಳೆದ ನಾಲ್ಕು ದಶಕದಿಂದ ಅವಿಭಜಿತ ಧಾರವಾಡ ಜಿಲ್ಲೆ ಮತ್ತು ಹಾವೇರಿ ಜಿಲ್ಲೆಯ ರಾಜಕಾರಣದಲ್ಲಿ “ಪಾಲಿಗೆ ಬಂದಿದ್ದೆ ಪಂಚಾಮೃತ”ವೆಂದು ಸ್ವೀಕರಿಸುತ್ತ ಬಂದವರು.

ಇದನ್ನೂ ಓದಿ: ನಮ್ಮ ಸಚಿವರಿವರು; “ನಿರಾಶ್ರಿತ” ಸಂತೋಷ್ ಲಾಡ್‌ಗೆ “ಪುನರ್ವಸತಿ” ಕಲ್ಪಿಸಿದ ಕಲಘಟಗಿಯ ದೆಸೆ ಬದಲಾದೀತೇ?!

ರಾಣೆಬೆನ್ನೂರು ತಾಲೂಕಿನ ಖಂಡೇರಾಯನಹಳ್ಳಿಯ ಪುಟ್ಟ ಲಂಬಾಣಿ ತಾಂಡಾದ ನಿರ್ಗತಿಕ ಜೋಪಡಿಯಲ್ಲಿ 1.6.1959ರಂದು ಜನಿಸಿದ ರುದ್ರಪ್ಪ ಲಮಾಣಿ ಅಧಿಕಾರ ರಾಜಕಾರಣದಲ್ಲಿ ಅದೃಷ್ಟಶಾಲಿ ಎಂದು ಹಾವೇರಿ ಜಿಲ್ಲೆಯ ಅವರ ವಾರಿಗೆಯ ರಾಜಕಾರಣಿಗಳು ಮಾತಾಡಿಕೊಳ್ಳುವುದು ಮಾಮೂಲು. ಬಿ.ಎ. ಪದವಿ ಮುಗಿಸಿಕೊಂಡು ಹೊಟ್ಟೆಪಾಡಿನ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ರುದ್ರಪ್ಪ ತಾಂಡಾ ರಾಜಕಾರಣ ಶುರುಹಚ್ಚಿಕೊಂಡಿದ್ದು 1980ರ ಸುಮಾರಿಗೆ. ತಳ ಸಮುದಾಯದ ಬಂಜಾರ ಕುಲದ ವಿದ್ಯಾವಂತ ತರುಣ ರುದ್ರಪ್ಪ ಲಮಾಣಿಯವರಿಗೆ 1985ರಲ್ಲಿ ಕಾಂಗ್ರೆಸ್ ಪಾರ್ಟಿಯಿಂದ ಜಿಲ್ಲಾ ಪರಿಷತ್ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸಿಗುತ್ತದೆ. 1985-89ರ ಅವಧಿಯಲ್ಲಿ ಅವಿಭಜಿತ ಧಾರವಾಡ ಜಿಲ್ಲೆಯ ಜಿಲ್ಲಾ ಪರಿಷತ್ ಸದಸ್ಯರಾಗಿದ್ದ ರುದ್ರಪ್ಪ 1990ರ ದಶಕದಲ್ಲಿ ಕಾಂಗ್ರೆಸ್‌ನ ಮುಂಚೂಣಿ ಲಂಬಾಣಿ ಮುಂದಾಳಾಗಿ ಗುರುತಿಸಲ್ಪಟ್ಟಿದ್ದರು.

1994ರ ಅಸೆಂಬ್ಲಿ ಇಲೆಕ್ಷನ್ ವೇಳೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದ ಬ್ಯಾಡಗಿಯಿಂದ ಕಾಂಗ್ರೆಸ್ ಹುರಿಯಾಳಾಗಿ ಸ್ಪರ್ಧೆಗಿಳಿದಿದ್ದ ರುದ್ರಪ್ಪ ಲಮಾಣಿ ಪ್ರಥಮ ಪ್ರಯತ್ನದಲ್ಲೆ ಎಡವಿದರು. ಆದರೆ 1999ರಲ್ಲಿ ಶಾಸಕರಾಗಿ ಆಯ್ಕೆಯಾದರು. ಆ ಎಮ್ಮೆಲ್ಲೆ ಅವಧಿಯಲ್ಲಿ ಬ್ಯಾಡಗಿ ಮತ್ತು ರಾಣೆಬೆನ್ನೂರಿನ ಕೆಲವು ಗ್ರಾಮಗಳಿಗೆ ತುಂಗಭದ್ರೆಯ ನೀರು ಹರಿಸಿ ಕುಡಿಯುವ ನೀರಿನ ಹಾಹಾಕಾರ ತಣಿಸಲು ಪ್ರಯತ್ನಿಸಿದ್ದರು; ಗುಡ್ಡದಮಲ್ಲಾಪುರ ಭಾಗದ 13 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದ್ದರೆಂಬ ಮೆಚ್ಚಿಕೆಯ ಮಾತುಗಳು ಈಗಲೂ ಕೇಳಿಬರುತ್ತವೆ. ಆದರೆ ಐದು ವರ್ಷದ ಬಳಿಕ ರುದ್ರಪ್ಪರಿಗೆ ಮರುಆಯ್ಕೆ ಸಾಧ್ಯವಾಗಲಿಲ್ಲ. ದಲಿತ ಮೀಸಲು ಕ್ಷೇತ್ರವಾದರೂ ಮೇಲ್ವರ್ಗದ ಲಿಂಗಾಯತರ ಹಿಡಿತಕ್ಕೆ ಒಳಪಟ್ಟಿದ್ದ ಬ್ಯಾಡಗಿಯಲ್ಲಿ 2004ರ ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪರ ಜಾತಿ ರಾಜಕೀಯದ ಪ್ರಭಾವ ಜೋರಾಗಿತ್ತು. ಹೀಗಾಗಿ ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ ಸೋಲಬೇಕಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

2008ರ ಚುನಾವಣೆಯ ಪೂರ್ವದಲ್ಲಾದ ಅಸೆಂಬ್ಲಿ ಕ್ಷೇತ್ರಗಳ ಪುನರ್‌ವಿಂಗಡನೆ ಪ್ರಕ್ರಿಯೆಯಲ್ಲಿ ಬ್ಯಾಡಗಿ ಸಾಮಾನ್ಯ ಕ್ಷೇತ್ರವಾಯಿತು; ಪಕ್ಕದ ಹಾವೇರಿ ಪರಿಶಿಷ್ಟ ಜಾತಿಗೆ ಮೀಸಲಾಯಿತು. ರುದ್ರಪ್ಪ ಲಮಾಣಿ ಮತ್ತವರ ಸಾಂಪ್ರದಾಯಿಕ ಎದುರಾಳಿ ಬಿಜೆಪಿಯ ನೆಹರು ಓಲೇಕಾರ್ ಹಾವೇರಿಗೆ ವಲಸೆಬಂದರು. ಬ್ಯಾಡಗಿಯಂತೆ ಹಾವೇರಿಯು ಲಿಂಗಾಯತ ಏಕಸ್ವಾಮ್ಯದ ಅಖಾಡ. ಯಡಿಯೂರಪ್ಪ ಪ್ರಣೀತ ಹಿಂದುತ್ವದ ಗಿಲೀಟಿನ ಲಿಂಗಾಯತ “ಪ್ರಜ್ಞೆ” ಆಗ ಪರಾಕಾಷ್ಟೆ ತಲುಪಿತ್ತು. ರುದ್ರಪ್ಪ ಲಮಾಣಿ ಬಿಜೆಪಿಯ ಓಲೇಕಾರ್‌ಗೆ ದೊಡ್ಡ ಮತದಂತರದಿಂದ ಮಣಿಯಬೇಕಾಯಿತು. ಯಡಿಯೂರಪ್ಪ ಹಾವೇರಿಯನ್ನು ತನ್ನ ಶಕ್ತಿ ಕೇಂದ್ರವೆಂದು ನಂಬಿದ್ದ ಸ್ಥಳ. 2013ರ ಚುನಾವಣೆಯ ಸಂದರ್ಭದಲ್ಲಿ ಯಡಿಯೂರಪ್ಪ ಬಿಜೆಪಿಗೆ ಸೆಡ್ಡು ಹೊಡೆದು ಕೆಜೆಪಿಗೆ ಜನ್ಮ ನೀಡಿದ್ದೇ ಈ ಹಾವೇರಿಯಲ್ಲಿ! ಆದರೆ ಆ ಚುನಾವಣೆಯಲ್ಲಿ ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ 30,208 ಮತಗಳ ಭರ್ಜರಿ ಜಯಗಳಿಸಿದರು.

ರುದ್ರಪ್ಪ ಲಮಾಣಿ ಅವರಿಗೆ ಸಿದ್ದು ಸರಕಾರ-1ರಲ್ಲಿ ಸ್ವತಂತ್ರ ನಿರ್ವಹಣೆಯ ಜವಳಿ, ಮುಜರಾಯಿ ಇಲಾಖೆಗಳ ಸಹಾಯಕ ಮಂತ್ರಿಯಾಗುವ ಯೋಗವೂ ಕೂಡಿಬಂತು. ಅದರೆ ಆಂಟಿ ಇನ್‌ಕಂಬೆನ್ಸ್‌ನಿಂದ ಮಂತ್ರಿ ಲಮಾಣಿ 2018ರಲ್ಲಿ ಯಡಿಯೂರಪ್ಪರ ಲಿಂಗಾಯತ ಪ್ರತಿಷ್ಠೆಯ ತಂತ್ರಗಾರಿಕೆ ಎದುರಿಸಲಾಗದೆ ಹಿಮ್ಮೆಟ್ಟಬೇಕಾಯಿತು. ಕಳೆದ ಮೇ ತಿಂಗಳಿನಲ್ಲಾದ ಚುನಾವಣೆಯಲ್ಲಿ ರುದ್ರಪ್ಪ ಲಮಾಣಿ 11,915 ಮತದಿಂದ ಮತ್ತೆ ಶಾಸಕನಾದರು; ಮಂತ್ರಿಯಾಗುವ ಅಭಿಲಾಷೆಯಲ್ಲಿದ್ದ ರುದ್ರಪ್ಪರಿಗೆ ಅದಕ್ಕಿಂತಲು ತಾತ್ವಿಕವಾಗಿ ಒಂದು ಗುಲಗುಂಜಿ ಹೆಚ್ಚೇ ವರ್ಚಸ್ಸು-ಪ್ರತಿಷ್ಠೆಯ ವಿಧಾನಸಭಾ ಉಪಾಧ್ಯಕ್ಷ ಹುದ್ದೆ ಲಭಿಸಿದೆ; ಮಂತ್ರಿಗಳಂತೆ ನೇರಾನೇರ ರಾಜಕಾರಣ ಮಾಡಲಾಗದಿದ್ದರೂ ಅಸಿಸ್ಟೆಂಟ್ ಹೆಡ್‌ಮಾಸ್ತರಿಕೆ ಗತ್ತು-ಗಾಂಭೀರ್ಯದಿಂದ ಎಲ್ಲ ಸಚಿವರ ಸಂಪರ್ಕ ಸಾಧಿಸಿ ಕ್ಷೇತ್ರದ ಪ್ರಗತಿ-ಅಭಿವೃದ್ಧಿಯ ಕೆಲಸ-ಕಾಮಗಾರಿ ಮಾಡಿಸುವ ಶಕ್ತಿ-ಸಾಮರ್ಥ್ಯ ಪ್ರಾಪ್ತವಾಗಿದೆ.

ತೀರಾ ಹಿಂದುಳಿದಿರುವ ಹಾವೇರಿ ತಾಲೂಕು ಮತ್ತು ಹಾವೇರಿ ಜಿಲ್ಲೆಗಳರೆಡಕ್ಕೂ ಎಲ್ಲ ಸಚಿವರಿಂದಾಗಬೇಕಾದ ಕೆಲಸಗಳ ದೊಡ್ಡ ಪಟ್ಟಿಯೇ ಇದೆ. ಸುದೀರ್ಘ 25 ವರ್ಷ ಹೋರಾಡಿ ಹಾವೇರಿ ಮತ್ತದರ ಸುತ್ತಲಿನ ತಾಲೂಕಿನ ಮಂದಿ ಪ್ರತ್ಯೇಕ ಜಿಲ್ಲೆ ಪಡೆದುಕೊಂಡಿದ್ದರು; ದುರಂತವೆಂದರೆ ಜಿಲ್ಲಾ ರಚನೆಯಾಗಿ 25 ವರ್ಷ ಕಳೆದರೂ ಅಭಿವೃದ್ಧಿ-ಬದಲಾವಣೆ ಎಂಬುದು ಕನಸಾಗಿಯೇ ಉಳಿದಿದೆ; ಜಿಲ್ಲೆಯ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಂಥ ಪರಮೋಚ್ಛ ಸ್ಥಾನದಲ್ಲಿದ್ದರೂ ಜಿಲ್ಲೆಯ ದೆಸೆ ಬದಲಾಗಲಿಲ್ಲ! ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಪ್ರತಿನಿಧಿಸುವ ಜಿಲ್ಲಾ ಕೇಂದ್ರ ಒಳಗೊಂಡಿರುವ ಹಾವೇರಿ ಅಸೆಂಬ್ಲಿ ಕ್ಷೇತ್ರವೆ ದೊಡ್ಡ ಕುಗ್ರಾಮದಂತಿದೆ. ಹಾವೇರಿ ನಗರದಲ್ಲಿ ನಾಲ್ಕು ಹೆಜ್ಜೆ ಹಾಕಿದರೆ ಹಿಂದುಳಿದಿರುವಿಕೆಯ ವ್ಯಾಖ್ಯಾನ ಮನದಟ್ಟಾಗುತ್ತದೆ. ರಸ್ತೆ, ಸಾರಿಗೆ, ಆರೋಗ್ಯ, ವಸತಿ, ಶಿಕ್ಷಣ, ಕುಡಿಯುವ ನೀರನಂಥ ಕನಿಷ್ಠ ಮೂಲಭೂತ ಸೌಕರ್ಯಕ್ಕಾಗಿ ಜನ ಗೋಳಾಡುತ್ತಿರುವುದು ಹೇಳತೀರದು.

ಜಿಲ್ಲಾ ಕೇಂದ್ರವೇ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಗಬ್ಬುನಾರುತ್ತಿದೆ; ಶಾಶ್ವತ ಕುಡಿಯುವ ನೀರು ಮತ್ತು ಒಳಚರಂಡಿಗಾಗಿ ಕೋಟಿಕೋಟಿ ಖರ್ಚು ಮಾಡುತ್ತ ಹಲವು ವರ್ಷ ಕಳೆದರೂ ಯೋಜನೆ ಸಾಕಾರಗೊಳ್ಳುತ್ತಿಲ್ಲ; ಏಕೆಂಬುದು ಬಿಡಿಸದ ಒಗಟಾಗಿದೆ ಎಂದು ಜನರು ಹೇಳುತ್ತಾರೆ. ಬೃಹತ್ ಕಟ್ಟಡವಿದ್ದರೂ ಅಗತ್ಯ ಸೌಕರ್ಯ ಮತ್ತು ವೈದ್ಯರಿಲ್ಲದೆ ಜಿಲ್ಲಾಸ್ಪತ್ರೆ ಇದ್ದೂ ಇಲ್ಲದಂತಾಗಿದೆ. ಜನರು ಅನಿವಾರ್ಯವಾಗಿ ದಾವಣಗೆರೆ ಅಥವಾ ಹುಬ್ಬಳ್ಳಿ ಆಸ್ಪತ್ರೆಗಳನ್ನು ಅರಸುತ್ತ ಹೋಗುವಂತಾಗಿದೆ. ಸರಿಯಾದ ಶೈಕ್ಷಣಿತ ಸೌಲಭ್ಯವಿಲ್ಲದ ಹಾವೇರಿಯಲ್ಲಿ ದುಡಿಯುವ ಕೈಗಳಿಗೆ ಕೆಲಸ ಕೊಡುವ ಕೈಗಾರಿಕೆಗಳಿಲ್ಲ; ಕೃಷಿ ಪ್ರಧಾನವಾದ ಹಾವೇರಿಯಲ್ಲಿ ರೈತಾಪಿ ವರ್ಗಕ್ಕೆ ಆರ್ಥಿಕ ಚೈತನ್ಯ ನೀಡುವ ಕೃಷಿ ಉನ್ನತೀಕರಣದ ಪ್ರಯತ್ನಗಳಾಗುತ್ತಿಲ್ಲ.

ಜಿಲ್ಲೆ ರಚನೆಯಾಗುತ್ತಲೇ ರೈತರಿಗೆ ಆರ್ಥಿಕ ಸಾಲ-ಸೌಲಭ್ಯ ಒದಗಿಸುವ ಜಿಲ್ಲಾ ಮಧ್ಯವರ್ತಿ(ಡಿಸಿಸಿ) ಬ್ಯಾಂಕ್ ಸ್ಥಾಪನೆ ಆಗಬೇಕಿತ್ತು. ಇತ್ತೀಚೆಗಷ್ಟೆ ಪ್ರತ್ಯೇಕ ಹಾಲು ಒಕ್ಕೂಟ ರಚಿಸಲಾಗಿದೆಯಾದರೂ ಅಗತ್ಯ ಮೂಲ ಸೌಕರ್ಯ ಒದಗಿಸಲಾಗಿಲ್ಲ. ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆ-ಉದ್ಯಮ ಆರಂಭಿಸುವ ಹಲವು ಅವಕಾಶಗಳಿದ್ದರೂ ಅಧಿಕಾರಸ್ಥರು ಪ್ರಯತ್ನ ಮಾಡುತ್ತಿಲ್ಲ; ಮೆಕ್ಕೆ ಜೋಳ ಸಂರಕ್ಷಣೆಯ ಸೈಲೋ ಘಟಕ ಕೆಲಸಕ್ಕೆ ಬಾರದಾಗಿದೆ. ಸಂಗೂರು ಸಕ್ಕರೆ ಕಾರ್ಖಾನೆಯಿಂದ ಪ್ರಯೋಜನ ಇಲ್ಲದಾಗಿದೆ. ತುಂಗಾ ಮೇಲ್ದಂಡೆ ಯೋಜನೆಯ ಹೊಲಗಳಿಗೆ ನೀರು ಹರಿಸುವ ಬಸಿ ಕಾಲುವೆಗಳು (ಮರಿ ಕಾಲುವೆ) ಆಗುತ್ತಿಲ್ಲ; ಯೋಜನೆಗಾಗಿ ರೈತರಿಂದ ಸ್ವಾಧೀನಪಡೆದುಕೊಂಡ ಭೂಮಿಗೆ ಎರಡು ದಶಕದಿಂದ ಪರಿಹಾರ ಸಿಕ್ಕಿಲ್ಲ. ನೀರೂ ಇಲ್ಲ!;ಪರಿಹಾರವೂ ಇಲ್ಲ!! ಬೇಸಿಗೆಯಲ್ಲಿ ಹಾವೇರಿ ಮತ್ತು ಗುತ್ತಲಕ್ಕೆ 10-15 ದಿನಕ್ಕೊಮ್ಮೆ ಜೀವಜಲ ಸಿಕ್ಕರೆ ಪುಣ್ಯ. ಗುತ್ತಲ ತಾಲೂಕಿಗಾಗಿ ಜನರು ಹಲವು ವರ್ಷದಿಂದ ಹೋರಾಡುತ್ತಿದ್ದಾರೆ. ಈ ದೌರ್ಭಾಗ್ಯ-ದುರಂತಕ್ಕೆಲ್ಲ ಹೊಣೆಗೇಡಿ ಸಂಸದ-ಶಾಸಕ-ಸಚಿವರ ಉದಾಸೀನವೆ ಕಾರಣವೆಂಬ ಆಕ್ರೋಶ ಜನರಲ್ಲಿ ಮಡುಗಟ್ಟಿದೆ .ಈ ಸಮಸ್ಯೆಗಳನ್ನು ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಗಂಭೀರವಾಗಿ ಪರಿಗಣಿಸಿ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂಬ ಆಗ್ರಹದ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತವೆ.

ಕ್ವಾಸಿ ನ್ಯಾಯಾಲಯವಾದ ಸದನದ “ಉಪ ನ್ಯಾಯಾಧೀಶ” ಸ್ಥಾನದ ಪ್ರತಿಷ್ಠೆ-ಗೌರವ ಅರಿತು ಹೆಜ್ಜೆಯಿಡಬೇಕಾದ ಜವಾಬ್ದಾರಿಯೂ ರುದ್ರಪ್ಪ ಲಮಾಣಿಯವರ ಮೇಲಿದೆ. ಓಟ್ ಬ್ಯಾಂಕ್ ದೃಷ್ಟಿಕೋನದ ಮತೀಯ ಸಿದ್ಧಾಂತಿಗಳು ಸದನದ ದಿಕ್ಕುತಪ್ಪಿಸದಂತೆ ಎಚ್ಚರ ವಹಿಸಬೇಕಾಗಿದೆ; ಹುಚ್ಚು ಹೆಚ್ಚುಗಾರಿಕೆಗಾಗಿ ಕಿತ್ತಾಡುವವರನ್ನು ನಿಯಂತ್ರಿಸುವ ಧಾಡಸಿತನ ರೂಢಿಸಿಕೊಳ್ಳಬೇಕಾಗಿದೆ. ಸಂಸದೀಯ ಸಂಪ್ರದಾಯ, ಪ್ರಜಾಪ್ರಭುತ್ವ ಪರಂಪರೆ ಮತ್ತು ಸಂವಿಧಾನದ ಆಶಯ ಎತ್ತಿಹಿಡಿಯುವ ಪ್ರಜ್ಞೆ ರುದ್ರಪ್ಪ ಲಮಾಣಿಯವರಲ್ಲಿ ಸದಾ ಜಾಗೃತವಾಗಿರಲೆಂಬುದು “ನ್ಯಾಯಪಥ”ದ ಆಶಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...