Homeಕರ್ನಾಟಕನಮ್ಮ ಸಚಿವರಿವರು; "ನಿರಾಶ್ರಿತ" ಸಂತೋಷ್ ಲಾಡ್‌ಗೆ "ಪುನರ್ವಸತಿ" ಕಲ್ಪಿಸಿದ ಕಲಘಟಗಿಯ ದೆಸೆ ಬದಲಾದೀತೇ?!

ನಮ್ಮ ಸಚಿವರಿವರು; “ನಿರಾಶ್ರಿತ” ಸಂತೋಷ್ ಲಾಡ್‌ಗೆ “ಪುನರ್ವಸತಿ” ಕಲ್ಪಿಸಿದ ಕಲಘಟಗಿಯ ದೆಸೆ ಬದಲಾದೀತೇ?!

- Advertisement -
- Advertisement -

ಎತ್ತಣ ಬಳ್ಳಾರಿಯ ಸಂಡೂರು? ಎತ್ತಣ ಧಾರವಾಡದ ಕಲಘಟಗಿ? ಹದಿನೈದು ವರ್ಷಗಳ ಹಿಂದಾದ ಅಸೆಂಬ್ಲಿ ಕ್ಷೇತ್ರಗಳ ಪುನರ್‌ವಿಂಗಡನೆ ಸಂದರ್ಭದಲ್ಲಿ ನಿರಾಶ್ರಿತನಂತಾದ ಸಂಡೂರಿನ ಗಣಿಧಣಿ ಸಂತೋಷ್ ಶಿವಾಜಿ ಲಾಡ್ ಯಾನೆ ಎಮ್ಮೆಲ್ಲೆ ಸಂತೋಷ್ ಲಾಡ್ ಪುನರ್ವಸತಿ ತಾಣ ಹುಡುಕುತ್ತ ಧಾರವಾಡದ ಜಿಲ್ಲೆಯ ನತದೃಷ್ಟ ಕುಗ್ರಾಮದಂಥ ಕಲಘಟಗಿ-ಅಳ್ನಾವರ ಕ್ಷೇತ್ರಕ್ಕೆ ಬಂದು ತಲುಪಿದ್ದರು. ಆ ವೇಳೆಗೆ ಕಲಘಟಗಿ ಮೂರು ದಶಕದಿಂದ ವಲಸಿಗರನ್ನೇ ಶಾಸಕ-ಮಂತ್ರಿಯಾಗಿ ಮಾಡುತ್ತ ಬಂದಿತ್ತು. ಬಡತನ, ಬವಣೆ ಮತ್ತು ತೀರಾ ಹಿಂದುಳಿದಿರುವಿಕೆಯ ಕಲಘಟಗಿಯಲ್ಲಿ ಅದುವರೆಗೂ ಜಾತಿ ಮತ್ತು ಹಣವೇ ಚುನಾವಣೆಗಳ ಪ್ರಧಾನ ವಿಷಯವಾಗಿತ್ತು. ಈ “ವಾತಾವರಣ”ದ ಜತೆಗೆ ಕ್ಷೇತ್ರ ಪುನರ್‌ರಚನೆಯಲ್ಲಿ ಸ್ವಜಾತಿ ಮರಾಠರು ಹೆಚ್ಚಿರುವ ಧಾರವಾಡದ ಅಳ್ನಾವರ ಭಾಗವನ್ನು ಕಲಘಟಗಿಯೊಂದಿಗೆ ಜೋಡಿಸಿದ್ದು ಸಹಜವಾಗಿಯೇ ಕೊಪ್ಪರಿಗೆಗಟ್ಟಲೆ ಗಣಿ ಹಣದ ರಾಜಕಾರಣಿ ಸಂತೋಷ್ ಲಾಡ್‌ಗೆ ಪ್ರಶಸ್ತ ಅಖಾಡವಾಗಿ ಕಾಣಿಸಿತು.

ಹಣದ ಚೀಲ ಹಾಗು ಹಿಟಾಚಿಯೊಂದಿಗೆ ಕ್ಷೇತ್ರ ಪ್ರವೇಶ ಮಾಡಿದ್ದ ಸಂತೋಷ್ ಲಾಡ್ ಅಸಹಾಯಕ ರೈತರ ಬಡತನವನ್ನೇ ಬಂಡವಾಳ ಮಾಡಿಕೊಂಡರೆಂಬ ಮಾತು ಸಾಮಾನ್ಯವಾಗಿದೆ. ಜಮೀನು ಅಭಿವೃದ್ಧಿಗಾಗಿ ರೈತರಿಗೆ ಹಿಟಾಚಿಗಳನ್ನು ಉಚಿತವಾಗಿ ಒದಗಿಸುತ್ತ, ಮದುವೆ-ಮುಂಜಿಯಂಥ ವೈಯಕ್ತಿಕ ಸಮಾರಂಭಗಳಿಗೆ ಮತ್ತು ಯುವಜನರ ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳಿಗೆ ಬೊಗಸೆಯಲ್ಲಿ ಕಾಸನ್ನು ಮೊಗೆಮೊಗೆದು ’ದಾನ’ವಾಗಿ ಕೊಟ್ಟರು. ಮರುಳಾದ ಮತದಾರರು ಲಾಡ್ ಸಾವ್ಕಾರರ ಕೈಬಿಡಲಿಲ್ಲ. 2008 ಮತ್ತು 2013ರ ಎರಡು ಚುನಾವಣೆಯಲ್ಲಿ ಸತತವಾಗಿ ಬಹುಮತದಿಂದಲೇ ಗೆಲ್ಲಿಸಿದರು. 2013ರಲ್ಲಿ ಸಿದ್ದು ಈ ನಿಷ್ಠಾವಂತ ಅನುಯಾಯಿಗೆ ಮಂತ್ರಿ ಮಾಡಿ ಮಾಹಿತಿ-ತಂತ್ರಜ್ಞಾನ-ಮೂಲಸೌಕರ್ಯ ಇಲಾಖೆಗಳನ್ನು ವಹಿಸಿದರು. ಮಂತ್ರಿಯಾಗಿದ್ದರೂ ಕ್ಷೇತ್ರ ಕಡೆಗಣಿಸಿ ಸಂಡೂರಿನ ವೈಭವದ ಗಣಿ ವ್ಯವಹಾರದ ಬದುಕಲ್ಲಿ ಮೈಮರೆತ ಲಾಡ್‌ರನ್ನು 2018ರ ಚುನಾವಣೆಯಲ್ಲಿ ಶಿಕ್ಷಿಸಿದ್ದ ಕಲಘಟಗಿ-ಅಳ್ಳಾವರ ಜನರು ಈ ಬಾರಿ ಕ್ಷಮಿಸಿ ಮತ್ತೆ ಎಮ್ಮೆಲ್ಲೆಯಾಗಿಸಿದ್ದಾರೆ; ಮುಖ್ಯಮಂತ್ರಿ ಸಿದ್ದು ತಮ್ಮ ಈ ನಂಬಿಕಸ್ಥನಿಗೆ ಮತ್ತೆ ಮಂತ್ರಿ ಮಾಡಿ ಕಾರ್ಮಿಕ ಇಲಾಖೆಯ ನೇತೃತ್ವವನ್ನು ವಹಿಸಿದ್ದಾರೆ.

ಸಿದ್ದು ಸರಕಾರ-1ರಲ್ಲಿ ಮಂತ್ರಿಯಾಗಿದ್ದಾಗ ಗಣಿ ಹಗರಣದಿಂದಾಗಿ ರಾಜಿನಾಮೆ ಕೊಟ್ಟಿದ್ದ ಲಾಡ್ ಒಮ್ಮೆ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದು ಬಿಟ್ಟರೆ ಉಳಿದಂತೆ ಲಕ್ಕಿ ಎಂದೇ ರಾಜಕೀಯ ಪಡಸಾಲೆಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ತಾರುಣ್ಯದ ಅಂಚಿನಲ್ಲಿರುವ ನಲ್ವತ್ತೆಂಟರ ಹರೆಯದ ಸಂತೋಷ್ ಲಾಡ್ 1950ರ ದಶಕದಲ್ಲೇ ಗಣಿನಾಡು ಬಳ್ಳಾರಿಯ ಸಂಡೂರಿನ ಆಚೀಚೆ ಅದಿರು ಉದ್ಯಮ ಶುರುಹಚ್ಚಿಕೊಂಡು ಶ್ರೀಮಂತಿಕೆ ಕಂಡಿದ್ದ ಮರಾಠ ವಂಶದ ಶಿವಾಜಿ ಲಾಡ್ ಮತ್ತು ಶೈಲಾ ದಂಪತಿಗಳ ಪುತ್ರ. 16ರ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಸಂತೋಷ್ ಬಿ.ಕಾಂ ಶಿಕ್ಷಣದೊಂದಿಗೆ ಕುಟುಂಬದ ವ್ಯಹಾರದ ಪಟ್ಟುಗಳನ್ನು ಕರಗತ ಮಾಡಿಕೊಂಡರು. ಸಿನಿ ಸೆಲೆಬ್ರಿಟಿಗಳೊಂದಿಗಿನ ಒಡನಾಟದ ಲಾಡ್‌ರ ರಾಜಕೀಯ, ಸಾಮಾಜಿಕ, ವ್ಯಾವಹಾರಿಕ “ಚಲನವಲನ”ಗಳು ಅವರನ್ನು ಕುತೂಹಲದಿಂದ ಗಮನಿಸುವಂತೆ ಮಾಡಿದೆಯೆಂಬ ಮಾತು ಕೇಳಿಬರುತ್ತಿದೆ.

ರಾಜ್ಯಮಟ್ಟದ ಕ್ರಿಕೆಟ್ ಆಟಗಾರರಾಗಿದ್ದ ಸಂತೋಷ್ ಲಾಡ್‌ಗೆ ಸಣ್ಣ ವಯಸ್ಸಿನಲ್ಲೇ ರಾಜಕೀಯದ ಸೆಳೆತ ಶುರುವಾಗಿತ್ತು. ಮನೆತನಕ್ಕೆ ರಾಜಕಾರಣದ ನಂಟೂ ಇತ್ತು. ದಾಯಾದಿ ವಿಧಾನಸಭೆ, ರಾಜ್ಯಸಭೆ ಮಾಜಿ ಸದಸ್ಯ ಅನಿಲ್ ಲಾಡ್ ತಂದೆ ಹೀರೋಜಿ ಲಾಡ್ ಸಂಡೂರಿನ ಶಾಸಕರೂ ಆಗಿದ್ದರು. 1998ರಲ್ಲಿ ಸಂಡೂರು ಮುನ್ಸಿಪಾಲಿಟಿ ಕೌನ್ಸಿಲರ್ ಆಗಿದ್ದ ಸಂತೋಷ್ ಲಾಡ್ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿದ್ದು ಜೆಡಿಎಸ್ ಮೂಲಕ. ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಸೋತಿದ್ದ ಲಾಡ್ ಆನಂತರ ಸಂಡೂರು ತಾಲೂಕಿನಲ್ಲಿ ಜೆಡಿಎಸ್‌ಅನ್ನು ಪ್ರಬಲವಾಗಿ ಸಂಘಟಿಸಿ ತಾಪಂ ವಶಪಡಿಸಿಕೊಂಡರು. 2004ರ ಅಸೆಂಬ್ಲಿ ಇಲೆಕ್ಷನ್‌ನಲ್ಲಿ ಜೆಡಿಎಸ್ ಕ್ಯಾಂಡಿಡೇಟಾಗಿ, ಕಾಂಗ್ರೆಸ್‌ನ ಪ್ರಬಲ ಹುರಿಯಾಳು ಮಾಜಿ ಸಂಸದ, ಅಂದಿನ ಶಾಸಕ ವೆಂಕಟರಾವ್ ಘೋರ್ಪಡೆ ಎದುರು ಮುಖಾಮುಖಿಯಾಗಿದ್ದರು. ಆ ಕಾಲಕ್ಕೆ ಸಂಡೂರಿನ ರಾಜಕಾರಣವನ್ನು ಪ್ರಭಾವಿಸುತ್ತಿದ್ದ ಘೋರ್ಪಡೆ ರಾಜವಂಶದ ವೆಂಕಟರಾವ್ ಘೋರ್ಪಡೆಗೆ ಸೆಡ್ಡು ಹೊಡೆದು ಸಂತೋಷ್ ಲಾಡ್ ಕದನ ಕುತೂಹಲ ಮೂಡಿಸಿದ್ದರಷ್ಟೇ ಅಲ್ಲ, ದಾಖಲೆಯ ಮತದಂತರದಿಂದ (35,544) ಮಣಿಸಿ ಖಾತೆ ತೆರೆದಿದ್ದರು!

ಇಪ್ಪತ್ತೊಂಬತ್ತನೆ ವಯಸ್ಸಿಗೆ ಎಮ್ಮೆಲ್ಲೆಯಾಗಿದ್ದ ಸಂತೋಷ್ ಲಾಡ್ ಜೆಡಿಎಸ್‌ನಲ್ಲಿ ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗರಾಗಿದ್ದರು. ಸಿದ್ದು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದಾಗ ಸಂತೋಷ್ ಲಾಡ್ ಹಿಂಬಾಲಿಸಿದರು. ಸಂತೋಷ್ ಸಿದ್ದು ಜೊತೆಗೂಡಿ ಕಾಂಗ್ರೆಸ್ ಸೇರುವಾಗ ಸ್ವಾಮಿ ಕಾರ್ಯದೊಂದಿಗೆ ಸ್ವಕಾರ್ಯದ ದರ್ದು ಅಡಗಿತ್ತೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. 2007ರಲ್ಲಾದ ವಿಧಾನಸಭಾ ಕ್ಷೇತ್ರಗಳ ಡಿಲಿಮಿಟೇಷನ್ ಸಂದರ್ಭದಲ್ಲಿ ಸಂಡೂರು ಪರಿಶಿಷ್ಟ ಪಂಗಡಕ್ಕೆ ಮೀಸಲಾಯಿತು. ಹೀಗಾಗಿ ಸಂತೋಷ್ ಲಾಡ್‌ಗೆ ಸಂಡೂರಿನಲ್ಲಿ ಸ್ಪರ್ಧೆಗೆ ಅವಕಾಶ ಇಲ್ಲದಾಯಿತು. ಸ್ವಜಾತಿ ಮರಾಠರು ಹೆಚ್ಚಿದ್ದ ಧಾರವಾಡ ಜಿಲ್ಲೆಯ ಕಲಘಟಗಿ ಮೇಲೆ ಅವರ ಕಣ್ಣುಬಿತ್ತು. ಅಲ್ಲಿ ಕಾಂಗ್ರೆಸ್‌ಗೆ ಸಮರ್ಥ ಅಭ್ಯರ್ಥಿಯೂ ಇಲ್ಲದಾಗಿತ್ತು. ಸಿದ್ದು ಕೃಪಾಶೀರ್ವಾದ ಇದ್ದರೆ ಕಲಘಟಗಿಯ ಕಾಂಗ್ರೆಸ್ ಟಿಕೆಟ್ ಸಲೀಸಾಗಿ ಗಿಟ್ಟಿಸಬಹುದೆಂಬ ಲೆಕ್ಕಾಚಾರ ಸಂತೋಷ್ ಲಾಡ್‌ದಾಗಿತ್ತು.

ಲಾಡ್ ಅಂದುಕೊಂಡಂತೆಯೆ ಆಯಿತು; 2008ರಲ್ಲಿ ಕಾಂಗ್ರೆಸ್ ಟಿಕಟ್ ತರುವುದಕ್ಕೆ ತ್ರಾಸವೇನೂ ಆಗಲಿಲ್ಲ. ಹೊರಗಿನವರನ್ನು ಆದರದಿಂದ ಬರಮಾಡಿಕೊಂಡು ಶಾಸಕನಾಗಿ ಮಾಡುವ ಪರಿಪಾಠದ ಕಲಘಟಗಿಯಲ್ಲಿ ಲಾಡ್‌ರ ಧನಾಧಾರಿತ ಚಮತ್ಕಾರಗಳು ವರ್ಕ್‌ಔಟ್ ಆದವು. 11,642 ಮತದಂತರದಿಂದ ಗೆದ್ದರು. ಶಾಸಕ ಲಾಡ್ 2013ರ ಇಲೆಕ್ಷನ್ ಎದುರಾದಾಗ ಕುಡಿಯುವ ನೀರನ ಹಾಹಾಕಾರದ ಕಲಘಟಗಿ ಮತ್ತು ಅಳ್ನಾವರದಲ್ಲಿತ್ತು; ಪುಕ್ಕಟೆಯಾಗಿ ಬೋರ್‌ವೆಲ್ ಕೊರೆಸಿಕೊಡುವ ಟ್ಯಾಕ್ಟಿಕ್‌ಅನ್ನು ನಾಜೂಕಾಗಿ ಅನುಸರಿಸಿದರು; ಜತೆಗೆ ಮಾಮೂಲಿ ಆಟೂಟ-ಮನರಂಜನೆ-ಖಾಸಗಿ ಅಡಚಣೆಗಳಿಗೆ ಧಾರಾಳವಾಗಿ ಕಾಸು ಕೊಟ್ಟರು. ಈ ಬಾರಿ 45,661 ಭರ್ಜರಿ ಮತಗಳಿಂದ ಗೆಲುವು ಸಾಧಿಸಿದರು. ಈ ನಡುವೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಂತ ಸ್ಥಾನಕ್ಕೇರಿದ ಲಾಡ್ ಕಾಂಗ್ರೆಸ್‌ನಲ್ಲೂ ವರ್ಚಸ್ಸು ವೃದ್ಧಿಸಿಕೊಂಡರು.

ಇದನ್ನೂ ಓದಿ: ನಮ್ಮ ಸಚಿವರಿವರು; ಮತ್ತೆಮತ್ತೆ ಮಂತ್ರಿಯಾಗುವ ಭಾಗ್ಯದ ಎಚ್.ಕೆ.ಪಾಟೀಲ್; ಗದಗಕ್ಕೂ ಭಾಗ್ಯ ಒಲಿಯುವುದೇ?

ಹತ್ತು ವರ್ಷದ ಶಾಸಕತ್ವದ ಅವಧಿಯಲ್ಲಿ ಲಾಡ್ ವೈಯಕ್ತಿಕ ನೆಲೆಯ ತುಷ್ಟೀಕರಣಕ್ಕೆ ಹವಣಿಸಿದರೇ ಹೊರತು ಸಮಷ್ಠಿಯ ಕೆಲಸ-ಕಾರ್ಯ-ಕಾಮಗಾರಿ ಮಾಡಲಿಲ್ಲ; ತತ್ಪರಿಣಾಮವಾಗಿ 2018ರ ಚುನಾವಣೆಯಲ್ಲಿ ಸೋಲುವ ಪರಿಸ್ಥಿತಿ ಬಂತೆನ್ನಲಾಗುತ್ತಿದೆ; ಸೋತರೂ ಲಾಡ್ ಕ್ಷೇತ್ರಕ್ಕೆ ಬೆನ್ನುಹಾಕಿ ಕೂರಲಿಲ್ಲ; ಕ್ಷೇತ್ರದ ಜನರ ವಿಶ್ವಾಸ ಗಳಿಸಲು ಪ್ರಯತ್ನಿಸಿದರು; ಕೋವಿಡ್ ಸಂದರ್ಭದಲ್ಲಿ ನೊಂದವರಿಗೆ ನೆರವಾದರು; ಜನಾಕರ್ಷಕ ವ್ಯಕ್ತಿತ್ವ ಮತ್ತು ಜನಪರ ನೀತಿ-ನಿಲುವುಗಳಿಲ್ಲದ ಬಿಜೆಪಿ ಶಾಸಕ ನಿಂಬಣ್ಣವರ್ ಕ್ಷೇತ್ರದಲ್ಲಿ ರೇಜಿಗೆ ಮೂಡಿಸಿದ್ದರು. ಬಿಜೆಪಿಗೆ ಪ್ರಬಲ ಆಂಟಿ ಇನ್‌ಕಂಬೆನ್ಸ್ ಸುತ್ತಿಕೊಂಡಿತ್ತು; ಬಂಡಾಯ ಕಾಂಗ್ರೆಸ್ಸಿಗ ನಾಗರಾಜ್ ಛಬ್ಬಿಯನ್ನು ಸೆಳಿದು ಟಿಕೆಟ್ ಕೊಟ್ಟರೂ ಬಿಜೆಪಿ ಚೇತರಿಸಿಕೊಳ್ಳಲಿಲ್ಲ. ಜತೆಗೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಬೀಸಿದ ಗಾಳಿ ಲಾಡ್‌ರನ್ನು ಮೂರನೆ ಬಾರಿ ಕಲಘಟಗಿಯ ಎಮ್ಮೆಲ್ಲೆ ಮಾಡಿದೆ; ಮರಾಠ ಕೋಟಾದಲ್ಲಿ ಸಚಿವ ಭಾಗ್ಯ ಬಂದಿದೆ; ಧಾರವಾಡ ಜಿಲ್ಲಾ ಉಸ್ತವಾರಿ ಮಂತ್ರಿಯಂಥ ಆಯಕಟ್ಟಿನ ಅಧಿಕಾರವೂ ಪ್ರಾಪ್ತವಾಗಿದೆ.

ಮಂತ್ರಿ ಸಂತೋಷ್ ಲಾಡ್ ಈ ಬಾರಿಯಾದರೂ, ಕಲಘಟಗಿ-ಅಳ್ನಾವರ ಕ್ಷೇತ್ರ ಹಾಗು ಧಾರವಾಡ ಜಿಲ್ಲೆಯ ಋಣ ತೀರಿಸುವ ಬದ್ಧತೆಯ ಕಾರ್ಯಯೋಜನೆ ಹಾಕಿಕೊಳ್ಳಬೇಕೆಂಬ ಆಗ್ರಹದ ಆವಾಜ್ ಕೇಳಿಬರುತ್ತಿದೆ. ಹಲವು ಸರಕಾರಿ ಅಧ್ಯಯನ ವರದಿಗಳ ಪ್ರಕಾರವೇ ಕಲಘಟಗಿ-ಅಳ್ನಾವರ ಅಭಿವೃದ್ಧಿ ಮರೀಚಿಕೆಯಾಗಿರುವ ಬರಡು ಪ್ರದೇಶ ಎಂದು ಪರಿಗಣಿಸಲ್ಪಟ್ಟಿದೆ. ಎರಡೂ ತಾಲೂಕಲ್ಲಿ ಕುಡಿಯುವ ನೀರು, ಸಾರಿಗೆ, ಶಿಕ್ಷಣ, ಆರೋಗ್ಯ, ವಸತಿಯಂತ ಅತಿ ಅಗತ್ಯ ಮೂಲಸೌಕರ್ಯಗಳಿಗೂ ಬರವಿದೆ! ಕನಿಷ್ಠ ರಸ್ತೆ ಸಂಪರ್‍ಕವೂ ಇಲ್ಲದ ಮಲೆನಾಡಿನ ಕಲಘಟಗಿ ಮತ್ತು ಬಯಲುನಾಡಿನ ಅಳ್ನಾವರವನ್ನು ಒಂದೇ ರೀತಿಯ ಸಮಸ್ಯೆಗಳು ಬಾಧಿಸುತ್ತಿವೆ. ಇದೆಲ್ಲವನ್ನು ಮಂತ್ರಿ ಮಹೋದಯ ಲಾಡ್ ಗಂಭೀರವಾಗಿ ಪರಿಗಣಿಸಬೇಕಿದೆ ಎನ್ನುತ್ತಾರೆ ಕ್ಷೇತ್ರದ ಜನರು.

ಕೃಷಿ ಪ್ರಧಾನವಾದ ಕಲಘಟಗಿ-ಅಳ್ನಾವರದ ಆರ್ಥಿಕ ಸಂಕಷ್ಟ ಪರಹಾರಕ್ಕಿರುವ ಏಕೈಕ ಮಾರ್ಗವೆಂದರೆ ಕೃಷಿ ಉನ್ನತೀಕರಣ; ಕಲಘಟಗಿಯ 330 ಕೆರೆಗಳಲ್ಲಿ ಕನಿಷ್ಠ ನೂರು ಕೆರೆಗಳ ಹೂಳೆತ್ತಿದರೂ ಸಾವಿರಾರು ಹೆಕ್ಟೇರ್ ಹೊಲ-ಗದ್ದೆಗಳು ಹಸನಾಗುತ್ತವೆ. 35 ಕೆರೆಗಳನ್ನು ತುಂಬಿಸುವ ಯೋಜನೆ ಹಲವು ವರ್ಷಗಳಿಂದ ಕುಂಟುತ್ತಿದೆ. ಸುಮಾರು 2,000 ಎಕರೆ ವಿಸ್ತೀರ್ಣದ “ನೀರುಸಾಗರ” ಕೆರೆಯನ್ನು ನೀರಾವರಿಗೆ ಬಳಸಿಕೊಂಡರೆ ಈ ಒಣಪ್ರದೇಶದ ದೆಸೆಯೇ ಬದಲಾಗುತ್ತದೆ ಎಂದು ರೈತರು ಹೇಳುತ್ತಾರೆ. ಕಬ್ಬು ಬೆಳೆದು ಬದುಕು ಕಟ್ಟಿಕೊಂಡಿರುವ ರೈತರಿಗೆ ಹತ್ತಿರದಲ್ಲೊಂದು ಸಕ್ಕರೆ ಕಾರ್ಖಾನೆ ಇಲ್ಲದಾಗಿದೆ. ದೂರದ ಹಳಿಯಾಳ ಇಲ್ಲವೆ ಬೆಳಗಾವಿಯ ಸಕ್ಕರೆ ಫ್ಯಾಕ್ಟರಿಗಳಿಗೆ ಕಬ್ಬು ಸಾಗಿಸಬೇಕಿದೆ. ಮಂತ್ರಿ ಲಾಡ್ ಕ್ಷೇತ್ರಕ್ಕೆ ಹದಿನೈದು ವರ್ಷದ ಹಿಂದೆ “ಗುಳೆ” ಬಂದಾಗ ಕಲಘಟಗಿಯಲ್ಲಿ ಸಕ್ಕರೆ ಕಾರ್ಖಾನೆ ಕಟ್ಟುವ ಮಾತಾಡಿದ್ದು ಹುಸಿಯಾಗಿದೆ. ತನ್ನನ್ನು ನಂಬಿ ಗೆಲ್ಲಿಸಿರುವ ರೈತಾಪಿ ವರ್ಗದ ಅಸಹಾಯಕತೆಯನ್ನು ಅರ್ಥಮಾಡಿಕೊಂಡು ಮಂತ್ರಿ ಲಾಡ್ ಹೆಜ್ಜೆ ಇಡಬೇಕಾಗಿದೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ.

ಧಾರವಾಡ ಜಿಲ್ಲೆಯನ್ನು ಆಳುತ್ತಿರುವ ನಾಯಕಾಗ್ರೇಸರ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಉದ್ಯೋಗ ಸೃಷ್ಟಿಯ ಕೈಗಾರಿಕಾಕರಣ ಆಗುತ್ತಿಲ್ಲವೆಂಬ ಆಕ್ರೋಶ ಯುವ ಸಮುದಾಯದಲ್ಲಿ ಮಡುಗಟ್ಟಿದೆ. ಉತ್ತರ ಕರ್ನಾಟಕದ ಯುವಸಮೂಹದಲ್ಲಿ ಹಲವು ಆಸೆ-ಕನಸುಗಳನ್ನು ಬಿತ್ತಿದ್ದ ಪ್ರಸಿದ್ಧ ಐಟಿ ಕಂಪನಿ ಇನ್‌ಫೋಸಿಸ್ ಹೆಸರಿಗಷ್ಟೆ ಅಂಗಡಿ ತೆರೆದು ಕೂತಂತಾಗಿದೆ. ಏರ್‌ಪೋರ್ಟ್ ಬಳಿ ಇನ್‌ಫೋಸಿಸ್‌ಗೆ 50 ಎಕರೆ ಜಾಗ ಕೊಟ್ಟು ಅದೆಷ್ಟೋ ವರ್ಷಗಳು ಕಳೆದಿದೆ. ಅಲ್ಲಿನ್ನೂ ಇನ್‌ಫೋಸಿಸ್‌ಗೆ ಪೂರ್ಣ ಪ್ರಮಾಣದಲ್ಲಿ ಪ್ರತಿಷ್ಠಾಪಿಸಿಕೊಂಡು ಉದ್ಯೋಗಾವಕಾಶ ಕೊಡಲಾಗಿಲ್ಲ; ನವನಗರದಲ್ಲಿ 25 ಎಕರೆ ಭೂಮಿಯನ್ನು “ಆರ್ಯಭಟ ಟೆಕ್ ಪಾರ್ಕ್”ಗೆಂದು ಮೀಸಲಿಡಲಾಗಿದೆ; ಆದರದು ಪೂರ್ಣ ಪ್ರಮಾಣದಲ್ಲಿ ಬಳಕೆ ಆಗುತ್ತಿಲ್ಲ; ಮಾಹಿತಿ ತಂತ್ರಜ್ಞಾನದ ಉದ್ಯಮಗಳು ಆರಂಭವಾಗುತ್ತಿಲ್ಲ ಎಂಬ ಕೊರಗು ಜಿಲ್ಲೆಯಲ್ಲಿದೆ.

ನವಲಗುಂದ ಭಾಗದ ರೈತರ ಜೀವ-ಜೀವನದ ಬೇಡಿಕೆಯಾದ ಕಳಸಾ ಬಂಡೂರಿ ನೀರಾವರಿ ಯೋಜನೆ ಮೃಗಜಲದಂತಾಗಿ ಸತಾಯಿಸುತ್ತಿದೆ. ಉತ್ತರ ಕರ್ನಾಟಕ ಮತ್ತು ಕರಾವಳಿಯನ್ನು ಕೂಡಿಸುವ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದೆ. ಕಲಘಟಗಿವರೆಗೆ ಬಂದಿರುವ ಈ ರೈಲು ಮಾರ್ಗಕ್ಕೆ ಪರಿಸರವಾದಿಗಳು ಆತಂಕ ವ್ಯಕ್ತಪಡಿಸುತ್ತಿದ್ದು, ಅದು ಸರಿಯಾದುದ್ದಾಗಿಲ್ಲ ಎಂವ ಆರೋಪ ಕೇಳಿಬರುತ್ತಿದೆ. ಈ ಸಮಸ್ಯೆಗಳು ಜಿಲ್ಲಾ ಉಸ್ತವಾರಿ ಮಂತ್ರಿ ಸಂತೋಷ್ ಲಾಡ್‌ರ ಸಾಮರ್ಥ್ಯಕ್ಕೆ ಸವಾಲಿನಂತಿವೆ ಎಂದು ಜಿಲ್ಲೆಯ ಜನರು ಮಾತಾಡಿಕೊಳ್ಳುತ್ತಿದ್ದಾರೆ; ಸಚಿವ ಲಾಡ್ ಜಿಲ್ಲೆಯನ್ನು ಕಾಡುತ್ತಿರುವ ಈ ಸಿಕ್ಕುಗಳನ್ನು ಜನಪರವಾಗಿ ಬಿಡಿಸಿ ತಾನು ಹಿಂದಿನ ಅಧಿಕಾರಸ್ಥರಂತಲ್ಲ ಎಂದು ಸಾಬೀತುಪಡಿಸಿಕೊಳ್ಳುವರಾ?!

ಕಾರ್ಮಿಕ ಇಲಾಖೆಯನ್ನು ಅಸಹಾಯಕ ಕಾರ್ಮಿಕರ ಪರವಾಗಿಸುವ ಹೊಣೆಯೂ ಮಂತ್ರಿ ಲಾಡ್ ಮೇಲಿದೆ; ಹಲವು ಯೋಜನೆಗಳು ನಿಜವಾದ ಕಾರ್ಮಿಕರಿಗೆ ತಲುಪುತ್ತಿಲ್ಲ; ಕಾರ್ಮಿಕ ನಿಧಿ ದುರ್ಬಳಕೆ ಆಗಿದೆ ಎಂಬ ಆರೋಪಗಳೂ ಕೇಳಿಬಂದಿತ್ತು. ಅಸಂಘಟಿತ ಕಾರ್ಮಿಕ ವಲಯ ಹಲವು ಸಂಕಷ್ಟ ಎದುರಿಸುತ್ತಿದೆ; ಕೋವಿಡ್ ಕಾಲದಲ್ಲಿ ಕಂಗೆಟ್ಟಿದ್ದ ಕಾರ್ಮಿಕರು ಇವತ್ತಿಗೂ ಚೇತರಿಸಿಕೊಂಡಿಲ್ಲ ಎನ್ನಲಾಗುತ್ತಿದೆ. ಹಗುರ ಖಾತೆಯೆಂದು ಕಡೆಗಣಿಸದೆ ರಾಜ್ಯದ ಕಾರ್ಮಿಕರು ಎಂದೆಂದೂ ಮರೆಯದ ಯೋಜನೆಗಾಗಿ ಯೋಚಿಸುವಂತಾಗಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...