Homeಕರ್ನಾಟಕFCI ನಿಂದ ಅಕ್ಕಿ ಕೊಳ್ಳುವವರಿಲ್ಲ: ಅಕ್ಕಿ ವ್ಯರ್ಥವಾದರೂ ಸರಿ ಜನರ ಹಸಿವು ನೀಗಿಸಬಾರದು ಎನ್ನುವ ಧೋರಣೆ...

FCI ನಿಂದ ಅಕ್ಕಿ ಕೊಳ್ಳುವವರಿಲ್ಲ: ಅಕ್ಕಿ ವ್ಯರ್ಥವಾದರೂ ಸರಿ ಜನರ ಹಸಿವು ನೀಗಿಸಬಾರದು ಎನ್ನುವ ಧೋರಣೆ ಬಿಜೆಪಿಯದ್ದು – ಕಾಂಗ್ರೆಸ್ ಟೀಕೆ

- Advertisement -
- Advertisement -

FCI ನಿಂದ ಅಕ್ಕಿ ಕೊಳ್ಳುವವರಿಲ್ಲ, ಅಕ್ಕಿ ವ್ಯರ್ಥವಾದರೂ ಸರಿ ಜನರ ಹಸಿವು ನೀಗಿಸಬಾರದು ಎನ್ನುವ ಧೋರಣೆ ಬಿಜೆಪಿಯದ್ದು ಎಂದು ಕಾಂಗ್ರೆಸ್ ಟೀಕಿಸಿದೆ.

ಕರ್ನಾಟಕ ಸೇರಿದಂತೆ ರಾಜ್ಯಗಳಿಗೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿಯಲ್ಲಿ ಅಕ್ಕಿ ಕೊಳ್ಳಲು ಅವಕಾಶ ನಿರಾಕರಿಸಿದ ನಂತರ FCI ಇ-ಹರಾಜಿನಲ್ಲಿ ಅಕ್ಕಿ ಕೊಳ್ಳುವವರಿಲ್ಲದ ಪತ್ರಿಕಾ ವರದಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ ‘ಬಿಜೆಪಿಯ ರಾಜಕೀಯ ದುರುದ್ದೇಶವು ಜನತೆಯನ್ನು ಬಲಿಪಶು ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಕರ್ನಾಟಕಕ್ಕೆ ಅಕ್ಕಿ ಪೂರೈಸಲು ನಿರಾಕರಿಸಿದ ಕೇಂದ್ರ ಆಹಾರ ನಿಗಮದ ಹರಾಜು ಪ್ರಕ್ರಿಯೆಯಲ್ಲಿ ಅಕ್ಕಿ ಖರೀದಿಗೆ ಖಾಸಗಿ ಕಂಪೆನಿಗಳು ಆಸಕ್ತಿಯೇ ತೋರುತ್ತಿಲ್ಲ. ನಮ್ಮ ಸರ್ಕಾರ 34 ರೂಪಾಯಿಗಳ ಖರೀದಿ ದರಕ್ಕೆ ಕೇಳಿದರೂ ನಿರಾಕರಿಸಿದ ಕೇಂದ್ರ ಸರ್ಕಾರ ಖಾಸಗಿಯವರಿಗೆ 31 ರೂಪಾಯಿಗಳಿಗೆ ನೀಡಲು ಸಿದ್ಧವಾದರೂ ಖರೀದಿದಾರರು ಮುಂದೆ ಬರುತ್ತಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

“ಪಡಿತರ ವಿತರಣಾ ಯೋಜನೆಯನ್ನು ಜಾರಿಗೆ ತಂದಿದ್ದು ಕಾಂಗ್ರೆಸ್, ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿದ್ದು ಕಾಂಗ್ರೆಸ್, ಅನ್ನಭಾಗ್ಯ ಜಾರಿಗೆ ತಂದಿದ್ದು ಕಾಂಗ್ರೆಸ್, ರಾಜ್ಯದಲ್ಲಿ ಅನ್ನಭಾಗ್ಯ ಜಾರಿಗೆ ಬರುವಾಗ ಕೇಂದ್ರದಲ್ಲಿದ್ದಿದ್ದು ಕಾಂಗ್ರೆಸ್‌. ಆದರೆ, ಬಿಜೆಪಿ ನಾಯಕರು “ಮೋದಿ ಅಕ್ಕಿ“ ಎಂದು ಬೊಬ್ಬೆ ಹೊಡೆಯುತ್ತಿರುವುದು ನೋಡಿದರೆ ಮೋದಿಯೇ ತಮ್ಮ ಜಮೀನಿನಲ್ಲಿ ಉತ್ತಿ, ಬಿತ್ತಿ, ಬೆಳೆದು ಅಕ್ಕಿ ತಂದುಕೊಡುತ್ತಿರುವಂತೆ ಭಾಸವಾಗುತ್ತಿದೆ. ಗರೀಬ್ ಕಲ್ಯಾಣ್ ಯೋಜನೆ ಡಿಸೆಂಬರ್ ನಂತರ ಸ್ಥಗಿತಗೊಳ್ಳಲಿದೆ, ಆಗ ಯಾರ ಅಕ್ಕಿ ಎಂದು ಬೊಬ್ಬೆ ಹೊಡೆಯುತ್ತಾರೆ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

“ಇ-ಹರಾಜು ಮೂಲಕ ಕೇಂದ್ರ ಖಾಸಗಿಯವರಿಗೆ ಅಕ್ಕಿ ಮಾರಾಟ ಮಾಡುತ್ತಿದೆ.‌ ನಾವು ಕೊಡಲು ಒಪ್ಪಿದ ಮೊತ್ತಕ್ಕಿಂತ ಕಡಿಮೆ‌ ಮೊತ್ತದಲ್ಲಿ ಅಕ್ಕಿ ಮಾರಾಟ ಮಾಡಲು ಹರಾಜು ಕರೆದಿದ್ದರೂ ಅಕ್ಕಿಯನ್ನು ಕೇಳುವವರೇ ಗತಿಯಿಲ್ಲ. ಇದರ ಬದಲು ಕೇಂದ್ರ ಸರ್ಕಾರ ನಮಗೆ ಅಕ್ಕಿ ಕೊಡಬಹುದಿತ್ತು. ಕನಿಷ್ಠ ಪಕ್ಷ ಇದರಿಂದ ರಾಜ್ಯದ ಬಡವರ ಹೊಟ್ಟೆಯಾದರೂ ತುಂಬುತಿತ್ತು” ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, “ಕೇಂದ್ರಕ್ಕೆ ಒಂದು ಕೆಜಿ ಅಕ್ಕಿಗೆ ₹34 ಕೊಡಲು ನಾವು ಒಪ್ಪಿದ್ದೆವು. ಆದರೆ, ನಮಗೆ ಅಕ್ಕಿ‌ ನಿರಾಕರಿಸಿದ ಕೇಂದ್ರ ಸರ್ಕಾರ ಎಫ್‌ಸಿಐ ಮೂಲಕ‌ ಕೆಜಿಗೆ ₹31.75ರ ಬೆಲೆ ನಿಗದಿ ಪಡಿಸಿ ಖಾಸಗಿಯವರಿಗೆ ಮಾರಲು ಇ-ಹರಾಜು ಕರೆದಿದೆ. ಇದು ರಾಜ್ಯ ಬಿಜೆಪಿ ನಾಯಕರ ದೃಷ್ಟಿಯಲ್ಲಿ ದ್ರೋಹ ಎನಿಸುವುದಿಲ್ಲವೇ? ಈ ಬಗ್ಗೆ ಮಾತಾಡಲು ರಾಜ್ಯ ಬಿಜೆಪಿ ನಾಯಕರಿಗೆ ಧಮ್ ಇಲ್ಲವೇ” ಎಂದು ಪ್ರಶ್ನಿಸಿದ್ದಾರೆ.

ರಾಜ್ಯಗಳಿಗೆ ಅಕ್ಕಿ ಮಾರಬಾರದೆಂದು ಆದೇಶಿಸಿದ್ದ ಕೇಂದ್ರ ಸರ್ಕಾರವು ಮಾರುಕಟ್ಟೆಯಲ್ಲಿ ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಅಕ್ಕಿ ಮತ್ತು ಗೋಧಿ ಧಾನ್ಯಗಳನ್ನು ಇ-ಹರಾಜು ಮಾಡಲು ಭಾರತೀಯ ಆಹಾರ ನಿಗಮಕ್ಕೆ (ಎಫ್‌ಸಿಐ) ಸೂಚಿಸಿತ್ತು. ಆದರೆ ಕಳೆದ ವಾರ ಎಫ್‌ಸಿಐ 3.86 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಹರಾಜಿಗಿಟ್ಟರೂ ಸಹ ಕೇವಲ 170 ಮೆಟ್ರಿಕ್ ಟನ್‌ಗಳಿಗೆ ಬಿಡ್‌ಗಳನ್ನು ಸ್ವೀಕರಿಸಿದೆ. ಅಂದರೆ ಹೆಚ್ಚಿನ ಖರೀದಿದಾರರು ಮುಂದಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ರಾಜ್ಯ ಸರ್ಕಾರಗಳು ಈ ಬಿಡ್‌ನಲ್ಲಿ ಭಾಗವಹಿಸುವಂತಿಲ್ಲ ಮತ್ತು ಖಾಸಗಿ ಉದ್ದಿಮೆದಾರರು ಮಾತ್ರ ಭಾಗವಹಿಸಬಹುದಾಗಿದ್ದರಿಂದ ಎಫ್‌ಸಿಐಗೆ ಈ ಸಂಕಷ್ಟ ಎದುರಾಗಿದೆ.

ಒಂದು ತಿಂಗಳ ಹಿಂದೆಯಷ್ಟೆ ಕರ್ನಾಟಕ ಸರ್ಕಾರವು ಅನ್ನ ಭಾಗ್ಯ ಯೋಜನೆಯಡಿ ಎಲ್ಲಾ ಬಿಪಿಎಲ್ ಕುಟುಂಬಗಳಿಗೆ ತಿಂಗಳಿಗೆ ಪ್ರತಿ ವ್ಯಕ್ತಿಗೆ 10 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲು ಎಫ್‌ಸಿಐನಿಂದ 2.28 ಲಕ್ಷ ಮೆಟ್ರಿಕ್ ಟನ್‌ಗಳನ್ನು ಕೋರಿತ್ತು. ಜೂನ್ 12 ರಂದು ಎರಡು ಪತ್ರಗಳಲ್ಲಿ ಎಫ್‌ಸಿಐ ಸುಮಾರು 2.22 ಲಕ್ಷ ಮೆಟ್ರಿಕ್ ಟನ್ ಪೂರೈಸಲು ಒಪ್ಪಿಕೊಂಡಿತ್ತು. ಆದರೆ ಒಂದು ದಿನದ ನಂತರ, ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ಧಾನ್ಯಗಳನ್ನು ಮಾರಾಟ ಮಾಡುವುದರ ವಿರುದ್ಧ FCI ಗೆ ನಿರ್ದೇಶನ ನೀಡಿತು. ಜೂನ್ 14 ರಂದು, ಎಫ್‌ಸಿಐ ಕರ್ನಾಟಕಕ್ಕೆ ಅಕ್ಕಿ ಹಂಚಿಕೆ ಆದೇಶವನ್ನು ರದ್ದುಗೊಳಿಸಿತು.

ಅಲ್ಲದೇ ಕೇಂದ್ರ ಸರ್ಕಾರದ ಸೂಚನೆಗೆ ಅನುಗುಣವಾಗಿ FCI ಇ-ಹರಾಜಿನಲ್ಲಿ ಅಕ್ಕಿ ಮಾರಲು ನಿರ್ಧರಿಸಿತ್ತು. ಆದರೆ 3 ಲಕ್ಷದ 86 ಸಾವಿರ ಟನ್ ಅಕ್ಕಿ ಇದ್ದರೆ ಕೇವಲ 170 ಟನ್‌ಗೆ ಮಾತ್ರ ಬಿಡ್ ಸಲ್ಲಿಸಲಾಗಿದೆ. ಹಾಗಾಗಿ ಈ ಸಮಸ್ಯೆಗೆ ಪರಿಹಾರವೆಂದರೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿಯಲ್ಲಿ ಅಕ್ಕಿ ಕೊಳ್ಳದಂತೆ ತಂದಿರುವ ಆದೇಶವನ್ನು ವಾಪಸ್ ಪಡೆದು ಅವಕಾಶ ನೀಡಬೇಕಿದೆ.

ಇದನ್ನೂ ಓದಿ; ‘ಅನ್ನಭಾಗ್ಯ’ ಯೋಜನೆಗೆ 10ವರ್ಷ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...