Homeಮುಖಪುಟಗ್ರೌಂಡ್ ರಿಪೋರ್ಟ್: ಯುದ್ಧಭೂಮಿ ಮಣಿಪುರದ ಚದುರಿದ ಚಿತ್ರಗಳು

ಗ್ರೌಂಡ್ ರಿಪೋರ್ಟ್: ಯುದ್ಧಭೂಮಿ ಮಣಿಪುರದ ಚದುರಿದ ಚಿತ್ರಗಳು

- Advertisement -
- Advertisement -

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸ್ವಾತಂತ್ರ್ಯ ಹೋರಾಟಕ್ಕಾಗಿ ಕಟ್ಟಿದ ಇಂಡಿಯನ್ ನ್ಯಾಷನಲ್ ಆರ್ಮಿ (ಐ.ಎನ್.ಎ.)ಯ ಹೆಗ್ಗುರುತುಗಳಿರುವ ಪಟ್ಟಣ ಮಯರಾಂಗ್. ತ್ರಿವರ್ಣ ಧ್ವಜವನ್ನು ಐಎನ್‌ಎ ಮೊದಲ ಬಾರಿಗೆ ಹಾರಿಸಿದ್ದು ಇಲ್ಲಿಯೇ. ಐ.ಎನ್.ಎ.ಯ ಮ್ಯೂಸಿಯಂ ಹೊಂದಿರುವ ಈ ಪಟ್ಟಣ ಮಣಿಪುರ ರಾಜ್ಯದ ಬಿಷ್ಣುಪುರ ಜಿಲ್ಲೆಯಲ್ಲಿದೆ.

ಇಂಫಾಲ, ಬಿಷ್ಣುಪುರ, ಚೂರಾಚಾಂದ್ಪುರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 2ರಲ್ಲಿನ ಮಯರಾಂಗ್ ದಾಟಿದ ಮೇಲೆ ಈಗ ಗನ್ ಪಾಯಿಂಟ್‌ನಲ್ಲಿ ಸಾಗಬೇಕಾಗುತ್ತದೆ. ಈಶಾನ್ಯ ಭಾರತದ ಮಣಿಪುರದಲ್ಲಿ ಕುಕಿ ಮತ್ತು ಮೈತ್‌ಯಿ ಸಮುದಾಯಗಳ ನಡುವೆ ಯುದ್ಧ ಏರ್ಪಟ್ಟ ಬಳಿಕ ಕಾಡು ಮತ್ತು ಕಣಿವೆಯ ನಡುವೆ ಅಗಾಧವಾದ ಬಿರುಕು ಮೂಡಿದೆ. ಇಂಫಾಲ ಕಣಿವೆಯಲ್ಲಿ ಎಲ್ಲಿ ಹುಡುಕಿದರೂ ಒಬ್ಬನೇ ಒಬ್ಬ ಕುಕಿ ಸಿಗುವುದಿಲ್ಲ. ಹಾಗೆಯೇ ಕುಕಿಗಳ ರಾಜಧಾನಿಯೆಂದೇ ಬಿಂಬಿತವಾಗಿರುವ ಚೂರಾಚಾಂದ್ಪುರ (ಲಮ್ಕಾ) ಪಟ್ಟಣದಲ್ಲೀಗ ಒಬ್ಬನೇ ಒಬ್ಬ ಮೈತ್‌ಯಿ ಕಾಣಸಿಗುವುದಿಲ್ಲ.

ಮೈತ್‌ಯಿಗಳಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವ ತೀರ್ಪು ಹೊರಬಿದ್ದ ಬಳಿಕ ಮೇ 3ರಂದು ರಾಜ್ಯಾದ್ಯಂತ ಪ್ರತಿಭಟನೆಗಳು ಕಾವು ಪಡೆದವು. ಅಂದು ಹಿಂಸಾಚಾರ ಭುಗಿಲೆದ್ದು, ಕುಕಿಗಳನ್ನು ಮೈತ್‌ಯಿಗಳು, ಮೈತ್‌ಯಿಗಳನ್ನು ಕುಕಿಗಳು ಹಿಂಸಿಸುವ ಕ್ರೌರ್ಯ ಆರಂಭವಾಯಿತು. ಉಭಯ ಸಮುದಾಯಗಳ ಆಸ್ತಿಪಾಸ್ತಿಗಳನ್ನು ಧ್ವಂಸ ಮಾಡಲಾಯಿತು. ಕುಕಿ ಮತ್ತು ಮೈತ್‌ಯಿಗಳು ನಿನ್ನೆಮೊನ್ನೆಯವರೆಗೂ ಅಣ್ಣ-ತಮ್ಮಂದಿರಂತೆ ಇದ್ದವರು ದಿಢೀರನೇ ಬದ್ಧ ವೈರಿಗಳಾಗಿ ಮಾರ್ಪಟ್ಟರು. ಎರಡು ಸಮುದಾಯಗಳು ಒಟ್ಟಿಗೆ ವಾಸಿಸುವ ಗ್ರಾಮಗಳಲ್ಲಿ ಮನೆಗಳು ಬೆಂಕಿಗೆ ಆಹುತಿಯಾದವು. ಸಾವು, ನೋವುಗಳು ಸಂಭವಿಸಿದವು. ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆದವು. ಆಗ ಬ್ಯಾನ್ ಆದ ಇಂಟರ್‌ನೆಟ್ ಈವರೆಗೂ ತೆರವಾಗಿಲ್ಲ. ಬೂದಿಮುಚ್ಚಿದ ಕೆಂಡದಂತೆ ಮಣಿಪುರ ಬುಸುಗುಟ್ಟುತ್ತಲೇ ಇದೆ. ಈವರೆಗೆ 180ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಲೇಖನ ಬರೆಯುವ ವೇಳೆಗೆ ಮತ್ತೆ ಮೂರು ಜನ ಗುಂಡಿಗೆ ಬಲಿಯಾಗಿರುವ ಸುದ್ದಿ ಬಂದಿದೆ. ಈವರೆಗಿನ ಕದನದಲ್ಲಿ ಮಡಿದವರ ಪೈಕಿ ಕುಕಿಗಳೇ ಹೆಚ್ಚಿನವರಾಗಿದ್ದಾರೆ.

ಕಾಡು ಮತ್ತು ಕಣಿವೆಯ ನಡುವೆ ಬಿರುಕು ಎಷ್ಟಿದೆ ಎಂದರೆ, ಮಣಿಪುರ ರಾಜಧಾನಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊಳೆಯುತ್ತಿರುವ ಈವರೆಗೂ ಗುರುತು ಹಿಡಿಯಲಾಗದ 30 ಮೃತ ದೇಹಗಳನ್ನು ಗುಡ್ಡಗಾಡಿಗೆ ಕೊಂಡೊಯ್ಯಲು ಆಗುತ್ತಿಲ್ಲ. ಇಂಫಾಲದಲ್ಲಿ ಕೊಳೆಯುತ್ತಿರುವ 57 ಮೃತ ದೇಹಗಳ ವಾರಸುದಾರರು ಯಾರು ಎಂಬುದು ಖಚಿತವಾಗಿಲ್ಲ. 30 ಮೃತ ದೇಹಗಳನ್ನು ಸರ್ಕಾರ ಗುರುತು ಹಚ್ಚಬೇಕಾಗಿದೆ. ಈ ಶವಗಳೆಲ್ಲವೂ ಕುಕಿ ಸಮುದಾಯದವು ಎಂಬುದು ನಿರ್ವಿವಾದ. ಆದರೆ ಇಂಫಾಲದ ಆಚೆಗೆ ಅವುಗಳನ್ನು ಕೊಂಡೊಯ್ಯಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ.

ಇತ್ತ ಚೂರಾಚಾಂದ್ಪುರದ ಜಿಲ್ಲಾ ಆಸ್ಪತ್ರೆಯಲ್ಲಿ 38 ಶವಗಳು ಹಾಗೆಯೇ ಇವೆ. ಅವುಗಳು 34 ಕುಕಿಗಳಿಗೆ ಸೇರಿವೆ. ಉಳಿದ 4 ಶವಗಳು ಮೈತ್‌ಯಿಗಳದ್ದಾಗಿವೆ. ಸಾಮೂಹಿಕ ಅಂತ್ಯಸಂಸ್ಕಾರ ಮಾಡುವುದಕ್ಕಾಗಿ ಕುಕಿಗಳು ತಮ್ಮವರ ಹೆಣವನ್ನು ಹಾಗೆ ಇಟ್ಟುಕೊಂಡಿದ್ದರೆ, ಮೈತ್‌ಯಿಗಳ ನಾಲ್ಕು ಶವಗಳನ್ನು ತೆಗೆದುಕೊಂಡು ಹೋಗಲು ಗುಡ್ಡಗಾಡು ಜಿಲ್ಲೆಗೆ ಯಾರೂ ಬರುತ್ತಿಲ್ಲ.

“ಇದು ಒಂದು ದೊಡ್ಡ ಸವಾಲು. ಕುಕಿ ಸಂತ್ರಸ್ತರ ಕುಟುಂಬ ಸದಸ್ಯರು ಇಂಫಾಲ್‌ಗೆ ಬರಲು ಬಫರ್ ಜೋನ್ ದಾಟಬೇಕಾಗುತ್ತದೆ. ಶವ ಸಾಗಿಸಲು ಬೇಕಾದ ಮಾರ್ಗವೇ ಬಹುದೊಡ್ಡ ಸಮಸ್ಯೆ ಎನ್ನುತ್ತಾರೆ ಇಂಫಾಲದಲ್ಲಿನ ಜವಾಹರಲಾಲ್ ನೆಹರೂ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಬಿಪಿನ್ ಕುಮಾರ್ ಮೊಯಿರಾಮ್ಥೆಂಗ್.

’ಈದಿನ’ ತಂಡವು ವರದಿಗಾಗಿ ಇತ್ತೀಚೆಗೆ ಮಣಿಪುರಕ್ಕೆ ಹೋಗಿದ್ದಾಗ ಇಂತಹ ಅನೇಕ ದುರಂತಗಳನ್ನು ಕಣ್ಣಾರೆ ಕಂಡಿದೆ. ಮುರಿದುಬಿದ್ದಿರುವ ಮಣಿಪುರ ಯಾವಾಗ ಚೇತರಿಸಿಕೊಳ್ಳುತ್ತದೆಯೋ, ಖಚಿತವಾಗಿ ಹೇಳಲಾಗದು. ಮಣಿಪುರ ರಾಜ್ಯವು ಸದ್ಯದ ಸ್ಥಿತಿಯಲ್ಲಿ ಭೌತಿಕವಾಗಿ ಒಡೆದು ಹೋಗಿರದಿದ್ದರೂ ಮಾನಸಿಕವಾಗಿ ಛಿದ್ರಗೊಂಡಿದೆ. ಕಾಡು-ಕಣಿವೆಯ ಕದನದ ಮುಗಿಯದ ಅಧ್ಯಾಯವೊಂದು ತೆರೆದುಕೊಂಡಿದೆ.

ಪಶ್ಚಿಮ ಇಂಫಾಲ ದಾಟಿದ ಕೆಲವೇ ನಿಮಿಷಗಳಲ್ಲಿ ಸಿಗುವ ಮಯರಾಂಗ್ ದಾಟಿದ ಬಳಿಕ ಸೇನೆಯ ಬಫರ್ ಜೋನ್ ಸಿಗುತ್ತದೆ. ಚೂರಾಚಾಂದ್ಪುರ ಮತ್ತು ಇಂಫಾಲ ಕಣಿವೆ ನಡುವಿನ ಕದನಕ್ಕೆ ತಡೆಗೋಡೆಯಾಗಿ ಬಿಎಸ್‌ಎಫ್ (ಬಾರ್ಡರ್ ಸೆಕ್ಯುರಿಟಿ ಫೋರ್ಸ್), ಕುಮಾಂವ್ ರೆಜಿಮೆಂಟ್, ಅಸ್ಸಾಂ ರೈಫಲ್ಸ್- ಹೀಗೆ ಹಲವು ಸೇನಾ ದಳಗಳ ತನಿಖಾ ಠಾಣೆಗಳು ಕಾವಲಾಗಿ ನಿಂತಿವೆ.

ಸಾರ್ವಜನಿಕ ಬಸ್ ಸೇವೆ ಇಲ್ಲವಾದ ಕಾರಣ ಈಗ ಖಾಸಗಿ ವಾಹನಗಳನ್ನೇ ಅವಲಂಬಿಸಿ ಇಲ್ಲಿ ಎಲ್ಲರೂ ಪ್ರಯಾಣಿಸಬೇಕಾಗಿದೆ. ನಮ್ಮನ್ನು ಸುತ್ತಾಡಿಸುತ್ತಿದ್ದ ಕಾರು ಚಾಲಕ ನಾಸಿರ್, ಪಾಂಗಲ್ (ಮುಸ್ಲಿಂ) ಸಮುದಾಯದವನು. ಭಾರತದ ಇತರೆ ಭಾಗಗಳಲ್ಲಿ ಮುಸ್ಲಿಮರ ಸ್ಥಿತಿಗಿಂತ ಮಣಿಪುರದ ಪಾಂಗಲ್‌ಗಳ ಸದ್ಯದ ಸ್ಥಿತಿ ಸಂಪೂರ್ಣ ಭಿನ್ನ. ನಮ್ಮ ಕಾರು ಚಾಲಕ ಮೈತ್‌ಯಿಯಾಗಿದ್ದರೆ ಚೂರಾಚಾಂದ್ಪುರದಕ್ಕೆ ಪ್ರವೇಶಿಸುವುದು ಅಸಾಧ್ಯ. ಚೂರಾಚಾಂದ್ಪುರದಿಂದ ಮತ್ತೆ ಇಂಫಾಲಕ್ಕೆ ಬರಬೇಕೆಂದರೆ ಕುಕಿ ಡ್ರೈವರ್ ಇರುವಂತಿಲ್ಲ. ಇದು ಮಣಿಪುರ ಇಬ್ಭಾಗವಾಗಿರುವ ರೀತಿ.

ಇದನ್ನೂ ಓದಿ: ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ: ಕುಕಿ ಸಮುದಾಯದ ಮೂವರ ಹತ್ಯೆ

ಬಿಷ್ಣುಪುರ, ಮಯರಾಂಗ್, ಚೂರಾಚಾಂದ್ಪುರದ ದಾರಿಯುದ್ದಕ್ಕೂ ಸುಟ್ಟು ಕರಕಲಾದ ಮನೆಗಳು ಕಾಣಸಿಗುತ್ತವೆ. ಅಲ್ಲಲ್ಲಿ ನಾಗರಿಕ ಮಿಲಿಟೆಂಟ್‌ಗಳು ಆರ್ಮಿಯವರಂತೆಯೇ ಕಾಣುವ ವೇಷ ತೊಟ್ಟು ಓಡಾಡುತ್ತಿರುತ್ತಾರೆ. ಬಿಷ್ಣುಪುರ ಪ್ರವೇಶಿಸಿದ ಕೂಡಲೇ ’ಮೈರಾಪೈಬಿ’ಗಳ (ಮಣಿಪುರಿ ಮೈತ್‌ಯಿ ಮಹಿಳೆಯರು) ದರ್ಶನವಾಗುತ್ತದೆ. ’ಅಸ್ಸಾಂ ರೈಫಲ್ಸ್ ಗೋಬ್ಯಾಕ್’ ಎಂಬುದು ಅವರ ಆಗ್ರಹ. ಅಸ್ಸಾಂ ರೈಫಲ್ಸ್‌ನವರು ಕುಕಿಗಳ ಪರವಾಗಿದ್ದಾರೆಂಬುದು ಅವರ ವಾದ. ಮತ್ತೆ ಬಫರ್ ಜೋನ್ ದಾಟಿದ ಮೇಲೆ ’ಇಂಡೀಜಿನಸ್ ಟ್ರೈಬಲ್ ಲೀಡರ್ಸ್ ಫೋರಂ’ ಮಹಿಳಾ ಘಟಕದಲ್ಲಿ ಸಕ್ರಿಯವಾಗಿರುವವರ ತಪಾಸಣೆಯನ್ನು ದಾಟಿಯೇ ಚೂರಾಚಂದ್ಪುರದಕ್ಕೆ ಹೋಗಬೇಕಾಗುತ್ತದೆ. ದಾರಿಯುದ್ದಕ್ಕೂ ಬಂಕರ್‌ಗಳು ನಮಗೆ ಕಾಣಸಿಗುತ್ತವೆ. ಬಂಕರ್ ತಲೆ ಎತ್ತಿವೆ ಎಂದರೆ ಯುದ್ಧಭೂಮಿಯಾಗಿ ಮಣಿಪುರ ಮಾರ್ಪಟ್ಟಿದೆ ಎಂದರ್ಥ.

’ಚೂರಾಚಾಂದ್ಪುರ’ಕ್ಕೆ ’ಲಮ್ಕಾ’ ಎಂದು ಕುಕಿಗಳು ಕರೆದುಕೊಂಡಿದ್ದಾರೆ. ಚೂರಾಚಾಂದ್ಪುರ ಎಂಬುದು ಮೈತ್‌ಯಿಗಳು ಇಟ್ಟ ಹೆಸರಾಗಿರುವುದರಿಂದ ಇಡೀ ಪಟ್ಟಣದ ಹಳೆಯ ಬೋರ್ಡ್‌ಗಳಲ್ಲಿನ ’ಚೂರಾಚಾಂದ್ಪುರ’ ಹೆಸರಿಗೆ ಮಸಿಬಿದ್ದಿದೆ. ಅದರ ಪಕ್ಕದಲ್ಲಿ ’ಲಮ್ಕಾ’ ಎಂಬ ಹೆಸರು ಬರೆಯಲ್ಪಟ್ಟಿದೆ.

ಯುವ ಜನರಿಗೆ ಭವಿಷ್ಯವಿದೆಯೇ?

ಚಿಕ್ಕಚಿಕ್ಕ ಹುಡುಗರ ಕೈಗೆ ಈಗ ಬಂದೂಕುಗಳು ಬಂದಿವೆ. ಕಾಣದ ಕೈಗಳು ಈ ಯುವಕರನ್ನು ತರಬೇತುಗೊಳಿಸಿವೆ. ಗಡಿ ಜಿಲ್ಲೆಗಳಲ್ಲಿ ತಲೆ ಎತ್ತಿರುವ ಬಂಕರ್‌ಗಳಲ್ಲಿ ಕೂತು ಪಾಳಿಯಲ್ಲಿ ಕಾವಲು ಕಾಯುವ ಕೆಲಸವನ್ನು ಈ ಯುವ ತಲೆಮಾರು ಮಾಡುತ್ತಿವೆ.

ನಾವು ಕೆಲವು ಬಂಕರ್‌ಗಳಿಗೆ ಭೇಟಿ ನೀಡಿದ್ದೇವೆ. ಚಿಕ್ಕ ಹುಡುಗರು, ಬುಲೆಟ್ ಫ್ರೂಫ್ ಜಾಕೆಟ್ ಕೂಡ ಧರಿಸದೆ ಬಂದೂಕು ಹಿಡಿದಿದ್ದಾರೆ. ಮೈತ್‌ಯಿ ಬಂಕರ್‌ವೊಂದರಲ್ಲಿ ಮಾತಿಗೆ ಸಿಕ್ಕ ಗ್ರಾಮದ ಮುಖಂಡ, “ನಮಗೆ ಇಲ್ಲಿನ ಪೊಲೀಸ್ ಅಧಿಕಾರಿಯೇ ಬಂದೂಕುಗಳನ್ನು ನೀಡಿದ” ಎಂಬುದನ್ನು ಒಪ್ಪಿಕೊಂಡನು.

ಸುಮಾರು 4,000 ಶಸ್ತ್ರಾಸ್ತ್ರಗಳು ಲೂಟಿಯಾಗಿವೆ ಎಂದು ಸರ್ಕಾರ ಒಪ್ಪಿಕೊಂಡಿವೆ. ಅವುಗಳೆಲ್ಲ ಬಿಸಿರಕ್ತದ ಯುವಕರನ್ನು ತಲುಪಿವೆ. ಇಂಫಾಲದಲ್ಲಿ ನಮ್ಮೊಂದಿಗೆ ಮಾತನಾಡಿದ ರಾಜಕೀಯಶಾಸ್ತ್ರ ಪ್ರಾಧ್ಯಾಪಕಿ ಶ್ರೀಮಾ ನಿಂಗ್, “ಮಣಿಪುರದ ಇಂದಿನ ಸ್ಥಿತಿಗೆ ಸರ್ಕಾರವೇ ಕಾರಣ. ಆಡಳಿತ ವ್ಯವಸ್ಥೆ ಕುಸಿದುಬಿದ್ದಿದೆ. ಮಕ್ಕಳ ಶಿಕ್ಷಣ ಡೋಲಾಯಮಾನವಾಗಿದೆ. ನನ್ನ ಅನೇಕ ವಿದ್ಯಾರ್ಥಿಗಳು ಬಂದೂಕು ಹಿಡಿದು ಬೀದಿಗಿಳಿದಿದ್ದಾರೆ. ಅವರು ಯಾವುದೇ ತರಬೇತಿ ಪಡೆದವರಲ್ಲ. ಅವರ ಜೀವಗಳು ಅಪಾಯದಲ್ಲಿವೆ” ಎನ್ನುತ್ತಾ ಭವಿಷ್ಯದ ಕುರಿತು ಅತೀವ ಆತಂಕ ತೋಡಿಕೊಂಡರು.

ಉನ್ನತ ವ್ಯಾಸಂಗಕ್ಕೆ ಇಂಫಾಲವನ್ನು ಆಶ್ರಯಿಸಿದ್ದ ಲಮ್ಕಾದಲ್ಲಿ ವಾಸವಿರುವ ಕುಕಿ ವಿದ್ಯಾರ್ಥಿಗಳು ಈಗ ಕಣಿವೆಗೆ ಕಾಲಿಡಲು ಸಾಧ್ಯವಿಲ್ಲ. ಚೂರಾಚಾಂದ್ಪುರಕ್ಕೆ ಹೋಗಿ ಓದುತ್ತಿದ್ದ ಮೈತ್‌ಯಿ ವಿದ್ಯಾರ್ಥಿಗಳ ಸ್ಥಿತಿಯೂ ಚಿಂತಾಜನಕ.

ಇಂಫಾಲದಿಂದ ಚೂರಾಚಾಂದ್ಪುರಕ್ಕೆ ಔಷಧ ಸರಬರಾಜು ಕೂಡ ನಿಂತಿದೆ ಎಂದು ಕುಕಿ ಮುಖಂಡರು ಆರೋಪಿಸುತ್ತಿದ್ದಾರೆ. ಹೀಗಾಗಿ ಔಷಧಗಳಿಗಾಗಿ ಪಕ್ಕದ ಮಿಜೋರಾಂ ರಾಜ್ಯವನ್ನು ಮಣಿಪುರಿ ಕುಕಿಗಳು ಅವಲಂಬಿಸಿದ್ದಾರೆ. ಬಲ್ಲಮೂಲಗಳ ಪ್ರಕಾರ ಔಷಧಗಳ ಕೊರತೆ ಹೆಚ್ಚು ಲಮ್ಕಾದಲ್ಲಿ ತಲೆದೋರಿದೆ.

ಸುಮಾರು 60,000 ಜನರು ನಿರಾಶ್ರಿತ ಶಿಬಿರಗಳನ್ನು ಆಶ್ರಯಿಸಿದ್ದಾರೆ. ಇಂಫಾಲ ಭಾಗದಲ್ಲಿನ ಮೈತ್‌ಯಿ ಶಿಬಿರಗಳಿಗೆ ಬಿಜೆಪಿ ಮತ್ತು ಬಿರೇನ್ ಸಿಂಗ್ ಸರ್ಕಾರದ ಒಂದಿಷ್ಟು ಸಹಕಾರವಾದರೂ ದೊರಕುತ್ತಿದೆ. ಆದರೆ ಗುಡ್ಡಗಾಡಿನಲ್ಲಿನ ಕುಕಿ ನಿರಾಶ್ರಿತ ಶಿಬಿರಗಳನ್ನು ಕೇಳುವವರಿಲ್ಲ ಎಂಬುದು ಗಂಭೀರ ಆರೋಪ. ಶಾಲೆಗಳು, ಹಾಸ್ಟೆಲ್‌ಗಳೆಲ್ಲ ನಿರಾಶ್ರಿತ ಶಿಬಿರಗಳಾಗಿ ಮಾರ್ಪಟ್ಟಿರುವುದರಿಂದ ವಿದ್ಯಾರ್ಥಿಗಳ ವ್ಯಾಸಂಗವೂ ಡೋಲಾಯಮಾನವಾಗಿದೆ.

ಅಂದಹಾಗೆ ’ಅಸ್ಸಾಂ ರೈಫಲ್ಸ್ ಗೋಬ್ಯಾಕ್’ ಎನ್ನುತ್ತಿರುವ ’ಮೈರಾಪೈಬಿ’ಗಳ ಬಗ್ಗೆ ವಿಶೇಷವಾಗಿ ಹೇಳಲೇಬೇಕು. ಮೈತ್‌ಯಿ ಮಹಿಳೆಯರು ರೂಪಿಸಿದ ಸಾಂಸ್ಕೃತಿಕ ಚಳವಳಿ ಇದು. ’ಮೈರಾಪೈಬಿ’ ಎಂದರೆ ’ಪಂಜು ಹಿಡಿದ ಮಹಿಳೆ’ ಎಂದರ್ಥ. ಎಪ್ಪತ್ತರ ದಶಕದಲ್ಲಿ ಮದ್ಯ, ಮಾದಕ ವಸ್ತುಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಮಣಿಪುರಿ ಮಹಿಳೆಯರು ಚಳವಳಿ ನಡೆಸಿದರು. ’ನಶಾಬಂಧಿ’ ಎಂಬ ಹೆಸರಿನ ಈ ಹೋರಾಟದ ಸಂದರ್ಭದಲ್ಲಿ ರಾತ್ರಿ ವೇಳೆ ಪಂಜುಗಳನ್ನು ಹಿಡಿದು ಮಣಿಪುರದ ಬೀದಿಗಳಲ್ಲಿ ಸಾಗಿ ಮದ್ಯದಂಗಡಿಗಳಿಗೆ ಬೆಂಕಿ ಇಟ್ಟರು. ಪಂಜು ಅವರ ಸಾಂಸ್ಕೃತಿಕ ಪ್ರತಿರೋಧದ ಭಾಗವಾಯಿತು.

ಇದನ್ನೂ ಓದಿ: ಮಣಿಪುರ ಹಿಂಸಾಚಾರಕ್ಕೆ ಸುಳ್ಳು ಕಾರಣಗಳನ್ನು ನೀಡಿದ ಅಮಿತ್ ಶಾ: ಕುಕಿ ಸಂಘಟನೆಗಳ ಆಕ್ರೋಶ

ನಂತರದ ಕಾಲಘಟ್ಟದಲ್ಲಿ ಮಣಿಪುರದ ಮೇಲೆ ’ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ’ಯನ್ನು (AFSPA) ಹೇರಿ ಮಾನವ ಹಕ್ಕುಗಳನ್ನು ದೌರ್ಜನ್ಯವೆಸಗಿದ ಪ್ರಭುತ್ವದ ವಿರುದ್ಧ ಮೈರಾಪೈಬಿಗಳು ಮಾಡಿದ ಹೋರಾಟ ಅವಿಸ್ಮರಣೀಯ. ಭಾರತೀಯ ಸೇನೆಯವರು ಮಣಿಪುರದ ಮಹಿಳೆಯರ ಮೇಲೆ ಅತ್ಯಾಚಾರಗಳನ್ನು ನಡೆಸಿದಾಗ ಮೈರಾಪೈಬಿಗಳು ತೋರಿದ ದಿಟ್ಟ ಹೋರಾಟ ಇಂದಿಗೂ ಆ ಭಾಗದಲ್ಲಿ ಅನುರಣಿಸುತ್ತದೆ. 2004ರಲ್ಲಿ ನಡೆದ ಘಟನೆ. ತಂಜೋಮ್ ಮನೋರಮಾ ಎಂಬ ಮಹಿಳೆಯ ಮೇಲೆ ಭೀಕರ ಅತ್ಯಾಚಾರವಾಗಿತ್ತು. ಮಣಿಪುರ ಬೆಚ್ಚಿಬಿದ್ದಿತ್ತು. ಆಕ್ರೋಶಗೊಂಡ ತಾಯಂದಿರು, “ಇಂಡಿಯನ್ ಆರ್ಮಿ ರೇಪ್ ಅಸ್, ಕಿಲ್ ಅಸ್” ಎಂದು ಬೆತ್ತಲೆ ಪ್ರತಿಭಟನೆ ಮಾಡಿದ್ದರು. ಇಂತಹ ಬಹುದೊಡ್ಡ ಚಳವಳಿಯ ಇತಿಹಾಸವಿರುವ ಮೈರಾಪೈಬಿಗಳು ಇಂದು ಕುಕಿ ಸಮುದಾಯದ ಮೇಲಿನ ಹಿಂಸಾಚಾರದಲ್ಲಿ ಭಾಗಿಯಾಗುವುದಷ್ಟೇ ಅಲ್ಲದೆ, ಕುಕಿ ಮಹಿಳೆಯರನ್ನು ಮೈತ್‌ಯಿ ಗಂಡಸರಿಗೆ ಹಿಡಿದುಕೊಟ್ಟ ಗಂಭೀರ ಆರೋಪಗಳನ್ನು ಎದುರಿಸುವಂತಾಗಿದೆ. ಕೆಲವು ಎಫ್‌ಐಆರ್‌ಗಳಲ್ಲಿ ಮೈರಾಪೈಬಿಗಳ ಹೆಸರು ಉಲ್ಲೇಖಗೊಂಡಿದೆ.

ಕುಕಿ ಪ್ರಾಬಲ್ಯದ ಚುರಾಚಾಂದ್ಪುರ (ಲಮ್ಕಾ)ದಲ್ಲಿ ನಮ್ಮೊಡನೆ ಮಾತನಾಡಿದ ’ಮಾನವ ಹಕ್ಕುಗಳಿಗಾಗಿ ಕುಕಿ ಮಹಿಳಾ ಸಂಘಟನೆ’ (KWOHR) ಅಧ್ಯಕ್ಷೆ ನೈನಿ ಕಿಮ್, “ಮಣಿಪುರದ ಎಲ್ಲ ಮಹಿಳೆಯರ ಬಗ್ಗೆ ನಾನು ಹೇಳುತ್ತಿಲ್ಲ. ಆದರೆ ನಮ್ಮ ಕೆಲವು ಸಂತ್ರಸ್ತ ಮಹಿಳೆಯರು ಅನುಭವಿಸಿದ್ದನ್ನು ತಿಳಿಸುತ್ತಿದ್ದೇನೆ. ಹೊಡೆಯಿರಿ, ಕೊಲ್ಲಿರಿ, ರೇಪ್ ಮಾಡಿ, ಸುಟ್ಟು ಹಾಕಿ ಎಂಬ ಮಾತುಗಳನ್ನು ಮೈರಾಪೈಬಿಗಳು ಆಡಿದ್ದಾರೆ. ನಮ್ಮ ಕುಕಿ ಮಹಿಳೆಯರು ಎಂದಿಗೂ ಮೈತ್‌ಯಿ ಮಹಿಳೆಯರ ಮೇಲೆ ಈ ರೀತಿಯಲ್ಲಿ ವರ್ತಿಸಿಲ್ಲ” ಎಂದರು.

ಮೈತ್‌ಯಿ ಮಹಿಳೆಯರು ಇಂತಹ ಆರೋಪಗಳನ್ನು ಅಲ್ಲಗಳೆಯುತ್ತ ಬಂದಿದ್ದಾರೆ. ಕುಕಿ ಮಹಿಳೆಯರನ್ನು ಬೆತ್ತಲುಗೊಳಿಸಿದ ಘಟನೆಯನ್ನ ಖಂಡಿಸುತ್ತಲೇ ಕುಕಿಗಳು ನಮ್ಮ ಮೇಲೆ ದಾಳಿ ಮಾಡಿದ್ದರಿಂದ ಹಿಂಸಾಚಾರಗಳು ನಡೆದಿವೆ ಎಂಬ ವಾದವನ್ನು ಮೈರಾಪೈಬಿಗಳು ಮುಂದಿಟ್ಟಿದ್ದಾರೆ.

2004ರಲ್ಲಿ ಬೆತ್ತಲೆ ಪ್ರತಿಭಟನೆ ಮಾಡಿದ ಮೈರಾಪೈಬಿಗಳ ಪೈಕಿ ದಿಟ್ಟ ಹೆಸರು ’ಇಮಾ ನಾಂಬಿ’. ಇಮಾ ಎಂದರೆ ’ತಾಯಿ’ ಎಂದರ್ಥ. ಬಿಷ್ಣುಪುರ ಜಿಲ್ಲಾಧಿಕಾರಿ ಕಚೇರಿಯ ಸಮೀಪದಲ್ಲಿ ಪುಟ್ಟ ಮನೆಯೊಂದರಲ್ಲಿ ವಾಸವಿರುವ ಇಳಿವಯಸ್ಸಿನ ನಾಂಬಿ ನಮ್ಮ ಭೇಟಿಗೆ ಲಭ್ಯವಾದರು. ಮೈರಾಪೈಬಿಗಳ ಕೈಗೆ ಅಂಟಿರುವ ಹಿಂಸೆಯ ಆಪಾದನೆಗಳನ್ನು ತಿರಸ್ಕರಿಸಿದರು.

“ಮೈರಾಪೈಬಿಗಳ ಹೋರಾಟದ ಬದುಕಿನಲ್ಲಿ ಈ ಸಂದರ್ಭ ಸಂಪೂರ್ಣ ಭಿನ್ನವಾಗಿದೆ” ಎಂದು ಅಭಿಪ್ರಾಯ ತಾಳುತ್ತಾರೆ ನಾಂಬಿ. “ಮೈರಾಪೈಬಿಗಳು ಯಾವುದೇ ಸಂದರ್ಭದಲ್ಲಿ ಕುಕಿ ಮಹಿಳೆಯರನ್ನು ಮೈತ್‌ಯಿ ಪುರುಷರ ವಶಕ್ಕೆ ನೀಡಿಲ್ಲ. ಕುಕಿಗಳು ಮೈತ್‌ಯಿ ಮನೆಗಳನ್ನು ಸುಟ್ಟು ಹಾಕಿದ್ದಾರೆ. ಕುಕಿ ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿದ್ದನ್ನು ನಾವು ಖಂಡಿಸುತ್ತೇವೆ. ಕುಕಿ ಸಮುದಾಯದವರು ದಾಳಿ ಮಾಡಿದ್ದಕ್ಕೆ ಮೈತ್‌ಯಿ ಸಮುದಾಯದವರು ಪ್ರತೀಕಾರ ತೆಗೆದುಕೊಂಡಿದ್ದಾರೆ” ಎನ್ನುತ್ತಾರೆ ಅವರು.

“ಮಹಿಳೆಯರ ಘನತೆಗೆ ಧಕ್ಕೆಯಾದರೆ- ಅದು ಕುಕಿಯಾಗಲೀ, ಮೈತ್‌ಯಿಯಾಗಿರಲೀ, ನಾಗಾ ಆಗಿರಲೀ- ನಾವು ಅದನ್ನು ಖಂಡಿಸುತ್ತೇವೆ. ಯುದ್ಧಗಳು ನಡೆದಾಗಲೆಲ್ಲ ಮಹಿಳೆಯರನ್ನು ಆಯುಧವಾಗಿ ಬಳಸುತ್ತಾರೆ. ಇದಾಗಬಾರದು. ಘಟನೆಯನ್ನು ನಾನು ಸೇರಿದಂತೆ ಮೈತ್‌ಯಿ ಮಹಿಳೆಯರೆಲ್ಲರೂ ಖಂಡಿಸುತ್ತೇವೆ” ಎನ್ನುತ್ತಾರೆ.

ಇಮಾ ನಾಂಬಿಯವರು ಈ ಮಾತುಗಳನ್ನು ಆಡುತ್ತಲೇ, “ಮೈತ್‌ಯಿ ಮಹಿಳೆಯರ ಮೇಲೂ ಅತ್ಯಾಚಾರಗಳಾಗಿವೆ. ಆದರೆ ನಮ್ಮ ಸಮಾಜ ಮಾನಕ್ಕೆ ಅಂಜುತ್ತದೆ. ಇಂತಹ ಘಟನೆಗಳನ್ನು ಮುಕ್ತವಾಗಿ ಹೇಳಿಕೊಳ್ಳುತ್ತಿಲ್ಲ” ಎನ್ನುತ್ತಾರೆ. ಆದರೆ ಕುಕಿ ನಾಯಕಿ ಕಿಮ್, “ಮೈತ್‌ಯಿಗಳ ಮೇಲೂ ಅತ್ಯಾಚಾರವಾಗಿದೆ ಎನ್ನುವ ಮೂಲಕ ಮೈತ್‌ಯಿ ತಮ್ಮ ಕ್ರೌರ್ಯವನ್ನು ಸಮರ್ಥನೆ ಮತ್ತು ಬ್ಯಾಲೆನ್ಸ್ ಮಾಡುತ್ತಿದ್ದಾರೆ” ಎಂದು ದೂರುತ್ತಾರೆ.

ಬಹುದೊಡ್ಡ ಇತಿಹಾಸವಿರುವ ಮಣಿಪುರಿ ಮಹಿಳೆಯರಿಂದು ಕಟಕಟೆಯಲ್ಲಿ ನಿಂತಿದ್ದಾರೆ. ಶಾಂತಿಯುತ ಮಾತುಕತೆಗಳು ದೂರದ ಮಾತಾಗಿವೆ. ಹಲವು ಕಡೆ ಕುಕಿ-ಮೈತ್‌ಯಿ ದಂಪತಿಗಳು ಬೇರೆಬೇರೆಯಾಗಿ ನಿರಾಶ್ರಿತ ಶಿಬಿರಗಳಿಗೆ ದೂಡಲ್ಪಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಗಾಢ ಮೌನದ ಬಗ್ಗೆ ಉಭಯ ಸಮುದಾಯಗಳಲ್ಲೂ ಆಶ್ಚರ್ಯದಾಯಕ ಪ್ರಶ್ನೆಗಳು ಹುಟ್ಟಿಕೊಂಡಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...