ಕೋವಿಡ್-19 ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ರಾಜ್ಯ ಸಾರಿಗೆ ನಿಗಮದ ಕುಟುಂಬಗಳಿಗೆ ಕೂಡಲೇ ಪರಿಹಾರಧನ ಬಿಡುಗಡೆಗೊಳಿಸಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ಒತ್ತಾಯಿಸಿದ್ದಾರೆ.
ಸಾಂಕ್ರಾಮಿಕ ರೋಗ ಕೋವಿಡ್‌ಗೆ ರಾಜ್ಯ ಸಾರಿಗೆ ನಿಗಮದ ಒಟ್ಟು 351 ಜನ ತಮ್ಮ ಪ್ರಾಣ ಕಳೆದುಕೊಂಡಿದ್ದರು. ಈ ಬಗ್ಗೆ ಆರ್,ಟಿ.ಐ ನಿಂದ ಮಾಹಿತಿ ಪಡೆದು, ವೆಲ್ಫೇರ್ ಪಾರ್ಟಿಯು ಆ ಮಾಹಿತಿಯನ್ವಯ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ವೆಲ್ಫೇರ್ ಪಾರ್ಟಿಯು ಮನವಿ ಮಾಡಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ವೆಲ್ಫೇರ್ ಪಾರ್ಟಿ, ”ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 80 ಜನ ಸಿಬ್ಬಂದಿಗಳು ಬಲಿಯಾಗಿದ್ದು, ಬಿಎಂಟಿಸಿಯ 110 ಸಿಬ್ಬಂದಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 64 ಜನ ಸಿಬ್ಬಂದಿಗಳು ಪ್ರಾಣ ಕಳಕೊಂಡಿದ್ದಾರೆ. ಹಾಗೆಯೇ ಕನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 96 ಜನ ಸಿಬ್ಬಂದಿಗಳು ಪ್ರಾಣ ಕಳಕೊಂಡಿದ್ದಾರೆ. ಈ ಸಂತ್ರಸ್ಥರಲ್ಲಿ ಹಿಂದಿನ ಬಿಜೆಪಿ ಸರಕಾರ ಕೇವಲ ಹನ್ನೊಂದು ಕುಟುಂಬಗಳಿಗೆ ಮಾತ್ರ ಪರಿಹಾರಧನ ನೀಡಿದೆ. ಆಗಿನ ಬಿಜೆಪಿ ಸರಕಾರ ಬಲಿಯಾದ ಪ್ರತೀ ಕುಟುಂಬಗಳಿಗೆ ತಲಾ 30 ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿತ್ತು” ಎಂದು ಮಾಹಿತಿ ವೆಲ್ಫೇರ್ ಪಾರ್ಟಿ ಮಾಹಿತಿ ಪಡೆದಿದೆ.
”ಈ ನಿಟ್ಟಿನಲ್ಲಿ ವೆಲ್ಫೇರ್ ಪಾರ್ಟಿಯ ವತಿಯಿಂದ ಹಲವು ಬಾರಿ ಪ್ರತಿಭಟನೆ ನಡೆಸಿ ಸರಕಾರವನ್ನು ಒತ್ತಾಯಿತ್ತು. ಸಾರಿಗೆ ಸಚಿವರನ್ನು ಕೂಡಾ ಬೇಟಿಯಾಗಿ ಈ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿತ್ತು. ಆದರೆ ಸರಕಾರದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ದೊರಕಿರಲಿಲ್ಲ. ಈ ಬಗ್ಗೆ ಪ್ರಸಕ್ತ ನೂತನ ಸರಕಾರದ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿಯವರನ್ನು ವೆಲ್ಪೇರ್ ಪಾರ್ಟಿಯ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ರ ನೇತೃತ್ವದ ತಂಡವು ಭೇಟಿಯಾಗಿ ಸಮರ್ಪಕ ದಾಖಲೆ ಒದಗಿಸಿ, 340 ಕುಟುಂಬಗಳು ಇನ್ನೂ ಕೂಡಾ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.
”ಪರಿಹಾರ ಸಿಗದೇ ಈ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿವೆ, ಅವರ ಬದುಕು ಶೋಚನೀಯವಾಗಿದೆ. ಮನೆಯ ಯಜಮಾನನೇ ಈ ಕೋವಿಡ್‌ಗೆ ಬಲಿಯಾಗಿರುವಾಗ ಈ ಕುಟುಂಬದ ಸಂಕಷ್ಟದ ಬಗ್ಗೆ ಗಮನವಿಟ್ಟು ಆಲಿಸಿ ಪರಿಹಾರ ಕಲ್ಪಿಸಬೇಕು” ಎಂದು ಮನವಿ ಮಾಡಿದ್ದಾರೆ.
ವೆಲ್ಫೇರ್ ಪಾರ್ಟಿಯ ನಿಯೋಗವು ಇಂದು (ಬುಧವಾರ) ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿಯಾಗಿದೆ. ನಿಯೋಗದಲ್ಲಿ ರಾಜ್ಯ ಉಪಾಧ್ಯಕ್ಷ ಹಬೀಬುಲ್ಲಾಖಾನ್, ರಾಜ್ಯ ಕಾರ್ಯದರ್ಶಿ ರಿಯಾಝ್ ಅಹಮದ್ ಮತ್ತು ಬೆಂಗಳೂರು ನಗರ ಉಪಾಧ್ಯಕ್ಷರಾದ ಎ.ಪ್ರಭಾಕರ್ ಇದ್ದರು.
ಇದನ್ನೂ ಓದಿ: ದೇಶದ ಹೆಸರು ಬದಲಾವಣೆ ಮಾಡಿದ್ರೆ ಏನು ಲಾಭ? ಜನರ ಬದುಕು ಬದಲಾಗಬೇಕು: ಡಿ.ಕೆ.ಶಿವಕುಮಾರ್


