Homeಅಂಕಣಗಳುತಳ ಒಡೆದ ದೋಣಿಯಾಗಿರುವ ವೆಸ್ಟ್ ಇಂಡೀಸ್ ಕ್ರಿಕೆಟ್

ತಳ ಒಡೆದ ದೋಣಿಯಾಗಿರುವ ವೆಸ್ಟ್ ಇಂಡೀಸ್ ಕ್ರಿಕೆಟ್

- Advertisement -
- Advertisement -

ಎಪ್ಪತ್ತರ ದಶಕದಲ್ಲಿ ಕ್ರಿಕೆಟ್ ಜಗತ್ತನ್ನು ಆಳಿದ ವೆಸ್ಟ್ ಇಂಡೀಸ್ ಅವನತಿಯ ಹಾದಿಯನ್ನು ತುಳಿದಿದೆ. ತಾವು ಪ್ರತಿನಿಧಿಸಿದ ದೇಶದ ಪರ ಆಡುವಾಗ ಮೈ ಮೇಲೆ ದೆವ್ವ ಬಂದವರಂತೆ ಆಡುವ ಅವರ ಹುಮ್ಮಸ್ಸು ಎಂತಹವರನ್ನು ದಂಗುಬಡಿಸುತ್ತದೆ. ಸಾಮಾನ್ಯವಾಗಿ ವಿಶಿಷ್ಟ ಶೈಲಿಯ ಗುಂಗುರು ಕೂದಲಿನ, ಕಟ್ಟುಮಸ್ತಾದ, ನೀಳ, ಕಪ್ಪು ದೇಹಾಕೃತಿಯನ್ನು ಹೊಂದಿರುವ ಇವರು ದೈತ್ಯ ಪ್ರತಿಭಾವಂತರು. ಇವರ ಆಟ ವೆಸ್ಟ್ ಇಂಡೀಸ್ ತಂಡ 1975, 1979ರ ವಿಶ್ವಕಪ್‌ಗಳನ್ನು ತಮ್ಮ ಮಡಿಲಿಗೆ ಹಾಕಿಕೊಂಡು ಎಪ್ಪತ್ತರ ದಶಕದಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸುವಂತೆ ಮಾಡಿತು. ಭಾರತ 1983ರ ವಿಶ್ವಕಪ್ ಗೆದ್ದಾಗಲೂ ಫೈನಲ್ ಪಂದ್ಯದಲ್ಲಿ ಎದುರುಗೊಂಡಿದ್ದು ವೆಸ್ಟ್ ಇಂಡೀಸ್ ತಂಡವನ್ನೇ. ಎಲ್ಲಾ ಕ್ರಿಕೆಟ್ ಪ್ರೇಮಿಗಳ, ಕ್ರಿಕೆಟ್ ಪಂಡಿತರ ನಿರೀಕ್ಷೆ ಮೀರಿ ಭಾರತ ಜಯ ಸಾಧಿಸಿದ್ದು ಒಂದು ವಿಶೇಷ ಸಾಧನೆಯೇ ಸರಿ. ವೆಸ್ಟ್ ಇಂಡೀಸ್ ಮೂರನೇ ಬಾರಿಯೂ ವಿಶ್ವಕಪ್ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡುತ್ತದೆ ಎಂಬ ಕ್ರಿಕೆಟ್ ಜಗತ್ತಿನ ಲೆಕ್ಕಾಚಾರವನ್ನು ಬುಡಮೇಲು ಮಾಡಿದ ಭಾರತ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಆದರೆ ಆ ಜಯ ಅಷ್ಟು ಸುಲಭವಾಗಿರಲಿಲ್ಲ. ಅದಕ್ಕೆ ಸಂಘಟಿತ ಹೋರಾಟ, ಏಕಾಗ್ರತೆ, ಸಮರ್ಪಣಾ ಮನೋಭಾವ, ನಾಯಕನ ಸಮಯಪ್ರಜ್ಞೆ, ವಿರೋಧಿ ತಂಡದ ಬಲ ಮತ್ತು ದೌರ್ಬಲ್ಯತೆಯ ಅರಿವು ಇರಬೇಕಿತ್ತು. ಹೀಗಿದ್ದಾಗ ಮಾತ್ರ ಗೆಲ್ಲುವ ಸಾಧ್ಯತೆಗಳು ನಿಚ್ಚಳವಾಗಿರುತ್ತವೆ. ಇದನ್ನು ಅಕ್ಷರಶಃ ಪಾಲಿಸಿದ ಕಪಿಲ್ ದೇವ್ ನೇತೃತ್ವದ ತಂಡ ಮೊದಲ ಬಾರಿಗೆ ವಿಶ್ವಕಪ್‌ನ ಮೇಲೆ ಭಾರತದ ಹೆಸರನ್ನು ದಾಖಲಿಸುತ್ತದೆ.

ವೆಸ್ಟ್ ಇಂಡೀಸ್ ಕ್ರಿಕೆಟ್‌ನ ವಿವಿಯನ್ ರಿಚರ್ಡ್ಸ್, ಕ್ಲೈವ್ ಲಾಯ್ಡ್, ಡೆಸ್ಮಂಡ್ ಹೇನ್ಸ್, ಗ್ಯಾರಿ ಸೋಬರ್ಸ್, ಮಾಲ್ಕಮ್ ಮಾರ್ಷಲ್, ಆಂಡಿ ರಾಬರ್ಟ್, ಮೈಕಲ್ ಹೋಲ್ಡಿಂಗ್, ಕರ್ಟ್ನಿ ವಾಲ್ಷ್, ಕರ್ಟ್ಲಿ ಆಂಬ್ರೋಸ್, ಬ್ರಿಯಾನ್ ಲಾರಾ, ಗಾರ್ಡನ್ ಗ್ರಿನಿಡ್ಜ್, ಕಾರ್ಲ್ ಹೂಪರ್, ಮಾಲ್ಕಮ್ ಮಾರ್ಷಲ್, ಶಿವನಾರಾಯಣ ಚಂದ್ರಪಾಲ್, ಕ್ರಿಸ್‌ಗೇಲ್ ಮುಂತಾದ ಆಟಗಾರರು ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠರು ಎಂದು ಪರಿಗಣಿಸಲಾಗಿದೆ. ಅವರ ಆಟವನ್ನು ನೋಡುವುದೆಂದರೆ ಕಣ್ಣಿಗೆ ಹಬ್ಬ. ಕ್ರೀಡಾಂಗಣದ ಬೌಂಡರಿಯೂ ಅವರಿಗೆ ಚಿಕ್ಕದಾಗಿ ಕಾಣಿಸುತ್ತದೆ. ಚೆಂಡನ್ನು ಕೈಯಲ್ಲಿ ಹಿಡಿದುಕೊಂಡು ಬೌಲಿಂಗ್‌ಗೆ ಬಂದರೆ ಚೆಂಡು ಅವರ ಕೈಯಲ್ಲಿ ನಿಂಬೆಹಣ್ಣಿನಂತೆ ಕಾಣುತ್ತದೆ. ಅವರು ಎತ್ತರಕ್ಕೆ ಇರುವ ಕಾರಣ, ಬೌಲಿಂಗ್ ಮಾಡುವ ಸಮಯದಲ್ಲಿ ಅವರ ಕೈ ಬಹಳ ಮುಂದಕ್ಕೆ ಹೋಗುತ್ತದೆ. ಎದುರು ತಂಡದಲ್ಲಿ ಬ್ಯಾಟಿಂಗ್ ಮಾಡುವ ಆಟಗಾರರಿಗೆ ಚೆಂಡನ್ನು ನೋಡಿ ಬ್ಯಾಟಿನಿಂದ ಪ್ರತಿಕ್ರಿಯಿಸುವುದಕ್ಕೆ ಸಾಕಷ್ಟು ಸಮಯ ಸಿಗುವುದಿಲ್ಲ. ಇದರಿಂದ ಆಟಗಾರರನ್ನು ಬೇಗ ಔಟ್ ಮಾಡಲು ಸಾಧ್ಯವಾಗುತ್ತದೆ. ಬಾಡಿ ಲೈನ್ ಬೌಲಿಂಗ್ ಮೂಲಕ ಬೆಂಕಿ ಉಗುಳುತ್ತಿದ್ದ ವೆಸ್ಟ್ ಇಂಡೀಸ್ ಆಟಗಾರರು, ಬ್ಯಾಟಿಂಗ್‌ನಲ್ಲಿ ಚೆಂಡನ್ನು ಬೌಂಡರಿ ಮೂಲೆ ಮೂಲೆಗೆ ಬಾರಿಸುವಲ್ಲಿ ಯಶಸ್ವಿಯಾಗುತ್ತಿದ್ದರು. ವಿವಿಯನ್ ರಿಚರ್ಡ್ಸ್, ಬ್ರಿಯಾನ್ ಲಾರಾರಂತಹ ದಿಗ್ಗಜ ಬ್ಯಾಟುಗಾರರು ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದರೆ ಎದುರು ಪಾಳಯದ ಆಟಗಾರರಿಗೆ ನಡುಕ ಶುರುವಾಗುತ್ತಿತ್ತು. ವಾಲ್ಷ್, ಆಂಬ್ರೂಸ್, ಮಾರ್ಷಲ್, ಬಿಷಪ್‌ರಂತಹ ಬೌಲರ್‌ಗಳು ಬೌಲಿಂಗ್ ರನ್‌ಅಪ್‌ನಲ್ಲಿದ್ದರೆ, ಬ್ಯಾಟ್ಸ್‌ಮನ್‌ಗಳು ಸ್ಕ್ರೀಜ಼್ ಬಿಟ್ಟು ಓಡಿಹೋಗಿಬಿಡಬೇಕೆನ್ನುವಷ್ಟರ ಮಟ್ಟಿಗೆ ವಾತಾವರಣ ಸೃಷ್ಟಿಯಾಗುತ್ತಿತ್ತು. ವೆಸ್ಟ್ ಇಂಡೀಸ್ ಕ್ರಿಕೆಟ್‌ನ ಆ ಗತಕಾಲದ ವೈಭವ ಮತ್ತೆ ಮರುಕಳಿಸಲಿಲ್ಲ. ಹಾಗೆಂದ ಮಾತ್ರಕ್ಕೆ ಪ್ರತಿಭಾನ್ವಿತ ಆಟಗಾರರು ಇಲ್ಲವೆನ್ನುವಂತಿಲ್ಲ. ಡೆವೆನ್ ಬ್ರಾವೋ, ಕ್ರಿಸ್ ಗೇಲ್, ನಿಕೊಲಸ್ ಪೂರನ್, ಡರೆನ್‌ಸಮಿ, ಶಿಮ್ರನ್ ಹಿಟ್ಮೈರ್, ಪಾವೆಲ್, ಜೇಸನ್ ಹೋಲ್ಡರ್ ಅಂತಹ ಆಟಗಾರರು ಇದ್ದಾರೆ. ಆದರೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಮತ್ತು ಆಟಗಾರರ ನಡುವಿನ ಸಂಭಾವನೆಯ ಆಂತರಿಕ ಸಂಘರ್ಷ ನಿರಂತರವಾಗಿ ಅಲ್ಲಿನ ಕ್ರಿಕೆಟ್‌ಅನ್ನು ಕೊಂದುಹಾಕಿಬಿಟ್ಟಿದೆ.

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ನಾಯಕ ಡರೆನ್ ಸಮಿ ಜಾಗತಿಕ ಮಟ್ಟದಲ್ಲಿನ ವಿವಿಧ ಕ್ರಿಕೆಟ್ ಮಂಡಳಿಗಳು ಕ್ರಿಕೆಟ್ ಆಟಗಾರರಿಗೆ ಕೊಡುತ್ತಿರುವ ಸಂಭಾವನೆಯ ಅಸಮಾನತೆಯ ಕುರಿತು ಮಾತನಾಡುತ್ತಾ, ಭಾರತೀಯ ಕ್ರಿಕೆಟ್ ಮಂಡಳಿ ತನ್ನ ಆಟಗಾರರಿಗೆ ವಾರ್ಷಿಕ ಸುಮಾರು 7 ಕೋಟಿ ಸಂಭಾವನೆ ಕೊಡುತ್ತಿದ್ದರೆ, ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಸುಮಾರು 1.2 ಕೋಟಿ ಕೊಡುತ್ತಿರುವುದರಿಂದ ಸಂಭಾವನೆಯ ತಾರತಮ್ಯತೆ ಆಟಗಾರರ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುತ್ತಿದೆ ಎನ್ನುತ್ತಾರೆ. “ಪ್ರೀತಿಗಾಗಿ ಆಡಿದ ದಿನಗಳು ಕಳೆದುಹೋಗಿವೆ. ಪ್ರೀತಿಯಿಂದ ದಿನಸಿಯನ್ನು ಮಾರ್ಕೆಟ್‌ನಿಂದ ಖರೀದಿಸಲಾಗುವುದಿಲ್ಲ ಎಂದು ಬಹಳ ವೇದನೆಯಿಂದ ದೇಶದ ಆಟಗಾರರ ಪರವಾಗಿ ತಮ್ಮ ಅಳಲನ್ನು ಹಂಚಿಕೊಳ್ಳುತ್ತಾರೆ. ಡರೆನ್ ಸಮಿ 2012 ಮತ್ತು 2016ರಲ್ಲಿ ಎರಡು ಟಿ20 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕರಾಗಿದ್ದವರು. 2016ರಲ್ಲಿ ವಿಶ್ವಕಪ್ ಗೆದ್ದು ಸಂಭ್ರಮಿಸಬೇಕಾಗಿದ್ದ ನಾಯಕ ಡರೆನ್ ಸಮಿಯ ಮುಖದ ಮೇಲೆ ದ್ವಂದ್ವ ಅಭಿವ್ಯಕ್ತಿಯ ನೆರಳು ಕಾಣುತ್ತಿತ್ತು. ಒಂದು ಕಡೆ ಸಂತೋಷವಿದ್ದರೆ, ಮತ್ತೊಂದು ಕಡೆ ದುಗುಢತೆ, ಕ್ರಿಕೆಟ್ ಮಂಡಳಿಯ ಬಗ್ಗೆ ಹತಾಶೆ, ಕೋಪ ಎದ್ದು ಕಾಣುತ್ತಿತ್ತು. ಏಕೆಂದರೆ ವಿಶ್ವಕಪ್ ಗೆದ್ದ ತಂಡದ ನಾಯಕನಾಗಿಯೂ, ಮುಂದೆ ನಡೆಯುವ ಏಕದಿನ ಕ್ರಿಕೆಟ್ ತಂಡದಲ್ಲಿ, ತನ್ನ ದೇಶದ ಪರವಾಗಿ ಆಡಲು ತನಗೆ ಸ್ಥಾನ ಸಿಗುತ್ತದೋ ಇಲ್ಲವೋ ಎನ್ನುವ ಅನುಮಾನ ಅವರನ್ನು ಕಾಡಿತ್ತು. ಈ ಅನಿಶ್ಚಿತತೆ ವೆಸ್ಟ್ ಇಂಡೀಸ್ ಕ್ರಿಕೆಟ್‌ನಲ್ಲಿ ಅಲ್ಲೋಲ್ಲಕಲ್ಲೋಲ ಎಬ್ಬಿಸಿತು. ಇದು ಕೇವಲ ಅವರೊಬ್ಬರ ಕಳವಳವಾಗಿರಲಿಲ್ಲ. ಇಡೀ ತಂಡದ ಆಟಗಾರರು ಅನುಭವಿಸುತ್ತಿದ್ದ ಆತಂಕಕಾರಿ ಅನುಭವದ ಅಭಿವ್ಯಕ್ತಿಯಾಗಿತ್ತು.

ಕ್ರಿಕೆಟ್‌ಅನ್ನು ಸರ್ವಸ್ವವಾಗಿ ಸ್ವೀಕರಿಸಿ ಪ್ರೀತಿಸುವ ಆಟಗಾರರ ಭವಿಷ್ಯ ತೂಗುಯ್ಯಾಲೆಯಾಡುತ್ತಿದ್ದ ಸಂದರ್ಭದಲ್ಲಿ ಅನ್ಯಮಾರ್ಗವಿಲ್ಲದ ಅವರು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯೊಂದಿಗೆ ಸಂಘರ್ಷಕ್ಕೆ ಇಳಿಯಬೇಕಾಯಿತು. 2014ರಲ್ಲಿ ಡೆವೆನ್ ಬ್ರಾವೋ ನೇತೃತ್ವದ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಭಾರತದ ಪ್ರವಾಸದಲ್ಲಿತ್ತು. ಆಟಗಾರರ ಸಂಭಾವನೆಯ ವಿಚಾರವಾಗಿ ಆ ತಂಡದ ಆಗಿನ ಮ್ಯಾನೇಜರ್ ರಿಚ್ಚಿ ರಿಚರ್ಡ್ಸ್‌ಸನ್ ಹಠಾತ್ತಾಗಿ ಪ್ರವಾಸವನ್ನು ಮೊಟಕುಗೊಳಿಸುವುದಾಗಿ ಘೋಷಿಸಿಬಿಟ್ಟರು. ಇದು ಭಾರತ ಕ್ರಿಕೆಟ್ ಮಂಡಳಿಗೆ ಆಶ್ಚರ್ಯವನ್ನುಂಟುಮಾಡಿತು. ಅದಾಗಲೇ ಮೂರು ಪಂದ್ಯಗಳನ್ನು ಆಡಿದ್ದ ವೆಸ್ಟ್ ಇಂಡೀಸ್ ತಂಡ ಇನ್ನೆರಡು ಪಂದ್ಯಗಳನ್ನು ಆಡಬೇಕಿತ್ತು. ಆದರೆ ವೆಸ್ಟ್ ಇಂಡೀಸ್ ತಂಡ ಮೈದಾನಕ್ಕಿಳಿಯುವುದಿಲ್ಲವೆಂದು ಘೋಷಿಸಿತು. ಇಂತಹ ಘಟನೆಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಳಾತಿ ವಿರಳ. ಅಚಾನಕ್ಕಾಗಿ ಸಂಭವಿಸಿದ ಈ ಬೆಳವಣಿಗೆಯಿಂದ ಸಂಭವಿಸುವ ಆರ್ಥಿಕ ನಷ್ಟವನ್ನು ಅರಗಿಸಿಕೊಳ್ಳಲು ಭಾರತೀಯ ಕ್ರಿಕೆಟ್ ಮಂಡಳಿಗೆ ಕಷ್ಟವಾಯಿತು. ಅದರಲ್ಲೂ ದೂರದರ್ಶನದ ಪ್ರಸಾರದ ಹಕ್ಕಿನಲ್ಲಿ ಉಂಟಾಗಬಹುದಾದ ನಷ್ಟ. ಎರಡು ಮಂಡಳಿಗಳ ನಡುವೆ ಇದ್ದ ಸೌಹಾರ್ದ ವಾತಾವರಣಕ್ಕೆ ಉಂಟಾಗಬಹುದಾದ ಧಕ್ಕೆ, ದ್ವಿಪಕ್ಷೀಯ ಒಪ್ಪಂದ ಮುರಿದುಬೀಳುವ ಸಂಭವನೀಯತೆ. ಇವೆಲ್ಲವೂ ಐ.ಸಿ.ಸಿ ಮಟ್ಟದಲ್ಲಿ ಚರ್ಚೆಯಾದರೂ, ಆ ಸಂಸ್ಥೆ ಎರಡು ದೇಶಗಳ ಮಂಡಳಿಗಳ ಮಧ್ಯೆ ಸಂಧಾನಕ್ಕೆ ಮುಂದಾಗುವುದಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾವ ನಿರ್ಧಾರವನ್ನಾದರೂ ಭಾರತೀಯ ಕ್ರಿಕೆಟ್ ಮಂಡಳಿ ಪ್ರಕಟಿಸಬಹುದಾಗಿತ್ತು. ಆದರೆ ಸಂಯಮದಿಂದ ವರ್ತಿಸಿ ಕ್ರೀಡಾ ಮನೋಭಾವನೆಯಿಂದ ಅದನ್ನು ಸ್ವೀಕರಿಸಿ, ಭವಿಷ್ಯದ ಕ್ರಿಕೆಟ್‌ಗೆ ಮಾದರಿಯಾಯಿತು.

ಇದನ್ನೂ ಓದಿ: ಕ್ರಿಕೆಟ್ ಬೆನ್ನು ಹತ್ತಿದ ರೂಢಿಗಳು, ನಂಬಿಕೆ-ಆಚರಣೆ ಮತ್ತು ಮೂಢನಂಬಿಕೆಗಳು

ಈ ಬಿಕ್ಕಟ್ಟುಗಳು ವೆಸ್ಟ್ ಇಂಡೀಸ್ ಕ್ರಿಕೆಟ್‌ಅನ್ನು ಅವನತಿಯ ಅಂಚಿಗೆ ತಂದು ನಿಲ್ಲಿಸಿವೆ. ಕ್ರಿಕೆಟ್ ಮಂಡಳಿಯೊಂದಿಗಿನ ಆಟಗಾರರ ನಿರಂತರ ಹೋರಾಟ ಫಲಪ್ರದವಾಗದೇ ನಿರಾಸಕ್ತಿಯಿಂದ ಆಡಿದ ಕಾರಣ, ವೆಸ್ಟ್ ಇಂಡೀಸ್ ತಂಡ 2023ರ ಏಕದಿನ ಕ್ರಿಕೆಟ್‌ನ ವಿಶ್ವಕಪ್‌ಗೆ ಅರ್ಹತೆ ಪಡೆಯಲು ವಿಫಲವಾಗಿದೆ. ಆಯ್ಕೆಗಾರರ ಅಸಂಗತ ಆಯ್ಕೆ ಪ್ರಕ್ರಿಯೆ ಹಾಗೂ ಆಟಗಾರರ ಪರಿಣಾಮಕಾರಿ ಪ್ರಗತಿಯ ಕುಂಠಿತ ಇದಕ್ಕೆ ಕಾರಣವಾಗಿದೆ. ಜೊತೆಗೆ ಅಲ್ಲಿ ಕಂಡುಬರುತ್ತಿರುವ ಒಳಸಂಘರ್ಷವೂ ಅವನತಿಗೆ ಕಾರಣವಾಗಿದೆ. ಇತ್ತೀಚೆಗೆ ನೆದರ್‌ಲ್ಯಾಂಡ್ ತಂಡದ ವಿರುದ್ಧ ಅರ್ಹತಾ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಸೂಪರ್ ಓವರ್‌ನಲ್ಲಿ ಸೋಲಬೇಕಾಯಿತು. 374 ರನ್ನುಗಳನ್ನು ಬೆನ್ನಟ್ಟಿದ ನೆದರ್‌ಲ್ಯಾಂಡ್ ತಂಡ ಅಷ್ಟೇ ರನ್‌ಗಳನ್ನು ನಿಗದಿತ ಓವರ್‌ಗಳಲ್ಲಿ ಗಳಿಸಲು ಶಕ್ಯವಾಯಿತು. ನಿಯಮದಂತೆ ನಡೆದ ಸೂಪರ್ ಓವರ್‌ನಲ್ಲಿ ಚಳಿಬಿಟ್ಟು ಆಡಿದ ನೆದರ್‌ಲ್ಯಾಂಡ್‌ನ ಲೋಗನ್ ವ್ಯಾನ್ ಬೀಕ್ ಕೆಚ್ಚೆದೆಯಿಂದ ಜೇಸನ್ ಹೋಲ್ಡರ್‌ನ ಸೂಪರ್ ಓವರ್‌ನಲ್ಲಿ 30ರನ್ ಕಲೆ ಹಾಕುತ್ತಾನೆ. ಇದು ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡಕ್ಕೆ ಕೇವಲ 8ರನ್ ಗಳಿಸಲು ಸಾಧ್ಯವಾಗುತ್ತದೆ. ನೆದರ್‌ಲ್ಯಾಂಡ್‌ಗೆ ವಿಜಯಮಾಲೆ ಕೊರಳಿಗೆ ಬೀಳುತ್ತದೆ. ಈ ತಂಡದ ಮುಂದೆ ಸುಮಾರು ದಶಕಗಳ ಕ್ರಿಕೆಟ್ ಇತಿಹಾಸ ಹೊಂದಿರುವ ವೆಸ್ಟ್ ಇಂಡೀಸ್ ತಂಡ ಮಂಕಾಗಿ ಕಾಣಿಸುತ್ತದೆ. ಉದಯೋನ್ಮುಖ ಪ್ರತಿಭೆಗಳ ಕೊರತೆ ಎದ್ದು ಕಾಣಿಸುತ್ತದೆ.

ಡರೆನ್ ಸಮಿ

ಜಿಂಬಾಂಬ್ವೆ, ನೆದರ್‌ಲ್ಯಾಂಡ್ ಮತ್ತು ಸ್ಕಾಟ್‌ಲ್ಯಾಂಡ್ ತಂಡಗಳ ವಿರುದ್ಧ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಸತತ ಮೂರು ಸೋಲುಗಳ ನಂತರ ಮೊದಲ ಬಾರಿಗೆ ಕಡಿಮೆ ಅಂಕಗಳೊಂದಿಗೆ ವೆಸ್ಟ್ ಇಂಡೀಸ್ ತಂಡವು ತನ್ನ ವಿಶ್ವಕಪ್ ಪಯಣವನ್ನು ಅಂತ್ಯಗೊಳಿಸಿತು. ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮತ್ತು ಆಟಗಾರರ ಸರಿಯಾದ ನಿರ್ವಹಣೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತರವಾಗಿ ಬೆಳೆಯಲು ಸಾಧ್ಯವಾಗುವಂತೆ ಮಾಡುತ್ತದೆ. ವರ್ತಮಾನದಲ್ಲಿ ವೆಸ್ಟ್ ಇಂಡೀಸ್ ತಂಡ ಈ ಕೊರತೆಯನ್ನು ಎದುರಿಸುತ್ತಿದೆ.

ಬಹಳ ಮುಖ್ಯವಾಗಿ ಹತಾಶೆಯ ಸೋಲು, ನಿರಾಸೆಯ ನಿರ್ಗಮನ, ಸಪ್ಪೆಮೋರೆಗಳ ಹೊತ್ತು ಆಟಗಾರರು ಮೈದಾನ ತೊರೆಯುವ ದೃಶ್ಯ ವೆಸ್ಟ್ ಇಂಡೀಸ್ ಕ್ರಿಕೆಟ್‌ನಲ್ಲಿ ಸರ್ವೇ ಸಾಮಾನ್ಯವಾಗಿ ಕಂಡುಬರುತ್ತಿದೆ. ತಂಡದೊಳಗೆ ಸ್ಥಿರತೆಯನ್ನು ಕಾಪಾಡಬೇಕಾದ ಗುರುತರವಾದ ಜವಾಬ್ದಾರಿ ಅಲ್ಲಿನ ಕ್ರಿಕೆಟ್ ಮಂಡಳಿಗಿದೆ. ಆಟಗಾರರು ರಾಷ್ಟ್ರೀಯ ತಂಡದ ಪರವಾಗಿ ಆಡುವ ಬದಲು ಫ್ರಾಂಚೈಸಿ ಲೀಗ್‌ಗಳಲ್ಲಿ ಆಡಲು ಆದ್ಯತೆ ಕೊಡುತ್ತಿದ್ದಾರೆ. ಇದನ್ನು ಬದಲಿಸಬೇಕಿದ್ದರೆ, ಆಟಗಾರರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಬೇಕಿದೆ. ’ಟ್ಯಾಲೆಂಟ್ ಹಂಟ್’ ಹೆಸರಿನಲ್ಲಿ ಒಂದಷ್ಟು ಯೋಜನೆಗಳನ್ನು ಹಾಕಿಕೊಂಡು ಗತಕಾಲದ ವೈಭವವನ್ನು ಮರಳಿ ಪಡೆದುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಎಚ್ಚೆತ್ತುಕೊಳ್ಳಬೇಕು. ಹಾಗೆಯೇ ಆಟಗಾರರು ಸಂಭಾವನೆಯ ಕಡೆ ಹೆಚ್ಚು ಗಮನ ಕೊಡದೆ ಆಟವನ್ನು ಪ್ರೀತಿಸಬೇಕು. ಇಲ್ಲದಿದ್ದರೆ ವೆಸ್ಟ್ ಇಂಡೀಸ್ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೇಳಹೆಸರಿಲ್ಲದಂತೆ ಮಾಯವಾಗುವಂತಹ ಲಕ್ಷಣಗಳು ಕಾಣಿಸುತ್ತಿರುವುದು ಒಂದು ದುರಂತವೇ ಸರಿ.

ಡಾ. ರಿಯಾಜ್ ಪಾಷ

ಡಾ. ರಿಯಾಜ್ ಪಾಷ
ರಿಯಾಜ್ ಅವರು ಪ್ರಸ್ತುತ ಯಲಹಂಕದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ಜನಪದ ಸಾಹಿತ್ಯದಲ್ಲಿ ವರ್ಗ ಸಂಘರ್ಷದ ನೆಲೆಗಳು” ವಿಷಯದ ಕುರಿತು ಸಂಶೋಧನೆ ನಡೆಸಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ ಪದವಿ ಪಡೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...