ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ.
ಈ ಕುರಿತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದು, ಈವೆರೆಗೆ 1000ಕ್ಕೂ ಅಧಿಕ ದಾಳಿಯನ್ನು ಮಾಡಲಾಗಿದೆ, ಆದರೆ ಒಂದು ಪೈಸೆ ಕೂಡ ಅಕ್ರಮ ಹಣ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ತಮ್ಮ ಪಕ್ಷದ ಮುಖಂಡನ ಪರವಾಗಿ ಹೇಳಿಕೆ ಕೊಟ್ಟ ಕೇಜ್ರಿವಾಲ್, ಆಡಳಿತಾರೂಢ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು ಸೋತ ತಂಡದ ಕೊನೆಯ ಹತಾಶೆಯ ಪ್ರಯತ್ನ ಎಂದು ಹೇಳಿದ್ದಾರೆ.
ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಎದುರಾಳಿಗಳನ್ನು ಹಳಿತಪ್ಪಿಸಲು ಪ್ರಧಾನಿ ನರೇಂದ್ರ ಮೋದಿಯವರ ಪಕ್ಷವು ಹತಾಶೆಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ಕಳೆದ ವರ್ಷದಿಂದ ನಾವು ಮದ್ಯ ಹಗರಣದ ಬಗ್ಗೆ ಕೇಳುತ್ತಿದ್ದೇವೆ. 1000ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದೆ ಮತ್ತು ಒಂದು ಪೈಸೆಯೂ ಅವರಿಗೆ ಸಿಕ್ಕಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಅವರು ಕೇವಲ ‘ವಂಚನೆ’ ಎಂದು ಆರೋಪಿಸುತ್ತಲೇ ಇರುತ್ತಾರೆ. ನಾವು ಸಾಕಷ್ಟು ತನಿಖೆ ನಡೆಸಿದ್ದೇವೆ ಮತ್ತು ಏನನ್ನೂ ಕಂಡುಹಿಡಿಯಲಿಲ್ಲ. ಸಂಜಯ್ ಸಿಂಗ್ ಅವರ ಬಳಿಯೂ ಏನೂ ಸಿಗುವುದಿಲ್ಲ. ಚುನಾವಣೆಗಳು ಬರುತ್ತಿವೆ ಮತ್ತು ಅವರು ಸೋಲುತ್ತಿದ್ದಾರೆಂದು ಅವರು ಭಾವಿಸುತ್ತಾರೆ. ಆದ್ದರಿಂದ ಇದು ಸೋತ ತಂಡದ ಕೊನೆಯ ಹತಾಶೆಯ ಪ್ರಯತ್ನವಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಎಎಪಿಯ ನಾಯಕ ಮತ್ತು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಇದೇ ಮದ್ಯದ ಹಗರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದಾರೆ.
ಇದನ್ನು ಓದಿ: NDAಯಿಂದ ಮೈತ್ರಿ ಪಕ್ಷಗಳೆಲ್ಲ ಹೊರಬಂದಿದೆ, ಈಗ ಇರುವುದು ಕೇವಲ ಸಿಬಿಐ, ಇಡಿ, ಐಟಿ ಮಾತ್ರ: ಕೆಟಿ ರಾಮರಾವ್


