ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಮೀಸಲಾತಿಯನ್ನು ಸಂಪೂರ್ಣ ರದ್ದುಪಡಿಸಿದೆ ಎಂಬ ಹಿಂದಿ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರಗಳಿಂದ ಮೀಸಲಾತಿಯನ್ನು ತೆಗೆದು ಹಾಕಲಾಗಿದೆ. ಮುಂದಿನ 25 ವರ್ಷ ರಾಜ್ಯದಲ್ಲಿ ಮೀಸಲಾತಿ ಜಾರಿಯಲ್ಲಿ ಇರುವುದಿಲ್ಲ ಎಂದು ವೈರಲ್ ಸಂದೇಶದಲ್ಲಿ ಹೇಳಲಾಗಿದೆ.

ಫ್ಯಾಕ್ಟ್ ಚೆಕ್ : ಮೇಲೆ ತಿಳಿಸಿದ ಸಂದೇಶದ ಕುರಿತು ನಾನುಗೌರಿ.ಕಾಂ ಸತ್ಯಾಸತ್ಯತೆ ಪರಿಶೀಲನೆ ನಡೆಸಿದೆ. ನಮಗೆ ಲಭ್ಯವಾದ ಮಾಹಿತಿ ಪ್ರಕಾರ, ಉತ್ತರ ಪ್ರದೇಶ ಸರ್ಕಾರ ಮೀಸಲಾತಿ ತೆಗೆದು ಹಾಕಿರುವ ಬಗ್ಗೆ ಯಾವುದೇ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಸುದ್ದಿಯಾಗಿಲ್ಲ. ಅಲ್ಲದೆ, ಮೀಸಲಾತಿ ರದ್ದುಪಡಿಸಬೇಕೆಂದರೆ ಅಥವಾ ಸರ್ಕಾರ ಮೀಸಲಾತಿಗೆ ಸಂಬಂಧಪಟ್ಟಂತೆ ಯಾವುದೇ ಬದಲಾವಣೆ ಮಾಡಬೇಕಾದರೆ ಮಸೂದೆ ಮಂಡಿಸಿ ಅನುಮೋದನೆ ಪಡೆಯಬೇಕಿದೆ. ಉತ್ತರ ಪ್ರದೇಶ ಸರ್ಕಾರ ಇತ್ತೀಚೆಗೆ ಅಂತಹ ಯಾವುದೇ ಮಸೂದೆ ಮಂಡಿಸಿಲ್ಲ.
ಅಲ್ಲದೆ, ಜನವರಿ1, 2024ರಂದು ಉತ್ತರ ಪ್ರದೇಶದ ಲೋಕ ಸೇವಾ ಆಯೋಗ ಹೊರಡಿಸಿದ ನೇಮಕಾತಿ ಆದೇಶದಲ್ಲೂ ಮೀಸಲಾತಿ ಬಗ್ಗೆ ಉಲ್ಲೇಖಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡ, ಆರ್ಥಿಕವಾಗಿ ಹಿಂದುಳಿದ ವರ್ಗ, ಇತರ ಹಿಂದುಳಿದ ವರ್ಗಳಿಗೆ ಸಾಮಾನ್ಯವಾಗಿ ನೀಡುವಂತೆ ನೇಮಕಾತಿ ಅಧಿಸೂಚನೆಯಲ್ಲಿ ಮೀಸಲಾತಿ ನೀಡಲಾಗಿದೆ ಎಂದು ಫ್ಯಾಕ್ಟ್‌ಚೆಕ್ ವೆಬ್‌ಸೈಟ್ ‘Factly’ ಹೇಳಿದೆ.

2019ರಲ್ಲೂ ಉತ್ತರ ಪ್ರದೇಶ ಸರ್ಕಾರವು ರಾಜ್ಯದ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಜಾತಿ ಆಧಾರಿತ ಮೀಸಲಾತಿಯನ್ನು ರದ್ದುಗೊಳಿಸಿದೆ ಎಂಬ ವದಂತಿಗಳು ಹಬ್ಬಿತ್ತು. ಬಳಿಕ, ಸಂಬಂಧಿತ ಅಧಿಕಾರಿಗಳ ಸ್ಪಷ್ಟೀಕರಣದ ನಂತರ, ಅಂತಹ ಮೀಸಲಾತಿಯೇ ಇಲ್ಲ ಎಂದು ಬಹಿರಂಗಗೊಂಡಿತ್ತು. 2006ರಲ್ಲಿ ಸ್ಥಾಪಿತವಾದ ಅಸ್ತಿತ್ವದಲ್ಲಿರುವ ನೀತಿಯಂತೆ ಖಾಸಗಿ ವಲಯದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಾತಿ ಪ್ರವೇಶ ಪ್ರಕ್ರಿಯೆಯ ಭಾಗವಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು.
ವೈರಲ್ ಪೋಸ್ಟ್‌ನಲ್ಲಿ ಯಾವುದೇ ಸಂದರ್ಭದಲ್ಲೂ ಮೀಸಲಾತಿ ವರ್ಗದ ವ್ಯಕ್ತಿಗಳು ಸಾಮಾನ್ಯ ವರ್ಗದ ಸ್ಥಾನಗಳಿಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿರುವುದಾಗಿ ಹೇಳಲಾಗಿದೆ. ಆದರೆ, ನ್ಯಾಯಾಲಯ ಈ ತೀರ್ಪನ್ನು ಯಾವಾಗ ಪ್ರಕಟಿಸಿದೆ ಎಂದ ನಿರ್ದಿಷ್ಟ ಸಮಯದ ಮತ್ತು ಪ್ರಕರಣದ ಕುರಿತು ಪೋಸ್ಟ್‌ನಲ್ಲಿ ವಿವರಗಳಿಲ್ಲ.
ನಾವು ನಡೆಸಿದ ಪರಿಶೀಲನೆಯಲ್ಲಿ ಉತ್ತರ ಪ್ರದೇಶದ ಯೋಗಿ ಸರ್ಕಾರ ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿದ್ದ ಮೀಸಲಾತಿಯನ್ನು ರದ್ದುಪಡಿಸಿದೆ ಎಂಬುವುದು ಸುಳ್ಳು ಸುದ್ದಿ ಎಂದು ಖಚಿತವಾಗಿದೆ.
ಇದನ್ನೂ ಓದಿ : Fact Check: ಇನ್ನು ಮುಂದೆ ವಾರಕ್ಕೆ ಮೂರು ದಿನ ರಜೆ ಎನ್ನುವುದು ನಿಜಾನಾ?


